Tuesday, February 24, 2026
Tuesday, February 24, 2026
Home Blog Page 1639

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ತಾಸುಗಳ ಸೇವೆ

0

ಕರ್ನಾಟಕದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅದರ ಮೇಲ್ದರ್ಜೆಯ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲ ತುರ್ತು ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರಲಿವೆ.

ಈ ಬಗ್ಗೆ ಕ್ರಮ ಕೈಗೊಳ್ಳಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಸಮುದಾಯ ಆರೋಗ್ಯ ಹಾಗೂ ಅದರ ಮೇಲ್ದರ್ಜೆಯ ಆಸ್ಪತ್ರೆಗಳಲ್ಲಿನ ತುರ್ತು ಸೇವೆಗಳ ಸಿಬ್ಬಂದಿಗಳಾದ ವೈದ್ಯಾಧಿಕಾರಿಗಳು, ಶುಶ್ರೂಷಾಧಿಕಾರಿಗಳು ಮತ್ತು ಗ್ರೂಪ್ ಡಿ ನೌಕರರು ಕರ್ತವ್ಯದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ.

ಕರ್ತವ್ಯದ ಪಾಳಿ ಮುಗಿದ ನಂತರ ಮತ್ತೊಬ್ಬ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಾಗುವವರೆಗೆ ಕರ್ತವ್ಯದಲ್ಲಿ ಮುಂದುವರೆಯುವಂತೆ ಹಾಗೂ ತುರ್ತು ಸೇವೆಗಳು ಲಭ್ಯವಿರುವಂತೆ ಅಗತ್ಯ ಕ್ರಮ ವಹಿಸುವುದು ಹಾಗೂ ಕಾರ್ಯ ವೇಳಾಪಟ್ಟಿಯನ್ನು ತಪ್ಪದೇ ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ದಿನದ 24 ಗಂಟೆಗಳ ಕಾಲ ತುರ್ತು ವೈದ್ಯಕೀಯ ಸೇವೆ ವಿಷಯವನ್ನು ಗಂಭೀರವಾಗಿ ಪರಿಗಣಿಸತಕ್ಕದ್ದು, ಇಲ್ಲವಾದಲ್ಲಿ ಸಂಬಂಧಪಟ್ಟ ಆರೋಗ್ಯ ಸಂಸ್ಥೆಯ ಆಡಳಿತ ವೈದ್ಯಾಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಕುಬಟೂರಿನಲ್ಲಿ ಹೋರಿ ಬೆದರಿಸುವ ಹಬ್ಬ

0

ಯುಗಾದಿ ಹಬ್ಬದ ನಂತರ ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ನೆಚ್ಚಿನ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ನಿನ್ನೆ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದೆ. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ಪಕ್ಕದ ಊರುಗಳಿಂದ ಭಾರಿ ಪ್ರಮಾಣದ ಜನರು ಆಗಮಿಸಿದ್ದರುರೋಮಾಂಚಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳಿಗೆ ಬಗೆಬಗೆಯ ಅಲಂಕಾರಗಳನ್ನು ಮಾಡಲಾಗಿತ್ತು. ಕಾಲ್ಗೆಜ್ಜೆ, ಬಲೂನು ಸೇರಿದಂತೆ ಇನ್ನೂ ಮುಂತಾದ ಅಲಂಕಾರಿಕ ವಸ್ತುಗಳಿಂದ ಹೋರಿಗಳನ್ನು ಅಚ್ಚುಕಟ್ಟಾಗಿ ಶೃಂಗರಿಸಲಾಗಿತ್ತು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಹೋರಿಗಳ ಅಲಂಕಾರ ಕಣ್ತುಂಬಿಕೊಂಡರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಕಣ್ಣಿಟ್ಟಿದ್ದರು. ಹೋರಿಯನ್ನು ಹಿಡಿದು, ಕೊಬ್ಬರಿ ಹಿಡಿದು ತರುವುದು ಸ್ಪರ್ಧೆಯಾಗಿತ್ತು.

