ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜು.07 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ;.9480841339 ನ್ನು ಸಂಪರ್ಕಿಸಬಹುದಾಗಿದೆ.
ಭದ್ರಾವತಿ: ಮೆಸ್ಕಾಂ ಜನ ಸಂಪರ್ಕ ಸಭೆ
ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಜು 09 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ;.9448289454 ಸಂಪರ್ಕಿಸಬಹುದಾಗಿದೆ.
ಎಸ್.ಸಿ/ಎಸ್.ಟಿ ಪಡಿತರ ಚೀಟಿದಾರರಿಗೆ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸಲು ಸೂಚನೆ
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ಇವರ ಆದೇಶದಲ್ಲಿ ಎಸ್.ಸಿ /ಎಸ್.ಟಿ ಪಡಿತರ ಚೀಟಿ ಫಲಾನುಭವಿಗಳ ಮ್ಯಾಪಿಂಗ್ ಕಾರ್ಯವನ್ನು ಅತಿ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಜಿಲ್ಲೆಯ ಪಡಿತರ ಚೀಟಿಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರು ತಮ್ಮ ಜಾತಿ ಪ್ರಮಾಣ ಪತ್ರದೊಂದಿಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಗೆ ಹೋಗಿ ಕ್ಯಾಸ್ಟ್ ಮ್ಯಾಪಿಂಗ್‌ನ್ನು ಮಾಡಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಿದ್ದು. ಇದುವರೆಗೆ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸದೇ ಇರುವ ಎಸ್ ಸಿ /ಎಸ್ ಟಿ ಪಡಿತರ ಚೀಟಿದಾರರು / ಕುಟುಂಬ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಕ್ಯಾಸ್ಟ್ ಮ್ಯಾಪಿಂಗ್ ಮಾಡಿಸುವಂತೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಂಡು ಮುನ್ನಡೆಯಬೇಕು : ಬಿ.ಬಿ.ಕಾವೇರಿ
ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢಗೊಂಡು ಸರ್ಕಾರ ಅಥವಾ ಯಾವುದೇ ಹಣಕಾಸು ಸಂಸ್ಥೆಗಳ ಆರ್ಥಿಕ ನೆರವಿಲ್ಲದೆ ಸ್ವತಂತ್ರವಾಗಿ ನಡೆಯುವಂತಾಗಬೇಕು ಎಂದು ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್‌ನ ಅಬ್ದುಲ್‌ನಜೀರ್‌ಸಾಬ್‌ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ, ಬರ ಪರಿಸ್ಥಿತಿ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-206ರ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂಬರುವ ವರ್ಷಗಳಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಬರುವುದನ್ನು ನಿರೀಕ್ಷಿಸದೇ, ಸ್ಥಳೀಯ ಸಂಸ್ಥೆಯ ಆದಾಯದ ಸಂಪನ್ಮೂಲಗಳಾಗಿರುವ ಖಾಲಿ ನಿವೇಶನ ಮತ್ತು ಕಟ್ಟಡಗಳ ಮೇಲಿನ ಆಸ್ತಿ ತೆರಿಗೆ, ಬಾಡಿಗೆ ಮತ್ತು ಇತರೆ ಶುಲ್ಕಗಳು, ಕರವಸೂಲಿ ಮುಂತಾದ ತೆರಿಗೆಗಳನ್ನು ಸಂಗ್ರಹಿಸಿ, ಶೇ.100ರಷ್ಟು ಸಾಧನೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕೆಂದವರು ನುಡಿದರು.
