Monday, April 13, 2026
Monday, April 13, 2026
Home Blog Page 712

Ananadapura Police ಮಾಂಗಲ್ಯವನ್ನು ಪಾಲೀಶ್ ಮಾಡುತ್ತೇವೆಂದು ಮಹಿಳೆಯರಿಗೆ ವಂಚನೆಗೈದ ಗ್ಯಾಂಗ್ ಪೊಲೀಸ್ ವಶ

0

Ananadapura Police ಬೆಂಡೋಲೆ, ಸರ, ಮಾಂಗಲ್ಯವನ್ನು ಪಾಲಿಶ್ ಹಾಕಿಕೊಡುತ್ತೇವೆ ಎಂದು ಯಾಮಾರಿಸುವ ಗ್ಯಾಂಗ್‌ನ್ನು ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಹಿಡಿದಿದ್ದಾರೆ.

ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ ಕೆಲವು ತಿಂಗಳಗಳ ಹಿಂದೆ ಹೊಸಂತೆ ಗ್ರಾಮದ ಬಸಮ್ಮ ಎಂಬ ಮಹಿಳೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು..

ಈ ವೇಳೆ ಅವರನ್ನು ಮುಖಾಮುಖಿಯಾಗಿ ಭೇಟಿಯಾದ ವ್ಯಕ್ತಿಯೊಬ್ಬ ಓಲೆ ಹಳೆಯದಾಗಿದೆ. ಕೊಡು ಪಾಲಿಶ್ ಮಾಡಿಕೊಡುತ್ತೇನೆ ಎಂದಿದ್ದಾನೆ. ಪಾಲಿಶ್ ಮಾಡಿ ಕೊಡುವರೆಗೂ ಈ ಈ ಎರಡು ಬಂಗಾರದ ಪದಕಗಳನ್ನು ಇಟ್ಕೊಂಡಿರು ಎಂದಿದ್ದಾನೆ.
ಚಿನ್ನದ ಪದಕದ ಮಾತನ್ನು ನಂಬಿದ ಅಜ್ಜಿ ಓಲೆ ಬಿಚ್ಚಿ ಆತನ ಕೈಗೆ ಕೊಟ್ಟಿದ್ದಾಳೆ. ಆತ ಅದನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಆತ ವಾಪಸ್ ಬರದಿರುವುದನ್ನ ನೋಡಿ ಅಜ್ಜಿ ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಪದಕಗಳನ್ನು ಪರೀಕ್ಷೆ ಮಾಡಿಸಿದ್ದಾಳೆ. ಆಗ ಅವಳಿಗೆ ಆಘಾತ ಎದುರಾಗಿತ್ತು.

Ananadapura Police ದಾರಿಹೋಕ ಕೊಟ್ಟ ಪದಕ ನಕಲಿಯಾಗಿತ್ತು. ಹೀಗಾಗಿ ಬಸಮ್ಮ ಆನಂದಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಶಿಕಾರಿಪುರ ಗ್ರಾಮದ ಕೃಷ್ಣಪ್ಪ (65) ಹಾಗೂ ವೀರೇಶ್ (32) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಅಜ್ಜಿ ಓಲೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Kota Srinivasa Pujari ಸರ್ಕಾರವು ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿ & ಪ್ರಕರಣವನ್ನ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು- ಕೋಟಾ ಶ್ರೀನಿವಾಸ ಪೂಜಾರಿ

0

Kota Srinivasa Pujari ಸರ್ಕಾರಿ ಅಧಿಕಾರಿ ಚಂದ್ರಶೇಖರ್ ಮನೆಗೆ ಬುಧವಾರ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿ ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮಗಳ ಬಳಿ ಮಾತನಾಡಿದ ಅವರು, ಚಂದ್ರಶೇಖರ್ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ಪ್ರಕರಣವನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಹಿಸಬೇಕೆಂದು ಆಗ್ರಹ ಮಾಡಿದರು.

