ಗುಡಿಸಲಿಗೆ ಬೆಂಕಿಬಿದ್ದಾಗ ಮೈ ಕಾಸಿಕೊಂಡರಂತೆ ಅಂದಹಾಗೆ ಜಗತ್ತಿನಲ್ಲಿ ಈ ತರಹೆಯ ಜನ ಇದ್ದಾರೆ ಅನ್ನುವುದೂ ಸುಳ್ಳಲ್ಲ.
ಉಕ್ರೇನ್ ಮೇಲೆ ದಾಳಿಗೈದ ರಷ್ಯನ್ ಸೈನಿಕರು ನಾಗರಿಕರನ್ನ ಕೊಂದದ್ದೇ ಅಲ್ಲದೆ ಅವರ ಮನೆಯಲ್ಲಿನ ವಸ್ತುಗಳನ್ನೂ ದೋಚಿದ್ದಾರೆ.
ಬೈಲಾರುಸ್ ನಲ್ಲಿ ಈ ವಸ್ತುಗಳಿಗೆ ಒಂದು ಪುಟ್ಟ ಮಾರುಕಟ್ಟೆಯನ್ನೇ ನಡೆಸುತ್ತಿದ್ದಾರೆ.
ಮನೆಗಳಲ್ಲಿನ ಫ್ರಿಜ್ಜು, ಡಿಶ್ ವಾಷರ್,ವಾಷಿಂಗ್ ಮೆಷೀನು,ಆಭರಣಗಳು,ಕಾರುಗಳು, ಸೈಕಲ್ಲುಗಳು,ಮೋಟರ್ ಬೈಕುಗಳು,ಅಡುಗೆ ಮನೆ ಪಾತ್ರೆಗಳು,ರತ್ನಗಂಬಳಿ, ಕಲಾಕೃತಿಗಳು ,ಮಕ್ಕಳ ಆಟಿಕೆಗಳು..ಇತ್ಯಾದಿಗಳನ್ನ ಮಾರಾಟಮಾಡುತ್ತಿದ್ದಾರೆ. ಇದನ್ನ ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ .
ಯುದ್ಧದಲ್ಲೂ ಕದ್ದ ಮಾಲುಗಳಿಗೆ ಮಾರುಕಟ್ಟೆ
ಈಗ ಭದ್ರತಾ ಮಂಡಳಿ ವೇದಿಕೆಯಲ್ಲಿ ಉಕ್ರೇನ್ ಆಕ್ರಂದನ
ಇಷ್ಟೂ ದಿನದ ಇಕ್ರೇನ್ ರಷ್ಯದ ಯುದ್ಧದ ಬಿಸಿ ಈಗ ಝೆಲೆನ್ಸ್ಕಿ ಅವರ ಮೂಲಕ ಭದ್ರತಾ ಮಂಡಳಿಗೆ ತಟ್ಟಲಿದೆ.
ಜಗತ್ತಿನ ಮೂಲೆ ಮೂಲೆ ರಾಷ್ಟ್ರಗಳ ಕಿವಿಗೆ ಉಕ್ರೇನ್ ಉಳಿಸಿ ಎಂಬ ಆಕ್ರಂದನ ಕೇಳುವಂತೆ ಮಾಡಿದ್ದಾರೆ.ಆದರೂ ಅವರಿಗೆ ನಿರೀಕ್ಷಿತ ಫಲ ದೊರೆತಿಲ್ಲ.
ವಿಶ್ವಸಂಸ್ಥೆ ಕೂಡ ಸಹಾನುಭೂತಿಯಿಂದ
ಉಕ್ರೇನ್ ಪರಿಸ್ಥಿತಿ ಅವಲೋಕಿಸುತ್ತಿದೆ.
ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಈಗಾಗಲೇ ಉಕ್ರೇನ್ ನಲ್ಲಿ 410 ನಾಗರಿಕರ ಶವಗಳನ್ನ ನೋಡಿ ಜಾಗತಿಕ ಗಮನ ಸೆಳೆದಿದ್ದಾರೆ. ಎಪ್ರಿಲ್ 5 ರ ಮಂಗಳವಾರ ಉಕ್ರೇನ್ ಅಧ್ಯಕ್ಷ ನಮ್ಮ ನಿಲುವನ್ನ ಭದ್ರತಾ ಮಂಡಳಿಯಲ್ಲಿ ಸಾದರ ಪಡಿಸಲು ನಿಗದಿಯಾಗಿದೆ.
