Friday, February 6, 2026
Friday, February 6, 2026
Home Blog Page 1873

ಹೊಸ ಶಿಕ್ಷಣ ನೀತಿ ಭಾರತಕ್ಕೆ ಹೆಮ್ಮೆ : ಅಶ್ವತ್ಥನಾರಾಯಣ

0

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.

ರಾಜ್ಯ ಸರಕಾರ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಐಎಸ್ಡಿಸಿ) ಜಂಟಿಯಾಗಿ ಎನ್ಇಪಿ ಕುರಿತು ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.

ಶಿಕ್ಷಣವನ್ನು ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು.

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು.

ಎನ್ಇಪಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು.

ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನುಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಐಎಸ್ಡಿಸಿ ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾರ್ಯನಿರ್ವಾಹಕ ನಿರ್ದಶಕ ಟಾಮ್ ಜೋಸೆಫ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.

(ಸೌಜನ್ಯ: ಶ್ರೀ ವೆಂಕಟೇಶ ಪ್ರಸಾದ್.
ಮಾಧ್ಯಮ ಕಾರ್ಯದರ್ಶಿ
ಉನ್ನತ ಶಿಕ್ಷಣ ಸಚಿವರು)

ಸುಹಾಸ್ ಯತಿರಾಜ್: ಅರ್ಜುನ ಪ್ರಶಸ್ತಿ

0

ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಪಟು ಸುಹಾಸ್ ಯತಿರಾಜ್ ಅವರಿಗೆ ಮಾನ್ಯ ರಾಷ್ಟ್ರಪತಿಗಳು ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ..

ಕೆಲವು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿತ್ತು. 35 ಕ್ರೀಡಾಪಟುಗಳ ಪೈಕಿ ಯಲ್ಲಿ ಸುಹಾಸ್ ಕೂಡ ಒಬ್ಬರು. ನವದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಾನ್ಯ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ ಅವರಿಂದ ಸುಹಾಸ್ ಯತಿರಾಜ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು ..
ಅರ್ಜುನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್ ಪಡೆದಿದ್ದಾರೆ. ಪ್ರತಿಯೋರ್ವ ಕನ್ನಡಿಗನಿಗೆ ಅ‌ಭಿಮಾನದ ಸಂಗತಿಯಾಗಿದೆ.

ನಮ್ಮನ್ನ ನಾವು ರಕ್ಷಿಸಿಕೊಳ್ಳೋಣ : ಅಂಗೆಲಾ ಮೆರ್ಕೆಲ್

0

ಕೋವಿಡ್ -19 ಸೋಂಕು ಜರ್ಮನ್ ದೇಶವನ್ನು ಬೆಂಬಿಡದೆ ಕಾಡುತಿತ್ತು ಸೋಂಕಿತರ ಪ್ರಮಾಣ ದಿನೇದಿನೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ “ಲಸಿಕಾ ಅಭಿಯಾನದಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಲಸಿಕೆ ಪಡೆಯಲು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಮನವೊಲಿಸಲು ಯತ್ನಿಸಿ ” ಎಂದು ಜರ್ಮನ್ ಛಾನ್ಸಲರ್ ಮನವಿ ಮಾಡಿದ್ದಾರೆ.

ಕೋವಿಡ್ – 19ನಿಂದಾಗಿ ಜರ್ಮನಿಯಲ್ಲಿ ಸೋಂಕಿನ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಜಾಗೃತಿ ವಹಿಸಬೇಕೆಂದು ಮೆರ್ಕೆಲ್ ತಿಳಿಸಿದ್ದಾರೆ.

