ಕೊರೊನಾ ಮಹಾಮಾರಿಯ ವಿರುದ್ಧ ಸಮರದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿದೆ. ಅಮೆರಿಕದ ಕಂಪನಿಗಳು ಕೊರೊನಾ ನಿರೋಧಕ ಮಾತ್ರೆಗಳನ್ನು ತಯಾರಿಸಿವೆ. ಮುಂದಿನ ವರ್ಷದ ಆರಂಭದಲ್ಲಿ ಎರಡು ಕೊರೊನಾ ನಿರೋಧಕ ಮಾತ್ರೆಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಸಂಪೂರ್ಣ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಕೊರೊನಾ ನಿರೋಧಕ ಲಸಿಕೆ ‘ಕೋವ್ಯಾಕ್ಸಿನ್’ 2 ಡೋಸ್ ಪಡೆದರೆ ಕೊರೊನಾ ಸೋಂಕು ತಡೆಯುವಲ್ಲಿ ಶೇಕಡ 77.8 ರಷ್ಟು ಪರಿಣಾಮಕಾರಿ ಎಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಜರ್ನಲ್ ‘ಲ್ಯಾನ್ಸೆಟ್’ ವರದಿ ಮಾಡಿದೆ.
ಈಗ ಎರಡು ಮಾತ್ರೆಗಳನ್ನು ಅಮೆರಿಕದ ಕಂಪನಿಗಳೇ ಅಭಿವೃದ್ಧಿ ಪಡಿಸಿವೆ. ಮರ್ಕ್ ಕಂಪನಿಯು “ಮೊಲ್ನುಪಿರಾವಿರ್” ಬಿಡುಗಡೆಗೆ ಭಾರತದಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ. ಮತ್ತು ಫೈಜರ್ ಸಹ ತನ್ನ “ಪ್ಯಾಕ್ಸ್ ಲೊವಿಡ್” ಎಂಬ ಕೋವಿಡ್ ನಿರೋಧಕ ಮಾತ್ರೆಯನ್ನು ಅಭಿವೃದ್ಧಿಪಡಿಸಿದೆ. ಈ ಎರಡೂ ಮಾತ್ರೆಗಳ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ತುದಿಗಾಲಲ್ಲಿ ಕಾಯುತ್ತಿವೆ.
ಎರಡು ಮತ್ತು ಮೂರನೇ ಹಂತದ ಪ್ರಯೋಗವನ್ನು ಮುಗಿಸಿರುವ ಫೈಜರ್ ಕಂಪನಿಯು, ಈ ಮಾತ್ರೆಯು ಕೊರೊನಾ ಸೋಂಕಿನ ಭೀಕರತೆ ತಗ್ಗಿಸಿ, ವೈರಾಣುವನ್ನು ನಿಷ್ಕ್ರಿಯಗೊಳಿಸುವಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಹೇಳಿಕೊಂಡಿದೆ. ಈ ಮಾತ್ರೆಯನ್ನು ಸ್ವಲ್ಪ ಪ್ರಮಾಣದ ರಿಟೊನಾವಿರ್ ಔಷಧ ಬೆರೆಸಿದಲ್ಲಿ ಗಂಭೀರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ಕಂಪನಿ ವಿಶ್ವಾಸ ಹೊಂದಿದೆ.
ಮತ್ತೊಂದೆಡೆ, ಮರ್ಕ್ ಕಂಪನಿಯು ಅಭಿವೃದ್ಧಿಪಡಿಸಿರುವ ಕೊರೊನಾ ನಿರೋಧಕ ಮಾತ್ರೆ ‘ಮೊಲ್ನುಪಿರಾವಿರ್’ ಕೂಡ ಶೀಘ್ರವೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.
ಮರ್ಕ್ ಕಂಪನಿಯು,ಮೊಲ್ನುಪಿರಾವಿರ್ ಪ್ರಯೋಗಕ್ಕೆ ಒಳಪಟ್ಟ 700 ಕೊರೊನಾ ಸೋಂಕಿತರ ವಿವಿಧ ಪರೀಕ್ಷೆಗಳ ದಾಖಲೆಗಳನ್ನು ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಗೆ ಸಲ್ಲಿಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಪ್ಲಾ, ಡಾ. ರೆಡ್ಡೀಸ್, ಲ್ಯಾಬೋರೇಟರೀಸ್, ಹೆಟೆರೊ, ಸನ್ ಫಾರ್ಮಾ, ಹಾಗೂ ಅರಬಿಂದೊ ಫಾರ್ಮಾ ಸೇರಿದಂತೆ ಭಾರತದ 8 ಔಷಧ ತಯಾರಿಕಾ ಕಂಪನಿಗಳ ಜೊತೆ ಮರ್ಕ್ ಕಂಪನಿಯು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ ಎಂದು ಕೊರೊನಾ ಸಾಂಕ್ರಾಮಿಕ ನಿಯಂತ್ರಣ ಕಾರ್ಯಪಡೆ ಮುಖ್ಯಸ್ಥ ಡಾ. ರಾಮ್ ವಿಶ್ವಕರ್ಮ ಅವರು ತಿಳಿಸಿದ್ದಾರೆ.
