DC Shivamogga ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣ ದಿನೇದಿನೇ ಹೆಚ್ಚಾಗುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ತ್ಯಾಜ್ಯ ವಿಲೇವಾರಿಯಾಗದಿರುವುದು ತ್ಯಾಜ್ಯದ ಸಂಗ್ರಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಒಂದು ಸವಾಲಾಗಿ ಪರಿಣಮಿಸಲಿದೆ.
ತ್ಯಾಜ್ಯ ಉತ್ಪಾದನೆಯನ್ನು ನಿಯಂತ್ರಿಸಿ, ಸಕಾಲದಲ್ಲಿ ಅದರ ವ್ಯವಸ್ಥಿತ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕಲ್ಲದೇ ಸಾರ್ವಜನಿಕರೂ ಕೂಡ ತ್ಯಾಜ್ಯದ ನಿಯಂತ್ರಣ ಮತ್ತು ವಿಲೇವಾರಿಗೆ ತಕ್ಷಣದ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026ನ್ನು ಅನುಷ್ಠಾನಗೊಳಿಸುವ ಸಂಬಂಧ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಹುತೇಕ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದೆ ಮೂರು ಹಂತದಲ್ಲಿ ಕಸ ವಿಂಗಡಣೆಗೆ ಕ್ರಮ ವಹಿಸಲಾಗುತ್ತಿತ್ತು. ಒಣಕಸ, ಹಸಿಕಸ, ನೈರ್ಮಲ್ಯ ತ್ಯಾಜ್ಯದೊಂದಿಗೆ ಪ್ರಸಕ್ತ ಸಾಲಿನ ಹೊಸ ಮಾರ್ಗಸೂಚಿಯಲ್ಲಿ ಬ್ಯಾಟರಿಗಳು, ಬಲ್ಬ್‌ಗಳು, ಔಷಧಿಗಳು, ಕೀಟನಾಶಕಗಳಂತಹ ಅಪಾಯಕಾರಿ ತ್ಯಾಜ್ಯಗಳು, ಭಾರ ಲೋಹಗಳು, ಶುಚಿಗೊಳಿಸುವ ದ್ರಾವಕಗಳು, ವಿಕಿರಣಶೀಲ ವಸ್ತುಗಳು, ಇ-ತ್ಯಾಜ್ಯ ಇತ್ಯಾದಿ ವಿಶೇಷ ಕಾಳಜಿ ವಹಿಸುವ ತ್ಯಾಜ್ಯವನ್ನು ಸಂಗ್ರಹಿಸಿ ವಿಂಗಡಿಸಿ ವಿಲೇ ಮಾಡುವಂತೆ ಸರ್ಕಾರವು ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.
ಘನತ್ಯಾಜ್ಯ ನಿರ್ವಹಣೆ ಎಂಬುದು ಸ್ಥಳೀಯ ನಗರ, ಪಟ್ಟಣ ಮತ್ತು ಹಳ್ಳಿಗಳನ್ನು ಸ್ವಚ್ಛವಾಗಿಡುವ ಒಂದು ಆಂತರಿಕ ಅಂಶವಾಗಿದೆ. ಆದಾಗ್ಯೂ ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆ ಕುರಿತು ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಿದ್ಧಗೊಳ್ಳುವುದು, ಘನ ತ್ಯಾಜ್ಯದ ಮರುಬಳಕೆ, ಮರುಬಳಕೆ ಮತ್ತು ಅಪ್‌ಸೈಕ್ಲಿಂಗ್ ಮಾಡುವ ಮೂಲಕ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದ ಅವರು, ಎಲ್ಲಾ ಘನತ್ಯಾಜ್ಯ ನಿರ್ವಹಣಾ ತಂತ್ರಗಳು ಭವಿಷ್ಯದ ದಿನಗಳಲ್ಲಿ ತ್ಯಾಜ್ಯ ಉತ್ಪಾದನೆ ಇನ್ನೂ ಹೆಚ್ಚಾಗುವ ಸಾಧ್ಯತೆಯನ್ನು ನಿಭಾಯಿಸಲು ಸಮರ್ಥವಾಗುವ ರೀತಿಯಲ್ಲಿ ಸನ್ನದ್ಧಗೊಳ್ಳಬೇಕೆಂದವರು ನುಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಸ ಉತ್ಪಾದಿಸುವ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳು ತಮ್ಮ ಆವರಣದಲ್ಲೇ ಹಸಿ ಕಸವನ್ನು ಸಂಸ್ಕರಿಸುವ ವ್ಯವಸ್ಥೆ ಹೊಂದುವುದು ಕಡ್ಡಾಯವಾಗಿದೆ. ಇಂತಹ ಸಂಸ್ಥೆಗಳ ಮುಖ್ಯಸ್ಥರು ನಗರಾಭಿವೃದ್ಧಿ ಸಂಸ್ಥೆಯ ಅಧಿಕೃತ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ತಾವು ಉತ್ಪಾದಿತ ತ್ಯಾಜ್ಯವನ್ನು ವಿಂಗಡಿಸಿಕೊಂಡು ಸ್ವಯಂ ನಿರ್ವಹಣೆಗೆ ಮುಂದಾಗಬೇಕು. ತಪ್ಪಿದಲ್ಲಿ ಮಹಾನಗರಪಾಲಿಕೆಯವರಿಗೆ ಕಸ ವಿಂಗಡಿಸಿ, ನೀಡಿ, ಕಸ ವಿಲೇವಾರಿಯ ವೆಚ್ಚವನ್ನು ಭರಿಸಬೇಕಾಗುವುದು ಎಂದವರು ನುಡಿದರು.
ಜಿಲ್ಲೆಯ ಪ್ರವಾಸಿ ತಾಣಗಳು, ಜನನಿಬಿಡ ಪ್ರದೇಶಗಳು ಬೆಟ್ಟ-ಗುಡ್ಡ ಮತ್ತಿತರ ತಪ್ಪಲು ಪ್ರದೇಶಗಳಲ್ಲಿ ಚಾರಣಕ್ಕೆ ತೆರಳುವ ಪ್ರವಾಸಿಗಳು ಕುಡಿಯುವ ನೀರಿನ ಬಾಟಲ್‌ಗಳನ್ನು ತೆಗೆದುಕೊಂಡು ಹೋಗಿ ಅವುಗಳ ಬಳಕೆಯ ನಂತರ ಎಲ್ಲೆಂದರಲ್ಲಿ ಬಿಸಾಡಿ, ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವುಗಳ ಸಮರ್ಪಕ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಗಮನಹರಿಸಬೇಕು.
ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌ಬಾಟಲ್‌ತೆಗೆದುಕೊಂಡು ಹೋಗುವುದನ್ನು ನಿಷೇಧಿಸುವಂತೆ ಸೂಚಿಸಿದ ಅವರು, ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೂ ಗಮನಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರೂ ಕೂಡ ಪರಿಸರ ಸ್ವಚ್ಚತೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ನಿಗಧಿತಪಡಿಸಿದ ಮೈಕ್ರಾನ್‌ಗಿಂತ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್‌ಚೀಲಗಳ ಬಳಕೆಯಿಂದಾಗಿ ಪರಿಸರದ ಮೇಲೆ ಮಾನವನ ದಾಳಿ ಅವ್ಯಾಹತವಾಗಿ ನಡೆದಿದೆ. ಇದರ ತೀವ್ರತೆ ಅದರ ಗಂಭೀರತೆಯ ಸ್ವರೂಪವನ್ನು ಅರಿತು ಬಳಕೆಯನ್ನು ನಿರ್ಬಂಧಿಸಲು ಸಾರ್ವಜನಿಕರು ಮುಂದಾಗಬೇಕು.
ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಇಂತಹ ಪ್ಲಾಸ್ಟಿಕ್‌ಚೀಲಗಳು ಮಾರುಕಟ್ಟೆಗೆ ಬರದಂತೆ ನಿರಂತರ ದಾಳಿ ನಡೆಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ದಂಡನಾ ಕ್ರಮ ಅನುಸರಿಸುವಂತೆ ಅವರು ಸೂಚಿಸಿದರು. ಪರಿಷ್ಕೃತ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಜಾರಿಗೆ ಬಂದಿದ್ದು, ಪ್ರತಿಯೊಬ್ಬರೂ ಕಸವನ್ನು 4 ಹಂತಗಳಲ್ಲಿ ಬೇರ್ಪಡಿಸುವುದು ಕಡ್ಡಾಯವಾಗಿದೆ. ಪರಿಸರವನ್ನು ಸ್ವಚ್ಛವಾಗಿಡಲು ಮತ್ತು ಮರುಬಳಕೆ ಹೆಚ್ಚಿಸಲು ಶಿವಮೊಗ್ಗ ಸೇರಿ ಜಿಲ್ಲೆಯಾದ್ಯಂತ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಪ್ರತಿ ವಾರ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಹಾಗೂ ನೋಡಲ್‌ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.
DC Shivamogga ಸ್ವಚ್ಚ ಶಿವಮೊಗ್ಗ, ಸುಂದರ ಪರಿಸರ ನಮ್ಮೆಲ್ಲರ ಗುರಿಯಾಗಬೇಕು. ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಹೋಟೆಲ್‌ಮಾಲೀಕರು, ಕಲ್ಯಾಣ ಮಂಟಪಗಳ ನಿರ್ವಾಹಕರು, ಅಪಾರ್ಟ್‌ಮೆಂಟ್‌ಗಳ ಮುಖ್ಯಸ್ಥರ ತುರ್ತು ಸಭೆ ಕರೆದು ಸೂಚನೆ ನೀಡುವ ಅಗತ್ಯವಿದೆ ಎಂದು ಪರಿಸರ ಹೋರಾಟಗಾರರಾದ ಟಿ.ಎಸ್.ಮಹದೇವಸ್ವಾಮಿ, ಅವರು ತಿಳಿಸಿದರು.
ಶಿವಮೊಗ್ಗ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಶ್ರೀಮತಿ ಶಿಲ್ಪಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
