Tuesday, August 4, 2026
Tuesday, August 4, 2026
Home Blog Page 36

ವೃದ್ಧರೊಬ್ಬರು ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ, ಶೋಧ ಕಾರ್ಯ ಪ್ರಗತಿಯಲ್ಲಿದೆ

0

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ತೀರ್ಥಹಳ್ಳಿ ತಾಲೂಕಿನ ಕೇಳೂರು ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ತೋಟಕ್ಕೆ ತೆರಳಿದ್ದ 62 ವರ್ಷದ ವೃದ್ಧರೊಬ್ಬರು ನಾಪತ್ತೆಯಾಗಿದ್ದು, ಪಕ್ಕದ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೇಳೂರು ಗ್ರಾಮದ ನಿವಾಸಿ ರಾಮಪ್ಪ (62) ಅವರು ನಿನ್ನೆ ಸಂಜೆ ತೋಟಕ್ಕೆ ತೆರಳಿದ್ದರು. ಆದರೆ, ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.

ಈ ವೇಳೆ ನದಿ ತೀರದಲ್ಲಿ ರಾಮಪ್ಪ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದು, ಅವರು ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ರಾಮಪ್ಪ ಅವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕೃಷಿ ಇಲಾಖೆ ಕ್ಷಿಪ್ರ ಕಾರ್ಯಾಚರಣೆ. ಹಾಸನ,ತುಮಕೂರು & ಮಂಡ್ಯ ಜಿಲ್ಲೆಗಳಲ್ಲಿ ಅಕ್ರಮ ಬೀಜ ದಾಸ್ತಾನು ಜಪ್ತಿ

0

ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಬೀಜ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿದ್ದಾರೆ. ಅನಧಿಕೃತವಾಗಿ ಬೀಜ,ರಸಗೊಬ್ಬರ ದಾಸ್ತಾನು, ಮಾರಾಟ ನಿಯಂತ್ರಿಸಲು ಕೃಷಿ ಇಲಾಖೆ ಆಯುಕ್ತರಾದ ಡಾ.ಬಿ.ಸಿ.ಸತೀಶ್ ಅವರ ಸೂಚನೆ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾಸನ ಜಿಲ್ಲೆ ಸಾಲಗಾಮೆ ಹೋಬಳಿಯ ಕೊಂಡಜ್ಜಿಕೊಪ್ಪಲುವಿನ ಕಾರ್ತಿಕ ಟ್ರೇಡರ್ಸ್‌ನಲ್ಲಿ ಬೀಜ ಕಾಯ್ದೆ 1966 ಉಲ್ಲಂಘಿಸಿ ಅನುಮತಿ ಇಲ್ಲದೇ ದಾಸ್ತಾನು ಮಾಡಲಾಗಿದ್ದ ಸುಮಾರು 85 ಸಾವಿರ ರೂ.ಮೌಲ್ಯದ 180 ಕೆ.ಜಿ.ಹೈಬ್ರೀಡ್ ಮೆಕ್ಕೆಜೋಳ ಬೀಜಗಳನ್ನು , ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 12 ಸಾವಿರ ರೂ.ಮೌಲ್ಯದ 30 ಕೆ.ಜಿ.ಹೈಬ್ರಿಡ್ ಮೆಕ್ಕೆಜೋಳ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮದಿಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್‌ನಲ್ಲಿ ಕಾನೂನು ಉಲ್ಲಂಘಿಸಿ ದಾಸ್ತಾನು ಮಾಡಲಾಗಿದ್ದ ಸುಮಾರು 1.77 ಲಕ್ಷ ಮೌಲ್ಯದ 88 ಚೀಲ ಯೂರಿಯಾ,ಪಾಸ್ಫೋ ಜಿಪ್ಸಮ್ ಗ್ರ್ಯಾನ್ಯುಲ್ಸ್ ವಶಪಡಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಗೇಶಿ ಹೋಬಳಿಯ ಹಸಿರು ಹೈಟೆಕ್ ಸೀಡ್ಸ್ ಕೇಂದ್ರದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 86 ಸಾವಿರ ರೂ.ಮೌಲ್ಯದ 22 ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಡ್ಯ ತಾಲ್ಲೂಕಿನ ಇಂದುವಾಳದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 300 ಚೀಲ ಎನ್.ಎಫ್.ಎಲ್.ಯೂರಿಯಾವನ್ನು ಮಂಡ್ಯದ ಕೃಷಿ ಅಧಿಕಾರಿಗಳು ಶನಿವಾರ ಜುಲೈ 4 ರಾತ್ರಿ ವಶಪಡಿಸಿಕೊಂಡಿದ್ದಾರೆ.

ಬೀಜ,ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದರೆ ಕೃಷಿ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ಎಂದು ಕೃಷಿ ಇಲಾಖೆಯು ತಿಳಿಸಿದೆ.

Jog Falls ಮರುಕಳಿಸುತ್ತಿದೆ ಜೋಗದ ಧಾರೆಗೆ ಮೊದಲಿನ ವೈಭವ!