ಜರ್ಮನ್ ನ ಛಾನ್ಸಲರ್ ಅಂಗೆಲಾ ಮೆರ್ಕೆಲ್ ಅವರು “ನಮ್ಮ ಮುಂದೆ ಕಷ್ಟಕರವಾದ ದಿನಗಳು ಎದುರಾಗಿವೆ. ಆದರೆ ನಾವೆಲ್ಲ ಒಟ್ಟಿಗೆ ನಿಂತರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮತ್ತು ಇತರರನ್ನು ಕಾಳಜಿ ವಹಿಸುವ ಬಗ್ಗೆ ಯೋಚಿಸಿದರೆ ಈ ಚಳಿಗಾಲದಲ್ಲಿ ನಾವು ನಮ್ಮ ದೇಶವನ್ನು ಉಳಿಸಬಹುದು” ಎಂದು ತಿಳಿಸಿದ್ದಾರೆ.

ಪಾಕ್ ಗೆ ಆಫ್ಘನ್ ಮನವಿ

0

ಯುದ್ಧ ಬಾಧಿತ ಅಫ್ಘಾನಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಪರಿಸ್ಥಿತಿ ಉಂಟಾಗಿದೆ. ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ಆಫ್ಘಾನಿಸ್ತಾನಕ್ಕೆ ಆಹಾರದ ನೆರವು ನೀಡುವ ಕುರಿತಂತೆ ಭಾರತದೊಂದಿಗೆ ವಿಶ್ವಸಂಸ್ಥೆಯ ಡಬ್ಲ್ಯು ಎಫ್ ಪಿ ಚರ್ಚೆ ನಡೆಸಿದೆ ಈ ಬಗ್ಗೆ ಡಬ್ಲ್ಯೂ ಎಫ್ ಪಿ ಮುಖ್ಯಸ್ಥೆ ಸೆಸಿಲಿಯ ಗಾರ್ಜೊನ್ ಹೇಳಿದ್ದಾರೆ.

ಹಲವು ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲಿ ಜನರು ತೀವ್ರವಾದ ಆಹಾರ ಬಿಕ್ಕಟ್ಟು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ಸೇರಿದಂತೆ ಈಗಾಗಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಯುದ್ಧಪೀಡಿತ ಆಫ್ಘಾನಿಸ್ತಾನದ ಕುಟುಂಬಗಳಿಗೆ ಆಹಾರದ ನೆರವು ಕಲ್ಪಿಸುವ ಬಗ್ಗೆ ಡಬ್ಲ್ಯು ಎಫ್ ಪಿ ನಡುವೆ ಚರ್ಚೆ ನಡೆಯುತ್ತಿದೆ. ಶೀಘ್ರವೆ ಇವೆಲ್ಲಾ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನ ಭಾರತದಿಂದ ಮಾರ್ಗವಾಗಿ ಗೋಧಿ ಸಾಗಾಣಿಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದೆ. ಆಫ್ಘಾನಿಸ್ತಾನ್ ಮನವಿಯನ್ನು ಪರಿಗಣಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ಭಾರತ ಮಾನವೀಯ ಆಧಾರದ ಮೇಲೆ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಮಾರ್ಗದ ಮೂಲಕವೇ ಆಹಾರ ಸರಬರಾಜು ಆಗಬೇಕಾಗಿದ್ದು, ಇದಕ್ಕೆ ಪಾಕಿಸ್ತಾನ ಸಮ್ಮತಿ ನೀಡಬೇಕಿದೆ.

ಕೇರಳದಲ್ಲಿ ಆತಂಕ ಹುಟ್ಟಿಸಿದ ಮಳೆರಾಯ

0

ತಮಿಳುನಾಡಿನಲ್ಲಿ ಮಳೆರಾಯನ ಆರ್ಭಟ ತಗ್ಗಿದೆ. ಆದರೆ , ಕೇರಳದಲ್ಲಿ ಮಳೆರಾಯನ ಕಾಟ ಶುರುವಾಗಿದೆ. ಕೇರಳದ ಜನ ಭಾರಿ ಮಳೆಯಿಂದ ಕಂಗೆಟ್ಟಿದ್ದಾರೆ.

