Monday, March 16, 2026
Monday, March 16, 2026
Home Blog Page 1515

ಬಕ್ರೀದ್ ಹಬ್ಬದಲ್ಲಿ ಹಸುಗಳ ಬಲಿ ತಪ್ಪಿಸಿ- ಬದ್ರುದ್ದೀನ್ ಅಜ್ಮಲ್

0

ಇದೇ ಜುಲೈ 10 ರಂದು ಆಚರಿಸುವ ಬಕ್ರೀದ್ (ಈದ್ ಅಲ್-ಅಧಾ) ಹಬ್ಬದ ಸಂದರ್ಭದಲ್ಲಿ ಹಸುಗಳ ಬಲಿ ಕೊಡುವುದನ್ನು ತಪ್ಪಿಸಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಅಸ್ಸಾಂನ ಧುಬ್ರಿ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ಜಮೀಯತ್ ಉಲಮಾದ ರಾಜ್ಯಾಧ್ಯಕ್ಷ ಬದ್ರುದ್ದೀನ್ ಅಜ್ಮಲ್, ಹಿಂದೂಗಳು ಗೋವನ್ನು ತಾಯಿಯಂತೆ ಪೂಜಿಸುತ್ತಾರೆ. ಹಾಗಾಗಿ ಅವುಗಳಿಗೆ ಹಾನಿ ಮಾಡುವುದನ್ನು ತಡೆಯಬೇಕು ಎಂದು ವಿನಂತಿಸಿದ್ದಾರೆ.

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಬದ್ರುದ್ದೀನ್ ಅಜ್ಮಲ್ ಅವರು, ಹಿಂದೂಗಳು ಗೋವನ್ನು ತಾಯಿ ಎಂದು ಪರಿಗಣಿಸುತ್ತಾರೆ. ಸನಾತನ ನಂಬಿಕೆಯು ಅದನ್ನು ಪವಿತ್ರ ಸಂಕೇತವೆಂದು ಹೇಳುತ್ತದೆ. ಇಸ್ಲಾಂ ಸಮುದಾಯ ಕೂಡ ಯಾವುದೇ ಪ್ರಾಣಿಗಳ ಪ್ರಾಣಹಾನಿ ಮಾಡೋದು ಬೇಡ. ಅದಕ್ಕಾಗಿ ಇತರ ಪ್ರಾಣಿಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ವಿವಿಧ ದೇಶದ ಕರೆನ್ಸಿಗಳೆದುರು ನಮ್ಮ ರೂಪಾಯಿ ವಿನಿಮಯ ದರ

0

ಉದ್ಯೋಗ, ಪ್ರಯಾಣ,ಉನ್ನತ ವ್ಯಾಸಂಗ, ಪ್ರವಾಸ, ಖರೀದಿ, ಆಮದು- ರಫ್ತು ಹೀಗೆ ವಿವಿಧ ಸಂಗತಿಗಳಿಗೆ ಜಗತ್ತಿನ ಪ್ರಮುಖ ಕರೆನ್ಸಿಗಳ ಮೌಲ್ಯ ಮುಖ್ಯವಾಗುತ್ತದೆ.

ವಿವಿಧ ದೇಶಗಳ ಕರೆನ್ಸಿ ಮೌಲ್ಯ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯ ಯಾವ ದೇಶದ ಕರೆನ್ಸಿ ವಿರುದ್ಧ ಎಷ್ಟಿದೆ ಎಂಬ ವಿವರ ಇದ್ದು, ಈ ವಿವರಗಳಿಂದ ಸಹಾಯ ಆಗಲಿದೆ.

ಅಮೆರಿಕ ಯುಎಸ್​ಡಿ 1ಕ್ಕೆ= 78.93 ಭಾರತದ ರೂಪಾಯಿ

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 95.93 ಭಾರತದ ರೂಪಾಯಿ

ಯುರೋಗೆ= 82.54 ಭಾರತದ ರೂಪಾಯಿ
ಚೀನಾದ ಯುವಾನ್= 11.80 ಭಾರತದ ರೂಪಾಯಿ

ಜಪಾನ್​ನ ಯೆನ್= 0.58 (58 ಪೈಸೆ)