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಅಖಾಡದಲ್ಲಿ ಚಾಮುಂಡಿ ಎಕ್ಸ್ ಪ್ರೆಸ್, ಅಗಸನಹಳ್ಳಿ ನರಸಿಂಹ, ನಲ್ಲಿಕೊಪ್ಪದ ಬಸವ, ಶಿಕಾರಿಪುರ ಹಿಟ್ಲರ್, ಎನ್‍ಟಿಸಿ ಸಾಹುಕಾರ, ಹೊಸಳ್ಳಿ ವಾರಸುದಾರ, ನಿಟ್ಟಕ್ಕಿ ಸಿಪಾಯಿ ದಂಗೆ, ಶಿಕಾರಿಪುರ ಅಘೋರ, ಮಲೆನಾಡ ಮಹಾರಾಜ, ಮರೂರು ತಾರಕಾಸುರ, ಬಿಳವಾಣಿ ಮಣಿಕಂಠ, ಶಿಕಾರಿಪುರದ ಸಿಂಹ, ಕೊಡಕಣಿ ಡೇಂಜರ್ ಬಸವ, ಮಲೆನಾಡ ಮಾಣಿಕ್ಯ, ಅಗಸನಹಳ್ಳಿ ಹೊಯ್ಸಳ, ಕರ್ನಾಟಕದ ನಂದಿ, ಹಾನಗಲ್ಲ ಟೈಗರ್, ತಾವರೆಕೊಪ್ಪದ ಪೈಲ್ವಾನ್, ಸೊರಬದ ಪ್ರಳಯ, ಮಧುರವಳ್ಳಿ ಡೇಂಜರ್‍ಮುತ್ತು, ಹೋತನಕಟ್ಟಿ ರಾಜಕುಮಾರ, ಸೊರಬದ ಭಾರತರತ್ನ, ಹಿರೇಇಡಗೋಡು ಉಡಾಳ ಕರಿಯ, ದೊಡ್ಡಿಕೊಪ್ಪದ ಜಂಪಿಂಗ್ ಸ್ಟಾರ್, ಹಾಲಗಳಲೆ ಹೆಬ್ಬುಲಿ ಮತ್ತು
ಹಿಂದೂ ಹುಲಿ ಹರ್ಷ ಸವಿನೆನಪಿಗಾಗಿ ಉದ್ರಿ ಮಣಿಕಂಠ ಸೇರಿದಂತೆ ಅನೇಕ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಬರುತ್ತಿತ್ತು.

ಹೋರಿ ಹಬ್ಬದ ಆಯೋಜಿಸಿದ್ದ ಕುಬಟೂರು ಗ್ರಾಮಸ್ಥರು ಅಖಾಡದಲ್ಲಿ 2 ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ.

ಕೊನೆಯಲ್ಲಿ ಅಖಾಡದಲ್ಲಿ ಉತ್ತಮವಾಗಿ ಓಡಿದಂತಹ ಹೋರಿಗಳನ್ನು ಹಾಗೂ ಕೊಬ್ಬರಿ ಹಿಡಿದ ಯುವಕರನ್ನು ಗುರುತಿಸಲಾಯಿತು.

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

0

ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಂತೋಷದ ಸಮಾಚಾರ ನೀಡಿದೆ. ಜನವರಿ 1 ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ.

ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ.2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಕೂಡ ತನ್ನ ನೌಕರರಿಗೆ ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದೆ.

ತೇಜಸ್ವಿಯವರ ನೆನಪಿನಲ್ಲಿ..

0

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು 1938ರಲ್ಲಿ ಸೆಪ್ಟೆಂಬರ್ 8 ಶಿವಮೊಗ್ಗದ ಕುಪ್ಪಳ್ಳಿಯಲ್ಲಿ ಜನಿಸಿದರು. ಇವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.
ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಸಾಹಿತ್ಯವನ್ನು ಪ್ರಾರಂಭಿಸಿದರು.

ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ.

ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು.

ಕೃಷಿಯ ಜೊತೆಜೊತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರೊಬ್ಬ ಸಮಾಜವಾದಿ ಚಿಂತಕ. ಸಮಾಜದಲ್ಲಿ ತಾಂಡವವಾಡುತ್ತಿದ್ದ ಬಡತನ, ಅಸಮಾನತೆ, ಶೋಷಣೆಯ ಬಗ್ಗೆ ಸಾಹಿತ್ಯದ ಮೂಲಕ ಸದಾ ಧ್ವನಿ ಎತ್ತುತ್ತಿದ್ದ ಅದ್ಬುತ ಲೇಖಕ.

