ಸಚಿವ ಸ್ಥಾನ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಶಿವಮೊಗ್ಗ ಜನತೆಗೆ ಈಶ್ವರಪ್ಪ ಅವರು ಮೋಸ ಮಾಡುತ್ತಿದ್ದಾರೆ. ಕಳೆದ ಸಲ ಕಾಲು ನೋವಿನ ಸಮಸ್ಯೆ ಹೇಳಿಕೊಂಡು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿ ರಲಿಲ್ಲ. ಅಧಿವೇಶನಕ್ಕೆ ಗೈರಾಗುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬೇಕು, ವಿಧಾನಸಭೆಯಲ್ಲಿ ಪ್ರತಿಧ್ವನಿಸಬೇಕು ಉದ್ದೇಶಕ್ಕೆ ಎಂಬ ಕ್ಷೇತ್ರದ ಜನರು ಕೆ. ಎಸ್.ಈಶ್ವರಪ್ಪ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಸಚಿವ ಸ್ಥಾನ ನೀಡಿಲ್ಲವೆಂದು ಅಧಿವೇಶನಕ್ಕೆ ಹಾಜರಾಗದೇ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಶಿವಮೊಗ್ಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಸಿಕ್ಕಿಲ್ಲ. ಇದರ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಬೇಕಾಗಿರುವುದು ಅವರ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಸಚಿವ ಸ್ಥಾನಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿ ರುವುದು ಸರಿಯಲ್ಲ ಎಂದು ಹೇಳಿದರು.
ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಬಿಪಿ, ಬಿಜೆಪಿಯ ವಿವಿಧ ಮೋರ್ಚಾಗಳಂತೆ ‘ಐಟಿ, ಇಡಿ ಮೋರ್ಚಾ’ ಶುರುವಾಗಿದೆ. ಎಂದು ಲೇವಡಿ ಮಾಡಿದರು. ಈಶ್ವರಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಆದಾಗ ನೋಟು ಎಣಿಸುವ ಮಿಷನ್ ಸಿಕ್ಕಿತ್ತು. ಹಾಗಾದರೆ ಈ ಇಡಿ ಮತ್ತು ಐಟಿ ಅವರಿಗೆ ಈಶ್ವರಪ್ಪ ಕಣ್ಣಿಗೆ ಬಿದ್ದಿಲ್ಲವೇ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್, ಪಾಲಿಕೆ ಸದಸ್ಯ ಆರ್ .ಸಿ. ನಾಯ್ಕ, ಪ್ರಮುಖರಾದ ಬೊಮ್ಮನಕಟ್ಟೆ ಮಂಜುನಾಥ್, ಬಾಬಣ್ಣ ಇತರರಿದ್ದರು.