Wednesday, August 5, 2026
Wednesday, August 5, 2026
Home Blog Page 76

ಜೂನ್ 14. ದಾವಣಗೆರೆಯಲ್ಲಿ ಬ್ರಾಹ್ಮಣ ಸಮುದಾಯದ ಪದವೀಧರರಿಗೆ “ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ” ಕಾರ್ಯಕ್ರಮ

0

ದಿನಾಂಕ 14.06.2026 ನೇ ಭಾನುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಬ್ರಾಹ್ಮಣ ಸಮುದಾಯದ ಪದವಿ ಅಧ್ಯಯನ ಮಾಡುತ್ತಿರುವ ಹಾಗೂ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ “ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇದೆ” ಎಂಬ ವಿಷಯ ಕುರಿತು ಹತ್ತು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಂದು ಕಾರ್ಯಾಗಾರವನ್ನು ಉಚಿತವಾಗಿ ದಾವಣಗೆರೆ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದು, ಸಮುದಾಯದ ವಿದ್ಯಾರ್ಥಿಗಳು ನಿಖರವಾದ ಮಾಹಿತಿ ಪಡೆದುಕೊಳ್ಳುವ ಮೂಲಕ ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಕರೆಮಾಡಿ 10/06/2026 ರಒಳಗೆ ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
‘ಧನ್ಯವಾದಗಳೊಂದಿಗೆ’

ಸಂಯೋಜಕರು: ಎಲ್. ರಾಮಚಂದ್ರ ರಾವ್.

ಹೆಚ್ಚಿನ ಮಾಹಿತಿ ಮತ್ತು ನೊಂದಾಯಿಸಿಕೊಳ್ಳಲು ಈ ಮೊಬೈಲ್ ಸಂಖ್ಯೆಸಂಪರ್ಕಿಸಿ –
9620900275
9845753684.

S.N. Channabasappa ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ ಅವರ ನಾಯಕತ್ವದಲ್ಲಿ ರಾಜ್ಯ ಪ್ರಗತಿ ಪಥದಲ್ಲಿ ಮುನ್ನಡೆಯಲಿ- ಶಾಸಕ ಎಸ್.ಎನ್.ಚನ್ನಬಸಪ್ಪ

0

S.N. Channabasappa ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಜಿ. ಪರಮೇಶ್ವರ್ ಅವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸಭೆಯ ನಿಮಿತ್ತ ನಿನ್ನೆ ಸಂಜೆ ಬೆಂಗಳೂರಿನ ವಿಧಾನಸೌಧಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಾನ್ಯ ಶಾಸಕರು ಗೌರವಾನ್ವಿತ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸಿದರು.

S.N. Channabasappa ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, “ನೂತನ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಸುದೀರ್ಘ ಸಾರ್ವಜನಿಕ ಮತ್ತು ರಾಜಕೀಯ ಅನುಭವದ ಸಾರಥ್ಯದಲ್ಲಿ, ಮುಂಬರುವ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯವು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಆಶಿಸುತ್ತೇನೆ. ಇದರೊಂದಿಗೆ, ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗ ನಗರದ ಜ್ವಲಂತ ಅಗತ್ಯತೆಗಳು ಹಾಗೂ ನಾಡಿನ ಸಮಸ್ತ ನಾಗರಿಕರ ಸರ್ವತೋಮುಖ ಕಲ್ಯಾಣಕ್ಕಾಗಿ, ಯಾವುದೇ ತಾರತಮ್ಯವಿಲ್ಲದ ಸಮಾನತೆಯ ಮತ್ತು ಪಾರದರ್ಶಕ ಶುದ್ಧ ಆಡಳಿತ ತತ್ತ್ವಗಳ ಅಡಿಯಲ್ಲಿ ತಾವೊಂದು ಹೊಸ ಭರವಸೆಯ ಮುನ್ನುಡಿ ಬರೆಯುವಿರೆಂದು ಬಯಸುತ್ತೇನೆ,” ಎಂದು ತಿಳಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