0

Jog Falls ಮಲೆನಾಡಿನ ಹೆಮ್ಮೆಯ ಜೋಗ ಜಲಪಾತ ಇದೀಗ ನಿಧಾನವಾಗಿ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ. ಮಳೆಯ ವಿಳಂಬದ ನಡುವೆಯೂ ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಧಾರೆಗಳಲ್ಲೂ ನೀರು ಧುಮ್ಮಿಕ್ಕಲಾರಂಭಿಸಿದ್ದು, ಜಲಪಾತದ ಸೌಂದರ್ಯ ಮತ್ತಷ್ಟು ಮೆರಗು ಪಡೆದಿದೆ.

ಮಳೆಯ ವಿಳಂಬದ ಹಿನ್ನೆಲೆಯಲ್ಲಿ ಈ ಬಾರಿ ಜೋಗ ಜಲಪಾತ ತಡವಾಗಿ ಕಳೆಗಟ್ಟುತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಲಪಾತದ ನೀರಿನ ಹರಿವು ಕ್ರಮೇಣ ಹೆಚ್ಚಳ ಕಂಡಿದೆ.

ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಎಂಬ ನಾಲ್ಕು ಪ್ರಮುಖ ಧಾರೆಗಳಲ್ಲೂ ನೀರು ಭೋರ್ಗರೆಯುತ್ತಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುವ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.

Jog Falls ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯದ ನಡುವೆ ಜೋಗ ಜಲಪಾತದ ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯಲು ಪ್ರವಾಸಿಗರು ಉತ್ಸುಕರಾಗಿದ್ದಾರೆ.

ಇನ್ನೂ ಮಳೆ ಮತ್ತಷ್ಟು ಬಿರುಸು ಪಡೆಯುವ ನಿರೀಕ್ಷೆ ಇದ್ದು, ಮುಂಬರುವ ದಿನಗಳಲ್ಲಿ ಜೋಗ ಜಲಪಾತ ಸಂಪೂರ್ಣ ವೈಭವದೊಂದಿಗೆ ಧುಮ್ಮಿಕ್ಕುವ ಸಾಧ್ಯತೆ ಇದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಪ್ರವಾಸಿ ತಾಣದಲ್ಲಿ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ.

ಜುಲೈ 7 ರಂದು ಶಿವಮೊಗ್ಗದ ಮೆಸ್ಕಾಂ ನಗರ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

0

ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜು.07 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ;.9480841339 ನ್ನು ಸಂಪರ್ಕಿಸಬಹುದಾಗಿದೆ.

Bhadra Dam ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

0

Bhadra Dam ಭದ್ರಾ ಜಲಾಶಯಕ್ಕೆ ಮಳೆ ಹಿನ್ನೆಲೆಯಲ್ಲಿ ನಿರಂತರವಾಗಿ ನೀರಿನ ಹರಿವು ಹೆಚ್ಚಾಗುತ್ತಿದೆ. ಪ್ರಸ್ತುತ ಜಲಾಶಯದ ಒಟ್ಟು ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಸದ್ಯ ನೀರಿನ ಮಟ್ಟ 139 ಅಡಿಗಳಿಗೆ ತಲುಪಿದೆ.

ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿಯಾಗಿದ್ದು, ಸದ್ಯ 26.209 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 7,919 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 211 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 168.5 ಅಡಿಗಳಷ್ಟಿತ್ತು. ಆಗ 51.220 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 21,180 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, 5,196 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿತ್ತು.

Bhadra Dam ಈ ವರ್ಷ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಹಾಗೂ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಿದ್ದರೂ, ಉತ್ತಮ ಮಳೆಯ ಹಿನ್ನೆಲೆಯಲ್ಲಿ ಒಳಹರಿವು ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ: ‘ಪ್ರಜಾಸೇವೆ ಇಲಾಖೆ’ಗೆ ಚಾಲನೆ

0

ಸಾರ್ವಜನಿಕರ ದೂರು ಹಾಗೂ ಬೇಡಿಕೆಗಳಿಗೆ ತ್ವರಿತ ಪರಿಹಾರ ನೀಡಲು ಸರ್ಕಾರ ಮಹತ್ವಾಕಾಂಕ್ಷಿ ‘ಪ್ರಜಾಸೇವೆ ಇಲಾಖೆ’ ಆರಂಭಿಸಿದೆ. ಇದರ ದಕ್ಷ ನಿರ್ವಹಣೆಗಾಗಿ ಐಎಎಸ್ ಅಧಿಕಾರಿಯನ್ನು ನೇಮಿಸಿದೆ. ಜನರ ಮನೆಬಾಗಿಲಿಗೇ ಆಡಳಿತ ತಲುಪಿಸಲು ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಎರಡು ದಿನ ಕಡ್ಡಾಯವಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ ‘ಪ್ರಜಾಸೇವೆ ಅಭಿಯಾನ’ ನಡೆಸಲಿದ್ದಾರೆ. ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಸರ್ಕಾರವು ಈ ಜನಪರ ನಿರ್ಧಾರವನ್ನು ತೆಗೆದುಕೊಂಡಿದೆ.

