Rajendra Chenni ಇಂದು ಗ್ರಂಥಾಲಯಕ್ಕೆ ಭೇಟಿ ನೀಡಿದ್ದೆ. ಕನ್ನಡ ಪುಸ್ತಕಗಳಿರುವ ವಿಭಾಗದಲ್ಲಿ ಪುಸ್ತಕಗಳನ್ನ ಹುಡುಕುವಾಗ ನನ್ನ ಕೈ ಗೆ ಸಿಕ್ಕಿದ್ದು, ಧಾರವಾಡದ ಪಡ್ಡೆ ದಿನಗಳು ಪುಸ್ತಕ.. ಈ ಪುಸ್ತಕವನ್ನು ಬರೆದವರು ಖ್ಯಾತ ವಿಮರ್ಶಕರು, ಕಥೆಗಾರರು,ಲೇಖಕರಾಗಿರುವ ರಾಜೇಂದ್ರ ಚೆನ್ನಿ… ಅವರನ್ನು ಪ್ರತಿದಿನವೂ ಹತ್ತಿರದಿಂದ ನೋಡುವುದರಿಂದ ಅವರ ಪುಸ್ತಕವನ್ನು ಒಮ್ಮೆ ಓದಬೇಕೆನಿಸಿತು.
ಆ ಪುಸ್ತಕವನ್ನು ತೆಗೆದುಕೊಂಡು ಲೈಬ್ರರಿಯಿಂದ ಹೊರನಡೆದೆ.
ಲೇಖಕರು ಈ ಪುಸ್ತಕದಲ್ಲಿ ಕಾಲೇಜು ದಿನಗಳಲ್ಲಿದ್ದಾಗ ಅನುಭವಿಸಿದ ಪಡ್ಡೆ ದಿನಗಳನ್ನು 11 ಅಧ್ಯಾಯಗಳಲ್ಲಿ ಬರೆದಿದ್ದಾರೆ. ಪುಸ್ತಕದ ಪ್ರತೀ ಅಧ್ಯಾಯವೂ ಕೂಡ ವಿಭಿನ್ನವಾಗಿದೆ. ನಟಿ ಹೇಮಾ ಮಾಲಿನಿಯವರು ಗಿರೀಶ್ ಕಾರ್ನಾಡ್ ಅವರನ್ನ ಮದುವೆ ಆಗ್ತಾರೆ. ಅವರು ಧಾರವಾಡದ ಸೊಸೆಯಾಗ್ತಾರೆ ಎನ್ನುವ ಸುದ್ದಿಯನ್ನ ಪೇಪರ್ ನಲ್ಲಿ ಓದಿ, ಕುತೂಹಲದಿಂದ ಆ ದಿನಕ್ಕಾಗಿ ಕಾಯುವ ಸ್ನೇಹಿತರ ಬಳಗದ ಕುರಿತು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.
ಆಮೇಲಿನ ಅಧ್ಯಾಯಗಳಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದಿದ್ದಾರೆ. ಆಗೆಲ್ಲಾ ಕಾಲೇಜು ಚುನಾವಣೆಗಳಿಗೆ ಎಷ್ಟೊಂದು ಮಹತ್ವ ಇತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ.
ಒಮ್ಮೆ ಅವರ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ.
ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಿರುವುದಿಲ್ಲ. ಆಮೇಲೆ ಲಂಕೇಶರ ಪ್ರಸ್ತಾಪವನ್ನು ಕೇಳಲಾಗಲಿಲ್ಲವೆಂದು ತಮ್ಮ ಅದೃಷ್ಟವನ್ನು ಶಪಿಸಿಕೊಳ್ಳುವ ಪ್ರಸಂಗವನ್ನು ಇಲ್ಲಿ ಕಾಣಬಹುದಾಗಿದೆ.
ಇನ್ನೊಂದು ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಇರುತ್ತಿದ್ದ, ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎನ್ನುವುದನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸಿದ್ದಾರೆ.
ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ವಿದೇಶಿ ಡಾಕ್ಟರ್ ಹಾಗೂ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಸುಂದರ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು, ಅವಳಿಗೆ ಪ್ರೇಮ ಪ್ರಸ್ತಾಪ ಮಾಡಿದ ಸನ್ನಿವೇಶವನ್ನು ಅಚ್ಚು ಕಟ್ಟಾಗಿ ಹಾಸ್ಯದೊಂದಿಗೆ ಬರೆಯಲಾಗಿದೆ.
“ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ಬೇಸರದೊಂದಿಗೆ ಈ ಪುಸ್ತಕ ಮುಗಿಯುತ್ತದೆ.
ಹಾಗೆ ನೋಡಿದರೆ, ರಾಜೇಂದ್ರ ಚೆನ್ನಿಯವರು ಗಂಭೀರ ಚಿಂತಕರು…. ಹೀಗಿರುವಾಗ ಬಗ್ಗೆ ತಾವು ಕಾಲೇಜು ದಿನಗಳಲ್ಲಿದ್ದಾಗ ಪಡ್ಡೆ ಹುಡುಗರಾಗಿದ್ದರು ಎನ್ನುವುದರ ಕೈ ಗನ್ನಡಿಯಾಗಿ, ತೆರೆದ ಪುಸ್ತಕದಂತೆ ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿರುವುದು ವಿಶೇಷ.
Rajendra Chenni ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವಂತಹ ಪುಸ್ತಕ ಇದಾಗಿದೆ. ಹೆಚ್ಚು ಗಾಂಭೀರ್ಯತೆಯನ್ನು ಹೊಂದದ, ಲಘು ಹಾಸ್ಯ, ಹಾಗೂ ಸರಾಗವಾಗಿ ಓದಿಸಿಕೊಳ್ಳುವ ಒಳ್ಳೆಯ ಪುಟ್ಟ ಪುಸ್ತಕ ಇದಾಗಿದೆ.. ಸಾಧ್ಯವಾದರೆ ಒಮ್ಮೆ ಈ ಪುಸ್ತಕ ಓದಿ…