K.S. Eshwarappa ಮಲೆನಾಡು ಇತಿಹಾಸ ಸಂಶೋಧನೆ & ಅಧ್ಯಯನ ವೇದಿಕೆ ನೋಡಲ್ ಸಂಸ್ಥೆಯ ಸ್ವರೂಪ ಪಡೆಯಲಿ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

0

K.S. Eshwarappa ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀಯುತ ಕೆ. ಎಸ್. ಈಶ್ವರಪ್ಪನವರನ್ನು ಭೇಟಿಯಾಗಿ ನಮ್ಮ ಇತಿಹಾಸ ವೇದಿಕೆಯ ಕಾರ್ಯಗಳನ್ನು ತಿಳಿಸಿದ್ದು ಅದನ್ನು ಆಲಿಸಿದ ಅವರು ಹರ್ಷಿತರಾಗಿ ನಮ್ಮ‌ಮುಂದಿನ ಎಲ್ಲಾ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಿಗೆ ಎಲ್ಲಾ ರೀತಿಯ ಬೆಂಬಲ ಹಾಗೂ ಅಗತ್ಯ ಸಹಾಯಗಳನ್ನು ನೀಡುವುದಾಗಿ ಭರವಸೆಯನ್ನು ನೀಡುವುದರ ಜೊತೆಗೆ ನಮ್ಮ ವೇದಿಕೆಗೆ ಅಗತ್ಯವಾದ ಧನಸಹಾಯಕ್ಕಾಗಿ (CSR Fund) ಸಂಬಂಧಪಟ್ಟ ಅಧಿಕಾರಿಯವರನ್ನುಸ್ಥಳದಲ್ಲೇ ಕರೆಸಿ ಭೇಟಿ ಮಾಡಿಸಿ ಧನಸಹಾಯದ ಭರವಸೆಯೂ ಸಹ ದೊರಕಿದ್ದು ಜೊತೆಗೆ ವೇದಿಕೆಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಲು ಸರ್ಕಾರದ ವತಿಯಿಂದ ಆಗಬೇಕಾದ ಕೆಲಸ ಮಾಡಲು ಅಗತ್ಯವಿರುವ ಅಧಿಕಾರಿಯೊಂದಿಗೂ ಸಹ ದೂರವಾಣಿಯಲ್ಲಿ ಮಾತನಾಡಿಸಿದ್ದು ಅತಿ ಶೀಘ್ರದಲ್ಲಿ ವೇದಿಕೆಯು ನೋಡಲ್ ಸಂಸ್ಥೆಯಾಗಿ ಅನುಮೋದಿಸಲಿದೆ.

ಇದಕ್ಕಾಗಿ ಎಲ್ಲಾ ನೆರವು ನೀಡಿದ ಶ್ರೀಯುತ ಕೆ.ಎಸ್.‌ಈಶ್ವರಪ್ಪನವರಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸಲಾಯಿತು. ಭೇಟಿಯ ಸಂಧರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಡಾ. ಎಸ್.ಜಿ ಸಾಮಕ್, ಶ್ರೀಯುತ ಮಹಾದೇವಸ್ವಾಮಿ, ಶ್ರೀಯುತ ಎಸ್.ಎಸ್.ವಾಗೀಶ್, ಶ್ರೀಯುತ ರಾಮ್ ಗೋಪಾಲ್, ಶ್ರೀಯುತ ಆದಿತ್ಯ ಪ್ರಸಾದ್ ರವರು ಜೊತೆಗೆ ಇದ್ದು ಸಹಕರಿಸಿದರು. ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ದಿಲೀಪ್ ನಾಡಿಗ್
ಕಾರ್ಯದರ್ಶಿ
ಮ.ಇ.ಸಂ.ಮತ್ತು ‌ಅ ವೇದಿಕೆ.