ಸಾರ್ವಜನಿಕ ಹಾಗು ಅವರ ಇಲಾಖೆಯ ಇತರೆ ಸಿಬ್ಬಂದಿಗಳ ಮಾಹಿತಿ ಪ್ರಕಾರ ಚಂದ್ರಶೇಖರ್ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂಪಾಯಿಯನ್ನು ಇಡಲಾಗಿತ್ತು ಇದರ ಪೈಕಿ 87 ಕೋಟಿ ರೂಪಾಯಿಗಳನ್ನು ಅನ್ಯ ಕಾರ್ಯ ಕಾರಣ ಹೇಳಿ ಇತರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

ಮೇಲಾಧಿಕಾರಿಗಳು ಅಕ್ರಮವಾಗಿ ಹೀಗೆ ಹಣ ವರ್ಗಾವಣೆ ಮಾಡಿಕೊಂಡು ನಿರ್ದೋಷಿಯಾದ ತನ್ನ ತಲೆಗೆ ಕಟ್ಟುತ್ತಿದ್ದಾರೆ ಎಂದು ಚಂದ್ರಶೇಖರ್ ಡೆತ್ ನೋಟಲ್ಲಿ ಬರೆದಿಟ್ಟಿದ್ದಾರೆ ಎಂದರು.
ಅವರ ಕುಟುಂಬವನ್ನು ಭೇಟಿ ಮಾಡಿದಾಗ ನನ್ನ ಪತಿ ಪ್ರಮಾಣಿಕರು ಯಾವುದೇ ಅಕ್ರಮ ಮಾಡಿಲ್ಲ. ನಾನು ಯಾವುದೋ ಒಂದು ಕಡೆ ದಿನಗೂಲಿ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಚಂದ್ರಶೇಖರ್ ಪತ್ನಿ ತಿಳಿಸಿದ್ದಾರೆ ಮಕ್ಕಳು ಸಾಕುವುದು ಕುಟುಂಬ ನಿರ್ವಹಣೆ ನನಗೆ ಕಷ್ಟವಾಗಿದೆ ಎಂದು ಗೋಗರೆಯುತ್ತಿದ್ದಾರೆ.

Kota Srinivasa Pujari ಪರಿಶಿಷ್ಟ ಪಂಗಡದ ಇಲಾಖೆಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟಲ್ಲಿ ಇಲಾಖೆಯ ಅಕ್ರಮ ಹಣ ವರಗಾಗವಣೆಯಲ್ಲಿ ಇಲಾಖೆ ಸಚಿವ ನಾಗೇಂದ್ರ ರವರ ಕೈವಾಡ ಇದೆ ಎಂದು ಹಾಗು ಇಲಾಖೆಯ ಮೂವರು ಅಧಿಕಾರಿಗಳು ಶಾಮೀಲಾಗಿರುವುದರ ಬಗ್ಗೆ ಹೇಳಲಾಗಿದೆ ಇದೆಲ್ಲವೂ ಕಣ್ಣ ಮುಂದೆ ಇರುವಾಗ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ತಕ್ಷಣ ಸಚಿವರ ರಾಜಿನಾಮೆ ಪಡೆಯಬೇಕಿತ್ತು ಎಂದು ಹೇಳಿದರು.

Mamata Banerjee ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಮಮತಾ ಬ್ಯಾನರ್ಜಿ ಟಾಂಗ್

0

Mamata Banerjee ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ’ ಎಂಬ ಪ್ರಧಾನಿ ಮೋದಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇವರುಗಳು ರಾಜಕೀಯ ಮಾಡಬಾರದು ಮತ್ತು ಗಲಭೆಗಳನ್ನು ಪ್ರಚೋದಿಸಬಾರದು, ನಾವು ದೇವಾಲಯ ಕಟ್ಟಿಸಿ ಕೊಡುತ್ತೇವೆ ಅಲ್ಲಿರಬೇಕು ಎಂದು ಪ್ರಧಾನಿ ಮೋದಿಗೆ ಟಾಂಗ್‌ ನೀಡಿದ್ದಾರೆ.

