ಶಿವಮೊಗ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ವಿ.ಎಸ್. ಸರ್ಕಲ್ ಬಳಿ ಗಾಂಧಿ ಪಾರ್ಕ್ ಹತ್ತಿರ ಜೂ. 12 ರಂದು ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ರಮೇಶ್ ಬಿನ್ ಶಿವಾನಂದಪ್ಪ ಎಂಬ ವ್ಯಕ್ತಿಯನ್ನು ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿ, ಜೂ. 23 ರಂದು ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುತ್ತಾನೆ.
ಮೃತನ ಬಳಿ ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
ಮೃತ ವ್ಯಕ್ತಿಯು 5.6 ಅಡಿ ಎತ್ತರ, ದುಂಡು ಮುಖ, ದೃಢವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ತೆಳು ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಂದು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಸುಳಿವು ಇದ್ದಲ್ಲಿ ಕೋಟೆ ಪೊಲೀಸ್ ಠಾಣೆ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.
ವಾರಸುದಾರರಿಲ್ಲದ ಮೃತವ್ಯಕ್ತಿಯ ಬಗ್ಗೆ ಪೊಲೀಸ್ ಪ್ರಕಟಣೆ
ಮೈಸೂರಿನ ಸಿಪೆಟ್ ಸಂಸ್ಥೆಯಲ್ಲಿನ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ 2026–27ನೇ ಸಾಲಿನ ಡಿಪ್ಲೊಮಾ ಕೋರ್ಸ್ ಪ್ರವೇಶ ಪ್ರಾರಂಭವಾಗಿದ್ದು, ಐಟಿಐ, ಪಿಯುಸಿ (ವಿಜ್ಞಾನ) ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಲ್ಯಾಟರಲ್ ಎಂಟ್ರಿ ಸ್ಕೀಮ್ ಮೂಲಕ 2 ನೇ ವರ್ಷ/ 3 ನೇ ಸೆಮಿಸ್ಟರ್ ಗೆ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸಿಪೆಟ್ ವಿದ್ಯಾರ್ಥಿಗಳು ಪಾಲಿಮರ್/ ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ಸ್ ಸಂಬಂಧಿತ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲದ ಬೇಡಿಕೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ಈ ವೃತ್ತಿಪರ ಡಿಪ್ಲೋಮಾ ದ ಕೊನೆಯ ಸೆಮಿಸ್ಟರ್ ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ಆಯ್ಕೆಯ ಮೂಲಕ ಉದ್ಯೋಗ ದೊರಕಿಸಿಕೊಡಲಾಗುತ್ತದೆ.
ಸೀಮಿತ ಸಂಖ್ಯೆಯ ಸೀಟುಗಳು ಮಾತ್ರ ಲಭ್ಯವಿವೆ. ಹೆಚ್ಚಿನ ಮಾಹಿತಿಗೆ ದೂ. ಸಂ. 8124489163 /0821-2516322 ಸಂಪರ್ಕಿಸಬಹುದೆಂದು ಎಂದು ಸಂಸ್ಥೆಯ ಜಂಟಿ ನಿರ್ದೇಶಕರು ಮತ್ತು ಮುಖ್ಯಸ್ಥರು ತಿಳಿಸಿರುತ್ತಾರೆ.
Yuva Nidhi Scheme ಯುವ ನಿಧಿ ಯೋಜನೆಯ ಫಲಾನುಭವಿಗಳ ಸ್ವಯಂ ಘೋಷಣೆ ಕಡ್ಡಾಯ
Yuva Nidhi Scheme ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಅನುಷ್ಠಾನಗೊಳಿಸುವ ಭಾಗವಾಗಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ದಿ:26-12-2023 ರಂದು ಆರಂಭವಾಗಿದ್ದು, ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕ ಬದಲಾಗಿ ಪ್ರತಿ ತಿಂಗಳು 25 ರೊಳಗೆ ಕಡ್ಡಾಯವಾಗಿ ಆನ್ ಲೈನ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ.
