Wednesday, April 1, 2026
Wednesday, April 1, 2026
Home Blog Page 1343

ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಆಶ್ರಯದಲ್ಲಿ ರಾಜ್ಯಮಟ್ಟದ ತರಬೇತಿ ಶಿಬಿರ

0

ಶಿವಮೊಗ್ಗ:
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿ.ಹಾಗೂ ಸಹಕಾರ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜ.07 ರಂದು ರಾಜ್ಯ ಮಟ್ಟದ ಒಂದು ದಿನದ ತರಬೇತಿ ಶಿಬಿರ ಏರ್ಪಡಿಸಲಾಗಿದೆ.

ದಿ ನೆಸ್ಟ್ ಹೋಂಸ್ಟೇ, ಶ್ರೀ ಲಕ್ಷ್ಮೀ ಫಾರಂ, ಬೇದನಬೈಲು, ನಿಜಗುರು, ಆರಗ ಅಂಚೆ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ಶಿಬಿರ ಆಯೋಜಿಸಿದ್ದು ಜ.07 ರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ.

ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಹೆಚ್.ಶ್ರೀಪಾದರಾವ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿ.ಬೆಂಗಳೂರು ನಿರ್ದೇಶಕ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕಂತರಾದ ಹೆಚ್.ಎನ್.ವಿಜಯದೇವ್, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾ ಮಂಡಳ ನಿ. ಬೆಂಗಳೂರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕಂತ ಡಾ.ಬಿ.ಡಿ.ಭೂಕಾಂತ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ.ಬೆಂಗಳೂರು ನಿರ್ದೇಶಕರಾದ ಎ.ಸಿ.ನಾಗರಾಜ್, ಹೆಚ್.ಎನ್.ಅಶೋಕ, ಆರ್.ರಾಮಿರೆಡ್ಡಿ, ಕೆ.ಸಿ.ನಾಗರತ್ನ, ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಕೆ.ಎ.ತಾರಾನಾಥ, ಕೆ.ರತ್ನಾಕರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಎಸ್.ಅರಳಿ ಸೂರ್ಯಕಾಂತ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಸಹಕಾರ ಸಂಘಗಳ ಉಪನಿಬಂಧಕ ಜಿ.ವಾಸುದೇವ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ವಿ.ಮಹೇಶ್ವರಪ್ಪ, ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಯಾವ ಸಮಯದಲ್ಲಿ ಭಾರೀ ವಾಹನ ಸಂಚಾರ ನಿಷೇಧ? ಮಾಹಿತಿ ಇಲ್ಲಿದೆ

0

ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು, ವಯೋವೃದ್ದರು, ಮಹಿಳೆಯರು ಮಕ್ಕಳು ಓಡಾಡುವುದು ಕಷ್ಟವಾಗಿದೆ ಹಾಗೂ ಸರಕು ತುಂಬಿದ ಭಾರಿ ವಾಹನಗಳು ಬಂದಲ್ಲಿ ಅವುಗಳನ್ನು ತೆರವುಗೊಳಿಸಲು ಸಾಕಷ್ಟ ಸಮಯ ಬೇಕಾಗಿದೆ. ಹಿಂದೆ ಬರುವ ಲಘು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಆದ್ದರಿಂದ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಮತ್ತು ಹಳೆಯ ಅಧಿಸೂಚನೆಯನ್ನು ಮಾರ್ಪಡಿಸಿ ಕೆಳಗಿನಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.

