ಪ್ರಸನ್ನ ಭಟ್ ಉತ್ಸಾಹಿ ಯುವಕ . ಮಾಧ್ಯಮಗಳಲ್ಲಿ ಆಸಕ್ತಿಯಿಂದ ಕೆಲಸ ಮಾಡಿದವರು. ಫೋಟೋಗ್ರಾಫಿ, ಪ್ರವಾಸ ಅವರ ನೆಚ್ಚಿನ ಹವ್ಯಾಸ. ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. “ಸಂವಾದ” ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಸೇವೆ ಸಲ್ಲಿಸಿ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದು.
ಪ್ರಸ್ತುತ ಶಿವಮೊಗ್ಗ ಕ್ಷೇತ್ರ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ಸಂಪೂರ್ಣ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದರು. ಉತ್ತಮ ಹವ್ಯಾಸಗಳಲ್ಲದೇ, ಸಾಹಸಮಯ ಸಾಧನೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ನಿನ್ನೆಯಷ್ಟೇ ಅವರು ರಾಮನಗರ ಜಿಲ್ಲೆಯ ಕನಕಪುರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿನ ಮಾವತ್ತೂರು ಕೆರೆಗೆ ಸಹೋದರನೊಂದಿಗೆ ಈಜಲು ತೆರಳಿದ್ದರು. ಈಜುವ ಸಂದರ್ಭದಲ್ಲಿ ಆಕಸ್ಮಿಕವಾಗಿ ದಾರುಣ ಸಾವನ್ನಪ್ಪಿದ್ದಾರೆ.
ಅವರ ನಿಧನದ ವಾರ್ತೆ ಅವರ ಕುಟುಂಬ ಮತ್ತು ಬಂಧುಗಳು , ಅಪಾರಮಿತ್ರ ವರ್ಗಕ್ಕೆ ಆಘಾತವನ್ನುಂಟು ಮಾಡಿದೆ.
ಕೆ ಲೈವ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೀಳಂಬಿ ಅವರು ಅಗಲಿದ ಗೆಳೆಯನ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆಪ್ತಮಿತ್ರರಾಗಿದ್ದ ಪ್ರಸನ್ನನವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಸಂಸದ ರಾಘವೇಂದ್ರ ಸಂತಾಪ
ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಸ್ನೇಹಜೀವಿ ಹಾಗೂ ನನ್ನ ಫೋಟೋಗ್ರಾಫರ್ ಆಗಿದ್ದ ಶ್ರೀ ಪ್ರಸನ್ನ ಭಟ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.