ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.
ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಶಾಖೆ ತೆರೆದಾಗ ಒಳಭಾಗದಲ್ಲಿ ಬೆಂಕಿಯಿಂದ ಉಂಟಾದ ಹಾನಿ ಕಂಡುಬಂದಿದ್ದು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಬ್ಯಾಂಕ್‌ನಲ್ಲಿದ್ದ ಕಂಪ್ಯೂಟರ್‌ಗಳು, ಏರ್ ಕೂಲರ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅಲ್ಲದೆ ಬ್ಯಾಂಕ್‌ನ ಪೀಠೋಪಕರಣಗಳಿಗೂ ಬೆಂಕಿಯಿಂದ ಹಾನಿಯಾಗಿದೆ.
ಇದೇ ವೇಳೆ, ಬ್ಯಾಂಕ್‌ನಲ್ಲಿದ್ದ ಕೆಲವು ದಾಖಲೆಗಳು ಕೂಡ ಬೆಂಕಿಗೆ ಆಹುತಿಯಾಗಿರುವ ಮಾಹಿತಿ ಲಭ್ಯವಾಗಿದೆ. ಅಗ್ನಿ ಅವಘಡದಿಂದ ಸಂಭವಿಸಿರುವ ಒಟ್ಟು ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