ಕೊರೊನಾ ಲಸಿಕೆ ಆಯ್ತು: ಈಗ ಮಾತ್ರೆಗಳು
ಕೇರಳ ನೋರೋ ವೈರಸ್ ಭೀತಿ
ದೇಶವೆ ಕೋವಿಡ್ -19 ನಿಂದ ಚೇತರಿಕೆ ಕಾಣುವಷ್ಟರಲ್ಲಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ನೋರೊವೈರಸ್ ಪ್ರಕರಣಗಳು ಪತ್ತೆಯಾಗಿದೆ. ಕೇರಳ ಸರ್ಕಾರ ನೋರೋ ವೈರಸ್ ಕುರಿತಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
ವಾಂತಿ ಮತ್ತು ಅತಿಸಾರ ನೋರೋ ವೈರಸ್ ನ ಲಕ್ಷಣಗಳಾಗಿವೆ. ಈ ಅಪರೂಪದ ಸೋಂಕು ವಯನಾಡ್ ಜಿಲ್ಲೆಯ ಪೂಕೊಡೆ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ದೃಡಪಟ್ಟಿದೆ.
ಕಾಲೇಜು ಕ್ಯಾಂಪಸ್ ಹೊರಗಿನ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಈ ಸೋಂಕು ಮೊದಲು ಕಾಣಿಸಿಕೊಂಡಿತ್ತು ಎಂದು ಪಶುವೈದ್ಯಕೀಯ ಕಾಲೇಜಿನ ಅಧಿಕಾರಿಗಳು ತಿಳಿಸಿದ್ದು ಆರೋಗ್ಯ ಅಧಿಕಾರಿಗಳು ವಿದ್ಯಾರ್ಥಿಗಳ ಮಾದರಿಯನ್ನು ಆಲಪುಳದಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಕೃತಿ ಕಳುಹಿಸಿಕೊಟ್ಟಿದ್ದಾರೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಬಗ್ಗೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವೈನಾಡಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಹಾಗೂ ನೋರೋ ವೈರಸ್ ಹರಡುವುದನ್ನು ತಪ್ಪಿಸಲು ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ವೀಣಾ ಜಾರ್ಜ್ ಸೂಚಿಸಿದ್ದಾರೆ.
ಸಣ್ಣ ಹೂಡಿಕೆದಾರರಿಗೆ ಅವಕಾಶ
ಮೊದಲ ಬಾರಿಗೆ ಕೇಂದ್ರ ಸರ್ಕಾರ ಸಣ್ಣ ಹೂಡಿಕೆದಾರರಿಗೆ ಸಾಲ ಪತ್ರಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವ ಅವಕಾಶ ಕಲ್ಪಿಸಿದೆ.
ಸಾಲ ಪತ್ರಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವ ಸೌಲಭ್ಯಕ್ಕೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ. ಈ ಸೌಲಭ್ಯ ವ್ಯವಸ್ಥೆಯಲ್ಲಿ ಸರ್ಕಾರಿ ಸಾಲಪತ್ರಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವ ಪ್ರಕ್ರಿಯೆಯು ಷೇರುಗಳನ್ನು ಷೇರು ಪೇಟೆಯಿಂದ ಖರೀದಿಸುವ ಮಾರಾಟ ಮಾಡುವ ಪ್ರಕ್ರಿಯೆಯನ್ನು ಹೋಲುತ್ತದೆ. ಹೂಡಿಕೆಗಳಿಗೆ ಹೆಚ್ಚಿನ ಭದ್ರತೆಯನ್ನು ಬಯಸುವ ಮತ್ತು ಬಹಳ ದೀರ್ಘ ಅವಧಿಯವರೆಗೆ ನಿಶ್ಚಿತ ಆದಾಯವನ್ನು ಬಯಸುವ ಪಿಂಚಣಿ ಸೌಲಭ್ಯವನ್ನು ಅಧಿಕ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ರೈಟ್ ರಿಸಲ್ಟ್ ಸಂಸ್ಥೆಯ ಸಹ-ಸಂಸ್ಥಾಪಕ ಸೋನಂ ಶ್ರೀವತ್ಸ ಅವರು ಮಾತನಾಡಿ ‘ಈ ಕಾರ್ಯಕ್ರಮವು ಹಣಕಾಸಿನ ಒಳಗಾಗುವಿಕೆ ಉತ್ತೇಜಿಸಬಹುದು. ಅಸಂಘಟಿತ ವಲಯದಿಂದಲೂ ಬಂಡವಾಳ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದು ಬರುವಂತೆ ಮಾಡಬಹುದು’ ಎಂದು ತಿಳಿಸಿದರು.
