Tuesday, August 4, 2026
Tuesday, August 4, 2026
Home Blog Page 44

ಸಂಖ್ಯಾಫಲಕ ಇಲ್ಲದ ವಾಹನಗಳನ್ನ ತಪಾಸಣೆ ಮಾಡಿ ಸವಾರರಿಗೆ ಎಸ್ ಪಿ ನಿಖಿಲ್ ಅವರಿಂದ ಖಡಕ್ ವಾರ್ನಿಂಗ್

0

ಶಿವಮೊಗ್ಗ ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೇ ಸುತ್ತಾಡುತ್ತಿದ್ದ 74 ದ್ವಿಚಕ್ರ ವಾಹನಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ವಶಕೆ ಪಡೆದಿದ್ದಾರೆ. ಇತ್ತೀಚೆಗೆ ನಗರದಲ್ಲಿ ಇ-ಚಲನ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ (ಡಿಫೆಕ್ಟಿವ್) ನಂಬರ್ ಪ್ಲೇಟ್ ಅಳವಡಿಸಿ ಕೆಲವರು ವಾಹನಗಳಲ್ಲಿ ಸಂಚರಿಸುತ್ತಿದ್ದರು.

ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ 74 ದ್ವಿಚಕ್ರ ವಾಹನಗಳ ತಪಾಸಣೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು, ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ.

ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂಬರ್ ಪ್ಲೇಟ್ ಇಲ್ಲದ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳು ದೇವರಾಜ್, ಸಬ್‌ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿವಮೊಗ್ಗದ ಸರ್ವೋದಯ ಮಂಡಳಿ ಘಟಕವು ರಾಜ್ಯದಲ್ಲೇ ಅತ್ಯಂತ ಕ್ರಿಯಾಶೀಲ- ಡಾ.ಎಸ್.ಹೆಚ್.ಸುರೇಶ್

0

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಳಿ ತುಂಬ ಸಕ್ರಿಯವಾಗಿದ್ದು, ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ ಅಲ್ಲದೆ ವಿಶೇಷವಾಗಿ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಸಮ್ಮೇಳನಗಳನ್ನು ಆಯೋಜಿಸಿ ಗಾಂಧಿಜಿಯವರ ತತ್ವ ಸಿದ್ಧಾಂತವನ್ನು ಯುವಜನರಲ್ಲಿ ಬಿತ್ತುವ ಕೆಲಸವನ್ನು ಯಶಸ್ವಿಯಾಗಿ ಮಾಡಿದೆ ಎಂದು ರಾಜ್ಯ ಸರ್ವೋದಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಎಚ್ಎಸ್ ಸುರೇಶ್ ತಿಳಿಸಿದ್ದಾರೆ. ಅವರು ವನಿತಾ ವಿದ್ಯಾಲಯದಲ್ಲಿ ಜಿಲ್ಲಾ ಸರ್ವೋದಯ ಮಂಡಳಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ಪ್ರೇರಣಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಂ ಎನ್ ವೆಂಕಟೇಶ್ ಅವರು ನೀಡಿ, ಬಾಲ್ಯದಲ್ಲಿ ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಇಂದಿನ ಮಕ್ಕಳಲ್ಲಿ ಹೋಗಲಾಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವನಿತಾ ವಿದ್ಯಾಲಯದ ಮೂರು ವಿದ್ಯಾರ್ಥಿಗಳಿಗೆ ಡಾ. ಉಷಾ ರಮೇಶ್ ಅವರು ನಗದು ಪ್ರೋತ್ಸಾಹ ಧನವನ್ನು ನೀಡುವುದರ ಮೂಲಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಭೆ ಎಲ್ಲರ ಮಕ್ಕಳಲ್ಲೂ ಇದೆ. ಅದನ್ನು ಹೊರ ತರುವ ಕಾರ್ಯ ನಮ್ಮ ಶಿಕ್ಷಕರು ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಮತ್ತೊಂದು ಮಹತ್ವಪೂರ್ಣ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಅದೆಂದರೆ ಕರ್ನಾಟಕ ಬ್ಯಾಂಕ್ ಅಧಿಕಾರಿ ಎನ್ ಎಸ್ ಶ್ರೀನಿವಾಸಮೂರ್ತಿ ಅವರು ರಚಿಸಿದ ಶಿಲ್ಪಕಲಾ ದೇವಾಲಯಕ್ಕೆ ದಾರಿ ಎಂಬ ಎಂಟನೇ ಸಂಪುಟದ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು ಪುಸ್ತಕವನ್ನು ಬಿಡುಗಡೆ ಮಾಡಿದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಹೆಚ್ ಆರ್ ಶಂಕರ್ ನಾರಾಯಣ ಶಾಸ್ತ್ರಿ ಯವರು ಮಾತನಾಡಿ ಕರ್ನಾಟಕದಲ್ಲಿ ಸುಮಾರು 68,000ಕ್ಕೂ ಹೆಚ್ಚು ದೇವಾಲಯಗಳಿದ್ದು, ಶ್ರೀಯುತ ಶ್ರೀನಿವಾಸಮೂರ್ತಿ ಅವರು ಇದುವರೆಗೂ 1800 ದೇವಾಲಯಗಳ ಪರಿಚಯವನ್ನು ತಮ್ಮ ಕೃತಿಗಳ ಮೂಲಕ ಮಾಡಿಕೊಟ್ಟಿರುವುದು ಒಂದು ಅಚ್ಚರಿಯ ವಿಷಯ ಎಂದು ಶ್ಲಾಘಿಸಿದರು. ದೇವಾಲಯಗಳಿಗೆ ಹೋಗಿ ಬಂದರೆ ಸಾಲದು ಅದರ ಇತಿಹಾಸ, ಪೌರಾಣಿಕ ಹಿನ್ನೆಲೆ, ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ ಈ ನಿಟ್ಟಿನಲ್ಲಿ ಲೇಖಕರು ಪ್ರತಿಯೊಂದು ವಿಷಯವನ್ನು ವಿಷದ ಪಡಿಸಿ ಸುಂದರವಾದ ಛಾಯಾಚಿತ್ರಗಳನ್ನು ಮುದ್ರಿಸಿ, ಉತ್ತಮ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷರಾದ ಆರ್. ಮನೋಹರ್ ರವರು ತಮ್ಮ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ಪ್ರಾರಂಭದಲ್ಲಿ ಕುಮಾರಿ ಸಂಜನಾ ತಿವಾರಿ ಪ್ರಾರ್ಥನೆ ಮಾಡಿದರು ಸ್ವಾಗತಿಸಿದರು ರೋಟೆರಿಯನ್ ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಸರ್ವೋದಯ ಮಂಡಳಿಯ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕರಾದ
ಸಂತೋಷ್ ಮತ್ತು ಸದಾನಂದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಶ್ರೀಮತಿ ಆರತಿ ತಿವಾರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತು ಸಾಹಿತ್ಯ ಸತ್ತರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Klive Special Article “ಸುಮ್ಮನೆ ಬ್ರಹ್ಮನಾಗುವನೆ?” ಜಿಜ್ಞಾಸೆ ನೀಡಿದ ಅವಧೂತ ಶಿವರಾಮ ಶಾಸ್ತ್ರಿಗಳು ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

0

Klive Special Article ನನ್ನ ಬರಹದ ಪಯಣ ಒಂದೊಂದು ಜಾಗಕ್ಕೆ ಒಬ್ಬೊಬ್ಬ ಅಧ್ಯಾತ್ಮ ಜೀವಿಯ ಕಡೆಗೆ ನಡೆದಾಗ ಅಲ್ಲಿನ ವಿಶೇಷತೆ ಹಾಗೂ ಆ ಸಂತರ ಚಮತ್ಕಾರಗಳು, ಅವರ ಕೌಟುಂಬಿಕ ಜೀವನ ಎಲ್ಲವನ್ನೂ ಗಮನಿಸಿದಾಗ ನಾವೇಕೆ ಹಾಗೆ ಆಗಲು ಸಾಧ್ಯವಿಲ್ಲ ಅಥವಾ ನಮ್ಮ ಮತ್ತು ಅವರ ಆಧ್ಯಾತ್ಮಿಕ ಜೀವನವು ಬೇರೆ ಬೇರೆಯೇ ? ಎಂಬ ಅನುಮಾನವೂ ಎಷ್ಟೋ ಬಾರಿ ಬಂದಿದೆ. ನಿಜಕ್ಕೂ ಭಗವಂತನಿಗೆ ಹತ್ತಿರವಾಗಬೇಕಾದರೆ ಎಷ್ಟು ಕಷ್ಟವಾಗುತ್ತದೆಯಲ್ಲವೇ ? ಇಷ್ಟು ಕಷ್ಟ ಪಟ್ಟು ಸಾಧನೆಯನ್ನೇಕೆ ಮಾಡಬೇಕು ? ಎಂಬ ಹಲವಾರು ಪ್ರಶ್ನೆಗಳು ಮನಸಿಗೆ ಬಂದಾಗ ಅರ್ಥವಾಗುತ್ತದೆ. ಬ್ರಹ್ಮಾನುಭವೆಂದರೆ ಸುಮ್ಮನೆಯೇನು ? ಹೀಗೇ ಯೋಚಿಸುತ್ತಾ ಕುಳಿತು ಮೊಬೈಲ್‌ ಸ್ಕ್ರಾಲ್‌ ಮಾಡುತ್ತಿರುವಾಗ “ಸುಮ್ಮನೆ ಬ್ರಹ್ಮವಾಗುವನೆ ? ಮೂಲ ಹಮ್ಮೆಲ್ಲ ಲಯವಾಗಿ ಉಳಿಯದೇ ತಾನೇ ! ಸುಮ್ಮನೆ ಬ್ರಹ್ಮವಾಗುವನೇ ?”ಎಂಬ ಪದ್ಯವನ್ನು ಹಾಕಿದ ನನ್ನ ಸ್ನೇಹಿತನ ವಾಟ್ಸಾಪ್‌ ಸ್ಟೇಟಸ್‌ ನೋಡಿದ ನಾನು ಅವನಿಗೆ ಮೆಸೇಜ್‌ ಮಾಡಿ ಈ ಪದ್ಯ ಯಾರು ಬರೆದರು ಏನು ? ಎಂಬುದಾಗಿ ವಿಚಾರಿಸಿದಾಗ ಅವನು ಇದನ್ನು ಬರೆದವರು ಶಂಕರಾಚಾರ್ಯರು ಎಂದು ತಿಳಿಸಿದ. ಆದರೆ ಶಂಕರಾಚಾರ್ಯರು ಮೂಲತಃ ಕೇರಳದವರು, ಅವರಿಗೆ ಸಂಸ್ಕೃತವೇ ಭಾಷೆಯಾಗಿ, ಅವರ ಎಲ್ಲಾ ರಚನೆಗಳು ಸಂಸ್ಕೃತದ್ದೇ ಆಗಿರುವಾಗ ಇದು ಹೇಗೆ ಸಾಧ್ಯ ಎಂದುಕೊಂಡೆ. ಸರಿ ಇರಬಹುದೇನೋ ಅಥವಾ ಅವರ ಯಾವುದೋ ಒಂದು ಸಂಸ್ಕೃತ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿರಬಹುದು ಎಂದುಕೊಂಡು, ಅಪ್ಪನ ಬಳಿಗೆ ಬಂದು ಈ ಪದ್ಯವನ್ನು ಹಾಕಿದಾಗ ಅವರು ʼಅರೇ ಇದು ವೇದಾಂತ ಶಿವರಾಮ ಶಾಸ್ತ್ರಿಗಳʼ ಪದ್ಯ ಎಂದರು. ಅವರ ಬಗ್ಗೆ ನಾನು ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಹಲವಾರು ಅಚ್ಚರಿಗಳೂ ಸಹಾ ನನಗೆ ತಿಳಿದವು. ಶಿವರಾಮ ಶಾಸ್ತ್ರಿಗಳು ಯಾರು ? ಎಲ್ಲಿಯವರು ಅವರಿಗೆ ವೇದಾಂತ ಶಿವರಾಮ ಶಾಸ್ತ್ರಿ ಎಂಬ ಹೆಸರು ಹೇಗೆ ಬಂತು ಎಂಬುದಾಗಿ ನೋಡುತ್ತಿರುವಾಗ, ಅವರ ಬೇರೆ ಬೇರೆ ಪದ್ಯಗಳು ನನಗೆ ದೊರೆತವು ಕೆಲವು ಕಾಲಗಳು ಅವರ ಬಗ್ಗೆ ಯೋಚನೆ ಬಿಟ್ಟು ಅವರ ಪದ್ಯಗಳನ್ನೇ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. “ಆಹಾ ! ಎಂಥಾ ಅದ್ಭುತವಾದ ಪದ್ಯಗಳು, ವೇದಾಂತವನ್ನು ಕೇವಲ ಆಡುಮಾತಿನಿಂದ ಹೇಳುವುದೆಂದರೇನು, ಅದರ ಅನುಭವವನ್ನು ಕೇಳುಗರಿಗೆ ಸಿಗುವಂತೆ ಮಾಡುವುದು ಕಡಿಮೆ ಮಾತಲ್ಲ. ಹೀಗಾಗಿ ಅವರ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆದು ಇಂದಿನ ಈ ಅಂಕಣವನ್ನು ಅವರಿಗಾಗಿ ಮೀಸಲಿಟ್ಟಿದ್ದೇನೆ. ಅಂದು ನನಗೆ ಆ ಹಾಡು ಕೇಳದಿದ್ದರೆ ಇವರ ಬಗ್ಗೆ ತಿಳಿಯಲು ಸಾಧ್ಯವೇ ಆಗುತ್ತಿರಲಿಲ್ಲ ಎನಿಸುತ್ತದೆ.