ಕುವೈತ್​ ದಿನಾರ್= 257.32 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.0018 ಪೈಸೆ
ಬಾಂಗ್ಲಾದೇಶ್​ ಟಾಕಾ= 0.84 (84 ಪೈಸೆ)

ಶ್ರೀಲಂಕಾ ರೂಪಾಯಿ= 0.22 (22 ಪೈಸೆ)

ಪಾಕಿಸ್ತಾನದ ರೂಪಾಯಿ= 0.39 (39 ಪೈಸೆ)
ನೇಪಾಳದ ರೂಪಾಯಿ= 0.63 (63 ಪೈಸೆ)

ಅಂತರರಾಷ್ಟ್ರೀಯ ವಹಿವಾಟುಗಳಿಗೆ, ಅಂದರೆ ಕಚ್ಚಾ ತೈಲ, ಅನಿಲ ಖರೀದಿ ಸೇರಿದಂತೆ ಇತರ ವ್ಯವಹಾರಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ- ಸಚಿವ ನಾಗೇಶ್

0

ಶಾಲೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಬಹಳ ಖುಷಿಯಿಂದ ಆಗಮಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆ ಎದುರಾಗುತ್ತಿರುವುದು ಪೋಷಕರ ತಲೆ ನೋವನ್ನು ಹೆಚ್ಚಿಸಿದೆ. ಶಾಲೆಗೆ ಹೋಗುವ ಮಕ್ಕಳ ಬ್ಯಾಗ್ ಹೊರೆಯಾಗಿದ್ದು ಇದರಿಂದ ಮಕ್ಕಳಿಗೆ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಶನಿವಾರ ಬ್ಯಾಗ್ ಲೆಸ್ ಡೇಯನ್ನಾಗಿ ಮಾಡಲು ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ಇಳಿಸುವ ದೃಷ್ಟಿಯಿಂದಲೇ ಸೆಮಿಸ್ಟರ್ ಪದ್ದತಿಯನ್ನು ರೂಡಿದೆ ತರಲಾಗಿತ್ತು. ಆದರೂ ವಿದ್ಯಾಾರ್ಥಿಗಳ ಬ್ಯಾಗ್ ಹೆಚ್ಚು ಭಾರವಾಗುತ್ತಿದೆ. ಮಕ್ಕಳು ತೂಕದ ಬ್ಯಾಗ್ ಅನ್ನು ಹೊತ್ತು ತರುವುದರಿಂದ ದೇಹ ರಚನೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಬೆನ್ನು ನೋವು ಕಾಣಿಸುಕೊಳ್ಳುತ್ತಿರುವುದು ಪೋಷಕನರನ್ನು ಆತಂಕಕ್ಕೆ ದೂಡಿತ್ತು. ಇದರ ಪರಿಣಾಮವೇ ನೋ ಬ್ಯಾಗ್ ಡೇ ಚಿಂತನೆಯಾಗಿದೆ.

ಮಕ್ಕಳ ಬ್ಯಾಗ್ ಹೊರೆಯನ್ನು ತಗ್ಗಿಸಲು ಮತ್ತು ಮಕ್ಕಳ ದೈಹಿಕ ಶಕ್ತಿಯನ್ನು ವೃದ್ಧಿಸುವಂತೆ ಮಾಡಲು ಶಿಕ್ಷಣ ಇಲಾಖೆ ಪ್ರತಿ ಶನಿವಾರವನ್ನು ಬ್ಯಾಗ್ ಲೆಸ್ ಡೇಯನ್ನಾಗಿ ಮಾಡುವ ಚಿಂತನೆಯನ್ನು ಮಾಡುತ್ತಿದೆ. ಪ್ರತಿ ಶನಿವಾರ ಮಕ್ಕಳಿಗೆ ಯೋಗ ತರಗತಿಯನ್ನು ಮತ್ತು ಕ್ರೀಡೆಗೆ ಮಕ್ಕಳನ್ನು ಬಿಡುವುದರಿಂದ ಮಕ್ಕಳ ದೈಹಿಕ ಸಾಮರ್ಥ್ಯವೂ ವೃದ್ಧಿಯಾಗುತ್ತದೆ.
ವ್ಯಾಯಾಮದಿಂದ ಮಾನಸಿಕ ಶಕ್ತಿಯು ವೃದ್ಧಿಸುತ್ತದೆ ಎಂದು ಶಿಕ್ಷಣ ಇಲಾಖೆ ಚಿಂತನೆಯನ್ನು ಮಾಡಿದೆ.
ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳು ಬ್ಯಾಗ್ ಹೊರೆಯನ್ನು ತಗ್ಗಿಸಲು ಕ್ರಮವನ್ನು ಕೈಗೊಳ್ಳಲಾಗುತ್ತದೆ.

