ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದಲ್ಲಿ ಸಾಮಾನ್ಯವಾಗಿ ಪ್ರತಿ ಮಂಗಳವಾರ ವಾರದ ರಜೆಯಾಗಿದ್ದು, ಆ ದಿನ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶವಿರುವುದಿಲ್ಲ. ಆದರೆ, ಪ್ರಸ್ತುತ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಭೇಟಿ ನೀಡುತ್ತಿರುವ
ಹಿನ್ನೆಲೆಯಲ್ಲಿ, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ವಿಶೇಷವಾಗಿ ದಿನಾಂಕ: 26.05.2026ರ ಮಂಗಳವಾರದಂದು ಹುಲಿ-ಸಿಂಹ ಧಾಮದಲ್ಲಿನ ಜೂ ಹಾಗೂ ಸಫಾರಿ ವೀಕ್ಷಣೆಯನ್ನು ತೆರೆದಿರುತ್ತದೆ.
ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಹುಲಿ-ಸಿಂಹ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಸಿಗೆ ರಜೆ ವಿಶೇಷವಾಗಿ ಪ್ರವಾಸಿಗರ ಅನುಕೂಲಕ್ಕೆ ಮೇ26 ಮಂಗಳವಾರ ಹುಲಿಸಿಂಹ ಧಾಮ ಓಪನ್.
ತಾಯಿ,ಇಬ್ಬರು ಮಕ್ಕಳೊಂದಿಗೆ ನಾಪತ್ತೆ.ಮಾಳೂರು ಪೊಲೀಸ್ ಠಾಣೆ ಪ್ರಕಟಣೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ 17ನೇ ಮೈಲಿಕಲ್ಲು, ಕಣಗಲಕೊಪ್ಪ ಗ್ರಾಮ ನಿವಾಸಿ ಅನಿಲ್ ಕುಮಾರ್ ಎಂಬುವವರ ಪತ್ನಿ ತವರುಮನೆಗೆಂದು ಮಕ್ಕಳನ್ನು ಕರೆದುಕೊಂಡು ಮೇ.13 ರಂದು ಹೋದವರು ತವರುಮನೆಗೂ ಹೋಗದೆ ಈವರೆಗೆ ಮನೆಗೂ ವಾಪಾಸ್ಸಾಗಿರುವುದಿಲ್ಲ.
ಸುಮಾ ಕೆ.ಎಸ್. : 32 ವರ್ಷ, 5.0 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಜಯಂತ್: 14 ವರ್ಷ, 04 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಶರ್ವ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ವಿಸ್ಮಿತ: 12 ವರ್ಷ, 04 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ
ಈ ಮೂರು ಜನಗಳ ಬಗ್ಗೆ ಸುಳಿವು ಇದ್ದಲ್ಲಿ ಮಾಳೂರು ಪೊಲೀಸ್ ಠಾಣೆಯನ್ನು 08181-235142/228310/08182-261413/9480803353/9480803333/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
ಶಿವಮೊಗ್ಗ ತಾಲ್ಲೂಕಿನ ವಿವಿಧ ದೇಗುಲಗಳ ಸಾರ್ವಜನಿಕ ಸೇವಾಕಾರ್ಯಕ್ಕೆ 2 ಎಕ್ರೆ 30 ಗುಂಟೆ ಜಮೀನು ಮಂಜೂರಾತಿಗೆ ಶಾಸಕ ಚೆನ್ನಿ ಮನವಿ
ಶಿವಮೊಗ್ಗ ತಾಲ್ಲೂಕಿನ ನಿದಿಗೆ ಒಂದನೇ ಹೋಬಳಿ ವ್ಯಾಪ್ತಿಯ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಲವರ್ಧನೆಗೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಹಾಗೂ ಮಹಾನಗರ ಪಾಲಿಕೆಯ ಆಡಳಿತ ಅಧಿಕಾರಿಗಳಾದ ಶ್ರೀ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ಶಾಸಕರು ಖುದ್ದು ಭೇಟಿಯಾಗಿ ಜಮೀನು ಮಂಜೂರಾತಿ ಕುರಿತು ಸಮಾಲೋಚನೆ ನಡೆಸಿದರು.
ಶಿವಮೊಗ್ಗ ತಾಲ್ಲೂಕಿನ ಇಸ್ಲಾಪುರ ಗ್ರಾಮದ ಸರ್ವೆ ನಂಬರ್ 29ರಲ್ಲಿ ಲಭ್ಯವಿರುವ 2 ಎಕರೆ 30 ಗುಂಟೆ ಜಮೀನನ್ನು “ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಗುಡ್ಡೆಕಲ್ಲು ಗವಿಸಿದ್ದೇಶ್ವರ, ಉಚ್ಚಂಗಮ್ಮ ಮತ್ತು ದುರ್ಗಮ್ಮ ಸೇವಾ ಸಮಿತಿ” ಇವರ ಧಾರ್ಮಿಕ ಮತ್ತು ಸಾರ್ವಜನಿಕ ಸೇವಾ ಕಾರ್ಯಗಳ ಉದ್ದೇಶಕ್ಕಾಗಿ ನಿಯಮಾನುಸಾರ ಮಂಜೂರು ಮಾಡಿಕೊಡಬೇಕು ಎಂದು ಶಾಸಕರು ಆಯುಕ್ತರಿಗೆ ಪುನಃ ಪ್ರಸ್ತಾವನೆಯನ್ನು ಸಲ್ಲಿಸಿ ಚರ್ಚಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, “ಸದರಿ ಸೇವಾ ಸಮಿತಿಯು ಭಾಗದ ಜನರ ಶ್ರದ್ಧೆಯ ಕೇಂದ್ರವಾಗಿದ್ದು, ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಸಮಿತಿಯ ಸುಸೂತ್ರ ನಿರ್ವಹಣೆಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಭೂಮಿಯ ಅವಶ್ಯಕತೆ ಇದ್ದು, ಕಂದಾಯ ಇಲಾಖೆಯ ನಿಯಮಗಳ ಅಡಿಯಲ್ಲಿ ಶೀಘ್ರವಾಗಿ ಜಮೀನು ಹಸ್ತಾಂತರ ಪ್ರಕ್ರಿಯೆ ಮುಗಿಸಿಕೊಡಲು ಪ್ರಾದೇಶಿಕ ಆಯುಕ್ತರಲ್ಲಿ ವಿನಂತಿಸಲಾಗಿದೆ” ಎಂದು ತಿಳಿಸಿದರು. ಶಾಸಕರ ಈ ಪ್ರಸ್ತಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಆಯುಕ್ತರು, ಕಡತವನ್ನು ಶೀಘ್ರವಾಗಿ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Klive Special Article ಗೋರಕ್ಷಕ ಸಂತ ಕಬೀರಾನಂದ ಸ್ವಾಮೀಜಿ. ಲೇ: ಪ್ರಸಾದ ಶ್ರೀವತ್ಸ. ದಾವಣಗೆರೆ
´ ಗೋ ರಕ್ಷಕ ಸಂತ – ಸದ್ಗುರು ಶ್ರೀ ಶ್ರೀ ಶ್ರೀ ಕಬೀರಾನಂದ ಮಹಾಸ್ವಾಮಿಗಳು
Klive Special Article ಚಿತ್ರದುರ್ಗ ಜಿಲ್ಲೆ ತತ್ತ್ವಜ್ಞಾನಿಗಳ ಬೀಡು ಎಂದರೆ ತಪ್ಪಾಗಲಾರದು. ಏಕೆಂದರೆ ಪಿಪೀಲಕ, ಅಚಲ, ಹೀಗೆ ಹಲವಾರು ಪರಂಪರೆಗಳ ಮೂಲಕ ಆಧ್ಯಾತ್ಮಿಕ ಸೌರಭವನ್ನು ಸೂಸುತ್ತಾ ಜನರಿಗೆ ನಿಜ ಜೀವನದ ಅರ್ಥವನ್ನು ಪದಗಳಿಂದ, ಮಾತುಗಳಿಂದ, ಹಾಗೂ ವಿಶಿಷ್ಟ ಕೈಂಕರ್ಯಗಳ ಮೂಲಕ ನಡೆಸುತ್ತಾ ಬಂದಿರುವುದು ಈ ಜಿಲ್ಲೆಯ ವಿಶೇಷತೆ. ಗಮನಿಸಿದಾಗ ಕಾಣ ಸಿಗುವ ಹಲವಾರು ಅವಧೂತರು, ಸಂತರು, ಮಠಗಳು, ದೇವಾಲಯ-ಗದ್ದುಗೆಗಳಂತೆ, ಜನರ ತಾತ್ಸಾರಕ್ಕೊಳಗಾಗಿರುವ ಸಂತರೂ, ದೇವಾಲಯಗಳು, ವಿಶೇಷ ತಾಣಗಳೂ ಕೂಡ ನಮ್ಮಲ್ಲಿವೆ. ನಾನು ಇದೇ ಚಿತ್ರದುರ್ಗ ಜಿಲ್ಲೆಯವನು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಏಕೆಂದರೆ ಚಿತ್ರದುರ್ಗ ಜಿಲ್ಲೆ ಬಯಲು ಸೀಮೆಯಾಗಿದ್ದು, ಬಡತನ, ನಿರುದ್ಯೋಗಗಳು ನಮ್ಮ ಅಣ್ಣ ತಮ್ಮಂದಿರಂತಿವೆ. ಮಳೆಯಾಶ್ರಿತ ಜಮೀನುಗಳಲ್ಲಿ ಆಯಾ ಭಾಗಗಳ ಅದರಲ್ಲಿಯೂ ರಾಗಿ, ಶೇಂಗಾ, ಜೋಳ ಅಪರೂಪಕ್ಕೊಮ್ಮೆ ಭತ್ತ ಬೆಳೆಯುವ ನಾವು ದುಡ್ಡಿನಿಂದ ಬಡವರಾಗಿರಬಹುದು ಬಿಟ್ಟರೆ ಇನ್ನುಳಿದಂತೆ ಎಲ್ಲಾ ವಿಧದಲ್ಲಿಯೂ ಅದರಲ್ಲಿ ಗೌರವಾದರಣೆಯಲ್ಲಿ, ಸ್ನೇಹದಲ್ಲಿ, ಸಹಾಯದಲ್ಲಿ ಶ್ರೀಮಂತರು. ಹಾಗೇ ಅತಿಥಿ ಸತ್ಕಾರದಲ್ಲಿಯೂ ನಮ್ಮ ಜಿಲ್ಲೆಯ ಜನ ಶ್ರೀಮಂತರು. ಯಾರೇ ಮನೆಗೆ ಬಂದರೂ ಅವರನ್ನು ಹಾಗೇ ಬರಿಯ ಕೈಯಲ್ಲಿ ಹಿಂತಿರುಗಿಸಬಾರದು ಎಂಬ ವಾಡಿಕೆಯಿರುವ ಭಾವುಕರು. ಹಾಗಾಗಿ ಸಾಧು-ಸಂತರು, ಅವಧೂತರು, ಮಠ ಮಂದಿರಗಳನ್ನು ನಾವು ನಮ್ಮಲ್ಲಿ ಕಾಣಬಹುದು. ಇದೇ ರೀತಿಯಾಗಿ ಅದರಂತೆ ಚಿತ್ರದುರ್ಗದ ಪಾಳೆಯಗಾರರೂ ಸಹಾ ಸಾಧು ಸಂತರಿಗೆ ಆಶ್ರಯ ನೀಡುತ್ತಾ ಬಂದವರು. ನಾಯಕನ ಹಟ್ಟಿಯ ತಿಪ್ಪೇರುದ್ರ ಸ್ವಾಮಿಗಳು, ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳು, ಹೀಗೇ ಸಾಧು-ಸಂತರ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳು ಆಳ್ವಿಕೆ ನಡೆಸಿ ಜನಮಾನಸದಲ್ಲಿ ಮನೆಮಾಡಿ ಇಂದಿಗೂ ಸಂಪ್ರದಾಯಗಳ ಆಚರಣೆ ನಡೆಯುತ್ತಿದೆ. ಜನರನ್ನು ಮೌಢ್ಯಗಳಿಂದ ಹೊರತಂದು ಅದ್ವೈತ ಸಿದ್ಧಾಂತ ಪ್ರತಿಪಾದನೆಯಲ್ಲಿ ಆರೂಢ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವುದು ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದ ಆಶ್ರಮ. ಭಜನೆ, ಪೂಜೆ, ಸತ್ಸಂಗ, ಪ್ರವಚನ, ವಿದ್ಯಾದಾನ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಜನರಿಗೆ ನೆರವಾಗಿರುವ ಶ್ರೀ ಮಠವು ಆರೂಢ ಪರಂಪರೆಯ ಆಕರ್ಷಣೀಯ ಬಿಂದುವಾಗಿದೆ. 1929-30ರ ಸುಮಾರಿಗೆ ಚಿತ್ರದುರ್ಗದಲ್ಲಿ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳು ಚಿತ್ರದುರ್ಗಕ್ಕೆ ಬಂದರು. ನಿಜಕ್ಕೂ ಸಂತನೆಂದರೆ ಯಾರು ? ಶಿಷ್ಯನೆಂದರೆ ಯಾರು ? ಎಂದು ತೋರಿಸಿಕೊಟ್ಟವರು ಇವರೇ.