Klive Special Article ಮೈಸೂರು ಶಿವರಾಮ ಶಾಸ್ತ್ರಿಗಳು ಅಥವಾ ವೇದಾಂತ ಶಿವರಾಮ ಶಾಸ್ತ್ರಿಗಳು ಮೂಲತಃ ಮೈಸೂರಿನವರು. ಆದರೆ ಇವರ ಪೂರ್ವಜರು ಕರ್ನೂಲು ಜಿಲ್ಲೆಯ ಕಡೆಯವರು. ಇವರ ತಾತನವರಾದ ರಾಜೇಶ್ವರ ಶಾಸ್ತ್ರಿಗಳು ಜೀವನ ನಿರ್ವಹಣೆಗಾಗಿ ಮೈಸೂರಿಗೆ ಬಂದರು. ಹೀಗಾಗಿ ಶಾಸ್ತ್ರಿಗಳು ಕರ್ನಾಟಕದವರಾದರು. ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾ ಸನ್ನಿಧಾನಂಗಳವರ ಸಮಕಾಲೀನರು. ಮಾತಿನಲ್ಲಿ ಹಾಗೂ ವೇದಾಂತದಲ್ಲಿ ನಿಷ್ಠುರವಾದಿಗಳಾದ ಇವರು ಅತ್ಯಂತ ಕೋಮಲ ಹೃದಯಿಗಳಾಗಿದ್ದರು. 1861 ಮಾರ್ಚ್‌ 23ರಂದು ಮೈಸೂರಿನಲ್ಲಿ ಜನಿಸಿದ ಶ್ರೀ ಶಿವರಾಮ ಶಾಸ್ತ್ರಿಗಳಿಗೆ ತಂದೆ ಶೇಷಾದ್ರಿ ಶಾಸ್ತ್ರಿಗಳು ಮೊದಲ ಗುರು. ತಂದೆ ಪ್ರಖಾಂಡ ಪಂಡಿತರಾಗಿದ್ದರಿಂದ ಶಾಸ್ತ್ರಿಗಳು ಕೂಡಾ ತರ್ಕ ವ್ಯಾಕರಣಗಳಲ್ಲಿ ನಿಷ್ಣಾತರಾಗಿದ್ದರು. ನಿಷ್ಠುರವಾದಿಗಳು, ಹಾಗೂ ಅವಧೂತರ, ಸಂತರ ಬಗೆಗೆ ಒಲವಿದ್ದ ಶಿವರಾಮನನ್ನು ಸಹಜವಾಗಿ ವೇದಾಂತ ಲೋಕವು ಆಕರ್ಷಿಸಿತು. ಆಗ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇವರು ದೇಶ ಸಂಚಾರಕ್ಕೆ ಹೊರಟುಬಿಡುತ್ತಾರೆ. ನಂತರ ಹಿಂತಿರುಗಿದಾಗ ಇಪ್ಪತ್ತು ವರ್ಷ ಪ್ರಾಯದವರಾಗಿದ್ದರು. ಹಿಂತಿರುಗಿ ಬಂದರಲ್ಲ ಎಂಬ ಸಂತೋಷ ತಂದೆ-ತಾಯಿಯರಿಗಿತ್ತು, ಹಾಗೂ ಇದೇ ಸಮಯದಲ್ಲಿ ಅವರಿಗೆ ಮದುವೆ ಮಾಡಿದರೆ ಇವನು ಸಾಧುವಾಗುವ ಅಥವಾ ಅಧ್ಯಾತ್ಮಿಕತೆಯಿಂದ ಹೊರಬರಬಹುದು ಎಂದು ತಿಳಿದು ಅಕ್ಕಯ್ಯಮ್ಮ ಎಂಬ ಹೆಣ್ಣಿನೊಡನೆ ಮದುವೆ ಮಾಡಿದರೆ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಅವರ ಹೆಂಡತಿ ಒಂದು ಹೆಣ್ಣುಮಗುವಿಗೆ ಜನ್ಮವಿತ್ತು ಕಾಲವಾದರು. ಇದು ಶಿವರಾಮನಿಗೆ ಮತ್ತೆ ಹೊರಬೀಳಲು ಅನುಕೂಲವಾಯಿತು. ಆಗ ಅವರು ಉತ್ತರ ಭಾರತದ ಕಡೆಗೆ ಹೊರಟಾಗ ಅದೊಂದು ಕೇವಲ ಪ್ರಪಂಚ ಪರ್ಯಟನೆಯೆನಿಸದೇ ಆಧ್ಯಾತ್ಮಿಕ ಪರ್ಯಟನೆಯಾಗತೊಡಗಿತು. ಮೈಸೂರಿನಿಂದ ನೇಪಾಳದವರೆಗೆ ಶಾಸ್ತ್ರಿಗಳು ಅನೇಕ ಸಾಧುಗಳ ದರ್ಶನ ಪಡೆದು, ಅವರೊಂದಿಗೆ ಅಧ್ಯಾತ್ಮ, ವೇದಾಂತಗಳ ಚರ್ಚೆಯನ್ನು ಮಾಡುತ್ತಾ ನಡೆದಾಗ, ಅಲ್ಲಿ ನಿಜಾನಂದರೆಂಬ ಅವಧೂತರ ದರ್ಶನವಾಗುತ್ತದೆ. ಅದು ಶಿವರಾಮನ ಪಾಲಿಗೆ ಸುಯೋಗವಾಗಿತ್ತು. ಸದಾ ಅವರ ಸೇವೆಯಲ್ಲಿ ಮಗ್ನನಾದ ಈ ಯುವಕನ ಭಕ್ತಿಗೆ ಗುರುಗಳು ಮೆಚ್ಚಿ ಶಿವರಾಮನಿಗೆ ಮಹಾವಾಕ್ಯಗಳ ಉಪದೇಶ ಮಾಡುತ್ತಾರೆ. ಅಲ್ಲಿಂದ ಇವರ ಚರ್ಯೆಯೇ ಬದಲಾಯಿತು. ಅಧ್ಯಾತ್ಮದ ಸಂಪೂರ್ಣ ಅನುಭಾವಿಯಾದ ಇವರು ತಮ್ಮ ಗುರುಗಳಿಗೆ ತಮಗೆ ಸಂನ್ಯಾಸ ನೀಡಬೇಕೆಂದು ಕೇಳಿದರು. ಆಗ ತಂದೆ-ತಾಯಿಗಳ ಅಪ್ಪಣೆಯಿಲ್ಲದೆ ಶಿಷ್ಯನ ಕೋರಿಕೆಯನ್ನು ತಿರಸ್ಕರಿಸಿ, ಗೃಹಸ್ಥನಾಗಲು ಹೇಳಿದರು. “ಗೃಹಸ್ಥನಾಗು, ಗೃಹಸ್ಥನಾಗಿದ್ದುಕೊಂಡೇ ನೀನು ಆತ್ಮ ವಿಚಾರ ಮಾಡು ಹಾಗೂ ಆಚಾರ್ಯ ಶಂಕರರ ತತ್ತ್ವಗಳನ್ನು ತಿಳಿಸುತ್ತಾ ತನ್ಮೂಲಕ ಅವರ ಸೇವೆಯನ್ನು ಮಾಡು” ಎಂದು ತಿಳಿಸಲು ಗುರುವಾಕ್ಯ ಪಾಲನೆಗಾಗಿ ಮಂಡ್ಯದ ಬಳಿಯ ಕೀಲಾರದ ಸೀತಮ್ಮ ಮತ್ತು ಸುಬ್ಬಾಭಟ್ಟರ ಎರಡನೇ ಮಗಳು ಪಾರ್ವತಮ್ಮನವರನ್ನು ವಿವಾಹವಾದರು. ಇದೇ ಸಮಯದಲ್ಲಿ ತಂದೆ-ತಾಯಿಯರು ಕಾಲವಾದರು. ಶಾಸ್ತ್ರಿಗಳ ವೇದಾಂತ ಅಭ್ಯಾಸ ಮತ್ತಷ್ಟು ದ್ವಿಗುಣವಾಯಿತು. ಜಾತಿ-ಧರ್ಮ ಭೇದವಿಲ್ಲದೇ ವೇದಾಂತ ಬೋಧನೆಯನ್ನು ಪ್ರಾರಂಭಿಸಿದರು. ಮೈಮೇಲೆ ಜನಿವಾರವಿಲ್ಲ, ಅವಧೂತ ಚರ್ಯೆಯ ಈ ವ್ಯಕ್ತಿತ್ವ ಯಾರಿಗೆ ತಿಳಿಯಬೇಕು. ಸ್ವಜಾತಿಯಲ್ಲಿ ಅವರಿಗೆ ಅನೇಕರು ವಿರೋಧಿಗಳಾದರು. ಶಾಸ್ತ್ರಿಗಳು ಅವರು ಕೊಡುತತಿದ್ದ ಕೀಟಲೆಗಳನ್ನು ಸಾವಧಾನರಾಗಿ ಸಹಿಸಿಕೊಂಡರು. ಪ್ರತಿದಿನವೂ ಚಾಮುಂಡಿ ಬೆಟ್ಟಕ್ಕೆ ತಾಯಿಯ ದರ್ಶನಕ್ಕೆ ಹೋಗುವುದು ಶಾಸ್ತ್ರಿಗಳ ವಾಡಿಕೆಯಾಗಿತ್ತು. ಹೀಗೇ ಒಮ್ಮೆ ಅವರನ್ನು ಕೀಟಲೆ ಮಾಡುವ ಸಲುವಾಗಿ ಒಬ್ಬ ವ್ಯಕ್ತಿಯು “ಶಾಸ್ತ್ರಿಗಳೇ, ಸದಾ ಬ್ರಹ್ಮಾನುಸಂಧಾನ ಮಾಡುವ ತಾವು ಬ್ರಹ್ಮವನ್ನು ನಿರ್ಗುಣ ಎಂದು ತಿಳಿಸುವಿರಿ ಆದರೆ ಚಾಮುಂಡೇಶ್ವರಿಯ ಮೂರ್ತಿ ಪೂಜೆಯೇಕೆ ?”ಎಂದು ಕೇಳುತ್ತಾರೆ. ಅದಕ್ಕೆ “ಅನುಭಾವಿಗೆ ಎಲ್ಲಾ ವಸ್ತುಗಳೂ ಪರಬ್ರಹ್ಮರೂಪದಲ್ಲಿಯೇ ಗೋಚರಿಸುತ್ತವೆ”ಎಂದರು. ನಂತರ ಆ ವ್ಯಕ್ತಿಯು “ಹಾಗಾದರೆ ಕತ್ತೆಯನ್ನೇಕೆ ಪೂಜಿಸಬಾರದು ?”ಎಂದಾಗ ಶಾಸ್ತ್ರಿಗಳು “ಖಂಡಿತವಾಗಿ ಪೂಜಿಸಬಹುದು ಆದರೆ ಆಗ ಕತ್ತೆಗೆ ಕತ್ತೆಯೆಂಬ ಹೆಸರಿನಿಂದ ಕರೆಯಲು, ನೋಡಲೂ ಸಾಧ್ಯವಾಗುವುದಿಲ್ಲ. ಕತ್ತೆಯನ್ನೂ ಬ್ರಹ್ಮವಸ್ತುವೆಂದು ಪರಿಗಣಿಸಿದಾಗ ಮಾತ್ರ ಸಾಧ್ಯ”ಎಂದರು. ಮುಂದುವರೆದು ಅವರು ತಮ್ಮ ತತ್ತ್ವಪದಗಳ ಮೂಲಕ ಅವನ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಅಧ್ಯಾತ್ಮವನ್ನೇ ಜೀವನವನ್ನಾಗಿಸಿಕೊಂಡ ಶಾಸ್ತ್ರಿಗಳು ತಮ್ಮ ಪದ್ಯಗಳ ಮೂಲಕವೇ ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ರಚಿಸಿ ಹಾಡುತ್ತಿದ್ದರು. ಎಷ್ಟೋಜನರಿಗೆ ಇದೇ ಉಪದೇಶವಾಗುತ್ತಿತ್ತು. 1. ವೇದಾಂತ ಮುಕ್ತಿಮಾರ್ಗ ದೀಪಿಕಾ, 2. ಬ್ರಹ್ಮಾನಂದ ಬೋಧೇ 3. ಶ್ರೀ ರುದ್ರಟೀಕಾ 4. ಶಿವಾಧಿಕ್ಯಟೀಕಾ 5. ಶಂಕರಾಮೃತ ಬೋಧೆ 6. ಶಂಕರಾನಂದ ಕಂದ 7. ಶಂಕರಾನಂದ ತತ್ತ್ವ 8. ಶಂಕರಾನಂದ ಪದ್ದತಿ ಹೀಗೆ ಸುಮಾರು 30ಕ್ಕೂ ಅಧಿಕ ಕೃತಿಗಳು ಶಾಸ್ತ್ರಿಗಳಿಂದ ರಚಿಸಲ್ಪಟ್ಟಿವೆ. ಜಾತಿ-ಮತ ಭೇದವಿಲ್ಲದೇ, ಎಲ್ಲರಿಗೂ ಬ್ರಹ್ಮವಿಚಾರ ಮನದಟ್ಟು ಮಾಡುವುದು ಇವರ ಉದ್ದೇಶವಾಗಿತ್ತು. ಶಂಕರಾಚಾರ್ಯರೂ ಸಹಾ ಅದ್ವೈತವನ್ನು ಸಾರಿದ್ದು ಮಾನವ ಕಲ್ಯಾಣಕ್ಕಾಗಿಯೇ ಎಂಬುದು ಶಾಸ್ತ್ರಿಗಳು ಮನಗಂಡಿದ್ದರು. ಅದಕ್ಕಾಗಿ ಅನುಸಂಧಾನ ಹೇಗಿರಬೇಕು ಅದಕ್ಕೆ ಸಾಧಕನ ತೀವ್ರತೆಯೆಷ್ಟಿರಬೇಕು ಎಂಬುದನ್ನು ತಮ್ಮ ಹಾಡುಗಳಲ್ಲಿ ವಿವರಿಸಿದ್ದಾರೆ. ಒಮ್ಮೆ ಅವರ ಶಿಷ್ಯರೊಬ್ಬರು ಶಾಸ್ತ್ರಿಗಳನ್ನು ತಮ್ಮ ಮನೆಗೆ ಗುರುಪೂಜೆಗೆಂದು ಕರೆಯುತ್ತಾರೆ. ಹಾಗೇ ಶಿಷ್ಯನ ಕರೆಗೆ ಓಗೊಟ್ಟ ಶಾಸ್ತ್ರಿಗಳು ಅವರ ಮನೆಗೆ ಹೋಗಿದ್ದಾಗ ಆ ವ್ಯಕ್ತಿಯ ಹೆಂಡತಿಯು ತವರು ಮನೆಗೆ ಹೋಗಿ ಅಂದು