ಕೋಲ್ಕತ್ತಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮೋದಿಯವರು ತಮ್ಮನ್ನು ತಾವು ದೇವರೆಂದು ಪರಿಗಣಿಸಿದ್ದರೆ, ಅವರಿಗೆ ದೇವಾಲಯವನ್ನು ನಿರ್ಮಿಸಬೇಕು, ಅಲ್ಲಿ ಕುಳಿತುಕೊಳ್ಳಬೇಕು ಮತ್ತು ದೇಶವನ್ನು ತೊಂದರೆಗೊಳಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ದೇವರುಗಳ ದೇವರು ಎಂದು ಒಬ್ಬರು ಹೇಳುತ್ತಾರೆ, ಮತ್ತೊಬ್ಬ ‘ಜಗನ್ನಾಥ ‘ ಮೋದಿಯ ಭಕ್ತ ಎಂದು ಹೇಳುತ್ತಾರೆ. ಅವರು ದೇವರಾಗಿದ್ದರೆ ಅವರು ರಾಜಕೀಯ ಮಾಡಬಾರದು, ಗಲಭೆಗಳನ್ನು ಪ್ರಚೋದಿಸಬಾರದು. ನಾವು ಅವರಿಗೆ ದೇವಸ್ಥಾನ ನಿರ್ಮಿಸುತ್ತೇವೆ ಮತ್ತು ಅಲ್ಲಿ ಅವರನ್ನು ಪೂಜಿಸಿ, ಪ್ರಸಾದ, ಹೂವುಗಳನ್ನು ಅರ್ಪಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂತಹ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ ಜಗನ್ನಾಥ “ಮೋದಿಯ ಭಕ್ತ” ಎಂದು ಹೇಳಿದ್ದರು. ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಂಬಿತ್ ಪಾತ್ರಾ ಕ್ಷಮೆ ಯಾಚಿಸಿದ್ದರು.

Mamata Banerjee ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಮತಾ, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಅನೇಕ ಪ್ರಧಾನಿಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ, ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು, ನಾನು ಮನಮೋಹನ್ ಸಿಂಗ್, ರಾಜೀವ್ ಗಾಂಧಿ, ನರಸಿಂಹರಾವ್, ದೇವೇಗೌಡರ ಜೊತೆ ಕೆಲಸ ಮಾಡಿದ್ದೇನೆ, ಆದರೆ ಮೋದಿಯಂತೆ ಯಾರನ್ನು ನೋಡಿಲ್ಲ, ಅವರಂತಹ ಪ್ರಧಾನಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Shivamogga Police ಅಪರಿಚಿತ ವ್ಯಕ್ತಿಯ ಶವ ಪತ್ತೆ: ಪೊಲೀಸ್ ಮಾಹಿತಿ

0

Shivamogga Police ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಸ್‍ ನಿಲ್ದಾಣದಲ್ಲಿ ಸುಮಾರು 40-45 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.

ಈ ಮೃತವ್ಯಕ್ತಿಯು 5.8 ಅಡಿ ಎತ್ತರವಿದ್ದು, ದುಂಡುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಮೃತನ ಎಡಗೈ ಮುಂಗೈನ ಒಳಭಾಗದಲ್ಲಿ ಮಂಜುಳಾ ಎಂಬ ಇಂಗ್ಲೀಷ್ ಪದಗಳ ಹಚ್ಚೆ ಗುರುತು ಮತ್ತು ಬಲಗೈನ ಮುಂಗೈ ಒಳಭಾಗದಲ್ಲಿ ತಾಯಿ, ತಂಗಿ ಎಂಬ ಪದದ ಹಚ್ಚೆ ಗುರುತು ಹಾಗೂ ರೇಣುಕಾದೇವಿ ದೇವರ ಚಿತ್ರದ ಹಚ್ಚೆ ಗುರುತು ಇರುತ್ತದೆ.

