Thursday, August 6, 2026
Thursday, August 6, 2026
Home Blog Page 90

ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ: ಕೇಂದ್ರದ ವಿರುದ್ಧ ಬೆಂಗಳೂರಲ್ಲಿ ಬೃಹತ್ ಆಕ್ರೋಶ..!

0

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ “ಬೃಹತ್ ಪ್ರತಿಭಟನೆ” ಹಾಗೂ “ರಾಜಭವನ ಚಲೋ” ಚಳವಳಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಜಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಶಾಲಾ ಶಿಜ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ಧ್ವನಿ ಎಲ್ಲರೂ ಎತ್ತಿದರು.

ನಮ್ಮ ರಾಜ್ಯದ 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚು ಮಕ್ಕಳು ಹಗಲಿರುಳು ಕಷ್ಟಪಟ್ಟು ಈ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ ಕೇಂದ್ರದ ಅಸಮರ್ಥತೆಯಿಂದಾಗಿ ಇಂದು ಆ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ದೇಶದ ಹಲವು ಕಡೆ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ಹೃದಯ ವಿದ್ರಾವಕ ಸಂಗತಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ದೇಶದ ಭವಿಷ್ಯವನ್ನು ನಿರ್ಮಿಸಬೇಕಾದ ಯುವಶಕ್ತಿಯ ಕನಸುಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಹೊಸಕಿ ಹಾಕುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಕ್ಕಳ ಕಣ್ಣೀರು ಒರೆಸುವ ಬದಲು ಜವಾಬ್ದಾರಿಯಿಂದ ನುಣುಚಿಕೊಂಡು ವಿದೇಶ ಪ್ರವಾಸಗಳಲ್ಲಿ ನಿಶ್ಚಿಂತರಾಗಿ ಕಾಲ ಕಳೆಯುತ್ತಿದ್ದಾರೆ..!

ಬಿಜೆಪಿಯ ಈ ಭ್ರಷ್ಟ ವ್ಯವಸ್ಥೆಯಿಂದ ದೇಶದ ಮಕ್ಕಳ ಭವಿಷ್ಯವನ್ನು ಕಾಪಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ದೇಶದ ಶಿಕ್ಷಣ ವ್ಯವಸ್ಥೆಯೇ ನಾಶವಾಗುತ್ತದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಮಧು ಬಂಗಾರಪ್ಪ ಕೇಂದ್ರ ಸರ್ಕಾರದ ಅಸಮರ್ಥತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ಸಚಿವರುಗಳಾದ ಶ್ರೀ ಈಶ್ವರ್ ಖಂಡ್ರೆ, ಶ್ರೀ ಎಂ.ಸಿ ಸುಧಾಕರ್, ಶ್ರೀ ಬೈರತಿ ಸುರೇಶ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಬಾನು ಚಿಬ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ಸೇರಿದಂತೆ ಪಕ್ಷದ ಮುಖಂಡರು, ಮಾಜಿ ಸಚಿವರು, ಶಾಸಕರುಗಳು, ವಿಧಾನಪರಿಷತ್ ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

B.Y. Raghavendra ಬೇಸೂರು ಅಣುಸ್ಥಾವರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಸಲ್ಲಿಸಿಲ್ಲ- ಬಿ.ವೈ.ರಾಘವೇಂದ್ರ

0

B.Y. Raghavendra ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ ಎಂಬ ವದಂತಿಗಳಿಂದ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ, ಸಾಗರದ ಉಪವಿಭಾಗಾಧಿಕಾರಿಗಳ (AC) ಕಚೇರಿಯಲ್ಲಿ ಬೇಸೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಖುದ್ದಾಗಿ ಭಾಗವಹಿಸಿ ಸಾರ್ವಜನಿಕರಿಗೆ ಧೈರ್ಯ,ಆತ್ಮವಿಶ್ವಾಸ ತುಂಬಿ ಮಾತನಾಡಿದರು.

B.Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾಪವನ್ನು ಸಲ್ಲಿಸಲಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಮಲೆನಾಡಿನ ಸೂಕ್ಷ್ಮ ಪರಿಸರ ಹಾಗೂ ಜನರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಯೋಜನೆಗೂ ನಮ್ಮ ಸ್ಪಷ್ಟ ವಿರೋಧವಿದ್ದು, ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಡುವಂತೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜನಸಮುದಾಯಕ್ಕೆ ತಿಳಿಸಿದರು.