ಚಾಟಿ ಬೀಸುವ ಚಾಟು ಪದ್ಯಗಳು
“ಚಾರ್ಟ್ಸ್” ಕಾಲದಲ್ಲಿ “ಚಾಟು” ಬಗ್ಗೆ ನಾಲ್ಕು ಮಾತು ಬರೆಯೋದು ಒಂಥರಾ ಖುಷಿ ಕೊಡ್ತಿದೆ. ಹೇಳಿ ತಿಳಿಸೋದು; ತಿಳಿ ಹೇಳೋದು ಸಾರಳ್ಯ. ಹೇಳ್ದೆ ತಿಳಿಸೋದು; ಹೇಳದ್ದು ಕೂಡ ತಿಳಿಸುವುದು ವಿಶೇಷ. ಅದನ್ನ ರೋಚಕಗೊಳಿಸಿ ಹೃದಯಕ್ಕೆ ನಾಟೋ ಹಾಗೆ ಹೇಳಿದ್ರೆ ಅದು ಚಮತ್ಕಾರ, ವಾಕ್ಚಾತುರ್ಯ.
ಅನ್ಯೋಕ್ತಿ, ಅನ್ಯಾಪದೇಶ, ವ್ಯಾಜಸ್ತುತಿ ಅನ್ನೊ ಶಬ್ದಗಳಿಂದ ಗುರುತಿಸೋದು ಬಿಡಿ ಪದ್ಯವೊಂದನ್ನು ಸರಳವಾಗಿ ಸುಭಾಷಿತ ಅಥವಾ “ಚಾಟೂಕ್ತಿ” ಅಂದ್ರೂ ತಪ್ಪಾಗಲಾರದು. ಇಂತಹ ಪದ್ಯಕ್ಕೆ (ಶ್ಲೋಕ) ವ್ಯಕ್ತಿಯನ್ನು ಚುಚ್ಚುವ, ಪರಚುವ, ಆತ್ಮಾವಲೋಕನಕ್ಕೊಳ ಪಡಿಸುವ, ಸೆಳೆಯುವ, ಸಂಸ್ಕರಿಸುವ ಶಕ್ತಿಯಿರುತ್ತದೆ. ವ್ಯಕ್ತಿಯನ್ನು ತಿದ್ದೋವಾಗ ಚಾಟೂಕ್ತಿ ನೇರವಾಗಿ ಉಪದೇಶ ಮಾಡಲ್ಲ… ಬದಲಾಗಿ ಅದೇನೊ ಹೇಳ್ತಾರಲ್ಲ.. ಸುತ್ತಿ ಹೊಡೆಯೋದು .… ಹಾಗೆ ತಿದ್ದುತ್ತೆ…
ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್|
ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಮ್||
(ಮಹಾತ್ಮರು ಅಥವಾ ಉತ್ತಮರು ಮನಸ್ಸಿನಲ್ಲಿ, ಮಾತಿನಲ್ಲಿ ಮತ್ತು ಕೃತಿಯಲ್ಲಿ ಒಂದೇ ರೀತಿಯಾಗಿರುತ್ತಾರೆ. ದುರಾತ್ಮರು /ನೀಚರು ಮಾತಿನಲ್ಲೊಂದು, ಮನಸ್ಸಿನಲ್ಲೊಂದು ಮತ್ತು ಕೃತಿಯಲ್ಲೊಂದು ರೀತಿ ಇರುತ್ತಾರೆ).
ಈ ಚಾಟೂಕ್ತಿಯನ್ನು ಕೇಳಿದವರೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸೆ ಸೂಚಿಸುವುದು ಸಹಜ. ಆದರೆ ಇವರೆಲ್ಲ ಉತ್ತಮರಾ? ಅಲ್ಲವೆಂಬುದು ಕೂಡ ಸತ್ಯ. ಆದರೆ, ಇವರ್ಯಾರೂ ತಾವು ಒಳಗೊಳಗೇ ಅನುಭವಿಸಿದ ಚಾಟುವಿನ ಚಾಟಿ ಏಟಿನ ರುಚಿಯನ್ನು ತಮ್ಮ ಮುಖಭಾವದಲ್ಲಿ ಹೊರಹಾಕುವುದಿಲ್ಲ,( ಏಕೆಂದರೆ…. ಹೆಗಲು ಮುಟ್ಟಿ ನೋಡಿಕೊಂಡಂತಾಗುತ್ತದೆ). ಮನದೊಳಗೇ ನಡೆಯುವ “ಮಹಾತ್ಮ- ದುರಾತ್ಮ” ಶಬ್ದಗಳ ವಿಮರ್ಶೆಯ ಮೂಲಕ ಸ್ವಮೌಲ್ಯಮಾಪನ ಕ್ರಿಯೆಯಲ್ಲಿ ಮಗ್ನರಾಗಿರುತ್ತಾರೆ. ಚಾಟುವಿನ ಶಬ್ದ ಶರೀರದಿಂದ ಹೊರ ಹೊಮ್ಮಿದ ಅರ್ಥಾನುರಣನ ವ್ಯಕ್ತಿಯನ್ನು ಜಾಗೃತವಾಗಿಡುವುದರ ಜೊತೆಗೆ ಸ್ವಸಂಸ್ಕಾರ ಪ್ರಕ್ರಿಯೆಯಲ್ಲಿ ತೊಡಗಿಸುತ್ತದೆ. ಸ್ವಸಂಸ್ಕಾರ ಪ್ರಕ್ರಿಯೆಯಲ್ಲಿ ಅವಿಚ್ಛನ್ನತೆಯನ್ನು ಕಾಪಾಡುವಲ್ಲಿ ಗೆಲ್ಲುತ್ತದೆ. ತರಂಗ ಪರಿಣಾಮದ ಫಲವಾಗಿ ವ್ಯಕ್ತಿ ( ವ್ಯಷ್ಟಿ) ಯ ಸ್ವಭಾವದಲ್ಲಿ ಕಾಣಬಹುದಾದ ಬದಲಾವಣೆಯೇ ಸಮಾಜದಲ್ಲಿ (ಸಮಷ್ಟಿ) ಮೂಡುತ್ತದೆ.