DK Shivakumar ಹಿಂದಿನ ಹೆಜ್ಜೆಯನ್ನು ಮರೆತವ, ಮುಂದಿನ ಹೆಜ್ಜೆ ಇಡಲಾರ” ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ನೂತನ ಸೀಎಂ ಡಿ.ಕೆ.ಶಿವಕುಮಾರ್

0

DK Shivakumar ಅಧಿಕಾರದ ಎರಡು ವರ್ಷಗಳಲ್ಲಿ ರಾಜ್ಯದ ಜನರಿಗೆ ಒಳಿತು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಇಂದು ಸಂಜೆ 4.05 ಕ್ಕೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಶುಭಸಂದರ್ಭಕ್ಕೆ ಎಲ್ಲ ಗಣ್ಯರು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. “ಹಿಂದಿನ ಹೆಜ್ಜೆಯನ್ನು ಮರೆತವನು, ಮುಂದಿನ ಹೆಜ್ಜೆಯನ್ನು ಇಡಲಾರ” ಎಂಬ ಮಾತಿನಲ್ಲಿ ನಂಬಿಕೆಯಿರಿಸಿದ್ದೇನೆ. ಇಂದು ಹೊಸ ದಿನದಂದು ಹೊಸ ಅವಕಾಶಗಳಿಗೆ ದಾರಿಮಾಡಿಕೊಡಲು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ರಾಜ್ಯದ ರೈತಬಳಗ ನಮ್ಮ ಬೆನ್ನುಲುಬು. ಮುಂದಿನ ದಿನಗಳಲ್ಲಿ ರೈತರೂ ಸೇರಿದಂತೆ ವಿವಿಧ ವರ್ಗದ ಜನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು , ಕಳೆದ ಆರು ತಿಂಗಳಿನಿಂದ ನನ್ನ ಸಿದ್ಧತೆ ನಡೆದಿದೆ. ಈ ದಿಸೆಯಲ್ಲಿ ಹೊಸ ಯುವ ಯುಗ ಸೃಷ್ಠಿಸುವ ಉದ್ದೇಶದಿಂದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ
ನನ್ನ ಮೇಲಿನ ಜನರಿಗೆ ಅಪಾರ ವಿಶ್ವಾಸವಿದೆ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ವೆ ಎಂಬುದರಲ್ಲಿ ವಿಶ್ವಾಸವಿರಿಸಿದ್ದೇನೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ ರಾಜಕೀಯ ಅನುಭವ ನೆರವಾಗಲಿದೆ. 1985ರಿಂದ ವಿಧಾನಸಭೇ ಚುನಾವಣೆಯಲ್ಲಿ ಸ್ಪರ್ಧಿಸಿ, ನಂತರ ಜಿಲ್ಲಾಪಂಚಾಯತ್, ಶಾಸಕರಾಗಿ, ವಿವಿಧ ಸಚಿವ ಸಂಪುಟದ ಭಾಗವಾಗಿ ಸೇವೆ ಸಲ್ಲಿಸಿದ್ದೇನೆ. ಸಣ್ಣ ವಯಸ್ಸಿನಲ್ಲಿ ಅಧಿಕಾರ ಕಂಡರೂ, ಬದುಕಿನ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ರಾಜಕೀಯ ತಂತ್ರಗಳ ಕಾರಣ ತಿಹಾರ್ ಜೈಲಿಗೆ ಹೋದರೂ, ನನ್ನ ಆತ್ಮವಿಶ್ವಾಸ ತಗ್ಗಲಿಲ್ಲ. ಇದೇ ಆತ್ಮವಿಶ್ವಾಸದಿಂದ ಜನರ ಸೇವೆಗೆ ಸಿದ್ಧವಾಗಿ ನಿಂತಿದ್ದೇನೆ ಎಂದರು.

