Tuesday, August 4, 2026
Tuesday, August 4, 2026
Home Blog Page 39

ಬೀದಿ ವ್ಯಾಪಾರಿಗಳಿಗೆಬದಲಿ ಸ್ಥಳ: ಆಲ್ಕೊಳ ದ ಹತ್ತಿರ ಜಾಗದ ಸಮಸ್ಯೆಗಳ ಬಗ್ಗೆ ಶಾಸಕ ಚೆನ್ನಿ ಪರಿಶೀಲನೆ

0

ಶಿವಮೊಗ್ಗ “ನಗರದ ಬೀದಿ ವ್ಯಾಪಾರಿಗಳ ಜೀವಕ್ಕೆ ರಕ್ಷಣೆ ನೀಡುವುದು ಹಾಗೂ ಅವರಿಗೆ ಸುಸಜ್ಜಿತ ವ್ಯಾಪಾರ ವಲಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.

ಕಳೆದ ಸಂಜೆ ಶಾಸಕರು ಆಲ್ಕೊಳ ವೃತ್ತದ ಬಳಿ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ವ್ಯಾಪಾರಿಗಳಿಗಾಗಿ ನಿಗದಿಪಡಿಸಲಾಗಿರುವ ಜಾಗಕ್ಕೆ ಭೇಟಿ ನೀಡಿ, ವ್ಯಾಪಾರಸ್ಥರ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಸ್ಥರು ತಮಗೆ ನಿಗದಿಪಡಿಸಿದ ಜಾಗದಲ್ಲಿ ನೀರಿನ ಕೊರತೆ ಹಾಗೂ ಅಗತ್ಯ ಮೂಲಸೌಕರ್ಯಗಳಿಲ್ಲದಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಹೈಟೆನ್ಷನ್ ವೈರ್ ಭೀತಿ – ಪರ್ಯಾಯ ಸ್ಥಳಕ್ಕೆ ಆಗ್ರಹ: ಪ್ರಸ್ತುತ ಜಾಗದಲ್ಲಿ ಅಪಾಯಕಾರಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿರುವುದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರ ಜೀವಕ್ಕೆ ಸದಾ ಆಪತ್ತಿನ ಭೀತಿ ಎದುರಾಗಿದೆ. ಈ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ತಕ್ಷಣವೇ ಪರಿಗಣಿಸಿದ ಶಾಸಕರು, ಸ್ಥಳದಲ್ಲೇ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಜಾಗವನ್ನು ಬದಲಾಯಿಸಿ, ಸುರಕ್ಷಿತವಾದ ನೂತನ ಪರ್ಯಾಯ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶೀಘ್ರವೇ ಕಾರ್ಯರೂಪಕ್ಕೆ ತರುವಂತೆ ಕಟ್ಟುನಿಟ್ಟಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಹಾಗೂ ಬೀದಿ ವ್ಯಾಪಾರಿಗಳು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಸರ್ ಎಂ.ವಿ‌.ರಸ್ತೆಯ ಕಲಾ ವಿನ್ಯಾಸ: ಅಂದ ಹೆಚ್ಚಿಸಿದ ಬಗ್ಗೆ ಎಸ್.ಎನ್.ಚನ್ನಬಸಪ್ಪ ಮೆಚ್ಚುಗೆ

0

​ಶಿವಮೊಗ್ಗ “ನಗರದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಶಿವಮೊಗ್ಗ ನಗರವನ್ನು ಸಾಂಸ್ಕೃತಿಕವಾಗಿ ಅತ್ಯಂತ ಸುಂದರ ಉದ್ಯಾನ ನಗರಿಯನ್ನಾಗಿ ರೂಪಿಸುವುದು ನಮ್ಮ ಸಾಂಸ್ಕೃತಿಕ ನಗರಿಯ ಹಿರಿಮೆಯನ್ನು ಹೆಚ್ಚಿಸುವ ಮೊದಲ ಆದ್ಯತೆಯಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

​ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಪ್ರಮುಖ ಸಂಪರ್ಕ ರಸ್ತೆಯಾದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಿರುವ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ರಸ್ತೆಯಲ್ಲಿ, ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಯ ಹಿಂಭಾಗದ ಆವರಣದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಸ್ಥಿರ ಕಲಾ ಚಿತ್ರಣದ ಉದ್ಘಾಟನೆಯನ್ನು ಶಾಸಕರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದರು.

​ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಬದಿಗಳನ್ನು ಕಲಾತ್ಮಕವಾಗಿ ನವೀಕರಿಸುವ ಯೋಜನೆಯ ಭಾಗವಾಗಿ ಈ ಕಲಾ ಚಿತ್ರಣವನ್ನು ಸಿದ್ಧಪಡಿಸಲಾಗಿದೆ. ಇದು ಸಾರ್ವಜನಿಕರ ಗಮನ ಸೆಳೆಯುವ ಜೊತೆಗೆ ನಗರದ ಶಿಸ್ತು ಮತ್ತು ಅಂದವನ್ನು ಹೆಚ್ಚಿಸಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

​ಕಲಾಕೃತಿಯ ಸುತ್ತಮುತ್ತಲಿನ ಜಾಗದಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ಹಾಗೂ ರಾತ್ರಿಯ ಅವಧಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

​ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀ ಡಿಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್, ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆಎಸ್ ಈಶ್ವರಪ್ಪನವರು, ಶಿವಮೊಗ್ಗದ ಖ್ಯಾತ ಶಿಲ್ಪಿ ಶ್ರೀ ಜೀವನ್, ಪ್ರಮುಖರಾದ ಶ್ರೀ ಎಂಬಿ ಹರಿಕೃಷ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜ್ಞಾನೇಶ್ವರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ್ ನವಲೆ, ಶ್ರೀ ದೀನ್ ದಯಾಳ್ ಸೇರಿದಂತೆ ಸರ್ ಎಂ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಸೊಸೈಟಿಯ ಪದಾಧಿಕಾರಿಗಳು, ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳು, ಶಿವಮೊಗ್ಗ ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಜೆ.ಜಾರ್ಜ್ ಉನ್ನತ ಮಟ್ಟದ ಸಭೆ: ವಿವಿಧ ಪ್ರಮುಖ ಬೇಡಿಕೆಗಳ ಬಗ್ಗೆ ಗಮನ ಸೆಳೆದ ಜನಪ್ರತಿನಿಧಿಗಳು

0

ಪ್ರಸಕ್ತ ಸಾಲಿನ ಏಪ್ರಿಲ್‌ ಮತ್ತು ಮೇ ಮಾಹೆಯಲ್ಲಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ರೈತರು ತೋಟಗಳಲ್ಲಿ ಬೆಳೆದ ಅಡಿಕೆ ಮರಗಳು ನಾಶಗೊಂಡಿದ್ದು, ಈ ಸಂಬಂಧ ಬಾಧಿತ ರೈತರಿಗೆ ವಿಶೇಷ ಪ್ಯಾಕೇಜ್‌ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಿಕೆ ಸಲ್ಲಿಸಲಾಗುವುದು. ಅಂತೆಯೇ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ನಿಯೋಗ ತೆರಳಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವಂತೆ ರಾಜ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್‌ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್‌ನಜೀರ್‌ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವುದಾಗಿ ಅವರು ತಿಳಿಸಿದರು.
ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯಲ್ಲಿ 2500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆ ನಾಶವಾಗಿದೆ. ಅಲ್ಲದೇ ಬೆಳೆದು ನಿಂತ ಸುಮಾರು 11ಲಕ್ಷ ಅಡಿಕೆ ಮರಗಳು ಧರೆಗುರುಳಿವೆ. ಇದರಿಂದಾಗಿ ರೈತರ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸರ್ಕಾರದಿಂದ ವಿಶೇಷ ಪ್ಯಾಕೇಜ್‌ಘೋಷಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ ಎನ್.‌ಡಿ.ಆರ್.‌ಎಫ್‌ನಿಯಮಾನುಸಾರ ಪರಿಹಾರ ಘೋಷಿಸಿದಲ್ಲಿ ನಾಶಗೊಂಡ ತೋಟದ ನಿರ್ವಹಣೆಗೆ ಸಾಕಾಗುವುದಿಲ್ಲ. ಸಂತ್ರಸ್ಥರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ದೊರಕಿಸಿ ಕೊಡಿ. ಮಲೆನಾಡಿನಲ್ಲಿ ಸಂಭಾವ್ಯ ಭೂಕುಸಿತ ಉಂಟಾಗುವ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ. ಮಳೆಮಾಪನ ಕೇಂದ್ರಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಅತೀವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರಿಗೆ ಸರಿಯಾದ ಬೆಳೆವಿಮಾ ಮೊತ್ತ ದೊರಕದಂತಾಗಿದೆ. ಆದ್ದರಿಂದ ತಕ್ಷಣದ ಕ್ರಮವಾಗಿ ಮಳೆಮಾಪನ ಕೇಂದ್ರಗಳನ್ನು ಸರಿಪಡಿಸಿ, ಹಿಂದಿನ ವರ್ಷದಲ್ಲಿ ಬೆಳೆ ನಾಶಗೊಂಡ ರೈತರಿಗೆ ಪರಿಹಾರಧನ ಕೊಡಿಸಿ.
– ಡಾ|| ಧನಂಜಯಸರ್ಜಿ, ವಿಧಾನಪರಿಷತ್‌ಸದಸ್ಯರು.
ಏಪ್ರಿಲ್‌ ಮಾಹೆಯಲ್ಲಿ ಬಿದ್ದ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 592ಮನೆಗಳ ಪೈಕಿ 66ಮನೆಗಳು ಸಂಪೂರ್ಣ ನಾಶಗೊಂಡಿವೆ. 526ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೇ ಮಾಹೆಯಲ್ಲಿ 220ಮನೆಗಳು ಹಾನಿಗೊಳಗಾಗಿದ್ದು, 1ಮನೆ ಪೂರ್ಣಪ್ರಮಾಣದಲ್ಲಿ ಹಾಗೂ 219ಮನೆಗಳು ಭಾಗಶಃ ಹಾನಿಗೊಳಗಾಗಿದೆ. ಮನೆ ಸಂತ್ರಸ್ಥರ ನೆರವಿಗೆ ಈವರೆಗೆ ಯಾರೊಬ್ಬರೂ ಧಾವಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಎಸ್.‌ಎನ್.‌ಚನ್ನಬಸಪ್ಪ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್‌ಅವರು ಮಾತನಾಡಿ, ಸಂತ್ರಸ್ಥ ಕುಟುಂಬದವರಿಗೆ ತಕ್ಷಣದ ಪರಿಹಾರ ಕ್ರಮವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ದೊರಕಿಸಿಕೊಡಬೇಕು. ಅಲ್ಲದೆ ಭಾಗಶಃ ಅಥವಾ ಪೂರ್ಣಪ್ರಮಾಣದ ಮನೆ ನಾಶಗೊಂಡವರ ಮಾಹಿತಿ ಪಡೆದು, ಅವರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸಿಕೊಡುವಂತೆ ಸೂಚಿಸಿದರು.
ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವ ವಿದ್ಯುತ್‌ಸರಬರಾಜು ಮಾಡುವಲ್ಲಿ ತೀವ್ರತರಹದ ವ್ಯತ್ಯಯವಾಗುತ್ತಿದೆ. ಅದಕ್ಕಾಗಿ ಶಾಶ್ವತ ಪರಿಹಾರ ನೀಡಬೇಕು. ಕೈಗಾರಿಕಾ ಘಠಕಗಳಿಗೆ ನಿರಂತರ ವಿದ್ಯುತ್‌ ಸರಬರಾಜು ಮಾಡಲು ಅಗತ್ಯವಾಗಿರುವ ಪವರ್‌ಸ್ಟೇಷನ್‌ನಿರ್ಮಿಸಲು 2 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ ಎಂದು ಶಾಸಕ ಚನ್ನಬಸಪ್ಪ ಅವರು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಚಿವ ಕೆ.ಜೆ.ಜಾರ್ಜ್‌ಅವರು ಮಾತನಾಡಿ, ಸದರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ನಗರದ ಹೊರವಲಯದ ಗೋವಿಂದಾಪುರದಲ್ಲಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯದಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ತಾತ್ಕಾಲಿಕ ವಿದ್ಯುತ್‌ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿನ ವಿದ್ಯುತ್‌ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ 280 ಮಳೆಮಾಪನ ಕೇಂದ್ರಗಳು ಇದ್ದು, ಅವುಗಳ ಪೈಕಿ ಹಾಳಾಗಿದ್ದ 200ಕ್ಕೂ ಹೆಚ್ಚಿನ ಮಳೆಮಾಪನ ಕೇಂದ್ರಗಳನ್ನು ದುರಸ್ತಿ ಮಾಡಲಾಗಿದೆ. ಕಳೆದ ಸಾಲಿನ ಬೆಳೆ ಸಮೀಕ್ಷೆಯಿಂದ ಸಂತ್ರಸ್ಥ ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಕೊಡುವಲ್ಲಿ ಆಗಿರುವ ನ್ಯೂನತೆಯನ್ನು ಸರಿಪಡಿಸುವಲ್ಲಿ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಹಾಗೂ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಪ್ರಸಕ್ತ ಸಾಲಿನ ಮಳೆ ಕೊರತೆಯಿಂದಾಗಿ ಕೆರೆಕಟ್ಟೆ ಕಾಲುವೆಗಳನ್ನು ತುಂಬಿಸಿಕೊಳ್ಳುವುದು, ಏತನೀರಾವರಿ ಸೌಲಭ್ಯ ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ. ಅದಕ್ಕಾಗಿ ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆ ಸನ್ನದ್ಧವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಭಾರೀ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮೆಸ್ಕಾಂಗೆ ಕೋಟ್ಯಾಂತರ ರೂಪಾಯಿಗಳ ವಿದ್ಯುತ್‌ಶುಲ್ಕ ಪಾವತಿಸುವುದು ಬಾಕಿ ಇದೆ. ರಾಜ್ಯದಲ್ಲಿಯೂ ನೆರೆಯ ರಾಜ್ಯಗಳಿಂದ ವಿದ್ಯುತ್‌ಖರೀದಿಸಿ ವಿತರಿಸಲಾಗುತ್ತಿದೆ. ವಿದ್ಯುತ್‌ಸರಬರಾಜು ಮಾಡಿದವರಿಗೂ ಹಣ ಪಾವತಿ ಮಾಡಬೇಕಾಗಿರುವುದರಿಂದ ಏತ ನೀರಾವರಿ ಸೌಲಭ್ಯಕ್ಕಾಗಿ ವಿದ್ಯುತ್‌ಬಳಸಿಕೊಳ್ಳುವ ಪೂರ್ವದಲ್ಲಿ ಮುಂಗಡ ಹಣ ಪಾವತಿಸುವಂತೆ ಸೂಚಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಸೋಲಾರ್‌ನಿಂದ ಏತ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಶಾಸಕರಾದ ಎಸ್.ಎನ್.‌ಚನ್ನಬಸಪ್ಪ, ಡಾ|| ಧನಂಜಯ ಸರ್ಜಿ, ಶ್ರೀಮತಿ ಬಲ್ಕೀಸ್‌ಬಾನು, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿರುದ್ಯೋಗಿ ಯುವತಿ ಮತ್ತು ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ನಡೆಸಲು ಉಚಿತ ತರಬೇತಿ ಶಿಬಿರ