ಪಶ್ಚಿಮ ಮತ್ತು ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾಮ್ ಬಾಡಾದಿಂದ ಸೀಗೆಹಟ್ಟಿ, ಬಿಬಿ ಸ್ಟ್ರೀಟ್, ಆರ್ ಎಸ್ ಪಾರ್ಕ್, ಕೋಟೆ ರಸ್ತೆ ಮೂಲಕ ಬೆಕ್ಕನಕಲ್ಮಠ ಸರ್ಕಲ್‍ವರೆಗೆ, ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್‍ನಿಂದ ವಿನೋಬನಗರ ಪೊಲೀಸ್ ಚೌಕಿವರೆಗೆ ಹಾಗೂ ಎನ್.ಟಿ.ರಸ್ತೆಯ ಸಂದೇಶ್ ಮೋಟಾರ್ಸ್ ಸರ್ಕಲ್‍ನಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಹೆಲಿಪ್ಯಾಡ್ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಸಾಗರ ರಸ್ತೆಯ ಎಪಿಎಂಸಿ ಗೇಟ್‍ವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸವಳಂಗ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಉಷಾ ನರ್ಸಿಂಗ್ ಹೋಂ ಸರ್ಕಲ್‍ವರೆಗೆ, ಬಾಲರಾಜ್ ಅರಸ್ ರಸ್ತೆಯಲ್ಲಿ ಮಹಾವೀರ ಸರ್ಕಲ್‍ನಿಂದ ಕೆಇಬಿ ಸರ್ಕಲ್ ಸಿಗ್ನಲ್ ವರೆಗೆ ಹಾಗೂ ಬಿಹೆಚ್ ರಸ್ತೆಯಲ್ಲಿ ಅಮೀರ್ ಅಹಮದ್ ಸರ್ಕಲ್‍ನಿಂದ ಕರ್ನಾಟಕ ಸಂಘ ಸರ್ಕಲ್ ಮಾರ್ಗವಾಗಿ ಶಂಕರಮಠ ಸರ್ಕಲ್‍ವರೆಗೆ ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ಮತ್ತು ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಹಳೆಯ ಅಧಿಸೂಚನೆಯ ಮಾರ್ಪಾಡು ಸಮಯ : ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ವೀರಶೈವ ಕಲ್ಯಾಣ ಮಂದಿರದಿಂದ ಗೋಪಿ ವೃತ್ತದವರೆಗೆ, ಬಿಹೆಚ್ ರಸ್ತೆಯಿಂದ ಮಹಾವೀರ್ ವೃತ್ತದವರೆಗೆ, ಚರ್ಚ್ ವೃತ್ತದಿಂದ ಮಹಾವೀರ್ ವೃತ್ತದವರೆಗೆ ಮತ್ತು ಮಹಾವೀರ್ ವೃತ್ತದಿಂದ ಚರ್ಚ್ ವೃತ್ತದವರೆಗೆ, ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ, ಎಸ್‍ಎಂವಿ ರಸ್ತೆ ಮೂಲಕ ಬಿಹೆಚ್ ರಸ್ತೆಗೆ ಡಿವಿಎಸ್ ವೃತ್ತದ ಮೂಲಕ ಹಾದು ಹೋಗುವ ಹಾಗೂ ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ, ಗೋಪಿ ವೃತ್ತದಿಂದ ಮಹಾವೀರ್ ವೃತ್ತದವರೆಗೆ, ಬಾಲರಾಜ್ ಅರಸ್ ರಸ್ತೆಯ ಮೂಲಕ ಮತ್ತು ಗೋಪಿ ವೃತ್ತದಿಮದ ಎಎ ವೃತ್ತದವರೆಗೆ, ಎಎ ಸರ್ಕಲ್‍ನಿದ ಗೋಪಿ ವೃತ್ತದವರೆಗೆ ನೆಹರು ರಸ್ತೆಯಲ್ಲಿ ಹಾಗೂ ಸರ್ ಎಂವಿ ರಸ್ತೆಯ ಮಹಾವೀರ್ ವೃತ್ತದಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಬಿಹೆಚ್ ರಸ್ತೆ ಸೇರುವ ಕಾನ್ವೆಂಟ್ ರಸ್ತೆ, ವೀರಭದ್ರೇಶ್ವರ ಚಿತ್ರಮಂದಿರ ರಸ್ತೆ, ಬಾಲರಾಜ್ ಅರಸ್ ರಸ್ತೆ ಸರ್ವಜ್ಞ ವೃತ್ತದಿಂದ ಸರ್ಕಾರಿ ನೌಕರರ ಭವನದ ಬಡಾವಣೆ ರಸ್ತೆ ಹಾಗೂ ಅಶೋಕ ವೃತ್ತದಿಂದ ಎಎ ವೃತ್ತದವರೆಗೆ, ಹಳೇ ತೀರ್ಥಹಳ್ಳಿ ರಸ್ತೆಯ ಕೃಷಿ ಕಚೇರಿಯ ಕ್ರಾಸ್ ರಸ್ತೆಯಿಂದ ಎಎ ವೃತ್ತದವರೆಗೆ, ಕುವೆಂಪು ರಸ್ತೆಯಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಸವಾರ್‍ಲೈನ್ ರಸ್ತೆಯ ಲಕ್ಷ್ಮಿ ಮೆಡಿಕಲ್ ಕ್ರಾಸ್‍ನಿಂದ ನೆಹರು ರಸ್ತೆವರೆಗೆ, ಗಾರ್ಡನ್ ಏರಿಯಾ 1,2 ಮತ್ತು 3 ನೇ ಕ್ರಾಸ್‍ಗಳಲ್ಲಿ ಎಲ್‍ಎಲ್‍ಆರ್ ರಸ್ತೆಯ ಗುಜರಿ ಅಂಗಡಿ ಕ್ರಾಸ್‍ನಿಂದ ಶೃಂಗಾರ್ ಷೋರೂಂವರೆಗೆ, ವಿನೋಬನಗರದ ಪೊಲೀಸ್ ಚೌಕಿಯಿಂದ ರೈಲ್ವೆಟ್ರ್ಯಾಕ್ ಕಡೆ ಹೋಗುವ ರಸ್ತೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಹಾಗೂ ವಿನೋಬನಗರ ಮೊದಲನೇ ಹಂತದ 6ನೇ ತಿರುವಿನಲ್ಲಿ ಸರಕು ಸಾಗಣೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆವರೆಗೆ ಸರಕು ಸಾಗಣೆ ಮತ್ತು ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಉಗ್ರರಿಂದ ಜಮ್ಮು- ಕಾಶ್ಮೀರದ ರಚೌರಿಯಲ್ಲಿ 6 ನಾಗರಿಕರ ಹತ್ಯೆ ಖಂಡನೀಯ- ಜೈಶಂಕರ್