ಇಡೀ ಬದುಕಿನ ತುಂಬಾ ರಚಿಸಿದ ಸಾಹಿತ್ಯದಲ್ಲಿ ಕಲೆ, ಸಂಸ್ಕೃತಿ, ಪರಿಸರ ಮತ್ತು ಕೃಷಿಯ ವಿಷಯಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಹತ್ತಾರು ಕೃತಿಗಳನ್ನು ರಚಿಸಿದ ಮಹಾನ್ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತುಂಬಾ ಸರಳ ವ್ಯಕ್ತಿತ್ವ ನೇರ ನಡೆ-ನುಡಿಯವರು.

ಪಟ್ಟಣ ಜೀವನವನ್ನು ಅಷ್ಟೊಂದು ಇಷ್ಟ ಪಡದೇ ಸದಾ ಪರಿಸರದೊಟ್ಟಿಗೆ ಬದುಕು ಕಳೆದ ಪರಿಸರ ಪ್ರೇಮಿ ಎಂದರೂ ತಪ್ಪಾಗಲಾರದು.

ಯಾವುದೇ ಕಾಲ್ಪನಿಕ ವಸ್ತು ವಿಷಯವನ್ನು ತಮ್ಮ ಕೃತಿಗಳಲ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ ಅವರ ಸುತ್ತಮುತ್ತಲಿನ ದೈನಂದಿನ ಬದುಕಿನಲ್ಲಿ ನೋಡಿದ, ಕೇಳಿದ ವಿಚಾರಗಳನ್ನು ಸಾಹಿತ್ಯದ ಮೂಲಕ ಕುತೂಹಲ ಕೆರಳಿಸುವ ರೀತಿಯಲ್ಲಿ ಕಾದಂಬರಿಗಳನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಪತ್ತೆದಾರಿ ಕಾದಂಬರಿಗಳು ಸಾಹಿತ್ಯ ಪ್ರೇಮಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.ಅಬಚೂರಿನ ಫೋಷ್ಟಾಫೀಸು, ತಬರನ ಕಥೆ ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಇವರ ಪಾಕಕ್ರಾಂತಿ ಮತ್ತು ಇತರ ಕತೆಗಳು ಪುಸ್ತಕ ಓದುಗರನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುತ್ತವೆ.

ಇವರ ಮತ್ತೊಂದು ಕಾದಂಬರಿ ಕಿರಗೂರಿನ ಗಯ್ಯಾಳಿಗಳು ಚಲನಚಿತ್ರವಾಗಿ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ರಾಷ್ಟ್ರಕವಿಯಾಗಿದ್ದ ಕುವೆಂಪು ಅವರ ಮುದ್ದಿನ ಮಗನಾಗಿದ್ದ ತೇಜಸ್ವಿ ಅವರದ್ದು ಸದಾ ನಿರ್ಲಿಪ್ತ ಭಾವ. ಅವರಿಗೆ ವ್ಯವಸಾಯದ ಚಟುವಟಿಕೆಯಲ್ಲಿ ಸಾಹಿತ್ಯದ ಮೇಲಿದ್ದಷ್ಟೆ ತೀವ್ರ ಆಸಕ್ತಿ ಮತ್ತು ಪ್ರೀತಿ ಇತ್ತು.

ಮೂಡಿಗೆರೆಯಲ್ಲಿದ್ದ ಅವರ ಒಡೆತನದ ಕಾಫಿ ತೋಟದಲ್ಲಿ ಕೆಲಸದಾಳುಗಳೊಟ್ಟಿಗೆ ತೇಜಸ್ವಿಯವರು ಸಹ ಕೂಲಿಕಾರರಂತೆ ಕೆಲಸ ಮಾಡುತ್ತಿದ್ದರಂತೆ.

ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ.
ಅರ್ಥಪೂರ್ಣ ಬದುಕನ್ನು ಕಳೆದ ಮಹಾನ್ ಕವಿ ತನ್ನ 69ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿ ತಮ್ಮ ಕೃತಿಗಳನ್ನು ಸಾಹಿತ್ಯ ಪ್ರೇಮಿಗಳಲ್ಲಿ ಜೀವಂತವಾಗಿ ಉಳಿಸಿ ಹೋಗಿರುವ ಮಹಾನ್ ಚೇತನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯ ಸ್ಮರಣೆ ಇಂದು.

ಅವರ ಸರಳ ವ್ಯಕ್ತಿತ್ವದ ಜೀವನ ನಮ್ಮೆಲ್ಲರಿಗೂ ಜೀವಂತ ಆದರ್ಶ. ತಮ್ಮ ಬರವಣಿಗೆಯಿಂದ ಅದೆಷ್ಟೋ ಜೀವಗಳಿಗೆ ಸ್ಪೂರ್ತಿ ಇವರು.

ಸ್ನಾತಕ ಪದವಿ ಅಧ್ಯಯನಕ್ಕೂ ಪ್ರವೇಶ ಪರೀಕ್ಷೆ?

0

ಉನ್ನತ ಶಿಕ್ಷಣಕ್ಕೆ ತಳಹದಿ ಹಾಗೂ ವೃತ್ತಿಪರ ಕೋರ್ಸ್​ಗಳಿಗೆ ದಿಕ್ಸೂಚಿಯಾಗಬೇಕಾದ ಪಿಯುಸಿ ವ್ಯಾಸಂಗ ಸದ್ದಿಲ್ಲದಂತೆ ಮಹತ್ವ ಕಳೆದುಕೊಳ್ಳುವಂತಹ ವಾತಾವರಣ ಗೋಚರಿಸಿದೆ.

ಪದವಿ ಪ್ರವೇಶಕ್ಕೂ ಇನ್ಮುಂದೆ ರಾಷ್ಟ್ರೀಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಜಾರಿಯಾಗುತ್ತಿದೆ.
ಇದರಿಂದ ಡಿಗ್ರಿ ಪ್ರವೇಶಾತಿ ವೇಳೆ ಪಿಯುಸಿ ಅಂಕಗಳ ಮಹತ್ವ ಕಳೆದುಕೊಳ್ಳುವಂತಾಗಿದೆ.

ಹೀಗಾಗಿ, ಪ್ರವೇಶ ಪರೀಕ್ಷೆಗಳ ಭರಾಟೆಯಲ್ಲಿ ಪಿಯುಸಿ ಮೌಲ್ಯ ಕಳೆದು ಹೋಗುತ್ತಿದೆಯೇ? ಎರಡು ವರ್ಷಗಳ ಕೋರ್ಸ್ ನಿಷ್ಪಯೋಜಕವೇ? ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ಶುರುವಾಗಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಾಗಿರುವ ಪ್ರವೇಶ ಪರೀಕ್ಷೆ-ಸಿಯುಇಟಿಗೆ ರಾಜ್ಯದ ಸರ್ಕಾರಿ ವಿವಿಗಳು ಸಮ್ಮತಿಸುತ್ತಿವೆ. ಈ ವ್ಯವಸ್ಥೆ ಜಾರಿಯಾದರೆ ಸರ್ಕಾರಿ ಕಾಲೇಜುಗಳು, ವಿವಿಗಳಲ್ಲಿ ಪಿಯು ಅಂಕಗಳ ಆಧಾರದ ಮೇಲೆ ಸೀಟು ಗಿಟ್ಟಿಸಿಕೊಳ್ಳುವ ವ್ಯವಸ್ಥೆ ಕೊನೆಗೊಳ್ಳಲಿದೆ.

ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳೇ ಮುಖ್ಯವಾಗಲಿವೆ.
ಬಿಎ, ಬಿಕಾಂ ಹಾಗೂ ಬಿಎಸ್​ಸಿಯಂತಹ ತಾಂತ್ರಿಕೇತರ ಶಿಕ್ಷಣಕ್ಕೂ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಸೆಂಟ್ರಲ್ ಯುನಿವರ್ಸಿಟಿ ಎಂಟ್ರೆನ್ಸ್ ಎಕ್ಸಾಂ (ಸಿಯುಇಟಿ) ಮಾದರಿಯನ್ನು ರಾಜ್ಯ ಸರ್ಕಾರಿ ಅಧೀನದ, ಖಾಸಗಿ ಹಾಗೂ ಡೀಮ್ಡ್ ವಿವಿಗಳಿಗೂ ವಿಸ್ತರಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಕಾರ್ಯತತ್ಪರವಾಗಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಅಧೀನದ 25 ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಯುಜಿಸಿ ಸಂವಾದ ನಡೆಸಿದೆ. ಇದರಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಸಿಯುಇಟಿ ಪ್ರಕ್ರಿಯೆ ಮೂಲಕ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ಬೆಂಬಲ ವ್ಯಕ್ತವಾಗಿದೆ.