ವಿದ್ಯುದ್ದೀಪವಿಲ್ಲದೇ ಕತ್ತಲೆಯ ಕೂಪವಾಗಿರುವ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ

0

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಇಂದು ಭಾರೀ ಅವ್ಯವಸ್ಥೆ ಕಂಡುಬಂದಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಬೆಳಗ್ಗೆಯಿಂದಲೇ ರೋಗಿಗಳು ಸಂಕಷ್ಟ ಅನುಭವಿಸಿದರು. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಅದನ್ನು ಬಳಸದೇ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿದೆ.

ತೀರ್ಥಹಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಇಲಾಖೆ ಕಡಿತಗೊಳಿಸಿತು. ಇದರ ಪರಿಣಾಮವಾಗಿ ತೀರ್ಥಹಳ್ಳಿಯ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯೂ ಕತ್ತಲಿನಲ್ಲಿ ಮುಳುಗಿತು.

ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ಇಲ್ಲದೇ ಆಸ್ಪತ್ರೆಯ ರೋಗಿಗಳು ಮತ್ತು ಸಿಬ್ಬಂದಿ ಪರದಾಡುವಂತಾಯಿತು. ವಿಶೇಷವಾಗಿ ವಾರ್ಡ್‌ಗಳಲ್ಲಿ ಫ್ಯಾನ್ ಹಾಗೂ ದೀಪಗಳಿಲ್ಲದೆ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ ಇಂದು ಎಂಟು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ವಿದ್ಯುತ್ ಸಮಸ್ಯೆಯಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ಆತಂಕಕ್ಕೀಡಾದರು. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಅದನ್ನು ಕಾರ್ಯಗತಗೊಳಿಸದೇ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಘಟನೆಗೆ ರೋಗಿಗಳು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದರು.

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಯೋತ್ಪಾದನಾ ವಿರೋಧಿ ದಿನಾಚರಣೆ

0

ಭಯೋತ್ಪಾದನಾ ವಿರೋಧಿ ದಿನದ ಆಚರಣೆ ಅಂಗವಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಭಯೋತ್ಪಾದನಾ ವಿರೋಧಿ ದಿನದ “ಪ್ರತಿಜ್ಞಾವಚನ” ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪಾರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Madhu Bangarappa ಸಚಿವ ಮಧು ಬಂಗಾರಪ್ಪ ಪತ್ರಿಕಾ ಗೋಷ್ಠಿ: ನೀಟ್ ಪರೀಕ್ಷೆ ಪ್ರಸ್ತಾಪ. ಬಿಜೆಪಿ ಯವರ ವಿರುದ್ಧ ಕೆಂಡ

0

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 19 ಕೆಪಿಎಸ್ ಶಾಲೆಗಳು ಆರಂಭವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಒಂದು ಶಾಲೆಗೆ ಸುಮಾರು 3.5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.

ಜೂನ್ ಹಾಗೂ ಜುಲೈ ತಿಂಗಳೊಳಗೆ ಎಲ್ಲಾ ಕೆಪಿಎಸ್ ಶಾಲೆಗಳು ಆರಂಭವಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ಕನ್ನಡ ಶಾಲೆಗಳ ಮುಚ್ಚುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು,
ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚುತ್ತಿದೆ ಎಂದು ಹೇಳಿದರು.
ಈ ಸಂಬಂಧ ಎರಡು ಬಜೆಟ್‌ಗಳಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅನುದಾನಿತ ಹಾಗೂ ಅನುದಾನರಹಿತ ಕನ್ನಡ ಶಾಲೆಗಳಿಗೆ ಆರ್ಥಿಕ ನೆರವು ನೀಡಿ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.ಎನ್‌ಪಿಎಸ್ ಮತ್ತು ಓಪಿಎಸ್ ಕುರಿತಾಗಿ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Madhu Bangarappa ಇನ್ನು ಮಳೆಗಾಳಿ ಹಿನ್ನೆಲೆ ಹೊಳೆಹೊನ್ನೂರು ಭಾಗದಲ್ಲಿ ಉಂಟಾದ ನಷ್ಟದ ಕುರಿತು ಪ್ರತಿಕ್ರಿಯಿಸಿದ ಅವರು,
ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಶೇಷ ಅನುದಾನದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಸಿಎಂ ರಿಲೀಫ್ ಫಂಡ್ ಹಾಗೂ ಎನ್‌ಡಿಆರ್‌ಎಫ್ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವರದಿ ಆಧರಿಸಿ ವಿಶೇಷ ಪ್ಯಾಕೇಜ್ ಘೋಷಣೆ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಮರಗಳು ಭಾರೀ ಪ್ರಮಾಣದಲ್ಲಿ ಬಿದ್ದಿರುವುದರಿಂದ ವಿಶೇಷ ಪರಿಹಾರ ಅಗತ್ಯವಿದೆ ಎಂದು ಹೇಳಿದರು.