DK Shivakumar ನಗರಗಳಿಗೆ ರೈತರ ವಲಸೆ ತಪ್ಪಿಸಬೇಕಿದೆ
ಮುಖ್ಯಮಂತ್ರಿಯ ಕುರ್ಚಿಯೆಂಬುದು, ಪಕ್ಷದ ಕಾರ್ಯಕರ್ತರು ಮತ್ತು ನಾಡಿನ ಜನತೆ ನೀಡಿರುವ ಅಧಿಕಾರ. ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ನನ್ನ ಮೇಲೆ ವಿಶ್ವಾಸವಿರಿಸಿ ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಿರಿಯರಾದ ಸಿದ್ದರಾಮಯ್ಯನವರು ಪಕ್ಷದ ವರಿಷ್ಠರ ಮಾತಿಗೆ ಒಪ್ಪಿಗೆ ಸೂಚಿಸಿ, ಮುಖ್ಯಮಂತ್ರಿ ಸ್ಥಾನವನ್ನು ಸಂತೋಷದಿಂದ ತ್ಯಜಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ರೈತರ ಬದುಕು , ನಗರದ ಜನರ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಉದ್ಯೋಗವನ್ನರಸಿ ಗ್ರಾಮಗಳಿಂದ ಜನರು ನಗರಗಳೆಡೆಗೆ ಮುಖ ಮಾಡುತ್ತಿದ್ದಾರೆ. ಉತ್ತಮ ಬದುಕು, ಮಕ್ಕಳಿಗೆ ಶಿಕ್ಷಣಕ್ಕಾಗಿ ಹಳ್ಳಿ ಬಿಟ್ಟು ನಗರಕ್ಕೆ ಬರುತ್ತಿದ್ದಾರೆ. ಈ ವಲಸೆಯನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಸರ್ಕಾರದ ಕೈಗೊಳ್ಳುವ ಯಾವುದೇ ಜನಪರ ನಿರ್ಧಾರ, ಕೇವಲ ನನ್ನ ನಿರ್ಧಾರವಾಗಿರುವುದಿಲ್ಲ, ಅದು ನನ್ನ ಇಡೀ ಸಚಿವಸಂಪುಟದ ಒಕ್ಕೊರಲಿನ ನಿರ್ಧಾರವಾಗಿರಲಿದೆ ಎಂದರು.

ದೂರ ಸಾಗಲು ಸಂಘಟಿತ ಪಯಣ ಮುಖ್ಯ
ಎಸ್ ಎಂ ಕೃಷ್ಣಾ ಅವರ ಅವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟಾಟಾ ಕಂಪನಿಯ ರತನ್ ಟಾಟಾ ಅವರು ಭೇಟಿಯಾದ ಸಂದರ್ಭದಲ್ಲಿ “ವೇಗವಾಗಿ ಸಾಗುವುದಕ್ಕಿಂತ ದೂರವಾಗಿ ಸಾಗಲು ಸಂಘಟಿತ ಪಯಣ ಮುಖ್ಯ” ಎಂದು ಕಿವಿಮಾತು ಹೇಳಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.

ರಾಜ್ಯವನ್ನು ಮುನ್ನಡೆಸುವಲ್ಲಿ ಮಾಧ್ಯಮದ ಸಹಕಾರವೂ ಅಗತ್ಯ
ಇಂದು ನನ್ನ ಜೊತೆಗೆ ಉಪಮುಖ್ಯಮಂತ್ರಿಗಳು ಮತ್ತು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, “ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ’ ವನ್ನಾಗಿಸುವ ಸಾರ್ಥಕತೆಯನ್ನು ಇಂದಿನ ಪ್ರಮಾಣವಚನ ನಿರೂಪಿಸಿದೆ. ವಿವಿಧ ವರ್ಗಗಳ ನಾಯಕರ ಬಲಿಷ್ಠವಾದ ನಾಯಕತ್ವದಲ್ಲಿ , ರಾಜ್ಯವನ್ನು ಮುನ್ನಡೆಸುವ ಈ ಪಯಣದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿರುವ ಮಾಧ್ಯಮ ರಂಗದ ಸಹಕಾರವೂ ಅವಶ್ಯ. ಸರ್ಕಾರದ ಸರಿತಪ್ಪುಗಳನ್ನು ಎತ್ತಿಹಿಡಿಯುವ ಜೊತೆಗೆ, ವಿಷಯಗಳ ಸತ್ಯಾಸತ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕೋರಿದರು.