2025 ರಲ್ಲಿ ಪದವಿ/ಡಿಪ್ಲೋಮೋ ಪಡೆದ ಪದವೀಧರರು, ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಪಡೆಯದ ನಿರುದ್ಯೋಗಿಗಳು, ಸೇವಾ ಸಿಂಧು ಪೋರ್ಟಲ್‌ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪದವೀಧರರಿಗೆ ರೂ.3,000/- ಹಾಗೂ ಡಿಪ್ಲೋಮೋ ಪದವೀಧರರಿಗೆ ರೂ.1,500/- ನೀಡಲಾಗುವುದು ಎಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
ಗಾಜನೂರಿನ ನವೋದಯ ಶಾಲೆಯ 11 ನೇ ತರಗತಿ ವಾಣಿಜ್ಯ ವಿಭಾಗದ ಖಾಲಿಯಿರುವ ಸೀಟುಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2026-27ನೇ ಸಾಲಿಗೆ 11ನೇ ತರಗತಿಗೆ ವಾಣಿಜ್ಯ ವಿಭಾಗಕ್ಕೆ ಖಾಲಿ ಇರುವ ಸೀಟುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಜು. 15 ರವರೆಗೆ ವಿಸ್ತರಿಸಲಾಗಿದೆ.
2025-26 ನೇ ಸಾಲಿನಲ್ಲಿ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಹತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇಕಡವಾರು 50 ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಯು 01.06.2009 ರಿಂದ 31.7.2011 ರ ದಿನಾಂಕದೊಳಗೆ ಜನಿಸಿರಬೇಕು.
ಅರ್ಹ ಆಸಕ್ತ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವಿದ್ಯಾಲಯದ ಕಾರ್ಯಾಲಯಕ್ಕೆ ಜು. 15 ರ ಒಳಗಾಗಿ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವಂತೆ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿರುತ್ತಾರೆ.
ನಿರುದ್ಯೋಗಿ ವಿದ್ಯಾವಂತರೇ ಗಮನಿಸಿ! ಜುಲೈ7, ಬಿರ್ಲಾ ಕ್ಯಾಪಿಟಲ್ ಮತ್ತು ಇಂಡಸ್ ಸಂಡ್ ಬ್ಯಾಂಕಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ ಇವರ ವತಿಯಿಂದ ಜು.07 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಪ್ರೈ.ಲಿ., ಇಂಡಸ್ ಸಂಡ್ ಬ್ಯಾಂಕ್ ಪ್ರೈ.ಲಿ., ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಯಾವುದೇ ಡಿಗ್ರಿ ಪೂರೈಸಿದ, 18 ರಿಂದ 35 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವುದು.
ಜುಲೈ 5 . ಮಾಚೇನಹಳ್ಳಿ ಸುತ್ತಮುತ್ತ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ
ಶಿವಮೊಗ್ಗ ಮಾಚೇಹಳ್ಳಿ 110/11 ಕೆ.ವಿ. ವಿ.ವಿ.ಕೇಂದ್ರದ ಮಾರ್ಗಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಜು.05 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆಬಸವಾಪುರ, ಮೆ|| ಈ.ರಾಮಮೂರ್ತಿ ಮಿನರಲ್ಸ್ ಪ್ರೈ.ಲಿ., ಕೆ.ಎಂ.ಎಫ್.ಡೈರಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