ಹೂವಿನ ಬಣ್ಣ ಪರಿಮಳದಂತೆಯೇ ಚಾಟೂಕ್ತಿಯ ರಚನೆ, ಗಾತ್ರ ಮತ್ತು ಪ್ರಾಸ ಆಕರ್ಷಣೆ ಪರಿಣಾಮಗಳನ್ನು ಹಿಗ್ಗಿಸುತ್ತದೆ. ಉಧಾಹೃತ ಪದ್ಯದಲ್ಲಿ ಅದದೇ ಶಬ್ದಗಳ ಬಳಕೆ ಮಾಡಿ ಪ್ರಾಸವನ್ನೂ ಸಮಾನ ಶಬ್ದಗಳಿಂದ ಭಿನ್ನಾರ್ಥಗಳನ್ನೂ ಹೊಮ್ಮಿಸುವ ಮೂಲಕ ಚಾಟುಗಾರ ತನ್ನ ವಾಕ್ಚಾತುರ್ಯವನ್ನು ಮೆರೆದಿದ್ದಾನೆ. ರಚನೆ ಅರ್ಥೌನ್ನತ್ಯವನ್ನು ಸಾಧಿಸಿದೆ.
ದುರ್ಜನಂ ಪ್ರಥಮಂ ವಂದೇ
ಸಜ್ಜನಂ ತದನಂತರಂ|
ಮುಖಪ್ರಕ್ಷಾಲನಾತ್ಪೂರ್ವಂ
ಗುದಪ್ರಕ್ಷಾಲನಂ ಯಥಾ||
(ದುಷ್ಟರಿಗೆ ಮೊದಲು ನಮಸ್ಕಾರ ಸಲ್ಲಿಸಿ ನಂತರ ಸಜ್ಜನರಿಗೆ ನಮಸ್ಕಾರಗಳು. ಮುಖತೊಳೆದುಕೊಳ್ಳುವ ಮೊದಲು ತಿಕ ತೊಳೆದುಕೊಂಡಂತೆ)
‘ಮುಖ’ ಏನೋ ಸರಿ… ಆದರೆ ಈ ‘ತಿಕ’ ಯಾಕೋ ತೀರ ಆಯ್ತು ಅನ್ಸುತ್ತೆ. ಸ್ವಲ್ಪ ಅಲ್ಲ.. ಅದು ಸ್ವಲ್ಪನೂ ಸರಿ ಕಾಣೊಲ್ಲ…
ಕಾಣೊಲ್ಲ ಮಾತ್ರ ಅಲ್ಲ.. ಕಾಣ್ಲೂಬಾರ್ದು… ಯಾರು ತಾನೇ ನೋಡೋಕೆ ಆಸೆಪಡ್ತಾರೆ ಹೇಳಿ.. ಬೇರೆಯವರದ್ದು ಬಿಡಿ… ಸ್ವಂತದ್ದರ ಬಗ್ಗೆನೇ ಹೇಸಿಗೆ. ಆದ್ರೂ ಅದೃಷ್ಟಕ್ಕೆ ಕೆಟ್ರೇ.. ಕಿಟಕಿ ಪಕ್ಕದ ಸೀಟು ಬೇಕು ಅಂತ ಬಸ್ಸು/ರೈಲಲ್ಲಿ ಕೂತು ಪ್ರಯಾಣ ಮಾಡಿದ್ರೆ.. ಅದ್ರಲ್ಲೂ ಬೆಳಿಗ್ಗೆ.. ಗ್ರಹಚಾರ ಕೆಡ್ತು… ಬೇಡ ಬೇಡ ಅಂದ್ರೂ ಅದೇ ಕಾಣುತ್ತೆ .ದುರ್ಜನರನ್ನೂ ಹಾಗೆ.. ನೋಡೋಕೆ ಆಸೆಪಡ್ತಾರಾ? ಆದ್ರೂ ಕಾಣ್ತಾರೆ… ಬೆಳಬೆಳಗ್ಗೆ ಯಾರಿಗೆ ಬೇಕು ಹೇಳಿ ಅವರ ಸೇವೆ… ಆದ್ರೂ ಒಂದು ನಮಸ್ಕಾರ ಹಾಕಿ ಸಾಗಿಹಾಕ್ತಿವಿ.. ಗೌರವ ತೋರಿಸಲಿಲ್ಲ ಅಂದ್ರೆ…