ಜನರ ವಿಶ್ವಾಸ ಉಳಿಸಿಕೊಳ್ಳಲು ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

0

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರದ ಒಂದು ತಿಂಗಳ ಆಡಳಿತದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಕನ್ನಡಿಗರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸಚಿವರು, ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದು ಕೇವಲ ಆರಂಭವಾಗಿದ್ದು, ಜನರ ಹಿತಕ್ಕಾಗಿ ಹಗಲಿರುಳೆನ್ನದೆ ಕೆಲಸ ಮಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎಸ್ ಎಸ್ ಮಲ್ಲಿಕಾರ್ಜುನರಿಂದ ಬಾಪೂಜಿ ಬ್ಯಾಂಕ್ ಯುಪಿಐ ಸೇವಾ ಉದ್ಘಾಟನೆ

0

ಮಾಜಿ ಸಚಿವರು ಹಾಲಿ ಶಾಸಕರು ಹಾಗೂ ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಎಸ್ ಎಸ್ ಮಲ್ಲಿಕಾರ್ಜುನ ರವರು ಬ್ಯಾಂಕಿನ ಯುಪಿಐ ಸೇವಾ ಉದ್ಘಾಟನೆಯನ್ನು ನೆರವೇರಿಸುವಾಗ ಉಪಾಧ್ಯಕ್ಷರಾದ ಡಾ.ಎ. ಅರುಣಕುಮಾರ್, ನಿರ್ದೇಶಕರುಗಳಾದ ಡಾ.ಅಥಣಿ ಎಸ್ ವೀರಣ್ಣ, ಡಾ. ಬಿ ಎಸ್ ರೆಡ್ಡಿ, ಡಾ. ಪಿ ಶಶಿಕಲಾ, ಡಾ. ಬಿ ಪೂರ್ಣಿಮಾ, ಡಾ.ಕೆ ಹನುಮಂತಪ್ಪ, ಡಾ. ಹೆಚ್ ಶಿವಪ್ಪ, ಡಾ. ಸಿ ವೈ ಸುದರ್ಶನ್, ಡಾ. ಎಂ ಎಂ ಲಿಂಗರಾಜ, ಕೆ ಬೊಮ್ಮಣ್ಣ, ಡಾ. ಎಸ್ ಸುರೇಂದ್ರ ಶೆಟ್ಟಿ, ಕೆ ಎಸ್ ವೀರೇಶ್, ಜೆ ಅನಿತಾ ಕುಮಾರಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ ಬಸವರಾಜ, ಕಲ್ಲಪ್ಪ, ರವೀಂದ್ರ, ಸ್ವಾಗತ್, ನವೀನ್ ಮುಂತಾದವರು ಅಲ್ಲಿದ್ದರು.

ಈ ಮೊಬೈಲ್ ಬ್ಯಾಂಕಿಂಗ್ ಆಪ್ ಸೇವಾ ವಿಧಾನದಲ್ಲಿ ಗೂಗಲ್ ಪೇ, ವಾಟ್ಸಪ್ ಪೇ, ಫಂಡ್ ಟ್ರಾನ್ಸ್ಫರ್, ಮೂರು ವರ್ಷಗಳ ಸ್ಟೇಟ್ಮೆಂಟ್, ಠೇವಣಿ ಮತ್ತು ಸಾಲ ಖಾತೆಗಳ ವೀಕ್ಷಣೆ, ಎಟಿಎಂ ಕಾರ್ಡ್ ನಿಯಂತ್ರಣ, ಶಾಖೆಗಳ ಲೊಕೇಶನ್ ಮುಂತಾಗಿ ಅನೇಕ ಸೇವೆಗಳು ಲಭ್ಯವಿದೆ ಎಂದು ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು

Klive Special Article ಮಕ್ಕಳು ಉತ್ತಮ ನಾಗರೀಕರಾಗಲು ಸ್ಕೌಟ್ಸ್ ಗೈಡ್ಸ್ ಪ್ರೇರಣೆ

0

-ಪುನರ್ನಿರ್ಮಿತ ಧ ರಾ ಮ ಸ್ಕೌಟ್ ಭವನ ಇಂದು ಉದ್ಘಾಟನೆ, ತನ್ನಿಮಿತ್ತ ಈ ವಿಶೇಷ ಲೇಖನ-

Klive Special Article ಸ್ಕೌಟ್ ಸಂಕ್ಷಿಪ್ತ ಇತಿಹಾಸ: ಮಕ್ಕಳು ಪ್ರಪಂಚದ ಉತ್ತಮ ನಾಗರೀಕರಾಗಬೇಕೆಂಬ ಸದುದ್ದೇಶದಿಂದ 1907ರಲ್ಲಿ ರಾಬರ್ಟ್ ಸ್ಟೀಫನ್ ಸನ್ ಬೇಡೆನ್ ಪೋವೆಲ್ ಎಂಬುವರು ಯುನೈಟೆಡ್ ಕಿಂಗ್ಡಮ್ಮಿನ ಬ್ರೌನ್ ಸೀ ದ್ವೀಪದಲ್ಲಿ ಕೇವಲ 20 ವಿದ್ಯಾರ್ಥಿಗಳನ್ನು ಸೇರಿಸಿ ಸ್ಕೌಟ್ ರಚನೆ ಮಾಡಿದರು. 1910 ರಲ್ಲಿ ಇದರ ಸ್ಥಾಪನೆ ಯಾದರೆ 1912 ರಲ್ಲಿ ಇದರ ಸಂಘಟನೆ ಆರಂಭವಾಯಿತು. ಆರಂಭದಲ್ಲಿ ಇದರ ಹೆಸರು ‘ಡಿ ಬಾಯ್ ಸ್ಕೌಟ್ಸ್ ಅಸೋಸಿಯೇಷನ್’ ಎಂಬುದಾಗಿತ್ತು. 1909ರಲ್ಲಿ ಇಂಗ್ಲೆಂಡಿನಲ್ಲಿ ಬಾಯ್ ಸ್ಕೌಟ್ಸ್ ಸಮಾವೇಶವಾದಾಗ ಹುಡುಗಿಯರ ಗುಂಪೊಂದು ಅಲ್ಲಿ ಕಾಣಿಸಿಕೊಂಡಿತು, ‘ಗರ್ಲ್ ಸ್ಕೌಟ್ಸ್’ ಎಂದು ಹೇಳಿಕೊಂಡ ಅದು ಮುಂದೆ ‘ಗೈಡ್ಸ್’ ಎಂದು ಪರಿವರ್ತನೆ ಆಯಿತು. 119 ವರ್ಷಗಳ ಕೆಳಗೆ ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದದ್ದು ಈಗ ಪ್ರಪಂಚದ 216ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 6 ಕೋಟಿಗೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ಇದ್ದಾರೆ.’SCOUT’ ಎಂದರೆ Service Commitment Opportunity Unity Team.