0

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜುಲೈ ತಿಂಗಳ ಮೂರನೆಯ ವಾರದಿಂದ 35 ದಿನಗಳ ಕಾಲ ನಿರುದ್ಯೋಗಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಪಾರ್ಲರ್ ತರಬೇತಿ ಶಿಬಿರವನ್ನು ಏರ್ಪಡಿಸಿದೆ.

ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 45 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಯುವತಿಯರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ: 09/07/2026 ಗುರುವಾರ ಬೆಳಗ್ಗೆ 10 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ: 09/07/2026 ರೊಳಗೆ ಸಂಸ್ಥೆಯನ್ನು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050, 6363139123, 9591514154, 9686248369, 9886935603 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಏಳು ದಿನಗಳೊಳಗೆ ನೀರಿನ ಕಂದಾಯ ಪಾವ್ತಿ ಮಾಡಲು ಸಾರ್ವಜನಿಕರಿಗೆ ಸೂಚನೆ

0

ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು/ ಮಾಲೀಕರುಗಳು ನೀರಿನ ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ 7 ದಿನಗಳ ಒಳಗಾಗಿ ಪಾವತಿಸುವುದು ಕಡ್ಡಾಯ. ತಪ್ಪಿದ್ದಲ್ಲಿ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳು ಇಂದಿಗೂ ಓದುಗರ ನಂಬಿಕೆ ಕಾಯ್ದುಕೊಂಡಿವೆ- ಹಿರಿಯ ಪತ್ರಕರ್ತ ಎಸ್ .ಚಂದ್ರಕಾಂತ್