ವೇಳಾಪಟ್ಟಿಗೆ ಅನುಗುಣವಾಗಿ ಬ್ಯಾಗ್ ತರಲು ಸೂಚನೆಯನ್ನು ಮುಖ್ಯೋಪಾಯದ್ಯಾಯರು ನೀಡಬೇಕು. ಪ್ರತಿ ಶನಿವಾರ ಬ್ಯಾಗ್ ಲೆಸ್ ಡೇ ಮಾಡಲು ಸಹ ಚಿಂತನೆಯನ್ನು ಮಾಡಲಾಗುತ್ತಿದ್ದು ಈ ದಿನದಂದು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸುವ ಮತ್ತು ಯೋಗವನ್ನು ಹೇಳಿಕೊಡುವ ಮೂಲ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ.

ಅನಧಿಕೃತ ಮದ್ಯ ಮಾರಾಟ: ಪರವಾನಿಗೆ ರದ್ದು ಕ್ರಮ-ಜ್ಞಾನೇಂದ್ರ

0

ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ನಿಯಂತ್ರಣಕ್ಕಾಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜತೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು.

ರಾಜ್ಯವನ್ನು ವ್ಯಸನಮುಕ್ತಗೊಳಿಸಲು ಆಂದೋಲನದ ರೀತಿಯಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ. ಕಳೆದ ಸಾಲಿನಲ್ಲಿ ಟನ್‍ಗಟ್ಟಲೆ ಮಾದಕ ವಸ್ತುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು, ಕಳೆದ ತಿಂಗಳು ನಾಶಗೊಳಿಸಲಾಗಿದೆ. ಆದರೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರವಿಲ್ಲದೆ ಈ ಪಿಡುಗನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಸಹ ಮಾದಕ ವಸ್ತು ಸೇವನೆ ಪಿಡುಗು ನೇರ ಪರಿಣಾಮ ಬೀರುತ್ತದೆ. ಕೆಲವು ಬಾಹ್ಯ ಶಕ್ತಿಗಳು ಮಾದಕ ವಸ್ತುಗಳನ್ನು ದೇಶದೊಳಗೆ ತರುವ ಮೂಲಕ ಅಪರೋಕ್ಷ ಯುದ್ಧವನ್ನು ಸಹ ನಮ್ಮ ದೇಶದ ಮೇಲೆ ಹೂಡಲು ಪ್ರಯತ್ನಿಸುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾದಕ ವಸ್ತುಗಳ ಬಳಕೆ, ಮಾರಾಟವನ್ನು ಸಂಪೂರ್ಣವಾಗಿ ಮಟ್ಟಹಾಕಲು ಬದ್ಧವಾಗಿದೆ ಎಂದು ಸಚಿವರು ಹೇಳಿದರು.

ಶಿವಮೊಗ್ಗ ಜಿಲ್ಲೆಯನ್ನು ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಂಘ ಸಂಸ್ಥೆಗಳ ಜತೆ ಕೈಜೋಡಿಸಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಸನಮುಕ್ತತೆಗಾಗಿ ವಿಶೇಷ ವಾರ್ಡ್ ಈ ತಿಂಗಳ ಒಳಗಾಗಿ ಆರಂಭಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅರ್ಧದಲ್ಲೇ ಶಾಲೆ ಬಿಡುವ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಮಾದಕ ವಸ್ತು ಸೇವನೆ ಮಟ್ಟ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪದಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸೋಲಾರ್ ವಾಟರ್ ಹೀಟರ್ ನ್ಯೂನತೆ: ಗ್ರಾಹಕರ ಪರ ತೀರ್ಪು

