Tuesday, August 11, 2026
Tuesday, August 11, 2026
Home Blog Page 207

Chethan K. Gowda ನಿರ್ದಿಷ್ಠ ಗುರುಗಳಿಲ್ಲದ, ಜನರ ಹಿತಾಸಕ್ತಿ ಕಡೆಗಣಿಸಿದ ಬಜೆಟ್- ಚೇತನ್ ಕೆ. ಗೌಡ

0

ಕೇಂದ್ರ ಸರ್ಕಾರವು ಮಂಡಿಸಿರುವ 2026ರ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ದಶಕಗಳ ಅನ್ಯಾಯವನ್ನು ಮುಂದುವರಿಸಿದಂತಿದೆ. ದೇಶದ ಆರ್ಥಿಕತೆಗೆ ಅತಿ ಹೆಚ್ಚು ಜಿಎಸ್‌ಟಿ ಮತ್ತು ಆದಾಯ ತೆರಿಗೆಯನ್ನು ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ, ಕೇಂದ್ರದಿಂದ ಮರಳಿ ಸಿಗುತ್ತಿರುವ ಪಾಲು ಮಾತ್ರ ಅತ್ಯಂತ ನಗಣ್ಯವಾಗಿದೆ ಕರ್ನಾಟಕ ರಾಜ್ಯ ಜವಳಿ ಮತ್ತು ಕೈಮಗ್ಗ (ವಿದ್ಯುತ್) ನಿಗಮದ ಅಧ್ಯಕ್ಷರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಚೇತನ್ ಕೆ.ಗೌಡ ಅವರು ತಿಳಿಸಿದ್ದಾರೆ.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಈ ಹಿಂದೆ ಇದ್ದ ಶೇ. 4.71ರಷ್ಟು ಪಾಲನ್ನು ಶೇ. 3.64ಕ್ಕೆ ಇಳಿಸಿರುವುದು ರಾಜ್ಯದ ಅಭಿವೃದ್ಧಿಗೆ ದೊಡ್ಡ ಹೊಡೆತ ನೀಡಿದೆ. ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿಗೆ ಕೇವಲ 13 ರಿಂದ 15 ಪೈಸೆ ಮಾತ್ರ ಮರಳಿ ಪಡೆಯುತ್ತಿರುವುದು ಒಕ್ಕೂಟ ವ್ಯವಸ್ಥೆಯ ಅಸಮಾನತೆಯನ್ನು ಎತ್ತಿ ತೋರಿಸುತ್ತಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ರಾಜ್ಯ ಸಾಧಿಸಿದ ಯಶಸ್ಸನ್ನೇ ಮಾನದಂಡವಾಗಿ ಬಳಸಿ ಅನುದಾನ ಕಡಿತಗೊಳಿಸಿರುವುದು ರಾಜ್ಯದ ಪ್ರಗತಿಗೆ ಮುಳುವಾಗಿದೆ ಎಂದಿದ್ದಾರೆ.

ಇನ್ನು ಮಲೆನಾಡು ಭಾಗದ ದೃಷ್ಟಿಕೋನದಿಂದ ನೋಡಿದರೆ, ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳ ಜೀವನಾಡಿಯಾದ ಅಡಿಕೆ ಮತ್ತು ಕಾಫಿ ಬೆಳೆಗಾರರ ನಿರೀಕ್ಷೆಗಳು ಸಂಪೂರ್ಣವಾಗಿ ಹುಸಿಯಾಗಿವೆ. ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆಗೆ ಬಾಧಿಸಿರುವ ಮಾರಕ ಎಲೆ ಚುಕ್ಕೆ ರೋಗದ ಸಂಶೋಧನೆಗೆ ಅಥವಾ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಜಿಲ್ಲೆಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ರೈಲ್ವೆ ಯೋಜನೆಗಳಾದ ಶಿವಮೊಗ್ಗ-ಹರಿಹರ ಮತ್ತು ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಗಳಿಗೆ ಈ ಬಾರಿಯೂ ನಿರೀಕ್ಷಿತ ವೇಗದಲ್ಲಿ ಅನುದಾನ ಸಿಗದಿರುವುದು ದಶಕಗಳ ಕಾಲದ ಬೇಡಿಕೆಗಳನ್ನು ಗಾಳಿಗೆ ತೂರಿದಂತಾಗಿದೆ. ದಕ್ಷಿಣ ಕನ್ನಡ ಅಥವಾ ಕರಾವಳಿ ಭಾಗಕ್ಕೆ ಮಲೆನಾಡಿನಿಂದ ನೇರ ರೈಲು ಸಂಪರ್ಕ ಕಲ್ಪಿಸುವ ಘಾಟಿ ಪ್ರದೇಶದ ಯೋಜನೆಗಳ ಬಗ್ಗೆಯೂ ಬಜೆಟ್ ಮೌನವಹಿಸಿದೆ.
ನೀರಾವರಿ ಕ್ಷೇತ್ರದಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದ್ದು, ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ 2023ರಲ್ಲಿ ಘೋಷಿಸಲಾಗಿದ್ದ 5,300 ಕೋಟಿ ರೂಪಾಯಿಗಳ ಅನುದಾನ ಇಂದಿಗೂ ಪೂರ್ಣ ಪ್ರಮಾಣದಲ್ಲಿ ತಲುಪದೆ ವಿಳಂಬವಾಗುತ್ತಿದೆ. ಇದು ಮಲೆನಾಡು ಮತ್ತು ಬಯಲುಸೀಮೆಯ ನೀರಾವರಿ ಹಿತಾಸಕ್ತಿಗೆ ಮಾರಕವಾಗಿದೆ. ಒಟ್ಟಾರೆಯಾಗಿ, ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕೇಳಿದ ಎನ್‌ಡಿಆರ್‌ಎಫ್ ಅನುದಾನದಿಂದ ಹಿಡಿದು, ಬೆಂಗಳೂರು ಸಬರ್ಬನ್ ರೈಲ್ವೆ ಮತ್ತು ಮಲೆನಾಡಿನ ಪ್ರಮುಖ ಯೋಜನೆಗಳವರೆಗೆ ಕೇಂದ್ರವು ನಿರ್ಲಕ್ಷ್ಯದ ಧೋರಣೆಯನ್ನು ತಳೆದಿದೆ. ರಾಜ್ಯದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ, ಕರ್ನಾಟಕದ ಹಕ್ಕುಗಳನ್ನು ಪಡೆಯಲು ದಶಕಗಳಿಂದ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯವಾಗಿದೆ ಎಂದೂ ಹೇಳಿದ್ದಾರೆ.