0

ಮಂಗಳೂರು ಸಮಾಚಾರ್ ಮೊದಲ ಕನ್ನಡ ಪತ್ರಿಕೆಯಾಗಿದ್ದು, ಇದು ಆರಂಭವಾದ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸ ಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಹೇಳಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೆಗಳು ಈವರೆಗೆ ಸಮಾಜ ಜಾಗೃತಿಗೆ , ಸರ್ಕಾರಗಳನ್ನು ಎಚ್ಚರಿಸಲು, ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖವಾಗಿ ಬಳಕೆಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಕ್ಷೇತ್ರವು ಪತ್ರಿಕೋದ್ಯಮವಾಗಿ ಬದಲಾಗಿದೆ ಎಂದರು.
ಇಂದು ಪತ್ರಿಕೆಗಳು ಹೊಸ ಹೊಸ ಸವಾಲು ಗಳನ್ನು ಎದುರಿಸುವಂತಾಗಿವೆ. ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು ತ್ವರಿತವಾಗಿ ಸಮಾಜದ ಮೇಲೆ ಪ್ರಭಾವ ಬೀರುತ್ತಿವೆ. ಇವುಗಳ ನಡುವೆಯೂ ಪತ್ರಿಕೆಗಳು ಓದುಗರ ನಂಬಿಕೆಯನ್ನು ಕಾಯ್ದುಕೊಂಡಿವೆ ಎಂದರು.
ರೋಟರಿ ಮಾಜಿ ಸಹಾಯಕ ಗೌರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಹಿರಿಯರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಸ್. ಚಂದ್ರಕಾಂತ್ ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕೆ. ಶೇಷಗಿರಿ,ಯವರು ಮಾತನಾಡುತ್ತಾ ಚಂದ್ರಕಾಂತ್ ರವರು ಸಾಕಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದು ಅವರ ಸಾಧನೆ ತುಂಬಾ ವಿಶೇಷವಾಗಿದೆ ಇಂದು ಪತ್ರಿಕೋದ್ಯಮ ನಡೆಸುವುದು ಒಂದು ದೊಡ್ಡ ಸವಾಲಾಗಿದೆ ಎಂದು ನುಡಿದರು ಕಾರ್ಯದರ್ಶಿ ಆರ್. ಮನೋಹರ್ , ಮಾಜಿ ಅಧ್ಯಕ್ಷ ಸತೀಶ್ ಚಂದ್ರ,ಸಂತೋಷ ನಿರ್ದೇಶಕರಾದ ಸಿ.ಕೆ. ವಿಜಯಕುಮಾರ್ ಪತ್ರಿಕಾ ಬಳಗದ ವಿ.ಟಿ. ಅರುಣ್, ಅಭಿನಂದನ್, ಬಿ.ಚನ್ನಬಸಪ್ಪ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು- ಡಾ.ಹೆಚ್.ಎಂ.ಶಿವಕುಮಾರ್

0

ನಮ್ಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವು ದಿನಾಂಕ 02-07-2026 ರಂದು ಬೆಳಿಗ್ಗೆ 11.00 ಗಂಟೆಗೆ ಶಾಲಾ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಹೆಚ್ ಎಂ ಶಿವಕುಮಾರ್ ರವರು ಶಾಲೆಯ ಧ್ವಜ ಹಾಗೂ 4 ಹೌಸ್ ಗಳ ಧ್ವಜವನ್ನು ಅನಾವರಣಗೊಳಿಸಿದರು. ಅತಿಥಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಸಮ್ಮುಖದಲ್ಲಿ ಶಾಲೆಯ ಹೆಡ್ ಬಾಯ್, ಹೆಡ್ ಗರ್ಲ್, ಹೌಸ್ ಕ್ಯಾಪ್ಟನ್‌ಗಳು, ಉಪ ಕ್ಯಾಪ್ಟನ್‌ಗಳು ಹಾಗೂ ಇತರ ವಿದ್ಯಾರ್ಥಿ ನಾಯಕರುಗಳಿಗೆ ಬ್ಯಾಡ್ಜ್‌ಗಳನ್ನು ನೀಡಲಾಯಿತು.

ತದನಂತರ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರು ಪ್ರಮಾಣ ವಚನ ಬೋಧಿಸಿದರು. ನಾಯಕರು ಪ್ರಮಾಣ ವಚನ ಸ್ವೀಕರಿಸಿ, ಶಾಲೆಯ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಹಾಗೂ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.

ಡಾ. ಹೆಚ್ ಎಂ ಶಿವಕುಮಾರ್ ರವರು ತಮ್ಮ ಸಂದೇಶದಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ, ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

Klive Special Article ಸುಸ್ಥಿರ ನಾಳೆಗಾಗಿಜಲ ಮತ್ತು ವಿದ್ಯುತ್ ಸಂರಕ್ಷಣೆ ಲೇ: ಡಾ.ಶಾಲಿನಿ ರಜನೀಶ್.ಮುಖ್ಯ ಕಾರ್ಯದರ್ಶಿ,ಕರ್ನಾಟಕ ಸರ್ಕಾರ