0

ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ ಕ್ರಮಕ್ಕೆ ತೀವ್ರ ವಿರೋಧವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ವ್ಯಕ್ತಪಡಿಸಿದ್ದಾರೆ.

ವಿಯೆನ್ನಾದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶ ಇದು, ಮುಂಬೈ ನಗರದ ಮೇಲೆ ದಾಳಿ ನಡೆಸಿತು. ಹೋಟೆಲ್ ಗಳಿಗೆ ಆಗಮಿಸಿದ್ದ ವಿದೇಶಿ ಪ್ರವಾಸಿಗರ ಮೇಲೆ ದಾಳಿ ಮಾಡಿತ್ತು. ಪ್ರತಿದಿನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತಿರುವ ದೇಶವಿದು.ಪಾಕಿಸ್ತಾನ ಉಗ್ರರ ಕೇಂದ್ರ ಎಂದು ಜೈ ಶಂಕರ್ ಅವರು ಹೇಳಿದ್ದಾರೆ.

ಪಂಜಾಬ್ ಗಡಿಯಲ್ಲಿ ಪಾಕ್ ನುಸುಳುಕೋರನನ್ನು ಗುಂಡಿಟ್ಟು ಹತ್ಯೆಗೈದ ಬಿಎಸ್‌ಎಫ್ ಜಮ್ಮು ಕಾಶ್ಮೀರದ ರಜೌರಿಯಲ್ಲಿ ಹಿಂದೂ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ ಕ್ರಮವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ಭಯೋತ್ಪಾದಕರ ಕೇಂದ್ರ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಡೆದ 2 ಭಯೋತ್ಪಾದಕ ದಾಳಿಗಳಲ್ಲಿ ಆರು ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.

ಉಗ್ರರ ಮೂಲಕ ಈ ರೀತಿ ಕೃತ್ಯ ನಡೆಸುವ ಪಾಕಿಸ್ತಾನದ ಕ್ರಮ ಹೇಡಿತನದ್ದು ಎಂದು ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಾಗ್ದಾಳಿಯಲ್ಲಿ ಪಾಕಿಸ್ತಾನವನ್ನು ಹೆಸರಿಸದೆ ಭಾರತಕ್ಕೆ ಭಯೋತ್ಪಾದಕರನ್ನು ದಾಳಿಗೆ ಬಿಡುವ ಪಾಕಿಸ್ತಾನಕ್ಕೆ ನಾಚಿಕೆ ಆಗಬೇಕು ಎಂದ ಅವರು, ಗಡಿಯಾಚೆ ಭಯೋತ್ಪಾದನಾ ದಾಳಿ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಭಾರತದ ಮೇಲೆ ಭಯೋತ್ಪಾದಕರ ಮೇಲೆ ನಕಲಿಯುದ್ದ ಘೋಷಿಸಿದೆ ಎಂದು ದೂರಿದ್ದಾರೆ.

ವಿದ್ಯಾರ್ಥಿಗಳು ಇಂದಿನ ಸೌಲಭ್ಯಗಳನ್ನ ಬಳಸಿಕೊಳ್ಳಬೇಕು– ಪುರುಷೋತ್ತಮಾನಂದ ನಾಥ ಸ್ವಾಮೀಜಿ

0

ಶಿವಮೊಗ್ಗ: ಅಬ್ದುಲ್ ಕಲಾಂ ಅವರು ಬಾಲ್ಯದಲ್ಲಿ ಪಕ್ಷಿಗಳಂತೆ ಹಾರಬೇಕೆಂಬ ಕನಸು ಕಂಡಿದ್ದರು. ಹಾಗೆಯೇ ಅವರು ರಾಷ್ಟçಪತಿಗಳಾಗಿದ್ದಾಗ ಯುದ್ಧ ವಿಮಾನದಲ್ಲಿ ಪ್ರಯಾಣ ಮಾಡುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡರು ಎಂದು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಧ್ಯಾರ್ಥಿಗಳ ೨೫ನೇ ವರ್ಷದ ರಾಜ್ಯ ಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವ ಕಾರ್ಯಕ್ರಮ ಸಂಸ್ಥೆಯ ಯೋಗ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ನಮ್ಮ ಕಾಲದಲ್ಲಿ ಯಾವುದೇ ಸೌಲಭ್ಯಗಳು ಇರಲಿಲ್ಲ. ಈಗ ಎಲ್ಲ ಇದೆ. ವಿದ್ಯಾರ್ಥಿಗಳ ಅದನ್ನು ಸದ್ಬಳಕೆ ಮಾಡಿಕೊಂಡು ಕನಸುಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾನ ಎಂಬುದು ಪ್ರಕೃತಿಯಲ್ಲೇ ಇದೆ. ಇದನ್ನು ಸಿಎನ್‌ಆರ್ ರಾವ್ ಅವರು ಹೇಳಿದ್ದರು. ಕೆಂಪಿರಿವೆ ದೊಡ್ಡ ದೊಡ್ಡ ಎಲೆಗಳನ್ನ ಕೂಡಿಸಿ ಗೂಡುಕಟ್ಟುವುದು? ದೋಸೆಯಲ್ಲಿ ತೂತುಗಳು ಯಾಕೆ ಇರುತ್ತದೆ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಂಡಿಲ್ಲ. ಪ್ರಶ್ನೆಗಳನ್ನು ಹಾಕಿಕೊಂಡಾಗ ಉತ್ತರ ಸಿಗುತ್ತದೆ. ವಿಜ್ಞಾನ ತುಂಬಾ ಬೇಗ ಮುಂದುವರೆದಿದೆ, ಆದ್ದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದ ಕಡೆ ಅತಿ ಹೆಚ್ಚಿನ ಗಮನ ಹರಿಸಬೇಕು ವಿಜ್ಞಾನ ತುಂಬಾ ಬೇಗ ಮುಂದುವರೆದಿದೆ, ಆದ್ದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದ ಕಡೆ ಅತಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ಈ ಹಿಂದೆ ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕöÈತಿಕ ಸ್ಪರ್ಧೆಗಳನ್ನು ಒಟ್ಟಿಗೆ ನಡೆಸುತ್ತಿದ್ದೆವು. ಈ ಮೂರು ವಿಭಾಗಗಳಾಗಿ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಕೌಶಲ ಪ್ರದರ್ಶನ ಮಾಡಿ ಬಹುಮಾನಗಳಿಸಬೇಕು ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ವಿಜ್ಞಾನವನ್ನು ನಾವು ಉತ್ಸವದ ರೀತಿ ನೋಡಬೇಕು. ಹೊಸ ಬಗೆಯ ಆವಿಷ್ಕಾರ ನಡೆಸುವ ಕುತೂಹಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಸಾಧ್ಯ. ನಮ್ಮ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನಕ್ಕೆ ತುಂಬಾ ಆಳವಾದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಹೊಸ ಬಗೆಯ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಈ ರೀತಿಯ ಕಾರ್ಯಕ್ರಮ ಹಾಗೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಇದೇ ನಿಮಗೆ ಸಾಧನೆಯ ಮೆಟ್ಟಿಲಾಗಲಿದೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಚುಂಚಾದ್ರಿ ವಿಜ್ಞಾನೋತ್ಸವದಲ್ಲಿ ವಸ್ತು ಪ್ರದರ್ಶನ, ಚೆಸ್ ಕ್ರೀಡೆ, ಪಿಪಿಟಿ, ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾತ್ತು. ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಆಡಳಿತಾಧಿಕಾರಿ ಎ.ಟಿ ಶಿವರಾಂ, ನಿರ್ದೇಶಕರುಗಳಾದ ಡಿ.ವಿ.ಸತೀಶ್, ವಾಸಪ್ಪಗೌಡ, ಪ್ರಾಂಶುಪಾಲ ಎಸ್.ವಿ ಗುರುರಾಜ್, ಮುಖ್ಯ ಶಿಕ್ಷಕ ರಮೇಶ್ ಮತ್ತಿತರರು ಹಾಜರಿದ್ದರು.

ಶಿವಮೊಗ್ಗ ಫ್ರೀಡಂ ಪಾರ್ಕಿನಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣು

0

ಶಿವಮೊಗ್ಗ: ಹಳೆ ಜೈಲು ಕಾಂಪೌಂಡ್ ಗೆ ಓರ್ವ ವ್ಯಕ್ತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಉಮೇಶ್ (46) ಎಂಬ ವ್ಯಕ್ತಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನ ಬಳಿ ನೇಣಿಗೆ ಶರಣಾಗಿದ್ದಾನೆ. ಈತ
ವೆಂಕಟೇಶ್ ನಗರದ ನಿವಾಸಿಯಾಗಿದ್ದರು.

ಆತ್ಮಹತ್ಯೆಗೆ ಶರಣಾಗಲು ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ.ಉಮೇಶ್ ಕುಡಿತದ ಚಟ ಹತ್ತಿಸಿಕೊಂಡಿದ್ದರು.

ಉಮೇಶ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಹೊಂದಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ.

ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ರು ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ.

ನೋಟ್ ಬ್ಯಾನ್ ಸೂಕ್ತ ಕ್ರಮ-ಸುಪ್ರೀಂ ಕೋರ್ಟ್

0

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ ನೋಟು ಬ್ಯಾನ್ ಮಾಡಿತ್ತು. ಈ ಕ್ರಮವನ್ನು ಎತ್ತಿ ಹಿಡಿಯವ ಮೂಲಕ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳ ಪೀಠ ಕೇಂದ್ರದ ನೋಟ್ ಬ್ಯಾನ್ ಕ್ರಮವನ್ನು 4ರಿಂದ 1 ಅನುಪಾತದಲ್ಲಿ ಎತ್ತಿ ಹಿಡಿದಿದೆ.

ನೋಟ್ ಬ್ಯಾನ್ ಮುನ್ನೆಚ್ಚರಿಕಾ
ಕ್ರಮಗಳನ್ನು ಕೈ ಗೊಂಡಿಲ್ಲ ಎಂದು ಕರ್ನಾಟಕ ಮೂಲದ ನ್ಯಾಯಮೂರ್ತಿ ನಾಗರತ್ನ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಾಲ ಸೌಲಭ್ಯ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ವಿಳಂಬ ಬೇಡ- ಡಾ.ಸೆಲ್ವಮಣಿ

0

ಶಿವಮೊಗ್ಗ: ಸರ್ಕಾರದ ಆರ್ಥಿಕ ಸೌಲಭ್ಯ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಬ್ಯಾಂಕ್ ಹಾಗೂ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಸಾಲಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ. ಇನ್ಮುಂದೆ ಯಾವುದೇ ರೀತಿ ವಿಳಂಬ ಮಾಡದೇ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲು ಪೂರಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ ಹಾಗೂ ಮಾರ್ಗದರ್ಶಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕ್ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳ ಅನುಷ್ಠಾನ ಮಾರ್ಗಸೂಚಿಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳಿಗೆ ಮಾರ್ಗಸೂಚಿಯ ಮಾಹಿತಿ ಕೊರತೆ ಕಾರಣದಿಂದ ಸಾರ್ವಜನಿಕರ ಅರ್ಜಿಗಳು ಸಮಯಕ್ಕೆ ಸರಿಯಾಗಿ ವಿಲೇ ಆಗುವುದಿಲ್ಲ. ಇದರಿಂದ ಸರ್ಕಾರದ ಯೋಜನೆ ಜನರಿಗೆ ತಲುಪುವುದಿಲ್ಲ. ಆರ್ಥಿಕ ಸೌಲಭ್ಯ ನೀಡಲು ಅಗತ್ಯವಿರುವ ದಾಖಲೆಗಳ ಸ್ಪಷ್ಟ ಮಾಹಿತಿ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಇರಬೇಕು. ಇದರಿಂದ ಅರ್ಜಿಗಳ ಶೀಘ್ರ ವಿಲೇವಾರಿ ಸಾಧ್ಯ ಎಂದು ತಿಳಿಸಿದರು.

ಕೌಶಲ್ಯ ತರಬೇತಿಗೆ ಸರ್ಕಾರಗಳು ವಿಶೇಷ ಯೋಜನೆ ರೂಪಿಸಿದೆ. ಅರ್ಹರಿಗೆ ಕೌಶಲ್ಯ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೌಶಲ್ಯ ತರಬೇತಿ ಪಡೆದವರಿಗೆ ಬ್ಯಾಂಕ್‌ಗಳು ಸೂಕ್ತ ಸಮಯದಲ್ಲಿ ಹಣಕಾಸಿನ ನೆರವು ನೀಡಿದಲ್ಲಿ ಸ್ವಂತ ಸಾಮಾರ್ಥ್ಯದಲ್ಲಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗ ಸೃಷ್ಠಿಯು ಆಗುತ್ತದೆ ಎಂದರು.

ಬ್ಯಾಂಕ್ ಪ್ರತಿನಿಧಿಗಳ ತರಬೇತಿಯು ಸೀಮಿತ ಆಗಬಾರದು. ಇಲ್ಲಿ ತರಬೇತಿ ಪಡೆದ ಅಧಿಕಾರಿಗಳು ಮಾಹಿತಿಯನ್ನು ನಿಮ್ಮ ಶಾಖೆಗೆ ಮಾತ್ರ ಸೀಮಿತ ಮಾಡಬಾರದು. ಅನೇಕ ಬ್ಯಾಂಕ್‌ಗಳ ಅಧಿಕಾರಿಗಳು ತರಬೇತಿಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಬ್ಯಾಂಕ್‌ಗಳ ಜಿಲ್ಲೆಯ ಎಲ್ಲ ಶಾಖೆಗಳಿಗೂ ತಲುಪಿಸಬೇಕು. ಇದರಿಂದ ಜಿಲ್ಲೆಯ ಪ್ರಗತಿಯು ಉತ್ತಮವಾಗುತ್ತದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಮಾತನಾಡಿ, ಇಲಾಖೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಬ್ಯಾಂಕ್‌ಗಳ ಸಹಕಾರ ಬಹಳ ಮುಖ್ಯ ಆಗಿರುತ್ತದೆ. ಯೋಜನೆಗಳ ಮುಖಾಂತರ ಸಾಲಸೌಲಭ್ಯ ನೀಡಲು ಅಗತ್ಯವಿರುವ ಸಂಪೂರ್ಣ ಸಹಕಾರವನ್ನು ಇಲಾಖೆ ನೀಡುತ್ತದೆ. ಬ್ಯಾಂಕ್ ಪ್ರತಿನಿಧಿಗಳು ಸಹ ಸಾರ್ವಜನಿಕರಿಗೆ ಹೆಚ್ಚಿನ ನೆರವು ನೀಡಲು ಪೂರಕ ಕ್ರಮಗಳನ್ನು ಬ್ಯಾಂಕ್‌ಗಳಲ್ಲಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್, ನಬಾರ್ಡ್ ಡಿಡಿಎಂ ರವಿ, ಕೆನರಾ ಬ್ಯಾಂಕ್ ಡಿಜಿಎಂ ಸಂದೀಪ್ ರಾವ್, ಮ್ಯಾನೇಜರ್ ಯತೀಶ್, ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ, ಸಮನ್ವಯ ಕಾಶಿ, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ಭೀಮ್ ಕೋರೆಂಗಾವ್ ವಿಜಯೋತ್ಸವ

0

ಚಿಕ್ಕಮಗಳೂರು: ಭೀಮ್ ಕೋರೆಂಗಾವ್ ವಿಜಯೋತ್ಸವ ಪ್ರಯುಕ್ತ ಭೀಮ್ ಕೋರೆಂಗಾವ್ ಆಚರಣಾ ಸಮಿತಿ, ಜಿಲ್ಲಾ ಭೀಮ್ ಆರ್ಮಿ ಹಾಗೂ ಅನೇಕ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಬೈಕ್ ಹಾಗೂ ಆಟೋ ಸೇರಿದಂತೆ ನೂರಾರು ವಾಹನಗಳ ಮೂಲಕ ನಗರದ ಪ್ರಮುಖ ರಸ್ತೆಯಲ್ಲಿ ಮುಖಂಡರುಗಳು ವಿಜಯೋತ್ಸವದ ಮೆರವಣಿಗೆ ನಡೆಸಿದರು.

ಮೆರವಣಿಗೆಯು ತೊಂಗರಿಹಂಕಲ್ ವೃತ್ತದಿಂದ ಪ್ರಾರಂಭಗೊಂಡು ಐ.ಜಿ.ರಸ್ತೆ, ಮಲ್ಲಂದೂರು, ವಿಜಯಪುರ, ರತ್ನಗಿರಿ ರಸ್ತೆ, ಕೆಇಬಿ, ಹನುಮಂತಪ್ಪ ಸರ್ಕಲ್, ಎಂ.ಜಿ.ರಸ್ತೆ ಮುಖಾಂತರ ಆಜಾದ್ ಪಾರ್ಕ್ನಲ್ಲಿ ಮುಕ್ತಾಯವಾಯಿತು.

ಈ ವೇಳೆ ಮಾತನಾಡಿದ ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್ ಜ.4 ರಂದು ಮಧ್ಯಾಹ್ನ 2 ಗಂಟೆಗೆ 205ನೇ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಕೆಇಬಿ ಕಚೇರಿಯಿಂದ ಎಂ.ಜಿ.ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಆಜಾದ್ ಪಾರ್ಕ್ನಲ್ಲಿ ಸಮಾವೇಶಗೊಂಡು ಬೃಹತ್ ಬಹಿರಂಗ ಸಭೆ ನಡೆಯಲಿದೆ. ಕಾರ್ಯಕ್ರಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಮೊಮ್ಮಗ ಡಾ. ರಾಜರತ್ನ ಅಂಬೇಡ್ಕರ್, ಮೈಸೂರಿನ ಉರಿಪೆದ್ದ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರೋ. ಮಹೇಂದ್ರ ಚಂದ್ರಗುರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಮಾಜಿ ಸದಸ್ಯ ಜಗದೀಶ್, ಕಾಂಗ್ರೆಸ್ ಮುಖಂಡ ನಯಾಜ್, ಮುಖಂಡರುಗಳಾದ ವಿಜಯ್, ಭರತ್, ಉಪ್ಪಳ್ಳಿ ರಾಜು, ವಕೀಲ ಅನಿಲ್‌ಕುಮಾರ್, ರಮೇಶ್, ಚಿದಾನಂದ್, ಪ್ರವೀಣ್, ಧರ್ಮೇಶ್, ರಾಕೇಶ್ ಮತ್ತಿತರರು ಹಾಜರಿದ್ದರು.