DC Shivamogga ಮಾರಿಕಾಂಬೆ ಜಾತ್ರೆ ಪ್ರಯುಕ್ತ ಸಾಗರದಲ್ಲಿ ವಾಹನ ಸಂಚಾರಿ ಮಾರ್ಗಗಳ ತಾತ್ಕಾಲಿಕ ಬದಲಾವಣೆ: ‘ಡೀಸಿ’ ಆದೇಶ

0

DC Shivamogga ಶಿವಮೊಗ್ಗ ಜಿಲ್ಲೆ ಸಾಗರ ಪೇಟೆಯಲ್ಲಿ ನಡೆಯಲಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ದ್ವಿಚಕ್ರ, ಲಘುವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ, ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ.
ಸಾಗರ ಟೌನ್ ಪೊಲೀಸ್ ಠಾಣೆಯ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ.ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದವರೆಗೆ ಪ್ಯಾರಲಲ್ ರಸ್ತೆಗಳು, ಅಂಬೇಡ್ಕರ್ ಸರ್ಕಲ್ (ಲಿಂಬು ಸರ್ಕಲ್) ನಿಂದ ಸಾಗರ ಸರ್ಕಲರ್‌ವರೆಗೆ, ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್‌ನಿಂದ ಸಾಗರ ಸರ್ಕಲ್‌ವರೆಗೆ ವಾಹನ ಸಂಚಾರ ನಿಷೇಧಿಸಿದೆ.
ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್. ವೃತ್ತದವರೆಗೆ ಎಲ್ಲಾ ಮಾದರಿ ವಾಹನಗಳ ನಿಲುಗಡೆ ನಿಷೇಧ ಹಾಗೂ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ಎಲ್ಲಾ ಮಾದರಿಯ ಸರಕು ವಾಹನಗಳ ಸಂಚಾರ ನಿಷೇಧ. ಸರ್ಕರಿ ಆಸ್ಪತ್ರೆಯ ಹಿಂದಿನ ಗೇಟ್‌ನಿಂದ ಚರ್ಚ್ ಪಕ್ಕದ ರಸ್ತೆ ಮತ್ತು ಖಚಾನೆ ರಸ್ತೆಗಳು, ಬಿ.ಹೆಚ್.ರಸ್ತೆವರೆಗೆ ವಾಹನ ನಿಲುಗಡೆ ನಿಷೇಧ (ಆಸ್ಪತ್ರೆಗೆ ಬರುವ ವಾಹನ ಮತ್ತು ಅಂಬ್ಯುಲೆನ್ಸ್ ಸುಗಮ ಸಂಚಾರದ ಅನುಕೂಲಕ್ಕಾಗಿ). ವರದಹಳ್ಳಿ ಕ್ರಾಸ್‌ನಿಂದ ಹಂಪಯ್ಯನ ಕೊಳದವರೆಗೆ ಫೆ. 03 ರಿಂದ ಫೆ. 20 ರವರೆಗೆ (ಜಾತ್ರೆ ಅವಧಿಯಲ್ಲಿ) ಎನ್.ಹೆಚ್.-69 ಬಿ.ಹೆಚ್ ರಸ್ತೆಯಲ್ಲಿ ಸರದಿಯಂತೆ ಲಘು 04 ಚಕ್ರದ ವಾಹನ ಮತ್ತು ದ್ವಿಚಕತ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.
DC Shivamogga ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತೀಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳ ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ.

