ಸಮಾನತೆ ದುಡಿಮೆಯ ಕ್ರಾಂತಿ ಮಾಡುತ್ತಿರುವ ಸ್ತ್ರೀಶಕ್ತಿ ಸಂಘ ಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗೆ ಅಕ್ಟೋಬರ್ 2ರಂದು ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಾಂಧಿ ಸ್ಮಾರಕ ನಿಧಿ ಹಾಗೂ ಸುಮಂಗಲಿ ಸೇವಾ ಆಶ್ರಮ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸೇವಾ ಸಂಸ್ಥೆಗಳು ಸಮಾನತೆಯ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ರಾಜ್ಯವನ್ನು ಸುಭೀಕ್ಷವಾಗಿಸಲು ಶ್ರಮಿಸುತ್ತಿವೆ. ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಸ್ತ್ರೀಶಕ್ತಿಯ ಸಬಲೀಕರಣ ಆಗಬೇಕು. ಸ್ಥಳೀಯ ಸಂಘಸಂಸ್ಥೆಗಳ ಉತ್ಪನ್ನಗಳು ವಿದೇಶದಲ್ಲಿ ಮಾರಾಟ ವಾಗಬೇಕು. ಆಗ ನಮ್ಮ ಆರ್ಥಿಕತೆಗೆ ಶಕ್ತಿ ಬರುತ್ತದೆ. ಈ ದೇಶದಲ್ಲಿ ಮಹಿಳೆಯರ ದುಡಿಮೆಗೆ ಬೆಲೆ ಕೊಡಬೇಕು. ಅವರಲ್ಲಿ ಆರ್ಥಿಕ ಸ್ವಾತಂತ್ರ್ಯ ಬಂದರೆ ಉಳಿದಂತೆ ಶೈಕ್ಷಣಿಕ, ಸಾಮಾಜಿಕ ಸೇರಿ ಎಲ್ಲ ವಲಯಗಳಲ್ಲೂ ಸ್ತ್ರೀಯರು ಸಬಲರಾಗುತ್ತಾರೆ ಎಂದರು.
ಸ್ತ್ರೀಶಕ್ತಿ ಸಂಘಗಳು ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಮೊದಲ ಬಾರಿಗೆ 1.5 ಲಕ್ಷ ಆರ್ಥಿಕ ನೆರವು ಒದಗಿಸಲಾಗಿದೆ. ಜತೆಗೆ ಆಂಕರ್ ಬ್ಯಾಂಕ್ ಜೋಡಣೆ, ಯಂತ್ರೋಪಕರಣ, ಪ್ರಾಜೆಕ್ಟ್ಗಳು, ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಹಾಗೂ ಅಮೆಜಾನ್ನಂತಹ ಆನ್ಲೈನ್ ವೇದಿಕೆಗಳಲ್ಲಿ ಮಾರಾಟದ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಬಂಧ ಪ್ರಾರಂಭಿಸಿರುವ ಪ್ರಾಯೋಗಿಕವಾಗಿ ಎಲಿವೇಟ್ ಕಾರ್ಯಕ್ರಮದಲ್ಲಿ ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ ಸುಮಾರು 50 ಲಕ್ಷ ರೂ. ವಹಿವಾಟು ಮಾಡುತ್ತಿದೆ. ಇದು ಸಂಘಟಿತ ಶ್ರಮದ ಶಕ್ತಿ ಎಂದು ಹೇಳಿದರು.