ಸರಳ ನಡೆಯ ಸಜ್ಜನ ಶ್ರೀಸಿದ್ದೇಶ್ವರರು.

0

ವಿಜಯಪುರದ ಜ್ಞಾನಯೋಗಾಶ್ರಮದ ಯೋಗಿ
ಶ್ರೀ ಸಿದ್ಧೇಶ್ವರ ಸ್ವಾಮಿಗಳು ಕೊನೆಯುಸಿರೆಳೆದ ಸಂಗತಿ ನಮಗೆಲ್ಲಾ ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ನಡೆದಾಡುವ ದೇವರು‌ ಎಂದೇ
ಭಕ್ತಿಯಿಂದ ಕರೆಸಿಕೊಂಡ ಗುರುಗಳೀಗ ಬರೀ ನೆನಪಿನ ಚೇತನ.

ತಮ್ಮ ಪ್ರವಚನಗಳಿಂದ ಆಧ್ಯಾತ್ಮದ
ಸುಧೆ ಹಂಚಿದ ಸಂತರಿಂದ ಪ್ರಭಾವಿತರಾದವರೆಷ್ಟೋ ಮಂದಿ.
ತಮ್ಮ ವಿಚಾರಧಾರೆಗಳಿಂದ ಕರ್ನಾಟಕದ ವಿವೇಕಾನಂದರೆಂದೇ ಖ್ಯಾತರಾಗಿದ್ದರು. ಎಂಭತ್ತೆರಡು ವರ್ಷಗಳ ತುಂಬು ಬಾಳ್ವೆಯ ಜೀವಕ್ಕೆ ವಯೋ ಸಹಜ ಅನಾರೋಗ್ಯ ಕಾಡಿತ್ತು.

ಅವರ ಉಪನ್ಯಾಸಗಳಿಂದ ಎಷ್ಟೋ ಜನ ಬದಲಾಗಿದ್ದಾರೆ. ಜೀವನದ ಸತ್ಯ ಕಂಡುಕೊಂಡಿದ್ದಾರೆ.
ಬದುಕೇ ನಶ್ವರ.ಆಸೆಗಳ ಬೆಂಬತ್ತುವ
ಮಾನವರ ಅಜ್ಞಾನದ ಬಗ್ಗೆ ನಸುನಗುತ್ತಾ ಮರುಳ ಮನುಜ ಎಂದು ಜ್ಞಾನೋದಯ ಮೂಡಿಸುವ ಅವರ ನುಡಿಗಳಿಗೆ ಮಾಂತ್ರಿಕ ಸ್ಪರ್ಶವಿತ್ತು.
ಅವರ ಕೊನೆಯಾಸೆಯನ್ನ ಬರೆದಿಟ್ಟಿದ್ದಾರೆ.
ಸ್ಮಾರಕ ನಿರ್ಮಿಸ ಬೇಡಿ.
ದೇಹವನ್ನ ಅಗ್ನಿಯಲ್ಲಿ ಸುಡಬೇಕು.
ಶ್ರಾದ್ಧ ಕರ್ಮ ಗಳು ಬೇಡ.
ಚಿತಾಭಸ್ಮವನ್ನ ನದಿ ಸಾಗರಗಳಲ್ಲಿ ವಿಸರ್ಜಿಸಬೇಕು.

ಬದುಕೇ ಭ್ರಮೆ.ಅದರಲ್ಲಿ ಸನ್ಮಾನ ಸತ್ಕಾರ, ಪದವಿ , ಬಿರುದು, ಪಾರಿತೋಷಿ ಮುಂತಾಗಿ ಎಲ್ಲವನ್ನೂ
ನಿರಾಕರಿಸಿದ ಸರಳ ಮನುಷ್ಯ.
ಪದ್ಮಶ್ರೀ ಮತ್ತು ಡಾಕ್ಟರೇಟ್ ಗಳನ್ನ
ಅತ್ಯಂತ ನಮ್ರವಾಗಿಯೇ ನಿರಾಕರಿಸಿದ್ದರು.
ವರ್ತಮಾನದಲ್ಲಿ ಎಷ್ಟೋ ಪೀಠ ಗುರುಪರಂಪರೆಗಳಿಗೆ ಅವರ ನಡೆ ನುಡಿ ಆದರ್ಶಪ್ರಾಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಅಪಾರ ಶಿಷ್ಯವೃಂದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಅಗಲಿಕೆಯಿಂದ ಅಪಾರ ಶೋಕದಲ್ಲಿ ಮುಳುಗಿದೆ.
ಮತ್ತೆ ಅಂತಹ ಚೇತನ ಹುಟ್ಟಿ ಬರಲಿ
ಜ್ಞಾನದೀವಿಗೆ ಬೆಳಗಲಿ ಎಂದು ನಾವು ಹಾರೈಸಬೇಕಷ್ಟೆ.
ಹಿರಿಯ ಅನುಭಾವಿಗೆ ನಮನಗಳು.