ಶಿವಮೊಗ್ಗ ವಿದ್ಯಾನಗರದಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ

0

ವಿದ್ಯಾನಗರ 3ನೇ ಕ್ರಾಸ್, ಪುಷ್ಪ ಲೇಔಟ್ ವಾಸಿ ಪೀತಮ್ ಎಂಬುವವರ ತಮ್ಮ ಚಿನ್ನಬೆಳ್ಳಿ ವ್ಯಾಪಾರಿ ಗೌತಮ್ ಎಂಬ ಎಂಬ 33 ವರ್ಷದ ವ್ಯಕ್ತಿ ಜ.29 ರಂದು ಬೆಳಗ್ಗೆ ಮನೆಯಿಂದ ಉಪ್ಪಾರಕೇರಿಯ ಅಂಗಡಿಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ತೆಳುವಾದ ಗಡ್ಡಮೀಸೆ ಬಿಟ್ಟಿರುತ್ತಾರೆ. ಎಡಗೈ ಮೇಲೆ SRG ಎಂಬ ಹಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್ ಹಾಗೂ ನೀಲಿ ಜೀನ್ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಕುರಿತು ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

S.N.Chennabasappa ಶಾಸಕ ಚೆನ್ನಿ ಅವರಿಂದ ಕಾಮಗಾರಿಗಳಿಗೆ ಭೂಮಿಪೂಜೆ

0

S.N.Chennabasappa ಶಿವಮೊಗ್ಗ ನಗರವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂದು ನಗರದ ಬೊಮ್ಮನಕಟ್ಟೆ ಹಾಗೂ ನ್ಯೂ ಮಂಡ್ಲಿ ಪ್ರದೇಶಗಳಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ರಸ್ತೆ ನಿರ್ಮಾಣ ಹಾಗೂ ಯುಜಿಡಿ ವ್ಯವಸ್ಥೆಯ ಅಭಿವೃದ್ಧಿ ಕಾಮಗಾರಿಗಳಿಗೆ ನ್ಯೂ ಮಂಡ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಡಾವಣೆಗಳಲ್ಲಿ ಸುಗಮ ಸಂಚಾರ ಹಾಗೂ ನೈರ್ಮಲ್ಯ ಕಾಪಾಡುವುದು ನಮ್ಮ ಆದ್ಯತೆಯಾಗಿದ್ದು, ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರ ಅನುಕೂಲಕ್ಕಾಗಿ ಈ ಪ್ರದೇಶದ ಪ್ರತಿಯೊಂದು ಗಲ್ಲಿಯೂ ಅಭಿವೃದ್ಧಿ ಕಾಣಲಿದೆ.

S.N.Chennabasappa ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ್, ಬಿಜೆಪಿ ಶಿವಮೊಗ್ಗ ನಗರದ ಪ್ರಧಾನ ಕಾರ್ಯದರ್ಶಿಗಳಾದ ನವಲೆ ಮಂಜು, ಸ್ಥಳೀಯ ಮುಖಂಡರು, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

MESCOM ಫೆ. 07 ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಎಂ.ಆರ್.ಎಸ್. ವಿವಿ ಕೇಂದ್ರದ ಪಿಳ್ಳಂಗಿರಿ ಮತ್ತು ಜಾವಳ್ಳಿ ಐ.ಪಿ. ಮಾರ್ಗಗಳಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿದ್ದು, ಫೆ.07 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹರ್ಳಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಹಾಗೂ ಇನ್ನಿತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