ಮಲ್ಲಪ್ಪ ಮತ್ತು ರುದ್ರಮ್ಮ ಎಂಬ ದಂಪತಿಗಳ ಸುಪುತ್ರರಾಗಿ ಆಶ್ವಯುಜ ಶುದ್ಧ ದಶಮಿ ಅಂದರೆ ವಿಜಯ ದಶಮಿಯಂದು ಜನಿಸಿದ ಇವರು ಮೂಲತಃ ಉತ್ತರಕನ್ನಡ ಜಿಲ್ಲೆಯ ವಿರಾಟಪುರ ಎಂಬ ಒಂದು ಹಳ್ಳಿಯವರು. ಬಡತನದಲ್ಲಿಯೇ ಹುಟ್ಟಿ, ಬೆಳೆದು, ದೊಡ್ಡವನಾದ ಈ ಹುಡುಗ ಶಿವಾನಂದ ಹುಟ್ಟಿದ ಮೂರು ತಿಂಗಳಿಗೇ ತಂದೆ-ತಾಯಿಯರು ಕೈಲಾಸವಾಸಿಗಳಾದರು. ನಂತರ ಈ ಮಗು ಊರಿನವರ ಕೈಯಲ್ಲಿ ಬಿತ್ತು. ಮೊಲೆಯುಣಿಸಿದವರೇ ಮಾತೆಯರು, ತನ್ನ ಎತ್ತಿ ಆಡಿಸಿದವರೇ ಬಂಧುಗಳು ಎಂಬಂತೆ ಬೆಳೆದ ಮಗು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಿತ್ತು. ಆದರೆ ಮಲ್ಲಪ್ಪನ ದಾಯಾದಿಗಳು ಆ ಮಗುವಿಗಾಗಿ ಆಡೊಂದನ್ನು ತಂದು ಅದರ ಹಾಲಿನಿಂದ ಮಗುವನ್ನು ಸಾಕಹತ್ತಿದರು. ದೊಡ್ಡವನಾದ ಶಿವಾನಂದ ಈಗ ಅನ್ನವನ್ನುಣ್ಣುವಂತಾದ ಕೆಲ ಸಾತ್ವಿಕ ಮಹಿಳೆಯರು ಪ್ರೀತಿಯಿಂದ ಉಣಬಡಿಸಿದರೆ, ಕೆಲವರು ನಿರ್ದಯವಾಗಿ ಕಂಡರು, ಎಲ್ಲ ಪರಿಸ್ಥಿತಿಗಳಿಂದ ಬೆಳೆದ ಇವನು ಊರ ಆಂಜನೇಯನ ಪರಮ ಭಕ್ತನಾಗಿದ್ದನು. ಹನುಮನ ಪರಮ ಭಕ್ತ ಹಗಲೆಲ್ಲ ರಾಮ ರಾಮ ಅನ್ನುತ್ತಿದ್ದನು. ತನ್ನ ವಯಸ್ಸಿನ ಹುಡುಗರು ಕೊಡುವ ಹಿಂಸೆಗಳು-ಕೀಟಲೆಗಳನ್ನು ಸಾವಧಾನದಿಂದ ಸಹಿಸಿದ ಈ ಹುಡುಗ ಸ್ಥಿತಪ್ರಜ್ಞ ಹೇಗಿರಬೇಕೆಂದು ಎಲ್ಲರಿಗೂ ತೋರಿಸುವಂತಾದ. ಶಿವಾನಂದನನ್ನು ಹಿಂಸಿಸಿದವರಿಗೆ, ನೋವು ನೀಡಿದವರಿಗೆ ಆಗಿಂದಾಗ್ಗೆ ಶಿಕ್ಷೆಗಳಾಗುತ್ತಿರುವುದನ್ನು ಕಂಡು ಊರಿನ ಜನರು ಈತ ಸಾಮಾನ್ಯನಲ್ಲ ಎಂದು ಮನಗಂಡರು.
Klive Special Article ಒಂಭತ್ತನೇ ವಯಸ್ಸಿನಲ್ಲಿ ಗುರುಶೋಧಾರ್ಥವಾಗಿ ಊರಿನಿಂದ ಹೊರಟ ಈ ಬಾಲಕ ತಾನು ಉಳಿದ ಜಾಗಗಳಲ್ಲೆಲ್ಲ ಭಗವಂತನ ಪ್ರೇಮದ ಪ್ರಸಾರ ಮಾಡುತ್ತಿದ್ದನು. ಹೀಗಿರುವಾಗ ಗುರುವಿಗಾಗಿ ಊರೂರು ತಿರುಗುತ್ತಾ ಬೆಳಗಾವಿಗೆ ಬಂದಾಗ ಒಂದು ಮರದಡಿಯಲ್ಲಿ ಕುಳಿತಿದ್ದ ಸಾಧುವಿನ ಕಡೆಗೆ ದೃಷ್ಟಿಹಾಯಿತು. ಆ ಸಾಧುವಿನ ಅಲೌಕಿಕತೆಯನ್ನು ಕಂಡು ಸಾಷ್ಟಾಂಗ ನಮಸ್ಕಾರ ಮಾಡಿದ ಹುಡುಗ “ಬಾಬಾ | ನಾನೂ ಸಹಾ ನಿಮ್ಮಂತೆ ಸಂನ್ಯಾಸಿಯಾಗಲು ಇಚ್ಛಿಸಿದ್ದೇನೆ ದಯವಿಟ್ಟು ಅನುಗ್ರಹಿಸಿ”ಎನ್ನಲು ಸಾಧುವು ಯಾರು, ಏನು ಎಂಬುದಾಗಿ ವಿಚಾರಿಸಿ, ಅವನ ಮುಗ್ಧತೆ ಮತ್ತು ಅಚಲ ನಿಷ್ಠೆಯನ್ನು ಕಂಡು ಬೆರಗಾಗಿ ತಾನು ಓರ್ವ ಪೊಳ್ಳು ಸಂನ್ಯಾಸಿ ಎಂದು ಮನದಲ್ಲಿಯೇ ನಾಚಿದ. ನಂತರ ನೋಡು ಸಂನ್ಯಾಸಕ್ಕೆ ಮೊದಲು ಕಲಿಯಬೇಕಾದ್ದು ಭಿಕ್ಷಾಟನೆ ಎಂದು ಜೋಳಿಗೆಯನ್ನು ನೀಡಿ ಭಿಕ್ಷೆಬೇಡಿ ಬರಲು ತಿಳಿಸಿದ. ಈ ಸಮಯದಲ್ಲಿ ಆದ ಅವಮಾನಗಳನ್ನು ಶಿವಾನಂದ ಸಮಾಧಾನದಿಂದ ಅನುಭವಿಸಿದನು.