Tuesday, March 31, 2026
Tuesday, March 31, 2026
Home Blog Page 1344

ಇರುವಷ್ಟು ದಿನಗೈದ ಮಾನವೀಯ ಸೇವೆಗಳೇ ಶಾಶ್ವತ- ಉಮಾಶಂಕರ್

0

ಚಿಕ್ಕಮಗಳೂರು : ವಿಶ್ಚಕರ್ಮ ಅಮರಶಿಲ್ಪಿ ಜಕಣಚಾರಿ ದಿನಾಚರಣೆ ಹಾಗೂ ಹೊಸವರ್ಷದ ಹಿನ್ನೆಲೆಯಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ವತಿಯಿಂದ ಮಕ್ಕಳಿಗೆ ಭಾನುವಾರ ರಾತ್ರಿ ವಿಶೇಷ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಸಭಾದ ಅಧ್ಯಕ್ಷ ಉಮಾಶಂಕರ್ ಮಾತನಾಡಿ ಮನುಷ್ಯ ಜೀವನದಲ್ಲಿ ಎಷ್ಟೇ ಸಂಪಾದಿಸಿದರೂ ಸಾವಿನ ಜೊತೆಗೆ ಏನನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಆದರೆ ಇರುವಷ್ಟು ದಿನಗಳಲ್ಲಿ ಮಾಡಿರುವ ಮಾನವೀಯ ಸೇವೆಗಳು ಶಾಶ್ವತ ಉಳಿಯುವ ನಿಟ್ಟಿನಲ್ಲಿ ಸಭಾದ ವತಿಯಿಂದ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿ ಅಳಿಲು ಸೇವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಉಮಾಶಂಕರ್, ಉಪಾಧ್ಯಕ್ಷ ಎಂ.ಜೆ.ಚಂದ್ರಶೇಖರ್, ಕಾರ್ಯದರ್ಶಿ ಬಿ.ಟಿ.ರತೀಶ್, ಸಹ ಕಾರ್ಯದರ್ಶಿ ಎಲ್.ಪಿ.ಪ್ರಸನ್ನ, ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಸಂಧ್ಯಾರಾಣಿ, ಕೆ.ರಾಮಪ್ಪಚಾರ್, ಜಗದೀಶ್ ಕುಲಬಾಂಧವರಾದ ಸುಮಾ, ರಶ್ಮಿ, ಯಶೋಧ, ಪೂರ್ವಾಚಾರ್, ಗೋಪಾಲಚಾರ್, ಶಶಿಧರ್, ನಾಗಶೇಖರ್, ಶಂಕರ್, ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

ಕುವೆಂಪು ಕೃತಿ ಓದಿ ವಿಶ್ವಮಾನವರಾಗಿ-ಡಾ.ಶಿವಾನಂದ ಕಾಪಶಿ

0

ದಾವಣಗೆರೆ: ವಿಶ್ವಮಾನವ ದಿನಾಚರಣೆ ಅತ್ಯಂತ ವಿಶೇಷ. ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯ ಕೃತಿಗಳನ್ನು ಓದಿ ಮನನ ಮಾಡಿಕೊಳ್ಳುವ ಮೂಲಕ ನಾವು ವಿಶ್ವ ಮಾನವರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಶಿವಾನಂದ ಕಾಪಶಿ ಕರೆ ನೀಡಿದರು.

ದಾವಣಗೆರೆ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ , ಕನ್ನಡ ಮತ್ತು ಸಂಸೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಮತ-ಪಥಗಳ ಹೆಸರನ್ನು ಬಿಟ್ಟು ವಿಶ್ವಪಥಕ್ಕೆ ಬನ್ನಿ ಎಂಬ ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ಸ್ಮರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಕುವೆಂಪು ಅವರ ಸಂದೇಶಗಳು ಎಲ್ಲ ಕಾಲಗಳಲ್ಲಿಯೂ ಪ್ರಸ್ತುತವಾಗಿವಾಗಿವೆ ಎಂದ ಅವರು, ಕುವೆಂಪು 1956 ರಲ್ಲಿ ತಮ್ಮ ಮಗ ತೇಜಸ್ವಿಯವರಿಗೆ ಬರೆದ ಪತ್ರವನ್ನು ಓದಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ನಾಮದೇವಪ್ಪ, ನಗರವಾಣಿ ದಿನಪತ್ರಿಕೆ ಸಂಪಾದಕ ಬಿ.ಎನ್ ಮಲ್ಲೇಶ್, ದಲಿತ ಮುಖಂಡ ತಿಮ್ಮಣ್ಣ, ವಿಶ್ವಮಾನವ ಮಂಟಪದ ಅಧ್ಯಕ್ಷ ಅವರಗೆರೆ ರುದ್ರಮುನಿ ಉಪಸ್ಥಿತರಿದ್ದರು.