ನನ್ನ ಬದುಕು ಜನಸೇವೆಗೆ ಮುಡಿಪಾಗಿದೆ
ಎಲ್ಲ ಜಾತಿವರ್ಗಗಳ ಸಹಭಾಗಿತ್ವದಲ್ಲಿ ರಾಜ್ಯವನ್ನು ಮುನ್ನಡೆಸಬೇಕಿದೆ. ನಾನು ಯಾವುದೇ ಜಾತಿಧರ್ಮದಲ್ಲಿ ಸಮಾನವಾಗಿದ್ದು, ಮಾನವೀಯತೆಯೇ ಪರಮ ಧರ್ಮ ಎಂಬುದರಲ್ಲಿ ನಂಬಿಕೆಯಿರಿಸಿದವನು. ಇದು ಜನರ ಅಧಿಕಾರ. ನನ್ನ ಜೀವನವನ್ನು ಜನರ ಸೇವೆಗೆ ಮುಡಿಪಾಗಿಡುವ ಸಂಕಲ್ಪವನ್ನು ಮಾಡಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದೇನೆ ಎಂದರು.

ರೈತರ ಸಮಸ್ಯೆಗಳಿಗೆ ಪರಿಹಾರ
ನೂತನ ಸಚಿವ ಸಂಪುಟದಲ್ಲಿ ಜನಪರ ತೀರ್ಮಾನಗಳನ್ನು ಕೈಗೊಳ್ಳುವ ಉದ್ದೇಶದಿಂದ, ಯುವಯುಗದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸಲಾಗಿದೆ. ನೀರಾವರಿ ಕುರಿತ ಸಮಸ್ಯೆಗಳ ಬಗ್ಗೆ ರೈತಮುಖಂಡರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ರೈತರು ಉದ್ಯೋಗಳನ್ನರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕಿದೆ. ಕೃಷಿ ಸಂಬಂಧಿತ ಪಶುಸಂಗೋಪನೆ, ಹೈನುಗಾರಿಕೆ, ತೋಟಗಾರಿಕೆಯಂತಹ ಹಲವು ಕ್ಷೇತ್ರಗಳ ಬಗ್ಗೆ ರೈತರಿಗೆ ಅನುಕೂಲ ಕಲ್ಪಿಸಲು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್ಲಾ ಹಂತದ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸಧ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ.

ಖಾಸಗಿ ಕಂಪನಿ ಮತ್ತು ಉದ್ಯೋಗಾಕಾಂಕ್ಷಿಗಳ ಸಂಪರ್ಕಿಸುವ ವ್ಯವಸ್ಥೆ
ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ, ಈಗಾಗಲೇ 56000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ ಭಾರತದ ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ ಎಂದರು.

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನ
ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ ತರಬೇತಿಯನ್ನೂ ನೀಡಿ, ಅಲ್ಲಿನ ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ನೀಡಲಾಗುವುದು. ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಈ ರಾಜ್ಯದ ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಗಳ ಉದ್ಯೋಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇಲ್ಲಿನ ಯುವಕರನ್ನು ಜಾಗತಿಕ ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಆಗಲಿದೆ ಎಂದು ವಿವರಿಸಿದರು.

ಹತ್ತು ಸಾವಿರ ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನ
ಹತ್ತು ಸಾವಿರ ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನಿಸಲಾಗಿದ್ದು,ಪ್ರತಿ ಪಂಚಾಯರಿಗೂ ಒಂದು ಯುವಕ ಸಂಘ ರಚಿಸಿ, ಸಂಘದಲ್ಲಿ ಕನಿಷ್ಠ 150 ರಿಂದ 200 ಜನರಿರುತ್ತಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕ ಸಂಘಗಳು ಕೈಗೊಳ್ಳುವುದಲ್ಲದೇ ನಾಯಕತ್ವ ಬೆಳವಣಿಗೆಗೆ, ಸಾಮಾಜಿಕ ಸಾಮರಸ್ಯ ಕಾಪಾಡಲು ಶ್ರಮಿಸಲಿವೆ ಎಂದರು. ಅವರ ಪ್ರತಿಭೆಗೂ ಇಲ್ಲಿ ಅವಕಾಶ ದೊರೆಯಲಿದೆ. ಭಾರತ ಜೋಡೋ ಯುವಕ ಸಂಘಗಳಿಗೆ ಸರ್ಕಾರ ತಲಾ ಹತ್ತು ಲಕ್ಷ ರೂ.ಗಳ ಅನುದಾನ ನೀಡಲಿದೆ ಎಂದು ವಿವರಿಸಿದರು.

