Tuesday, March 10, 2026
Tuesday, March 10, 2026
Home Blog Page 1526

ದ್ರೌಪದಿ ಮುರ್ಮು ಅವರು ವಿವಾದ ರಹಿತ ವ್ಯಕ್ತಿ-ದೇವೇಗೌಡರು

0

ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಮೈತ್ರಿಕೂಟವು ಉತ್ತಮ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ದ್ರೌಪದಿ ಮುರ್ಮು ಅವರ ಆಯ್ಕೆಯ ಹಿಂದೆ ಯಾವ ಯಾವ ಕಾರಣಗಳಿವೆ ಎಂಬುದರ ಬಗ್ಗೆ ಈಗ ನಾನು ವಿವರಣೆ ನೀಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದರು.

ಬೆಂಗಳೂರು ನಗರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಹಿತಿಗಳು, ವಕೀಲರು ಸೇರಿದಂತೆ ಅನೇಕರು ಹೊಸ ಪಠ್ಯಕ್ಕೆ ವಿರೋಧ ಮಾಡಿದ್ದಾರೆ. ಹೀಗಾಗಿ ಅವರ ಭಾವನೆಗಳಿಗೆ ಗೌರವ ನೀಡಿ, ಅವರ ಸಲಹೆಗಳನ್ನು ಒಳಗೊಂಡ ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದೇನೆ. ಅವರು ನನ್ನ ಪತ್ರಕ್ಕೆ ಏನು ಉತ್ತರ ಕೊಡುತ್ತಾರೋ ನೋಡೋಣ. ಆನಂತರ, ಅಗತ್ಯವಿದ್ದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ದ್ರೌಪದಿ ಮುರ್ಮು ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ವಿವಾದ ರಹಿತವಾದ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ಹಿಂಪಡೆಯುವಂತೆ ಹಾಗೂ ಈ ಹಿಂದೆ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ ಎಂದು ದೇವೇಗೌಡರು ತಿಳಿಸಿದರು.

ನಟ ದಿಗಂತ್ ಗುಣಮುಖರಾಗುತ್ತಿದ್ದಾರೆ -ಐಂದ್ರಿತಾ ರೇ

0

ನಟ ದಿಗಂತ್‌ ಸ್ಟಂಟ್ ಮಾಡುವ ವೇಳೆ ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈಗ
ಗುಣಮುಖರಾಗುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ಪತ್ನಿ ಹಾಗೂ ನಟಿ ಐಂದ್ರಿತಾ ರೇ ತಿಳಿಸಿದ್ದಾರೆ.

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ದಿಗಂತ್‌ ರಜೆ ಕಳೆಯಲು ಗೋವಾಗೆ ಹೋಗಿದ್ದೆವು.
ಅಲ್ಲಿ ಪಲ್ಟಿ ಹೊಡೆಯುವಾಗ ಗಾಯಗೊಂಡರು ಎಂದರು.

ದಿಗಂತ್‌ ಗೆ ಪೆಟ್ಟು ಬಿದ್ದಾಗ ಕೂಡಲೇ ಗೋವಾದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದೆವು. ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಏರ್‌ ಲಿಫ್ಟ್‌ ಮಾಡಿ ಬೆಂಗಳೂರಿಗೆ ಕರೆ ತರಲಾಯಿತು ಎಂದು ಅವರು ತಿಳಿಸಿದರು.

ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅ.2ರಂದು ಚಾಲನೆ

0

ಸಮಾನತೆ ದುಡಿಮೆಯ ಕ್ರಾಂತಿ ಮಾಡುತ್ತಿರುವ ಸ್ತ್ರೀಶಕ್ತಿ ಸಂಘ ಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಅಕ್ಟೋಬರ್ 2ರಂದು ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಾಂಧಿ ಸ್ಮಾರಕ ನಿಧಿ ಹಾಗೂ ಸುಮಂಗಲಿ ಸೇವಾ ಆಶ್ರಮ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸೇವಾ ಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ರಾಜ್ಯವನ್ನು ಸುಭೀಕ್ಷವಾಗಿಸಲು ಶ್ರಮಿಸುತ್ತಿವೆ. ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ಸ್ಥಳೀಯ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟ ವಾಗಬೇಕು. ಆಗ ನಮ್ಮ ಆರ್ಥಿಕತೆಗೆ ಶಕ್ತಿ ಬರುತ್ತದೆ. ಈ ದೇಶದಲ್ಲಿ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕು. ಅವರಲ್ಲಿ ಆರ್ಥಿಕ ಸ್ವಾತಂತ್ರ್ಯ ಬಂದರೆ ಉಳಿದಂತೆ ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲ ವಲಯಗಳಲ್ಲೂ ಸ್ತ್ರೀಯರು ಸಬಲರಾಗುತ್ತಾರೆ ಎಂದರು.

ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಮೊದಲ ಬಾರಿಗೆ 1.5 ಲಕ್ಷ ಆರ್ಥಿಕ ನೆರವು ಒದಗಿಸಲಾಗಿದೆ. ಜತೆಗೆ ಆಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್​ಗಳು, ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಹಾಗೂ ಅಮೆಜಾನ್​ನಂತಹ ಆನ್​ಲೈನ್ ವೇದಿಕೆಗಳಲ್ಲಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಬಂಧ ಪ್ರಾರಂಭಿಸಿರುವ ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮದಲ್ಲಿ ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ರೂ. ವಹಿವಾಟು ಮಾಡುತ್ತಿದೆ. ಇದು ಸಂಘಟಿತ ಶ್ರಮದ ಶಕ್ತಿ ಎಂದು ಹೇಳಿದರು.

ಯೋಗ ಒಲಂಪಿಯಾಡ್ ನಲ್ಲಿ ರಜತ ಪದಕ ಪಡೆದ ತೀರ್ಥಹಳ್ಳಿಯ ಪ್ರತಿಭೆ

0

ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾ. ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ, ಗ್ರಾಮೀಣ ಪ್ರತಿಭೆ ಕು|| ಕಾವ್ಯ ಕೆ.ಎನ್. ಬೆಳ್ಳಿ ಪದಕ ಪಡೆದು ಶಾಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ, ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ದಿನಾಂಕ: 19/06/2022ರಂದು ದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಇಲ್ಲಿ ನಡೆದ 16 ವರ್ಷದೊಳಗಿನ ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ರಾಜ್ಯಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಈ ಪ್ರತಿಭಾನ್ವಿತೆ ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ನಾಗರಾಜ್ ಮತ್ತು ಯಶೋಧಮ್ಮ ದಂಪತಿಗಳ ಪುತ್ರಿ. ಇವಳು ಪ್ರಾಥಮಿಕ ಶಿಕ್ಷಣವನ್ನು ಕರ್ನಾಟಕ ಪಬ್ಲಿಕ್ ಶಾಲೆ ಅಮೃತ ಹೊಸನಗರ ತಾ. ಇಲ್ಲಿ ಪಡೆದಿರುತ್ತಾಳೆ.

ಹೆಮ್ಮೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು. ಕಾವ್ಯ ಕೆ.ಎನ್ ಇವಳಿಗೆ ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಉಪಾಧ್ಯಾಯರುಗಳು, ಸಿಬ್ಬಂದಿಗಳು ಹಾಗೂ ಸಹಪಾಠಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

191 ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್ ಮೋನಿಕ ಖನ್ನಾ

0

ಮೋನಿಕಾ ಖನ್ನಾ ಎಂಬ ಸ್ಪೈಸ್‌ಜೆಟ್ ವಿಮಾನದ ಪೈಲೆಟ್​185 ಮಂದಿ ಪ್ರಯಾಣಿಕರು ಸೇರಿದಂತೆ 191 ಮಂದಿಯ ಜೀವ ಉಳಿಸಿ ಭಾರಿ ಶ್ಲಾಘನೆಗೆ ಭಾಜನರಾಗಿದ್ದಾರೆ.

ಪಟ್ನಾದ ಜೈಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹೊರಡಬೇಕಿತ್ತು. ವಿಮಾನ ಟೇಕಾಫ್ ಆದ ಕೂಡಲೇ ವಿಮಾನದ ಇಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ.

ಇನ್ನೇನು ಇಡೀ ವಿಮಾನ ಸುಟ್ಟು ಭಸ್ಮವಾಗಿ ಎಲ್ಲರೂ ಜೀವ ಕಳೆದುಕೊಳ್ಳುತ್ತಿದ್ದರು. ಆ ಕ್ಷಣದಲ್ಲಿ ಮೋನಿಕಾ ವಿಚಲಿತರಾಗದೇ ತೆಗೆದುಕೊಂಡ ಒಂದೇ ಒಂದು ದಿಟ್ಟ ನಿರ್ಧಾರ ಎಲ್ಲರ ಜೀವವನ್ನು ಕಾಪಾಡಿದೆ ಎಂದು ತಿಳಿದುಬಂದಿದೆ.

ಪಟ್ನಾದಿಂದ ದೆಹಲಿಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದ ಪೈಲಟ್ ಆದ ಮೋನಿಕಾ ಖನ್ನಾ
ಇಬ್ಬರು ಮಕ್ಕಳು ಸೇರಿದಂತೆ ವಿಮಾನದಲ್ಲಿ 185 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಈ ವಿಮಾನದಲ್ಲಿ ಇದ್ದರು.

ವಿಮಾನದಿಂದ ಹೊಗೆ ಬರುತ್ತಿರುವುದನ್ನು ಕಂಡ ಕೆಲವರು ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ಇದನ್ನು ಎಟಿಸಿ ಕೂಡ ಗಮನಿಸಿದೆ. ಆ ನಂತರ ತಕ್ಷಣವೇ ಪೈಲಟ್-ಇನ್-ಕಂಟ್ರೋಲ್ ಆಗಿರುವ ಕ್ಯಾಪ್ಟನ್ ಮೋನಿಕಾ ಖನ್ನಾ ಅವರಿಗೆ ಮಾಹಿತಿ ನೀಡಲಾಯಿತು. ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸಿ, ಅವರು ವಿಮಾನದ ಒಂದು ಎಂಜಿನ್ ಅನ್ನು ಸ್ಥಗಿತಗೊಳಿಸಿದರು. ಫಸ್ಟ್ ಆಫೀಸರ್ ಬಲ್ಪ್ರೀತ್ ಸಿಂಗ್ ಭಾಟಿಯಾ ಅವರನ್ನು ಕೂಡಲೇ ಸಂಪರ್ಕಿಸಿ ವಿಮಾನವನ್ನು ಪಟ್ನಾ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು.

ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಆ ಸಂದರ್ಭದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯಾವುದೇ ಕ್ಷಣದಲ್ಲಿ ವಿಮಾನವು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗುವ ಸಾಧ್ಯತೆ ಇತ್ತು. ಏಕೆಂದರೆ, ಒಂದು ಇಂಜಿನ್ ನಿಂತಾಗ ಕ್ಯಾಪ್ಟನ್ ಮೋನಿಕಾ ಖನ್ನಾ ಇನ್ನೊಂದು ಇಂಜಿನ್​ನಲ್ಲಿ ಮಾತ್ರ ವಿಮಾನ ಹಾರಿಸಬೇಕಿತ್ತು. ಹಕ್ಕಿ ಡಿಕ್ಕಿ ಹೊಡೆದು ಇನ್ನೊಂದು ಇಂಜಿನ್​ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಒಂದು ಇಂಜಿನ್ ಮಾತ್ರ ಕೆಲಸ ಮಾಡುತ್ತಿತ್ತು.
ವಿಮಾನದಲ್ಲಿ ಇದ್ದ ಎಲ್ಲರ ಜೀವ ಬಾಯಿಗೆ ಬಂದಿತ್ತು. ವಿಮಾನಕ್ಕೆ ಬೆಂಕಿ ತಗುಲಿದೆ ಎಂದು ತಿಳಿದಾಗ ತಮ್ಮ ಜೀವ ಉಳಿಯುವ ಭರವಸೆಯನ್ನೇ ಎಲ್ಲರೂ ಕಳೆದುಕೊಂಡಿದ್ದರು.

ಆದರೆ ಮೊನಿಕಾ ಅವರ ಸಮಯ ಪ್ರಜ್ಞೆಯಿಂದ 19 ನಿಮಿಷಗಳ ಅವಧಿಯಲ್ಲಿ ತಮ್ಮೆಲ್ಲಾ ಪ್ರಯತ್ನವನ್ನು ಹಾಕಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿದರು.

ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಚಿಂತನೆ!

0

ಮೋದಿ ಸರ್ಕಾರವು ಜುಲೈ 1 ರಿಂದ ವೇತನ,ಉದ್ಯೋಗ ಸುರಕ್ಷತೆ , ಸಾಮಾಜಿಕ ಭದ್ರತೆ, ಹಾಗೂ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ 4 ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹೊಸ ಕಾರ್ಮಿಕ ಸಂಹಿತೆಯಲ್ಲಿ ಉದ್ಯೋಗಿಗಳ ಕೆಲಸದ ಅವಧಿ, ವೇತನ, ಭವಿಷ್ಯ ನಿಧಿಯಲ್ಲಿ ಕೊಡುಗೆ, ಗಳಿಕೆ ರಜೆಯ ನಗದೀಕರಣ ಮೊದಲಾದ ವಿಚಾರಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.

ಈ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬಂದರೆ ಕೈಗೆ ಬರುವ ವೇತನದ ಪ್ರಮಾಣ ಕಡಿಮೆಯಾಗಿ ಪಿಎಫ್‌ ಹಾಗೂ ಗ್ಯಾಚ್ಯುಟಿಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ವಾರದಲ್ಲಿ 4 ದಿನ ಮಾತ್ರ ಕೆಲಸಕ್ಕೆ ಹಾಜರಾಗಬೇಕಾಗಿದ್ದು, ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಹೊಸ ಕಾರ್ಮಿಕ ಸಂಹಿತೆಯ ಕರಡುಗಳನ್ನು 23 ರಾಜ್ಯಗಳು ಈಗಾಗಲೇ ಪ್ರಕಟಿಸಿವೆ. ಫೆ. 2021ರಲ್ಲಿ ಕೇಂದ್ರ ಸರ್ಕಾರವು ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನಯ ಪೂರ್ಣಗೊಳಿಸಿದೆ.

ಕೇಂದ್ರ ಸರ್ಕಾರವು ಸೆ.29, 2020ರಂದು ವೇತನದ ಸಂಹಿತೆ (2019), ಕೈಗಾರಿಕಾ ಸಂಬಂಧಗಳ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ (2020) ಅನ್ನು ಪ್ರಕಟಿಸಿತ್ತು.
ಕಾರ್ಮಿಕ ವಿಚಾರವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಏಕಕಾಲದಲ್ಲಿಯೇ ಹೊಸ ಸಂಹಿತೆ ಜಾರಿಗೆ ತರಲಿ ಎಂದು ಬಯಸುತ್ತಿದೆ ಎನ್ನಲಾಗಿದೆ.