ಬರಬೇಕಿರುತ್ತದೆ ಆದರೆ ಬಂದಿರುವುದಿಲ್ಲ ಅದೇ ಸಮಯಕ್ಕೆ ಒಂದು ಟೆಲಿಗ್ರಾಮ್‌ ಬಂದು ತಾವು ಇನ್ನೂ ನಾಲ್ಕುದಿನ ತಡವಾಗಿ ಬರುವುದಾಗಿ ತಿಳಿಸಿದಾಗ ಇವರು ಸಿಟ್ಟಿನಲ್ಲಿ ದೇವರ ಪೂಜೆ ಮಾಡಿ ಬಂದು ನೋಡಿದರೆ ಶಾಸ್ತ್ರಿಗಳಿರುವುದಿಲ್ಲ ಬದಲಾಗಿ ಅವರು “ಬಿಡು ಬಿಡು ರಾಜಸ ಪೂಜೆಯನು”ಎಂಬ ತತ್ತ್ವಪದವೊಂದನ್ನು ಬರೆದಿಟ್ಟು ಹೋಗಿರುತ್ತಾರೆ. ಈ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾರೆ.
ಹೀಗೆ ಶಿವರಾಮ ಶಾಸ್ತ್ರಿಗಳು ತಮ್ಮ ಜೀವನವನ್ನು ವೇದಾಂತದ ಅಭ್ಯಾಸ, ಚರ್ಚೆ, ಬೋಧನೆಯಲ್ಲಿಯೇ ತೊಡಗಿಸಿಕೊಂಡಿದ್ದಕ್ಕಾಗಿ ವೇದಾಂತ ಶಿವರಾಮ ಶಾಸ್ತ್ರಿಗಳಾಗುತ್ತಾರೆ. ವೇದಾಂತ ಗುರುಸೇವೆ, ಗುರುವಾಕ್ಯ ಪಾಲನೆ, ಸತ್ಸಂಗ, ಬ್ರಹ್ಮಾನುಸಂಧಾನ, ಹೀಗೆ ಅದ್ವೈತ ಸಿದ್ಧಾಂತವು ಕೇವಲ ಹೇಳುವುದಲ್ಲ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹುದಿರುತ್ತದೆ ಎಂದು ತೋರಿಸಿಕೊಟ್ಟವರು. ಇಂದಿಗೂ ಅವರ ಶಿಷ್ಯ ವೃಂದ ಪ್ರತಿತಿಂಗಳೂ ಭಜನೆ ಸತ್ಸಂಗ ಮಾಡುತ್ತಾ ಅವರ ತತ್ತ್ವಪದಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮೊಮ್ಮಗನಾದ ಶ್ರೀ ಶೇಷಾದ್ರಿ ಸ್ವಾಮಿಗಳು ಒಂದು ಶಾಲೆಯಲ್ಲಿ ಯೋಗಶಿಕ್ಷಕರಾಗಿದ್ದು ಶಾಸ್ತ್ರಿಗಳ ಕೈಂಕರ್ಯದಲ್ಲಿ ಖುಷಿಪಡುತ್ತಾರೆ. ಮೂರು-ನಾಲ್ಕು ವರ್ಷಗಳ ಹಿಂದೆ ನಮ್ಮ ವಿನಂತಿಯ ಮೇರೆಗೆ ನಮ್ಮ ಮನೆಗೆ ದತ್ತ ಜಯಂತಿಯ ಸಂದರ್ಭದಲ್ಲಿ ಬಂದಿದ್ದು, ಅತ್ಯಂತ ಸರಳ ವ್ಯಕ್ತಿತ್ವದ ಇವರು ನಮ್ಮೊಡನೆ ಅತ್ಯಂತ ಪ್ರೀತಿಯಿಂದ ಇರುತ್ತಾ ಹಳ್ಳಿಯ ಮನೆಯೆನ್ನದೇ, ಹಾಸಲು ಹೊದೆಯಲು ಸೌಕರ್ಯವಿಲ್ಲ ಎಂದು ತಿಳಿಯದೇ ನಮ್ಮಲ್ಲಿ ನಮ್ಮಂತೆಯೇ ಇರುವ ಈ ವ್ಯಕ್ತಿತ್ವ ತಾತನವರ ಆಸ್ತಿಯೆನ್ನದೇ ಮತ್ತೇನೆನ್ನಲು ಸಾಧ್ಯ. ?. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತನ್ನ ಇ-ಬುಕ್‌ನಲ್ಲಿ ಇವರ ಅನೇಕ ಪದ್ಯಗಳನ್ನು ಪ್ರಕಟಿಸಿದೆ. ಶೃಂಗೇರಿ ಸಹೋದರಿಯರು ಇವರ ತತ್ತ್ವ ಪದಗಳನ್ನು ಅತ್ಯುತ್ತಮವಾಗಿ ಹಾಡಿರುವುದೂ ಸಹಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ವೇದಾಂತಾಭ್ಯಾಸಿಗಳಿಗೆ ಹಾಗೂ ತತ್ತ್ವ ಸಾಧಕರಿಗೆ ಇವರ ಜೀವನ ಹಾಗೂ ಪದ್ಯಗಳು ಅವರ ಸಂದೇಹ ನಿವಾರಿಸುವ ಮ್ಯಾಪ್‌ಗಳಾಗಿ, ಆಯಾಸ ನೀಗುವ ಬೋಧೀವೃಕ್ಷಗಳಾಗಿ, ಹಾಗೂ ಆಧ್ಯಾತ್ಮಿಕ ಹಸಿವು ನೀಗಿಸುವ ಸವಿಫಲಗಳಾಗಿವೆ. “ನೀನಾರು ನೋಡು ನೋಡೆಲೊ ಜೀವ ನೀನಾಗ ದೇವ” ಎಂದು ಜೀವ ಮತ್ತು ಪರಬ್ರಹ್ಮ ಬೇರೆಯಲ್ಲ ಎಂದು ಸುಲಭವಾಗಿ ಅರ್ಥ ಮಾಡಿಸುತ್ತಾರೆ. ಆದರೆ ಇವುಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮ ಅರ್ಹತೆ ಮತ್ತು ಯೋಗ್ಯತೆ ಎಷ್ಟು ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಇವರ ಸ್ಮರಣೆಮಾಡುವುದಷ್ಟೇ ಈ ಜನ್ಮಕ್ಕೆ ನಮಗೆ ಸಿಕ್ಕಿರು ಭಾಗ್ಯವೆನ್ನಬಹುದು.