ಬಾಯಿಂದ ಬರೋ ಶಬ್ದ ಕೇಳೋಕಾಗಲ್ಲ… ಹೊಲಸು ನಾರತ್ತೆ ಬಾಯಿಬಿಟ್ರೆ… ಈಗ ನೀವು ಹೇಳಿ.. ಎರಡರ ಹೋಲಿಕೆ ಸರಿ ಇದೆ ಅಲ್ವಾ? ಎರಡೂ ಬಾಯಿ ಬಿಡಬಾರದು ಅಂದ್ರೆ ಮೊದಲು ನಮಸ್ಕಾರ ಸಲ್ಲಿಸಿ ಕೈ ತೊಳಕೋ ಬೇಕು… ಅದಕ್ಕೆ ಸೋಪ್ ಹಚ್ಕೊಂಡು ಕೈತೊಳಕೊಳೋದು… ನೋಡಿ, ಮುಖ ತೊಳ್ಕೊಂಡ ಮೇಲೆ ಸೋಪ್ ಹಚ್ಕೊಂಡು ಕೈ ತೊಳಕೊಳೋದು ಎಲ್ಲಾದರೂ ನೋಡಿದ್ದೀರಾ? ಮೊದಲಾದರೂ ಗೌರವ ಕೊಡಿ, ಕೊನೆಗಾದರೂ ಕೊಡಿ ಏನೂ ಗಲಾಟೆ ಇಲ್ಲ… ಕೊಳಕು ಬೆರೆತ ಶಬ್ದ ಇಲ್ಲವೇ ಇಲ್ಲ… ಅದಕ್ಕೆ ಸಜ್ಜನ ಮುಖ ಸಮಾನ… ದುರ್ಜನ –ಕ ಸಮಾನ. ಅದಕ್ಕೆ ವೇದಿಕೆ ಮೇಲೆ ಅವರನ್ನೇ ಮೊದಲು ಕರೆದು ಕುರ್ಚಿ ಕೊಡೋದು… ಕುರ್ಚಿ ಮೇಲೆ ಅವರು ಮೊದಲು ಏನು ಇಡ್ತಾರೆ ಹೇಳಿ… ಅವರು “ಅದಕ್ಕೆ” ಮೊದಲು ಗೌರವ ಕೊಡೋದು.. ಅದಕ್ಕೆ ‘ಅದು’ ಅವರ ಸಮಾನ.. ದುರ್ಜನರಿಗೆ ಹೇಗೆ ಮೊದಲು ಗೌರವವೋ ಹಾಗೇ ‘ಅದಕ್ಕೆ’ ಮೊದಲು ಜಲಾಭಿಷೇಕ. ಈಗ್ಲಾದ್ರೂ ಒಪ್ಕೋತೀರಾ ಅಥವಾ ಇನ್ನೂ ತೀರಾ ಆಯ್ತು ಅಂತೀರಾ? ‘ಅದಕ್ಕೆ’ ಮೊದಲು ಕೈ, ‘ಅದಕ್ಕೆ’ ಮೊದಲು ಜೈ.
ಲೇಖಕ: ಕಿಟ್ಟಿ, ಶಿವಮೊಗ್ಗ
ಪರಿಚಯ;
ಬಹಳ ಇತ್ತು.
ಆದರೆ
ಕಿಟ್ಟಿ ಉರುಫ್ ಕೃಷ್ಣಮೂರ್ತಿ ಅವರೇ
ಬರೆದರು….
” ಕಿಟ್ಟಿ ಅನ್ನಿ ಸಾಕು”
ನಮಗೆ ಸಮಾಧಾನವಾಗಲಿಲ್ಲ
ಸಂಸ್ಕೃತ ಎಂ.ಎ.
ಡಿವಿಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.ರಂಗಭೂಮಿಯಲ್ಲಿ ಒಂದಿಷ್ಟು ಅವಧಿ ಕ್ರಿಯಾಶೀಲರಾಗಿದ್ದರು. ಸಹೃದಯೀ ಮಾತುಗಾರ. ಚಿಕ್ಕ ಬರವಣಿಗೆಯ ಪಕ್ಕಾ ಮನುಷ್ಯ.
ಸಂಕಷ್ಟಕ್ಕೆ ಸಿಲುಕಿದ ಸಂಪಾದಕ
ಪತ್ರಕರ್ತರೆಂದರೆ ಮುಳ್ಳು ಹಾದಿಯ ನಡಿಗೆ. ವರದಿಗಳಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೆ.
ಸಂಪಾದಕರೊಬ್ಬರು ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮ್ಯಾನ್ಮಾರ್ ನಲ್ಲಿ ನಡೆದಿದೆ.