0

Klive Special Article ಭೂಮಿ ಮತ್ತು ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಡಲು ಜಲ ಮತ್ತು ವಿದ್ಯುತ್‌ನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ನೀರನ್ನು ಉಳಿಸುವುದು ಎಂದರೆ ವಿದ್ಯುತ್‌ನ್ನು ಸಹ ಉಳಿಸುವುದಾಗಿದೆ. ಏಕೆಂದರೆ ನೀರನ್ನು ಶುದ್ಧೀಕರಿಸಿ ಮನೆಗಳಿಗೆ ಪೂರೈಸಲು ಹೆಚ್ಚಿನ ವಿದ್ಯುತ್ ಬಳಸಲಾಗುತ್ತದೆ. ಆದ್ದರಿಂದ ಈ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ದೈನಂದಿನ ಜೀವನದಲ್ಲಿ ಸಣ್ಣ ಬದಲಾವಣೆಗಳೂ ದೊಡ್ಡ ಪರಿಣಾಮ ಉಂಟುಮಾಡಬಹುದು. ಆದುದರಿಂದ, ಕೆಲವು ಉತ್ತಮ ಅಭ್ಯಾಸಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳಬಯಸುತ್ತೇನೆ.

ಜಲ ಸಂರಕ್ಷಣೆ
ಪ್ರತಿಯೊಬ್ಬ ಜೀವಿಯ ಬದುಕಿಗೆ ನೀರು ಅತ್ಯಗತ್ಯ. ಭೂಮಿಯ ಶೇ.70 ರಷ್ಟು ಭಾಗ ನೀರಿನಿಂದ ಕೂಡಿದ್ದರೂ, ಕುಡಿಯಲು ಯೋಗ್ಯವಾದ ಸಿಹಿನೀರು ಕೇವಲ ಶೇ.2 ರಷ್ಟು ಮಾತ್ರ ಇದೆ. ಜಲ ಸಂರಕ್ಷಣೆ ಎಂದರೆ ಲಭ್ಯವಿರುವ ಶುದ್ಧನೀರನ್ನು ಸಮರ್ಥವಾಗಿ ಬಳಸುವುದು. ಹೆಚ್ಚುತ್ತಿರುವ ಜನಸಂಖ್ಯೆ, ಮಾಲಿನ್ಯ ಮತ್ತು ನಿರ್ಲಕ್ಷ್ಯದ ಬಳಕೆಯಿಂದಾಗಿ ಜಲಕ್ಷಾಮವು ಇಂದು ಜಾಗತಿಕ ಸಮಸ್ಯೆಯಾಗಿದೆ. ಆದ್ದರಿಂದ, ಭವಿಷ್ಯದ ಪೀಳಿಗೆಗೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಈಗಾಗಲೇ ಎಲ್ನಿನೊ ಹವಾಮಾನ ವೈಪರೀತ್ಯದ ಪರಿಣಾಮದಿಂದ ವಿಶ್ವದಾದ್ಯಂತ ಸಾಮಾನ್ಯ ಹವಾಮಾನ ಮಾದರಿಗಳನ್ನು ವ್ಯತ್ಯಯಗೊಳಿಸುತ್ತಿದ್ದು, ದೇಶದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಬರಗಾಲ ಮೊದಲಾದ ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ಕಾರಣವಾಗಿದೆ. ಅಲ್ಲದೇ ದೇಶದಲ್ಲಿ ಮಳೆಯ ಕೊರತೆಯುಂಟಾಗುತ್ತಿದೆ. ಇದರಿಂದ, ನಮ್ಮ ರೈತರ ಕೃಷಿ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಆದುದರಿಂದ, ನಾವು ನಮ್ಮಲ್ಲಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ ಮತ್ತು ಜೀವಜಲವಾದ ನೀರನ್ನು ಉಪಯೋಗಿಸುವಾಗ ಆದಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ.
ನೀರು ಏಕೆ ಮುಖ್ಯ?