Shivamogga Police ಈತನ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ.
ಈ ಮೃತ ವ್ಯಕ್ತಿ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡ ಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ

Supreme Court ಮಧ್ಯಂತರ ಜಾಮೀನು: ಕೇಜ್ರಿವಾಲ್ ಮನವಿಗೆ ‘ಸುಪ್ರೀಂ’ ನಿರಾಕರಣೆ

0

Supreme Court ಅರವಿಂದ್ ಕೇಜ್ರಿವಾಲ್ ಜೂನ್ 2 ರಂದು ತಿಹಾರ್ ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಸಿದ್ಧರಾಗಿದ್ದಾರೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿತು, ಅರವಿಂದ್ ಕೇಜ್ರಿವಾಲ್ ಅವರಿಗೆ ನಿಯಮಿತ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಸ್ವಾತಂತ್ರ್ಯವನ್ನು ನೀಡಲಾಗಿರುವುದರಿಂದ, ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳಿದರು.

ಮೇ 28 ರಂದು, ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠವು ದೆಹಲಿ ಮುಖ್ಯಮಂತ್ರಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರ ಸಲ್ಲಿಕೆಗಳನ್ನು ಗಮನಿಸಿತು.

Supreme Court ಭಾರತದ ಮುಖ್ಯ ನ್ಯಾಯಾಧೀಶರು ಪಟ್ಟಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಅವರು ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಲು ತಮ್ಮ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ ವಿಸ್ತರಿಸಲು ಕೋರಿದ್ದಾರೆ; ಅವರ “ಹಠಾತ್ ವಿವರಿಸಲಾಗದ ತೂಕ ನಷ್ಟ ಮತ್ತು ಹೆಚ್ಚಿನ ಕೀಟೋನ್ ಮಟ್ಟಗಳು ಗಂಭೀರವಾಗಿದ್ದು, ಇವು ಹೃದಯದ ಕಾಯಿಲೆಗಳು ಮತ್ತು ಕ್ಯಾನ್ಸರ್‌ಗೆ ಕೂಡ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಮೇ 26ರಂದು ಸಲ್ಲಿಸಿದ ಹೊಸ ಮನವಿಯಲ್ಲಿ, ಜೈಲಿಗೆ ಮರಳಲು ನಿಗದಿತ ದಿನಾಂಕವಾದ ಜೂನ್ 2ರ ಬದಲಿಗೆ ಜೂನ್ 9 ರಂದು ಜೈಲು ಅಧಿಕಾರಿಗಳ ಮುಂದೆ ಶರಣಾಗುವುದಾಗಿ ಹೇಳಿದ್ದಾರೆ.

Acharya Tulsi National College of Commerce ಶಿವಮೊಗ್ಗದಲ್ಲಿ ಮುಟ್ಟಿನ ನೈರ್ಮಲ್ಯ ಜಾಗೃತಿ ದಿನಾಚರಣೆ

0

Acharya Tulsi National College of Commerce ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮವನ್ನು ಡಾ ಮೈಥಿಲಿ ಪೂರ್ಣಾನಂದ ಬಿ.ಎಮ್.ಎಸ್. ಎಮ್.ಡಿ ಭಾರತಿ ಚಿಕಿತ್ಸಾಲಯ ವಿನೋಬನಗರ ಶಿವಮೊಗ್ಗ ಇವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ್ದರು
Acharya Tulsi National College of Commerce ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಗಂಗೋತ್ರಿ ನರ್ಸಿಂಗ್ ಹೋಂನ ಮುಖ್ಯಸ್ಥೆ ಶ್ರೀಮತಿ ಉಷಾ ಉತ್ತಪ್ಪ, ಪ್ರೊ.ಮಮತ ಪಿ.ಆರ್ ಆರ್ಚಾಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ, ಪ್ರೊ ಕೆ.ಎಮ್ ನಾಗರಾಜು ಎನ್.ಎಸ್.ಎಸ್. ವಿಭಾಗದ ಸಂಚಾಲಕ, ಪ್ರೊ ಎಸ್ ಜಗದೀಶ್ ಮುಖ್ಯಸ್ಥರು ವಾಣಿಜ್ಯ ವಿಭಾಗ, ಪ್ರೊ ಮಂಜುನಾಥ್ ಎನ್ ಮುಖ್ಯಸ್ಥರು ನಿರ್ವಹಣಾ ವಿಭಾಗ, ಶ್ರೀಮತಿ ಲಲಿತಾ ಕೆ.ಎಮ್ ಸಂಚಾಲಕರು ಸ್ಪಂದನ ಸಬಲೀಕರಣ ಘಟಕ ಹಾಗೂ ಕುಮಾರಿ ರಶ್ಮಿ.ಟಿ ಸ್ಪಂದನ ಸಬಲೀಕರಣ ಘಟಕ ಇವರುಗಳು ಭಾಗವಹಿಸಿದ್ದರು.