ಈ ಮೂಲಕ ಉಲ್ಬಣಗೊಂಡ ಸಮರ ಸನ್ನಿವೇಶದ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶವಾಗಲಿದೆ.
ನಮ್ಮ ಜಗತ್ತು ಮಾಹಿತಿ ಸ್ಫೋಟ ದಿಂದ ವಿಶ್ವಗ್ರಾಮವಾಗಿದೆ ಎನ್ನುತ್ತೇವೆ.ಆದರೆ ಈ ಅಮಾನವೀಯ ಯುದ್ಧದ ಪರಿಣಾಮದ ಬಗ್ಗೆ ಯಾವ ದೇಶವೂ ಮೈಕೊಡವಿ ಎದ್ದಂತಿಲ್ಲ.
ಶಿಕ್ಷಕಿಯರು ಹಿಜಾಬ್ ಧರಿಸುವಂತಿಲ್ಲ- ನಾಗೇಶ್
ಶಿಕ್ಷಕಿಯರು ಕೊಠಡಿಯಲ್ಲಿ ಹಿಜಾಬ್ ಧರಿಸಲು ನಿಷೇಧಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಮವಸ್ತ್ರ ಸಂಹಿತೆ ಅನ್ವಯವಾಗುವುದಿಲ್ಲ.
ಆದ್ದರಿಂದ, ಶಿಕ್ಷಕರು ಅಥವಾ ಪರೀಕ್ಷಾ ಮೇಲ್ವಿಚಾರಕರಿಗೆ ಸಮವಸ್ತ್ರ ನಿಯಮ ಅನ್ವಯವಾಗುವುದಿಲ್ಲ. ಆದರೂ ನೈತಿಕತೆ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕಿಯರೂ ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.
ಇನ್ನು ಪರೀಕ್ಷೆ ಸಂದರ್ಭದಲ್ಲಿ ಕೊಠಡಿಯಲ್ಲಿ ವಿದ್ಯಾರ್ಥಿ ಮತ್ತು ಮಕ್ಕಳನ್ನು ಹೊರತುಪಡಿಸಿ ಯಾರೂ ಇರುವುದಿಲ್ಲ. ಮಕ್ಕಳ ಮುಂದೆ ಹಿಜಾಬ್ ಧರಿಸುವ ಅವಶ್ಯಕತೆ ಇರುವುದಿಲ್ಲ. ಹಿಜಾಬ್ ಇಲ್ಲದೆ ಬಂದರೆ ಏನೂ ಆಗುವುದಿಲ್ಲ. ಈ ಬಗ್ಗೆ ಆಯಾ ಶಾಲೆಯ ಆಡಳಿತ ಮಂಡಳಿಗಳು ಮನವೊಲಿಸಿ ಸಮಸ್ಯೆ ಇದ್ದರೆ ಪರಿಹರಿಸಿಕೊಳ್ಳಬೇಕು ಎಂದು ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ.
ಒಂದು ವರ್ಷದಲ್ಲಿ ನಾಲ್ಕು ಲೈನ್ ಹೆದ್ದಾರಿ ಕಾಮಗಾರಿ ಪೂರ್ಣ- ಹರತಾಳು ಹಾಲಪ್ಪ
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಹಾಲಪ್ಪನವರು ರಾಷ್ಟ್ರೀಯ ಹೆದ್ದಾರಿಯ ಹಿರಿಯ ಅಧಿಕಾರಿಗಳೊಂದಿಗೆ ಬಿ.ಹೆಚ್. ರಸ್ತೆಯ ಅಗಲೀಕರಣ ಕಾಮಗಾರಿ ವೀಕ್ಷಿಸಿದರು.
ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಈಗಾಗಲೆ ತಮಗೆಲ್ಲ ಗೊತ್ತಿರುವ ಹಾಗೆ 77 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಎಂಟು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಲೈನ್ ಯೋಜನೆಯ ಕಾಮಗಾರಿ ಪ್ರಾರಂಭಗೊಂಡಿದೆ.
ಇದನ್ನು ವೀಕ್ಷಿಸಲು ಬೆಂಗಳೂರಿನಿಂದ ಮುಖ್ಯ ಇಂಜಿನಿಯರ್ ಗಳು ಬಂದಿದ್ದಾರೆ. ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಬರುವ ಮುಂದಿನ ಒಂದು ವರ್ಷದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ. ಮುಂದಿನ ವರ್ಷ ಮಾರಿಜಾತ್ರೆ ಇರುವುದರಿಂದ ಮಾರಿ ಜಾತ್ರೆಯ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ.