0

ಎಕ್ಸಿಸ್ ಟೆಕ್ನಾಲಜಿಸ್ ಬೆಂಗಳೂರು ಇವರ ವಿರುದ್ದ ಅರ್ಜಿದಾರ ರಾಜೇಶ್‍ಎ.ಜಿ ಇವರು ತಾವು ಖರೀದಿಸಿದ ಸರಕಿನ ಸೇವಾನ್ಯೂನ್ಯತೆಗಾಗಿ ಸೂಕ್ತ ಪರಿಹಾರ ಕೋರಿ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಪೀಠವು ಅರ್ಜಿದಾರರಿಗೆ ಸರಕಿನ ಹಣ ಮತ್ತು ನ್ಯಾಯಾಲಯದ ಮತ್ತು ಇತರೆ ಖರ್ಚುವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಅರ್ಜಿದಾರರು 2019-20 ರಲ್ಲಿ ಗೃಹೋಪಯೋಗಕ್ಕಾಗಿ ಎಕ್ಸಿಸ್ ಟೆಕ್ನೋಲಜಿಸ್ ಬೆಂಗಳೂರು ಇವರಿಂದ ಸೋಲಾರ್ ವಾಟರ್ ಹೀಟರ್‍ನ್ನು ರೂ.40,000 ಪಾವತಿಸಿ ಖರೀದಿಸಿರುತ್ತಾರೆ. ವಾಟರ್‍ಹೀಟರ್ ನಲ್ಲಿದ್ದ ನ್ಯೂನ್ಯತೆಗಳನ್ನು ತಿಳಿಸಿ ಸಾಕಷ್ಟು ಬಾರಿ ಸರಿಪಡಿಸಿಕೊಂಡರೂ ಸಮಸ್ಯೆ ಪರಿಹಾರವಾಗದೇ ಅರ್ಜಿದಾರರು ಲಿಖಿತ ನೋಟಿಸಿನ ಮೂಲಕ ವಿನಂತಿಸಿದರೂ ಎದುರುದಾರರು ಪ್ರತಿಕ್ರಿಯಿಸಿದ ಕಾರಣ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿರುತ್ತಾರೆ.

ವಾಸ್ತವಾಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. ಪೀಠವು ಎದುರುದಾರರಿಗೆ ವಾಟರ್ ಹೀಟರ್ ಹಿಂಪಡೆಯುವ ಮುಖಾಂತರ ಖರೀದಿಸಿದ ಮೊತ್ತ ರೂ.40,000 ಗಳನ್ನು ಖರೀದಿಯ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ವಾರ್ಷಿಕ ಶೇ.7 ಬಡ್ಡಿ ದರದಂತೆ ಹಿಂತಿರುಗಿಸಲು ಮತ್ತು ನ್ಯಾಯಾಲಯ ಇತರೆ ವೆಚ್ಚ ರೂ.18000 ಗಳನ್ನು ಹಿಂತಿರುಗಿಸಲು ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಪೀಠವು ಜು.1 ರಂದು ಈ ತೀರ್ಪು ನೀಡಿದೆ ಎಂದು ಆಯೋಗದ ಸಹಾಯಕ ನೋಂದಣಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದಿಂದ ಡಿಜಿಟಲ್ ಗ್ರಂಥಾಲಯ: ಮನೆಯಲ್ಲೇ ಓದುವ ಸೌಲಭ್ಯ

0

ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾರ್ವಜನಿಕ ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಪ್ರಾರಂಭಿಸಲಾಗಿದೆ.

ಡಿಜಿಟಲ್ ಗ್ರಂಥಾಲಯವನ್ನು ಬಳಸಿಕೊಳ್ಳಲು ಅರಿವು ಮೂಡಿಸುವ ಸಲುವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅಭಿವೃದ್ದಿಪಡಿಸಿರುವ e-Sarvajanika Granthalaya (ಇ-ಸಾರ್ವಜನಿಕ ಗ್ರಂಥಾಲಯ) ಮೊಬೈಲ್ ಆಪ್‍ನ್ನು ಜಾಲತಾಣ www.karnatakadigitalpubliclibrary.org ಮೂಲಕ ಡೌನ್‍ಲೋಡ್ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಂಡು ಮೊಬೈಲ್, ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ ಮೂಲಕ ಪುಸ್ತಕಗಳು/ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಉಚಿತವಾಗಿ ಓದಿ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೋರಲಾಗಿದೆ.

ಇ-ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಸಿಇಟಿ/ಎನ್‍ಇಇಟಿ/ಯುಪಿಎಸ್‍ಸಿ/ಕೆಪಿಎಸ್‍ಸಿ ಅಲ್ಲದೇ ರಾಜ್ಯ ಸರ್ಕಾರದ ಸಿಬಿಎಸ್‍ಸಿ/ಐಸಿಎಸ್‍ಸಿ/ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳು ಮತ್ತು ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿರುತ್ತವೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ತಿಳಿಸಿದ್ದಾರೆ.

ಸಾಹಸ ಚಟುವಟಿಕೆಯಿಂದ ಪೂರ್ಣ ವಿಕಸನ- ಪ್ರಭಾಕರ್

0

ಸಂಸ್ಕೃತ ವಿದ್ಯಾರ್ಥಿಗಳು ಕೇವಲ ಶಾಸ್ತ್ರಾಧ್ಯಯನ ಮಾಡಿದರೆ ಸಾಲದು ಸಾಹಸ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಟಿ.ಎನ್.ಪ್ರಭಾಕರ್ ತಿಳಿಸಿದರು.

ಶಿವಮೊಗ್ಗ ನಗರದ ಬಿ.ಬಿ.ರಸ್ತೆಯಲ್ಲಿರುವ ಸಂಸ್ಕೃತ ಭಾರತಿ ನೀವೇಶನದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ, ಮತ್ತು ವಾಸವಿ ಅಕಾಡೆಮಿಯವರು ಯೋಜಿಸಿರುವ ಸಂಸ್ಕೃತ, ಪ್ರಕೃತಿ ಅಧ್ಯಯನ ಮತ್ತು ಸಾಹಸ ಚಟುವಟಿಕೆಗಳನ್ನು ನಡೆಸುವ ಕೇಂದ್ರಕ್ಕೆ ಭೂಮಿಪೂಜಾ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡುತ್ತ ಸಂಸ್ಕೃತ ವಿದ್ಯಾರ್ಥಿಗಳು ಕೇವಲ ಜಪ ತಪಕ್ಕಾಗಿ ಇರದೇ ಇಂದು ಕಂಪ್ಯೂಟರ್ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ.

ಸಂಸ್ಕೃತ ಕಲಿಯುವ ಯುವಕ ಯುವತಿಯರು ಹನುಮಂತನ ಆದರ್ಶಗಳನ್ನು ಪಾಲಿಸಬೇಕು. ಹನುಮಂತ ಸಂಸ್ಕೃತ ಮಹಾ ವ್ಯಾಕರಣ ಪಂಡಿತ ಜೊತೆಗೆ ಅತ್ಯಂತ ಸಾಹಸಿ ಚಾರಣಿಗ ಎಂದು ಹನುಮಂತನ ಸಾಹಸ ಮತ್ತು ಸಂಸ್ಕೃತದ ಗುಣಗಳನ್ನು ವಿವರಿಸಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಸ ಪ್ರವೃತ್ತಿಯ ಗುಣ ಬೆಳೆಸುವಲ್ಲಿ ಶಾಲಾ ಕಾಲೇಜುಗಳು ಮುಂದಾಗಬೇಕು.
ಮುಂಬರುವ ದಿನಗಳು ಯುವ ಜನಾಂಗಕ್ಕೆ ಸವಾಲಿನ ದಿನಗಳು ಬರಲಿದೆ ಹಾಗಾಗಿ ಪ್ರತಿಯೊಬ್ಬರೂ ಸಾಹಸ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು.