Social Welfare Department ಪತಿ ಆತ್ಮಹತ್ಯೆ ಸಿಐಡಿ ಮೂಲಕ ತನಿಖೆ ನಡೆಸಿ, ನ್ಯಾಯ ಹೊರಬರಲಿ – ಮೃತ ಚಂದ್ರಶೇಖರ್ ಪತ್ನಿ ಕವಿತಾ ಆಗ್ರಹ

0

Department of Social Welfare ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ತುಂಬಾ ಪ್ರಾಮಾಣಿಕರು. ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ, ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಚಂದ್ರಶೇಖರನ್ ಪತ್ನಿ ಕವಿತ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವೆಂಕಟಗಿರಿ ದಳವಾಯಿ ಅವರು ಚಂದ್ರಶೇಖರನ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು
ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಇಲಾಖೆಯಲ್ಲಿ ತುಂಬಾ ಪ್ರಾಮಾಣಿಕರು. ಅವರು ಯಾವುದೇ ಹಣ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಸರ್ಕಾರ ಈಗ ನಮ್ಮ ಪತಿ ಆತ್ಮಹತ್ಯೆಯ ವಿಚಾರವನ್ನು ಸಿಐಡಿಗೆ ವಹಿಸಿದೆ ಎಂದರು.
ನಮಗೆ ಸರ್ಕಾರದ ಮೇಲೆ ಪೂರ್ಣ ವಿಶ್ವಾಸವಿದೆ. ಸೂಕ್ತ ತನಿಖೆ ನಡೆಸಿ, ಸತ್ಯಾಂಶವನ್ನು ಹೊರ ತರಬೇಕು. ಕಚೇರಿಯಲ್ಲಿ ಒತ್ತಡ ಇತ್ತು ಎಂದು ನಮ್ಮ ಮನೆಯವರು ಎಂದೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅವರ ಕಚೇರಿಯ ಇತರ ಸಿಬ್ಬಂದಿ ಚಂದ್ರಶೇಖರನ್ ಅವರಿಗೆ ಒತ್ತಡ ಇದೆ ಎಂದು ಹೇಳುತ್ತಿದ್ದರು. ನಮ್ಮ ಮನೆಯವರು ಮೂರು ಜನ ಅಧಿಕಾರಿಗಳ ವಿರುದ್ದ ತಮ್ಮ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾರೆ. ಆ ಮೂರು ಜನರ ವಿರುದ್ದ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮ್ಮ ಪತಿ ಎಂಪಿಎಂನಲ್ಲಿ ಕೆಲಸ ಮಾಡುವಾಗ 5 ಸಾವಿರ ಜನರ ಅಕೌಂಟ್ ನೋಡಿಕೊಂಡವರು ಎಂದು ತಿಳಿಸಿದರು.
ಅವರು ಪ್ರಾಮಾಣಿಕರಲ್ಲದೇ ಹೋಗಿದ್ರೆ ಮತ್ತೆ ಅವರಿಗೆ ನಿಗಮದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಅಂದು ನಮ್ಮ ಸಂಬಂಧಿಕರೊಬ್ಬರು ಮಾಚೇನಹಳ್ಳಿಯಲ್ಲಿ ತೀರಿಕೊಂಡಿದ್ದರು. ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಅವರು ನೇಣಿಗೆ ಶರಣಾಗಿದ್ದರು. ಅವರು ಹಣ ಮಾಡುವವರಾಗಿದ್ರೆ, ನಾನು ಕೆಲಸಕ್ಕೆ ಹೋಗಬೇಕಾಗುರುತ್ತಿರಲಿಲ್ಲ. ನಾನು ಸಹ ಅಂಗವಿಕಲರ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮಗೆ ಇಬ್ಬರು ಮಕ್ಕಳು. ಅವರನ್ನು ಓದಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದರು.

Social Welfare Department ಸಚಿವ ನಾಗೇಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟಗಿರಿ ದಳವಾಯಿ ಅವರು ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಪತ್ನಿ ಕವಿತಾ ಹಾಗೂ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಚಂದ್ರಶೇಖರನ್ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.

K.B.Prasanna Kumar ಆತ್ಮಹತ್ಯೆ ಡೆತ್ ನೋಟ್ ಪ್ರಕಾರ ಸಚಿವರ ರಾಜಿನಾಮೆಯನ್ನ ಸರ್ಕಾರ ಪಡೆಯಲಿ – ಕೆ.ಬಿ.ಪ್ರಸನ್ನ ಕುಮಾರ್

0

K.B.Prasanna Kumar ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾತನಾಡುತ್ತಿಲ್ಲ. ಹಿಂದಿನ ಘಟನೆಗಳನ್ನೆಲ್ಲ ಅವರು ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ ಬಿ ಪ್ರಸನ್ನಕುಮಾರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಆಪಾದನೆ ಬಂದಾಗ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಅವರ ಮೌನಕ್ಕೆ ಜಾರಿದ್ದೇಕೆ? ವಾಲ್ಮೀಕಿ ಅಭಿವೃದ್ಧಿ ನಿಗಮ ನಿರ್ವಹಿಸುವ ಸಚಿವರ ರಾಜೀನಾಮೆ ಪಡೆಯಬೇಕು. ಅಧಿಕಾರದಲ್ಲಿ ಇದ್ದಾಗ ಒಂದು ರೀತಿ ಅಧಿಕಾರ ಇಲ್ಲದ ರೀತಿ ಸರಿಯಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಭಯವನ್ನುಂಟು ಮಾಡುವ ವಾತಾವರಣ ನಿರ್ಮಿಸಿದೆ. ಇದಕ್ಕೆ ಹತ್ತಾರು ಉದಾಹರಣೆಗಳಿವೆ. ಅದಕ್ಕೆ ಚಂದ್ರಶೇಖರ್ ಆತ್ಮಹತ್ಯೆ ಉದಾಹರಣೆಯಾಗಿದೆ. ಅವರ ಡೆತ್ ನೋಟ್‌ನಲ್ಲಿ ನಾನು ಹೇಡಿಯಲ್ಲ ಎಂದಿದ್ದಾರೆ. ಅಧೀಕ್ಷಕ ಮಟ್ಟದ ಅಧಿಕಾರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಇನ್ನು ಉಳಿದವರ ಪಾಡೇನು ಎಂದು ಪ್ರಶ್ನಿಸಿದರು.
ಜೀವನದಲ್ಲಿ ಹೇಳಿಕೊಳ್ಳಲು ನಿರ್ಮಾಣವಾಗದ ಸ್ಥಿತಿ ನಿರ್ಮಾಣವಾಗಿದೆ. ಸಾಯುವ ಪರಿಸ್ಥಿತಿಯಲ್ಲಿ ವ್ಯಕ್ತಿ ಯಾವ ಭಾವನೆಯಲ್ಲಿ ಮಾತನಾಡುತ್ತಾನೆ ಎನ್ನುವುದು ಪ್ರಮುಖವಾಗಿದೆ. ಆದರೆ ಸರ್ಕಾರ ಏನೂ ಆಗೇ ಇಲ್ಲ ಎಂಬAತೆ ವರ್ತಿಸುತ್ತಿದೆ ಎಂದ ಅವರು, ಕಾನೂನು ಸುವ್ಯವಸ್ಥೆ ಕುಸಿದಿದೆ. ಶಾಲೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕ್ಪ ಎನ್ನುವ ಸ್ಥಿತಿನಿರ್ಮಾಣವಾಗಿದೆ. ಗ್ಯಾಂಗ್ ವಾರ್ ನಡೆಯುತ್ತಿದೆ.. ಗಾಂಜಾ ಹೊಗೆ ಎಲ್ಲೆಡೆ ಆವರಿಸಿಕೊಂಡಿದೆ. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಇವತ್ತು ಶಿವಮೊಗ್ಗ ನಾಳೆ ಎಲ್ಲಡೆ ನಡೆಯಲಿದೆ ಎಂದರು.
K.B.Prasanna Kumar ಯಾವುದೇ ವಿಚಾರ ಬಂದರೆ ರಾಜಕೀಯವಾಗಿ ನೋಡಬಾರದು. ಸರ್ಕಾರ, ಯಾವುದನ್ನೂ ಕಾನೂನು ಪಾಲನೆಗೆ ಬಿಡುತ್ತಿಲ್ಲ. ಚಂದ್ರಶೇಖರ್ ಅವರು ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಯಾವ ಸಚಿವರು ಎಂದು ಅವರು ಹೇಳಿಲ್ಲ ಎನ್ನುತ್ತಿದ್ದಾರೆ. ನಿಗದಿತ ನಿಗಮಕ್ಕೆ ಸಚಿವರು ಇರ್ತಾರೆ, ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ, ನಗರಾಧ್ಯಕ್ಷ ದೀಪಕ್ ಸಿಂಗ್, ಸಿದ್ದಪ್ಪ, ರಮೇಶ್, ಕಾರ್ಯಾಧ್ಯಕ್ಷ ರಾಮಕೃಷ್ಣ, ಸಂಗಯ್ಯ, ವಕ್ತಾರ ನರಸಿಂಹ ಗಂಧದ ಮನೆ, ಮಂಜುನಾಥ್, ತ್ಯಾಗರಾಜ್, ದಯಾನಂದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