S. N. Channabasappa ಶುಭ್ರತೆಯ ಮತ್ತೊಂದು ಹೆಸರು ಮಡಿವಾಳ – ಸಮಾಜದ ಮಲಿನವನ್ನು ಸ್ವಚ್ಛಗೊಳಿಸಿದವರು ಮಾಚಿದೇವರು : ಎಸ್. ಎನ್. ಚನ್ನಬಸಪ್ಪ

0

S. N. Channabasappa ಶುಭ್ರತೆಗೆ ಮತ್ತೊಂದು ಹೆಸರೇ ಮಡಿವಾಳ. ಬಟ್ಟೆಗಳ ಮಲಿನವನ್ನು ಮಾತ್ರವಲ್ಲದೇ ಸಮಾಜದ ಮಲಿನವನ್ನೂ ತೊಳೆಯವ ಕೆಲಸವನ್ನು ಮಡಿವಾಳ ಮಾಚಿದೇವರು ಮಾಡಿದ್ದರು ಎಂದು
ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12 ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ ತಾರತಮ್ಯವನ್ನು ಹೋಗಲಾಡಿಸಲು ಹೋರಾಟ ನಡೆಸಿದ ಶರಣರಲ್ಲಿ ಮಾಚಿದೇವರು ಕೂಡ ಅಗ್ರಗಣ್ಯರಾಗಿದ್ದು ಶರಣರ ಮಲಿನ‌ ಬಟ್ಟೆಗಳನ್ನು ಶುಚಿಗೊಳಿಸುವ ಜೊತೆಗೆ ಸಮಾಜದ ಮಲಿನವನ್ನೂ ತೊಳೆಯುತ್ತಾ ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು‌ ಸಮರ್ಪಿಸಿಕೊಂಡರು.
ಸಮಾಜದಲ್ಲಿ‌ನ ಅಂಕು- ಡೊಂಕುಗಳನ್ನು ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು . ಇಂತಹ ಶರಣರ,ವಚನಕಾರರ, ಸಾಧಕರ, ನಮ್ಮ ಸಮಾಜದ ಮಹಾನ್ ಚೇತನಗಳ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು. ನಮ್ಮದು ಸನಾತನ ಸಾಂಸ್ಕೃತಿಕ ರಾಷ್ಟ್ರ. ನಮ್ಮ ದೇಶದ ಹುಟ್ಟು ಯಾವಾಗ ಆಯಿತೆಂದು ಗೊತ್ತಿಲ್ಲ. ನಮ್ಮ ದೇಶಕ್ಕೆ ಸಾವೂ ಇಲ್ಲ. ದೇಶದ ಉಳಿವಿಗೆ ನಂಬಿಕೆಗಳು ಕಾರಣವಾಗಿದೆ ಎಂದರು.
ಸಾಗರ ತಾಲೂಕು, ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ನಾಗರಾಜ ಎ.ಎಂ. ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ದೇಶ ಸುಭಿಕ್ಷವಾಗಿರಲು ಜನರನ್ನು‌ ಸರಿಪಡಿಸಬೇಕೆಂದು ಮಾಚೆದೇವರು ತಿಳಿಸಿದ್ದರು. ಕನಿಷ್ಟ ಶಿವ ಜ್ಞಾನ ಇರಬೇಕು. ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು ಕಾಯಕಯೋಗಿ ಮಾಚಿದೇವ. 12 ನೇ ಶತಮಾನದಲ್ಲಿ‌ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದ ಮಾಚಿದೇವರು, ಕೇವಲ ಬಟ್ಟೆಗಳ‌ ಮಲಿನ‌ ಮಾತ್ರವಲ್ಲ ಸಮಾಜದ ಕೊಳೆಯನ್ನು ತೆಗೆಯುವ ಕೆಲಸ ಮಾಡುತ್ತಿದ್ದರು. ಇವರ 345 ವಚನಗಳು ಲಭ್ಯವಿದ್ದು ಅತ್ಯಂತ ಸರಳ ಭಾಷೆಯಲ್ಲಿ ರಚಿಸಿರುವ ಇವರ ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುತ್ತವೆ.
ಶೂದ್ರರಿಗೆ ಶಿಕ್ಷಣ ದೊರಕಬಾರದೆಂಬ ಕಾಲಘಟ್ಟದಲ್ಲಿ ಅದನ್ನು ಮೀರಿ ಮಾಚಿದೇವರಿಗೆ ಶಿಕ್ಷಣ ನೀಡಿದವರು ಕ್ರಾಂತಿಕಾರಿ ಗುರು ಮಲ್ಲಿಕಾರ್ಜುನ ಸ್ವಾಮಿ. ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ. ಕಲ್ಯಾಣದಲ್ಲಿ ಶರಣರ ಬಟ್ಟೆ ಮಡಿ ಮಾಡುವ ಕೆಲಸ ಹಾಗೂ ಕಲ್ಯಾಣ ಕ್ಕೆ ಬರುವ ಜನರನ್ನು ಪರೀಕ್ಷಿಸುವಂತಹ ಹದಡಿ ಹಾಸುವ ಕೆಲಸವನ್ನು ಮಾಡುತ್ತಿದ್ದ ಮಾಚಿದೇವರು ಬಿಜ್ಜಳರಾಯನ ಪಟ್ಟದ ಆನೆಯನ್ನು ರಟ್ಟೆಯಿಂದ ಎಳೆದೊಗೆಯುವ ಉಲ್ಲೇಖವಿದ್ದು, ಇದು ಇವರ ಧೈರ್ಯ, ನೇರ ನುಡಿಗೆ ಹಿಡಿದ ಕನ್ನಡಿಯಾಗಿದೆ.