-ಭಾರತದಲ್ಲಿ ಸ್ಕೌಟ್ಸ್ ಆರಂಭ:
ಇಂಗ್ಲೆಂಡಿನಲ್ಲಿ ಸ್ಕೌಟ್ಸ್ ಸ್ಥಾಪನೆಯಾದ ಕೇವಲ ಎರಡೇ ವರ್ಷಗಳಲ್ಲಿ ಭಾರತದಲ್ಲೂ 1909ರಲ್ಲಿ ಮೊಟ್ಟ ಮೊದಲ ಸ್ಕೌಟ್ಸ್ ಘಟಕ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಕ್ಯಾಪ್ಟನ್ ಟಿ ಹೆಚ್ ಬೇಕರ್ ರಿಂದ ಸ್ಥಾಪನೆ ಆಯಿತು.
ದಾವಣಗೆರೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ 1928 ರಲ್ಲಿ ಲೋಕಲ್ ಸ್ಕೌಟ್ಸ್ ಅಸೋಸಿಯೇಷನ್ ಎಂಬುದಾಗಿ ಸ್ಥಾಪನೆ ಆಯಿತು. ಆಗ ಯುವರಾಜ ಕಂಠೀರವ ನರಸರಾಜ ಒಡೆಯರು ಮೈಸೂರು ರಾಜ್ಯ ಸ್ಕೌಟ್ಸ್ ನ ಮುಖ್ಯ ಕಬ್ ಆಗಿದ್ದರು. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ದಾವಣಗೆರೆಗೆ ಬಂದಾಗ ಸ್ಕೌಟ್ ಗಳ ಶಿಸ್ತು ಪಾಲನೆ ಮೆಚ್ಚಿದ್ದರು. 1940 ರಲ್ಲಿ ದಾವಣಗೆರೆಯ ಡಿಇಎ ಮಾಧ್ಯಮಿಕ ಶಾಲೆಯಲ್ಲಿ ನಮ್ಮ ಜಿಲ್ಲೆಯ ಮೊಟ್ಟ ಮೊದಲ ಸ್ಕೌಟ್ ತಂಡ ಪ್ರಾರಂಭವಾಗಿ ಕೀರ್ತಿ ಶೇಷರಾದ ಅ.ರಾ. ಶಂಕರಯ್ಯನವರು ತರಬೇತಿ ಪಡೆದು ಪ್ರಪ್ರಥಮ ಸ್ಕೌಟ್ ಮಾಸ್ಟರ್ ಆದರು. ಬಿ ಕಲಪನಹಳ್ಳಿಯಲ್ಲಿ ಕ್ಯಾಂಪ್ ಏರ್ಪಾಡಾಯಿತು. ಕ್ಯಾಂಪಿಗೆ ಬಂದ ಸ್ಕೌಟ್ ಕಮಿಷನರ್ W.U. ಹನುಮಂತರಾಯರು ಡಿಇಎ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಷಗಿರಿರಾಯರನ್ನು ಕರೆಸಿ ಲೋಕಲ್ ಸ್ಕೌಟ್ ಅಸೋಸಿಯೇಷನ್ನಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು. ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪನವರನ್ನು ಇದರ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶೇಷಗಿರಿರಾಯರು ಕಾರ್ಯದರ್ಶಿಗಳಾದರು. ಆ ವೇಳೆಗಾಗಲೇ ಸ್ಥಳೀಯ ಸ್ಕೌಟ್ ಸಂಘದಲ್ಲಿ 560 ರೂ.ಗಳ ಉಳಿತಾಯವಾಗಿತ್ತು, ಬಂಗಾರದ ದರಕ್ಕೆ ಹೋಲಿಸಿದರೆ ಈಗಿನ ಸುಮಾರು 18 ಲಕ್ಷ ರೂಪಾಯಿಗಳು. ಇದೇ ವರ್ಷ ದಾವಣಗೆರೆಯ ಕಂದಾಯ ಅಸಿಸ್ಟೆಂಟ್ ಕಮಿಷನರ್ ಆಗಿ ಬಂದ ಬಿ. ಬೀರಪ್ಪನವರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣರಾಯರ ಒಡಗೂಡಿಕೊಂಡು ಹಳೇಬಾತಿಯಲ್ಲಿ ಸ್ಕೌಟ್ ಕ್ಯಾಂಪಿಗೆ ಏರ್ಪಾಡು ಮಾಡಿ ಕ್ಯಾಂಪ್ ಫೈರ್ ಅಲ್ಲಿ ತಾವೂ ಭಾಗಿಗಳಾದರು. ಇವರಿಂದಾಗಿ ಆಗಿನ ಪುರಸಭೆಗೆ ಸೇರಿದ್ದ ಜಾಗದಲ್ಲಿ ಈಗಿನ ಸ್ಕೌಟ್ ಹಾಲಿನ ನಿರ್ಮಾಣಕ್ಕೆ ಸ್ಥಳ ಒದಗಿತು, ಚಿತ್ರದುರ್ಗ ಜಿಲ್ಲಾ ಸ್ಕೌಟ್ ಸಮಿತಿಯು ರಚನೆಯಾಗಿ ದಾವಣಗೆರೆ ಹರಿಹರ ಜಗಲೂರು ಹೊಳಲ್ಕೆರೆ ಸ್ಕೌಟ್ ಸಂಸ್ಥೆಗಳು ಇದರ ಉಪನಿಯಮಗಳ ಅಡಿಯಲ್ಲಿ ರಚನೆಗೊಂಡವು. ಆಗ ನಡೆದ ಚಿತ್ರದುರ್ಗ ಜಿಲ್ಲಾ ರ್ಯಾಲಿಯಲ್ಲಿ 60 ಜನ ಭಾಗಿಗಳಾಗಿದ್ದರು. ನಂತರ 1942 ರಲ್ಲಿ ದಾವಣಗೆರೆ ನಗರ ರ್ಯಾಲಿ ನಡೆಯಿತು. ಆಗ ಡಿಡಿಪಿಐ ಆಗಿದ್ದ ಕಸ್ತೂರಿ ರಾಜಶೆಟ್ಟರು ಕಂದಾಯ ಮತ್ತು ಶಿಕ್ಷಣ ಇಲಾಖೆ ಸೇರಿ ಸ್ಕೌಟ್ ಚಟುವಟಿಕೆ ಮಾಡಲು ಅನುವು ಮಾಡಿದರು.