ಪೋಷಕತ್ವ ಯೋಜನೆಯಡಿ ಮಕ್ಕಳ ತಾತ್ಕಾಲಿಕ ಆರೈಕೆಗೆ ಅರ್ಹರಿಂದ ಅರ್ಜಿ ಆಹ್ವಾನ

0

ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರ ಬಲವಾದ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಕೌಟುಂಬಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪೋಷಕತ್ವ ಯೋಜನೆಯಡಿ ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳನ್ನು ಸಂಸ್ಥೆಗಳಲ್ಲಿ ಇರಿಸುವುದನ್ನು ತಪ್ಪಿಸಿ, ಅವರಿಗೆ ಪರ್ಯಾಯವಾಗಿ ವಿಸ್ತೃತ ಕುಟುಂಬದ ಸದಸ್ಯರು ಅಥವಾ ಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವುದು ಹಾಗೂ ಕಾರಣಾಂತರಗಳಿಂದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಒಂದೇ ರೀತಿಯ ಸಂಸ್ಕೃತಿ, ಬುಡಕಟ್ಟು ಮತ್ತು ಸಮುದಾಯದ ಸಂಪರ್ಕವನ್ನು ಹಂಚಿಕೊಳ್ಳುವ ಕುಟುಂಬಗಳಿಗೆ ಈ ಯೋಜನೆಯಡಿ ಮೊದಲ ಆದ್ಯತೆ ನೀಡಲಾಗುತ್ತದೆ. ಪೋಷಕತ್ವವು ಗುಂಪು ಪೋಷಕತ್ವವನ್ನೂ ಒಳಗೊಂಡಿರುತ್ತದೆ.
ಬಾಲನ್ಯಾಯ ಕಾಯ್ದೆ-2015 (ತಿದ್ದುಪಡಿ-2021) ಸೆಕ್ಷನ್ 44 ಹಾಗೂ ಬಾಲನ್ಯಾಯ ಮಾದರಿ ನಿಯಮಗಳ ಅನ್ವಯ, ಸಾಮಾನ್ಯವಾಗಿ ಒಂದು ವರ್ಷದವರೆಗೆ ಮಗುವನ್ನು ಪೋಷಕತ್ವಕ್ಕೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಪ್ರತಿ ವರ್ಷ ಇದನ್ನು ನವೀಕರಿಸಲು ಅವಕಾಶವಿರುತ್ತದೆ.
ಯೋಜನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಅರ್ಜಿ ಸಲ್ಲಿಕೆಗೆ ಆಸಕ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗ ಅಥವಾ ದೂರವಾಣಿ ಸಂಖ್ಯೆ: 08182-295709 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜುಲೈ 2. ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ- 1 ಕಚೇರಿಯಲ್ಲಿ ಜನಸಂಪರ್ಕ ಸಭೆ

0

ಶಿವಮೊಗ್ಗ ನಗರ ಉಪವಿಭಾಗ-1, ಸರ್ವಜ್ಞ ವೃತ್ತ, ಬಾಲರಾಜ್ ಅರಸ್ ರಸ್ತೆ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಚೇರಿಯಲ್ಲಿ ಜು. 02 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 01.00 ರವರೆಗೆ ಜನ ಸಂಪರ್ಕ ಸಭೆ ಆಯೋಜಿಸಿಲಾಗಿದೆ.
ಈ ಸಭೆಯಲ್ಲಿ ಗ್ರಾಹಕರಿಂದ ಮೆಸ್ಕಾಂ ಕಂಪನಿಯ ವಿದ್ಯುತ್ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದ್ದು, ಶಿವಮೊಗ್ಗ ನಗರ ಉಪವಿಭಾಗ -1ರ ಘಟಕ -1,2 ಮತ್ತು 3ರ ವ್ಯಾಪ್ತಿಯಲ್ಲಿನ ಗ್ರಾಹಕರು ಈ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

S.N. Channabasappa ದೇಶಪ್ರೇಮಿಯಾಗಿ ಎಸ್ಐಆರ್ ಪ್ರಕ್ರಿಯೆಗೆ ಸಹಕರಿಸಿ- ಶಾಸಕ ಎಸ್.ಎನ್.ಚನ್ನಬಸಪ್ಪ

0

S.N. Channabasappa ರಾಜ್ಯ ಹಾಗೂ ದೇಶದ ಸಾರ್ವಜನಿಕ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಅತ್ಯಂತ ಶ್ಲಾಘನೀಯವಾಗಿದ್ದು, ದೇಶಪ್ರೇಮಿ ನಾಗರೀಕನಾಗಿ ಇದಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಇಂದಿನಿಂದ ರಾಜ್ಯಾದ್ಯಂತ ಅಧಿಕೃತವಾಗಿ ಆರಂಭಗೊಂಡಿರುವ ಎಸ್‌ಐಆರ್ ಅಭಿಯಾನದ ಅಂಗವಾಗಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡವು ಶಾಸಕರ ಸ್ವಗೃಹಕ್ಕೆ ಭೇಟಿ ನೀಡಿ ಎಸ್‌ಐಆರ್ ನಮೂನೆಯನ್ನು ನೀಡಿತು. ಈ ಸಂದರ್ಭದಲ್ಲಿ ಶಾಸಕರು ನಮೂನೆಯನ್ನು ಸ್ವೀಕರಿಸಿ, ಪ್ರಕ್ರಿಯೆಗೆ ಅಗತ್ಯವಾದ ಪೂರಕ ವಿವರಗಳನ್ನು ಹಂಚಿಕೊಂಡರು.

ಈ ಕುರಿತು ಪ್ರಕಟಣೆ ನೀಡಿರುವ ಶಾಸಕರು, “ಎಸ್‌ಐಆರ್ ಪ್ರಕ್ರಿಯೆಯು ಸಮಾಜದ ಸುರಕ್ಷತೆ ಮತ್ತು ನಾಗರಿಕರ ಹಿತರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಯಾವುದೇ ಅಪಪ್ರಚಾರ ಅಥವಾ ಗೊಂದಲಗಳಿಗೆ ಕಿವಿಗೊಡದೆ ಸಾರ್ವಜನಿಕರು ಈ ಪ್ರಕ್ರಿಯೆಯನ್ನು ಮುಕ್ತವಾಗಿ ಸ್ವಾಗತಿಸಬೇಕು” ಎಂದು ಕರೆ ನೀಡಿದ್ದಾರೆ.

S.N. Channabasappa ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ನಿವಾಸಿಯೂ ತಮ್ಮ ಮನೆಗಳಿಗೆ ಆಗಮಿಸುವ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿಖರವಾದ ಮಾಹಿತಿ ನೀಡುವ ಮೂಲಕ, ಈ ಭದ್ರತಾ ಪ್ರಕ್ರಿಯೆಯನ್ನು ಶೇಕಡಾ ನೂರರಷ್ಟು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ವಿನಂತಿ ಮಾಡಿದ್ದಾರೆ.

ಜುಲೈ 2. ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ, ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 02 ರಂದು ಬೆಳಿಗ್ಗೆ 11 ಕ್ಕೆ ನಗರದ ಕುವೆಂಪು ರಂಗಮAದಿರದಲ್ಲಿ ಡಾ.ಫ.ಗು.ಹಳಕಟ್ಟಿರವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಏರ್ಪಡಿಸಲಾಗಿದೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಪಾಲಿಕೆ ಆಯುಕ್ತರು, ಶಿವಮೊಗ್ಗ ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಳ್ಳುವರು. ಶಿವಮೊಗ್ಗದ ಶರಣ ಚಿಂತಕರಾದ ಬಸನಗೌಡ ಮಾಳಗಿಯವರು ವಿಶೇಷ ಉಪನ್ಯಾಸ ನೀಡುವರು.