  • ನೀರು ಜೀವನ, ಕೃಷಿ, ಕೈಗಾರಿಕೆ ಹಾಗೂ ಪರಿಸರ ವ್ಯವಸ್ಥೆಗೆ ಅತ್ಯಗತ್ಯವಾದ ಅಮೂಲ್ಯ ಮತ್ತು ಸೀಮಿತ ಸಂಪನ್ಮೂಲವಾಗಿದೆ.
  • ವೇಗವಾದ ನಗರೀಕರಣ, ಜನಸಂಖ್ಯೆಯ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯಗಳು ಜಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿವೆ.
  • ಇಂದು ನೀರನ್ನು ಸಂರಕ್ಷಿಸುವುದರಿಂದ ಭವಿಷ್ಯದ ಪೀಳಿಗೆಗಳಿಗೆ ನೀರಿನ ಲಭ್ಯತೆ ಖಚಿತವಾಗುತ್ತದೆ.
    “ನೀರನ್ನು ಮಿತವಾಗಿ ಬಳಸಿ, ಪ್ರಕೃತಿಯನ್ನು ರಕ್ಷಿಸಿ.”
    ನೀರಿನ ಸಂರಕ್ಷಣೆ ಮಾರ್ಗೋಪಾಯಗಳು:
    ಪ್ರತಿ ನಾಗರೀಕರು ಸಣ್ಣಸಣ್ಣ ಪ್ರಮಾಣದಲ್ಲಿ ನೀರನ್ನು ಉಳಿಸುವ ಪ್ರಯತ್ನವನ್ನು ಮಾಡಿದರೆ, ನಾಳೆ ದೊಡ್ಡ ಪ್ರಮಾಣದಲ್ಲಿ ನೀರಿನ ಸಂರಕ್ಷಣೆ ಮಾಡಬಹುದಾಗಿದೆ.
  • ಪ್ರತಿಯೊಂದು ನೀರಿನ ಹನಿಯೂ ಅಮೂಲ್ಯ; ನೀರಿನ ವ್ಯರ್ಥತೆಯನ್ನು ತಪ್ಪಿಸುವುದು.
  • ಸೋರಿಕೆಯಾಗಿರುವ ಕೊಳವೆಗಳು, ಪೈಪ್‌ಗಳು ಮತ್ತು ನೀರು ಸಂಗ್ರಹ ವ್ಯವಸ್ಥೆಗಳನ್ನು ತಕ್ಷಣ ದುರಸ್ತಿಮಾಡುವುದು.
  • ಮುಖ ತೊಳೆಯುವಾಗ ಹಾಗೂ ಪಾತ್ರೆ ತೊಳೆಯುವಾಗ ನೀರಿನ ಕೊಳವೆಗಳನ್ನು ನಿಲ್ಲಿಸುವುದು.
  • ಸಾಧ್ಯವಾದಷ್ಟು ಬಕೆಟ್‌ಗಳಸಿ ಸ್ನಾನ ಮಾಡುವುದು.
  • ನೀರು ಉಳಿತಾಯ ಮಾಡುವ ಉಪಕರಣಗಳನ್ನು ಅಳವಡಿಸುವುದು.
  • ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹಣೆಯನ್ನು ಅನುಸರಿಸುವುದು.
  • ಕುಡಿಯುವ ನೀರನ್ನು ತೋಟಗಾರಿಕೆ, ವಾಹನಗಳ ಸ್ವಚ್ಛತೆಯಂತಹ ಇತರೆ ಕೆಲಸಗಳಿಗೆ ಬಳಸದೇ, ತ್ಯಾಜ್ಯ ಸಂಸ್ಕರಿಸಿದ ನೀರನ್ನು ತೋಟಗಾರಿಕೆ ಮತ್ತು ಸ್ವಚ್ಛತೆಗೆ ಮರುಬಳಕೆ ಮಾಡುವುದು.
  • ಸಾಧ್ಯವಾದಷ್ಟು ನೀರಿನ ಕಡಿಮೆ ಬಳಕೆ (Reduce), ಮರುಬಳಕೆ (Reuse) ಮತ್ತು ಮರುಸಂಸ್ಕರಣೆ (Recycle) ಮಾದರಿಗಳನ್ನು ಅನುಸರಿಸುವುದು.
  • ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವಿಧಾನಗಳನ್ನು ಅಳವಡಿಸುವುದು.
  • ಕೆರೆ, ನದಿ ಹಾಗೂ ಭೂಗರ್ಭ ಜಲಮೂಲಗಳನ್ನು ಮಾಲಿನ್ಯ ಮತ್ತು ಅತಿಕ್ರಮಣದಿಂದ ರಕ್ಷಿಸುವುದು.
  • ಅಂತರ್ಜಲ ನಿರ್ವಹಣೆಗಾಗಿ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು.

ವಿದ್ಯುತ್ ಸಂರಕ್ಷಣೆ
ಆಧುನಿಕ ಜಗತ್ತಿನಲ್ಲಿ ವಿದ್ಯುತ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಕು, ಫ್ಯಾನ್, ಮೊಬೈಲ್ ಜಾರ್ಜ್ ಮತ್ತು ಕೈಗಾರಿಕೆಗಳು ಸೇರಿದಂತೆ ಎಲ್ಲದಕ್ಕೂ ವಿದ್ಯುತ್ ಬೇಕೇಬೇಕು. ಆದರೆ ವಿದ್ಯುತ್ ಅನ್ನು ಹೆಚ್ಚಾಗಿ ಕಲ್ಲಿದ್ದಲು ಸುಡುವ ಮೂಲಕ ಉತ್ಪಾದಿಸಲಾಗುತ್ತದೆ. ಇದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ಮತ್ತು ಭೂಮಿಯ ತಾಪಮಾನ ಹೆಚ್ಚುತ್ತಿದೆ. ಈ ಸಮಸ್ಯೆಗಳನ್ನು ತಡೆಯಲು ವಿದ್ಯುತ್ ಸಂರಕ್ಷಣೆ ಅತ್ಯಗತ್ಯ.
“ಇಂದಿನ ವಿದ್ಯುತ್ ಉಳಿತಾಯವೇ, ನಾಳೆಯ ಭವಿಷ್ಯದ ಆಧಾರ!”
ವಿದ್ಯುತ್ ಸಂರಕ್ಷಣೆ ಏಕೆ ಮುಖ್ಯ?

ಡಾ. ಶಾಲಿನಿರಜನೀಶ್
ಸರ್ಕಾರದ ಮುಖ್ಯ ಕಾರ್ಯದರ್ಶಿ

ವಿದ್ಯುತ್ ಉತ್ಪಾದನೆಗೆ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳ ಅಗತ್ಯವಿದೆ.

ವಿದ್ಯುತ್ ಸಂರಕ್ಷಣೆಯಿಂದ ವೆಚ್ಚ ಕಡಿಮೆಯಾಗುತ್ತದೆ, ಪರಿಸರ ಮಾಲಿನ್ಯ ತಗ್ಗುತ್ತದೆ ಮತ್ತು ಶಕ್ತಿ ಭದ್ರತೆ ಹೆಚ್ಚುತ್ತದೆ.

ಜವಾಬ್ದಾರಿಯುತ ವಿದ್ಯುತ್ ಬಳಕೆ ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾಗಿದೆ.
ವಿದ್ಯುತ್ ಸಂರಕ್ಷಣೆ ಮಾರ್ಗೋಪಾಯಗಳು:

ಬಳಕೆಯಿಲ್ಲದಾಗ ದೀಪಗಳು, ಫ್ಯಾನ್‌ಗಳು ಮತ್ತು ಇತರ ಉಪಕರಣಗಳನ್ನು ಆರಿಸುವುದು. ಸಾಮಾನ್ಯ ಬಲ್ಬುಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಬಳಸುವುದು.

ಮೇಲ್ಛಾವಣಿ ಸೌರ ವ್ಯವಸ್ಥೆಗಳು ಮತ್ತು ನವೀಕರಿಸಬಹುದಾದ ಶಕ್ತಿಮೂಲಗಳನ್ನು ಉತ್ತೇಜಿಸುವುದು, ಸೋಲಾರ್ ಉಪಕರಣಗಳನ್ನು ಬಳಸುವುದು.

ಸಾಧ್ಯವಾದಷ್ಟು ನೈಸರ್ಗಿಕ ಬೆಳಕು ಮತ್ತು ಗಾಳಿಯನ್ನು ಬಳಸುವುದು.

ಚಾರ್ಜರ್‌ಗಳು ಮತ್ತು ವಿದ್ಯುತ್ ಸಾಧನಗಳನ್ನು ಬಳಕೆಯ ನಂತರ ಬೇರ್ಪಡಿಸುವುದು.

ಏರ್‌ಕಂಡೀಷನರ್‌ಗಳನ್ನು 24–26°C ತಾಪಮಾನದಲ್ಲಿ ನಿರ್ವಹಿಸಿ.

ಶಾಲೆ/ಕಾಲೇಜುಗಳು ಮತ್ತು ಕಚೇರಿಗಳಲ್ಲಿ ನಿಯಮಿತ ವಿದ್ಯುತ್ ಲೆಕ್ಕಪರಿಶೋಧನೆ ನಡೆಸುವುದು.

ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ವಿದ್ಯುತ್ ಉಳಿಸುವ ಪದ್ಧತಿಗಳನ್ನು ಅನುಸರಿಸುವುದು.

ಮಕ್ಕಳಿಗೆ ಮತ್ತು ಸಮುದಾಯಕ್ಕೆ ವಿದ್ಯುತ್ ಸಂರಕ್ಷಣೆಯ ಮಹತ್ವವನ್ನು ತಿಳಿಸುವುದು.
ವಿದ್ಯುತ್ ಸಂರಕ್ಷಣೆ ಚಟುವಟಿಕೆಗಳು :

ಶಾಲೆ/ಕಾಲೇಜು ಮತ್ತು ಕಚೇರಿಗಳಲ್ಲಿ ಜಲ ಮತ್ತು ವಿದ್ಯುತ್ ಸಂರಕ್ಷಣಾ ಪ್ರತಿಜ್ಞಾ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಜಾಗೃತಿ ಮೆರವಣಿಗೆಗಳು ಮತ್ತು ಬೀದಿನಾಟಕಗಳನ್ನು ಆಯೋಜಿಸುವುದು.

ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳನ್ನು ಪ್ರದರ್ಶಿಸುವುದು.

ಸಮುದಾಯದ ಭಾಗವಹಿಸುವಿಕೆಯಿಂದ ಜಲಸಂರಕ್ಷಣಾ ವಾರ ಮತ್ತು ವಿದ್ಯುತ್ ಸಂರಕ್ಷಣಾ ದಿನವನ್ನು ಆಚರಿಸುವುದು.

ಮನೆಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳಲಿ ಜಲ ಹಾಗೂ ಶಕ್ತಿ ದಕ್ಷ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
ವಿದ್ಯುತ್ ಅನ್ನು ಉತ್ಪಾದಿಸಲು ಪ್ರಮುಖವಾಗಿ ನೀರನ್ನು ಬಳಸಲಾಗುವುದರಿಂದ, ರಾಜ್ಯದ ಶೇ. 15-20 ರಷ್ಟು ವಿದ್ಯುತ್ ಉತ್ಪಾದನೆ ಇದರಿಂದ ಆಗುತ್ತಿದೆ. ಒಂದು ವೇಳೆ, ನೀರಿನ ಕೊರತೆಯಾದರೆ, ನೀರಿನಿಂದ ಉತ್ಪಾದಿಸುವ ವಿದ್ಯುತ್ ಕೊರತೆ ಸಹ ಉಂಟಾಗುತ್ತದೆ. ಇದರಿಂದಾಗಿ, ದೈನಂದಿನ ಬಳಕೆಗಾಗಿ ಲಭ್ಯವಾಗುವ ವಿದ್ಯುತ್ ಪ್ರಮಾಣ ಕಡಿಮೆಯಾಗುತ್ತದೆ. ಆದುದರಿಂದ, ಸಾರ್ವಜನಿಕರು ನೀರಿನ ಮಿತವ್ಯಯ ಅಭ್ಯಾಸಗಳನ್ನು ಸ್ವಯಂಪ್ರೇರಿತರಾಗಿ ರೂಢಿಸಿಕೊಳ್ಳುವುದರಿಂದ, ನಮ್ಮ ನಾಡಿಗೆ, ದೇಶಕ್ಕೆ ಮತ್ತು ಈ ಭೂಮಿಗೆ ಇದರಿಂದ ಒಳಿತಾಗುತ್ತದೆ ಎಂಬುದು ನನ್ನ ಆಶಾಭಾವನೆ.
“ಬನ್ನಿ! ಇಂದೇ ಜಲ ಮತ್ತು ವಿದ್ಯುತ್‌ನ್ನು ಸಂರಕ್ಷಿಸೋಣ – ಸುಸ್ಥಿರತೆ, ಸಮೃದ್ಧಿ ಹಾಗೂ ಭವಿಷ್ಯದ ಪೀಳಿಗೆಗಳಿಗೆ ಉತ್ತಮ ಜೀವನ ಮಟ್ಟವನ್ನು ಖಚಿತಪಡಿಸೋಣ.”