-ಸ್ಕೌಟ್ ಭವನ ನಿರ್ಮಾಣ:
1945 ರಲ್ಲಿ ದಾವಣಗೆರೆ ಸ್ಕೌಟ್ ಅಸೋಸಿಯೇಷನ್ ವತಿಯಿಂದ ಹಳೆಬಾತಿಯಲ್ಲಿ ಎರಡು ದಿನಗಳ ಜಿಲ್ಲಾ ಸ್ಕೌಟ್ ರ್ಯಾಲಿ ಏರ್ಪಾಡಾಯಿತು, 450 ಸ್ಕೌಟ್ಗಳು ಭಾಗವಹಿಸಿದ್ದರು. ಇದರ ಅನೇಕ ಸ್ಪರ್ಧಾ ಬಹುಮಾನಗಳನ್ನು ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಧರ್ಮಛತ್ರ ಹಿಂಭಾಗದ ಈಗಿನ ಆರ್ ಸಿ ಸಿ ವಾಟರ್ ಟ್ಯಾಂಕ್ ಆವರಣದಲ್ಲಿ ಆಗ ಕಬ್ಬಿಣದ ವಾಟರ್ ಟ್ಯಾಂಕ್ ಇತ್ತು, ಅದರ ಬಳಿ ಬಹುಮಾನ ವಿತರಣೆ ಮತ್ತು ಕ್ಯಾಂಪ್ ಫೈರ್ ನೆರವೇರುವಾಗ ಸ್ಕೌಟ್ಸ್ ಅಧ್ಯಕ್ಷ ಮದ್ದೂರಾಯಪ್ಪನವರು, ಕಂದಾಯ ಅಸಿಸ್ಟೆಂಟ್ ಕಮಿಷನರ್ ಬಿ ಬೀರಪ್ಪ ಭಾಗಿಗಳಾಗಿದ್ದರು. ಪುರಸಭೆಗೆ ಸೇರಿದ್ದ ಜಾಗದಲ್ಲಿ ಸ್ಕೌಟ್ ಭವನ ನಿರ್ಮಾಣಕ್ಕೆ ಬೀರಪ್ಪನವರು ಜಾಗ ಮಂಜೂರು ಮಾಡಿದರು. ಮದ್ದೂರಾಯಪ್ಪನವರು ಆಗ 3000 ರೂಪಾಯಿಗಳನ್ನು ಅಂದರೆ ಬಂಗಾರ ದರಕ್ಕೆ ಹೋಲಿಸಿದರೆ ಈಗಿನ ಸುಮಾರು 65 ಲಕ್ಷ ರುಪಾಯಿ ಸ್ಕೌಟ್ ಭವನ ನಿರ್ಮಾಣಕ್ಕೆ ನೀಡಿದರು. 1945 ರಲ್ಲಿ ಸಚಿವರಾಗಿದ್ದ ಎಲ್ ಸಿದ್ದಪ್ಪನವರು ಈ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಕೌಟ್ ಭವನವು ಪಿ.ಜೆ. ಬಡಾವಣೆಯ ಮೊದಲನೇ ಮುಖ್ಯ ರಸ್ತೆಯಲ್ಲಿ (ಹೈಸ್ಕೂಲ್ ಫೀಲ್ಡ್ ಪಕ್ಕ) ನಿರ್ಮಾಣವಾಯಿತು. 1946 ರಲ್ಲಿ ದಾವಣಗೆರೆ ಸ್ಥಳೀಯ ಸ್ಕೌಟ್ ಸಂಘವು ಜಿಲ್ಲಾ ಮಟ್ಟಕ್ಕೆ ಏರಿತು, ಆಗ 24 ತಂಡಗಳಿದ್ದವು. ರಾಜ್ಯದ ಸ್ಕೌಟ್ ಮುಖ್ಯ ಆಯುಕ್ತ ಪಿ. ಶಿವಶಂಕರ್ ಇದಕ್ಕೆ ಕಾರಣರಾದರು.

