ಭಕ್ತನಾದವನು ದೇವರ ಸನ್ನಿಧಿಯಲ್ಲಿ ಮಗುವಾಗಿರಬೇಕೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ|| ಭೀಮೇಶ್ವರ ಜೋಷಿ ಹೇಳಿದರು.
ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣಮುಖ ಹಾಗೂ ಗರ್ಭಗುಡಿಗೆ ರಜತದ್ವಾರ ಸಮರ್ಪಿಸಿ ಆರ್ಶೀವಚನ ನೀಡಿದ ಅವರು, ದೇವರ ಮುಂದೆ ನಾವೆಲ್ಲರೂ ಮಗುವಿನಂತೆ ವರ್ತಿಸಬೇಕು ಆಗ ಮಾತ್ರ ದೇವಿ ತಾಯಿ ಹೃದಯದಿಂದ ನಮ್ಮನ್ನೆಲ್ಲಾ ಹರಸುತ್ತಾಳೆ ಎಂದರು.
ಮಾರಿಕಾಂಬೆ ದೇವಿಯ ಕಣ್ಣು ಉಗ್ರ ಸ್ವರೂಪವಾಗಿರುತ್ತದೆ. ಅಂದರೆ ನಾವು ತಪ್ಪಾಗಿ ವರ್ತಿಸಿದಾಗ ಮಾತ್ರ ಅವಳು ಉಗ್ರದೃಷ್ಟಿ ಬೀರುತ್ತಾಳೆ. ನಾವು ಸರಿದಾರಿಯಲ್ಲಿದ್ದರೆ ಮಾತೃಹೃದಯದಿಂದ ನಮ್ಮೆಲ್ಲರನ್ನು ಆಶೀರ್ವದಿಸುತ್ತಾಳೆ ಎಂದ ಅವರು, ದೇವರ ಬಳಿ ನಾವು ಏನನ್ನೂ ಕೇಳಬಾರದು, ಬದಲಾಗಿ ನಾನು ಯಾವುದಕ್ಕೆ ಅರ್ಹನಿದ್ದೇನೋ ಅದೆಲ್ಲವನ್ನು ಅನುಗ್ರಹಿಸು ಎಂದು ಬೇಡಿಕೊಂಡರೆ ದೇವಿ ಸಂತುಷ್ಟಳಾಗಿ ಎಲ್ಲವನ್ನೂ ದಯಪಾಲಿಸುತ್ತಾಳೆ. ನಾವು ಅದನ್ನು ಕೊಡು, ಇದನ್ನು ಕೊಡು ಎಂದು ಕೇಳಿದರೆ ದೇವಿ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿದರು.
ಗ್ರಾಮೀಣಭಾಗದಲ್ಲಿ ಜಗಳಗಳಾದಾಗ ಅಥವಾ ವೈಮನಸ್ಸು ಉಂಟಾದಾಗ ಒಬ್ಬರಿಗೊಬ್ಬರು ನಿನಗೆ ಮುಂದೆ ಇದೆ ಮಾರಿಹಬ್ಬ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಅಂದರೆ ಮಾರಿಹಬ್ಬದಲ್ಲಿ ನಾವು ಬಲಿಯನ್ನು ಕೊಡುತ್ತೇವೆ. ಅದೇ ರೀತಿ ನಮ್ಮಲ್ಲಿರುವ ಅಧರ್ಮ, ದ್ವೇಷ, ಅಸೂಯೆಗಳನ್ನು ತೆಗೆದುಹಾಕುವುದಕ್ಕೆ ಮಾರಿಹಬ್ಬದ ಉಲ್ಳೇಖವನ್ನು ಮಾಡುತ್ತಾರೆ ಎಂದು ಹೇಳಿದರು.
ಈವರ್ಷ ಅನಾವೃಷ್ಟಿಯ ಮುನ್ಸೂಚನೆ ತೋರುತ್ತಿದೆ. ಈ ವೇಳೆಗೆ ತುಂಗಾನದಿ ೨ ಬಾರಿ ತುಂಬಬೇಕಿತ್ತು. ಆದರೆ ಇಂದು ನದಿಯ ತಳಭಾಗ ಕಾಣುತ್ತಿದೆ. ಆದ್ದರಿಂದ ಈ ಬಾರಿ ಉತ್ತಮ ಮಳೆಯನ್ನು ದಯಪಾಲಿಸಿ ಜಲಸಮೃದ್ದಿಯನ್ನು ನೀಡಿ ಸುಭೀಕ್ಷತೆಯನ್ನು ಎಲ್ಲೆಡೆ ತಾಯಿ ದಯ ಪಾಲಿಸಲಿ ಎಂದು ನಾವುಗಳು ದೇವಿಯಲ್ಲಿ ಮೊರೆ ಇಟ್ಟಿದ್ದೇವೆ. ಆ ತಾಯಿ ನಮ್ಮೆಲ್ಲಾ ಕಷ್ಟಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಈ ಸ್ಥಳದಲ್ಲಿ ಮಾರಿಗದ್ದುಗೆ ಮಾತ್ರ ಇತ್ತು. ಇದೀಗ ಆಡಳಿತ ಮಂಡಳಿಯವರ ಪರಿಶ್ರಮ, ಕಾರ್‍ಯವೈಖರಿಯಿಂದ ಸುಂದರವಾದ ದೇವಸ್ಥಾನವಾಗಿದೆ. ಪ್ರತಿನಿತ್ಯ ಶ್ರದ್ದಾ ಭಕ್ತಿಯ ಕೇಂದ್ರವಾಗಿ ರೂಪಗೊಂಡಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿ ಕೇವಲ ಮಾರಿಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ವರ್ಷಪೂರ್ತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಜೊತೆಗೆ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ನಿಜಕ್ಕೂ ಆಡಳಿತ ಮಂಡಳಿಯ ಕಾರ್ಯವೈಖರಿ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಸಮಿತಿ ಮುಖಂಡರುಗಳಾದ ಉಮಾಪತಿ, ಎಸ್.ಸಿ.ಲೋಕೇಶ್, ಸುನಿಲ್, ಚಂದ್ರಶೇಖರ್, ಜಯಲಕ್ಷ್ಮಿ ಈಶ್ವರಪ್ಪ, ಇತರರು ಉಪಸ್ಥಿತರಿದ್ದರು.
ದೇವರ ಬಳಿ ಏನನ್ನೂ ಕೇಳಬಾರದು.ಬದಲಾಗಿ ನಾನು ಯಾವುದಕ್ಕೆ ಅರ್ಹನೋ ಅದೆಲ್ಲ ಅನುಗ್ರಹಿಸೆಂದು ಬೇಡಬೇಕು- ಡಾ.ಭೀಮೇಶ್ವರ ಜೋಷಿ
Date:
