ರಷ್ಯಾ ಉಕ್ರೇನ್ ನಡುವೆ ಬಿಕ್ಕಟ್ಟು ಪರಿಹಾರಕ್ಕೆ ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೊವ್ ಅವರಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಕ್ರೇನ್ ಮೇಲಿನ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ್ದ ಲಾವ್ರೊವ್, ಭಾರತವು ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಉದ್ದೇಶದಿಂದ ಮಧ್ಯಸ್ಥಿಕೆ ವಹಿಸಲು ಇಚ್ಛಿಸಿದರೆ, ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಹಾಗೂ ತರ್ಕಬದ್ಧವಾದ ವಿಧಾನದ ಮೂಲಕ ಪರಿಹಾರ ನೀಡುವುದಾದರೆ ಮಧ್ಯಸ್ಥಿಕೆ ವಹಿಸುವುದನ್ನು ರಷ್ಯಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ರಷ್ಯಾ ಪಡೆಗಳು ಚೆರ್ನೋಬಿಲ್ ಪರಮಾಣು ಸ್ಥಾವರದಿಂದ ನಿರ್ಗಮಿಸುತ್ತಿವೆ ಮತ್ತು ಉಕ್ರೇನಿನ ಗಡಿ ಬೆಲಾರಸ್ ಕಡೆಗೆ ತೆರಳುತ್ತಿವೆ ಎಂದು ಉಕ್ರೇನ್ ಪರಮಾಣು ಘಟಕ ಕಂಪನಿಯ ಕಾರ‍್ಯನಿರ್ವಹಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ನ್ಯೂಕ್ಲಿಯರ್ ಘಟಕದ ಕಾರ್ಮಿಕರು ನೆಲೆಸಿರುವ ಸ್ಲಾವುಟಿಚ್ ನಗರದಿಂದಲೂ ರಷ್ಯಾ ಸೇನೆ ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಚೆರ್ನೋಬಿಲ ಸ್ಥಾವರದ ಸುತ್ತಲಿನ 10 ಚ. ಕಿ.ಮೀ ಪ್ರದೇಶದ ಕೆಂಪು ಅರಣ್ಯದಲ್ಲಿ ರಷ್ಯನ್ನರು ಕಂದಕಗಳನ್ನು ಅಗೆದಿದ್ದಾರೆ ಎಂದು ವರದಿಗಳು ದೃಢಪಡಿಸಿವೆ. ವಿಕಿರಣ ಸೋರಿಕೆಯಿಂದ ರಷ್ಯಾ ಸೈನಿಕರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಆದ್ದರಿಂದ ಗಾಬರಿಗೊಂಡು ಸ್ಥಳದಿಂದ ನಿರ್ಗಮಿಸಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.