ಕಾಶಿ, ಹರಿದ್ವಾರಗಳಂತಹ ತೀರ್ಥಗಳಲ್ಲಿ ಸಂಚರಿಸುತ್ತಾ, ಮುಂದೆ ಹಲವಾರು ಕ್ಷೇತ್ರಗಳನ್ನು ನೋಡುತ್ತಾ, ಗುರುಗಳಾದ ಶ್ರೀ ಅಡವೀಶರ ಪರಿಚಯವಾಯಿತು. ಅಡವೀಶರ ಶಿಷ್ಯನಾದ ಶಿವಾನಂದ. ಅಡವೀಶರ ಗುರುಗಳು ಮಳೆ ಮಲ್ಲಪ್ಪಜ್ಜನವರು. ಅವರು ಅಡವೀಶರಿಗೆ ಗುರುದಕ್ಷಿಣೆ ಬೇಕು ಎಂದಾಗ ಏನು ಗುರುದಕ್ಷಿಣೆ ಬೇಕು ಕೇಳಿ ಗುರುವೇ ಎಂದರು. ಆಗ ಮಲ್ಲಪ್ಪಜ್ಜನವರು “ನಾನು ಸಾಧನೆಯ ಕಾಲದಲ್ಲಿದ್ದಾಗ, ಪ್ರತಿದಿನವೂ ಹಸುವೊಂದು ನನ್ನ ಹಸಿವು ನೀಗಿಸುತ್ತಿತ್ತು, ಆದ್ದರಿಂದ ನೀನು ನನ್ನ ಶಿಷ್ಯನಾಗಿ ಗೋರಕ್ಷಣೆ-ಗೋಸೇವೆಯನ್ನು ಮಾಡಲು ಗೋಶಾಲೆ ನಿರ್ಮಿಸಿದರೆ ನನಗೆ ಮುಕ್ತಿಯಾಯಿತು.”ಎಂದರು. ಕೂಡಲೇ ಅಡವೀಶರು ಗದುಗಿನ ಸಚ್ಚಿದಾನಂದ ಮಠಕ್ಕೆ ಬಂದಾಗ ಶಿವಾನಂದನ ಭಕ್ತಿಪರತೆಯನ್ನು ಕಂಡು ತಮ್ಮ ಆಗಮನದ ಕೆಲಸವನ್ನು ತಿಳಿಸುತ್ತಾರೆ. ಶಿವಾನಂದರ ಇನ್ನೊಬ್ಬ ಗುರುಗಳಾದ ಸಚ್ಚಿದಾನಂದರ ಒರಟು ಮಾತು ಅಡವೀಶರಿಗೆ ಕೋಪ-ದುಃಖ ಎರಡನ್ನೂ ಹೆಚ್ಚಿಸುತ್ತದೆ. ಆದರೆ ಆ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ಶಿವಾನಂದನು ವಹಿಸಿಕೊಂಡು ನಿಂತಾಗ ಅಡವೀಶರು ಅತ್ಯಂತ ಪ್ರಸನ್ನರಾಗುತ್ತಾರೆ. ಲೋಕೋದ್ಧಾರಕ್ಕಾಗಿ ಅವರ ಅಧ್ಯಾತ್ಮ ಶಕ್ತಿಯನ್ನೆಲ್ಲ ಒಟ್ಟಾಗಿ ಧಾರೆಯೆರೆದ “ಬ್ರಹ್ಮಾನಂದ”ಎಂದು ಹೆಸರಿಟ್ಟು ʼತನ್ನಂತೆ ಮಾಡಿದನೆನ್ನ ಕಾಯ | ಭ್ರಾಂತಿ ಕಳೆದಾನೊ ಗುರು ಮಹನೀಯ ||ʼ ಎಂಬ ಅಂತಃಕರುಣಿ ಗುರುನಾಥನು ದೈಹಿಕವಾಗಿ ಬ್ರಹ್ಮಾನಂದರಿಂದ ದೂರವಾದರು. ನಂತರ ಸಚ್ಚಿದಾನಂದರಿಗೆ ಈ ವಿಷಯದಲ್ಲಿ ಅಸಹನೆಯುಂಟಾಗಿ ಬ್ರಹ್ಮಾನಂದರು ಅಲ್ಲಿಂದ ಹೊರನಡೆದರು. ಅಲ್ಲಿ ಬ್ರಹ್ಮಾನಂದರ ಭಕ್ತೆ ವೀರ ಬಸವ್ವ ಎಂಬ ಹೆಣ್ಣು ಮಗಳೋರ್ವಳು ತನ್ನ ಮನೆಯನ್ನು ಇವರಿಗೆ ಬಿಟ್ಟುಕೊಟ್ಟಳು. ಅಂದಿನಿಂದ ಆ ಮನೆಯೇ ಬ್ರಹ್ಮಾನಂದರ ಮಠವಾಯಿತು. ಪ್ರತಿದಿನ ಭಜನೆ, ಪ್ರವಚನ, ಸ್ವಾಧ್ಯಾಯ, ಎಲ್ಲವೂ ನಡೆಯುತ್ತಿರುವಾಗ ಜನ ಈ ಕಡೆಗೆ ಬರಹತ್ತಿದರು. ಗಹನವಾದ ವೇದಾಂತ ವಿಚಾರಗಳನ್ನು ಅತ್ಯಂತ ಸುಲಲಿತವಾಗಿ ಎಲ್ಲರಿಗೂ ಅರ್ಥವಾಗುವಂತಿದ್ದ ಬ್ರಹ್ಮಾನಂದರ ಪ್ರೇಮಳ ವಾಣಿಯು ಎಲ್ಲರನ್ನೂ ಆಕರ್ಷಿಸುವುದರೊಟ್ಟಿಗೆ, ತತ್ತ್ವಲೋಕದ ಹಾದಿ ಹೋಕರಿಗೆ ಮೈಲಿಗಲ್ಲಾಯಿತು. ನಂತರ ಸಂನ್ಯಾಸಿಗಳು ಸಂಸಾರಿಗಳ ಜಾಗದಲ್ಲಿರಲು ಸಧ್ಯವಿಲ್ಲ ಎಂದು ನಿರ್ಧರಿಸಿ ಬ್ರಹ್ಮಾನಂದರು ವೀರಬಸವ್ವನ ಮನೆಯಿಂದ ಹೊರನಡೆದರು. ಅಲ್ಲಿಂದ ಬ್ರಹ್ಮಾನಂದರು ಬಂದಿದ್ದು ಆರೂಢ ಜಗದ್ಗುರು ಶ್ರೀ ಸಿದ್ಧಾರೂಢರ ಸನ್ನಿಧಾನಕ್ಕೆ. ಅಲ್ಲಿ ಬಂದು ಸಿದ್ಧಾರೂಢರ ಪ್ರವಚನಗಳನ್ನು ಆಲಿಸುತ್ತಿರುವಾಗ, ಆರೂಢರ ದೃಷ್ಟಿ ಇವರೆಡೆಗೆ ನೆಟ್ಟಿತು. ಯಾರು ? ಏನು ? ಎಂದು ವಿಚಾರಿಸಿದಾಗ, ಸವಿವರವಾಗಿ ಎಲ್ಲವನ್ನೂ ತಿಳಿಸಿದರು. ನಂತರ ಬ್ರಹ್ಮಜ್ಞಾನದ ಹಂಬಲ ತಿಳಿಸಿದಾಗ ಆರೂಢರು ನುಡಿದರು “ಅಯ್ಯಾ ಸಾಧು ! ಸುಮ್ಮನೆ ಬ್ರಹ್ಮಾನುಭವಾಗುವುದಿಲ್ಲ. ಅರಿವಿನಿಂದಲೇ ಮುಕ್ತಿ,ಅದರ ಜೊತೆಗೆ ಉತ್ತಮ ಗುಣ ನಡವಳಿಕೆಗಳೂ ಅತ್ಯಾವಶ್ಯಕ.