B.Y. Raghavendra ನಮ್ಮ ಸಹಕಾರಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖ : ಬಿ.ವೈ.ರಾಘವೇಂದ್ರ
B.Y. Raghavendra ಅಂತರರಾಷ್ಟ್ರೀಯ ಸಹಕಾರಿ ದಿನ–2026 ಹಾಗೂ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದನೇ ವರ್ಷದ ಅಂಗವಾಗಿ, ಶಿಕಾರಿಪುರದ ಶಾಂತಿನಗರದ ಬನಸಿರಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಾಗಿ “ಒಂದು ದಿನದ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಮತ್ತು ಆರೋಗ್ಯ ಮಾಹಿತಿ ಕಾರ್ಯಾಗಾರ”ವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಶಿಬಿರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಬಸವೇಶ್ವರ ಸಹಕಾರಿ ಒಕ್ಕೂಟ ಶಿಕಾರಿಪುರ, ತಾಲ್ಲೂಕು ಸಹಕಾರ ಭಾರತಿ ಶಿಕಾರಿಪುರ, ಸಹಕಾರ ಇಲಾಖೆ ಶಿವಮೊಗ್ಗ, ಉಪವಿಭಾಗ ಸಾಗರ ಹಾಗೂ ಶಿಕಾರಿಪುರ ತಾಲೂಕಿನ ವಿವಿಧ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಗ್ರಾಮೀಣ ಆರ್ಥಿಕತೆ ಹಾಗೂ ರೈತರ ಬೆನ್ನೆಲುಬಾಗಿ ಹಗಲಿರುಳು ಶ್ರಮಿಸುತ್ತಿರುವ ಸಹಕಾರ ಕ್ಷೇತ್ರದ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇಂತಹ ಆರೋಗ್ಯ ತಪಾಸಣೆ ಶಿಬಿರಗಳ ಮೂಲಕ ಉಚಿತ ಆರೋಗ್ಯ ಪರೀಕ್ಷೆ ಹಾಗೂ ಆರೋಗ್ಯ ಸಂಬಂಧಿತ ಅಗತ್ಯ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುತ್ತಿರುವ ಸಿಬ್ಬಂದಿ ವರ್ಗದವರು ಉತ್ತಮ ಆರೋಗ್ಯ ಮತ್ತು ಸುಖಮಯ ಜೀವನ ನಡೆಸಲಿ ಎಂದು ಶುಭ ಹಾರೈಸಿದ ಸಂಸದರು, ಇಂತಹ ಕಲ್ಯಾಣ ಕಾರ್ಯಕ್ರಮಗಳು ಮುಂದೆಯೂ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
B.Y. Raghavendra ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ವಿವಿಧ ಸಂಘಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಆತ್ಮಹತ್ಯೆಗೆ ಬಂದಿದ್ದ ಮಹಿಳೆಯನ್ನು ರಕ್ಷಿಸಿದ ಸಾರ್ವಜನಿಕರ ಸಮಯಪ್ರಜ್ಞೆ
ಕುಟುಂಬದ ಕ್ಷುಲ್ಲಕ ಕಾರಣದಿಂದ ಮನನೊಂದ ಮಹಿಳೆಯೊಬ್ಬರು ನಗರದ ವಾದಿ-ಏ-ಹುದಾ ಸಮೀಪದ ಹೊಸ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬಂದಿದ್ದ ವೇಳೆ, ಸಾರ್ವಜನಿಕರು ಸಮಯಪ್ರಜ್ಞೆ ಪ್ರದರ್ಶಿಸಿ ಅವರನ್ನು ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೇತುವೆಯ ಮೇಲೆ ಮಹಿಳೆಯ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಆಕೆಯೊಂದಿಗೆ ಮಾತುಕತೆ ನಡೆಸಿ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದರು.
ಬಳಿಕ ಆಕೆಯ ಮನಸ್ಥಿತಿಯನ್ನು ಶಾಂತಗೊಳಿಸಿ, ಆತ್ಮಸ್ಥೈರ್ಯ ತುಂಬಿ ಸುರಕ್ಷಿತವಾಗಿ ಮನೆಗೆ ಕಳುಹಿಸಿದರು.