ಆಫ್ಘನಿಸ್ತಾನ್ ನಲ್ಲಿ ಭೂಕಂಪ: 920 ಸಾವು

0

ಅಫ್ಘಾನಿಸ್ತಾನದಲ್ಲಿ ಬುಧವಾರ ಮುಂಜಾನೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರಲ್ಲಿ 920 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕನಿಷ್ಠ 250 ಜನರು ಗಾಯಗೊಂಡಿದ್ದಾರೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಸುಮಾರು 119 ಮಿಲಿಯನ್ ಜನರು ಭೂಮಿ ಅಲುಗಾಡಿದ ಅನುಭವಕ್ಕೆ ಒಳಗಾಗಿದ್ದಾರೆ. ಅಫ್ಘಾನ್ ಮಾಧ್ಯಮಗಳಲ್ಲಿನ ಛಾಯಾಚಿತ್ರಗಳು ಮನೆಗಳು ಅವಶೇಷಗಳಾಗಿ ಕುಸಿದಿರುವುದನ್ನು ತೋರಿಸಿವೆ.
ತಾಲಿಬಾನ್ ಆಡಳಿತದ ನೈಸರ್ಗಿಕ ವಿಕೋಪ ಸಚಿವಾಲಯದ ಮುಖ್ಯಸ್ಥ ಮೊಹಮ್ಮದ್ ನಸ್ಸಿಮ್ ಹಕ್ಕಾನಿ, ಅವರು ಈ ಕುರಿತು ಮಾತನಾಡಿ, ಪಕ್ಟಿಕಾ ಪ್ರಾಂತ್ಯದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.ಅಲ್ಲಿ 920 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಭೂಕಂಪವು ಪಾಕಿಸ್ತಾನದ ಗಡಿಯ ಸಮೀಪವಿರುವ ಖೋಸ್ಟ್ ನಗರದಿಂದ ಸುಮಾರು 44 ಕಿಮೀ (27 ಮೈಲುಗಳು) 51 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಪಾರಂಪರಿಕ ಹಿನ್ನೆಲೆಯ ಸಾಗರ, ಭದ್ರಾವತಿ & ತೀರ್ಥಹಳ್ಳಿಯಲ್ಲಿ ಯೋಗದಿನಾಚರಣೆ

0

ಭಾರತ ಮತ್ತು ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಕಚೇರಿ, ವಿವಿಧ ಯೋಗ ಸಂಸ್ಥೆಗಳು, ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಘಟಕಗಳ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ಪಾರಂಪರಿತ ತಾಣಗಳಾದ ಸಾಗರ ತಾಲ್ಲೂಕಿನ ಶ್ರೀ ಅಘೋರೇಶ್ವರ ದೇವಸ್ಥಾನ ಆವರಣ ಇಕ್ಕೇರಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಆವರಣ ಭದ್ರಾವತಿ ಮತ್ತು ಕ್ಕೆ ಶ್ರೀ ರಾಮೇಶ್ವರ ದೇವಸ್ಥಾನ ಆವರಣ ತೀರ್ಥಹಳ್ಳಿ ಇಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಯಿತು.

ಸಾಗರ ತಾಲ್ಲೂಕಿನ ಇಕ್ಕೇರಿಯ ಶ್ರೀ ಅಘೋರೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು ಶಾಸಕರಾದ ಹರತಾಳು ಉದ್ಘಾಟಿಸಿ, ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ನಂತರ ಮಾತನಾಡಿ, ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಮ್ಮ ದೇಶದಲ್ಲಿ ರೈತರು ಮತ್ತು ಸೈನಿಕರು ನಿಜವಾದ ಯೋಗಿಗಳಾಗಿದ್ದು ಪ್ರತಿಯೊಬ್ಬರು ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು. ಇದರಿಂದ ಮನಸ್ಸು ಮತ್ತು ದೇಹಾರೋಗ್ಯ ಹೆಚ್ಚುತ್ತದೆ ಎಂದರು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಆವರಣ ಭದ್ರಾವತಿ ಇಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಉದ್ಘಾಟಿಸಿದರು. ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಯೋಗಾಭ್ಯಾಸದ ಪ್ರಾಮುಖ್ಯತೆಯನ್ನು ಎಲ್ಲರೂ ತಿಳಿದುಕೊಂಡು ಪ್ರತಿ ಮನೆ ಮನೆಗಳಲ್ಲಿ ಯೋಗಾಭ್ಯಾಸ ಮಾಡಬೇಕೆಂದರು.

