“ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು”
( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ)
-Klive special Article1939ನೇ ಇಸವಿಯಿಂದ 1945 ಇಸವಿಯು ವಿಶ್ವದ ಎರಡನೇ ಮಹಾಯುದ್ಧದ ಕಾಲ. ಅಕ್ಷ ರಾಷ್ಟ್ರಗಳಾಗಿ ಜರ್ಮನಿ, ಇಟಲಿ, ಜಪಾನ್ ನ ಅಡಾಲ್ಫ್ ಹಿಟ್ಲರ್, ಬೆನಿಟೋ ಮುಸಲೋನಿ, ಹಿಡೆಕಿ ಟೋಜೋ, ಮಿತ್ರ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ಯಾನ್ಸ್ ಗಳ ಫ್ರಾಕ್ಲಿಂಗ್ ರೂಸ್ ವೆಲ್ಟ್, ಹ್ಯಾರಿ ಟ್ರೂಮ್ಯಾನ್,ವಿನ್ಸನ್ ಚರ್ಚಿಲ್, ಜೋಸೆಫ್ ಸ್ಟಾಲಿನ್, ಚಾರ್ಲ್ಸ್ ಗಾಲೆ ಇದ್ದು ಈ ಯುದ್ಧದಲ್ಲಿ 70 ದೇಶಗಳ ಸೈನ್ಯ ಹೋರಾಡುತ್ತಿದ್ದರೆ ಏಳರಿಂದ ಎಂಟೂವರೆ ಕೋಟಿಯವರೆಗೆ ಸಾವು ನೋವುಗಳಾಗಿತ್ತು!. ಇಡೀ ಪ್ರಪಂಚವೇ ತತ್ತರಿಸಿ ಹೋಗಿದ್ದ ಈ ಕಾಲಘಟ್ಟದಲ್ಲಿ ಭಾರತದಲ್ಲೂ ಸಹಾ ತೀವ್ರ ಕ್ಷೋಭೆ ಉಂಟಾಗಿತ್ತು. ಆಕಾಶದಿಂದ ತುಸು ಸದ್ದು ಕೇಳಿದರೂ ಸಾಕು ಹಿಟ್ಲರ್ ನ ವಿಮಾನ ಬರುತ್ತಿದೆ, ಬಾಂಬ್ ಬೀಳುತ್ತದೆ ಎಂದು ಜನ ಸುಮ್ಮನೆ ಹೆದುರುತ್ತಿದ್ದರು!!. ಇಂತಹ ಕಾಲಘಟ್ಟದಲ್ಲೂ ಕ್ಷೋಭೆಗೊಂಡ ಮನಸ್ಸುಗಳಿಗೆ ಆತ್ಮಶಾಂತಿ ನೀಡುವಂತಹ ಆಧ್ಯಾತ್ಮಿಕ ಉಪನ್ಯಾಸಗಳು ಹೆಚ್ಚಿನ ಪರಿಣಾಮ ಉಂಟು ಮಾಡುತ್ತಿದ್ದು ದಾವಣಗೆರೆಯಲ್ಲಿಯೂ ಶ್ರೀ ಶಿವಾನಂದ ತೀರ್ಥ ಗುರುಗಳು ನಗರದ ಜಯದೇವ ವೃತ್ತದ ಬಳಿ ಆಧ್ಯಾತ್ಮಿಕ ಪ್ರವಚನ ನೀಡುತ್ತಿದ್ದರು. ಬಂಕಾಪುರದ ಕಡೆಯವರಾದ ಇವರು ಶಿಕ್ಷಕರಾಗಿದ್ದು ಗೃಹಸ್ಥರಾಗಿದ್ದ ಇವರು ನಂತರ ಕಾರವಾರದ ಪದ್ಮನಾಭ ತೀರ್ಥರಿಂದ ಸನ್ಯಾಸ ಸ್ವೀಕರಿಸಿ ಪರಮಹಂಸ ಶಿವಾನಂದ ತೀರ್ಥರಾದರು.ಹರಿಹರಕ್ಕೆ ಬಂದು ಅಲ್ಲಿಂದ ದಾವಣಗೆರೆಗೆ ಬಂದರು.