ಸಾರ್ವಜನಿಕರ ಮಾನವೀಯತೆ ಹಾಗೂ ಸಮಯೋಚಿತ ಮಧ್ಯಪ್ರವೇಶದಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದ್ದು, ಸ್ಥಳೀಯರು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ದೇವರ ಬಳಿ ಏನನ್ನೂ ಕೇಳಬಾರದು.ಬದಲಾಗಿ ನಾನು ಯಾವುದಕ್ಕೆ ಅರ್ಹನೋ ಅದೆಲ್ಲ ಅನುಗ್ರಹಿಸೆಂದು ಬೇಡಬೇಕು- ಡಾ.ಭೀಮೇಶ್ವರ ಜೋಷಿ
ಭಕ್ತನಾದವನು ದೇವರ ಸನ್ನಿಧಿಯಲ್ಲಿ ಮಗುವಾಗಿರಬೇಕೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ|| ಭೀಮೇಶ್ವರ ಜೋಷಿ ಹೇಳಿದರು.
ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣಮುಖ ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಆರ್ಶೀವಚನ ನೀಡಿದ ಅವರು, ದೇವರ ಮುಂದೆ ನಾವೆಲ್ಲರೂ ಮಗುವಿನಂತೆ ವರ್ತಿಸಬೇಕು ಆಗ ಮಾತ್ರ ದೇವಿ ತಾಯಿ ಹೃದಯದಿಂದ ನಮ್ಮನ್ನೆಲ್ಲಾ ಹರಸುತ್ತಾಳೆ ಎಂದರು.
ಮಾರಿಕಾಂಬೆ ದೇವಿಯ ಕಣ್ಣು ಉಗ್ರ ಸ್ವರೂಪವಾಗಿರುತ್ತದೆ. ಅಂದರೆ ನಾವು ತಪ್ಪಾಗಿ ವರ್ತಿಸಿದಾಗ ಮಾತ್ರ ಅವಳು ಉಗ್ರದೃಷ್ಟಿ ಬೀರುತ್ತಾಳೆ. ನಾವು ಸರಿದಾರಿಯಲ್ಲಿದ್ದರೆ ಮಾತೃಹೃದಯದಿಂದ ನಮ್ಮೆಲ್ಲರನ್ನು ಆಶೀರ್ವದಿಸುತ್ತಾಳೆ ಎಂದ ಅವರು, ದೇವರ ಬಳಿ ನಾವು ಏನನ್ನೂ ಕೇಳಬಾರದು, ಬದಲಾಗಿ ನಾನು ಯಾವುದಕ್ಕೆ ಅರ್ಹನಿದ್ದೇನೋ ಅದೆಲ್ಲವನ್ನು ಅನುಗ್ರಹಿಸು ಎಂದು ಬೇಡಿಕೊಂಡರೆ ದೇವಿ ಸಂತುಷ್ಟಳಾಗಿ ಎಲ್ಲವನ್ನೂ ದಯಪಾಲಿಸುತ್ತಾಳೆ. ನಾವು ಅದನ್ನು ಕೊಡು, ಇದನ್ನು ಕೊಡು ಎಂದು ಕೇಳಿದರೆ ದೇವಿ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿದರು.
ಗ್ರಾಮೀಣಭಾಗದಲ್ಲಿ ಜಗಳಗಳಾದಾಗ ಅಥವಾ ವೈಮನಸ್ಸು ಉಂಟಾದಾಗ ಒಬ್ಬರಿಗೊಬ್ಬರು ನಿನಗೆ ಮುಂದೆ ಇದೆ ಮಾರಿಹಬ್ಬ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಅಂದರೆ ಮಾರಿಹಬ್ಬದಲ್ಲಿ ನಾವು ಬಲಿಯನ್ನು ಕೊಡುತ್ತೇವೆ. ಅದೇ ರೀತಿ ನಮ್ಮಲ್ಲಿರುವ ಅಧರ್ಮ, ದ್ವೇಷ, ಅಸೂಯೆಗಳನ್ನು ತೆಗೆದುಹಾಕುವುದಕ್ಕೆ ಮಾರಿಹಬ್ಬದ ಉಲ್ಳೇಖವನ್ನು ಮಾಡುತ್ತಾರೆ ಎಂದು ಹೇಳಿದರು.