ಒಂದೇ ಸಮನೆ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಕೇರಳದ ಆರು ಜಿಲ್ಲೆಗಳಿಗೆ ಕೇರಳದ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಅನಾಹುತದಿಂದ ಕೆಲವೆಡೆ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ.
ನ.16 ರವರೆಗೆ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮಳೆಯಿಂದಾಗಿ ತಿರುವನಂತಪುರ ನಾಗರಕೊಯಿಲ್ ಪಟ್ಟಣಗಳಲ್ಲಿ ನೀರು ನಿಂತಿದೆ. ನೆಯ್ಯಟ್ಟಿಂಕರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ತಿರುವಂತಪುರ, ಕೊಲ್ಲಂ, ಇಡುಕ್ಕಿ ಜಿಲ್ಲೆ, ಮುಂತಾದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ತ್ರಿಶೂರ್, ಕಣ್ಣೂರು, ಎರ್ನಾಕುಲಂ, ಕಾಸರಗೋಡು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅರುವಿಕ್ಕರ(ಕರಮಣ ನದಿ) ಮತ್ತು ಪೆಪ್ಪಾರ ಆಣೆಕಟ್ಟಿನಿಂದ ನೀರು ಬಿಡಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್ ಗೆ ಭಾರತದ ಪ್ರತಿಭಟನೆ.

0

ಅಕ್ಟೋಬರ್ 31ರಂದು ಖಲಿಸ್ತಾನ ಪರ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಬ್ರಿಟನ್ ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾರತದ ಪಂಜಾಬ್ ನಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗೂ ಅದರ ಲಾಭ ಪಡೆಯುವ ತಂತ್ರಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಭಾರತದ ಆಂತರಿಕ ವಿಷಯಕ್ಕೆ ಬ್ರಿಟನ್ ಮೂಗು ತೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಭಾರತ ಬ್ರಿಟನ್ ವಿರುದ್ಧ ಕೆರಳಿದೆ.

ತನ್ನ ನೆಲದಲ್ಲಿ ಭಾರತದ ವಿರೋಧಿ ಶಕ್ತಿಗಳಿಗೆ ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬ್ರಿಟನ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬ್ರಿಟನ್ ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಟೀಫನ್ ಲವ್ ಗ್ರೋವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ “ಇಂತಹ ಸಭೆಗಳ ಮೂಲಕ ಮೂಲಭೂತವಾದಿ ಸಂಘಟನೆಗಳು ವಿದೇಶಗಳಲ್ಲಿನ ಭಾರತೀಯರನ್ನು ಭಾರತದ ವಿರುದ್ಧವೇ ಎತ್ತಿಕಟ್ಟಲು ಯತ್ನಿಸುತ್ತಿವೆ ಇದನ್ನು ಸಹಿಸಲ್ಲ” ಎಂದಿದ್ದಾರೆ.

ಭಾರತ ರಾಷ್ಟ್ರವು ವಿನಾಕಾರಣ ಯಾವುದೇ ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕುತ್ತಿಲ್ಲ, ಅದು ಭಾರತದ ಸ್ವಭಾವವು ಅಲ್ಲ. ಇಂತಹ ಸನ್ನಿವೇಶದಲ್ಲಿ ಬ್ರಿಟನ್ ಇಂತಹ ಸಭೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸಖೇದಾಶ್ಚರ್ಯ. ಇನ್ನು ಮುಂದಾದರೂ ಈ ರೀತಿಯ ಸಭೆಗಳನ್ನು ನಡೆಸಿದಿರಲು ಬ್ರಿಟನ್ ಸರ್ಕಾರ ಜಾಗೃತಿ ವಹಿಸುವುದು ಒಳಿತು.

ನವದೆಹಲಿ: ಮಿತಿಮೀರಿದ ವಾಯು ಮಾಲಿನ್ಯ

0

ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಉಸಿರಾಡುವ ಗಾಳಿ ವಿಷವಾಗಿ ಪರಿಣಮಿಸಿದೆ. ಈ ಮಾಲಿನ್ಯ ನಿಯಂತ್ರಣಕ್ಕಾಗಿ, ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ.