ಜತೆಗೆ, ಬಿಎ, ಬಿಕಾಂ ಹಾಗೂ ಬಿಎಸ್​ಸಿ ಹಾಗೂ ಇದೇ ಮಾದರಿಯ ಇತರ ಕೋರ್ಸ್​ಗಳಿಗೂ ಸಿಯುಇಟಿ ಅಂಕಗಳನ್ನು ಪರಿಗಣಿಸಲು ಸಮ್ಮತಿಸಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶಕುಮಾರ್ ಅವರು ತಿಳಿಸಿದ್ದಾರೆ.

ಎನ್​ಸಿಇಆರ್​ಟಿ ಪಠ್ಯಕ್ರಮದ ಆಧಾರದಲ್ಲಿ ನಡೆಸಲಾಗುವ ಈ ಪರೀಕ್ಷೆಯನ್ನು ಸದ್ಯ ತಾಂತ್ರಿಕೇತರ ಕೋರ್ಸ್​ಗಳಿಗೆ ಪರಿಗಣಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ ಅವರು ತಿಳಿಸಿದ್ದಾರೆ.

ಇದು ಆರಂಭಿಕ ಹಂತದಲ್ಲಿದ್ದು, ಆಯಾ ವಿಶ್ವವಿದ್ಯಾಲಯಗಳು ಡೀನ್, ಅಕಾಡೆಮಿಕ್ ಕೌನ್ಸಿಲ್ ಮಟ್ಟದಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ.
ಯಾವುದೇ ಹೊಸ ಪ್ರಸ್ತಾವನೆಗೆ ಸಾಧಕ-ಬಾಧಕಗಳು ಇದ್ದೇ ಇರುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಇಟಿಯನ್ನು ಇನ್ನೂ ಆಫ್​ಲೈನ್ ಮೋಡ್​ನಲ್ಲಿ ನಡೆಸಲಾಗುತ್ತದೆ. ಆದರೆ ನೀಟ್, ಜೆಇಇ ಮೇನ್ ಪರೀಕ್ಷೆಗಳು ಆನ್​ಲೈನ್ ಮೋಡ್​ನಲ್ಲಿ ಕಂಪ್ಯೂಟರ್ ಆಧಾರಿತವಾಗಿರುತ್ತವೆ. ರಾಜ್ಯದ ಅಭ್ಯರ್ಥಿಗಳಿಗೆ ಇದೊಂದು ಹಿನ್ನಡೆಯಾಗಿ ಸದಾ ಕಾಡುತ್ತಿದೆ.

ಇನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಂತೂ ಇಂಥದ್ದೊಂದು ಪೈಪೋಟಿಗೆ ಸಜ್ಜಾಗಿರುವುದಿಲ್ಲ. ಹೀಗಾಗಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನು ತಾಂತ್ರಿಕೇತರ ಪದವಿ ಕೋರ್ಸ್​ಗಳಿಗೂ ಪ್ರವೇಶ ಪರೀಕ್ಷೆಯಾದರೆ, ಉನ್ನತ ಶಿಕ್ಷಣವೇ ಕೈತಪ್ಪುವ ಆತಂಕ ಕಾಡಲಿದೆ.

ಮನೆ ಮನೆಗೆ ಗಂಗೆ ಯೋಜನೆಯಲ್ಲಿ ರಾಜ್ಯದ ಪ್ರಗತಿ ಉತ್ತಮ- ಈಶ್ವರಪ್ಪ

0

ರಾಜ್ಯದ ಪ್ರತಿ ಮನೆಗೆ ಪೈಪ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಯ ಮನೆ ಮನೆಗೆ ಗಂಗೆ ಯೋಜನೆಯ ಪ್ರಗತಿಯು ರಾಜ್ಯದಲ್ಲಿ ಉತ್ತಮವಾಗಿದೆ.