ಇ-ಖಾತಾಗಳನ್ನು ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳ ಪ್ರಗತಿ ಆಶಾದಾಯಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಸಂಸ್ಥೆಗಳ ಮುಖ್ಯಸ್ಥರು ಸಲ್ಲದ ಕಾರಣಗಳನ್ನು ಹೇಳದೆ ನಿರೀಕ್ಷಿತ ಯೋಜನೆಯ ಪ್ರಗತಿಗೆ ಶ್ರಮಿಸುವಂತೆ ಸೂಚಿಸಿದ ಅವರು, “ಎ” ಮತ್ತು ʼಬಿ” ಖಾತಾಗಳನ್ನು ಗುರುತಿಸಿ, ಅವುಗಳ ಮಾಲೀಕರಿಗೆ ದಾಖಲೆಗಳನ್ನು ಒದಗಿಸುವಲ್ಲಿ ವಿಶೇಷ ಗಮನಹರಿಸುವಂತೆ ಸೂಚಿಸಿದರು. ಇದರಿಂದಾಗಿ ಸ್ಥಳೀಯ ಸಂಸ್ಥೆಗಳೆ ಆದಾಯ ಹೆಚ್ಚಳವಾಗಲಿದೆ ಮಾತ್ರವಲ್ಲ ಆಸ್ತಿಗಳ ಮಾಲೀಕರಿಗೆ ಅನುಕೂಲವೂ ಆಗಲಿದೆ ಎಂದರು.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಒದಗಿಸಲಾಗುತ್ತಿರುವ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ನೀರಿನ ಗುಣಮಟ್ಟ ಪರೀಕ್ಷಿಸದ ಕಾರಣಕ್ಕಾಗಿ ರಾಜ್ಯದ ಕೆಲವು ಸ್ಥಳಗಳಲ್ಲಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. ಅಂತಹ ಪರಿಸ್ಥಿತಿ ಎದುರಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಪ್ರತಿದಿನ ಸಂಗ್ರಹಿಸಲಾಗುತ್ತಿರುವ ಘನತ್ಯಾಜ್ಯವನ್ನು ಸಂಗ್ರಹಿಸಿ, ಬೇರ್ಪಡಿಸಿ, ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು ಎಂದ ಅವರು, ಅದಕ್ಕಾಗಿ ಅನುಷ್ಟಾನದಲ್ಲಿರುವ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಅಮೃತ ಯೋಜನೆಯಡಿ ಕೈಗೊಂಡ ರಸ್ತೆ, ಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಅವರು ಸೂಚಿಸಿದರು.
ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಜಿಲ್ಲೆಯ ಹಲವು ಸ್ಥಳಗಳಲ್ಲಿ ನಡೆಸಲಾಗುತ್ತಿರುವ ಇಂದಿರಾ ಕ್ಯಾಂಟೀನ್‌ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕ್ಯಾಂಟೀನ್‌ಗಳ ವ್ಯವಸ್ಥಿತ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನಿಯೋಜಿಸಿ, ಕಾಲಕಾಲಕ್ಕೆ ಅಲ್ಲಿನ ಉಪಹಾರದ ಗುಣಮಟ್ಟದ ಪರೀಕ್ಷೆಗಳನ್ನು ನಡೆಸುವಂತೆ ಹಾಗೂ ಕ್ಯಾಂಟೀನ್‌ಗಳಿಗೆ ಸಿಸಿ ಕ್ಯಾಮರಾ ಕಣ್ಗಾವಲುಗಳನ್ನು ಹಾಕುವಂತೆ ಅವರು ಸೂಚಿಸಿದರು.
ಕೆರೆಗಳ ಅಭಿವೃದ್ಧಿ, ಉದ್ಯಾನವನಗಳಲ್ಲಿ ಹಸೀರೀಕರಣ ಮುಂತಾದ ಯೋಜನೆಗಳನ್ನು ಸಕಾಲದಲ್ಲಿ ಆರಂಭಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು. ಮುಂದಿನ ಕೆಲವು ದಶಕಗಳಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಬೆಳೆಯುತ್ತಿರುವ ನಗರದ ವೇಗಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು ಅಲ್ಲದೆ ವರ್ತುಲ ರಸ್ತೆಗಳ ನಿರ್ಮಾಣದ ಬಗ್ಗೆಯೂ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ಸರಬರಾಜಾಗುತ್ತಿರುವ ಶುದ್ಧ ಕುಡಿಯುವ ನೀರು, ಅದರ ಬಳಕೆ ಮತ್ತು ನಿರ್ವಹಣೆ ಮಾದರಿ ಎನಿಸುವಂತಿದ್ದು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸಬೇಕು ಎಂದರು.
