ಅಕ್ಟೋಬರ್ 31ರಂದು ಖಲಿಸ್ತಾನ ಪರ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಬ್ರಿಟನ್ ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾರತದ ಪಂಜಾಬ್ ನಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗೂ ಅದರ ಲಾಭ ಪಡೆಯುವ ತಂತ್ರಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಭಾರತದ ಆಂತರಿಕ ವಿಷಯಕ್ಕೆ ಬ್ರಿಟನ್ ಮೂಗು ತೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಭಾರತ ಬ್ರಿಟನ್ ವಿರುದ್ಧ ಕೆರಳಿದೆ.
ತನ್ನ ನೆಲದಲ್ಲಿ ಭಾರತದ ವಿರೋಧಿ ಶಕ್ತಿಗಳಿಗೆ ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಬ್ರಿಟನ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬ್ರಿಟನ್ ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಟೀಫನ್ ಲವ್ ಗ್ರೋವ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ “ಇಂತಹ ಸಭೆಗಳ ಮೂಲಕ ಮೂಲಭೂತವಾದಿ ಸಂಘಟನೆಗಳು ವಿದೇಶಗಳಲ್ಲಿನ ಭಾರತೀಯರನ್ನು ಭಾರತದ ವಿರುದ್ಧವೇ ಎತ್ತಿಕಟ್ಟಲು ಯತ್ನಿಸುತ್ತಿವೆ ಇದನ್ನು ಸಹಿಸಲ್ಲ” ಎಂದಿದ್ದಾರೆ.
ಭಾರತ ರಾಷ್ಟ್ರವು ವಿನಾಕಾರಣ ಯಾವುದೇ ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕುತ್ತಿಲ್ಲ, ಅದು ಭಾರತದ ಸ್ವಭಾವವು ಅಲ್ಲ. ಇಂತಹ ಸನ್ನಿವೇಶದಲ್ಲಿ ಬ್ರಿಟನ್ ಇಂತಹ ಸಭೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸಖೇದಾಶ್ಚರ್ಯ. ಇನ್ನು ಮುಂದಾದರೂ ಈ ರೀತಿಯ ಸಭೆಗಳನ್ನು ನಡೆಸಿದಿರಲು ಬ್ರಿಟನ್ ಸರ್ಕಾರ ಜಾಗೃತಿ ವಹಿಸುವುದು ಒಳಿತು.