ಹೊರಗಿನ ಜಗತ್ತನ್ನು ಮುಂದಿಟ್ಟುಕೊಂಡು ಹೊರಗನ್ನು ಪರೀಕ್ಷಿಸಬಹುದು, ಪ್ರಯೋಗ ನಡೆಸಬಹುದು ಆದರೆ ತನ್ನೊಳಗೇ ನಡೆದಿರುವ ಅಂತಃಪ್ರಪಂಚದ ಸೂಕ್ಷ್ಮ ಜಾಲವನ್ನು ಎದುರಾಗಿಟ್ಟುಕೊಂಡು ನೋಡುವ, ಪ್ರಯೋಗ ನಡೆಸುವ ಸಾಮರ್ಥ್ಯ ಹಾಗೂ ಅಂತರಂಗ ಕೌಶಲ ಸುಲಭ ಸಾಧ್ಯವಲ್ಲ, ಇದು ಅಧ್ಯಾತ್ಮ ಜೀವಿಗಳಿಂದ ಮಾತ್ರ ಸಾಧ್ಯ. ‘ನಾಮ ರೂಪಾತ್ಮಕವಾದ ಈ ದೇಹವೇ ನಾನು’ ಎಂದುಕೊಂಡಾಗ ಭಯ,ಶೋಕ,ಮೋಹಗಳು ಕಾಡುತ್ತವೆ. ವಿಶ್ವ ಯುದ್ಧಕಾಲದಲ್ಲೂ ‘ಜೀವಭಯ’, ‘ಸಾವಿನ ಶೋಕ’, ‘ಬದುಕಿನ ಮೋಹ’ ಜನರನ್ನು ಕಾಡುತ್ತಿದ್ದರೆ ಭಾರತದಲ್ಲಿ ಅಧ್ಯಾತ್ಮ ಪುರುಷರ ಪ್ರವಚನಗಳಿಂದಾಗಿ ಅನೇಕ ಜನರಲ್ಲಿ ದೇಹಭಾವ ದೂರಾಗಿ ಆತ್ಮಭಾವ ಉಂಟಾಗಿ ಭಯ,ಶೋಕ,ಮೋಹಗಳು ಶಮನವಾಗುತ್ತಿದ್ದವು. ದಾವಣಗೆರೆಯಲ್ಲಿ ಶಿವಾನಂದ ತೀರ್ಥರ ಪ್ರವಚನಗಳೂ ಹೀಗಿರುತ್ತಿದ್ದವು.
ಈಗಿನ ಜಯದೇವ ವೃತ್ತವು ನಗರದ ಮಧ್ಯಭಾಗವಾಗಿದ್ದರೆ ಆ ಕಾಲದಲ್ಲಿ ಜಯದೇವ ವೃತ್ತದ ಪ್ರದೇಶವು ಒಂದು ರೀತಿ ಊರಿನ ಹೊರ ಭಾಗದಂತೆ ಶಿವಯೋಗ ಮಂದಿರದ ಮುಂದೆ ಆಗ ಜೋಳ ಬೆಳೆಯುತ್ತಿದ್ದರು, ಪಕ್ಕದಲ್ಲಿ ಆದಿ ಜಗದ್ಗುರು ಶ್ರೀ ಶಂಕರ ಭಗವಧ್ಪಾದಾಚಾರ್ಯರ ಕೂಡಲಿ ಶೃಂಗೇರಿ ಮಠ, ಇನ್ನೊಂದು ಪಕ್ಕದಲ್ಲಿ ಮಹಿಳಾ ಸಮಾಜದ ಚಿಕ್ಕ ಕಟ್ಟಡ, ಈಗಿನ ಅಶೋಕ ರಸ್ತೆ ಆಗ ನಿರ್ಜನ ಪ್ರದೇಶ, ಎದುರಿಗೆ ರಾಜನಹಳ್ಳಿ ಹರಿಹರಪ್ಪನವರು ಶಿವಾನಂದ ತೀರ್ಥರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದರು, ಮುಂದೆ ಇಲ್ಲಿಯೇ ಅಧ್ಯಾತ್ಮ ಮಂದಿರದ ನಿರ್ಮಾಣವೂ ಆಯಿತು. ಆಗಿನ ಪ್ರಸಿದ್ಧ ಮನೆತನಗಳ ದಾವಣಗೆರೆಯು ಮೈಸೂರು ರಾಜ್ಯದ ‘ಮ್ಯಾಂಚೆಸ್ಟರ್’ ಎಂದು ಕರೆಸಿಕೊಳ್ಳುವ ಕಾರಣಕರ್ತರಾದವರಲ್ಲಿ ಒಬ್ಬರಾದ ಖ್ಯಾತ ಕೈಗಾರಿಕೋದ್ಯಮಿ ಧರ್ಮ ಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರು, ಗಣ್ಯ ವರ್ತಕರೂ ಗಡಿಯಾರ ಕಂಬದ ನಿರ್ಮಾತೃಗಳೂ ಆದ ಚನ್ನಗಿರಿ ರಂಗಪ್ಪನವರು, ಬಾಪೂಜಿ ವಿದ್ಯಾ ಸಂಸ್ಥೆ ಸ್ಥಾಪನೆಯಾಗಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಕಾಸಲ ಶ್ರೀನಿವಾಸ ಶೆಟ್ಟರು, ಪ್ರಸಿದ್ಧ ಗ್ರಂಧಿಗೆ ವರ್ತಕರಾದ ಅಮರಾವತಿ ಹಾಲಪ್ಪನವರು, ಸುಪ್ರಸಿದ್ಧ ಕಿರಾಣಿವರ್ತಕರಾಗಿದ್ದ ಶಾಮನೂರು ಸೀನಪ್ಪ ಅಂದರೆ ಶ್ರೀನಿವಾಸ ಶೆಟ್ಟರು, ಪ್ರಸಿದ್ಧ ಕರ್ನಾಟಕ ಕಾಫಿ ಕಂಪನಿಯ ಚನ್ನಗಿರಿ ಲಕ್ಷ್ಮೀಪತಿಯಪ್ಪ ಪರಮೇಶ್ವರ ಗುಪ್ತರು, ಸ್ವಾತಂತ್ರ್ಯ ಹೋರಾಟಗಾರರೂ, ಸಮಾಜ ಸೇವಕರೂ ಆಗಿದ್ದ ಪುರಾಣಿಕ ಮಠದ ವೀರಬಸಯ್ಯನವರು, ಪ್ರಸಿದ್ಧ ವರ್ತಕರಾಗಿದ್ದ ಬ್ಯಾಡಗಿ ವಿರುಪಾಕ್ಷಪ್ಪ ಶೆಟ್ಟರು, ಅಜ್ಜಂಪುರದ ಗೋವಿಂದಸ್ವಾಮಿ ರಂಗಪ್ಪನವರು, ಶಿವಾನಂದ ಕಾಫಿ ವರ್ಕ್ಸನ ಶೇಷಾದ್ರಿ ಶೆಟ್ಟರು ಹೀಗೆ ಅನೇಕರು ಶಿವಾನಂದ ತೀರ್ಥರ ಅಧ್ಯಾತ್ಮದಿಂದ ಪ್ರಭಾವಿತರಾಗಿದ್ದರು.