ನವದೆಹಲಿಯಲ್ಲಿ, ಜನತೆಯನ್ನು ಸಂಕಷ್ಟಕ್ಕೆ ಸಿಲುಕಿರುವ ಈ ಮಾಲಿನ್ಯದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಎರಡು ದಿನ ಲಾಕ್ಡೌನ್ ಘೋಷಿಸುವಂತೆ ಸುಪ್ರೀಂಕೋರ್ಟ್ ಸಲಹೆಯನ್ನು ಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯಮಂತ್ರಿಗಳು ತುರ್ತು ಸಭೆ ಏರ್ಪಡಿಸಿದ್ದರು. ಒಂದು ವಾರ ಅವಧಿ ಎಲ್ಲಾ ಶಾಲೆಗಳನ್ನು ಬಂದ್ ಮಾಡಬೇಕು. ಕೇವಲ ಆನ್ಲೈನ್ ತರಗತಿಗಳನ್ನ ಮಾತ್ರ ನಡೆಸಬಹುದು. ಈ ಅವಧಿಯಲ್ಲಿ ಸರ್ಕಾರಿ ಸಿಬ್ಬಂದಿ ಗಳಿಗೆ ವರ್ಕ್ ಫ್ರಂ ಹೋಮ್ ಮಾಡಲು ಹೇಳಿದೆ. ಇನ್ನೂ ಮುಖ್ಯವಾಗಿ ದಿಲ್ಲಿಯ ಸುತ್ತ ಕಟ್ಟಡ ನಿರ್ಮಾಣ ಕಾಮಗಾರಿ ಮುಂದಿನ ಆದೇಶದವರೆಗೆ ನಡೆಸುವಂತಿಲ್ಲ. ಈ ಸಂಗತಿಯನ್ನು ಮುಖ್ಯಮಂತ್ರಿಗಳು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

‘ಬೆಳೆ ತ್ಯಾಜ್ಯ ಸುಡುವುದು ಶೇ.25ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ. ಇನ್ನುಳಿದ ಮಾಲಿನ್ಯವು ಪಟಾಕಿ ಸುಡುವಿಕೆ, ವಾಹನಗಳಿಂದ ಹೊಗೆ ಉಗುಳುವುದು ಮತ್ತು ಧೂಳಿನಿಂದ ಆಗುತ್ತಿದೆ. ಪ್ರಸ್ತುತ ಪರಿಸ್ಥಿತಿಯು ತೀರಾ ಹದಗೆಟ್ಟಿದೆ. ಜನ ಮನೆಯಲ್ಲಿ ಇದ್ದರೂ ಕೂಡ ಮಾಸ್ಕ್ ಧರಿಸುವ ಪರಿಸ್ಥಿತಿ ಉಂಟಾಗಿದೆ. ಇಂಥಹ ತೀರಾ ಕೆಟ್ಟ ಸನ್ನಿವೇಶದಲ್ಲಿ ಜನರು ಬದುಕುವುದು ಹೇಗೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಕೇಂದ್ರ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದ್ದರು.

ಬೆಳೆ ತ್ಯಾಜ್ಯ ಸುಡುವಿಕೆ ನಿಲ್ಲಿಸುವಂತೆ ರೈತರಿಗೆ ಸೂಚನೆಯನ್ನು ನೀಡಲಾಗಿದೆ. ಸರ್ಕಾರ ಇದರ ಕೈಗೊಂಡಿರುವ ಕ್ರಮಗಳ ಬಗ್ಗೆ ತುಷಾರ್ ಮೆಹ್ತಾ ವಿವರಣೆ ನೀಡಿದ್ದಾರೆ. ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ‘ ರೈತರನ್ನು ದೂಷಿಸುವ ಬದಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಯುಮಾಲಿನ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸೂಚಿಸಿದರು.

ಮಣಿಪುರ : ಉಗ್ರರ ದಾಳಿ

0

ಮಣಿಪುರದ ಚುರಚಾಂದ್ ಪುರ ಜಿಲ್ಲೆಯಲ್ಲಿ ಅಸ್ಸಂ ರೈಫಲ್ ಗೆ ಸೇರಿದಂತಹ ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಸೈನಿಕರು, ಸೇನಾದಿಕಾರಿ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಮತ್ತು ಮಗ ಸೇರಿದಂತೆ 7 ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ.