ಗುರುಸೇವೆ, ನಿಷ್ಠೆ, ಇಂದ್ರಿಯ ನಿಗ್ರಹ, ಶಮೆ, ದಮೆ ಶಾಂತಿ ಹೀಗೆ ಹಲವಾರು ವಿಧಿಗಳು-ನಿಯಮಗಳುಂಟು” ಎಂದರು. ಅದಕ್ಕೆ ಬ್ರಹ್ಮಾನಂದರು “ತಂದೆ ನಿನ್ನ ಕರುಣೆಯಿದ್ದರೆ ಇವೆಲ್ಲವುಗಳಲ್ಲಿ ನಾನು ಉತ್ತೀರ್ಣನಾಗುತ್ತೇನೆ “ಎಂದು ವಿನಮ್ರರಾಗಿ ನುಡಿದರು. ಹುಬ್ಬಳ್ಳಿಯ ಮಠದಲ್ಲಿ ನಿತ್ಯವೂ ಜನ ಜಂಗುಳಿಯೇ, ಜಾತಿ-ಮತ, ಗಂಡು-ಹೆಣ್ಣು, ವಿದ್ವಾಂಸ-ದಡ್ಡ, ಉತ್ತಮ-ಹೀನ, ಹೀಗೆ ಯಾವುದೇ ಭೇದವಿಲ್ಲ. ಸಮಸ್ತ ಮಾನವ ಕಲ್ಯಾಣವೇ ಗುರಿಯಾಗಿತ್ತು. ಮಠದಲ್ಲಿ ಅದರಲ್ಲಿಯೂ ಸದ್ಗುರುಗಳ ಸೇವೆಯಲ್ಲಿ ಸೈ ಎನಿಸಿಕೊಂಡ ಬ್ರಹ್ಮಾನಂದರ ಸೇವೆ ಮತ್ತಾರಿಂದಲೂ ಸಾಧ್ಯವಿಲ್ಲ ಎಂಬಂತಹುದು.
(ಮುಂದುವರೆಯುವುದು)
5000 ಕ್ಕೂ ಹೆಚ್ಚು ಬಡ ಕೂಲಿಕಾರ್ಮಿಕರ ಪಡಿತರ ಚೀಟಿ ರದ್ದು: ಕ್ರಮವನ್ನು ಪುನರ್ಪರಿಶೀಲಿಸಲು ಮನವಿ
ಇಂದು ಬೆಂಗಳೂರಿನ ಆಹಾರ ನಿಗಮದ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಶ್ರೀಕೆ ಎಚ್. ಮುನಿಯಪ್ಪ ರವರನ್ನು ಭೇಟಿ ಮಾಡಿ, ಶಿವಮೊಗ್ಗ ನಗರದಲ್ಲಿ ವಾಸವಾಗಿರುವ ಸುಮಾರು 5000ಕ್ಕೂ ಅಧಿಕ ಬಡ ಕೂಲಿ ಕಾರ್ಮಿಕರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಹಾಗೂ ನಗರದ ಹೊರವಲಯದಲ್ಲಿರುವ ಗೋಪಾಲಗೌಡ ಬಡಾವಣೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅನೌಪಚಾರಿಕ ಪಡಿತರ ಪ್ರದೇಶ ಸಹಾಯಕ ನಿರ್ದೇಶಕರ ಕಚೇರಿಗೆ ಸಾರ್ವಜನಿಕರು ಭೇಟಿ ನೀಡಲು ಯಾವುದೇ ರೀತಿಯ ಬಸ್ ಸಂಪರ್ಕ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸದರಿ ಕಚೇರಿಯನ್ನು ಶಿವಮೊಗ್ಗ ನಗರದ ವಿನೋಬನಗರದಲ್ಲಿ ವ್ಯವಸ್ಥಿತವಾಗಿ ಬಸ್ ಸಂಪರ್ಕ ಹೊಂದಿರುವ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿ ಖಾಲಿ ಇರುವ ಹಳೆ ಸಬ್ ರಿಜಿಸ್ಟರ್ ಕಚೇರಿಗೆ ಸ್ಥಳಾಂತರಿಸಿ, ಶಿವಮೊಗ್ಗ ನಗರದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಸಚಿವರು, ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಆರ್ಥಿಕ ಹಿಂದುಳಿದ ಕುಟುಂಬದ 11 ನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾಧನ್ ‘ ವಿದ್ಯಾರ್ಥಿ ವೇತನ.ಅರ್ಜಿ ಸಲ್ಲಿಕೆಗೆ ಮಾಹಿತಿ.
