ಡಿಟಿಎಸ್ 2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯೂರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಕಡೆಗೆ ಗಮನ ಹರಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
ನವೆಂಬರ್ 15ರಿಂದ 19ರವರೆಗೆ ನಡೆಯಲಿರುವ 24ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಮೊದಲ ಬಾರಿಗೆ ಅರಬ್ ಸಂಸ್ಥಾನ, ವಿಯೆಟ್ನಾಮ್, ಯುರೋಪಿಯನ್ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು” ಸರಕಾರದ ಜಾಗತಿಕ ನಾವಿನ್ಯತೆ ಮೈತ್ರಿಕೂಟ ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಹೆಜ್ಜೆ ಇಡಲಾಗಿದೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜೊತೆಗಿನ ಸಹಭಾಗಿತ್ವವು, ಹೊಸ ಕ್ಷೇತ್ರದಲ್ಲಿ ಮತ್ತಷ್ಟು ಅಂತರಾಷ್ಟ್ರೀಯ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಡಿಟಿಎಸ್ 2021ರಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಡ್ಜರ್ಲ್ಯಾಂಡ್ ಇನ್ನೂ ಮುಂತಾದ ದೇಶಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದವು.