ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಭಾಗವಹಿಸುವುದರಿಂದ ಬೇರೆ ಬೇರೆ ದೇಶದ ಮಕ್ಕಳೊಂದಿಗೆ ಅನುಭವ ಹಂಚಿಕೊಳ್ಳಲು ಹಾಗೂ ಬಾಂಧವ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ನ ಮಕ್ಕಳು ಮೂಡುಬಿದರೆಯಲ್ಲಿ ನಡೆಯುವ ಏಳು ದಿನಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಶಿವಮೊಗ್ಗ ಜಿಲ್ಲೆಯಿಂದ 1409 ಮಕ್ಕಳು ತೆರಳುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಬೀಳ್ಕೊಟ್ಟ ಬಳಿಕ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಂತಾರಾಷ್ಟ್ರೀಯ ಜಾಂಬೂರಿಯನ್ನು ನೋಡುವುದೇ ಒಂದು ವಿಶೇಷವಾಗಿದೆ. ಅಲ್ಲದೇ ಸ್ಕೌಟ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಭವಿಷ್ಯದ ಕನ್ನಡಿ ಇದ್ದಂತೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ ಆ್ಯಂಡ್ ಗೈಡ್ಸ್ ದಾರಿದೀಪವಾಗಿದೆ. ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರ ಹಾಗೂ ಶಿಸ್ತು ಬದ್ಧ ಜೀವನಕ್ಕೆ ನೂರಾರು ವರ್ಷ ಇತಿಹಾಸವಿರುವ ಸ್ಕೌಟ್ ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಸ್ಕೌಟ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತರಾದ ಎಚ್ ಡಿ ರಮೇಶ್ ಶಾಸ್ತ್ರಿ ಅವರು ಮಾತನಾಡಿ, ಸುಮಾರು 50 ಸಾವಿರ ಜನ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿದ್ದು, ಏಳು ದಿನಗಳ ಕಾಲ ಈ ವಿಶ್ವ ಜಂಬೂರಿ ನೆರವೇರಲಿದೆ. ಇದು ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಅದರಲ್ಲೂ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಜಿಲ್ಲಾ ಆಯುಕ್ತಾರಾದ ಕೆ.ಪಿ. ಬಿಂದು ಕುಮಾರ್, ಜಿ. ವಿಜಯಕುಮಾರ್, ಚುಡಾಮಣಿ , ಭಾರತಿ ಡಯಾಸ್, ವೈ. ಆರ್. ವೀರೇಶಪ್ಪ, ಶಕುಂತಲಾ ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.