ಈಗಾಗಲೇ ಶೇ 46ರಿಂದ ಶೇ 47ರಷ್ಟು ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗೋಕರ್ಣ ಸಮೀಪದ ತೊರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಲೆಯಲ್ಲಿ ಅಂದಾಜು ₹ 31 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಪ್ರತಿ ಮನೆಗೂ ಒಂದೂವರೆ ವರ್ಷದೊಳಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುವುದು. ರಾಜ್ಯದ 97 ಲಕ್ಷ ಮನೆಗಳ ಪೈಕಿ ಈಗಾಗಲೇ 47 ಲಕ್ಷ ಮನೆಗಳಿಗೆ ಪೈಪ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿಯಲ್ಲಿ ಮಾನವ ದಿನಗಳ ಸೃಜನೆಯಲ್ಲಿ ರಾಜ್ಯವು ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ರಾಜ್ಯಕ್ಕೆ ನೀಡಲಾಗಿದ್ದ 13 ಕೋಟಿ ಮಾನವ ದಿನಗಳ ಗುರಿಗೆ ಪ್ರತಿಯಾಗಿ 16.68 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಬಳಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 2002ರಲ್ಲಿ ಅಂದಿನ ಶಾಸಕ ಮೋಹನ ಶೆಟ್ಟಿ ಚಾಲನೆ ನೀಡಿದ್ದರು. ಆದರೆ, ಹಲವಾರು ಅಡೆತಡೆಗಳ ಬಳಿಕ ಈ ವರ್ಷ ಪೂರ್ಣಗೊಂಡಿದೆ. ಇದರಿಂದ ಕುಮಟಾ ಮತ್ತು ಅಂಕೋಲಾ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಳಕೋಡ ಗ್ರಾಮ ಪಂಚಾಯಿತಿಯ 12 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ಕೊಡಲಾಗಿದೆ. ಬರ್ಗಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ನೀಡಬೇಕಿದೆ ಎಂದು ಗಮನ ಸೆಳೆದರು.

ದಾಳಿಯ ದಿಕ್ಕನ್ನೇ ಬದಲಿಸಲಿರುವ ರಷ್ಯ

0

ರಷ್ಯಾ ಸೇನೆಯು ಯುಕ್ರೇನ್‌ನ ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ತನ್ನ ಯುದ್ಧದ ದಿಕ್ಕು ಬದಲಾಯಿಸುವ ಸಾಧ್ಯತೆ ಇದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಎಚ್ಚರಿಕೆ ನೀಡಿದ್ದಾರೆ.

ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಬೆಂಬಲದೊಂದಿಗೆ ಉಕ್ರೇನ್‌ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಪಡೆದ ನಂತರ, ರಷ್ಯಾ ತನ್ನ ಗಮನವನ್ನು ದೇಶದ ಪೂರ್ವ ಮತ್ತು ದಕ್ಷಿಣಕ್ಕೆ ಹರಿಸುತ್ತಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ತಿಳಿಸಿದ್ದಾರೆ.

ಉಕ್ರೇನ್ ಸರ್ಕಾರಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುತ್ತಿರುವುದು ರಷ್ಯಾಗೆ ತಿಳಿದಿದೆ. ಆದರೂ ಅದು ತನ್ನ ಆಕ್ರಮಣವನ್ನು ಮುಂದುವರೆಸುವ ಸಾಧ್ಯತೆಯಿದೆ ಎಂದಿದ್ದಾರೆ.

ದೇಶದ ಉಳಿದ ಭಾಗಗಳಲ್ಲಿ ಭಯೋತ್ಪಾದನೆ ಮತ್ತು ಆರ್ಥಿಕ ಹಾನಿ ಉಂಟುಮಾಡಲು ಕೀವ್​​ ಮತ್ತು ಪಶ್ಚಿಮದಲ್ಲಿರುವ ನಗರ ಎಲ್ವಿವ್​​ನಲ್ಲಿ ರಷ್ಯಾ ವಾಯು ಮತ್ತು ಕ್ಷಿಪಣಿ ದಾಳಿಗಳನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.

ರಷ್ಯಾ-ಉಕ್ರೇನ್ 41ನೇ ದಿನಕ್ಕೆ ಕಾಲಿಟ್ಟಿದ್ದು, ಭೀತಿ ತಗ್ಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಮಾತನಾಡಲಿದ್ದು, ಜಗತ್ತಿನ ಗಮನ ಸೆಳೆಯಲಿದ್ದಾರೆ.

ದೇಶದಲ್ಲಿ ಕೋವಿಡ್ ಚೇತರಿಕೆ ದರ ಶೇ.98.76

0

ಕಳೆದ 24 ಗಂಟೆಗಳಲ್ಲಿ 795 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 4,30,29,839ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಸಾವಿನ ಪ್ರಮಾಣ ಶೇ.1.21 ರಷ್ಟಿದೆ. ಕಳೆದೊಂದು ದಿನದಲ್ಲಿ ದೇಶದಲ್ಲಿ 58 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 5,21,416 ಕ್ಕೆ ಏರಿದೆ.

ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.76 ರಷ್ಟಿದೆ. 1,208 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,24,96,369 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪಾಸಿಟಿವ್‌ ದರ ಶೇ.0.17ರಷ್ಟಿದೆ. ಸಾಪ್ತಾಹಿಕ ಪಾಸಿಟಿವ್‌ ದರ ಶೇ. 0.22 ದಾಖಲಾಗಿದೆ. 12,054 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರ ವ್ಯಾಪಿ ಕೊರೋನಾ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ನಿನ್ನೆ ಬೆಳಿಗ್ಗೆ 8 ಗಂಟೆಗೆ 184.87 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,66,332 ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 79.15 ಕೋಟಿಗೂ ಅಧಿಕ ಪರೀಕ್ಷೆಗಳನ್ನು ಮಾಡಲಾಗಿದೆ.

ಕಲಬುರ್ಗಿ to ಹೈದ್ರಾಬಾದ್ ವಿಮಾನ ಸಂಚಾರ ಆರಂಭ

0

ಅಲಯನ್ಸ್‌ ಏರ್‌ ವಿಮಾನ ಸಂಸ್ಥೆಯು ಏಪ್ರಿಲ್‌ 18ರಿಂದ ಕಲಬುರಗಿ,ಹೈದರಾಬಾದ್ ಮಧ್ಯೆ ಪ್ರತಿ ದಿನ ವಿಮಾನ ಹಾರಾಟ ಆರಂಭಿಸಲಿದೆ.

ಹೈದರಾಬಾದ್‌ನಿಂದ ಇತರ ಪ್ರಮುಖ ಪ್ರದೇಶಗಳಿಗೆ ವಿಮಾನಗಳ ಸಂಪರ್ಕ ಇರುವ ಕಾರಣ, ಈ ಮಾರ್ಗದ ಹಾರಾಟ ಹೆಚ್ಚು ಬೇಡಿಕೆ ಬಂದಿದೆ.

ಹೈದರಾಬಾದ್‌ನಿಂದ ಪ್ರತಿ ದಿನ ಮಧ್ಯಾಹ್ನ 3.40ಕ್ಕೆ ಹೊರಡುವ ವಿಮಾನವು 4.20ಕ್ಕೆ ಕಲಬುರಗಿಗೆ ತಲುಪುತ್ತದೆ. ಮರಳಿ ಸಂಜೆ 5 ಗಂಟೆಗೆ ಕಲಬುರಗಿಯಿಂದ ಹೊರಟು 5.40ಕ್ಕೆ ಹೈದರಾಬಾದ್‌ ತಲುಪಲಿದೆ.

ಈಗ ಬೆಂಗಳೂರಿನಿಂದ ಕಲಬುರಗಿಗೆ ಬರುವವರಿಗೆ ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ಒಂದು ವಿಮಾನವಿದೆ. ಅದನ್ನು ಹತ್ತಲು ಬೆಳಿಗ್ಗೆ 7.30ಕ್ಕೆ ವಿಮಾನ ನಿಲ್ದಾಣ ತಲುಪಬೇಕು. ಅದಕ್ಕೆ ಸಾಧ್ಯವಾಗದವರು ಮಧ್ಯಾಹ್ನ 12.20ಕ್ಕೆ ಇರುವ ಮತ್ತೊಂದು ವಿಮಾನ ಹತ್ತುತ್ತಾರೆ.

ಹೈದರಾಬಾದ್‌ ಕಲಬುರಗಿ ಮಧ್ಯೆ ಸಂಜೆ ವಿಮಾನ ಸಂಚಾರ ಆರಂಭವಾಗಿದ್ದರಿಂದ ಬೆಂಗಳೂರಿನಿಂದ ಹೈದರಾಬಾದ್‌ ಮಾರ್ಗವಾಗಿ ಬರಲು ಅನುಕೂಲಕರವಾಗಿದೆ.

ಬ್ರಿಟನ್ ಪ್ರಧಾನಿ ಜಾನ್ಸನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ

0

ಭಾರತ, ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ 2 ಬಾರಿ ಜಾನ್ಸನ್ ಭಾರತ ಭೇಟಿಯನ್ನು ರದ್ದುಗೊಳಿಸಿದ್ದರು.