ರೈಫಲ್ಸ್ ನ ಕಮಾಂಡಿಂಗ್ ಅಧಿಕಾರಿ ಸೇರಿ ಐವರು ಯೋಧರು ಉಗ್ರರದಾಳಿಗೆ ಹುತಾತ್ಮರಾಗಿದ್ದಾರೆ ಹಾಗೂ ಅಧಿಕಾರಿಯ ಕುಟುಂಬದ ಇಬ್ಬರು ಸದಸ್ಯರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟ್ ಮಾಡಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದಾಳಿಯ ಬಗ್ಗೆ ಟ್ವೀಟ್ ಮಾಡಿದ್ದು ಹುತಾತ್ಮ ಯೋಧರ ಕುಟುಂಬದವರಿಗೆ ಹೇಳಿದ್ದಾರೆ ಹಾಗೂ ಯೋಧರ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಟ್ ಕಾಯಿನ್ : ಪ್ರಧಾನಿ ತುರ್ತು ಸಭೆ

0

ಬಿಟ್ ಕಾಯಿನ್ ಹಗರಣ ದೇಶದಲ್ಲೆಡೆ ಸದ್ದು ಮಾಡಿದೆ.ಇದರ ಬೆನ್ನಲ್ಲೇ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಬಿಟ್ ಕಾಯಿನ್ ಮತ್ತು ಕ್ರಿಪ್ಟೋ ಕರೆನ್ಸಿ ಬಗ್ಗೆ ಹೂಡಿಕೆ ಹಿನ್ನೆಲೆಯಲ್ಲಿ ಉಂಟಾದ ಆತಂಕದ ಬಗ್ಗೆ ಚರ್ಚಿಸಲಾಯಿತು.

ಕೇಂದ್ರ ಹಣಕಾಸು ಮತ್ತು ಗೃಹಸಚಿವ ಇಲಾಖೆಯು ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದೆ. ಬಹುಕೋಟಿ ಮೌಲ್ಯದ ಈ ಹಗರಣದ ಬಗ್ಗೆ ಹಣಕಾಸು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು, ಆರ್ ಬಿ ಐ ನ ಮುಖ್ಯಸ್ಥರು ಭಾಗಿಯಾಗಿದ್ದಾರೆ.

ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳ ಹಾಗೂ ಕೇಂದ್ರೀಯ ಗುಪ್ತದಳದ ಅಧಿಕಾರಿಗಳು ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿಯವರ ಬಳಿ ಚರ್ಚಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯಿಂದ ದಿಢೀರ್ ಲಾಭಗಳಿಕೆ ಸಾಧ್ಯ ಎಂಬ ಅತಿಯಾದ ನಂಬಿಕೆ ಮೂಡಿಸಲಾಗಿದೆ. ಪಾರದರ್ಶಕವಲ್ಲದ ಜಾಹೀರಾತಿನ ಮೂಲಕ ಯುವಜನತೆ ದಾರಿ ತಪ್ಪಿಸುವ ಪ್ರಯತ್ನವನ್ನು ತಪ್ಪಿಸಬೇಕಾಗಿದೆ. ಇಂತಹ ದಾರಿ ತಪ್ಪಿಸುವ ಪ್ರಯತ್ನ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ನಿರ್ಧರಿಸಿದ ದಿಟ್ಟ ಕ್ರಮಗಳು ಸರ್ಕಾರ ಕೈಗೊಳ್ಳುವ ಪ್ರಗತಿಪರ ಹಾಗೂ ಮುಂದುವರೆದ ದೃಷ್ಟಿಯಿಂದ ಕೂಡಿರುತ್ತದೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರು ‘ ಕ್ರಿಪ್ಟೋ ಕರೆನ್ಸಿ ಗಳು ಅನಿಯಂತ್ರಿತವಾಗಿವೆ, ಯಾವುದೇ ಆರ್ಥಿಕ ವ್ಯವಸ್ಥೆಗೆ ಇವುಗಳಿಂದ ಗಂಭೀರ ಅಪಾಯವಿದೆ ಎಂದು ಹೇಳಿದ್ದಾರೆ.