ಮನೆಮನೆಗೆ ಪತ್ರಿಕಾ ವಿತರಣೆ ಅಮೂಲ್ಯ ವೃತ್ತಿ-ಮಧುಕರ್ ವಿ ಕಾನಿಟ್ಕರ್

0

ಮನೆ ಮನೆಗಳಿಗೆ ದಿನ ಪತ್ರಿಕೆ ವಿತರಣೆ ಮಾಡುವ ವೃತ್ತಿ ಕೀಳರಿಮೆಪಡುವ ಕಾಯಕವಲ್ಲ. ಅದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿಯಾಗಿದೆ ಎಂದು ತರುಣ ಭಾರತಿ ವಿಸ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು.

ಭದ್ರಾವತಿಯ ನ್ಯೂಟೌನ್ ಜ್ಯೂನಿಯರ್ ಪಾಲಿಟೆಕ್ನಿಕ್ ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.

ನಾನು ಸಹ ಬಾಲ್ಯದಲ್ಲಿ ಸುಮಾರು 12 ವರ್ಷಗಳ ಕಾಲ ಪತ್ರಿಕೆಗಳನ್ನು ವಿತರಣೆ ಮಾಡಿದ್ದೇನೆ. ಈ ಹಿನ್ನಲೆಯಲ್ಲಿ ಪತ್ರಿಕೆ ವಿತರಕರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ ಎಂದರು.
ಪತ್ರಿಕೆ ವಿತರಣೆ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪತ್ರಿಕೆ ವಿತರಣೆ ಮಾಡುವುದು ಸುಲಭದ ಮಾತಲ್ಲವಾದರು ಪ್ರಜ್ಞಾಪೂರ್ವಕವಾಗಿ ಜನರನ್ನು ಮುಟ್ಟುವ ಹೆಮ್ಮೆಯ ಸಾಧನವಾಗಿದ್ದೀರಿ. ನೀವೆಲ್ಲರೂ ಒಗ್ಗಟ್ಟಾಗಿ ಸರಕಾರಗಳ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಆಹಮ್ಮದ್ ಮಾತನಾಡಿ, ಪತ್ರಿಕಾ ವಿತರಕರು ಕೊರೊನಾ ಕಾಲದಲ್ಲಿ ವಾರಿಯರ?ಸ್ ಎಂದು ಬಿರುದು ಪಡೆದು ಒಗ್ಗಟ್ಟಿನಲ್ಲಿ ವಿಫಲರಾಗಿದ್ದಾರೆ. ಚಿಂದಿ ಆರಿಸುವವರ ಕಲ್ಯಾಣಕ್ಕೆ ಸರಕಾರ 350ಕೋಟಿ ರೂಪಾಯಿ ನೀಡಿದೆ. ಆದರೆ, ಪತ್ರಿಕಾ ವಿತರಕರು ಒಗ್ಗಟ್ಟಿಲ್ಲದೆ ಅವರಿಗಿಂತ ಕೀಳಾಗಿದ್ದಾರೆ. ಇವೆಲ್ಲವನ್ನು ಗಮನಿಸಿದ ಒಕ್ಕೂಟದ ರಾಜ್ಯಾಧ್ಯಕ್ಷರ ಹೋರಾಟದಿಂದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರು ಪತ್ರಿಕಾ ವಿತರಕರಿಗೆ ಇ-ಶ್ರಮ್ ಮತ್ತು ಪ್ರಧಾನ ಮಂತ್ರಿಗಳ ಆರೋಗ್ಯ ಕಾರ್ಡುಗಳು ದೊರೆಯುವಂತೆ ಮಾಡಿದ್ದಾರಲ್ಲದೆ.ಇತ್ತೀಚೆಗೆ ಸಾಗರದ ಪತ್ರಿಕಾ ವಿತರಕ ಅಪಘಾತದಲ್ಲಿ ಸಾವು ಕಂಡು ಆ ಬಡ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ದೊರಕಿಸಿ ಕೊಟ್ಟಿದ್ದಾರೆ.
ಆದ್ದರಿಂದ, ಇಲ್ಲಿನ ವಿತರಕರು ಕೀಳರಿಮೆ ಬಿಟ್ಟು ಎಲ್ಲರೂ ಸಂಘಟಿತರಾಗಿ ಎಂದರು.

ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಕಾರ್ಯದರ್ಶಿ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರಾದ ಎನ್. ಬಾಬು, ಕೆ.ಎನ್.ರವೀಂದ್ರನಾಥ್ ಮಾತನಾಡಿದರು.

ಪತ್ರಕರ್ತ ಅನಂತಕುಮಾರ್ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಪರಶುರಾಮ್, ಸೋಮಶೇಖರ್, ಮಧು, ಯತೀಶ್, ನಿಂಗೋಜಿರಾವ್, ಸತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲಾ ಕಸಾಪ ಗಾಜನೂರು ಹೋಬಳಿ ಘಟಕ ಆರಂಭ

0

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನಿಧಿಗೆ ಹೋಬಳಿ ಘಟಕ ವತಿಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಜನೂರು ಶಾಲೆಯಲ್ಲಿ ನಿಧಿಗೆ ಹೋಬಳಿ ಘಟಕದ ಉದ್ಘಾಟನೆ ಹಾಗೂ ದಿವಂಗತ ವಸುದೇವ ಭೂಪಾಳಂ ಅವರ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಮಂಜುನಾಥ್ ಅವರು ನೆರವೇರಿಸಿ ಮಾತನಾಡುತ್ತಾ ಕನ್ನಡಕ್ಕೆ ಸಾವಿಲ್ಲ ಕನ್ನಡವು ನಿತ್ಯ ನೂತನ ಇಂತಹ ಕನ್ನಡವನ್ನು ಮತ್ತಷ್ಟು ಬಲಿಷ್ಠವಾಗಿ ಮಾಡಲು ಇಂತಹ ಹೋಬಳಿ ಘಟಕಗಳನ್ನು ಸ್ಥಾಪಿಸಿ ಆ ಮೂಲಕ ಪ್ರತಿ ತಿಂಗಳು ಒಂದು ಕಾರ್ಯಕ್ರಮದ ಮೂಲಕ ಮಕ್ಕಳು ಹಾಗೂ ಸಮುದಾಯವನ್ನು ಕನ್ನಡ ಪರವಾಗಿ ನಿಲ್ಲುವಂತೆ ಮತ್ತು ಅದರ ಮಹತ್ವ ಮತ್ತು ಮಾನ್ಯತೆಯನ್ನು ಅರಿತು ಮೈಗೂಡಿಸಿಕೊಳ್ಳುವುದಕ್ಕೆ ಇದು ಸಹಕಾರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.