ಈವರ್ಷ ಅನಾವೃಷ್ಟಿಯ ಮುನ್ಸೂಚನೆ ತೋರುತ್ತಿದೆ. ಈ ವೇಳೆಗೆ ತುಂಗಾನದಿ ೨ ಬಾರಿ ತುಂಬಬೇಕಿತ್ತು. ಆದರೆ ಇಂದು ನದಿಯ ತಳಭಾಗ ಕಾಣುತ್ತಿದೆ. ಆದ್ದರಿಂದ ಈ ಬಾರಿ ಉತ್ತಮ ಮಳೆಯನ್ನು ದಯಪಾಲಿಸಿ ಜಲಸಮೃದ್ದಿಯನ್ನು ನೀಡಿ ಸುಭೀಕ್ಷತೆಯನ್ನು ಎಲ್ಲೆಡೆ ತಾಯಿ ದಯ ಪಾಲಿಸಲಿ ಎಂದು ನಾವುಗಳು ದೇವಿಯಲ್ಲಿ ಮೊರೆ ಇಟ್ಟಿದ್ದೇವೆ. ಆ ತಾಯಿ ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಸ್ಥಳದಲ್ಲಿ ಮಾರಿಗದ್ದುಗೆ ಮಾತ್ರ ಇತ್ತು. ಇದೀಗ ಆಡಳಿತ ಮಂಡಳಿಯವರ ಪರಿಶ್ರಮ, ಕಾರ್‍ಯವೈಖರಿಯಿಂದ ಸುಂದರವಾದ ದೇವಸ್ಥಾನವಾಗಿದೆ. ಪ್ರತಿನಿತ್ಯ ಶ್ರದ್ದಾ ಭಕ್ತಿಯ ಕೇಂದ್ರವಾಗಿ ರೂಪಗೊಂಡಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ಕೇವಲ ಮಾರಿಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ವರ್ಷಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಜೊತೆಗೆ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ನಿಜಕ್ಕೂ ಆಡಳಿತ ಮಂಡಳಿಯ ಕಾರ್ಯವೈಖರಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಸಮಿತಿ ಮುಖಂಡರುಗಳಾದ ಉಮಾಪತಿ, ಎಸ್.ಸಿ.ಲೋಕೇಶ್, ಸುನಿಲ್, ಚಂದ್ರಶೇಖರ್, ಜಯಲಕ್ಷ್ಮಿ ಈಶ್ವರಪ್ಪ, ಇತರರು ಉಪಸ್ಥಿತರಿದ್ದರು.
ಎಲ್ಲರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು- ಡಾ. ಅಪ್ರಮೇಯ
ಶಿವಮೊಗ್ಗದ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲದಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ವೈದ್ಯ ಡಾ. ಅಪ್ರಮೇಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಎಲ್ಲರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಎಲ್ಲರೂ ಅತ್ಯಂತ ಕಾಳಜಿ ವಹಿಸಬೇಕಾಗಿರುವುದು ಇಂದಿನ ದಿನಮಾನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂದರು.
ಮಕ್ಕಳು ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ತಮ್ಮ ಆರೋಗ್ಯದ ಕಡೆ ಅತ್ಯಂತ ಕಾಳಜಿ ವಹಿಸಬೇಕು. ಕ್ರೀಡೆ ಜೊತೆಗೆ ನಮ್ಮ ದೈಹಿಕ ಆರೋಗ್ಯವನ್ನು ಸಹ ಕಾಪಾಡಿಕೊಂಡಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ಆರ್. ವೆಂಕಟರಮಣ ಹಾಗೂ ಗುರುಕುಲದ ಮುಖ್ಯೋಪಾಧ್ಯಾಯರಾದ ಎ. ವೆಂಕಟೇಶ್ ಉಪಸ್ಥಿತರಿದ್ದರು.
ಡಾ. ಅಪ್ರಮೇಯ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು, ಹಾಗೂ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.