ಶಿವಮೊಗ್ಗದಲ್ಲಿ ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ

0

ಶಿವಮೊಗ್ಗ: ಶ್ರೀ ಶಿವಗಂಗಾ ಯೋಗಕೇಂದ್ರದಲ್ಲಿ ಗೌರವ ಯೋಗ ಶಿಕ್ಷಕರ ಉಚಿತ ಸೇವೆಯನ್ನು ಗುರುತಿಸಿ ವಾರಣಾಸಿಯ ಜಂಗಮವಾಡಿ ಮಠದ ಕಾಶಿ ಜಗದ್ಗುರು ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವಾತ್ಪಾದರು ಆಶೀರ್ವದಿಸಿದರು.

ಶಿವಮೊಗ್ಗದ ಕಲ್ಲಳ್ಳಿಯಲ್ಲಿ ಇರುವ ಶ್ರೀ ಶಿವಗಂಗಾ ಯೋಗ ಕೇಂದ್ರದ ಅವ್ವ ಅಯ್ಯಾ ಬಯಲು ಚಾವಡಿ ಮಂಗಳ ವೇದಿಕೆಯಲ್ಲಿ ಕಾಶಿ ಜಗದ್ಗುರುಗಳ ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಮಾರೋಪದಲ್ಲಿ ಶಿಕ್ಷಕರಿಗೆ ಆಶೀರ್ವದಿಸಿದರು.

ಅಥರ್ವ ಆಯುರ್ಧಾಮ ಮತ್ತು ಸಂಶೋಧನಾ ಸಂಸ್ಥೆಯ ಡಾ. ಮಲ್ಲಿಕಾರ್ಜುನ ಡಂಬಳ ಅವರು ಗುರುಗಳಾದ ಪೂಜ್ಯನೀಯ ಡಾ. ಎಂ.ಈಶ್ವರ್ ರೆಡ್ಡಿ ಅವರ 73ನೇ ಜನ್ಮ ಮಹೋತ್ಸವ ಪ್ರಯುಕ್ತ ಶ್ರೀಮದ್ ಕಾಶಿ ಸಿಂಹಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ, ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು, ಕಾಶಿ ಪರಮಪೂಜ್ಯರಿಂದ ಆರೋಗ್ಯ ಮತ್ತು ಪಂಚಾಚಾರ್ಯ ಪಂಚ ಸೂತ್ರಗಳು ಕುರಿತು ದ್ವಾದಶ ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಗೌರವ ಯೋಗ ಶಿಕ್ಷಕರ ಉಚಿತ ಸೇವೆಯನ್ನು ಗುರುತಿಸಿ ಕಾಶಿ ಪರಮ ಪೂಜ್ಯರು ಆಶೀರ್ವದಿಸಿ ಗೌರವಿಸಿದರು.

ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರನ್ನು ಕುರಿತು ಯೋಗದ ಮೂಲಕ ಸಮಾಜಮುಖಿ ಸೇವಾ ಕಾರ್ಯಗಳನ್ನು ಸಲ್ಲಿಸುತ್ತಿದ್ದಾರೆ. ಯೋಗ ಕೇಂದ್ರವನ್ನು ಧರ್ಮ ಕೇಂದ್ರವನ್ನಾಗಿ ಮಾಡಿ ಮಹಾನಿಧಿ ರುದ್ರಾರಾಧ್ಯ ಆಗಿದ್ದಾರೆ ಎಂದು ತಿಳಿಸಿದರು.

ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಯೋಗ ಶಿಕ್ಷಕಕರಾದ ಜಿ.ಎಸ್.ಓಂಕಾರ್, ಹರೀಶ್.ಹೆಚ್.ಕೆ, ಕಾಟನ್ ಜಗದೀಶ್, ಜಿ.ವಿಜಯಕುಮಾರ್, ವಿಜಯ ಬಾಯರ್, ಲವಕುಮಾರ್, ಬಸವರಾಜ್ ಹಾಗೂ ಯೋಗ ಶಿಕ್ಷಕರು ಉಪಸ್ಥಿತರಿದ್ದರು.