ಜಿಲ್ಲೆಯಲ್ಲಿ ವಾಡಿಕೆಯಂತೆ ನಿರೀಕ್ಷಿತ ಪ್ರಮಾಣದ ಮಳೆ ಬಾರದಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಮಳೆಯು ಜಿಲ್ಲೆಯ ಜನರಲ್ಲಿ ಸಮಾಧಾನವನ್ನುಂಟು ಮಾಡಿದೆ ಆದರೂ ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳು ನಿರಂತರವಾಗಿ ರೈತರ ಸಂಪರ್ಕದಲ್ಲಿದ್ದು, ರೈತರು ಬೆಳೆಯ ಬಹುದಾದ ಪರ್ಯಾಯ ಬೆಳೆ ಮತ್ತು ಅವರಿಗೆ ಸಮಾಧಾನ ಎನಿಸುವ ಸಲಹೆಗಳನ್ನು ನೀಡುವಂತೆ ಹಾಘೂ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅವರು ಸಲಹೆ ನೀಡಿದರು.
ವಿಬಿ ಜಿರಾಮ್‌ಜಿ ಯೋಜನೆಯಡಿ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ತೋಟಗಾರಿಕೆ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಸಾಧಿಸಿರುವ ಪ್ರಗತಿ ಉತ್ತಮವಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಅಭಿನಂದಾರ್ಹರು ಎಂದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು ವಿಶೇಷ ಸಮಗ್ರ ಪರಿಷ್ಕರಣೆ-2026ನ್ನು ಜಿಲ್ಲೆಯಲ್ಲಿ ಆರಂಭಿಸಿದೆ. ಮತಗಟ್ಟೆ ಅಧಿಕಾರಿಗಳು ಜೂನ್ 30 ರಿಂದ ಜುಲೈ 29ರವರೆಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವರು. ಮ್ಯಾಪಿಂಗ್ ಆಗದ ಮತದಾರರು ಸರ್ಕಾರ ಗುರುತಿಸಿದ 12 ದಾಖಲೆಗಳ ಪೈಕಿ ಯಾವುದಾದರೊಂದನ್ನು ಒದಗಿಸಿ ನೋಂದಣಿಗೆ ಸಹಕರಿಸಬಹುದಾಗಿದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ರವರೆಗೆ ಅಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ಇತ್ಯರ್ಥಪಡಿಸಲಾಗುವುದು. 2026ರ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. - ಪ್ರಭುಲಿಂಗ ಕವಳಿಕಟ್ಟಿ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ನಿಖಿಲ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು – ಮತ್ತೋರ್ವನಿಗೆ ಗಂಭೀರ ಗಾಯ
ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ಸಮೀಪದ ಸುಣ್ಣದಬಸ್ತಿ ಬಳಿಯ ತಾರಿಗ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಚೋರಡಿ ಗ್ರಾಮದ ನಿವಾಸಿ ಸಂತೋಷ್ (26), ತಂದೆ ಬೊಮ್ಮಣ್ಣ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಜೊತೆಯಲ್ಲಿದ್ದ ವೀರಭದ್ರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೀನು ಹಿಡಿಯಲು ಬಳಸುವ ತೆಪ್ಪವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಚೋರಡಿಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತಾರಿಗ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ, ಸುಮಾರು 50 ಅಡಿ ಎತ್ತರದಲ್ಲಿದ್ದ ಒಣ ಮರದ ರೆಂಬೆ ಏಕಾಏಕಿ ಬೈಕ್ ಮೇಲೆ ಬಿದ್ದಿದೆ.