ವಿದ್ಯಾಧಾನ್ ಒಂದು ಪಾನ್ ಇಂಡಿಯಾ ವಿದ್ಯಾರ್ಥಿವೇತನವಾಗಿದ್ದು ಇದನ್ನು ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ. ೧೯೯೯ರಲ್ಲಿ ಶ್ರೀ ಎಸ್.ಡಿ. ಶಿಬುಲಾಲ್ (ಸಹ-ಸಂಸ್ಥಾಪಕರು, ಇನ್ಫೋಸಿಸ್) ಮತ್ತು ಶ್ರೀಮತಿ ಕುಮಾರಿ ಶಿಬುಲಾಲ್ (ವ್ಯವಸ್ಥಾಪಕ ಟ್ರಸ್ಟಿ) ಸ್ಥಾಪಿಸಿದರು. ವಿದ್ಯಾಧಾನ್ ವಿದ್ಯಾರ್ಥಿ ವೇತನವು ಇಲ್ಲಿಯತನಕ ೧೫,೦೦೦ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ವಿದ್ಯಾಧಾನ್ ಪ್ರತಿಷ್ಠಾನವು ಕೇರಳ, ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಗೋವಾ, ಒಡಿಶಾ, ದೆಹಲಿ, ಲಡಾಖ್, ಬಿಹಾರ್, ಜಾರ್ಖಂಡ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ, ಚಂಡೀಗಢ, ರಾಜಸ್ಥಾನ ಮತ್ತು ಮೇಘಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ೧೧ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ವಿದ್ಯಾಧನ್ ವಿದ್ಯಾರ್ಥಿವೇತನ ೨೦೨೬ರ ಅರ್ಜಿಸಲ್ಲಿಕೆ ಈಗ ಪ್ರಾರಂಭವಾಗಿವೆ.
೨೦೨೬ರ ವಿದ್ಯಾರ್ಥಿ ವೇತನದ ಅರ್ಜಿಗಳು ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಲಭ್ಯವಿದೆ.
ವಿದ್ಯಾರ್ಥಿಗಳು ಉಚಿತವಾಗಿ ವಿದ್ಯಾಧಾನ್ ವೆಬ್ಸೈಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು
ವಿಚಾರಣೆಗಾಗಿ: vidyadhan.karnataka@sdfoundationindia.com
ಕರೆಮಾಡಿ: +918068333500 (ಸಹಾಯವಾಣಿ ಸಂಖ್ಯೆ)
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು: www.vidyadhan.org ಅಥವಾ SDF Vidya (ಮೊಬೈಲ್ ಅಪ್ಲಿಕೇಶನ್)
ಕೊನೆಯ ದಿನಾಂಕ: 05 ಜುಲೈ 2026
ಶಾಸಕ ಡಾ.ಧನಂಜಯ ಸರ್ಜಿ ಅವರ ಕ್ಷೇತ್ರಾಭಿವೃದ್ಧಿ ಅನುದಾನ: ಪೊಲೀಸ್ ಇಲಾಖೆಗೆ ನೂತನ ವಾಹನ ಹಸ್ತಾಂತರ
ನಮ್ಮ ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ ಅವರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಮಂಜೂರಾಗಿದ್ದ ನೂತನ ‘ಪೊಲೀಸ್ ವಾಹನಕ್ಕೆ’ (ಜೀಪ್) ಇಂದು ಎಸ್.ಪಿ. ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ನಿಖಿಲ್ ಅವರ ಸಮ್ಮುಖದಲ್ಲಿ ಹಸಿರು ನಿಶಾನೆ ತೋರಿಸಿ, ಇಲಾಖೆಗೆ ಹಸ್ತಾಂತರಿಸಲಾಯಿತು.
ಶಿವಮೊಗ್ಗದ ಪ್ರಮುಖ ಕೇಂದ್ರಗಳಿರುವ ಜಯನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ತುರ್ತು ಸೇವೆಗೆ ಈ ವಾಹನ ನೆರವಾಗಲಿದೆ.
ಈ ವೇಳೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚರ್ಮ ಕುಶಲಕರ್ಮಿಗಳಿಗೆ ಪಾದರಕ್ಷಾ ತಯಾರಿಕಾ ಸ್ಪರ್ಧೆ
ಶಿವಮೊಗ್ಗ ಜಿಲ್ಲೆಯ ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ನೈಜ ಚರ್ಮ ಕುಶಲಕರ್ಮಿಗಳಿಗೆ ಕರಕುಶಲೆಯ ಕೌಶಲ್ಯ ಹಾಗೂ ಪಾದರಕ್ಷೆಗಳ ತಯಾರಿಕೆಯ ನೈಪುಣ್ಯ ಮತ್ತು ತಾಂತ್ರಿಕ ಕೌಶಲ್ಯವನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಸ್ಥಳದಲ್ಲೇ ಪಾದರಕ್ಷಾ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಪರಿಶಿಷ್ಟ ಜಾತಿಗೆ ಸೇರಿದ ಆರುಂಧತಿಯಾರ್, ಚಮ್ಮದಿಯಾ, ಚಮಾರ್, ಚಂಬಾರ್, ಚಮಗಾರ್, ದಕ್ಕಲ್, ದಕ್ಕಲ್ವಾರ್, ದಕ್ಕಲಿಗ, ಮಾದರ್, ಮಾದಿಗ್, ಮಾದಿಗ, ಮಿನಿಮಾದಿಗ್, ಜಾಂಬುವುಲು, ಹರಳಯ್ಯ, ಮಾಚಿಗಾರ್, ಮೋಚಿಗಾರ್, ಮೋಚಿ, ಮುಚಿ, ತೆಲುಗು ಮೋಚಿ, ಕಮಾಟಿ, ಮೋಚಿ, ರೋಹಿದಾಸ್, ಧೋರ್, ಕಕ್ಕಯ್ಯ, ಕಂಕಯ್ಯ, ಸಮಗಾರ, ಸಮಗಾರ್ ಚರ್ಮ ಕುಶಲಕಮಿಗಳು/ಕುಟುಂಬದವರಾಗಿದ್ದು, 18 ರಿಂದ 35 ವರ್ಷದೊಳಗಿನವರಾಗಿರಬೇಕು. ಅವಶ್ಯವಿರುವ ಕಚ್ಚಾವಸ್ತು ಹಾಗೂ ಟೂಲ್ಸ್ ಗಳನ್ನು ಸ್ವತಃ ತರಬೇಕು. ಪುರುಷ/ಮಹಿಳೆಯ ಒಂದು ಜೊತೆ ಪಾದರಕ್ಷೆಗಳನ್ನುಮಾತ್ರ ತಯಾರಿಸುವುದು. ಕೊಲ್ಹಾಪುರಿ ಮಾದರಿಯ ಪಾದರಕ್ಷೆಗಳನ್ನು ಪರಿಗಣಿಸುವುದಿಲ್ಲ.
ಸ್ಪರ್ಧೆಯು ಜೂ. 06 ರಂದು ಬೆಳಗ್ಗೆ 11.00 ರಿಂದ ಸಂಜೆ 5.00ರವರೆಗೆ ಕರ್ನಾಟಕ ಇನ್ಸ್ವಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ, ಉಲ್ಲಾಳ ಉಪನಗರ, ಕೆಂಗೇರಿ, ಬೆಂಗಳೂರು ಇಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ ರೂ. 50000/-, ದ್ವಿತೀಯ ಬಹುಮಾನ ರೂ. 30000/-, ತೃತೀಯ ಬಹುಮಾನ ರೂ. 20000/- ಹಾಗೂ 2 ಸಮಾಧಾನಕರ ಬಹುಮಾನ ರೂ. 10000/- ಗಳಾಗಿರುತ್ತದೆ.
ಆಸಕ್ತರು ಅರ್ಜಿಯನ್ನು https://lidkar.com ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜಾತಿ ಮತ್ತು ವೃತ್ತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ನಿಗಮದಿಂದ ತರಬೇತಿ ಪಡೆದ ದಾಖಲೆ/ ಇ-ಶ್ರಮ ಕಾರ್ಡ್ ಗಳನ್ನು ಲಗತ್ತಿಸಿ ಡಾ|| ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿ., ಡಾ|| ಜಗಜೀವನರಾಂ ಲಿಡಕರ್ ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ ಏರಿಯಾ, ವಸಂತನಗರ, ಬೆಂಗಳೂರು 560052 ಇಲ್ಲಿಗೆ ಅಂಚೆ ಮೂಲಕ ಮೇ 30 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಲಿಡಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9141304210 ನ್ನು ಸಂಪರ್ಕಿಸುವುದು.
B.Y. Raghavendra ಇದು ಪ್ರಗತಿ ಪ್ರದರ್ಶನವಲ್ಲ.ಸೀಎಂ ಕುರ್ಚಿ ಉಳಿಸಿಕೊಳ್ಳುವ ” ಕಾದಾಟ” – ಬಿ.ವೈ.ರಾಘವೇಂದ್ರ
B.Y. Raghavendra ಕಾಂಗ್ರೆಸ್ ಸರ್ಕಾರವು ಇಂದು ತುಮಕೂರಿನಲ್ಲಿ ತನ್ನ 3ನೇ ವರ್ಷದ ‘ಪ್ರಗತಿಯತ್ತ ಕರ್ನಾಟಕ’ ಸಮಾವೇಶ ನಡೆಸುತ್ತಿರುವ ಬೆನ್ನಲ್ಲೇ, ಇಂದು ಶಿಕಾರಿಪುರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಸರ್ಕಾರದ ಸರಣಿ ವೈಫಲ್ಯಗಳು, ಭ್ರಷ್ಟಾಚಾರ ಹಾಗೂ ಸಮಾಜ ವಿರೋಧಿ ಧೋರಣೆಗಳನ್ನು ಅಂಕಿ-ಅಂಶಗಳ ಸಮೇತ ಜನರ ಮುಂದಿಡಲಾಯಿತು.
ರಾಜ್ಯದ ಜನತೆ ಇಂದು ಕೇಳುತ್ತಿದ್ದಾರೆ—”ಪ್ರಗತಿ ಎತ್ತ ಕರ್ನಾಟಕ? ಎಲ್ಲಿದೆ ಪ್ರಗತಿ?” ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ರೈತರು ಸುಖವಾಗಿಲ್ಲ, ಪ್ರಗತಿ ಕಂಡಿಲ್ಲ, ಮಹಿಳೆಯರಿಗೆ ಸುರಕ್ಷತೆಯಿಲ್ಲ, ಯುವಶಕ್ತಿ ಬೀದಿಗಿಳಿದು ಹೋರಾಡುತ್ತಿದೆ. ಇದು ಪ್ರಗತಿಯ ಪ್ರದರ್ಶನವಲ್ಲ, ಬದಲಿಗೆ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವ ಹಾಗೂ ಉಪಮುಖ್ಯಮಂತ್ರಿಗಳು ಕುರ್ಚಿ ಕಿತ್ತುಕೊಳ್ಳುವ ‘ಕುರ್ಚಿ ಕಾದಾಟದ ಉತ್ಸವ’ ಅಷ್ಟೇ!
ಗ್ಯಾರಂಟಿ ಹೆಸರಲ್ಲಿ ಖಜಾನೆ ಖಾಲಿ – ಕುಂಠಿತ ಅಭಿವೃದ್ಧಿ:
ಶಕ್ತಿ ಯೋಜನೆ: ಮಹಿಳೆಯರಿಗೆ ಉಚಿತ ಪ್ರಯಾಣ ಎಂದರು, ಆದರೆ ಹೊಸ ಬಸ್‌ಗಳಿಲ್ಲ. ಸಾರಿಗೆ ಸಂಸ್ಥೆಗಳಿಗೆ ನೀಡಬೇಕಾದ ₹4,000 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡು ಸಂಸ್ಥೆಗಳನ್ನು ದಿವಾಳಿಯ ಅಂಚಿಗೆ ತಳ್ಳಿದ್ದಾರೆ. ರಸ್ತೆ ರಿಪೇರಿಗೂ ಹಣವಿಲ್ಲ!
ಗೃಹಲಕ್ಷ್ಮಿ: 2024-25ರ ಸಾಲಿನಲ್ಲಿ 12 ಕಂತುಗಳ ಬದಲಿಗೆ ಕೇವಲ 10 ಕಂತುಗಳನ್ನು ಮಾತ್ರ ನೀಡಲಾಗಿದೆ. ಸುಮಾರು ₹5,000 ಕೋಟಿ ಹಣ ಎಲ್ಲಿ ಹೋಯಿತು?
ಗೃಹಜ್ಯೋತಿ: ವಿದ್ಯುತ್ ಬಿಲ್ ದುಪ್ಪಟ್ಟು ಮಾಡಿ ರಾಜ್ಯದ ಉದ್ಯಮಗಳು ನೆರೆರಾಜ್ಯಗಳಿಗೆ ಪಲಾಯನ ಮಾಡುವಂತೆ ಮಾಡಿದ್ದಾರೆ.