-ಕೊಂಡಜ್ಜಿ ಬಸಪ್ಪನವರ ಪಾತ್ರ:
1951 ವಿಶ್ವ ಸ್ಕೌಟ್ ಜಾಂಬೂರಿ ಆಸ್ಟ್ರಿಯಾದಲ್ಲಿ ನಡೆದಾಗ ಇದರ ಲೀಗಲ್ ಅಡ್ವೈಸರ್ ಅಂದರೆ ಕಾನೂನು ಸಲಹೆಗಾರರಾಗಿ ಕೊಂಡಜ್ಜಿ ಬಸಪ್ಪನವರು, ಪಬ್ಲಿಕ್ ರಿಲೇಶನ್ ಆಫೀಸರ್ ಅಂದರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿ ಪ್ರಸಿದ್ಧ ಕೈಗಾರಿಕೋದ್ಯಮಿ ದಾನಿ ಚಿಗಟೇರಿ ಜಯಣ್ಣನವರು, ಮೆಡಿಕಲ್ ಆಫೀಸರ್ ಅಂದರೆ ಆರೋಗ್ಯ ಅಧಿಕಾರಿಗಳಾಗಿ ಡಾ. ಜಿ ವಿ ಶಿವಶಂಕರ್ ರವರು ಭಾಗವಹಿಸಿದ್ದು ನಮ್ಮ ರಾಜ್ಯದ ಹಾಗೂ ದಾವಣಗೆರೆಯ ಹೆಮ್ಮೆ ಎನ್ನಬಹುದು. ಮುಂದೆ ಕೊಂಡಜ್ಜಿ ಬಸಪ್ಪನವರು ರಾಜ್ಯ ಆಯುಕ್ತರಾದರು, ಆಗ ಮುನ್ಸಿಪಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಆರ್ ಚಂದ್ರಶೇಖರಯ್ಯನವರು ಚಿತ್ರದುರ್ಗ ಜಿಲ್ಲಾ ಸ್ಕೌಟ್ಸ್ ಆಯುಕ್ತರಾಗಿದ್ದರು. ಮೈಸೂರಿನ ಮಹಾರಾಜ ರಾಜಪ್ರಮುಖ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ದಾವಣಗೆರೆಗೆ ಬಂದಾಗ ದಾವಣಗೆರೆ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ‘STAVE ADEN’ ಗೌರವ ನೀಡಿದರು, ತಮ್ಮ ಸ್ಕೌಟ್ ದಂಡಗಳು ಅಂದರೆ ದೊಣ್ಣೆಗಳಿಂದಲೇ ಜಯದೇವ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಸ್ವಾಗತ ಕಮಾನು ನಿರ್ಮಿಸಿದ್ದರು, ಇದು ಮಹಾರಾಜರಿಗೆ ಅತ್ಯಂತ ಇಷ್ಟವಾಯಿತು. ದಾವಣಗೆರೆ ಸ್ಕೌಟ್ ಗೈಡ್ ಗಳಿಂದ ಶ್ರಮದಾನ ಶಿಬಿರಗಳ ಆರಂಭವಾಗಿ ಮುನ್ಸಿಪಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಸೀತಾರಾಮರಾವ್ ಹಾಗೂ ಶಿಕ್ಷಕರಾದ ಶಂಕರನಾರಾಯಣ ರಾವ್, ಬಾಳಾಚಾರ್ಯರ ನೇತೃತ್ವದಲ್ಲಿ ಜಿಗಳಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ, ಕುಂಬಳೂರು ದೇವರ ಬೆಳಕೆರೆಯ ರಸ್ತೆ ಹಾಗೂ ಶಿವಮೊಗ್ಗ ಹೊಸಪೇಟೆ ರಸ್ತೆಗೆ ಅನುಕೂಲಕರವಾದ ಶ್ರಮದಾನ ಸ್ಕೌಟ್ ಗಳು ಮಾಡಿದರು. ಚಿಗಟೇರಿ ಜಯಣ್ಣ, ಡಾ. ಜಿ ವಿ ಶಿವಶಂಕರ್, ಎಂ ಕೆ ಪಾಣಿ ಮುಂತಾದವರು ಪ್ರೋತ್ಸಾಹಕರಾಗಿದ್ದರು. ಲೋಕಸಭಾ ಸದಸ್ಯರು ಕೇಂದ್ರ ಸಚಿವರು ಆಗಿದ್ದ ಕೀರ್ತಿಶೇಷ ಕೊಂಡಜ್ಜಿ ಬಸಪ್ಪನವರು ಕೊಂಡಜ್ಜಿಯಲ್ಲಿ ರಾಜ್ಯದ ಪ್ರಮುಖವಾದ ಸ್ಕೌಟ್ ತರಬೇತಿ ಕೇಂದ್ರ ಮೂಡಿ ಬರಲು ಪ್ರಮುಖ ಕಾರಣಕರ್ತರಾದರು.