ಈ ನಿಟ್ಟಿನಲ್ಲಿ ವಾಸವಿ ಅಕಾಡೆಮಿ, ಸಂಸ್ಕೃತ ಭಾರತಿ, ಮತ್ತು ತರುಣೋದಯ ಸಂಸ್ಥೆಗಳು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಚಾರಣ, ಬೋಟಿಂಗ್, ವರುಣ ನೃತ್ಯ, ರಾಕ್ ಕ್ಲೈಂಬಿಂಗ್, ಪರ್ವತಾರೋಹಣ, ಮುಂತಾದ ಸಾಹಸ ಚಟುವಟಿಕೆಗಾಗಿ ಕೇಂದ್ರವೊಂದನ್ನು ಆರಂಬಿಸುತ್ತಿರುವುದು ಬಹುಷ: ದೇಶದಲ್ಲಿಯೇ ಇದು ಪ್ರಥಮ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಎಷ್ಟು ಮುಖ್ಯವೋ ಅಷ್ಟೇ ದೇಹದ ಆರೋಗ್ಯವೂ ಕೂಡ ಮುಖ್ಯ, ಸಾಹಸ ಚಟುವಟಿಕೆಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಕೃತಿಯೇ ಗುರು ಎಂಬುದನ್ನು ಯಾರೂ ಮರೆಯಬಾರದು, ಇಂದು ಪ್ರಕೃತಿಯನ್ನು ನಾವು ಹಾಳು ಮಾಡುತ್ತಿದ್ದೇವೆ, ಇದರಿಂದ ನಮ್ಮ ಪರಿಸರದ ಮೇಲೆ ದುಷ್ಪರಿಣಾಮ ಬೀಳುತ್ತಿದೆ, ಸಂಸ್ಕೃತ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಚಾರಣಗಳಲ್ಲಿ ಭಾಗವಹಿಸಿ ಪ್ರಕೃತಿಯ ರಕ್ಚಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ವಾಸವಿ ಅಕಾಡೆಮಿ ಅದ್ಯಕ್ಷ ಶಾಮಸುಂದರ್, ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ನಗರ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಕೋಶಾಧಿಕಾರಿ ಮಧುಸೂಧನ ದೇಸಾಯಿ, ಪ್ರಾಂತ ಸಹ ಮಂತ್ರಿ ಭಾಗ್ಯಲಕ್ಷ್ಮೀ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗ ಸಂಯೋಜಕ ಗಿರೀಶ್ ಕಾರಂತ್, ಸಚ್ಚಿದಾನಂದ, ಸ್ವರೂಪ್, ಹರ್ಷ ಕಾಮತ್, ಪಿಚಾಂಡಿ, ಡಾ.ಭರತ್, ವಾಸವಿ ನಾಗರಾಜ್, ಸಚ್ಚಿದಾನಂದ ಮುಂತಾದವರು ಉಪಸ್ಥಿತರಿದ್ದರು.

ಪುರೋಹಿತರಾದ ಕೆ.ಶ್ರೀಪಾದಚಾರ್ ಇವರ ನೇತ್ರತ್ವದಲ್ಲಿ ಶಿಲಾನ್ಯಾಸ ಮತ್ತು ಭೂಮಿ ಪೂಜಾ ಕಾರ್ಯನಡೆಯಿತು.

ವರದಿ ಸೌಜನ್ಯ:
ಅ.ನಾ. ವಿಜೇಂದ್ರರಾವ್.
ಶಿವಮೊಗ್ಗ

ಬಿಎಂಶ್ರೀ-ಆಧುನಿಕ ಕನ್ನಡ ಸಾಹಿತ್ಯಕ್ಕೆ ನವ ಚೈತನ್ಯ ತುಂಬಿದವರು

0

ಆಧುನಿಕ ಕನ್ನಡ ಸಾಹಿತ್ಯಕ್ಕೆ ‘ಇಂಗ್ಲಿಷ್ ಗೀತಗಳು’ ಕೃತಿಯ ಮೂಲಕ ನವಚೈತನ್ಯ ತುಂಬಿದವರು ಬಿಎಂಶ್ರೀ. ಈ ಕೃತಿಗೆ ಕನ್ನಡದ ಸಾಂಸ್ಕೃತಿಕ ಜಗತ್ತಿನಲ್ಲಿ ಐತಿಹಾಸಿಕ ಮಹತ್ವವಿದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟರು.

‘ಇಂಗ್ಲಿಷ್ ಗೀತಗಳು’ ಕೃತಿಗೆ ನೂರು ವರ್ಷ ತುಂಬಿದ ಸವಿ ನೆನಪಿಗೆ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗವು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ‘ಬಿಎಂಶ್ರೀ ಮಾರ್ಗ’ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನವೋದಯ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದು, ತನ್ಮೂಲಕ ಅಂದಿನ ಉದಯೋನ್ಮುಖ ಬರಹಗಾರರಿಗೆ ಹೊಸ ಮಾರ್ಗ ಹಾಕಿಕೊಟ್ಟವರು ಬಿಎಂಶ್ರೀ. ನಂತರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಹೇಗೆ ವಿಕಸನ ಹೊಂದಿತು ಎಂಬುದು ಇತಿಹಾಸ.