2500 ಅಡಿ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ವಿನಾಯ್ತಿ
ಬೆಂಗಳೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಸರ್ಕಾರವು 2500 ಅಡಿ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ (OC) ಮತ್ತು ಸಿಸಿ (CC) ಪಡೆಯುವುದರಿಂದ ಒಂದು ಬಾರಿ ಮಾತ್ರ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯಾದ್ಯಂತ ‘ನನ್ನ ಇ ಖಾತಾ ನನ್ನ ಹಕ್ಕು ‘ ಅಭಿಯಾನ ವಿಸ್ತರಣೆ

ಬಿ ಖಾತೆಯನ್ನು ಎ ಖಾತೆಗೆ ಪರಿವರ್ತನೆ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿಗೆ ಸೂಕ್ತ ದಾಖಲೆ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದರು.

ನಗರದ ರಸ್ತೆಗಳನ್ನು ಉತ್ತಮಪಡಿಸಲು 2000 ಕೋಟಿ ರೂ.ಅನುದಾನ
ನಗರ ಮೂಲಸೌಕರ್ಯವನ್ನು ಉತ್ತಮಗೊಳಿಸಲು, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಜಿಬಿಎ, ಬಿಡಿಎ ವ್ಯಾಪ್ತಿ ಸೇರಿ ಕೇವಲ ರಸ್ತೆಗಳನ್ನು ಉತ್ತಮಪಡಿಸಲು 2000 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಯು.ಟಿ.ಖಾದರ್ ಅವರು ಉಪಸ್ಥಿತರಿದ್ದರು.

Tunga Reservoir ಅವಿರತ ಮಳೆ.ತುಂಗಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಸಾಧ್ಯತೆ. ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಮಾಹಿತಿ.

0

Tunga Reservoir ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಇದ್ದು, ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿರುತ್ತದೆ. ಆದ್ದರಿಂದ ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವ ಯಾವುದೇ ಚಟುವಟಿಕೆಗಳನ್ನು ಮಾಡದೇ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮುನ್ನೆಚ್ಚರಿಕೆ ನೀಡಿದ್ದಾರೆ.

Shivamogga Railway Station ಚಲಿಸುತ್ತಿದ್ದ ರೈಲುಬೋಗಿ ಹತ್ತುವ ಪ್ರಯತ್ನದಲ್ಲಿ ಆಯತಪ್ಪಿ ಬೀಳಲು ಬಿಡದೇ ಪ್ರಯಾಣಿಕರನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ.

0

Shivamogga Railway Station ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕನನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ.
ಶಿವಮೊಗ್ಗ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್ ಸಂಖ್ಯೆ1 ರಲ್ಲಿ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕನೊಬ್ಬ ಸಾಹಸ ಮಾಡಿದ್ದಾನೆ. ಈ ಸಂದರ್ಭದಲ್ಲಿ ರೈಲು ವೇಗವನ್ನು ಪಡೆದುಕೊಂಡಿದ್ದರಿಂದ ಆತನ ಸಮತೋಲನ ತಪ್ಪಿ ಕೆಳಗೆ ಬೀಳುವಂತಾಗಿದ್ದಾನೆ. ಅಪಾಯದಲ್ಲಿದ್ದ ಪ್ರಯಾಣಿಕನನ್ನು ತಕ್ಷಣವೇ ಗಮನಿಸಿದ ಆರ್‌ಪಿಎಫ್ ಇನ್ಸ್ ಪೆಕ್ಟರ್ ಬಿ.ಕೆ.ಪ್ರಕಾಶ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಯಾಣಿಕ ಇನ್ನೇನು ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಜಾಣ್ಮೆಯಿಂದ ಆತನನ್ನು ಸುರಕ್ಷಿತವಾಗಿ ಬೋಗಿಯ ಒಳಗೆ ತಳ್ಳಿದ್ದಾರೆ.