ಪುಸ್ತಕದ ಜ್ಞಾನಕ್ಕಿಂತ ಅನುಭವದ ಜ್ಞಾನ ಲೇಸು ಎಂದು ಸಾರಿರುವ ಮಾಚಿದೇವರು ಸಮಾಜದ
ಅಂಕು‌ ಡೊಂಕು ತಿದ್ದುವ ಕೆಲಸದ ಮತ್ತು ಕಾಯಕದ ಮೂಲಕ ಭಕ್ತಿ ತೋರುತ್ತಿದ್ದರು.
ಬಸವಣ್ಣ ನವರು ಸಹ ಮಾಚಿದೇವರಿಗೆ ಅರಿವಿನ ತಿರುಳು ಎಂದು ಬಣ್ಣಿಸಿದ್ದು ಬಸವಣ್ಣನವರು ಸೇರಿದಂತೆ ಅನೇಕ ಶಿವಶರಣರು, ಕವಿಗಳು ಮಾಚಿದೇವರ ಬಗ್ಗೆ, ಅವರ ಕಾಯಕ ನಿಷ್ಟೆ ಕುರಿತು ವಚನ ಬರೆದಿದ್ದಾರೆ. ಬಸವಣ್ಣನವರು ಕಲ್ಯಾಣದಲ್ಲಿ ಶರಣ ಸಾಹಿತ್ಯ ರಕ್ಷಣೆ ಮಾಡಬೇಕೆಂಬ ಜವಾಬ್ದಾರಿ ಯನ್ನು ಮಾಚಿದೇವರಿಗೆ ನೀಡುತ್ತಾರೆ.
ಶರಣರು ಕಲ್ಯಾಣದಿಂದ ಉಳುವಿಗೆ ಹೋದಾಗ ಅವರು ಶರಣರು ಬರೆದ ವಚನಗಳ ಹಸ್ತಪ್ರತಿಗಳನ್ನು ರಕ್ಷಿಸಲು ರಾಜ ಬಿಜ್ಜಳನ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು. ಉಳುವಿಗೆ ತೆರಳುವ ಮಾರ್ಗ ಮಧ್ಯೆ ಬೆಳಗಾವಿ ಜಿಲ್ಲೆಯ ಮುರಗೋಡು ಸಮೀಪದ ಕರಿಮನೆ ಎಂಬಲ್ಲಿ ಮೃತಪಡುತ್ತಾರೆ ಎಂದು ತಿಳಿಸಿದರು.
S. N. Channabasappa ಮಡಿವಾಳರು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಿರುವ ನಮ್ಮ ಸಮಾಜ ಸಂಖ್ಯಾ ಬಲ ಇಲ್ಲದಿರುವ ಕಾರಣ ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಅಸ್ತಿತ್ವ ಇಲ್ಲದಂತಾಗಿದ್ದೇವೆ. ಸರ್ಕಾರ ನಮ್ಮ ಸಮಾಜಕ್ಕೆ ಒಂದು ಅಸ್ತಿತ್ವ, ಗುರುತು ನೀಡಬೇಕು. ಮಾಚಿದೇವರ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಶಾಲೆಗಳಲ್ಲಿ ಜಯಂತಿ ಆಚರಿಸುವಂತಾಗಬೇಕು ಎಂದು ಸರ್ಕಾರಕ್ಕೆ ಮನವಿ‌ ಮಾಡಿದ ಅವರು‌ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಆಸ್ತಿಯಾಗಿಸೋಣ. ಎಲ್ಲ ರಂಗಗಳಲ್ಲಿ‌ ಬೆಳೆಯುವಂತೆ ಮಾಡೋಣ ಎಂದು ಕರೆ ನೀಡಿದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ಕ್ರಾಂತಿಕಾರಿ ಹೋರಾಟಗಾರರ, ವಚನಕಾರರ, ಮಹಾನ್ ಪುರುಷರ ಚರಿತ್ರೆಯನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಆಗ ಪರಿಣಾಮಕಾರಿಯಾಗಿ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು. ದೇವ ಸಂಭೂತರಾದ ಮಾಚಿದೇವರು ಸಮಾಜ ಸುಧಾರಣೆಗಾಗಿ‌ಯೇ ಭೂಮಿ‌ ಮೇಲೆ ಜನ್ಮವೆತ್ತಿ, ೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪ್ರಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಇಂತಹ ಮಹಾನ್ ಪುರುಷರ ಚರಿತ್ರೆ ಅರಿತು ಅವರ ತತ್ವಗಳನ್ನು ಪಾಲಿಸಬೇಕು ಎಂದ ಅವರು ಪ್ರಸ್ತುತ ರಾಜ್ಯ ಸರ್ಕಾರ ಸಮಾಜ‌ ಸುಧಾರಣೆಗಾಗಿಯೇ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ ಎಂದರು.
ಜವಳಿ‌ ಮೂಲ ಸೌಲಭ್ಯ ಅಭಿವೃದ್ಧಿ (ವಿದ್ಯುತ್ ಮಗ್ಗಗಳು) ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಶಿಲ್ದಾರ್ ರಾಜೀವ್,
ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಹೆಚ್ ಎಸ್ ಸದಾಶಿವಪ್ಪ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಸಮಾಜದ ಮುಖಂಡರು ಹಾಜರಿದ್ದರು.