Klive Special Article -ಪುನರ್ ನಿರ್ಮಿತ ಸ್ಕೌಟ್ ಭವನ:
ಸುಮಾರು 80 ವರ್ಷ ಹಳೆಯದಾಗಿದ್ದ ಸುಣ್ಣದ ಗಾರೆಯ ನಿರ್ಮಾಣವಾಗಿದ್ದ ಸ್ಕೌಟ್ ಭವನವು ಸುಮಾರು 2 ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಈಗ ಸುಸಜ್ಜಿತವಾಗಿ ಪುನರ್ ನಿರ್ಮಾಣಗೊಂಡಿದ್ದು ಇದಕ್ಕೆ ಭಾರತ್ ಸ್ಕೌಟ್ಸ್ ಗೈಡ್ಸ್ ದಾವಣಗೆರೆ ಟ್ರಸ್ಟ್ ನಿಂದ 1 ಕೋಟಿ 25 ಲಕ್ಷ, ರಾಜ್ಯ ಸ್ಕೌಟ್ ಸಂಸ್ಥೆಯಿಂದ (ಮಾಜಿ ಸಚಿವ ಡಾ. ಪಿ ಜಿ ಆರ್ ಸಿಂಧ್ಯಾ ಈಗ ಮುಖ್ಯ ಆಯುಕ್ತರು) 1 ಕೋಟಿ ರೂಪಾಯಿ, ಭೋಜನಾಲಯಕ್ಕೆ ಚಿಗಟೇರಿ ಜಯಪ್ರಕಾಶ್ ರಿಂದ 1 ಲಕ್ಷ ರೂಪಾಯಿ, ಆಡಿಟೋರಿಯಂಗೆ ಚಿಗಟೇರಿ ಜಯಣ್ಣನವರ ಹೆಸರಿನಲ್ಲಿ ಮುರುಘರಾಜೇಂದ್ರ ಚಿಗಟೇರಿಯವರಿಂದ 2 ಲಕ್ಷ ರೂಪಾಯಿ, ಕಟ್ಟಡಕ್ಕೆ ಲಕ್ಷ್ಮಣಶೆಟ್ಟಿ ಟ್ರಸ್ಟ್ ನಿಂದ 1 ಲಕ್ಷ ರೂಪಾಯಿ ಹೀಗೆ ಸ್ಥಳೀಯ ದಾನಿಗಳಿಂದ 5 ಲಕ್ಷ ರೂಪಾಯಿ ಸಂದಾಯವಾಗಿದೆ.
ಪುನರ್ ನಿರ್ಮಾಣಗೊಂಡಿರುವ ಈ ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಕೌಟ್ ಭವನವು ಅತ್ಯಂತ ಸುಸಜ್ಜಿತವಾಗಿದ್ದು ನಗರ ಮಧ್ಯಭಾಗದಲ್ಲಿ ಪ್ರೌಢಶಾಲಾ ಮೈದಾನ ಪಕ್ಕದಲ್ಲಿ ಈ ಭವನವು ಬಹು ಉಪಯೋಗಿ ಹಾಲ್ ಆಗಿದ್ದು ಸುಸಜ್ಜಿತವಾದ ವೇದಿಕೆ ಹಾಗೂ ಆಸನ ವ್ಯವಸ್ಥೆ ಇರುವ ಸಭಾಂಗಣ, ಊಟದ ಹಾಲ್, ರೂಮ್ ಗಳ ವ್ಯವಸ್ಥೆ ಇದ್ದು ಸಾರ್ವಜನಿಕರು, ಶಾಲಾ ಕಾಲೇಜು, ಸಂಘಸಂಸ್ಥೆಗಳವರು ಕಾರ್ಯಕ್ರಮ ಸಮಾರಂಭಗಳನ್ನು ನಡೆಸಲು ತುಂಬಾ ಅನುಕೂಲಕರವಾಗಿದೆ. ಈ ಭವನದ ಆವರಣದಲ್ಲಿ ಅಥಣಿ ಕೊಟ್ರಪ್ಪ ವಾಣಿಜ್ಯ ಸಂಕೀರ್ಣ ಟವರ್, ಜಂಬಿಗಿ ಶರಣಪ್ಪ ಶತಮಾನೋತ್ಸವ ಕಟ್ಟಡ ಮುಂತಾದವುಗಳು ಇವೆ.
ಇಂದು ಬೆಳಿಗ್ಗೆ 11 ಗಂಟೆಗೆ ಸ್ಕೌಟ್ ಭವನ ಉದ್ಘಾಟನೆಯನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು, ಜಯಣ್ಣ ಚಿಗಟೇರಿ ಸಭಾಂಗಣದ ಉದ್ಘಾಟನೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ. ಪಿ ಜಿ ಆರ್ ಸಿಂಧ್ಯಾ ನೆರವೇರಿಸಲಿದ್ದು, ಕೊಂಡಜ್ಜಿ ಬಸಪ್ಪ ಆಡಳಿತ ಕಚೇರಿಯ ಉದ್ಘಾಟನೆಯನ್ನು ರಾಜ್ಯ ಸಂಸ್ಥೆಯ ಸಹಾಯಕ ಆಯುಕ್ತ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಎಂ ಕೆ ಪಾಣಿ ಯೂಥ್ ಹಾಸ್ಟೆಲ್ ಉದ್ಘಾಟನೆಯನ್ನು ನವದೆಹಲಿ ರಾಷ್ಟ್ರ ಸಂಸ್ಥೆಯ ಆಯುಕ್ತ ಎ ಎಸ್ ಮಧುಸೂದನ್, ಗುಂಡಿ ವನಜಾಕ್ಷಮ್ಮ ವೇದಿಕೆಯ ಉದ್ಘಾಟನೆಯನ್ನು ರಾಜ್ಯ ಸಂಸ್ಥೆಯ ಆಯುಕ್ತೆ ಶ್ರೀಮತಿ ಗೀತಾ ನಟರಾಜ್, ಜಯಪ್ರಕಾಶ್ ಚಿಗಟೇರಿ ಭೋಜನಾಲಯದ ಉದ್ಘಾಟನೆಯನ್ನು ಚಾಮುಂಡಿ ಸ್ಕೌಟ್ಸ್ ಮತ್ತು ಗೈಡ್ಸ್ ಗ್ರೂಪ್ ನ ಶಾಶ್ವತ ಟ್ರಸ್ಟಿ, ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಛಾಯಾಚಿತ್ರ ಗ್ಯಾಲರಿ ಉದ್ಘಾಟನೆಯನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸ್ಕೌಟ್ಸ್ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಲಿದ್ದು ಸಂಸ್ಥೆಯ ಜಿಲ್ಲಾಧ್ಯಕ್ಷ ಆರ್ ಡಿ ಬದ್ರಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ದಾವಣಗೆರೆ ಜಿಲ್ಲಾ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ವಾಸಿಲ್, ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ ಚಿಗಟೇರಿ ಮುಂತಾಗಿ ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಸ್ಕೌಟರ್ಸ್ ಮತ್ತು ಗೈಡರ್ಸ್ ಗಳು ಬನ್ನೀಸ್, ಕಬ್ಸ್, ಬುಲ್ಬುಲ್ಸ್, ಸ್ಕೌಟ್ಸ್ ,ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಭಾಗವಹಿಸಲಿದ್ದಾರೆ.
-ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು,
ಭಾರತ್ ಸ್ಕೌಟ್ಸ್ ಗೈಡ್ಸ್ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರು-