ಹಾಗೆಯೇ ಕಾರ್ಯಕ್ರಮದ ಮುಖ್ಯ ಉಪನ್ಯಾಸವನ್ನು ಶ್ರೀ ಜಿ ವಿ ಸಂಗಮೇಶ್ವರ ಹಿರಿಯ ಸಾಹಿತಿಗಳು ಇವರು ಮಾತನಾಡುತ್ತಾ, ಶ್ರೀ ವಸುದೇವ ಭೂಪಾಳಂ ಅವರು ಮಹಾತ್ಮ ಗಾಂಧಿ ಅವರಿಗೆ ಕನ್ನಡವನ್ನು ಕಲಿಸಿದವರು ಹಾಗೆ ತುಂಗಾ ನದಿಯ ಬಗ್ಗೆ ಸಹ ಅನೇಕ ಪದ್ಯಗಳನ್ನು ಬರೆದಿದ್ದಾರೆ. ಇವರ ಹಾಸ್ಯ ಬರಹ ಹಾಗೂ ಗಂಭೀರ ವಿಚಾರದ ಬರಹಗಳು ಸಹ ಇದೆ ಹಾಗೆ ಇವರು ಕುವೆಂಪು ಅವರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಹಾಗೆಯೇ ಇವರು ಬರಿ ಬರಹಗಳಷ್ಟೇ ಅಲ್ಲದೆ ಕನ್ನಡ ಪ್ರೋತ್ಸಾಹಕರು ಆಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷರಾದ ವಿ ಜಗದೀಶ್ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಜನೂರು ಮುಖ್ಯೋಪಾಧ್ಯಾಯರ ಶ್ರೀ.ಬಿ. ಅರುಣ್ ಕುಮಾರ್ ರವರು ಪ್ರಾಸ್ತವಿಕವನ್ನು ಮಾತನಾಡುತ್ತಾ ಇಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆದಿದ್ದರಿಂದ ಹೊಸ ವರ್ಷದ ದಿನ ಮಕ್ಕಳಿಗೆ ಜ್ಞಾನದ ದಾಸೋಹವನ್ನು ನೀಡಿದ್ದು ಸಾಕಷ್ಟು ಉಪಯೋಗವಾಗಿದೆ ಎಂದು ತಿಳಿಸಿದರು. ಹಾಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ್ ಅಧ್ಯಕ್ಷರಾದ ಮಹಾದೇವಿಯವರು ಭೂಪಾಳಂ ಅವರ ಗೀತೆಯನ್ನು ಹಾಡಿದರು ಕಾರ್ಯಕ್ರಮದಲ್ಲಿ ಮಿತಿಗೆ ಹೋಬಳಿ ಘಟಕದ ಕಾರ್ಯದರ್ಶಿಯಾದ *ದಿನೇಶ್ ಹೊಸನಗರ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಾಲಿಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಶಾಲೆಯ ವಿದ್ಯಾರ್ಥಿ ಕು.ರಾಜು ಅವರನ್ನು ಹಾಗೂ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕು. ನೀಲಮ್ಮ ಅವರನ್ನು ಸನ್ಮಾನಿಸಲಾಯಿತು

ಪಂಚಭೂತಗಳಲ್ಲಿ ಲೀನವಾದ ಪ್ರಸನ್ನ

0

ಶಿವಮೊಗ್ಗ ಕ್ಷೇತ್ರ ಸಂಸದರಾದ ಶ್ರೀ ಬಿ. ವೈ‌. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ನಿರ್ವಾಹಕ ಪ್ರಸನ್ನ ಭಟ್ ಅವರು ವಿಧಿವಶರಾಗಿದ್ದಾರೆ. ಅವರ ಅಂತಿಮ ಯಾತ್ರೆಯು ಮಾವಿನಕೊಪ್ಪದಿಂದ ಹೊಸನಗರದ ನೆಹರು ಮೈದಾನದವರೆಗೆ ನಡೆಯಿತು. ನಂತರ ಪ್ರಸನ್ನ ಭಟ್ ಅವರ ಮನೆಯ ಹತ್ತಿರ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.

ಗಣ್ಯಾತಿಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು. ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಕೇಂದ್ರ ಕೃಷಿ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇಡೀ ಗ್ರಾಮದ ತುಂಬಾ ದುಃಖ ಮಡುಗಟ್ಟಿತ್ತು.