ಅನ್ನಭಾಗ್ಯ & ಯುವನಿಧಿ: ಕೇಂದ್ರದ ಅಕ್ಕಿಗೆ ತಮ್ಮ ಸ್ಟಿಕ್ಕರ್ ಅಂಟಿಸಿದ್ದಾರೆ. ಯುವನಿಧಿ ಯೋಜನೆಯಡಿ ನೋಂದಣಿಯಾದ ಪದವೀಧರರ ಸಂಖ್ಯೆ ಶೇ. 20 ರಷ್ಟೂ ದಾಟಿಲ್ಲ. ಮೂರು ವರ್ಷಗಳಲ್ಲಿ ಬರೋಬ್ಬರಿ ₹2,46,000 ಕೋಟಿ ರೂ. ಹೊಸ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ.
ದಲಿತ ಹಾಗೂ ರೈತ ವಿರೋಧಿ ಆಡಳಿತ:
ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಕಾಯ್ದೆಯಡಿ ದಲಿತರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ₹39,000 ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾನೂನುಬಾಹಿರವಾಗಿ ವರ್ಗಾಯಿಸಿ ದ್ರೋಹ ಬಗೆದಿದ್ದಾರೆ.
NCRB ವರದಿಯ ಪ್ರಕಾರ ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನಕ್ಕೆ ತಲುಪಿದೆ. ಸುಮಾರು 2,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಪರಿಹಾರ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಹಾಲಿನ ಪ್ರೋತ್ಸಾಹಧನ ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳಲಾಗಿದೆ.
ಹಗರಣಗಳು ಮತ್ತು ಕಾನೂನು ಸುವ್ಯವಸ್ಥೆ ಕುಸಿತ:
ಮುಡಾ (MUDA) ಭೂ ಹಗರಣ ಮತ್ತು ಮಹರ್ಷಿ ವಾಲ್ಮೀಕಿ ನಿಗಮದ ₹94 ಕೋಟಿ ಲೂಟಿ ಹಗರಣಗಳು ಸರ್ಕಾರದ ಭ್ರಷ್ಟ ಮುಖವನ್ನು ಬಯಲು ಮಾಡಿವೆ. ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಈ ಸರ್ಕಾರವೇ ಹೊಣೆಯಾಗಿದೆ.
B.Y. Raghavendra ರಾಜ್ಯಾದ್ಯಂತ ಮರಳು ಮಾಫಿಯಾ ಮತ್ತು ಡ್ರಗ್ ಜಾಲ ರಾಜಾರೋಷವಾಗಿ ನಡೆಯುತ್ತಿದೆ. ಮುದ್ಗಲ್ ಗಣೇಶ ಮೆರವಣಿಗೆಯ ಮೇಲಿನ ಕಲ್ಲು ತೂರಾಟವನ್ನು ಗೃಹ ಸಚಿವರು ‘ಸಣ್ಣ ಘಟನೆ’ ಎಂದು ಬೇಜವಾಬ್ದಾರಿಯಾಗಿ ಕರೆದಿದ್ದಾರೆ. ಕಿರಗೋಡಿನಲ್ಲಿ ಹನುಮ ಧ್ವಜ ಇಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಮುಜರಾಯಿ ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟು, ಹಿಜಾಬ್ ವಿವಾದದ ಮೂಲಕ ಶಾಲೆಗಳನ್ನು ಕೋಮು ಧ್ರುವೀಕರಣದ ಕೇಂದ್ರವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.
ಅಭಿವೃದ್ಧಿ ಶೂನ್ಯವಾಗಿಸಿ, ರಾಜ್ಯವನ್ನು ಲೂಟಿ ಮಾಡುತ್ತಿರುವ ಈ ಜನವಿರೋಧಿ, ರೈತವಿರೋಧಿ ಸರ್ಕಾರದ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ನಮ್ಮ ಭಾರತೀಯ ಜನತಾ ಪಕ್ಷದ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
ಪಟ್ರೋಲ್, ಡಿಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಭಟನೆ
ಶಿವಮೊಗ್ಗದಲ್ಲಿ ಮತ್ತೆ ಇಂಧನ ದರ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ. ಸಾಮಾನ್ಯ ಪೆಟ್ರೋಲ್ ಹಾಗೂ ಪವರ್ ಪೆಟ್ರೋಲ್ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಮತ್ತೊಂದೆಡೆ ಸಾಮಾನ್ಯ ಡೀಸೆಲ್ ದರದಲ್ಲಿ ಅಲ್ಪ ಇಳಿಕೆ ದಾಖಲಾಗಿದೆ. ಇಂದಿನ ಹೊಸ ದರಗಳ ವಿವರ ಇಲ್ಲಿದೆ.
ಶಿವಮೊಗ್ಗದಲ್ಲಿ ಸಾಮಾನ್ಯ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 95 ಪೈಸೆ ಏರಿಕೆಯಾಗಿದೆ. ನಿನ್ನೆ 107 ರೂಪಾಯಿ 11 ಪೈಸೆ ಇದ್ದ ಪೆಟ್ರೋಲ್ ದರ, ಇಂದು 108 ರೂಪಾಯಿ 6 ಪೈಸೆಗೆ ತಲುಪಿದೆ.
ಇನ್ನು ಪ್ರೀಮಿಯಂ ಆವೃತ್ತಿಯಾದ ಪವರ್ ಪೆಟ್ರೋಲ್ ದರದಲ್ಲೂ 94 ಪೈಸೆ ಏರಿಕೆ ಕಂಡುಬಂದಿದೆ. ನಿನ್ನೆ 117 ರೂಪಾಯಿ 5 ಪೈಸೆ ಇದ್ದ ದರ, ಇಂದು 117 ರೂಪಾಯಿ 99 ಪೈಸೆಗೆ ಏರಿಕೆಯಾಗಿದೆ.
ಮತ್ತೊಂದೆಡೆ ಸಾಮಾನ್ಯ ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ. ಪ್ರತಿ ಲೀಟರ್‌ಗೆ 6 ಪೈಸೆ ಇಳಿಕೆಯಾಗಿದ್ದು, ನಿನ್ನೆ 95 ರೂಪಾಯಿ 18 ಪೈಸೆ ಇದ್ದ ಡೀಸೆಲ್ ದರ ಇಂದು 95 ರೂಪಾಯಿ 12 ಪೈಸೆಯಾಗಿದೆ.
ಆದರೆ ಟರ್ಬೋಜೆಟ್ ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಪ್ರತಿ ಲೀಟರ್‌ಗೆ 94 ಪೈಸೆ ಹೆಚ್ಚಳವಾಗಿದ್ದು, ಇಂದಿನ ದರ 99 ರೂಪಾಯಿ 69 ಪೈಸೆಗೆ ತಲುಪಿದೆ.