ಬಹುದಿನಗಳ ಈ ಯೋಜನೆಯು ಕಾರ್ಯರೂಪಕ್ಕೆ ಬರುತ್ತಿರುವುದು ಸಂತೋಷದ ವಿಚಾರ ಎಂದರು.
ಉಕ್ರೇನ್ ರಷ್ಯ ಬಿಕ್ಕಟ್ಟು ಭಾರತ ಮಧ್ಯಸ್ಥಿಕೆ ವಹಿಸಿದರೆ ರಷ್ಯ ಬೆಂಬಲಿಸುತ್ತದೆ
ರಷ್ಯಾ ಉಕ್ರೇನ್ ನಡುವೆ ಬಿಕ್ಕಟ್ಟು ಪರಿಹಾರಕ್ಕೆ ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್ ಅವರಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಲಾವ್ರೊವ್, ಭಾರತವು ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸಲು ಇಚ್ಛಿಸಿದರೆ, ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಹಾಗೂ ತರ್ಕಬದ್ಧವಾದ ವಿಧಾನದ ಮೂಲಕ ಪರಿಹಾರ ನೀಡುವುದಾದರೆ ಮಧ್ಯಸ್ಥಿಕೆ ವಹಿಸುವುದನ್ನು ರಷ್ಯಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ರಷ್ಯಾ ಪಡೆಗಳು ಚೆರ್ನೋಬಿಲ್ ಪರಮಾಣು ಸ್ಥಾವರದಿಂದ ನಿರ್ಗಮಿಸುತ್ತಿವೆ ಮತ್ತು ಉಕ್ರೇನಿನ ಗಡಿ ಬೆಲಾರಸ್ ಕಡೆಗೆ ತೆರಳುತ್ತಿವೆ ಎಂದು ಉಕ್ರೇನ್ ಪರಮಾಣು ಘಟಕ ಕಂಪನಿಯ ಕಾರ‍್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ನ್ಯೂಕ್ಲಿಯರ್ ಘಟಕದ ಕಾರ್ಮಿಕರು ನೆಲೆಸಿರುವ ಸ್ಲಾವುಟಿಚ್ ನಗರದಿಂದಲೂ ರಷ್ಯಾ ಸೇನೆ ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಚೆರ್ನೋಬಿಲ ಸ್ಥಾವರದ ಸುತ್ತಲಿನ 10 ಚ. ಕಿ.ಮೀ ಪ್ರದೇಶದ ಕೆಂಪು ಅರಣ್ಯದಲ್ಲಿ ರಷ್ಯನ್ನರು ಕಂದಕಗಳನ್ನು ಅಗೆದಿದ್ದಾರೆ ಎಂದು ವರದಿಗಳು ದೃಢಪಡಿಸಿವೆ. ವಿಕಿರಣ ಸೋರಿಕೆಯಿಂದ ರಷ್ಯಾ ಸೈನಿಕರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಆದ್ದರಿಂದ ಗಾಬರಿಗೊಂಡು ಸ್ಥಳದಿಂದ ನಿರ್ಗಮಿಸಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.
ಹಿಂದುತ್ವ ಬಲಗೊಳ್ಳಬೇಕಾದರೆ ಅಸ್ಪೃಶ್ಯತೆ ತೊಲಗಬೇಕು
ಜಾತೀಯತೆಯ ಬೇಧದಿಂದ ಮತಾಂತರ ಪಿಡುಗು ತಲೆದೋರಿದೆ. ಅಸ್ಪೃಶ್ಯತೆ ತೊಲಗಿ ನಾವೆಲ್ಲರೂ ಒಂದು ಎಂಬ ಭಾವ ಮೂಡಿದಾಗ ಹಿಂದುತ್ವ ಬಲಗೊಳ್ಳುತ್ತದೆ ಎಂದು ಪರ್ಯಾವರಣ ಸಂರಕ್ಷಣೆ ಗತಿವಿಧಿಯ ರಾಜ್ಯ ಘಟಕದ ಸಂಚಾಲಕ ಜಯರಾಮ ಬೊಳ್ಳಾಜಿ ಎಂದು ತಿಳಿಸಿದರು.
