ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಈಗ ವಿದ್ಯುತ್ ದರ ಏರಿಕೆ ಶಾಕ್ ಕೂಡ ಜನ ಸಾಮಾನ್ಯರಿಗೆ ತಟ್ಟುವ ನಿರೀಕ್ಷೆ ಇದೆ. ಈಗಾಗಲೇ ವಿದ್ಯುತ್ ಸಂಸ್ಥೆಗಳು ನಷ್ಟ ಸರಿದೂಗಿಸಲು ದರ ಏರಿಕೆಯ ಪ್ರಸ್ತಾಪವನ್ನು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ ಸಲ್ಲಿಸಿದ್ದು, ವಿಚಾರಣೆ ನಡೆಸಿ ಆಕ್ಷೇಪಣೆಗಳನ್ನು ಆಲಿಸಿದೆ. ಇಂದು ಪತ್ರಿಕಾಗೋಷ್ಠಿ ನಡೆಸಲಿರುವ ಆಯೋಗದ ಹಂಗಾಮಿ ಅಧ್ಯಕ್ಷ ಎಚ್.ಎಂ.ಮಂಜುನಾಥ್ ಅವರು ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಗೃಹೋಪಯೋಗಿ ವಿದ್ಯುತ್ ಪ್ರತಿ ಯೂನಿಟ್‍ಗೆ 10ರಿಂದ 20 ಪೈಸೆ, ವಾಣಿಜ್ಯ ಬಳಕೆ ಯೂನಿಟ್‍ಗೆ 15ರಿಂದ 25 ಪೈಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಸಂಸ್ಥೆಗಳು ಪ್ರತಿ ಯೂನಿಟ್‍ಗೆ ಕನಿಷ್ಠ 40 ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು. ಇದಕ್ಕೆ ಕೈಗಾರಿಕಾ ವಲಯ ಸೇರಿದಂತೆ ಹಲವು ಉದ್ಯಮಗಳು ಭಾರೀ ಆಕ್ಷೇಪಣೆ ಸಲ್ಲಿಸಿದ್ದವು.