ನವದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಉಸಿರಾಡುವ ಗಾಳಿ ವಿಷವಾಗಿ ಪರಿಣಮಿಸಿದೆ. ಈ ಮಾಲಿನ್ಯ ನಿಯಂತ್ರಣಕ್ಕಾಗಿ, ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಕ್ರಮಗಳನ್ನು ಘೋಷಿಸಿದ್ದಾರೆ.
ನವದೆಹಲಿಯಲ್ಲಿ, ಜನತೆಯನ್ನು ಸಂಕಷ್ಟಕ್ಕೆ ಸಿಲುಕಿರುವ ಈ ಮಾಲಿನ್ಯದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಎರಡು ದಿನ ಲಾಕ್ಡೌನ್ ಘೋಷಿಸುವಂತೆ ಸುಪ್ರೀಂಕೋರ್ಟ್ ಸಲಹೆಯನ್ನು ಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿ ದೆಹಲಿಯ ಮುಖ್ಯಮಂತ್ರಿಗಳು ತುರ್ತು ಸಭೆ ಏರ್ಪಡಿಸಿದ್ದರು. ಒಂದು ವಾರ ಅವಧಿ ಎಲ್ಲಾ ಶಾಲೆಗಳನ್ನು ಬಂದ್ ಮಾಡಬೇಕು. ಕೇವಲ ಆನ್ಲೈನ್ ತರಗತಿಗಳನ್ನ ಮಾತ್ರ ನಡೆಸಬಹುದು. ಈ ಅವಧಿಯಲ್ಲಿ ಸರ್ಕಾರಿ ಸಿಬ್ಬಂದಿ ಗಳಿಗೆ ವರ್ಕ್ ಫ್ರಂ ಹೋಮ್ ಮಾಡಲು ಹೇಳಿದೆ. ಇನ್ನೂ ಮುಖ್ಯವಾಗಿ ದಿಲ್ಲಿಯ ಸುತ್ತ ಕಟ್ಟಡ ನಿರ್ಮಾಣ ಕಾಮಗಾರಿ ಮುಂದಿನ ಆದೇಶದವರೆಗೆ ನಡೆಸುವಂತಿಲ್ಲ. ಈ ಸಂಗತಿಯನ್ನು ಮುಖ್ಯಮಂತ್ರಿಗಳು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.
‘ಬೆಳೆ ತ್ಯಾಜ್ಯ ಸುಡುವುದು ಶೇ.25ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ. ಇನ್ನುಳಿದ ಮಾಲಿನ್ಯವು ಪಟಾಕಿ ಸುಡುವಿಕೆ, ವಾಹನಗಳಿಂದ ಹೊಗೆ ಉಗುಳುವುದು ಮತ್ತು ಧೂಳಿನಿಂದ ಆಗುತ್ತಿದೆ. ಪ್ರಸ್ತುತ ಪರಿಸ್ಥಿತಿಯು ತೀರಾ ಹದಗೆಟ್ಟಿದೆ. ಜನ ಮನೆಯಲ್ಲಿ ಇದ್ದರೂ ಕೂಡ ಮಾಸ್ಕ್ ಧರಿಸುವ ಪರಿಸ್ಥಿತಿ ಉಂಟಾಗಿದೆ. ಇಂಥಹ ತೀರಾ ಕೆಟ್ಟ ಸನ್ನಿವೇಶದಲ್ಲಿ ಜನರು ಬದುಕುವುದು ಹೇಗೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಕೇಂದ್ರ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದ್ದರು.
ಬೆಳೆ ತ್ಯಾಜ್ಯ ಸುಡುವಿಕೆ ನಿಲ್ಲಿಸುವಂತೆ ರೈತರಿಗೆ ಸೂಚನೆಯನ್ನು ನೀಡಲಾಗಿದೆ. ಸರ್ಕಾರ ಇದರ ಕೈಗೊಂಡಿರುವ ಕ್ರಮಗಳ ಬಗ್ಗೆ ತುಷಾರ್ ಮೆಹ್ತಾ ವಿವರಣೆ ನೀಡಿದ್ದಾರೆ. ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ‘ ರೈತರನ್ನು ದೂಷಿಸುವ ಬದಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಯುಮಾಲಿನ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸೂಚಿಸಿದರು.