ಶಿವಮೊಗ್ಗ: ಇಂದು ನಾವು ವಸ್ತುಗಳಿಗೆ ಕೊಡುವ ಮಹತ್ವವನ್ನು ವ್ಯಕ್ತಿಗಳಿಗೆ ನೀಡುತ್ತಿಲ್ಲ. ವಸ್ತುಗಳನ್ನು ಪ್ರೀತಿಸುವ ನಾವು ವ್ಯಕ್ತಿಗಳನ್ನೇಕೆ ದ್ವೇಷಿಸುತ್ತಿದ್ದೇವೆ ಎಂಬುದಕ್ಕೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಮೂಲೆಗದ್ದೆ ಮಠ ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಜಿ ತಿಳಿಸಿದರು.
ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಹೊಸ ವರ್ಷದ ಹೊಸ ದಿನದ ಇಂದು ಎಂದಿನಂತೆ ಪ್ರತಿ ವರ್ಷ ನಡೆಯುವ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಬಾಂಧವ್ಯವನ್ನು ಬೆಸೆಯುವ ಜನ್ಮದಾತರ ಪಾದಪೂಜೆ ಸಮಾರಂಭದಲ್ಲಿ ಸಾನಿಧ್ಯವಹಿಸಿ ಮಾತನಾಡುತ್ತಾ, ನಮ್ಮ ಮಕ್ಕಳಿಗೆ ಆಸ್ತಿ, ಹಣವನ್ನು ಪ್ರೀತಿಸುವ ಬದಲು ಗುರು ಹಿರಿಯರನ್ನು, ತಂದೆ, ತಾಯಿಯರನ್ನು ಪೂಜಿಸುವ, ಪ್ರೀತಿಸುವ ಗುಣವನ್ನು ಬೆಳೆಸಬೇಕು ಎಂದರು.
ಇಂತಹ ಸಂಸ್ಕಾರ ಶಿಕ್ಷಣವನ್ನು ರಾಮಕೃಷ್ಣ ಗುರುಕುಲ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಪಾದಪೂಜೆ ಸಮಾರಂಭ ರಾಜ್ಯದಲ್ಲೆ ಮಾದರಿಯಾದುದು ಎಂದರು.
ಕಾರ್ಯಕ್ರಮದಲ್ಲಿ ಸರ್ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ಧನಂಜಯ ಸರ್ಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಂಸ್ಕಾರವಿದ್ದರೆ ಮಾತ್ರ ಮಣ್ಣೂ ಸಹ ಮಡಿಕೆಯಾಗುತ್ತದೆ. ಸಗಣಿ ವಿಭೂತಿಯಾಗುತ್ತದೆ.

ಓದು-ಒಕ್ಕಾಲು, ಬುದ್ದಿ ಮುಕ್ಕಾಲು ಎಂಬ ಮಾತಿನಂತೆ ಓದು ಕೆಲಸ ಕೊಡುತ್ತದೆ. ಬುದ್ದಿ ದೇಶವನ್ನು ಆಳುತ್ತದೆ ಎಂದರು.
ಇಂತಹ ಆತ್ಮ ವಿಶ್ವಾಸವನ್ನು ಬೆಳೆಸಬೇಕು. ನಿಮ್ಮ ಮಕ್ಕಳನ್ನು ಅಕ್ಕಪಕ್ಕದ ಮಕ್ಕಳ ಜೊತೆ ಹೋಲಿಸಬೇಡಿ, ಅದರ ಬದಲು ಸಕರಾತ್ಮಕ ವಿಚಾರವನ್ನು ತಿಳಿಸಿ ಸದೃಢಗೊಳಿಸಿ. ವಯಕ್ತಿಕ, ಸಾಮಾಜಿಕ ಹಾಗೂ ಜವಾಬ್ದಾರಿಯನ್ನು ಕಲಿಸಿ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿ ಎಂದರು.
ಇದೇ ರಾಮಕೃಷ್ಣ ಗುರುಕುಲದ ಹಿಂದಿನ ವಿದ್ಯಾರ್ಥಿ ಪ್ರಸಕ್ತ ಎಂಬಿಬಿಎಸ್ ಮುಗಿಸಿರುವ ಎಂಡಿ. ಓದುತ್ತಿರುವ ಡಾ.ಅಭಿನಂದನ್ ಎಲಿ ಅವರು ತನ್ನ ಜೀವನದ ಈ ಸಾಧನೆಗೆ ಕಾರಣವಾದ ಈ ಶಾಲೆಯನ್ನು ಜೀವಮಾನದಲ್ಲಿ ಮರೆಯಲು ಅಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಡಿ.ಆರ್.ನಾಗೇಶ್ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಸಂಸ್ಥೆಯ ಸದಸ್ಯ ಡಿ.ಎಂ.ದೇವರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ವೆಂಕಟೇಶ್, ತೀರ್ಥೇಶ್, ಗಜೇಂದ್ರನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.