ಮಾಧ್ಯಮದಲ್ಲಿ ಚಿಗುರುತ್ತಿದ್ದ ಪ್ರತಿಭೆ ಪ್ರಸನ್ನ ಅಕಾಲಿಕ ಮರಣ

0

ಪ್ರಸನ್ನ ಭಟ್ ಉತ್ಸಾಹಿ ಯುವಕ . ಮಾಧ್ಯಮಗಳಲ್ಲಿ ಆಸಕ್ತಿಯಿಂದ ಕೆಲಸ ಮಾಡಿದವರು. ಫೋಟೋಗ್ರಾಫಿ, ಪ್ರವಾಸ ಅವರ ನೆಚ್ಚಿನ ಹವ್ಯಾಸ. ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. “ಸಂವಾದ” ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಸೇವೆ ಸಲ್ಲಿಸಿ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದು.

ಪ್ರಸ್ತುತ ಶಿವಮೊಗ್ಗ ಕ್ಷೇತ್ರ ಸಂಸದರಾದ ಶ್ರೀ ಬಿ. ವೈ‌. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ಸಂಪೂರ್ಣ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದರು. ಉತ್ತಮ ಹವ್ಯಾಸಗಳಲ್ಲದೇ, ಸಾಹಸಮಯ ಸಾಧನೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ನಿನ್ನೆಯಷ್ಟೇ ಅವರು ರಾಮನಗರ ಜಿಲ್ಲೆಯ ಕನಕಪುರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿನ ಮಾವತ್ತೂರು ಕೆರೆಗೆ ಸಹೋದರನೊಂದಿಗೆ ಈಜಲು ತೆರಳಿದ್ದರು. ಈಜುವ ಸಂದರ್ಭದಲ್ಲಿ ಆಕಸ್ಮಿಕವಾಗಿ ದಾರುಣ ಸಾವನ್ನಪ್ಪಿದ್ದಾರೆ.

ಅವರ ನಿಧನದ ವಾರ್ತೆ ಅವರ ಕುಟುಂಬ ಮತ್ತು ಬಂಧುಗಳು , ಅಪಾರಮಿತ್ರ ವರ್ಗಕ್ಕೆ ಆಘಾತವನ್ನುಂಟು ಮಾಡಿದೆ.
ಕೆ ಲೈವ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೀಳಂಬಿ ಅವರು ಅಗಲಿದ ಗೆಳೆಯನ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆಪ್ತಮಿತ್ರರಾಗಿದ್ದ ಪ್ರಸನ್ನನವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಸಂಸದ ರಾಘವೇಂದ್ರ ಸಂತಾಪ

ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಸ್ನೇಹಜೀವಿ ಹಾಗೂ ನನ್ನ ಫೋಟೋಗ್ರಾಫರ್ ಆಗಿದ್ದ ಶ್ರೀ ಪ್ರಸನ್ನ ಭಟ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

ವಾಹನ ಸಂಚಾರ ನಿಯಂತ್ರಣದಿಂದ ವರ್ತಕರಿಗೆ ಸಮಸ್ಯೆಯಾಗುವುದಿಲ್ಲ- ಮಿಥುನ್ ಕುಮಾರ್

0

ಶಿವಮೊಗ್ಗ: ಸಾರ್ವಜನಿಕ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಜೊತೆಯಲ್ಲಿ ವರ್ತಕರಿಗೆ ಅನುಕೂಲ ಆಗುವ ರೀತಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಾಹನ ಸಂಚಾರ ನಿಯಂತ್ರಣದಿಂದ ವರ್ತಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಹೇಳಿದ್ದಾರೆ.

ಸೋಮವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಚಾರ ವ್ಯವಸ್ಥೆಯ ಗೊಂದಲಗಳನ್ನು ಪರಿಹರಿಸಿಕೊಡುವಂತೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರ ಕುರಿತು ಹಿಂದೆ ಹೊರಡಿಸಿದ್ದ ಆದೇಶವನ್ನೇ ಮಾರ್ಪಡಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರ ವ್ಯಾಪ್ತಿಯಲ್ಲಿ ಇರುವ ವರ್ತಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಏನೇ ಗೊಂದಲ ಹಾಗೂ ಸಮಸ್ಯೆಗಳು ಕಂಡುಬಂದಲ್ಲಿ ಇಲಾಖೆ ಗಮನಕ್ಕೆ ತಂದರೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಸರಕು ಸಾಗಾಣಿಕೆ ವಾಹನಗಳ ಸಂಚಾರ ನಿಷೇಧ ಮಾಡುವುದರಿಂದ ಆಗುವ ಸಮಸ್ಯೆಗಳ ಪರಿಹರಿಸಿಕೊಡುವಂತೆ ಮತ್ತು ಸಂಚಾರ ನಿಯಮಗಳ ಗೊಂದಲಗಳನ್ನು ಸರಿಪಡಿಸಲು ಕೋರಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಪದಾಧಿಕಾರಿಗಳು ಸೋಮವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆಯಲ್ಲಿ ಎಲ್ಲ ವರ್ತಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಸೂಚಿಸಿದೆ. ಆದರೆ, ಎಲ್ಲ ವರ್ತಕರಿಗೂ ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಎಸ್‌ಪಿ ಗಮನಕ್ಕೆ ತರಲಾಯಿತು. ಸಿಸಿ ಕ್ಯಾಮರಾ ಅಳವಡಿಕೆಯಿಂದ ವರ್ತಕರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕ್ಯಾಮರಾ ಅಳವಡಿಸುವುದು ಒಳ್ಳೆಯದು ಎಂದರು.

ವರ್ತಕರು ಸಿಸಿ ಕ್ಯಾಮರಾ ಅಳವಡಿಸಲು ಒಂದು ತಿಂಗಳು ಹೆಚ್ಚುವರಿ ಸಮಯ ಕೋರಲಾಗಿದೆ. ಇದಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಸಮ್ಮತಿ ಸೂಚಿಸಿದೆ. ವರ್ತಕರು ಸಹ ಶೀಘ್ರ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ವರ್ತಕರಿಗೆ ಮನವಿ ಮಾಡಿದೆ.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಉಪಾಧ್ಯಕ್ಷ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ನಿರ್ದೇಶಕ ಎಂ.ರಾಜು, ಪ್ರದೀಪ್ ಯಲಿ, ನರೇಂದ್ರ ಇನ್ನು ಮುಂತಾದವರು ಉಪಸ್ಥಿತರಿದ್ದರು.

ವಸ್ತುಗಳನ್ನ ಪ್ರೀತಿಸುವ ನಾವು ವ್ಯಕ್ತಿ ದ್ವೇಷ ಯಾಕೆ ಮಾಡುತ್ತಿದ್ದೇವೆ ಚಿಂತಿಸಬೇಕು-ಶ್ರೀಅಭಿನವ ಚನ್ನಬಸವ ಸ್ವಾಮೀಜಿ

0

ಶಿವಮೊಗ್ಗ: ಇಂದು ನಾವು ವಸ್ತುಗಳಿಗೆ ಕೊಡುವ ಮಹತ್ವವನ್ನು ವ್ಯಕ್ತಿಗಳಿಗೆ ನೀಡುತ್ತಿಲ್ಲ. ವಸ್ತುಗಳನ್ನು ಪ್ರೀತಿಸುವ ನಾವು ವ್ಯಕ್ತಿಗಳನ್ನೇಕೆ ದ್ವೇಷಿಸುತ್ತಿದ್ದೇವೆ ಎಂಬುದಕ್ಕೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಮೂಲೆಗದ್ದೆ ಮಠ ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಜಿ ತಿಳಿಸಿದರು.

ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಹೊಸ ವರ್ಷದ ಹೊಸ ದಿನದ ಇಂದು ಎಂದಿನಂತೆ ಪ್ರತಿ ವರ್ಷ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಬಾಂಧವ್ಯವನ್ನು ಬೆಸೆಯುವ ಜನ್ಮದಾತರ ಪಾದಪೂಜೆ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಾ, ನಮ್ಮ ಮಕ್ಕಳಿಗೆ ಆಸ್ತಿ, ಹಣವನ್ನು ಪ್ರೀತಿಸುವ ಬದಲು ಗುರು ಹಿರಿಯರನ್ನು, ತಂದೆ, ತಾಯಿಯರನ್ನು ಪೂಜಿಸುವ, ಪ್ರೀತಿಸುವ ಗುಣವನ್ನು ಬೆಳೆಸಬೇಕು ಎಂದರು.