ಪ್ರಸ್ತುತ ಸಮಯದಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 22 ರ ಸುಮಾರಿಗೆ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.
ಕಳೆದ ತಿಂಗಳು ಜಾನ್ಸನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿ ಪ್ರವಾಸದ ಅವಧಿಯನ್ನು ನಿಗದಿ ಪಡಿಸಿದ್ದಾರೆ.

ಆದರೆ, ಇದುವರೆಗೂ ಬ್ರಿಟನ್‍ನ ಪ್ರಧಾನಿ ಕಚೇರಿ ಮೂಲಗಳು ಅಧಿಕೃತವಾದ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ.

ಈ ಕುರಿತು ಡೌನಿಂಗ್ ಸ್ಟ್ರೀಟ್‍ನ ವಕ್ತಾರರು ಮಾರ್ಚ್ 22ರಂದು ಹೇಳಿಕೆ ನೀಡಿ, ಉಭಯ ದೇಶಗಳ ನಾಯಕರು ಪರಸ್ಪರ ವೈಯಕ್ತಿಕವಾಗಿ ಭೇಟಿಯಾಗುವುದು ಹಾಗೂ ಮತ್ತಷ್ಟು ಸಂವೃದ್ದ, ಬಲವಾದ ಸಂಬಂಧ ಸುಧಾರಣೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದ್ದರು.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಪ್ 26 ಹವಾಮಾನ ಶೃಂಗಸಭೆಯ ವೇಳೆಯಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ವಿಶ್ವ ನಾಯಕರ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ಭಾರತ,ಬ್ರಿಟನ್ ಹವಾಮಾನ ಪಾಲುದಾರಿಕೆ ಮಾರ್ಗಸೂಚಿಯ ಮೇಲೆ ಕೇಂದ್ರಿಕರಿಸಿದವು.

2030 ರ ವೇಳೆಗೆ ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಪ್ರಯತ್ನಗಳು ಮುಂದುವರೆದಿವೆ. ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಆರ್ಥಿಕತೆಯಿಂದ ಬ್ರಿಟನ್‍ನ ವ್ಯವಹಾರಗಳು, ಕಾರ್ಮಿಕರು ಮತ್ತು ಗ್ರಾಹಕರಿಗೆ ಭಾರಿ ಪ್ರಯೋಜನವಾಗಲಿದೆ ಎಂದು ಈ ವರ್ಷದ ಆರಂಭದಲ್ಲಿ ಜಾನ್ಸನ್ ಅವರು ಹೇಳಿದ್ದರು.

ಈ ನಿಟ್ಟಿನಲ್ಲಿ ಮತ್ತಷ್ಟು ಮುಕ್ತ ಮಾತುಕತೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಬ್ರಿಟನ್ ವಿಶ್ವ ದರ್ಜೆಯ ವ್ಯವಹಾರಗಳು ಮತ್ತು ಪರಿಣತಿಯನ್ನು ಹೊಂದಿದೆ, ಸ್ಕಾಚ್ ವಿಸ್ಕಿ ಡಿಸ್ಟಿಲರ್ ಗಳಿಂದ ಹಣಕಾಸು ಸೇವೆಗಳು ಮತ್ತು ಅತ್ಯಾಧುನಿಕ ನವೀಕರಿಸಬಹುದಾದ ತಂತ್ರಜ್ಞಾನದವರೆಗೆ ನಾವು ಹೆಮ್ಮೆಪಡಬಹುದು. ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಲು, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇಂಡೋ-ಪೆಸಿಫಿಕ್ ಆರ್ಥಿಕತೆಯಲ್ಲಿ ಅವಕಾಶಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಅವರ ಜನವರಿ ತಿಂಗಳಲ್ಲಿ ಹೇಳಿದ್ದರು.

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಕಳೆದ ವಾರ ದೆಹಲಿಗೆ ಭೇಟಿ ನೀಡಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‍ರೊಂದಿಗೆ ಮಾತುಕತೆ ನಡೆಸಿದರು.
ಈ ತಿಂಗಳ ಕೊನೆಯಲ್ಲಿ ಭಾರತ ಆಯೋಜಿಸಲಿರುವ ಮೂರನೇ ಸುತ್ತಿನ ಭಾರತ-ಬ್ರಿಟನ್ ಎಫ್‍ಟಿಎ ಮಾತುಕತೆಗಳು ಪ್ರಧಾನ ಮಂತ್ರಿಯ ಭೇಟಿಯ ಸಮಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.