ಶಿವಮೊಗ್ಗದಲ್ಲಿ ಖಾಸಗಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

0

ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಶಾಖೆ ತೆರೆದಾಗ ಒಳಭಾಗದಲ್ಲಿ ಬೆಂಕಿಯಿಂದ ಉಂಟಾದ ಹಾನಿ ಕಂಡುಬಂದಿದ್ದು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಬ್ಯಾಂಕ್‌ನಲ್ಲಿದ್ದ ಕಂಪ್ಯೂಟರ್‌ಗಳು, ಏರ್ ಕೂಲರ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಲ್ಲದೆ ಬ್ಯಾಂಕ್‌ನ ಪೀಠೋಪಕರಣಗಳಿಗೂ ಬೆಂಕಿಯಿಂದ ಹಾನಿಯಾಗಿದೆ.

ಇದೇ ವೇಳೆ, ಬ್ಯಾಂಕ್‌ನಲ್ಲಿದ್ದ ಕೆಲವು ದಾಖಲೆಗಳು ಕೂಡ ಬೆಂಕಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅಗ್ನಿ ಅವಘಡದಿಂದ ಸಂಭವಿಸಿರುವ ಒಟ್ಟು ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಕಾಯಕಲ್ಪ ಒದಗಿಸಲಿ- ಬಿ.ವೈ.ರಾಘವೇಂದ್ರ

0

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃಷಿಗೆ ಉತ್ತೇಜನ ಮತ್ತು ರೈತರಿಗೆ ಸಮರ್ಪಕ ನೀರಾವರಿ ಲಭ್ಯವಾಗುವ ನಿಟ್ಟಿನಲ್ಲಿ ಹಾಗೂ ಮಳೆಗಾಲಕ್ಕೂ ಮುನ್ನ ಜಿಲ್ಲೆಯ ಪ್ರಮುಖ ಕೆರೆಗಳಿಗೆ ಅಗತ್ಯ ಕಾಯಕಲ್ಪ ಒದಗಿಸುವಂತೆ ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಆಧುನೀಕರಣ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ರೈತರ ಜೀವನಾಡಿಯಂತಿರುವ ಪ್ರಮುಖ ಹಾಯ್‌ಹೊಳೆ, ಬಾರೆಹಳ್ಳ (ಪುರದಾಳ್) ಮತ್ತು ಗೌಡನಕೆರೆಗಳ ಕೆರೆಗಳ ಕಾಲುವೆ ಆಧುನೀಕರಣ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ಒದಗಿಸಲು ಅಗತ್ಯ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಿ, ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಈ ಸಂದರ್ಭದಲ್ಲಿ ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ವಾರ್ಷಿಕ ದುರಸ್ತಿ ಇಲ್ಲದೆ ಮಣ್ಣಿನ ಕಾಲುವೆಗಳು ಹೂಳು ತುಂಬಿ ಹೋಗಿರುವುದರಿಂದ, ನೀರು ಕಾಲುವೆಯ ಕೊನೆಯ ಭಾಗದ ರೈತರಿಗೆ ತಲುಪುತ್ತಿಲ್ಲ. ಈ ಪ್ರಮುಖ ಮೂರು ಕೆರೆಗಳ ವ್ಯಾಪ್ತಿಯ ನಾಲಾ ಜಾಲದ ಅಭಿವೃದ್ಧಿ ಹಾಗೂ ಆಧುನೀಕರಣಕ್ಕಾಗಿ ಸುಮಾರು 80 ಕೋಟಿ ರೂ. ಮತ್ತು ಐತಿಹಾಸಿಕ ಪುಣ್ಯಕ್ಷೇತ್ರ ಕೂಡ್ಲಿ ಹಾಗೂ ಹೊಳೆಬೆನವಳ್ಳಿ ಗ್ರಾಮದ ಬಳಿ ಪ್ರವಾಹ ನಿಯಂತ್ರಣಕ್ಕಾಗಿ ತುಂಗಾ ನದಿಗೆ ತಡೆಗೋಡೆ ನಿರ್ಮಿಸಲು 20 ಕೋಟಿ ರೂ. ಸೇರಿದಂತೆ ಒಟ್ಟು ಸುಮಾರು 100 ಕೋಟಿ ರೂ. ಮೊತ್ತದ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆಯ ಪ್ರಸ್ತಾವನೆಗೆ ತಕ್ಷಣವೇ ಅನುಮೋದನೆ ನೀಡಬೇಕೆಂದು ಬಿ.ವೈ.ರಾಘವೇಂದ್ರ ಜಲಸಂಪನ್ಮೂಲ ಸಚಿವರನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯ ಏತ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಸಂಸದ ಬಿ.ವೈ.ರಾಘವೇಂದ್ರ ತೀವ್ರ ಆಕ್ಷೇಪ; ಬಾಕಿ ಬಿಲ್ ಪಾವತಿಗೆ ಅನುದಾನ ಬಿಡುಗಡೆ ಮಾಡಲು ಸಚಿವರಿಗೆ ಒತ್ತಾಯ: ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗದೆ ನೀರಿನ ಮಟ್ಟ ಕುಸಿದಿರುವ ಈ ಸಂದರ್ಭದಲ್ಲಿ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಸ್ಥಗಿತಗೊಳ್ಳದಂತೆ ತಡೆಯಲು ಮನವಿ ಸಲ್ಲಿಸಿರುವ ಸಂಸದ ಬಿ.ವೈ.ರಾಘವೇಂದ್ರ, ಕ್ಷೇತ್ರ ವ್ಯಾಪ್ತಿಯ ಸಣ್ಣ ಮತ್ತು ಬೃಹತ್ ಏತ ನೀರಾವರಿ ಯೋಜನೆಗಳ ವಿದ್ಯುತ್ ಬಿಲ್ ಬಾಕಿ ನೆಪದಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಸಚಿವರ ಗಮನಕ್ಕೆ ತಂದರು. ಆಡಳಿತಾತ್ಮಕ ಹಾಗೂ ಆರ್ಥಿಕ ಕಾರಣಗಳಿಂದ ಉಂಟಾಗಿರುವ ಸಮಸ್ಯೆಯ ಹೊರೆಯನ್ನು ರೈತರ ಮೇಲೆ ಹಾಕುವುದರಿಂದ ತೊಂದರೆಯಾಗುತ್ತಿದ್ದು, ಇದು ಯಾವುದೇ ಕಾರಣಕ್ಕೂ ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

ಶಿಕಾರಿಪುರದ ಉಡುಗಣಿ-ತಾಳಗುಂದ-ಹೊಸೂರು, ಕಸಬಾ ಮತ್ತು ಸನ್ಯಾಸಿಕೊಪ್ಪ ಯೋಜನೆಗಳು ಹಾಗೂ ಸೊರಬ ತಾಲೂಕಿನ ಮೂಡಿ, ಮೂಗೂರು ಮತ್ತು ಕಚವಿ ಏತ ನೀರಾವರಿ ಯೋಜನೆಗಳು ಸೇರಿದಂತೆ ಒಟ್ಟು 8 ಪ್ರಮುಖ ಯೋಜನೆಗಳ ಒಟ್ಟು ಸುಮಾರು 62.56 ಕೋಟಿ ರೂ. ಬಾಕಿ ವಿದ್ಯುತ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಬಿ.ವೈ.ರಾಘವೇಂದ್ರ ಆಗ್ರಹಿಸಿದರು. ಸಾರ್ವಜನಿಕ ಹಾಗೂ ರೈತರ ಹಿತದೃಷ್ಟಿಯಿಂದ ಅನುದಾನ ಬಿಡುಗಡೆಯಾಗುವವರೆಗೆ ಯಾವುದೇ ನೀರಾವರಿ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ಮೆಸ್ಕಾಂ ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ನಿರ್ದೇಶನ ನೀಡಬೇಕೆಂದು ಜಲಸಂಪನ್ಮೂಲ ಸಚಿವರನ್ನು ಸಂಸದರು ವಿನಂತಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ಧಾಪುರ ಏತ ನೀರಾವರಿ ಯೋಜನೆ ತಡೆಹಿಡಿದಿರುವನ್ನು ತೆರವುಗೊಳಿಸಿ, ಕಾಮಗಾರಿ ಮುಂದುವರಿಸುವಂತೆಯೂ ಪ್ರತ್ಯೇಕವಾಗಿ ಸಚಿವರ ಗಮನ ಸೆಳೆದರು.