ಇದೇ ವೇಳೆ ಶಾಲೆಗಳಲ್ಲಿ ಕೇಸರಿ ಶಾಲು ಅಭಿಯಾನದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಮಧು ಬಂಗಾರಪ್ಪ,
“ಈ ರೀತಿಯ ರಾಜಕೀಯ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು” ಎಂದು ವಾಗ್ದಾಳಿ ನಡೆಸಿದರು.ಮಹಾರಾಷ್ಟ್ರದಲ್ಲಿ ಒಂದು ರೀತಿ, ಇಲ್ಲಿ ಮತ್ತೊಂದು ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
“ಇವೆಲ್ಲವೂ ರಬ್ಬೀಷ್ ಕೆಲಸ” ಎಂದು ಟೀಕಿಸಿದರು.

ಬಿಜೆಪಿಯವರು ಮಕ್ಕಳ ಭವಿಷ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೀಟ್ ಪರೀಕ್ಷೆಯಲ್ಲಿ 25 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
5 ಮಕ್ಕಳ ಪ್ರಾಣ ಹೋಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು,
“ಹೊಣೆಗಾರರ ಮೇಲೆ ಪ್ರಧಾನಿಗಳು ಕ್ರಮ ಕೈಗೊಳ್ಳಬೇಕಿತ್ತು” ಎಂದರು. “ಐದು ದಿನಗಳ ಬಳಿಕ ಸಚಿವರು ಪ್ರತ್ಯಕ್ಷರಾಗುತ್ತಾರೆ.
ಇಂತಹ ಕೆಲಸಗಳಿಗೆ ನಾನು ಉತ್ತರ ಕೊಡಬೇಕಾ?”. “ಮಕ್ಕಳ ಸಾವಿನಿಂದ ಪೋಷಕರ ಕನಸು ನಾಶವಾಗಿದೆ.
ಈ ದುರಂತದ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ?” ಎಂದು ಪ್ರಶ್ನಿಸಿದರು.

ಜನಿವಾರ ಹಾಗೂ ಶಿವದಾರ ವಿಚಾರಗಳನ್ನು ಮುಂದಿಟ್ಟು ಸಮಾಜದಲ್ಲಿ ವಿಭಜನೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.“ವಿಕೃತ ಮನಸ್ಸಿನಿಂದ ಇಂತಹ ಕೆಲಸ ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು.
“ಎಲ್ಲಾ ಧರ್ಮದವರನ್ನೂ ಕಾಪಾಡುವ ಕೆಲಸ ನಮ್ಮದು” ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಂಕೆ ಜಾತಿಗೆ ಸೇರಿದ ಪ್ರಾಣಿ ಬೇಟೆ, ಮೂವರ ಬಂಧನ

0

ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಮೇ 19 ರಂದು ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ದಾಳಿ ಮಾಡಿ ಮೂವರನ್ನು ಬಂದಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ತಾಲೂಕು ಕಲ್ಲತ್ತಿಪುರದ ವೆಂಕಟರಮಣ, ತಿರುವಣ್ಣಾಮಲೈ ಜಿಲ್ಲೆಯ ಕುಂಬಳೂರು ಗ್ರಾಮದ ಕನ್ನಿಯಪ್ಪನ್ ಹಾಗೂ ವಲ್ಲಿಯೂರು ಗ್ರಾಮದ ಸುರೇಶ್ ಇವರುಗಳು ಬೇಟೆಯಾಡಿದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ ಹಾಗೂ ಬೇಟೆಯಾಡಲು ಉಪಯೋಗಿಸಿದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ಬೆಂಗಳೂರು ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಉಪ ಮಹಾನಿರೀಕ್ಷಕರಾದ ಶ್ರೀಮತಿ ಸಂಗೀತಾ ಜಿ, ಮಡಿಕೇರಿ ಸಿ.ಐ.ಡಿ. ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರು ಇವರುಗಳ ಮಾರ್ಗದರ್ಶನಲ್ಲಿ ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ಬಾಬುದ್ದೀನ್ ಮತ್ತು ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ, ಚಾಲಕರಾದ ತಿಮ್ಮಶೆಟ್ಟಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಕಾಯ್ದೆ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗೆ ಸಂಬAಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ.: 9480800220 ಹಾಗೂ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಕಚೇರಿ ದೂ.ಸಂ.: 9480803394ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾಗರ ಸಿ.ಐ.ಡಿ. ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ.

ಇಂದಿನಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ

0

ದುಬಾರೆ ಆನೆ ಬಿಡಾರದಲ್ಲಿ ಎರಡು ಆನೆಗಳ ನಡುವಿನ ಕಾದಾಟದ ಸಂದರ್ಭದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಸಿಕ್ಕಿಹಾಕಿಕೊಂಡು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಪ್ರವಾಸಿಗ ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಇಂದಿನಿಂದ ತಾತ್ಕಾಲಿಕವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ

ಕೆಲ ದಿನಗಳ ಹಿಂದೆ ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಆನೆಗಳ ನಡುವಿನ ಗುದ್ದಾಟದ ಸಂದರ್ಭದಲ್ಲಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಆನೆ ಬಿಡಾರಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಯಿಂದ ಆನೆಗಳನ್ನು ನೋಡಲು ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಬಂದಂತಹ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಅವುಗಳನ್ನು ಮುಟ್ಟುವುದು ಮಾಡುತ್ತಾರೆ. ದುಬಾರೆ ಆನೆ ಬಿಡಾರದ ದುರಂತದ ನಂತರ ಆನೆಗಳಿಗೆ ಸ್ನಾನ ಮಾಡಿಸುವ ವ್ಯವಸ್ಥೆ ಬಂದ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ದುಬಾರೆಯಲ್ಲಿ ನಡೆದ ಘಟನೆ ಸಕ್ರೆಬೈಲು ಆನೆ ಬಿಡಾರದಲ್ಲಿ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಮಹತ್ವದ ನಿರ್ಧಾರವನ್ನು ಅರಣ್ಯ ಇಲಾಖೆ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂದಿನಿಂದ ಕೆಲ ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್‌ ಆಗಿರಲಿದೆ.
ಸದ್ಯ ಸಕ್ರೆಬೈಲು ಆನೆ ಬಿಡಾರದಲ್ಲಿ 24 ಆನೆಗಳು ಇವೆ. 19 ಗಂಡು ಆನೆಗಳು ಐದು ಹೆಣ್ಣು ಆನೆಗಳು ಇವೆ.

Madhu Bangarappa ಜೂನ್ 1. ಶಿವಮೊಗ್ಗದಲ್ಲಿ ಸಾವಿರ ಕೆಪಿಎಸ್ ಶಾಲೆಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ – ಮಧು ಬಂಗಾರಪ್ಪ