ರೆಂಬೆ ಬಿದ್ದ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ವೀರಭದ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಸಂತೋಷ್ ಅವರ ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ
ಉಡುಪಿ ಜಿಲ್ಲೆಯ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯ ಬಾರ್ಕೂರು ಪ್ರಾ.ಆ.ಕೇಂದ್ರದ ಎದುರು ಸುಮಾರು 62 ವರ್ಷದ ಮಹಿಳೆಯು ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದು, ಈಕೆಯನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.15 ರಂದು ಮೃತಪಟ್ಟಿರುತ್ತಾರೆ. ಈಕೆ ತನ್ನ ಹೆಸರು ಲೀಲಾ ಅಲಿಯಾಸ್ ಶಾರದಾ ಅಲಿಯಾಸ್ ಕೆಂಚಮ್ಮ ಎಂದು ಹಾಗು ಗಾಜನೂರು, ಆಯನೂರು ಕಡೆಯವಳೆಂದು ಹೇಳಿಕೊಂಡಿರುತ್ತಾರೆ. ಈಕೆಯ ವಾರಸುದಾರರು ಪತ್ತೆಯಾಗದ ಕಾರಣ ಮರಣೋತ್ತರ ಶವಪರೀಕ್ಷೆ ಮಾಡಿಸಿ, ಕ್ರಮದಂತೆ ಮೃತದೇಹವನ್ನು ದಫನ ಮಾಡಲಾಗಿರುತ್ತದೆ.
ಮೃತ ಮಹಿಳೆಯ ಚಹರೆ 5.3 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈ ಬಣ್ಣ, ಬಲಭುಜದ ಕಾಲರ್ ಬೋನ್‌ನಲ್ಲಿ ಹಾಗೂ ಎಡಗೈ ಕಪ್ಪು ಮಚ್ಚೆ ಇದ್ದು, ಎಡಗೈ ಮಣಿಗಂಟಿಗೆ ಕಪ್ಪು ದಾರ ಕಟ್ಟಿರುತ್ತಾರೆ. ಮೃತ ಮಹಿಳೆಯ ವಾರಸುದಾರರ ಬಗ್ಗೆ ಸುಳಿವು ಇದ್ದಲ್ಲಿ, ಬ್ರಹ್ಮಾವರ ಪೋಲಿಸ್ ಠಾಣೆಯ ದೂ. ಸಂ: 9480805453/ 9480805432, ಅಥವಾ ಇ-ಮೇಲ್ : brahmavaraudp@ksp.gov.in ಹಾಗೂ cpibrahmavaraudp@ksp.gov.in ಉಡುಪಿ ಜಿಲ್ಲೆಯ ಕಂಟ್ರೋಲ್ ರೂಮ್ ದೂ.ಸಂ: 0820-2526709/ 2526444 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
DC Shivamogga ಮತದಾರರ ಪಟ್ಟಿ ಪರಿಷ್ಕರಣೆ, ಸಹಕರಿಸಲು ಜಿಲ್ಲಾ ಜನತೆಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಮನವಿ
DC Shivamogga ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು ವಿಶೇಷ ಸಮಗ್ರ ಪರಿಷ್ಕರಣೆ-2026ನ್ನು ದೇಶದ 13ರಾಜ್ಯಗಳಲ್ಲಿ ಆರಂಭಿಸಿದ್ದು, ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗಳಿಗೆ ಈ ಕುರಿತು ವಿವರ ನೀಡಿ ಮಾತನಾಡಿದ ಅವರು, ಎಲ್ಲಾ ಅರ್ಹ ನಾಗರೀಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಈ ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು. ಗೈರು ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತರಾದವರು ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿ ನೋಂದಣಿಯಾಗಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ ಎಂದರು.
ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಪ್ರಯುಕ್ತ ಬೂತ್ ಮಟ್ಟದ ಅಧಿಕಾರಿಗಳು ಜುಲೈ 29 ರವರೆಗೆ ಮನೆಮನೆಗೆ ತೆರಳಿ ಗಣತಿ ನಮೂನೆಯನ್ನು ವಿತರಿಸಲಿದ್ದಾರೆ. ಜಿಲ್ಲೆಯಲ್ಲಿ 15,19,459ಮತದಾರರಿದ್ದು, 1973ಮತಗಟ್ಟೆಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈವರೆಗೆ 575101 ನಮೂನೆಗಳನ್ನು ವಿತರಿಸಲಾಗಿದ್ದು, ಆ ಪೈಕಿ 11248ನಮೂನೆಗಳನ್ನು ಡಿಜಟಲೀಕರಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಮತದಾರರು ಗಣತಿ ನಮೂನೆಯನ್ನು ಸ್ವೀಕರಿಸಿದ ನಂತರ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ನೀಡಬೇಕು.