ಅಮೆರಿಕ ಪತ್ರಕರ್ತ ಡ್ಯಾನಿ ಫೆನ್ ಸ್ಟರ್ ಅವರನ್ನು, ಸುಳ್ಳು ಮತ್ತು ಪ್ರಚೋದನಕಾರಿ ವಿಷಯದ ಹಂಚಿಕೆಯ ಆರೋಪದ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ನ ಸರ್ಕಾರ ಬಂಧಿಸಿತ್ತು. ಆದರೆ ಇದೀಗ 11 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವಂತೆ ಆದೇಶ ನೀಡಿದೆ.
ಡ್ಯಾನಿ ಫೆನ್ ಸ್ಟರ್ ಅವರು ಫ್ರಂಟಿಯರ್ ಮ್ಯಾನ್ಮಾರ್ ಆನ್ಲೈನ್ ನಿಯತಕಾಲಿಕದ ಸಂಪಾದಕರಾಗಿದ್ದರು. ಕಾನೂನುಬಾಹಿರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ವೀಸಾ ನಿಯಮ ಉಲ್ಲಂಘನೆ ಮಾಡಿರುವುದಾಗಿ ಆರೋಪಗಳು ದೃಢಪಟ್ಟಿವೆ ಎಂದು ವಕೀಲ ಥಾನ್ ಜಾವ್ ಆಂಗ್ ಹೇಳಿದ್ದಾರೆ.
ದೇಶದ್ರೋಹ, ಭಯೋತ್ಪಾದನೆ ನಡೆಸಿರುವ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಸರ್ಕಾರ ಇವರನ್ನು ಬಂಧಿಸಿತ್ತು. ಮೇ 24ರಂದು ಕುಟುಂಬದವರನ್ನು ಭೇಟಿಯಾಗಲು ಅಮೆರಿಕಾದ ಡೆಟ್ರಾಯಿಟ್ ಗೆ ತೆರಳುವ ಸಂದರ್ಭದಲ್ಲಿ ಯಾಂಗೂನ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ದೇಶದ್ರೋಹ ಹಾಗೂ ಭಯೋತ್ಪಾದನೆ ನಡೆಸಿದ ಎರಡು ಆರೋಪಗಳ ಹಿನ್ನಲೆಯಲ್ಲಿ ಬಂಧನದಲ್ಲಿದ್ದ, ಅಮೆರಿಕ ಪತ್ರಕರ್ತನಿಗೆ ಇಲ್ಲಿನ ನ್ಯಾಯಾಲಯವು 11 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಆದೇಶ ನೀಡಿದೆ.
ಸೀಟ್ ಬ್ಲಾಕಿಂಗ್ ದಂಧೆಗೆ ಸರ್ಕಾರದ ಕಡಿವಾಣ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೌನ್ಸಿಲಿಂಗ್ ಸಮಯದಲ್ಲೇ ಸಂಪೂರ್ಣ ಶುಲ್ಕ ಭರ್ತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಅನುದಾನರಹಿತ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದಂತಹ ‘ಸೀಟ್ ಬ್ಲಾಕಿಂಗ್’ ಹಾವಳಿಗೆ ತೆರೆ ಎಳೆದಿದೆ.
ಈ ವರ್ಷದ ಶೈಕ್ಷಣಿಕ ಕೌನ್ಸೆಲಿಂಗ್ ಸಮಯದಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಸೇರಿದಂತೆ 20 ಲಕ್ಷ ರೂಪಾಯಿ ಮೊತ್ತದ ಸಂಪೂರ್ಣ ಶುಲ್ಕವನ್ನು ಆರಂಭದಲ್ಲಿ ಪಾವತಿಸಬೇಕು ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆದ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆಗೆ ಕಾಮೆಡ್-ಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮನದಟ್ಟು ಮಾಡಿಕೊಳ್ಳುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಲ್ಲಾ ವಿದ್ಯಾರ್ಥಿಗಳು ತಮಗೆ ಸೀಟು ದೊರೆತಾಗ ಬೋಧನಾ ಶುಲ್ಕದಲ್ಲಿ 55 ಸಾವಿರ ರೂಪಾಯಿ ಮಾತ್ರ ಪಾವತಿಸುತ್ತಿದ್ದರು. ನಂತರ ಕೌನ್ಸಿಲಿಂಗ್ ನ ಎಲ್ಲಾ ಸುತ್ತುಗಳು ಮುಗಿದ ಮೇಲೆ ಸೀಟುಗಳನ್ನು ಬಿಟ್ಟು ಕೊಡುತ್ತಿದ್ದರಿಂದ ಸ್ವಾಭಾವಿಕವಾಗಿ ಸೀಟುಗಳು ಆಡಳಿತ ಮಂಡಳಿಯ ಪಾಲಾಗುತ್ತಿತ್ತು. ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಹೆಚ್ಚಿನ ಮೊತ್ತಕ್ಕೆ ನೀಡಿ ಹಣ ಗಳಿಸುತ್ತಿದ್ದವು. ಇದರಿಂದ ಪ್ರತಿವರ್ಷ ಶೇ.15 ರಿಂದ 25 ರಷ್ಟು ಸೀಟುಗಳನ್ನು ಬ್ಲಾಕ್ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥರಾಗಿದ್ದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಮನೋಹರ್ ಸಮಿತಿಯ ಸಲಹೆಯ ಮೇರೆಗೆ ಕೆಇಎ ಕ್ರಮಕ್ಕೆ ಮುಂದಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರತದಲ್ಲಿ ಹೂಡಿಕೆ
ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಆರ್ ಬಿ ಡಿ ರಿಟೇಲ್ ಡೈರೆಕ್ಟ್ ಗಿಲ್ಟ್ ಸೌಲಭ್ಯವನ್ನು ಆರಂಭ ಗೊಳಿಸಿದ್ದಾರೆ. ಜನರು ಆನ್ ಲೈನ್ ಮೂಲಕವೇ ರಿಟೇಲ್ ಡೈರೆಕ್ಟರ್ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಿಕೊಡಲಾಗಿದೆ.