Rajana Foundation Trust ಭಾರತವನ್ನು ತಿಳಿಯಿರಿ – ಪ್ರೌಢಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

0

Rajana Foundation Trust ರಜನಾ ಫೌಂಡೇಶನ್ ಟ್ರಸ್ಟ್, ಹೊಸಪೇಟೆ ಇವರು ಕನ್ನಡ, ಸಂಸ್ಕೃತಿ, ಸಂಸ್ಕಾರ ಮತ್ತು ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರ ಹಾಗೂ ಕುಟುಂಬ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ವಿವಿಧ ಚಟುವಟಿಕೆಗಳ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ, ಹೊಸಪೇಟೆಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ “ಭಾರತವನ್ನು ತಿಳಿಯಿರಿ” ಎಂಬ ವಿಷಯದ ಮೇಲೆ ದಿನಾಂಕ 10-01-2026 ರಂದು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಪ್ರಥಮ ಹಂತದ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂರು ಶಾಲೆಗಳ ವಿದ್ಯಾರ್ಥಿಗಳಿಗೆ ದಿನಾಂಕ 22-01-2026 ರಂದು ಹೊಸಪೇಟೆಯ ಶ್ರೀ ನರ್ಬಾದಬಾಯಿ ಪ್ರೌಢಶಾಲೆಯಲ್ಲಿ ಎರಡನೇ ಹಂತದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಈ ಅಂತಿಮ ಸ್ಪರ್ಧೆಯಲ್ಲಿ
ಹೊಸಪೇಟೆ ನೆಹರು ಕಾಲೋನಿಯ ಸರ್ಕಾರಿ ಪ್ರೌಢಶಾಲೆ – ಪ್ರಥಮ ಸ್ಥಾನ
ಶ್ರೀ ನರ್ಬಾದಬಾಯಿ ಪ್ರೌಢಶಾಲೆ – ದ್ವಿತೀಯ ಸ್ಥಾನ
ಕೆ.ಎಸ್.ಪಿ.ಎಲ್. ಪ್ರೌಢಶಾಲೆ – ತೃತೀಯ ಸ್ಥಾನ ಪಡೆದಿರುತ್ತವೆ.

ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಆಫೀಸರ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಕಮಲಾ ಗುಮಾಸ್ತೆ ಹಾಗೂ ಹೊಸಪೇಟೆಯ ಖಜಾನೆಯ ನಿವೃತ್ತ ಅಧಿಕಾರಿಗಳಾದ ಶ್ರೀ ವೆಂಕಟೇಶ್ ಮೂರ್ತಿ ಅವರು ಬಹುಮಾನ ಗಳಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳು ಮತ್ತು ಪದಕಗಳನ್ನು ಪ್ರದಾನ ಮಾಡಿದರು. ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೋತ್ಸಾಹಕಾರಿ ಮಾತುಗಳನ್ನು ಆಡಿದರು.

ಈ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿದ್ದ ರಚನಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ಸುಗಮವಾಗಿ ನಡೆಸಿಕೊಟ್ಟರು.

ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಪೂರ್ಣಗೊಳಿಸುವಲ್ಲಿ ಹೊಸಪೇಟೆಯ ರಚನಾ ಫೌಂಡೇಶನ್ ಸಂಚಾಲಕರು ಹಾಗೂ ಕಿರ್ಲೋಸ್ಕರ್ ಕಾರ್ಖಾನೆಯ ಸುರಕ್ಷತಾ ವಿಭಾಗದ ಮ್ಯಾನೇಜರ್ ಶ್ರೀ ಮುರುಳೀಧರ್ ನಾಡಿಗೇರ್ ಅವರು ಕಳೆದ ಒಂದು ತಿಂಗಳಿನಿಂದ ಶ್ರಮವಹಿಸಿ ಪ್ರಮುಖ ಪಾತ್ರವಹಿಸಿದರು.

Rajana Foundation Trust ಕಾರ್ಯಕ್ರಮವು ಭಾರತಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಗಿ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಕಮಲಾ ಗುಮಾಸ್ತೆ, ಶ್ರೀ ವೆಂಕಟೇಶ್ ಮೂರ್ತಿ ಹಾಗೂ ಈ ಕಾರ್ಯಕ್ರಮ ಆಯೋಜನೆಗೆ ನೇರ ಸಹಕಾರ ನೀಡಿದ ನರ್ಬಾದಬಾಯಿ ಪ್ರೌಢಶಾಲೆಯ ಉಪಾಧ್ಯಾಯಿನಿ ಶ್ರೀಮತಿ ರೀಥಾ ಇವರನ್ನು ಸನ್ಮಾನಿಸಿ ಧನ್ಯವಾದಗಳನ್ನು ಸಲ್ಲಿಸಲಾಯಿತು.

ವರಧಿ

ಮುರುಳೀಧರ್ ನಾಡಿಗೇರ್

ಸಿನಿಮಾಗೆ ಮಾನವ ಸಂವೇದನೆಯೇ ಜೀವಾಳ: ಕೃತಕ ಬುದ್ಧಿಮತ್ತೆಯಿಂದ (AI) ‘ಸಂಪಾದಕನ ದೃಷ್ಟಿ’ ಬದಲಿಸಲು ಸಾಧ್ಯವಿಲ್ಲ – ಶ್ರೀಕರ್ ಪ್ರಸಾದ್

0

“ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಚಲನಚಿತ್ರ ಸಂಕಲನಕ್ಕೆ ಬೇಕಾದ ಕಲಾತ್ಮಕ ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಸೂಕ್ಷ್ಮತೆಯನ್ನು ಕೃತಕ ಬುದ್ಧಿಮತ್ತೆ (AI) ನೀಡಲು ಸಾಧ್ಯವಿಲ್ಲ,” ಎಂದು ಹಿರಿಯ ಚಲನಚಿತ್ರ ಸಂಕಲನಕಾರ ಶ್ರೀಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಸಂಶೋಧನೆ ಮತ್ತು ದಕ್ಷತೆಯ ದೃಷ್ಟಿಯಿಂದ AI ಉಪಯುಕ್ತ ಸಾಧನವಾಗಿದ್ದರೂ, ಸಂಕಲನವು ಮೂಲಭೂತವಾಗಿ ಮಾನವನ ಸಹಜ ಪ್ರವೃತ್ತಿ, ಅನುಭವ ಮತ್ತು ಭಾವನೆಗಳ ಆಧಾರದ ಮೇಲೆ ನಡೆಯುವ ಪ್ರಕ್ರಿಯೆ ಎಂದು ಪ್ರಸಾದ್ ಪ್ರತಿಪಾದಿಸಿದರು.