ಶಿರಸಿಯ ಮಾರಿಕಾಂಬಾ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಯುಗಾದಿ ಉತ್ಸವ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಪರಿಸರದ ವಿರುದ್ಧ ಮನುಷ್ಯ ಹೋದ ಕಾರಣಕ್ಕೆ ಎರಡು ವರ್ಷ ವಿಪ್ಲವ ಅನುಭವಿಸಬೇಕಾಯಿತು.
ಪರಿಸರಕ್ಕೆ ಪೂರಕವಾಗಿ ಬದುಕುವುದನ್ನು ಕಲಿಯಿರಿ ಎಂದರು.
ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಭಗವದ್ಗೀತೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅದರ ಚಿಂತನೆಗಳು ಸಾರ್ವಕಾಲಿಕ, ಸರ್ವಹಿತದಿಂದ ಕೂಡಿದೆ ಎಂದರು.
ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ, ಜಾತೀಯತೆಯ ರೋಗದಿಂದ ಹೊರಬೇಕಾಗಿದೆ. ಧರ್ಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗಬೇಕು ಎಂದರು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣಾನಂದ ಕೊಡಿಯಾ, ಗೌರವಾಧ್ಯಕ್ಷ ಎಂ.ಎಂ.ಭಟ್ ಕಾರೆಕೊಪ್ಪ, ಸಂಚಾಲಕ ಗೋಪಾಲ ದೇವಾಡಿಗ, ಸಲಹೆಗಾರ ರಮೇಶ ದುಬಾಶಿ, ದೀಪಾ ಮಹಾಲಿಂಗಣ್ಣನವರ ಇದ್ದರು.
ಮಾರಿಕಾಂಬಾ ಹೈಸ್ಕೂಲ್ ಮೈದಾನದಿಂದ ಮಾರಿಕಾಂಬಾ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. 25ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಬ್ರಹ್ಮಶ್ರೀ ನಾರಾಯಣಗುರು, ಡಾ.ಶಿವಕುಮಾರ ಸ್ವಾಮೀಜಿ ಅವರ ಸ್ತಬ್ಧಚಿತ್ರಗಳು ಸಾಮಾಜಿಕ ಸಂದೇಶ ಸಾರಿದವು.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮುಸ್ಲೀಮರು ಈ ಬಗ್ಗೆ ಚಿಂತಿಸಲಿ- ಈಶ್ವರಪ್ಪ
ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ವಿಚಾರದ ಕುರಿತಂತೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರು ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಮಸೀದಿಯೊಳಗೆ ಶಬ್ದ ಕೇಳುವಂತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಧ್ವನಿವರ್ಧಕ ಬಳಸುತ್ತಾ ಹೋದರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಜೋರಾಗಿ ಧ್ವನಿವರ್ಧಕ ಹಾಕಿದ್ರೆ ವಿದ್ಯಾರ್ಥಿಗಳು ಓದಿಕೊಳ್ಳುವುದಕ್ಕೂ ಸಮಸ್ಯೆಯಾಗುತ್ತದೆ. ಹೀಗಾಗಿ ಮುಸ್ಲಿಮರು ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.
ಮುಂಚೆಯಿಂದಲೂ ಬಂದಂತಹ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡುತ್ತೇವೆ ಎನ್ನುವುದು ಮುಸ್ಲಿಮರ ವಾದ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗ್ತಾರೆ, ಅದಕ್ಕೆ ಹನುಮಾನ್ ಚಾಲೀಸ ಮೈಕಿನಲ್ಲಿ ಹಾಕ್ಬೇಕು ಅಂತಾ ನಾವು ಸ್ಪರ್ಧೆ ಮಾಡಬಾರದು. ಮುಸ್ಲಿಂ ಸಮುದಾಯದ ಮುಖಂಡರು ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು ಎಂದರು.
ಸದ್ಯದಲ್ಲೇ ಬಸವರಾಜ ಹೊರಟ್ಟಿ ಬಿಜೆಪಿಗೆ ಎಂಟ್ರಿ
ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿಯವರು ಸ್ಪರ್ಧಿಸಲಿದ್ದಾರೆ.
ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ದಿನಾಂಕ ಘೋಷಣೆ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.