ಶಿಕಾರಿಪುರದಲ್ಲಿ ಶ್ರೀಲಂಕಾ ಸಂಸದರ ಭೇಟಿ: ಭಾರತ-ಶ್ರೀಲಂಕಾ ಬಾಂಧವ್ಯ, ಕೃಷಿ ಮತ್ತು ಅಭಿವೃದ್ಧಿ ಕುರಿತು ಚರ್ಚೆ

0

ಶಿಕಾರಿಪುರದಲ್ಲಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ನಿವಾಸಕ್ಕೆ ಶ್ರೀಲಂಕಾದ ಜಾಫ್ನಾ ಮತ್ತು ಕಿಲಿನೊಚ್ಚಿ ಕ್ಷೇತ್ರದ ಗೌರವಾನ್ವಿತ ಸಂಸದ ಶ್ರೀ ಶ್ರೀಧರನ್ ಶಿವಜ್ಞಾನಂ ಅವರು ತಮ್ಮ ಪ್ರಮುಖರ ನಿಯೋಗದೊಂದಿಗೆ ಭೇಟಿ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೀಲಂಕಾ ನಿಯೋಗವನ್ನು ಮಲೆನಾಡಿನ ಸಾಂಪ್ರದಾಯಿಕ ಪದ್ಧತಿಯಂತೆ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.

ಭೇಟಿಯ ವೇಳೆ ಭಾರತ ಮತ್ತು ಶ್ರೀಲಂಕಾ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯ, ಉಭಯ ದೇಶಗಳ ರಾಜಕೀಯ ಬೆಳವಣಿಗೆಗಳು, ಪ್ರಾದೇಶಿಕ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದ ವಿವಿಧ ಮಹತ್ವದ ವಿಷಯಗಳ ಕುರಿತು ಸುದೀರ್ಘ ಹಾಗೂ ಸೌಹಾರ್ದಯುತ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀಲಂಕಾ ಸಂಸದ ಶ್ರೀಧರನ್ ಶಿವಜ್ಞಾನಂ ಅವರು ಮಲೆನಾಡಿನ ಕೃಷಿ ಪದ್ಧತಿ, ಪ್ರವಾಸೋದ್ಯಮ ಹಾಗೂ ಐತಿಹಾಸಿಕ ಪರಂಪರೆಯ ಬಗ್ಗೆ ವಿಶೇಷ ಆಸಕ್ತಿ ವ್ಯಕ್ತಪಡಿಸಿದರು. ಈ ಭೇಟಿ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮದಲ್ಲಿ ಶ್ರೀಲಂಕಾದ ನಿಯೋಗದ ಸದಸ್ಯರು, ಸ್ಥಳೀಯ ಗಣ್ಯರು ಹಾಗೂ ಭಾಗದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.