ರಾಷ್ಟ್ರಪತಿ ಚುನಾವಣೆಗೆ ಎನ್‍ಡಿಎ ಮೈತ್ರಿಕೂಟವು ಉತ್ತಮ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ದ್ರೌಪದಿ ಮುರ್ಮು ಅವರ ಆಯ್ಕೆಯ ಹಿಂದೆ ಯಾವ ಯಾವ ಕಾರಣಗಳಿವೆ ಎಂಬುದರ ಬಗ್ಗೆ ಈಗ ನಾನು ವಿವರಣೆ ನೀಡಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾಹಿತಿಗಳು, ವಕೀಲರು ಸೇರಿದಂತೆ ಅನೇಕರು ಹೊಸ ಪಠ್ಯಕ್ಕೆ ವಿರೋಧ ಮಾಡಿದ್ದಾರೆ. ಹೀಗಾಗಿ ಅವರ ಭಾವನೆಗಳಿಗೆ ಗೌರವ ನೀಡಿ, ಅವರ ಸಲಹೆಗಳನ್ನು ಒಳಗೊಂಡ ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದೇನೆ. ಅವರು ನನ್ನ ಪತ್ರಕ್ಕೆ ಏನು ಉತ್ತರ ಕೊಡುತ್ತಾರೋ ನೋಡೋಣ. ಆನಂತರ, ಅಗತ್ಯವಿದ್ದಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.
ದ್ರೌಪದಿ ಮುರ್ಮು ಶಾಸಕರಾಗಿ, ಸಚಿವರಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ವಿವಾದ ರಹಿತವಾದ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನು ಹಿಂಪಡೆಯುವಂತೆ ಹಾಗೂ ಈ ಹಿಂದೆ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿದ್ದ ಪಠ್ಯವನ್ನೆ ಮುಂದುವರೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ ಎಂದು ದೇವೇಗೌಡರು ತಿಳಿಸಿದರು.