ಗಣತಿ ನಮೂನೆಯನ್ನು ಭರ್ತಿ ಮಾಡಿ ನೀಡದೇ ಹೋದಲ್ಲಿ ಮತದಾರರ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಆದ್ದರಿಂದ ಎಲ್ಲಾ ಮತದಾರರು ರೀತಿಯ ನಿರ್ಲಕ್ಷ್ಯ ಮಾಡದೇ ಮತದಾರರ ಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಲು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು. ಅದರೊಂದಿಗೆ ಮತಗಟ್ಟೆ ಏಜೆಂಟರುಗಳೂ ಸಹ ಈ ನಮೂನೆಗಳನ್ನು ಸಂಗ್ರಹಿಸಿ, ಮತಗಟ್ಟೆ ಅಧಿಕಾರಿಗಳಿಗೆ ತಲುಪಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದರು.
ಈ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ. ಪೂರಕ ಮಾಹಿತಿಯನ್ನು ಮತದಾರರು ಗಣತಿದಾರರಿಗೆ ನೀಡಿದಲ್ಲಿ ತಮ್ಮ ಹಿಂದಿನ ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಈಗಾಗಲೇ ಮ್ಯಾಪಿಂಗ್ ಮಾಡಿಟ್ಟುಕೊಂಡಿರುತ್ತಾರೆ. ಇದರಿಂದಾಗಿ ಪರಿಷ್ಕರಣೆ ಕಾರ್ಯ ಸುಗಮವಾಗಿರಲಿದೆ ಎಂದರು.
ಪ್ರತಿದಿನ ಪರಿಷ್ಕರಣೆ ಕಾರ್ಯದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳು, ಮೊಬೈಲ್‌ನಲ್ಲಿ ಹರಿದಾಡುವ ನಕಲಿ ಸಂದೇಶಗಳಿಗೆ ಕಿವಿಗೊಡದಂತೆ ಮನವಿ ಮಾಡಿರುವ ಅವರು, ಮತದಾರರಲ್ಲಿನ ಅನೇಕ ಪ್ರಶ್ನೆಗಳಿಗೆ ಮತಗಟ್ಟೆ ಅಧಿಕಾರಿಗಳಲ್ಲೇ ಸೂಕ್ತ ಮಾಹಿತಿ ದೊರೆಯಲಿದೆ. ಅಗತ್ಯವಿದ್ದಲ್ಲಿ ಟೋಲ್ ಫ್ರೀ ನಂ.1950ನ್ನು ಸಂಪರ್ಕಿಸಬಹುದಾಗಿದೆ ಎಂದರು.
DC Shivamogga ಮ್ಯಾಪಿಂಗ್ ಆಗದ ಮತದಾರರು ಸರ್ಕಾರ ಗುರುತಿಸಿದ 12 ದಾಖಲೆಗಳ ಪೈಕಿ ಯಾವುದಾದರೊಂದನ್ನು ಒದಗಿಸಬಹುದಾಗಿದೆ. ಮತಗಟ್ಟೆಗಳ ಪುನರ್ ವಿಂಗಡಣೆಯನ್ನು ಜುಲೈ 29 ರೊಳಗೆ ಮಾಡಲಾಗುವುದು. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಯಾವುದೇ ಮತದಾರರ ಆಕ್ಷೇಪಣೆಗಳು ಇದ್ದಲ್ಲಿ ಆಗಸ್ಟ್ 05 ರಿಂದ ಸೆಪ್ಟೆಂಬರ್ 04 ರವರೆಗೆ ಅಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಯನ್ನು ಆಗಸ್ಟ್ 5 ರಿಂದ ಅಕ್ಟೋಬರ್ 3 ರವರೆಗೆ ಇತ್ಯರ್ಥ ಪಡಿಸಲಾಗುವುದು. 2026ರ ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಚುನಾವಣಾ ತಹಶೀಲ್ದಾರ್ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಜುಲೈ 5. ಶಿವಮೊಗ್ಗದಲ್ಲಿ “ಪವರ್ ಕಟ್” ಎಲ್ಲೆಲ್ಲಿ ? ಮೆಸ್ಕಾಂ ಪ್ರಕಟಣೆ ಓದಿ