“ಸಿನಿಮಾ ಎನ್ನುವುದು ಕೇವಲ ದೃಶ್ಯಗಳ ಜೋಡಣೆಯಲ್ಲ; ಅದು ಕಥೆ ಹೇಳುವ ಕಲೆ. ಭಾವನೆಗಳು ಪ್ರೇಕ್ಷಕರನ್ನು ತಲುಪುವಂತೆ ಮಾಡುವುದು ಮತ್ತು ಚಿತ್ರದ ಲಯವನ್ನು (Rhythm) ಕಾಯ್ದುಕೊಳ್ಳುವುದು ಸಂಕಲನಕಾರನ ಜವಾಬ್ದಾರಿ,” ಎಂದು ಅವರು ವಿವರಿಸಿದರು. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾಗಿದ್ದ ‘ದಿ ಇನ್ವಿಸಿಬಲ್ ಆರ್ಟ್ ಆಫ್ ಎಡಿಟಿಂಗ್’ (The Invisible Art of Editing) ಸಂವಾದದಲ್ಲಿ ಅವರು ಮಾತನಾಡಿದರು. ನಿರ್ಮಾಪಕ ಸಂದೀಪ್ ವಿಶ್ವನಾಥ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಚಿತ್ರೀಕರಣ ಆರಂಭವಾಗುವ ಮೊದಲೇ ಸಂಕಲನಕಾರನ ಕೆಲಸ ಶುರುವಾಗುತ್ತದೆ ಎಂಬುದು ಅವರ ನಂಬಿಕೆ. ಚಿತ್ರಕಥೆಯ ಮೊದಲ ಕರಡು ಸಿದ್ಧವಾದಾಗಲೇ ನಿರ್ದೇಶಕರೊಂದಿಗೆ ಚರ್ಚಿಸುವುದರಿಂದ, ಚಿತ್ರಕ್ಕೆ ದೃಶ್ಯ ಸ್ಪಷ್ಟತೆ ಮತ್ತು ನಿರೂಪಣೆಯ ಲಯವನ್ನು ನೀಡಲು ಸಾಧ್ಯವಾಗುತ್ತದೆ. “ಚಿತ್ರೀಕರಣದ ಸಮಯದಲ್ಲಿ ಸ್ಥಳ, ಬಜೆಟ್ ಮತ್ತು ಕಲಾವಿದರ ನಟನೆಯ ಆಧಾರದ ಮೇಲೆ ಚಿತ್ರಕಥೆ ಬದಲಾಗುತ್ತಾ ಹೋಗುತ್ತದೆ. ಅಂತಿಮವಾಗಿ ಎಡಿಟಿಂಗ್ ಟೇಬಲ್ ಮೇಲೆಯೇ ಸಿನಿಮಾ ಹೊಸ ರೂಪ ಪಡೆಯುತ್ತದೆ,” ಎಂದು ಅವರು ಹೇಳಿದರು.
ತಮ್ಮ ಕೆಲಸದಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಲು ಚಿತ್ರೀಕರಣ ನಡೆಯುವ ಸ್ಥಳಕ್ಕೆ (Set) ಭೇಟಿ ನೀಡುವುದಿಲ್ಲ ಎಂದು ಹೇಳಿದ ಶ್ರೀಕರ್ ಪ್ರಸಾದ್ ಬಹಿರಂಗಪಡಿಸಿದರು, ʼಸೆಟ್‌ನಲ್ಲಿನ ಕಷ್ಟಗಳು ಅಥವಾ ವಾತಾವರಣದ ಪ್ರಭಾವವಿಲ್ಲದೆ, ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ದೃಶ್ಯಗಳನ್ನು ನೋಡಿ ಅವುಗಳ ಸಿನಿಮಾ ನಿರ್ಧರಿಸಲು ಇದು ಸಹಕಾರಿ. ಆದರೆ, ಶೂಟಿಂಗ್ ಆರಂಭವಾದ ಮೊದಲ ಹತ್ತು ದಿನಗಳಲ್ಲೇ ಎಡಿಟಿಂಗ್ ಪ್ರಕ್ರಿಯೆ ನಡೆಸುವುದರಿಂದ ಚಿತ್ರದ ಧಾಟಿ ಅಥವಾ ನಟನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆʼ ಎಂದು ಹೇಳಿದರು.
ಸಂಕಲನದಲ್ಲಿ ಮೈಕ್ರೋ ಮತ್ತು ಮಾಕ್ರೊ ಎಡಿಟಿಂಗ್‌ ಹಂತಗಳನ್ನು ವಿವರಿಸಿದ ಅವರು, ʼಕೆಲವೊಮ್ಮೆ ಪ್ರತ್ಯೇಕವಾಗಿ ನೋಡಿದಾಗ ಅದ್ಭುತವೆನಿಸುವ ದೃಶ್ಯಗಳು, ಇಡೀ ಸಿನಿಮಾದ ವೇಗಕ್ಕೆ ಅಡ್ಡಿಯಾಗಬಹುದು. ಅಂತಹ ಸಂದರ್ಭದಲ್ಲಿ ಆ ದೃಶ್ಯಗಳನ್ನು ತೆಗೆಯುವ ಧೈರ್ಯ ಮಾಡಬೇಕು. ಒಂದು ಸಣ್ಣ ತಪ್ಪು ದೃಶ್ಯವೂ ಪ್ರೇಕ್ಷಕ ಮತ್ತು ಸಿನಿಮಾದ ನಡುವಿನ ಭಾವನಾತ್ಮಕ ಸಂಬಂಧವನ್ನು ಕಡಿದುಹಾಕಬಲ್ಲದುʼ ಎಂದು ಎಚ್ಚರಿಸಿದರು.
ದೃಶ್ಯ ಪರಿಣಾಮಗಳ (VFX) ಬಗ್ಗೆ ಮಾತನಾಡುತ್ತಾ, ʼತಂತ್ರಜ್ಞಾನವು ಕಥೆಯನ್ನು ಮೀರಿಸಬಾರದು; ಬದಲಿಗೆ ಕಥೆಯನ್ನು ಪೂರಕವಾಗಿ ಬೆಂಬಲಿಸಬೇಕು. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದಿದ್ದರೆ ಪ್ರಸ್ತುತತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಏನೇ ಬದಲಾದರೂ ಸಿನಿಮಾ ಮಾತ್ರ ಎಂದಿಗೂ ಮಾನವ ಸಂವೇದನೆಯ ಕಲಾಪ್ರಕಾರವಾಗಿಯೇ ಉಳಿಯಲಿದೆʼ ಎಂದರು.