0

Madhu Bangarappa ಬೆಲೆ ಕಟ್ಟಲಾಗದ ಗ್ಯಾರಂಟಿಯಾದ ಶಿಕ್ಷಣವನ್ನು ಇಡೀ ದೇಶಕ್ಕೇ ಮಾದರಿಯಾಗಿ ನಮ್ಮ ರಾಜ್ಯ ನೀಡುತ್ತಿದ್ದು ಜೂನ್ ೦೧ ರಂದು ಒಂದು ಸಾವಿರ ಕೆಪಿಎಸ್ ಶಾಲೆಗಳಿಗೆ ಶಿವಮೊಗ್ಗದ ಅಲ್ಲಮ ಪ್ರಭು‌ ಮೈದಾನದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸುವರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರ ನಗರದ ಅಲ್ಲಮ ಪ್ರಭು ಮೈದಾನ(ಫ್ರೀಡಂ ಪಾರ್ಕ್) ಕ್ಕೆ ಭೇಟಿ ನೀಡಿ, ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ರಾಜ್ಯದಲ್ಲಿ ತಲಾ ಅಂದಾಜು ರೂ.೩.೫ ಕೋಟಿ ವೆಚ್ಚದಲ್ಲಿ ೧೦೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಈ ಶಾಲೆಗಳಲ್ಲಿ ಒಂದೇ ಸೂರಿನಡಿ ಸಕಲ ಸೌಲಭ್ಯ ಒದಗಲಿದ್ದು,
ಇದೊಂದು ಬ್ರಾಂಡ್ ಆಗಿದೆ. ಹಾಗೂ ಮಕ್ಕಳ ಭವಿಷ್ಯದ ಆಶಾಕಿರಣವಾಗಿದೆ ಎಂದರು.
೮೦೦ ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ
೨೦೦ ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಿಯುಸಿ ಪರೀಕ್ಷೆ -೨ ರಲ್ಲಿ ಶೇ.45 ಫಲಿತಾಂಶ ಬಂದಿದೆ. ಈಗ ಪಿಯುಸಿ ಫಲಿತಾಂಶ ಶೇ. ೯೨.೨೫ ಕ್ಕೆ ಏರಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.
ಈ ತಿಂಗಳ ಕೊನೆಯಲ್ಲಿ ಎಸ್ ಎಸ್ ಎಲ್ ಸಿ ಎರಡನೇ ಪರೀಕ್ಷೆ ಫಲಿತಾಂಶ ಬರಲಿದ್ದು ಉತ್ತಮ‌ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿತ್ತಿದ್ದು ಶೇ.60 ಅಂಕ ಗಳಿಸಿದ ಶೇ. 62 ಮಕ್ಕಳಿದ್ದರು. ಇದೀಗ ಶೇ. 60 ಅಂಕ ಗಳಿಸಿದ ಶೇ.66.5 ಮಕ್ಕಳಿದ್ದು ೪.೫% ರಷ್ಟು ಹೆಚ್ಚಳ ಆಗಿದೆ ಎಂದರು.
Madhu Bangarappa ಅಧಿಕಾರ ವಹಿಸಿಕೊಂಡ ತಕ್ಷಣ ಇಲಾಖೆಗೆ ಅತ್ಯಗತ್ಯವಾದ ಗೆಸ್ಟ್ ಶಿಕ್ಷಕರನ್ನು ನೇಮಿಸಲಾಗಿದೆ ಎಂದರು.
ಜೂನ್ ೧ ರಂದು ಶಿವಮೊಗ್ಗದಲ್ಲಿ ೭ ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ಅಂದು ಆಗುತ್ತದೆ. ನಂತರ ಉಳಿದ ಶಾಲೆಗಳ‌ ಡಿಪಿಆರ್ ಸಿದ್ದಗೊಳ್ಳಲಿದೆ ಎಂದ ಅವರು ಅಂದು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ
ಕೆಲವು ಬೇಡಿಕೆಗಳನ್ನು ಇಡಲಾಗುವುದು.
ತುಮಕೂರಿನಲ್ಲಿ‌ ಇತ್ತೀಚೆಗೆ ಮುಖ್ಯಮಂತ್ರಿಗಳು ರೂ.೬೦೦ ಕೋಟಿ ಕಾಮಗಾರಿ ಘೋಷಣೆ ಮಾಡಿದ್ದು, ಅದೇ ರೀತಿಯಲ್ಲಿ ಇಲ್ಲಿಯೂ ಸಹ ಮಾಡುವರು.
ಜೂ.01 ರ ಕಾರ್ಯಕ್ರಮದಂದು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಮಕ್ಕಳ‌ಜೊತೆಯಲ್ಲಿಯೇ ಊಟ ಮಾಡುವರು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ : ಎಸ್ ಎಸ್ ಎಲ್ ಸಿ ಯಲ್ಲಿ ೬೦೦ ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ ೮೬೭ ವಿದ್ಯಾರ್ಥಿಗಳು ಹಾಗೂ ರಾಜ್ಯದಿಂದಲೂ ವಿದ್ಯಾರ್ಥಿಗಳನ್ನು ಕರೆಯಿಸಿ ಅಂದು ಸನ್ಮಾನಿಸಿ ಅಭಿನಂದಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ೧೨ ಕೆಪಿಎಸ್ ಶಾಲೆಗಳಿವೆ. ಇದೀಗ ಹೊಸದಾಗಿ ೧೯ ಶಾಲೆಗಳನ್ನು ಕೆಪಿಎಸ್ ಶಾಲೆ ಗಳನ್ನಾಗಿ ಉನ್ನತೀಕರಿಸಲಾಗುವುದು. ಹಾಗೂ ಖಾಸಗಿ ಸಂಸ್ಥೆಯೊಂದು ರೂ. ೧೨ ಕೋಟಿ ಗಳನ್ನುಬಶಾಲೆಗಳ ಉನ್ನತೀಕರಣಕ್ಕೆ ಸಿಎಸ್ ಆರ್ ನಿಧಿಯನ್ನು‌ಘೋಷಿಸಿದ್ದಾರೆಂದು ತಿಳಿಸಿದರು.
ಅಡಿಕೆ ಹಾನಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ಗೆ ಬೇಡಿಕೆ : ಇತ್ತೀಚೆಗೆ ಜಿಲ್ಲೆಯಲ್ಲಿ ಬಿರುಗಾಳಿ‌ಮತ್ತು ಮಳೆಗೆ ಹೊಳೆಹೊನ್ನೂರು ವ್ಯಾಪ್ತಿಯ ಗ್ರಾಮಗಳು‌ ಮತ್ತು ಇತರೆಡೆ ಅಡಿಕೆ ಬೆಳೆಗಳು ಹಾನಿಗೀಡಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೈತರಿಗೆ ಪರಿಹಾರ ನೀಡಲು ಮಾನ್ಯ ಮುಖ್ಯಮಂತ್ರಿಗಳ ಬಳಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಮಾಜಿ ವಿಧಾನ ಪರಿಷತ್ ಶಾಸಕರಾದ ಆಯನೂರು‌ ಮಂಜುನಾಥ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಓ ಎನ್.ಹೇಮಂತ್, ಎಸ್ ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ ಸತ್ಯನಾರಾಯಣ್ ಇತರೆ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