ಇಂತಹ ಸಂಸ್ಕಾರ ಶಿಕ್ಷಣವನ್ನು ರಾಮಕೃಷ್ಣ ಗುರುಕುಲ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಪಾದಪೂಜೆ ಸಮಾರಂಭ ರಾಜ್ಯದಲ್ಲೆ ಮಾದರಿಯಾದುದು ಎಂದರು.

ಕಾರ್ಯಕ್ರಮದಲ್ಲಿ ಸರ್ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ಧನಂಜಯ ಸರ್ಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಂಸ್ಕಾರವಿದ್ದರೆ ಮಾತ್ರ ಮಣ್ಣೂ ಸಹ ಮಡಿಕೆಯಾಗುತ್ತದೆ. ಸಗಣಿ ವಿಭೂತಿಯಾಗುತ್ತದೆ.

ಓದು-ಒಕ್ಕಾಲು, ಬುದ್ದಿ ಮುಕ್ಕಾಲು ಎಂಬ ಮಾತಿನಂತೆ ಓದು ಕೆಲಸ ಕೊಡುತ್ತದೆ. ಬುದ್ದಿ ದೇಶವನ್ನು ಆಳುತ್ತದೆ ಎಂದರು.
ಇಂತಹ ಆತ್ಮ ವಿಶ್ವಾಸವನ್ನು ಬೆಳೆಸಬೇಕು. ನಿಮ್ಮ ಮಕ್ಕಳನ್ನು ಅಕ್ಕಪಕ್ಕದ ಮಕ್ಕಳ ಜೊತೆ ಹೋಲಿಸಬೇಡಿ, ಅದರ ಬದಲು ಸಕರಾತ್ಮಕ ವಿಚಾರವನ್ನು ತಿಳಿಸಿ ಸದೃಢಗೊಳಿಸಿ. ವಯಕ್ತಿಕ, ಸಾಮಾಜಿಕ ಹಾಗೂ ಜವಾಬ್ದಾರಿಯನ್ನು ಕಲಿಸಿ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿ ಎಂದರು.

ಇದೇ ರಾಮಕೃಷ್ಣ ಗುರುಕುಲದ ಹಿಂದಿನ ವಿದ್ಯಾರ್ಥಿ ಪ್ರಸಕ್ತ ಎಂಬಿಬಿಎಸ್ ಮುಗಿಸಿರುವ ಎಂಡಿ. ಓದುತ್ತಿರುವ ಡಾ.ಅಭಿನಂದನ್ ಎಲಿ ಅವರು ತನ್ನ ಜೀವನದ ಈ ಸಾಧನೆಗೆ ಕಾರಣವಾದ ಈ ಶಾಲೆಯನ್ನು ಜೀವಮಾನದಲ್ಲಿ ಮರೆಯಲು ಅಸಾಧ್ಯ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಡಿ.ಆರ್.ನಾಗೇಶ್ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಸಂಸ್ಥೆಯ ಸದಸ್ಯ ಡಿ.ಎಂ.ದೇವರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು.

ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗುಜರಾತಿನಷ್ಟೇ ರಾಜ್ಯವೂ ಕ್ಷೀರೋತ್ಪಾದನೆಯಲ್ಲಿ ಬಲಿಷ್ಠ ವಿಲೀನದ ಪ್ರಶ್ನೆಯೇ ಇಲ್ಲ-ಸಚಿವಸೋಮಶೇಖರ್

0

ಎಂಎಫ್ ಮತ್ತು ಗುಜರಾತ್‍ನ ಅಮೂಲ್ ವಿಲೀನದ ಪ್ರಶ್ನೆ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರುಹೊಸ ಸಾಫ್ಟ್‍ವೇರ್ ಅಳವಡಿಸಲು ಶೇ 60ರಷ್ಟು ಹಣವನ್ನು ಕೇಂದ್ರ ಸರಕಾರ ಕೊಡಲಿದೆ. ಒಂದೇ ನಿಯಮಾವಳಿ, ಒಂದೇ ಸಾಫ್ಟ್‍ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇóಶನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂಥ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ ಆಗುತ್ತಿದೆ ಎಂದು ತಿಳಿಸಿದರು.

ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿಗಳೂ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು; ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದು ಹೇಳಿದರು.

ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾತನಾಡಿಲ್ಲ, ಕೆಎಂಎಫ್ ಬಲಿಷ್ಠ ಸಂಸ್ಥೆ.
15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಇದರಡಿ ಬರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂದು ತಿಳಿಸಿದರು.

ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

0

ಇತ್ತೀಚೆಗೆ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕರ್ನಾಟಕ ಸರಕಾರವು ಏಳು ದಿನಗಳ ಹೋಮ್ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ.

ಇದರಲ್ಲಿ ಹೊರದೇಶಗಳಾದ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ಸೇರಿವೆ. ರಾಜ್ಯ ಆರೋಗ್ಯ ಇಲಾಖೆಯ ಪರಿಷ್ಕೃತ ಕೋವಿಡ್ -19 ಮಾರ್ಗಸೂಚಿಗಳ ಪ್ರಕಾರ, ಅಂತರರಾಷ್ಟ್ರೀಯ ಪ್ರಯಾಣಿಕರು ಅವರು ಆಗಮನದ ದಿನಾಂಕದಿಂದ 7 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮಾಡಬೇಕಾಗುತ್ತದೆ” ಎಂದು ಆದೇಶವನ್ನು ಹೊರಡಿಸಿದೆ.

ಕರ್ನಾಟಕ ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ ಹೊರರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

ಹೆಚ್ಚಿನ ಅಪಾಯದ ದೇಶಗಳಿಂದ, ವಿಶೇಷವಾಗಿ ಚೀನಾದಿಂದ ಒಳಬರುವ ಪ್ರಯಾಣಿಕರೊಂದಿಗೆ ವ್ಯವಹರಿಸುವಾಗ ವಿಶ್ವದ ಅನೇಕ ದೇಶಗಳು ಹೆಚ್ಚಿನ ಎಚ್ಚರಿಕೆಯನ್ನು ವಹಿಸುತ್ತಿವೆ. ಚೀನಾದ ಅಧಿಕಾರಿಗಳ ತುಲನಾತ್ಮಕವಾಗಿ ಶಾಂತ ವರ್ತನೆಯು ಕೋವಿಡ್ -19 ಪ್ರಕರಣಗಳ ಅಸಮರ್ಪಕ ಮೇಲ್ವಿಚಾರಣೆಗೆ ಕಾರಣವಾಗುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಭಾರತದಲ್ಲಿ ಪರಿಸ್ಥಿತಿ ವಿಶೇಷವಾಗಿ ಸ್ಥಿರವಾಗಿದ್ದು, ಪ್ರಸ್ತುತ, ಜನರು ಯಾವುದೇ ಆತಂಕದ ಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ.

“ಒಮ್ಮೆ ಕೋವಿಡ್‌-19 ಪರೀಕ್ಷೆಯಲ್ಲಿ ಪಾಸಿಟಿವ್‌ ಕಂಡು ಬಂದರೆ, ಸೋಂಕಿತ ಜನರಿಗೆ ರಾಜ್ಯ ಕೋವಿಡ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಮತ್ತು ನಿರ್ವಹಿಸಬೇಕು” ಎಂದು ರಾಜ್ಯ ಸರಕಾರ ಸುತ್ತೋಲೆಯಲ್ಲಿ ತಿಳಿಸಿದೆ. ಹೆಚ್ಚಿನ ಅಪಾಯದ ದೇಶಗಳಿಂದ ಬರುವ ಪ್ರಯಾಣಿಕರು ಕೋವಿಡ್ -19 ವೈರಸ್‌ಗೆ ಪಾಸಿಟಿವ್‌ ಕಂಡುಬಂದರೆ, ಅವರನ್ನು ರಾಜ್ಯದ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ಪ್ರತ್ಯೇಕಿಸಲಾಗುತ್ತದೆ.

ಮಾರ್ಗಸೂಚಿಗಳ ಪ್ರಕಾರ ಮಾದರಿಯನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