‘ಹೊಸ ಯೋಜನೆಯೂ ದೇಶದಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸಲಿದೆ. ದೇಶದ ಬಂಡವಾಳ ಮಾರುಕಟ್ಟೆಗಳು ಸರಳವಾಗಿ, ಸುರಕ್ಷಿತ ವ್ಯವಸ್ಥೆಯ ಮೂಲಕ ಲಭ್ಯವಾಗುವಂತೆ ಮಾಡುತ್ತದೆ’ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
6-7 ವರ್ಷಗಳ ಹಿಂದೆ ಬ್ಯಾಂಕಿಂಗ್, ಪಿಂಚಣಿ, ವಿಮಾವಲಯಗಳು ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಇವುಗಳು ಸಾಮಾನ್ಯ ಜನರಿಗೆ ಲಭ್ಯವಾಗುತ್ತಿರಲಿಲ್ಲ. ‘ಈ ಸೌಲಭ್ಯ ಗಳೆಲ್ಲವೂ ಬಡವರಿಗೂ ಸಿಗುವಂತೆ ಮಾಡಬೇಕಾದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಗಳು ಆ ನಿಟ್ಟಿನಲ್ಲಿ ಗಮನ ಹರಿಸಲಿಲ್ಲ’ ಎಂದು ದೂರಿದರು.
ಆರ್ ಡಿ ಜಿ ಖಾತೆಯನ್ನು ಬಳಸಿ ವ್ಯಕ್ತಿಗಳು ಸರ್ಕಾರದ ಸಾಲಪತ್ರಗಳನ್ನು ಖರೀದಿಸಬಹುದು. ಸರ್ಕಾರಿ ಸಾಲಪತ್ರಗಳನ್ನು ಖರೀದಿಸಿದವರು ಅವುಗಳನ್ನು ಇನ್ನೊಬ್ಬರಿಗೆ ಆನ್ ಲೈನ್ ಮೂಲಕವೇ ರವಾನಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಾಲಪತ್ರ ಖರೀದಿಗೆ ಹಣ ಪಾವತಿ ಯನ್ನು ಆನ್ಲೈನ್ ಬ್ಯಾಂಕಿಂಗ್ ಅಥವಾ ವ್ಯವಸ್ಥೆಯ ಮೂಲಕ ಮಾಡಬಹುದು. ಪೋರ್ಟಲ್ ಗೆ ಸಂಬಂಧಿಸಿದಂತೆ,18002677955 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ.ಈ ಯೋಜನೆ ಅಡಿಯಲ್ಲಿ ನೀಡಿರುವ ಯಾವ ಸೌಲಭ್ಯ ಕ್ಕೂ ಹಣ ಪಾವತಿಸಬೇಕಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಆರ್ ಡಿ ಜಿ ಖಾತೆ ತೆರೆಯುವ ಸಣ್ಣ ಹೂಡಿಕೆದಾರರು, ಭಾರತದಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಪ್ಯಾನ್ ಸಂಖ್ಯೆ, ಕೆವೈಸಿಗೆ ಅಗತ್ಯವಿರುವ ದಾಖಲೆಯನ್ನು ಹೊಂದಿರಬೇಕು. ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ವಿಳಾಸ ಹೊಂದಿರಬೇಕು.
ನೇಮಕ ಖಾಯಂ ಕುರಿತು ಸೇನೆಗೆ ಸುಪ್ರೀಂ ಮೃದು ಪೆಟ್ಟು
ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಸುಪ್ರೀಂಕೋರ್ಟ್ ನೀಡಿದ ಎಚ್ಚರಿಕೆಗೆ ಮಣಿದ ಸೇನೆಯು , ಎಲ್ಲಾ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನ್ವಯ ಕಾಯಂ ಹುದ್ದೆ ನೀಡುವುದಾಗಿ ತಿಳಿಸಿದೆ.
ಸೇನಾಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ‘ವುಮೆನ್ ಶಾರ್ಟ್ ಸರ್ವಿಸ್ ಕಮಿಷನ್’ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡುವಂತೆ ಲೆಫ್ಟಿನೆಂಟ್ ಕರ್ನಲ್ ನಿತಿಶಾ ಪ್ರಕರಣದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ. ಎಸ್. ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.