Shivamogga Railway Station ದೂರದಿಂದಲೇ ಓಡಿ ಬಂದು ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ಆರ್‌ಪಿಎಫ್ ಇನ್ಸ್ಪೆಕ್ಟರ್ ಬಿ.ಕೆ. ಪ್ರಕಾಶ್ ಅವರ ಈ ಕಾರ್ಯವು ರೈಲ್ವೆ ನಿಲ್ದಾಣದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜನಸಾಮಾನ್ಯರ ರಕ್ಷಣೆಗೆ ನಿಂತ ಇನ್ಸ್ಪೆಕ್ಟರ್ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

Department of Tribal Welfare, Karnataka ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪ್ರಕಟಣೆ.

0

Department of Tribal Welfare, Karnataka 2026-27ನೇ ಸಾಲಿಗೆ ಮೆಟ್ರಿಕ್ ನಂತರದ ಕೊರ್ಸ್ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖಾ ವೆಬ್‌ಸೈಟ್ www.twd.kar.nic.in ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಹಾರ್ಡ್ ಕಾಪಿಯನ್ನು ದಾಖಲಾತಿಗಳೊಂದಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯವರ ಕಚೇರಿಗೆ ಸಲ್ಲಿಸುವುದು.

Department of Tribal Welfare, Karnataka ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲೆಯ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ/ ಸಾಗರ/ ಸೊರಬ/ ಶಿಕಾರಿಪುರ/ ಭದ್ರಾವತಿ/ ಹೊಸನಗರ/ ತೀರ್ಥಹಳ್ಳಿ ಇವರುಗಳನ್ನು ಹಾಗೂ ದೂ.ಸಂ: 08182-200266 ಸಂಪರ್ಕಿಸಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

H.S. Sundaresh ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು- ಹೆಚ್.ಎಸ್.ಸುಂದರೇಶ್.

0

H.S. Sundaresh ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಗೋಪಾಲಗೌಡ ಬಡಾವಣೆಯ ‘ಎ’ ಬ್ಲಾಕ್ ನಿವಾಸಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಪುರಂದರ ಯೋಗ ಭವನ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಜಾಗೃತಿ ಮೂಡಿಸಲು ಪೂರಕವಾದ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಪ್ರತಿ ನಿತ್ಯ ಎಲ್ಲರೂ ಯೋಗಾಭ್ಯಾಸ ಮಾಡಬೇಕು. ಇದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.

ಬಡಾವಣೆಯ ಸಂಘದ ಅಧ್ಯಕ್ಷ ಎಸ್.ಸಿ.ರಾಮಚಂದ್ರ ಮಾತನಾಡಿ, ಬಡಾವಣೆಯಲ್ಲಿ ಸಂಘ ರಚಿಸಿದ ನಂತರ ಬಡಾವಣೆಯ ಜನರಿಗೆ ಅನುಕೂಲವಾಗುವಂತೆ ಆರೋಗ್ಯದ ದೃಷ್ಟಿಯಿಂದ ಈ ಪಾರ್ಕ್ ನಿರ್ವಹಣೆಯನ್ನು ವಹಿಸಿಕೊಂಡು ಶಿವಮೊಗ್ಗದ ಮಾದರಿ ಪಾರ್ಕ್ ಆಗಿ ಮಾರ್ಪಡಿಸಲಾಗಿದೆ. ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂದರು.

H.S. Sundaresh ಸುಬ್ಬಯ್ಯ ಆಸ್ಪತ್ರೆಯ ವೈದ್ಯ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪಿ.ರಾಜೇಶ್ ಮತ್ತು ವಿನಯ್ ರಕ್ತದಾನ ಮಾಡಿದರು. ಎನ್.ವಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ.ಹೆಚ್.ಎಸ್ ಸ್ವಾಗತಿಸಿದರು. ಪಂಚಾಕ್ಷರಯ್ಯ ಹೆಚ್ ವಂದನಾರ್ಪಣೆ ನಡೆಸಿಕೊಟ್ಟರು.