ಶ್ರೀ ರಾಮೇಶ್ವರ ದೇವಸ್ಥಾನ ಆವರಣ, ತೀರ್ಥಹಳ್ಳಿ ಇಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯನ್ನು
ಪ್ರಭಾರ ತಹಶೀಲ್ದಾರ್ ಮಂಜುಳ ಭಜಂತ್ರಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಅತ್ಯಂತ ಅವಶ್ಯಕವಾಗಿದ್ದು, ಮಾನಸಿಕ ಸಮಯೋಲನ ಕಾಪಾಡಲು ಹಾಗೂ ದುಶ್ಚಟಗಳಿಂದ ದೂರವಿರಲು ಇದು ಸಹಕಾರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಗೌರವಿಸುತ್ತೇವೆ-ಜಾನ್ ಕಿರ್ಬಿ

0

ಭಾರತದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನು ಅಮೆರಿಕ ಗೌರವಿಸುತ್ತದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ ಮಿತ್ರನಾಗಿದೆ. ಪಾಲುದಾರಿಕೆಯು ರಕ್ಷಣೆ ಮತ್ತು ಭದ್ರತೆ, ಆರ್ಥಿಕತೆ ಸೇರಿದಂತೆ ಎರಡರಲ್ಲೂ ತನ್ನನ್ನು ಪ್ರತಿನಿಧಿಸುವ ಹಲವು ಮಾರ್ಗಗಳಿವೆ ಎಂದು ಶ್ವೇತಭವನದ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಅವರು ತಿಳಿಸಿದ್ದಾರೆ.

ಪ್ರತಿಯೊಂದು ದೇಶವೂ ತನ್ನ ನಿರ್ಧಾರವನ್ನು ತಾವೇ ತೆಗೆದುಕೊಳ್ಳಬೇಕಾಗುತ್ತದೆ.
ನಾವು ಭಾರತೀಯ ನಾಯಕರಿಗೆ ಅವರ ಆರ್ಥಿಕ ನೀತಿಗಳ ಬಗ್ಗೆ ಮಾತನಾಡಲು ಅವಕಾಶ ನೀಡುತ್ತೇವೆ. ನಾವು ಭಾರತದೊಂದಿಗಿನ ಈ ದ್ವಿಪಕ್ಷೀಯ ಸಂಬಂಧವನ್ನು ಗೌರವಿಸುತ್ತೇವೆ. ಪ್ರತಿ ದೇಶವು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಬೇಕು.
ಇವು ಸಾರ್ವಭೌಮ ನಿರ್ಧಾರಗಳು. ಆದರೆ ನಾವು ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧ್ಯವಾದಷ್ಟು ಒತ್ತಡ ಹೇರುವುದನ್ನು ಬಯಸುತ್ತೇವೆ. ಪುಟಿನ್ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವ ಅವಶ್ಯಕತೆಗಳಿವೆ ಎಂದು ಕಿರ್ಬಿ ಎಂದು ತಿಳಿಸಿದ್ದಾರೆ.

ಅಗ್ನಿಪಥ ಯೋಜನೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ- ದೋವಲ್

0

ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಅಗ್ನಿಪಥ್ ಯೋಜನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.

ಇದರೊಂದಿಗೆ ಯುವ ಜನತೆ ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ನಿರ್ಧಾರದ ಮೇಲೆ ವಿಶ್ವಾಸ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ದೇಶದ ಯುವಕರು ಮುಂದೆ ಅಗ್ನಿವೀರರಾಗಬೇಂದು ಬಯಸಬೇಕು. ಇದು ಪಾಸಿಟಿವ್ ವಿಚಾರ. ಈ ಮೂಲಕ ದೇಶದ ಮೇಲೆ ನಂಬಿಕೆ ಇಡಬೇಕು. ಅದೇ ರೀತಿ ಪ್ರಧಾನಿ ಮೋದಿ ನಾಯಕತ್ವದ ಮೇಲೆ ಮತ್ತು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಎಂದು ದೋವಲ್ ಹೇಳಿರುವುದಾಗಿ ಮಾದ್ಯಮ ಮೂಲಗಳು ತಿಳಿಸಿವೆ.