ಕನ್ನಸ ಸಾಹಿತ್ಯ ಪರಂಪರೆಯ ಬಗ್ಗೆ ಮಾತನಾಡಿ, ಪರಂಪರೆಯ ಬಗ್ಗೆ ಅವಜ್ಞೆ ಸರಿಯಾದ ಕ್ರಮವಲ್ಲ. ಸದ್ಯದ ಸವಾಲುಗಳು ಮತ್ತು ಬಿಕ್ಕಟ್ಟುಗಳ ನಿರ್ವಹಣೆಗೆ ಪರಂಪರೆಯ ಜೊತೆಗಿನ ಅನುಸಂಧಾನ ಅತ್ಯಗತ್ಯ. ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನ ಮತ್ತು 20ನೇ ಶತಮಾನ ಪ್ರಮುಖವಾದ ಕಾಲಘಟ್ಟಗಳು. ವಚನಚಳವಳಿ ಸಂಸ್ಕೃತದಿಂದ ಬಿಡುಗಡೆ ನೀಡಿದರೆ, ವಸಾಹುಶಾಹಿ ಧೋರಣೆಯಿಂದ ಮುಕ್ತಿ ದೊರಕಿದ್ದು 20ನೇ ಶತಮಾನದಲ್ಲಿ ಎಂದು ಪ್ರತಿಪಾದಿಸಿದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಐತಿಹಾಸಿಕವಾಗಿ ಕರ್ನಾಟಕ ಮತ್ತು ಕನ್ನಡ ಅಸ್ಮಿತೆಗೆ ಗುರುತರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅದು ವಚನ ಸಾಹಿತ್ಯ ಇರಬಹುದು, ನವೋದಯ, ನವ್ಯ, ದಲಿತ-ಬಂಡಾಯ ಚಳುವಳಿಗಳಿರಬಹುದು, ಕನ್ನಡ ಸಾಹಿತ್ಯದ ಕೃಷಿ, ಕರ್ನಾಟಕದ ಸಾಂಸ್ಕೃತಿಕ ಜಗತ್ತಿಗೆ ಅನನ್ಯವಾದ ಕೊಡುಗೆ ನೀಡಿದೆ ಎಂದರು.

ನಂತರ ನಡೆದ ಗೋಷ್ಠಿಗಳಲ್ಲಿ ಡಾ. ಬೈರಮಂಗಳ ರಾಮೇಗೌಡ, ಡಾ. ಗೀತಾ ವಸಂತ, ಡಾ. ಕೆ. ಸಿ. ಶಿವಾರೆಡ್ಡಿ, ಡಾ. ಎ. ರಘುರಾಂ ಬಿಎಂಶ್ರೀ ಸಾಹಿತ್ಯದ ವಿವಿಧ ಆಯಾಮಗಳ ಬಗ್ಗೆ ವಿಚಾರ ಮಂಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ್ ಮಾತನಾಡಿದರು. ಕನ್ನಡ ಭಾರತಿ ನಿರ್ದೇಶಕ ಡಾ. ಜಿ. ಪ್ರಶಾಂತ ನಾಯಕ, ಪ್ರೊ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಮಾರ್ಷಲ್ ಶರಾಂ ಉಪಸ್ಥಿತರಿದ್ದರು.