ಮಾಧ್ತಮಿಕ ಶಿಕ್ಷಕರ ಸಂಘವು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವರಾಜಪಥ ಕಿರು ಹೊತ್ತಿಗೆ ಬಿಡುಗಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ.ಯಡಿಯೂರಪ್ಪ ಅವರೂ ಒಪ್ಪಿದ್ದಾರೆ. ವಿಶೇಷವಾಗಿ ನಮ್ಮ ಎಚ್.ಡಿ. ಕುಮಾರಸ್ವಾಮಿ ಅವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.
ಪರಿಷತ್ ಗೆ ಮತ್ತೆ ನೀವು ಬರಲೇಬೇಕು. ನಿಮ್ಮ ನಿರ್ಧಾರಕ್ಕೆ ಸಹಮತವಿದೆ ಎಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸೆರ್ಪಡೆಗೆ ಆ ಪಕ್ಷದ ಕೆಲವರಿಂದ ವಿರೋಧವಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ‘ಯಾರು ವಿರೋಧ ಮಾಡುತ್ತಿದ್ದಾರೆ ಅದು ನನಗೆ ಬೇಕಾಗಿಲ್ಲ. ಶನಿವಾರ ಯಡಿಯೂರಪ್ಪ ಅವರು ನನ್ನೊಂದಿಗೆ ಮಾತನಾಡಿದ್ದಾರೆ ಎಂದರು.
ಬಿಜೆಪಿ ಸೇರ್ಪಡೆಗೆ ಕರ್ನಾಟಕದ ಎಲ್ಲಾ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೊರಟ್ಟಿ ತಿಳಿಸಿದ್ದಾರೆ.
ಆರ್ಥಿಕ ಹಿನ್ನೆಲೆಯಲ್ಲಿ ಕೇಂದ್ರ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಪರಾಮರ್ಶೆ
ಭಾರತದ ವಿವಿಧ ರಾಜ್ಯಗಳಲ್ಲಿ ಘೋಷಿಸಿರುವ ಜನಪರ ಯೋಜನೆಗಳ ಬಗ್ಗೆ ಪ್ರಧಾನಿ ಜೊತೆಗಿನ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗಳು ಆರ್ಥಿಕವಾಗಿ ಲಾಭದಾಯಕವಲ್ಲ, ರಾಜ್ಯಗಳ ಸ್ಥಿತಿಯೂ ಶ್ರೀಲಂಕಾದಂತೆಯೇ ಆಗಬಹುದೆಂದು ಅಧಿಕಾರಿಗಳು ಪ್ರಧಾನಿಗಳೆದುರು ಆತಂಕ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸತತ ನಾಲ್ಕು ಗಂಟೆಗಳ ಕಾಲು ಸುದೀರ್ಘ ಸಭೆ ನಡೆಸಿದ್ರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಚಿವ ಪಿಕೆ ಮಿಶ್ರಾ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಕೇಂದ್ರ ಸರ್ಕಾರದ ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
2014ರಿಂದೀಚೆಗೆ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ಮೋದಿ ಅವರು ನಡೆಸಿದ ಒಂಭತ್ತನೇ ಸಭೆ ಇದಾಗಿತ್ತು.
24ಕ್ಕೂ ಹೆಚ್ಚು ಕಾರ್ಯದರ್ಶಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಇದನ್ನೆಲ್ಲ ಗಮನವಿಟ್ಟು ಆಲಿಸಿದ್ದಾರಂತೆ. ಆರ್ಥಿಕವಾಗಿ ಹಿಂದುಳಿದಿರುವ ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಲಾದ ಜನಪರ ಯೋಜನೆಯ ಬಗ್ಗೆ ಇಬ್ಬರು ಕಾರ್ಯದರ್ಶಿಗಳು ಉಲ್ಲೇಖಿಸಿದ್ದಾರೆ.
ಈ ಯೋಜನೆ ಆರ್ಥಿಕವಾಗಿ ಸಮರ್ಥನೀಯವಾಗಿಲ್ಲ, ಇದು ರಾಜ್ಯಗಳನ್ನು ಶ್ರೀಲಂಕಾದ ದಾರಿಯಲ್ಲಿ ಕೊಂಡೊಯ್ಯಬಹುದು ಎಂದರು.