ಸಂಘದ ಗೌರವಾಧ್ಯಕ್ಷ ಆದಿಮೂರ್ತಿ, ಗಂಗಾಧರ್, ಎಂ.ಚAದ್ರಶೇಖರ್, ರವಿ, ತನು, ಗಣೇಶ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್, ಪಂಚಾಕ್ಷರಯ್ಯ ಹಿರೇಮಠ್, ನಾರಾಯಣ್, ಸತೀಶ್, ಗೀತೇಂದ್ರ, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

Information and Public Relations Department ಇಲಾಖೆಯ ಮಾಧ್ಯಮಪಟ್ಟಿಯಲ್ಲಿರುವ ಗ್ರಾಮೀಣ ಪತ್ರಕರ್ತರಿಗೆಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ಬಗ್ಗೆ ಪ್ರಕಟಣೆ.

0

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ಮಾಧ್ಯಮ ಸಂಸ್ಥೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಿದ್ದುಪಡಿ ಮಾಡಲಾದ ಹೊಸ ಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ “ಪೂರ್ಣಾವಧಿ/ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ/ ಸ್ಥಾನಿಕ ಸಂಪಾದಕರ/ ಮುಖ್ಯಸ್ಥರ ಶಿಫಾರಸ್ಸು ಪತ್ರ ಮತ್ತು ಸೇವಾ ಪ್ರಮಾಣ ಪತ್ರವನ್ನು ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ https://sevasindhu.karnataka.gov.in ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

2025ರ ಸೆಪ್ಟೆಂಬರ್ 12ರ ನಂತರ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಮತ್ತೊಮ್ಮೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಈ ಹಿಂದೆ ಇದ್ದ ಮಾರ್ಗಸೂಚಿಯಲ್ಲಿ 11 ತಿಂಗಳ ವೇತನ ಪತ್ರ ಸಲ್ಲಿಸಬೇಕು ಎಂಬ ಷರತ್ತನ್ನು ಸಡಿಲಿಸಿ. ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ, ಸ್ಥಾನಿಕ ಸಂಪಾದಕರ/ಮುಖ್ಯಸ್ಥರ ಶಿಫಾರಸ್ಸು ಪತ್ರವನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.

Information and Public Relations Department ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಸುದ್ದಿ ಸಂಗ್ರಹಿಸಲು ಅನುಕೂಲ ಕಲ್ಪಿಸಲು ಸರ್ಕಾರವು ವಾರ್ತಾ ಇಲಾಖೆಯ ಮೂಲಕ ಉಚಿತ ಬಸ್ ಪಾಸ್ ಗಳನ್ನು ನೀಡುತ್ತಿದೆ.

ರಾಜ್ಯದ ಎಲ್ಲಾ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಪೋರ್ಟಲ್ ಮೂಲಕ 2026 ರ ಜೂನ್ 20 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.

Shivamogga Traffic Police ಶಿವಮೊಗ್ಗದ ಬಿ.ಹೆಚ್.ರಸ್ತೆ ಸುಗಮ ಸಂಚಾರಕ್ಕೆ ಅಕ್ಕಪಕ್ಕದಲ್ಲಿನ ಗುಜರಿ ಕ್ರಾಸ್ ,ರಸ್ತೆಗಳಲ್ಲಿನ ಸಾಮಗ್ರಿ ತೆರವು

0

Shivamogga Traffic Police ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಿರುವ ಗುಜರಿ ಕ್ರಾಸ್ ಹಾಗೂ ಅದರ ಸುತ್ತಮುತ್ತಲಿನ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ಇಡಲಾಗಿದ್ದ ಕಬ್ಬಿಣದ ವಸ್ತುಗಳು, ಟೈರ್‌ಗಳು ಹಾಗೂ ಇತರೆ ಗುಜರಿ ಸಾಮಗ್ರಿಗಳನ್ನು ಸಂಚಾರಿ ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದರು.

Shivamogga Traffic Police ಈ ತೆರವುನ ಕ್ರಮದಿಂದ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಇದೇ ವೇಳೆ, ಗುಜರಿ ಅಂಗಡಿ ಮಾಲೀಕರಿಗೆ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಯಾವುದೇ ರೀತಿಯ ಗುಜರಿ ವಸ್ತುಗಳನ್ನು ಇಡಬಾರದು ಎಂದು ಸೂಚನೆ ನೀಡಿದರು.
ಮುಂದೆಯೂ ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಸಿಬ್ಬಂದಿ ತಿಳುವಳಿಕೆ ನೀಡಿದರು.