ನಂತರ ಹತ್ತು ದಿನಗಳ ಒಳಗಾಗಿ 11 ಮಹಿಳಾ ಅಧಿಕಾರಿಗಳ ಸೇವೆ ಕಾಯಂಗೊಳಿಸಬೇಕು ಎಂದು ಆದೇಶಿಸಿತ್ತು. ಆದರೆ, ತನ್ನ ಆದೇಶವನ್ನು ಕಡೆಗಣಿಸುತ್ತಿರುವುದು ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ತನ್ನ ಸುಪರ್ದಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಇರಬಹುದು. ಆದರೆ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಸರ್ವೋಚ್ಛ ಎನ್ನುವುದನ್ನು ಮರೆಯದಿರಿ.ಈಗಾಗಲೇ ಮಹಿಳಾ ಅಧಿಕಾರಿಗಳ ಖಾಯಂ ನೇಮಕಾತಿಗೆ ಸಾಕಷ್ಟು ಅವಧಿಯನ್ನು ಸರ್ಕಾರಕ್ಕೆ ಮತ್ತು ಭಾರತೀಯ ಸೇನೆಗೆ ಕೋರ್ಟ್ ನೀಡಿದೆ. ನೇಮಕಾತಿ ಸಂಬಂಧ ಇನ್ನೂ ಕೂಡ ಕೋರ್ಟ್ ಮೆಟ್ಟಿಲು ಏರದೇ ಇರುವವರು, ಸೇನೆಯ ಅರ್ಹತಾ ಮಾನದಂಡ ಪೂರೈಸಿದ್ದಲ್ಲಿ ಅವರಿಗೂ ಕೂಡ ಖಾಯಂ ನೇಮಕಾತಿ ಕಲ್ಪಿಸಬೇಕು. ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಯು ಸುಪ್ರೀಂ ಆದೇಶ ಉಲ್ಲಂಘಿಸಿ ನಿಂದನೆಗೆ ಗುರಿಯಾಗುವ ಹಠಮಾರಿತನ ಪ್ರದರ್ಶಿಸಲ್ಲ ಎಂಬ ವಿಶ್ವಾಸವಿದೆ” ಎಂದು ನ್ಯಾ. ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.
ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ
ಉಚಿತ ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ
ಶಿವಮೊಗ್ಗ, ನವೆಂಬರ್ 12 (ಕರ್ನಾಟಕ ವಾರ್ತೆ) ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾರ್ವಜನಿಕ ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಪ್ರಾರಂಭಿಸಲಾಗಿದ್ದು, 2021 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯ ಬಳಸಿಕೊಳ್ಳಲು ಉಚಿತವಾಗಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಜಾಲತಾಣ www.karnatakadigitalpubliclibrary.org ಮೂಲಕ e-Sarvajanika Granthalaya ಇ-ಗ್ರಂಥಾಲಯ ಸೇವೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಂಡು ಮೊಬೈಲ್, ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ ಮೂಲಕ ಪುಸ್ತಕಗಳು/ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು.
ಇ-ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಸಿಇಟಿ/ಎನ್‍ಇಇಟಿ/ಯುಪಿಎಸ್‍ಸಿ/ಕೆಪಿಎಸ್‍ಸಿ ಅಲ್ಲದೇ ರಾಜ್ಯ ಸರ್ಕಾರದ ಸಿಬಿಎಸ್‍ಸಿ/ಐಸಿಎಸ್‍ಇ/ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳು ಮತ್ತು ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಉಚಿತ ಸದಸ್ಯತ್ವ ಪಡೆದು ಇದರ ಸದುಪಯೋಗ ಪಡೆಯಬೇಕೆಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ತಂತ್ರಜ್ಞಾನ ಶೃಂಗ ಸಮಾವೇಶ
ಡಿಟಿಎಸ್ 2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯೂರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಕಡೆಗೆ ಗಮನ ಹರಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
ನವೆಂಬರ್ 15ರಿಂದ 19ರವರೆಗೆ ನಡೆಯಲಿರುವ 24ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಮೊದಲ ಬಾರಿಗೆ ಅರಬ್ ಸಂಸ್ಥಾನ, ವಿಯೆಟ್ನಾಮ್, ಯುರೋಪಿಯನ್ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು” ಸರಕಾರದ ಜಾಗತಿಕ ನಾವಿನ್ಯತೆ ಮೈತ್ರಿಕೂಟ ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಹೆಜ್ಜೆ ಇಡಲಾಗಿದೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜೊತೆಗಿನ ಸಹಭಾಗಿತ್ವವು, ಹೊಸ ಕ್ಷೇತ್ರದಲ್ಲಿ ಮತ್ತಷ್ಟು ಅಂತರಾಷ್ಟ್ರೀಯ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಡಿಟಿಎಸ್ 2021ರಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಡ್ಜರ್ಲ್ಯಾಂಡ್ ಇನ್ನೂ ಮುಂತಾದ ದೇಶಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದವು.
