ಶಿವಮೊಗ್ಗ: ಸರ್ಕಾರದ ಆರ್ಥಿಕ ಸೌಲಭ್ಯ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಬ್ಯಾಂಕ್ ಹಾಗೂ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಸಾಲಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದೆ. ಇನ್ಮುಂದೆ ಯಾವುದೇ ರೀತಿ ವಿಳಂಬ ಮಾಡದೇ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಲು ಪೂರಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆ ಹಾಗೂ ಮಾರ್ಗದರ್ಶಿ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬ್ಯಾಂಕ್ ಪ್ರತಿನಿಧಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳ ಅನುಷ್ಠಾನ ಮಾರ್ಗಸೂಚಿಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳಿಗೆ ಮಾರ್ಗಸೂಚಿಯ ಮಾಹಿತಿ ಕೊರತೆ ಕಾರಣದಿಂದ ಸಾರ್ವಜನಿಕರ ಅರ್ಜಿಗಳು ಸಮಯಕ್ಕೆ ಸರಿಯಾಗಿ ವಿಲೇ ಆಗುವುದಿಲ್ಲ. ಇದರಿಂದ ಸರ್ಕಾರದ ಯೋಜನೆ ಜನರಿಗೆ ತಲುಪುವುದಿಲ್ಲ. ಆರ್ಥಿಕ ಸೌಲಭ್ಯ ನೀಡಲು ಅಗತ್ಯವಿರುವ ದಾಖಲೆಗಳ ಸ್ಪಷ್ಟ ಮಾಹಿತಿ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಇರಬೇಕು. ಇದರಿಂದ ಅರ್ಜಿಗಳ ಶೀಘ್ರ ವಿಲೇವಾರಿ ಸಾಧ್ಯ ಎಂದು ತಿಳಿಸಿದರು.
ಕೌಶಲ್ಯ ತರಬೇತಿಗೆ ಸರ್ಕಾರಗಳು ವಿಶೇಷ ಯೋಜನೆ ರೂಪಿಸಿದೆ. ಅರ್ಹರಿಗೆ ಕೌಶಲ್ಯ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೌಶಲ್ಯ ತರಬೇತಿ ಪಡೆದವರಿಗೆ ಬ್ಯಾಂಕ್‌ಗಳು ಸೂಕ್ತ ಸಮಯದಲ್ಲಿ ಹಣಕಾಸಿನ ನೆರವು ನೀಡಿದಲ್ಲಿ ಸ್ವಂತ ಸಾಮಾರ್ಥ್ಯದಲ್ಲಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗ ಸೃಷ್ಠಿಯು ಆಗುತ್ತದೆ ಎಂದರು.
ಬ್ಯಾಂಕ್ ಪ್ರತಿನಿಧಿಗಳ ತರಬೇತಿಯು ಸೀಮಿತ ಆಗಬಾರದು. ಇಲ್ಲಿ ತರಬೇತಿ ಪಡೆದ ಅಧಿಕಾರಿಗಳು ಮಾಹಿತಿಯನ್ನು ನಿಮ್ಮ ಶಾಖೆಗೆ ಮಾತ್ರ ಸೀಮಿತ ಮಾಡಬಾರದು. ಅನೇಕ ಬ್ಯಾಂಕ್‌ಗಳ ಅಧಿಕಾರಿಗಳು ತರಬೇತಿಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಬ್ಯಾಂಕ್‌ಗಳ ಜಿಲ್ಲೆಯ ಎಲ್ಲ ಶಾಖೆಗಳಿಗೂ ತಲುಪಿಸಬೇಕು. ಇದರಿಂದ ಜಿಲ್ಲೆಯ ಪ್ರಗತಿಯು ಉತ್ತಮವಾಗುತ್ತದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಮಾತನಾಡಿ, ಇಲಾಖೆ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಬ್ಯಾಂಕ್‌ಗಳ ಸಹಕಾರ ಬಹಳ ಮುಖ್ಯ ಆಗಿರುತ್ತದೆ. ಯೋಜನೆಗಳ ಮುಖಾಂತರ ಸಾಲಸೌಲಭ್ಯ ನೀಡಲು ಅಗತ್ಯವಿರುವ ಸಂಪೂರ್ಣ ಸಹಕಾರವನ್ನು ಇಲಾಖೆ ನೀಡುತ್ತದೆ. ಬ್ಯಾಂಕ್ ಪ್ರತಿನಿಧಿಗಳು ಸಹ ಸಾರ್ವಜನಿಕರಿಗೆ ಹೆಚ್ಚಿನ ನೆರವು ನೀಡಲು ಪೂರಕ ಕ್ರಮಗಳನ್ನು ಬ್ಯಾಂಕ್‌ಗಳಲ್ಲಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್, ನಬಾರ್ಡ್ ಡಿಡಿಎಂ ರವಿ, ಕೆನರಾ ಬ್ಯಾಂಕ್ ಡಿಜಿಎಂ ಸಂದೀಪ್ ರಾವ್, ಮ್ಯಾನೇಜರ್ ಯತೀಶ್, ಸಹಾಯಕ ನಿರ್ದೇಶಕ ಟೀಕ್ಯಾನಾಯ್ಕ, ಸಮನ್ವಯ ಕಾಶಿ, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.