ಪ.ಜಾ/,ಪ.ವರ್ಗಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಮೆಟ್ರಿಕ್ ಪೂರ್ವ/ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

0

ಸಾಗರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ www.sw.kar.nic.in ಮುಖಾಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಆ ಪ್ರತಿಯನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯದ ವಾರ್ಡನ್ ಅವರಿಗೆ ಸಲ್ಲಿಸಬೇಕಿರುತ್ತದೆ.
ಅಭ್ಯರ್ಥಿಗಳು ಕಳೆದ ಸಾಲಿನ ಅಂಕಪಟ್ಟಿ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಚಾಲ್ತಿಯಲ್ಲಿರುವ ದೂರವಾಣಿ ಸಂಖ್ಯೆ,
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಾಗಿದ್ದಲ್ಲಿ ಎಸ್ ಎ ಟಿ ಎಸ್ ಐಡಿ(SATS ID)
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಾಗಿದ್ದಲ್ಲಿ ಎಸ್ ಎಸ್ ಪಿ ಐಡಿ ಮತ್ತು ಯೂನಿವರ್ಸಿಟಿ ರಿಜಿಸ್ಟ್ರೇಷನ್ ನಂಬರ್ ನ್ನು‌‌ ಅರ್ಜಿಯೊಂದಿಗೆ ಸಲ್ಲಿಸಬೇಕು.
ಈ ಪ್ರವೇಶಾತಿಗೆ ಸಂಬಂಧಿಸಿದಂತೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸಾಗರ ತಾಲೂಕು ಇವರನ್ನು ಖುದ್ದಾಗಿ ಭೇಟಿ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ: 9480843192 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ವಿವಿಯಲ್ಲಿ”ಭಯೋತ್ಪಾದನಾ ವಿರೋಧಿ” ದಿನಾಚರಣೆ.

0

ಕುವೆಂಪು ವಿವಿಯ ಆಡಳಿತ ಭವನದಲ್ಲಿ ಗುರುವಾರದಂದು “ಭಯೋತ್ಪಾದನಾ ವಿರೋಧಿ ದಿನ” ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ತಿಮ್ಮರಾಯಪ್ಪ, ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಜಗನ್ನಾಥ ಡಾಂಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ.ಎಂ.ಆರ್.ಸತ್ಯಪ್ರಕಾಶ್, ವಾಣಿಜ್ಯ ನಿಕಾಯದ ಡೀನ್ ಪ್ರೊ.ಹೆಚ್.ಎನ್.ರಮೇಶ್, ಉಪಕುಲಸಚಿವರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ.ಕೆ.ಆರ್.ಮಂಜುನಾಥ್, ಎಲ್ಲರಿಗೂ ಭಯೋತ್ಪಾದನಾ ವಿರೋಧಿ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.