CM Siddharamaiah ಪರಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಯಾಗಲಿ : ಸಿಎಂ ಸಿದ್ದರಾಮಯ್ಯ

0

CM Siddharamaiah ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯಗಳಾಗಿವೆ. ಅವು ಇಡೀ ಭಾರತದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಅಲ್ಲಿನ ಕೃಷಿಕರ ಬದುಕು ಸಂಕಷ್ಟದಲ್ಲಿದೆ. ಅದಕ್ಕಾಗಿ ವಿಶೇಷ ಅನುದಾನಗಳನ್ನು ಒದಗಿಸಬೇಕು. ಅಲ್ಲದೆ, ರಾಜಸ್ಥಾನದ ನಂತರ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಒಣ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅದಕ್ಕೆ ಅನುದಾನಗಳನ್ನು ಕೊಡಬೇಕು ಎನ್ನುವುದು ಕರ್ನಾಟಕದ ಒತ್ತಾಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

0

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ “ತರಳಬಾಳು ಹುಣ್ಣಿಮೆ ಮಹೋತ್ಸವ-2026″ ರ ಧರ್ಮಸಭೆಯಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಂಡು, ಸಿರಿಗೆರೆಯ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು..

“ಸದ್ಧರ್ಮ ನ್ಯಾಯಪೀಠ”ದ ಮೂಲಕ ನ್ಯಾಯದ ಹಾದಿ ತೋರಿಸುವ, “ಅಕ್ಷರ ಮತ್ತು ಅನ್ನ ದಾಸೋಹ”ದ ಮೂಲಕ ಬದುಕು ಕಟ್ಟಿಕೊಡುವ ಜೊತೆಗೆ 12ನೇ ಶತಮಾನದ ಶರಣ ಸಂಸ್ಕೃತಿಯನ್ನು ಇಂದಿನ ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ಮುನ್ನಡೆಸುತ್ತಿರುವ ಶ್ರೀಮಠದ ಕಾರ್ಯವೈಖರಿ ಇಡೀ ಜಗತ್ತಿಗೇ ಮಾದರಿಯಾಗಿದೆ‌ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ , ಧರ್ಮಸಭೆಯಲ್ಲಿ ಹೇಳಿದರು.

Madhu Bangarappa ಶ್ರೀಗಳ ದೂರದೃಷ್ಟಿ ನಮಗೆಲ್ಲರಿಗೂ ಸ್ಫೂರ್ತಿ. ನನ್ನ ತಂದೆ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್. ಬಂಗಾರಪ್ಪಾಜಿಯವರು ಶ್ರೀಮಠದೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸುತ್ತಾ, ನಾನು ಕೂಡ ಪೂಜ್ಯ ಶ್ರೀಗಳ ಮಾರ್ಗದರ್ಶನದಲ್ಲಿ ಅವರ ಆಶೀರ್ವಾದದೊಂದಿಗೆ ಜನರ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುವುದಕ್ಕೆ ಬದ್ಧನಾಗಿರುತ್ತೇನೆ ಎಂದು ಸಚಿವರು ತಿಳಿಸಿದರು.