ಹಿಂಜರಿತದ ಮನಸ್ಥಿತಿಯಿಂದ ಹೊರಬರುವಂತೆ ಸಲಹೆ ನೀಡಿದ ಮೋದಿ, ಹೆಚ್ಚುವರಿ ನಿರ್ವಹಣೆಯನ್ನು ನಿಭಾಯಿಸಲು ಹೊಸ ಸವಾಲನ್ನು ಎದುರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿಸುವುದನ್ನು ಬಿಟ್ಟು ಬಡತನದ ನೆಪ ಹೇಳುವ ಹಳೆಯ ಅಭ್ಯಾಸವನ್ನು ಕೈಬಿಡಿ ಎಂದು ಹೇಳಿದ್ದಾರೆ. ಕೋವಿಡ್ ತುರ್ತು ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದನ್ನು ಮೋದಿ ಉಲ್ಲೇಖಿಸಿದ್ದರು.
ತಮ್ಮ ತಮ್ಮ ಇಲಾಖೆಗಳ ಕಾರ್ಯದರ್ಶಿಗಳು ಎಂದುಕೊಳ್ಳಬೇಡಿ. ನೀವೆಲ್ಲರೂ ಭಾರತ ಸರ್ಕಾರದ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಬೇಕು. ಒಗ್ಗಟ್ಟಿನಲ್ಲಿ ತಂಡವಾಗಿ ಕೆಲಸ ಮಾಡಬೇಕು ಎಂದು ಮೋದಿ ಸಲಹೆ ನೀಡಿದರು. ಆಯಾ ಸಚಿವಾಲಯಗಳಿಗೆ ಸಂಬಂಧಿಸಿದ ನೀತಿಗಳಲ್ಲಿರುವ ಲೋಪದೋಷಗಳ ಬಗ್ಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ನೀಡುವಂತೆ ಅವರು ಕಾರ್ಯದರ್ಶಿಗಳಿಗೆ ತಿಳಿಸಿದರು.
ಆಡಳಿತದಲ್ಲಿ ಒಟ್ಟಾರೆ ಸುಧಾರಣೆಗಳಿಗೆ ಹೊಸ ಹೊಸ ಆಲೋಚನೆಗಳನ್ನು ಸೂಚಿಸಲು ಪ್ರಧಾನಿ ಮೋದಿ ಕಾರ್ಯದರ್ಶಿಗಳ ಆರು-ವಲಯಗಳ ಗುಂಪುಗಳನ್ನು ಸಹ ರಚಿಸಿದ್ದಾರೆ.
ವಿದ್ಯುತ್ ದರ ಏರಿಕೆ ಶಾಕ್!
ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಈಗ ವಿದ್ಯುತ್ ದರ ಏರಿಕೆ ಶಾಕ್ ಕೂಡ ಜನ ಸಾಮಾನ್ಯರಿಗೆ ತಟ್ಟುವ ನಿರೀಕ್ಷೆ ಇದೆ. ಈಗಾಗಲೇ ವಿದ್ಯುತ್ ಸಂಸ್ಥೆಗಳು ನಷ್ಟ ಸರಿದೂಗಿಸಲು ದರ ಏರಿಕೆಯ ಪ್ರಸ್ತಾಪವನ್ನು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ ಸಲ್ಲಿಸಿದ್ದು, ವಿಚಾರಣೆ ನಡೆಸಿ ಆಕ್ಷೇಪಣೆಗಳನ್ನು ಆಲಿಸಿದೆ. ಇಂದು ಪತ್ರಿಕಾಗೋಷ್ಠಿ ನಡೆಸಲಿರುವ ಆಯೋಗದ ಹಂಗಾಮಿ ಅಧ್ಯಕ್ಷ ಎಚ್.ಎಂ.ಮಂಜುನಾಥ್ ಅವರು ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಗೃಹೋಪಯೋಗಿ ವಿದ್ಯುತ್ ಪ್ರತಿ ಯೂನಿಟ್‍ಗೆ 10ರಿಂದ 20 ಪೈಸೆ, ವಾಣಿಜ್ಯ ಬಳಕೆ ಯೂನಿಟ್‍ಗೆ 15ರಿಂದ 25 ಪೈಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಸಂಸ್ಥೆಗಳು ಪ್ರತಿ ಯೂನಿಟ್‍ಗೆ ಕನಿಷ್ಠ 40 ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು. ಇದಕ್ಕೆ ಕೈಗಾರಿಕಾ ವಲಯ ಸೇರಿದಂತೆ ಹಲವು ಉದ್ಯಮಗಳು ಭಾರೀ ಆಕ್ಷೇಪಣೆ ಸಲ್ಲಿಸಿದ್ದವು.