Karnataka State Road Transport Corporation ಮುಂಗಡ ನೀಡಿ ಬಸ್ ಪಾಸ್ ಪಡೆದಿದ್ದ ವಿದ್ಯಾರ್ಥಿಗಳು, ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಲು ಪ್ರಕಟಣೆ

0

Karnataka State Road Transport Corporation ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‌ಪಾಸ್ ವಿತರಣಾ ಕಾರ್ಯವನ್ನು ಮೇ ತಿಂಗಳಿನಿಂದ ಆರಂಭಿಸಿದ್ದು, ಸರ್ಕಾರದ ಆದೇಶದಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಜೂ. 12 ರಿಂದ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ.
ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಪಡೆದು ವಿತರಿಸಲಾದ ಪಾಸ್‌ಗಳ ಸಂಪೂರ್ಣ ಶುಲ್ಕವನ್ನು ಅರ್ಜಿ ಸಲ್ಲಿಸಿದ 7 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುವುದು ಎಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶುಲ್ಕ ಪಾವತಿಸಿ ಬಸ್ ಪಾಸ್‌ಗಳನ್ನು ಪಡೆದಿರುವ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗಾಗಿ ಸರ್ಕಾರದ ಸೇವಾಸಿಂಧು https://sevasindhuservices.karnataka.gov.in/buspassservices/ ಪೋರ್ಟಲ್ ನಲ್ಲಿ ಒದಗಿಸಿರುವ ಲಿಂಕ್ ಮುಖಾಂತರ ಮೊಬೈಲ್ ಸಂಖ್ಯೆ/ ಓಟಿಪಿ ನಮೂದಿಸಿ, ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಆಧಾರ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿರಬೇಕು ಹಾಗೂ ತಮ್ಮ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು. ಅರ್ಜಿ ಇರುವುದಿಲ್ಲ7 ದಿನಗಳ ಒಳಗೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಎನ್ ಇ ಎಫ್ ಟಿ /ಆರ್ ಟಿ ಜಿ ಎಸ್ ಮೂಲಕ ಪಾಸ್ ಮೊತ್ತ ಮರುಪಾವತಿಯಾಗುವುದು. ಹಾಗೂ ಮರುಪಾವತಿಯಾಗಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ರವಾನಿಸಲಾಗುವುದು. ವಿದ್ಯಾರ್ಥಿಗಳು ಈ ಸಂಬಂಧ ಯಾವುದೇ ಕೌಂಟರ್‌ಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

B.Y. Raghavendra ಗಡಿ ಭದ್ರತಾ ಪಡೆಯ ಸೇವೆ ಬಗ್ಗೆ ಪ್ರವಾಸದಲ್ಲಿ ಪ್ರತ್ಯಕ್ಷ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಬಿ.ವೈ.ರಾಘವೇಂದ್ರ

0

B.Y. Raghavendra ಗೃಹ ವ್ಯವಹಾರಗಳ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ತಂಡದ ಸದಸ್ಯರಾಗಿ ಸಂಸದ ಬಿ.ವೈ.ರಾಘವೇಂದ್ರ ಪ್ರವಾಸ ಸಿಕ್ಕಿಂ ರಾಜ್ಯ ಕೈಗೊಂಡಿದ್ದರು.

ಸಿಕ್ಕಿಂನ ನಾಥು ಲಾ ಪಾಸ್ ಹಾಗೂ ತ್ಸೋಂಗೋ ಸರೋವರಕ್ಕೆ ಭೇಟಿ ನೀಡಿದ್ದರು.

14,000 ಅಡಿಗೂ ಹೆಚ್ಚಿನ ಎತ್ತರದಲ್ಲಿರುವ ನಾಥು ಲಾ ಪಾಸ್, ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಗಡಿ ಪ್ರದೇಶಗಳಲ್ಲಿ ಒಂದಾಗಿದೆ. ಹಿಮಾಲಯದ ಮಡಿಲಿನಲ್ಲಿರುವ ತ್ಸೋಂಗೋ ಸರೋವರ ತನ್ನ ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಸಿಕ್ಕಿಂನ ಹೆಮ್ಮೆಯ ತಾಣವಾಗಿ ಕಂಗೊಳಿಸುತ್ತದೆ.

ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಯೋಧರೊಂದಿಗೆ ಸಂವಾದ ನಡೆಸಿ, ಗಡಿಭಾಗದ ಭದ್ರತಾ ವ್ಯವಸ್ಥೆ ಹಾಗೂ ಪ್ರತಿಕೂಲ ಹವಾಮಾನದಲ್ಲೂ ದೇಶದ ಗಡಿಯನ್ನು ಅಚಲವಾಗಿ ಕಾಪಾಡುವ ಅವರ ಸೇವೆ ಮತ್ತು ಸವಾಲುಗಳ ಕುರಿತು ಅಧ್ಯಯನ ತಂಡ ಮಾಹಿತಿ ಪಡೆಯಿತು.

B.Y. Raghavendra ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶದ ಗಡಿಯನ್ನು ಕಾಯುತ್ತಿರುವ ಭಾರತೀಯ ಸೇನೆಯ ಪ್ರತಿಯೊಬ್ಬ ಯೋಧನಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಅವರ ಶೌರ್ಯ, ತ್ಯಾಗ ಮತ್ತು ಅಚಲ ಸೇವಾಭಾವವೇ ನಮ್ಮ ರಾಷ್ಟ್ರದ ಭದ್ರತೆಯ ನಿಜವಾದ ಶಕ್ತಿ ಎಂದು ಅಧ್ಯಯನ ತಂಡದ ಪ್ರವಾಸ ಪೂರೈಸಿದ ನಂತರ ಬಿ.ವೈ.ರಾಘವೇಂದ್ರ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.