‘ಬಿಟ್ ಕಾಯಿನ್ ಹಗರಣ ದೊಡ್ಡದು ಆದರೆ ಅದನ್ನು ಮುಚ್ಚಿ ಹಾಕುವುದು ಇನ್ನೂ ದೊಡ್ಡ ಹಗರಣ. ಈ ಮೂಲಕ ಯಾರದೋ ಹುಸಿ ಅಹಂಕಾರವನ್ನು ರಕ್ಷಿಸಲಾಗುತ್ತಿದೆ’ ಎಂದು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಂತೋಷ, ಸಡಗರ ಕಳೆದುಕೊಂಡ ಹಗಲುವೇಷ

0

ನಮ್ಮ ಜನಪದ ಹಲವು ಕಲೆಗಳ ಅದಮ್ಯ ಉಗ್ರಾಣ ಅವುಗಳು ಹಾಡಿನ ರೂಪ, ಕುಣಿತದ ರೂಪ, ವೇಷದ ರೂಪಗಳಾಗಿ ಹೊರಹೊಮ್ಮಿವೆ. ಅಷ್ಟೇ ಅಲ್ಲ ನಮ್ಮ ಗ್ರಾಮೀಣ ಸಂಸ್ಕೃತಿಯ ಸಂಕೇತಗಳು ಆಗಿವೆ. ಹಲವು ಕಲೆಗಳು ಕೆಲವು ಜನಾಂಗಗಳಲ್ಲಿವೆ, ಕೆಲವು ಕಲೆಗಳು ಹಲವು ಜನಾಂಗದಲ್ಲಿವೆ. ಇಂತಹ ಪ್ರದರ್ಶಕ ಕಲೆಗಳಲ್ಲಿ ಹಗಲುವೇಷವು ಒಂದು. ಅಲೆಮಾರಿ ಜನಾಂಗಗಳಲ್ಲಿ ಹೆಚ್ಚಾಗಿ ಈ ಕಲೆ ಮನೆಮಾಡಿದೆ. ಹೊನ್ನಾಳಿ ಯವರಾದ ಶ್ರೀ ಈಶ್ವರಪ್ಪ ಅವರ ಪತ್ನಿ ಶ್ರೀಮತಿ ಮಂಜಳ ಹಾಗೂ ಅವರ ಬಂಧು ಲಕ್ಷ್ಮಣ್ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ನಮ್ಮ Klive ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ನೋವು-ನಲಿವು ಹಂಚಿಕೊಂಡರು. ಹಗಲುವೇಷ ಕಲೆಯು ಅವರ ಹಬ್ಬದ ಆಚರಣೆಯ ಒಂದು ಭಾಗ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಗಲು ವೇಷ ಧರಿಸಿ ಊರು-ಊರು ಅಲೆಯುತ್ತಾರೆ. ಇಂತಹ ಕಲಾವಿದರನ್ನು ಬೀದಿಯಲ್ಲಿ ಕಂಡ ಕಲಾರಸಿಕರು ತಮ್ಮ ಕೈಲಾದ ಕಾಣಿಕೆ ನೀಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಹಗಲುವೇಷ ಇಲ್ಲದ ಸಂದರ್ಭದಲ್ಲಿ ಕೂಲಿ, ಕೃಷಿ, ವ್ಯಾಪಾರ ಮುಂತಾದ ವೃತ್ತಿಗಳಲ್ಲಿ ಜೀವನೋಪಾಯ ಕಂಡುಕೊಳ್ಳುತ್ತಾರೆ. ನಶಿಸಿಹೋಗುವ ಆತಂಕದಲ್ಲಿದೆ ಈ ಕಲಾಪ್ರಕಾರ.ಉಳಿಸಬೇಕೆ? ಬೆಳೆಸಬೇಕೆ? ಜನಪದ ವಿದ್ವಾಂಸರು ಈ ಬಗ್ಗೆ ಚರ್ಚಿಸಬೇಕಿದೆ.