Madhu Bangarappa ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದಾಗಿ ತೀರ್ಥಹಳ್ಳಿಯ ಗಾಂಧಿನಗರದಲ್ಲಿ ನಡುರಾತ್ರಿ ಧರೆ ಕುಸಿತದಿಂದ ಮಗುಸಹಿತ ಮೂರು ಜನ ಮೃತರಾದ ಕುಟುಂಬ ವಾಸವಾಗಿದ್ದ ಸ್ಥಳಕ್ಕೆ ಸಚಿವ
ಎಸ್. ಮಧು ಬಂಗಾರಪ್ಪ ಅವರು, ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ, ಕಾಡಾ ಅಧ್ಯಕ್ಷ ಡಾ. ಅಂಶುಮಂತ ಸೇರಿದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇದೆ ಸಂದರ್ಭದಲ್ಲಿ ಸ್ಥಳೀಯರಿಂದ ಅಹವಾಲುಗಳನ್ನು ಪಡೆದು ಸಾಂತ್ವನ ಹೇಳಿದರು.
ನಂತರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕಿನ ಬರ ಮತ್ತು ಅತಿವೃಷ್ಟಿ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು .
ತಾಲೂಕಿನಲ್ಲಿ ಭೂಕುಸಿತದ ಕುರಿತು ಈ ಹಿಂದೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿರುವ ಬಗ್ಗೆ ಮಾಹಿತಿ ಇದ್ದು, ಅದನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ದಿನಗಳಲ್ಲಿ ಸಂಭಾವ್ಯ ಧರೆ ಕುಸಿತದ ಸ್ಥಳಗಳನ್ನು ಗುರುತಿಸಿ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ನಾಳೆ ಸಂಜೆಯೊಳಗಾಗಿ ವರದಿ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಿದ ಅವರು ಅಗತ್ಯ ಕ್ರಮಗಳಿಗಾಗಿ ಮಾನ್ಯ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಭೂಕುಸಿತದಿಂದ ಯಾವುದೇ ಸಾವು -ನೋವುಗಳು ಆಗದಂತೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ಧರೆ ಕುಸಿತ ಸಂತ್ರಸ್ಥ ಕುಟುಂಬಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ತುರ್ತು ನೆರವು ಒದಗಿಸಬೇಕು. ಅಲ್ಲದೆ ಸಂತ್ರಸ್ಥ ರಮೇಶ್ ಕುಟುಂಬಕ್ಕೆ ಶಾಶ್ವತ ಸೂರು ಒದಗಿಸಲು ನಿವೇಶನ ಮತ್ತು ಕಟ್ಟಡ ನಿರ್ಮಿಸಿಕೊಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು . ಮುಂದಿನ 4-6 ತಿಂಗಳು ಬಾಡಿಗೆ ಮನೆಯಲ್ಲಿ ಇರಲು ಬಾಡಿಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಳೆ ಮಾಪನ ಕೇಂದ್ರಗಳನ್ನು ಸದಾ ಕ್ರಿಯಾಶೀಲವಾಗಿರುವಂತೆ ಗಮನಿಸಬೇಕು. ಮಳೆ ಮಾಪನ ಕೇಂದ್ರಗಳ ಮಾಹಿತಿ ಪಡೆದು ವಾಸ್ತವ ವಾರಫಿ ನೀಡಬೇಕು. ಇದರಿಂದಾಗಿ ಬೆಳೆಹಾನಿಯಿಂದ ಕಂಗೆಟ್ಟಿರುವ ರೈತರಿಗೆ ನ್ಯಾಯೋಚಿತ ಪರಿಹಾರ ದೊರೆಯಲಿದೆ. ತಪ್ಪಾಗಿ ಮಾಹಿತಿ ನೀಡಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆಯೂ ಅವರು ಸೂಚಿಸಿದ ಅವರು ದಿನ ನಿತ್ಯವೂ ಸುರಿಯುವ ಮಳೆ ಪ್ರಮಾಣದ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಂತೆಯೇ ರೈತರಿಗೆ ತಲುಪಿಸುವ ಆಗಬೇಕು ಎಂದವರು ನುಡಿದರು.
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಸಕಾಲದಲ್ಲಿ ದುರಸ್ಥಿಗೊಳಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ತ್ವರಿತಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಲು ಗಮನಹರಿಸುವುದಾಗಿ ಅವರು ತಿಳಿಸಿದರು.
Madhu Bangarappa ಮೊದಲ ಬಾರಿಗೆ ರಾಜ್ಯದಲ್ಲಿ ದ್ವಿತೀಯ ಪಿ. ಯು. ಸಿ. ವರೆಗೆ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ಮತ್ತು ನೋಟ್ ಬುಕ್ ಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಗಳನ್ನು ಸಕಾಲದಲ್ಲಿ ವಿತರಿಸಲು ಅನುಕೂಲವಾಗುವಂತೆ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. ವಿತರಿಸಲಾಗುವ ಈ ವಸ್ತುಗಳಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆ ಮತ್ತು ಅಂಗನವಾಡಿ ಮಕ್ಕಳನ್ನು ಶಿತಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕೂರಿಸದಂತೆ ಶಿಕ್ಷಕರಿಗೆ ಸೂಚಿಸಿದ ಅವರು ಸಂಭಾವ್ಯ ಅನಾಹುತಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಫಾಲಾಗುವುದು ಎಂದು ಎಚ್ಚರಿಸಿದ ಅವರು ಬಿಸಿಯೂಟ ತಯಾರಿಕೆಯ ಅಡುಗೆ ಕೋಣೆಗಳನ್ನು ದುರಸ್ತಿಗೊಳಿಸಲು ಅಗತ್ಯವಿರುವ ಅನುದಾನಕ್ಕಾಗಿ ವಿಸ್ತ್ರತ ವರದಿ ಸಲ್ಲಿಸಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ತಾಲೂಕಿನ ರಸ್ತೆಯ ಇಕ್ಕೆಲಗಳಲ್ಲಿ, ಶಾಲೆ ಅಂಗನವಾಡಿ ಮತ್ತು ಸರ್ಕಾರಿ ಕಚೇರಿ ಹಾಗು ಸಾರ್ವಜನಿಕ ಸ್ಥಳಗಳಲ್ಲಿನ ಅಪಾಯಕಾರಿ ಅಥವಾ ದುರ್ಬಲ ಮರಗಳನ್ನು ತಕ್ಷಣ ತೆರವುಗೊಳಿಸುವಂತೆ ಸಚಿವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಅಡಿಕೆ ಬೆಳೆಗೆ ಕಂಟಕಪ್ರಾಯವಾಗಿರುವ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತ ಸಾಲದಾಗಿದ್ದು, ಹೆಚ್ಚಿನ ಮೊತ್ತ ಬಿಡುಗಡೆ ಮಾಡಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಅದಕ್ಕೆ ಇನ್ನಷ್ಟು ವೇಗ ಹೆಚ್ಚಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಡಾ. ಆರ್.ಎಂ.ಮಂಜುನಾಥಗೌಡ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ರತ್ನಾಕರ್ಶೆಟ್ರು, ತಹಸೀಲ್ದಾರ್ ರಂಜಿತ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