Klive special Article ಈಗ ಶಿವಾನಂದ ತೀರ್ಥರ ಈ ಆಧ್ಯಾತ್ಮ ಮಂದಿರವು ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ವತಿಯಿಂದ ನಡೆಯುತ್ತಿದ್ದು ಇಲ್ಲಿ ವಿಶೇಷವಾಗಿ ಶ್ರೀ ಗುರು ದತ್ತಾತ್ರೇಯ ದೇವಸ್ಥಾನವು ನಿರ್ಮಾಣವಾಗಿದ್ದು ಹನುಮಜಯಂತಿ, ಗುರು ದತ್ತಾತ್ರೇಯ ಜಯಂತಿ, ಭಗವದ್ಗೀತಾ ಜಯಂತಿ, ಗುರುಪೂರ್ಣಿಮೆ, ಶಿವಾನಂದ ತೀರ್ಥ ಗುರುಗಳ ಜಯಂತ್ಯೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿದ್ದು ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಇಂದು ಶ್ರೀ ಪರಮಹಂಸ ಶಿವಾನಂದ ತೀರ್ಥಗುರುಗಳ ಜಯಂತಿ ಉತ್ಸವವು ಧರ್ಮಪ್ರಕಾಶ ರಾಜನಹಳ್ಳಿ ರಾಮಶ್ರೇಷ್ಠಿಯವರ ಸುಪುತ್ರಿ ದಿ. ಶ್ರೀಮತಿ ಸಿ.ವಿ. ಸುನಂದಮ್ಮ (ಚನ್ನಗಿರಿ ವಿರೂಪಾಕ್ಷಪ್ಪನವರ ಧರ್ಮ ಪತ್ನಿ),ದಿ. ಬ್ಯಾಡಗಿ ಗಂಗಪ್ಪ ಶ್ರೇಷ್ಠಿ ಮಾತಾಪಿತರಾದ ಬ್ಯಾಡಗಿ ಜಯಲಕ್ಷ್ಮಮ್ಮ ವಿರೂಪಾಕ್ಷ ಶ್ರೇಷ್ಠಿ, ಕೀರ್ತಿ ಶೇಷ ದಿ.ರಾಜನಹಳ್ಳಿ ಗೋಪಾಲಕೃಷ್ಣ ಶ್ರೇಷ್ಠಿಯವರ ಜ್ಞಾಪಕಾರ್ಥವಾಗಿ ಶ್ರೀಮತಿ ರಾಜನಹಳ್ಳಿ ಕಾಂತ ಲಕ್ಷ್ಮಮ್ಮ ಮತ್ತು ಮಕ್ಕಳು ಹಾಗೂ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ವತಿಯಿಂದ ನೆರವೇರುತ್ತಿದ್ದು ಮುಂಜಾನೆ ಆರು ಗಂಟೆಗೆ ಶ್ರೀ ಗುರುಗಳ ಪಾದುಕೆಗೆ ಕಾಕಡಾರತಿ, ಮಂಗಳಸ್ನಾನ, ಶ್ರೀ ಗಣಪತಿ ಸ್ಮರಣೆ, ಶ್ರೀ ವೀರಾಂಜನೇಯ ಸ್ವಾಮಿಗೆ ಪೂಜೆ, ಬೆಳಿಗ್ಗೆ 10 ಗಂಟೆಗೆ ಗುರುಗಳ ಪಾದುಕೆಗೆ ಲಘುನ್ಯಾಸಪೂರ್ವಕ ಏಕಾದಶ ವರ್ತನ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಶಿವಾನಂದ ತೀರ್ಥರ ನಿರೂಪಣೆ ಮತ್ತು ತೊಟ್ಟಿಲೋತ್ಸವ, ಮಧ್ಯಾಹ್ನ 1 ಗಂಟೆಗೆ ಅಷ್ಟಾವಧಾನ, ವೇದಘೋಷ, ಮಂತ್ರ ಪುಷ್ಪ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ ವಾಸವಿ ಭಜನಾ ಮಂಡಳಿ ಹಾಗೂ ತಂಡದವರಿಂದ ಭಜನಾ ಕಾರ್ಯಕ್ರಮ ಮಂಗಳಾರತಿ ನೆರವೇರಲಿದೆ.
-ವಿಶೇಷ ಲೇಖನ: ಡಾ. ಎಚ್. ಬಿ. ಮಂಜುನಾಥ, ಹಿರಿಯ ಪತ್ರಕರ್ತರು, ದಾವಣಗೆರೆ-