ಶಿವಮೊಗ್ಗ ಮಾಚೇಹಳ್ಳಿ 110/11 ಕೆ.ವಿ. ವಿ.ವಿ.ಕೇಂದ್ರದ ಮಾರ್ಗಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಜು.05 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆಬಸವಾಪುರ, ಮೆ|| ಈ.ರಾಮಮೂರ್ತಿ ಮಿನರಲ್ಸ್ ಪ್ರೈ.ಲಿ., ಕೆ.ಎಂ.ಎಫ್.ಡೈರಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಶಿವಮೊಗ್ಗದ ಪುರದಾಳಿನ ಬಾರೆಹಳ್ಳ ಡ್ಯಾಮಿಗೆ ನೀರು ತುಂಬಿಸಿ- ಪ್ರದೀಪ್ ಹೆಬ್ಬೂರು ಒತ್ತಾಯ
ತುಂಗಾ ಏತ ನೀರಾವರಿ ಯೋಜನೆಯಡಿ ಶರಾವತಿ ಮುಳುಗಡೆ ರೈತರಿರುವ ಪುರದಾಳು ಗ್ರಾಮದ ಬಾರೆಹಳ್ಳ ಡ್ಯಾಮ್ ಗೆ ನೀರು ತುಂಬಿಸುವಂತೆ ಪುರದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ಎಸ್ ಹೆಬ್ಬೂರು ಅವರು ಒತ್ತಾಯಿಸಿದ್ದಾರೆ.
ತಾಲೂಕಿನ ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರು ಹೆಚ್ಚಾಗಿ ವಾಸಿಸುತ್ತಿದ್ದಾರೆ.ಶರಾವತಿ ಮುಳುಗಡೆ ಸಂತ್ರಸ್ಥರ ಕೃಷಿ ಚಟುವಟಿಕೆಗಾಗಿ 1970ರ ಸುಮಾರಿನಲ್ಲಿ ಬಾರೇಹಳ್ಳ ಡ್ಯಾಮ್ ಕಟ್ಟಲಾಗಿದ್ದು,ಸದರಿ ಡ್ಯಾಮ್ ಗೆ ೨೦೧೯ ರಲ್ಲಿ ತುಂಗಾ ನದಿಗೆ ಅರಕೆರೆ ಸಮೀಪ ಜಾಕ್ವಲ್ ನಿರ್ಮಿಸಿ ಏತ ನೀರಾವರಿಯ ಮೂಲಕ ನೀರನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು.
ಇದರ ಪರಿಣಾಮವಾಗಿ ಸಾವಿರಾರು ರೈತರು ಈ ಯೋಜನೆಯನ್ನು ನಂಬಿ ಸುಮಾರು 3000ಕ್ಕೂ ಅಽಕ ಎಕರೆ ಭೂಪ್ರದೇಶದಲ್ಲಿ ಅಡಿಕೆ,ಭತ್ತ ಇತ್ಯಾದಿ ಬೆಳೆಗಳನ್ನು ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ಈ ನಡುವೆ ತುಂಗಾ ಏತನೀರಾವರಿಯ ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ಮೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಇದರಿಂದ ಜಾಕ್ವೆಲ್‌ನಿಂದ ನೀರು ಎತ್ತುವುದು ಸ್ಥಗಿತಗೊಂಡು ಡ್ಯಾಮ್‌ಗೆ ನೀರು ತುಂಬಿಸುವ ಕಾರ್ಯ ಸ್ಥಗಿತಗೊಂಡಿದೆ.
ಈ ವರ್ಷ ಮಳೆಯ ತುಂಬಾ ಕಡಿಮೆ.ವಾಡಿಕೆಯಂತೆ ಮಳೆಯೂ ಆಗಿಲ್ಲ,ಬರಗಾಲದ ಛಾಯೆ ಆವರಿಸುತ್ತಿದೆ.
ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೆ ಆರು ತಿಂಗಳು ಕಾಲ ನೀರು ಎತ್ತಲು ಅವಕಾಶವಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೇ ನೀರು ಎತ್ತಲ್ಲು ಸಾಧ್ಯವಾಗಿಲ್ಲ.ರಾಜ್ಯ ಸರ್ಕಾರ ಕೂಡಲೇ ವಿದ್ಯುತ್ ಬಿಲ್ ಪಾವತಿಸಿ ನೀರು ಎತ್ತಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಬಿಲ್ ಪಾವತಿ ಮಾಡದಿದ್ದರೆ ಬಾರೇಹಳ್ಳ ಅಚ್ಚುಕಟ್ಟು ಪ್ರದೇಶದ ರೈತರು, ಜನಜಾನುವಾರುಗಳು ನೀರಿಗಾಗಿ ಆಹಾಕಾರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದ್ದರಿಂದ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಅಗತ್ಯವಿರುವ ವಿದ್ಯುತ್ ಬಿಲ್ ಪಾವತಿಸಿ ನೀರು ಎತ್ತಲು ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಡ್ಯಾಮ್ ಗಳಿಗೆ ನೀರು ಹರಿಸಬೇಕಾಗಿ ಕೋರುತ್ತೇವೆ. ಇಲ್ಲವಾದಲ್ಲಿ ಶರಾವತಿ ಮುಳುಗಡೆ ರೈತರನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸಾವಿರಾರು ರೈತರೊಂದಿಗೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ7, ರೋಟರಿ ಕ್ಲಬ್,ಶಿವಮೊಗ್ಗ (ಉತ್ತರ) ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ರೋಟರಿ ಇಂಟರ್ ನ್ಯಾಶನಲ್ ಜಿಲ್ಲೆ 3182 ರ ಆಂಗಸಂಸ್ಥೆ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿಸ್ವೀಕಾರ ಸಮಾರಂಭವು ಜುಲ್ಯೆ 7 ರಂದು ಸಂಜೆ ಗುರು ಬಸವ ಭವನ, ಬೆಕ್ಕಿನ ಕಲ್ಮಠ ಶಿವಮೊಗ್ಗ ಇಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಡಾ.ಶಿವಕುಮಾರ. ಕೆ ಅವರು ಅಧ್ಯಕ್ಷರಾಗಿ ಶ್ರೀಧರ. ಎಸ್ ಅವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪದವಿ ಪ್ರದಾನವನ್ನು ರೊ.ಕೇಶವ ಎಚ್.ಆರ್ ದಿವ್ಯ ಸಾನಿಧ್ಯ ಶ್ರೀ ಡಾ.ಮಲ್ಲಿಕಾರ್ಜುನ ಮುರುಫರಾಜೇಂದ್ರ ಮಹಾಸ್ವಾಮಿಗಳು,ಬೆಕ್ಕಿನ ಕಲ್ಮಠ ಶಿವಮೊಗ್ಗ ಮತ್ತು ಉಪಸ್ಥಿತಿ ಅಸಿಸ್ಟೆಂಟ್ ಗವರ್ನರ್ ರೊ.ತೀರ್ಥಯ್ಯ ಕೆ.ಎಚ್ ಹಾಗೂ ರೊ.ಎನ್.ವಿ.ಭಟ್ ಝೋನಲ್ ಲೆಫ್ಟಿನೆಂಟ್ ಇವರು ಭಾಗವಹಿಸಲಿದ್ದಾರೆ.ಇವರೊಂದಿಗೆ ಅಡಳಿತ ಮಂಡಳಿಯಲ್ಲಿ ಬಸವರಾಜಪ್ಪ.ಅರ್,ನಾಗರಾಜ. ಕೆ.ಬಿ,ಮಿತ್ರ ಕೆ.ಜೆ,ಎಸ್.ಅರ್ ನಾಗರಾಜ, ಅಜಯಕುಮಾರ ಎಲ್.ವಿ,ವೆಂಕಟೇಶ. ಸಿ.ಜಿ ಮತ್ತು ರವೀಂದ್ರನಾಥ ಐತಾಳ,ರಮೇಶ. ಎಸ್.ಜಿ,ವಾರಿಜಾ ಜಗದೀಶ ಶರವಣ,ದತ್ತಾತಿ.ಎಸ್,ಮಹೇಶ ಎ.ಎಮ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
