ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ನಿಂದಾಗಿ ಬಡವರ್ಗ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಗಳನ್ನು ಮೂರು ವಾರಗಳಲ್ಲಿ ಆರಂಭಿಸುವಂತೆ ಗಡುವು ನೀಡಿದೆ.
ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಜನರ ಆಹಾರ ಭದ್ರತೆಯನ್ನು ನಿಗದಿಪಡಿಸಬೇಕು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮುದಾಯಗಳನ್ನು ಸ್ಥಾಪಿಸಿ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ದೊರೆಯುವಂತೆ ಮಾಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನುನ್ ಧವನ್, ಇಶಾನ್ ಧವನ್ ಮತ್ತು ಕುಂಜನಾ ಸಿಂಗ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಾದ-ವಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರಗಳು ಮತ್ತು ಹೇಳಿಕೆಗಳನ್ನು ಗಮನಿಸಿದರೆ ಸಲಹೆಗಳನ್ನು ಕಲೆಹಾಕುವ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
“ಹಸಿವು ಮತ್ತು ಅಪೌಷ್ಠಿಕತೆ ಎರಡು ಭಿನ್ನ ವಿಚಾರಗಳು. ಈ ಎರಡನ್ನು ಮಿಶ್ರಣ ಮಾಡಬೇಡಿ. ಅಪೌಷ್ಟಿಕತೆಯ ಬಗ್ಗೆ ಬಂದಿರುವ ಅಂತರಾಷ್ಟ್ರೀಯ ಸೂಚ್ಯಂಕಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಉದ್ದೇಶ ಇರುವುದು ದೇಶದಲ್ಲಿ ಹಸಿವು ಇಲ್ಲದಂತೆ ಮಾಡುವುದು” ಎಂದು ನ್ಯಾಯಪೀಠ ಹೇಳಿದೆ.
ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು ಇದಕ್ಕೆ ರಾಜ್ಯಗಳು ಸಹಕರಿಸಬೇಕು. ರಾಜ್ಯ ಸರ್ಕಾರಗಳಿಗೆ ಏನಾದರೂ ಆಕ್ಷೇಪ ಇದ್ದರೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಲ್ಲಾ ರಾಜ್ಯಗಳು ಕೇಂದ್ರದ ಜೊತೆಗೆ ಸಹಕರಿಸಬೇಕು ಎಂದು ಕೋರ್ಟ್ ತಿಳಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಈ ಸಮಯದಲ್ಲಿ ಪೀಠ ಸೂಚಿಸಿದೆ.
‘ಹಸಿವು ತಡೆಗೆ ನಾವು ಮುಂದಾದರೆ ಯಾವುದೇ ಸಂವಿಧಾನ, ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯ ಬೇಡ ಎನ್ನುವುದಿಲ್ಲ. ಈಗಾಗಲೇ ವಿಳಂಬವಾಗಿದೆ. ವಿಚಾರಣೆಯನ್ನು ಪದೇಪದೇ ಮುಂದೂಡುವುದರಿಂದ ಪ್ರಯೋಜನ ಇಲ್ಲ. ರಾಜ್ಯ ಸರ್ಕಾರಗಳ ಜೊತೆಗೆ ದಯವಿಟ್ಟು ಚರ್ಚಿಸಿ ಯೋಜನೆಯನ್ನು ಅಭಿವೃದ್ಧಿಪಡಿಸಿ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.