ಯೋಜನೆ ಜಾರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಆಡಳಿತಾತ್ಮಕ ಪ್ರಯತ್ನಗಳು: ಈ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ನಿರಂತರವಾಗಿ ನಡೆಸುತ್ತಾ ಪ್ರಯತ್ನಗಳನ್ನು ನಡೆಸಿಕೊಂಡೆ ಬಂದಿದ್ದಾರೆ. ಈ ಹಿಂದೆ 2024ರ ಅಕ್ಟೊಬರ್ ನಲ್ಲಿ ಕೇಂದ್ರದ ಜಲಶಕ್ತಿ ಸಚಿವ ವಿ.ಸೋಮಣ್ಣನವರಿಗೆ ಪತ್ರ ಬರೆದು ಈ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ಅನುದಾನ ಬಿಡುಗಡೆ ಮಾಡಲು ಸಂಸದರು ಕೋರಿದ್ದರು. ಸಂಸದರ ಪ್ರಯತ್ನಗಳಿಗೆ ಸ್ಪಂದಿಸಿದ್ದ ಕೇಂದ್ರ ಸಚಿವರು ಜಲಶಕ್ತಿ ಇಲಾಖೆಯ ಜಂಟಿ ಆಯುಕ್ತರಿಗೆ ಸೂಕ್ತ ಕ್ರಮಕ್ಕಾಗಿ ನಿರ್ದೇಶಿಸಿದ್ದರು. ಕೇಂದ್ರ ಜಲಶಕ್ತಿ ಇಲಾಖೆಯ ನಿರ್ದೇಶನದ ಮೇರೆಗೆ ಕೇಂದ್ರ ಜಲ ಆಯೋಗದ (CWC) ಬೆಂಗಳೂರು ಪ್ರಾದೇಶಿಕ ಕಚೇರಿಯು 2024ರ ನವೆಂಬರ್ ನಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ವರದಿ ಸಲ್ಲಿಸಲು ಸೂಚಿಸಿತ್ತು. ಸಂಸದರ ಈ ನಿರಂತರ ಪ್ರಯತ್ನಗಳ ಫಲವಾಗಿ ರಾಜ್ಯ ಜಲಸಂಪನ್ಮೂಲ ಇಲಾಖೆ ಕಳೆದ ವರ್ಷ ನಿಗಮಕ್ಕೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನಿರ್ದೇಶನ ನೀಡಿತ್ತು. ಸಂಸದರ ಅವಿರತ ಪ್ರಯತ್ನಗಳಿಂದಾಗಿ ಪ್ರಸ್ತಾವನೆ ಅಂತಿಮ ಹಂತಕ್ಕೆ ಬಂದಿದ್ದು 100 ಕೋಟಿ ರೂ ಮಾನ್ಯ ಜಲಸಮನ್ಮೂಲ ಸಚಿವರ ಮಂಜೂರಾತಿ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ.

ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು, ಶಿವಮೊಗ್ಗ ಜಿಲ್ಲೆಯ ರೈತರ ನೀರಾವರಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ಈ ಎಲ್ಲ ಕಾಮಗಾರಿಗಳ ಆಡಳಿತಾತ್ಮಕ ಅನುಮೋದನೆ ಪ್ರಸ್ತಾವನೆಯನ್ನು ಇಲಾಖೆಯ ಉನ್ನತ ಮಟ್ಟದಲ್ಲಿ ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಅನುದಾನ ಬಿಡುಗಡೆಗೆ ಅಧಿಕಾರಿಗಳಿಗೆ ಆದಷ್ಟು ಬೇಗ ನಿರ್ದೇಶನ ನೀಡುವುದಾಗಿ ಸಚಿವರು ಸಂಸದರ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

S.N. Channabasappa ನಗರದ ಜಲಮೂಲವಾಗಿರುವ ಚಾನಲ್ ಗಳನ್ನು ಸ್ವಚ್ಛವಾಗಿಡುವುದು ಇಲಾಖೆಯ ಹೊಣೆ- ಎಸ್.ಎನ್.ಚನ್ನಬಸಪ್ಪ

0

S.N. Channabasappa ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆ, ಶಿವಮೊಗ್ಗ ನಗರದ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಶಾಸಕರ ಅಧಿಕೃತ ಕಚೇರಿಯಾದ ‘ಕರ್ತವ್ಯ ಭವನ’ದಲ್ಲಿ ಮಹಾನಗರ ಪಾಲಿಕೆ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳೊಂದಿಗೆ ನಡೆದ ಜಂಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ಮತ್ತು ತುಂಗಾ ಮೇಲ್ದಂಡೆ ಯೋಜನಾ ಮಂಡಳಿಯ ನಡುವಿನ ಸಮನ್ವಯದ ಕೊರತೆಯಿಂದ ಸಾರ್ವಜನಿಕ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಾಗಬಾರದು. ಎರಡೂ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಜನರಿಗೆ ತ್ವರಿತ ಸೇವೆ ಒದಗಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.

ನಗರದ ವಿವಿಧ ಭಾಗಗಳಲ್ಲಿ ಹಾದುಹೋಗುವ ಚಾನಲ್‌ಗಳ ಅಭಿವೃದ್ಧಿ ಹಾಗೂ ಅವುಗಳ ನಿರಂತರ ಸ್ವಚ್ಛತೆ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಯಿತು. ಮಳೆ ನೀರಿನ ಸರಾಗ ಹರಿವು ಹಾಗೂ ನಗರ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

S.N. Channabasappa ಸಭೆಯಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ನಗರದ ದೈನಂದಿನ ನೀರು ಪೂರೈಕೆಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಚನ್ನಬಸಪ್ಪ, ಮಳೆಯ ಕೊರತೆಯಿಂದ ಉಂಟಾಗಬಹುದಾದ ಜಲಕ್ಷಾಮವನ್ನು ಎದುರಿಸಲು ವೈಜ್ಞಾನಿಕ ನೀರು ಪೂರೈಕೆ ಯೋಜನೆ ರೂಪಿಸಿ, ಅಗತ್ಯ ತಾಂತ್ರಿಕ ಹಾಗೂ ತುರ್ತು ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಮುಖ್ಯ ಇಂಜಿನಿಯರ್‌ಗಳು ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.