ತುಂಬುತ್ತಿರುವ ತುಂಗಭದ್ರಾ ಜಲಾಶಯ,ರೈತರಲ್ಲಿ ಮಂದಹಾಸ

0

ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರು ಸಂಗ್ರಹವಾಗಿದೆ. ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಆದ್ದರಿಂದ, ಭತ್ತ ನಾಟಿಗೆ ಜಲಾಶಯದ ಅಚ್ಚುಕಟ್ಟು ಭಾಗದ ರೈತರು ಸಿದ್ಧತೆ ನಡೆಸಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದು ಬಂತು ನೀರು
ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೆಲ ಜಿಲ್ಲೆಗಳ ರೈತರ ಪಾಲಿಗೆ ಈ ಜಲಾಶಯ ಜೀವನಾಡಿ. ಜಲಾಶಯದ ನೀರನ್ನೇ ಅವಲಂಬಿಸಿ ಅಚ್ಚುಕಟ್ಟು ಭಾಗದ ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಕಳೆದ ವರ್ಷ ಕೂಡ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ಮಳೆಗಾಲ ಮತ್ತು ಬೇಸಿಗೆ ಬೆಳೆಗೆ ಎರಡು ಅವಧಿಯಲ್ಲೂ ನೀರು ಲಭ್ಯವಾಗಿತ್ತು. ಈ ವರ್ಷ ಬೇಸಿಗೆ ಕಾಲದಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಈ ವರ್ಷವೂ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ.

ಸದ್ಯ ಜಲಾಶಯದಲ್ಲಿ 44 ಟಿಎಂಸಿ ನೀರು ಸಂಗ್ರಹವಾಗಿದೆ. ಅವಧಿಗೆ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ನೀರಾವರಿ ಸಲಹಾ ಸಮಿತಿ ಕೂಡ ಇದೇ ತಿಂಗಳ 15 ರಂದು ಜಲಾಶಯದ ಎಲ್ಲಾ ಕಾಲುವೆಗಳಿಗೆ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ರೈತರು ಕೂಡ ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿ ವರ್ಷ ಸಸಿಗಳನ್ನು ಖರೀದಿ ಮಾಡಿ ಭತ್ತ ನಾಟಿ ಮಾಡುತ್ತಿದ್ದರು. ಆದರೆ ಹೆಚ್ಚಿನ ರೈತರು ಸಸಿ ಮಡಿಗಳನ್ನು ಸ್ವಂತವಾಗಿ ಹಾಕಿಕೊಂಡಿದ್ದಾರೆ. ಕಾಲುವೆಗಳಿಗೆ ನೀರು ಬೇಗ ಬಿಡುವುದರಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ. ಜೊತೆಗೆ ಸಸಿಯನ್ನು ಖರೀದಿ ಮಾಡುವುದು ತಪ್ಪುತ್ತದೆ ಅಂತಿದ್ದಾರೆ ಭತ್ತ ಬೆಳೆಗಾರರು.

ಕಸ ಹಾಕಿದ ಬಗ್ಗೆ ಸಾಕ್ಷಿ ಹೇಳಿ ಪ್ರಶಸ್ತಿ ಪಡೆಯಿರಿಬಿಬಿಎಂಪಿ ನವೀನ ಯೋಜನೆ

0

ರಾಜ್ಯ ರಾಜಧಾನಿ ಬೆಂಗಳೂರನ್ನು ಕ್ಲೀನ್ ಸಿಟಿ ಮಾಡಲು ಮುಂದಾಗಿರುವ ಮಹಾನಗರ ಪಾಲಿಕೆ, ಎಲ್ಲೆಂದರಲ್ಲಿ ಕಸ ಹಾಕುವವರ ಕುರಿತು ಸಾಕ್ಷಿ ನೀಡಿದರೆ ಅಂತವರಿಗೆ ಪ್ರಶಸ್ತಿ ಪತ್ರ ನೀಡಲು ತೀರ್ಮಾನಿಸಿದೆ.

ಪ್ರಶಸ್ತಿ ಪತ್ರದ ಮೇಲೆ ಪರಿಸರ ಹಿತೈಷಿ ಎಂದು ಇರಲಿದೆ. ಇದರಿಂದ ಬೆಂಗಳೂರು ನಗರದ ಸ್ವಚ್ಛತೆಗೆ ಸಹಾಯವಾಗಬಹುದು ಎಂಬ ಲೆಕ್ಕಾಚಾರ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ.

ಬಹಳಷ್ಟು ಜನ ರಸ್ತೆಗಳಲ್ಲಿ, ಖಾಲಿ ಸೈಟುಗಳಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ನಗರ ಸ್ವಚ್ಛತೆಗೆ ಧಕ್ಕೆ ಎಂಬ ಕಾರಣಕ್ಕೆ ಈಗ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ.

ಈ ರೀತಿ ಕಸ ಹಾಕುವವರಿಗೆ ಭಾರಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬಿಬಿಎಂಪಿಯಲ್ಲಿ 18,202 ಪೌರಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.