Klive Special Article ತೇನ್ ಸಿಂಗ್ ಜನ್ಮದಿನ ಕೆ ಲೈವ್ ವಿಶೇಷ

0

Klive Special Article ಮೌಂಟ್ ಎವರೆಸ್ಟ್ ಎಂದ ತಕ್ಷಣ ನೆನಪಿಗೆ ಬರುವ ಹೆಸರು ತೇನ್ಸಿಂಗ್

(ತೇನ್ಸಿಂಗ್, ಮೌಂಟ್ ಎವರೆಸ್ಟ್‌ ಶಿಖರ ತಲುಪಿದ ದಿನದ ಪ್ರಯುಕ್ತ ಪ್ರಸ್ತುತ ಲೇಖನ)

ಪರ್ವತಾರೋಹಣವೆಂದರೆ ನಮಗೆ ಮೊದಲು ನೆನಪಿಗೆ ಬರುವ ಹೆಸರು ತೇನ್ಸಿಂಗ್. ಎಡ್ಮಂಡ್ ಹಿಲರಿ ಅವರೊಂದಿಗೆ ವಿಶ್ವದಾದ್ಯಂತ ಎತ್ತರದ ‘ಎವರೆಸ್ಟ್’ ಶಿಖರವನ್ನು ತಲುಪಿದ ತೇನ್ಸಿಂಗ್ ನೋರ್ಗೆ ಅವರನ್ನು ಅರಿಯದ ಭಾರತೀಯನಿಲ್ಲ. ಈಶಾನ್ಯ ನೇಪಾಳದ ಖುಂಬು ಪ್ರದೇಶದ ತೆಂಗ್ಬೋಚೆ ಎಂಬಲ್ಲಿ ಶೇರ್ಪ ಪಂಗಡಕ್ಕೆ ಸೇರಿದ ಕುಟುಂಬವೊಂದರಲ್ಲಿ ತೇನ್ಸಿಂಗರು ಜನಿಸಿದರು. ಅವರ ತಂದೆ ತಾಯಂದಿರು ಟಿಬೆಟ್ನಿಂದ ನೇಪಾಳಕ್ಕೆ ವಲಸೆ ಬಂದವರು. ತೇನ್ಸಿಂಗರ ಹುಟ್ಟಿದ ವರ್ಷ 1914 ಎಂಬುದು ಒಂದು ಊಹೆ. ದಿನಾಂಕದ ಸ್ಪಷ್ಟತೆ ಇಲ್ಲ. ಪರ್ವತಾರೋಹಣ ಮಾಡುತ್ತಿದ್ದ ಸಾಹಸಿಗರಿಗೆ, ಕೂಲಿಯಾಗಿ ಹೊರೆಹೊತ್ತು ಹೊಟ್ಟೆ ಪಾಡು ಅರಸುತ್ತಿದ್ದ ಈ ಯುವಕನಿಗೆ ತನ್ನ ಹುಟ್ಟುಹಬ್ಬದ ವಿಷಯದಲ್ಲಿ ಆಸಕ್ತಿ ಹುಟ್ಟುವುದಾದರೂ ಎಂತು ಹೇಳಿ, ಆದರೆ ಈತ ತಾನು ಮಾಡಿದ ಕಾಯಕದಲ್ಲಿ ಕಂಡುಕೊಂಡ ನಿಷ್ಠೆ, ಶ್ರದ್ಧೆ ಮತ್ತು ನೀಡಿದ ಅಮೋಘ ಸೇವೆ ಒಂದು ದಿನ ಈತನೇ ವಿಶ್ವದ ತುತ್ತ ತುದಿಯನ್ನು ಮುಟ್ಟುವಂತೆ ಮಾಡಿತು. ಹಾಗಾಗಿ ತಾನು ಮೌಂಟ್ ಎವರೆಸ್ಟ್ ತುದಿಯನ್ನು ಮುಟ್ಟಿದ ದಿನವನ್ನೇ ತನ್ನ ಹುಟ್ಟುಹಬ್ಬದ ದಿನ ಎಂದು ಈತ ಪರಿಗಣಿಸಿದ. ಹೀಗಾಗಿ ಎಡ್ಮಂಡ್ ಹಿಲರಿ ಅವರೊಂದಿಗೆ ಎವರೆಸ್ಟ್ ಶಿಖರಾರೋಹಣ ಮಾಡಿದ ಮೇ 29 ರ ದಿನವೇ ತೇನ್ಸಿಂಗರ ಹುಟ್ಟುಹಬ್ಬದ ಆಚರಣೆಯ ದಿನವೆಂದು ಪ್ರಸಿದ್ಧ.

ಖುಂಬು ಎವರೆಸ್ಟ್ ಶಿಖರದ ಬಳಿ ಇದೆ. ಅದನ್ನು ಟಿಬೆಟಿಯನ್ನರು ಹಾಗೂ ಶೇರ್ಪಾಗಳು ‘ಚೋಮೋಲುಂಗ್ಮಾ’ ಎಂದು ಕರೆಯುತ್ತಾರೆ, ಅಂದರೆ ಟಿಬೆಟಿಯನ್ ಭಾಷೆಯಲ್ಲಿ ಭೂಮಿಯ ಮೇಲಿನ ತಾಯಿದೇವತೆ ಎಂದರ್ಥ. ನೇಪಾಳಿಗಳು ಇದನ್ನೇ ‘ಸಾಗರಮಾತಾ’ ಎಂದು ಕರೆಯುತ್ತಾರೆ. ಶೆರ್ಪಾಗಳು ಹಾಗೂ ಟಿಬೆಟಿಯನ್ನರ ಪಾರಂಪರಿಕ ಧರ್ಮದಂತೆ ತೇನ್ಸಿಂಗ್ ಬೌದ್ಧ ಧರ್ಮಕ್ಕೆ ಸೇರಿದವರು. ತೇನ್ಸಿಂಗರ ತಂದೆ ಘಾನ್ಗಲ ಮಿಂಗ್ಮ. ತಾಯಿ ದೊಕ್ಮೊ ಕಿಮ್ ಜೋಮ್. ಈ ದಂಪತಿಗಳಿಗೆ 13 ಮಕ್ಕಳು ಜನಿಸಿದರಂತೆ ಮತ್ತು ಹೀಗೆ ಜನಿಸಿದ ಬಹುತೇಕ ಮಕ್ಕಳು ಚಿಕ್ಕಂದಿನಲ್ಲೇ ತೀರಿಹೊದವಂತೆ. ತೇನ್ಸಿಂಗ್ ಈ ದಂಪತಿಗಳಿಗೆ ಜನಿಸಿದ ಹನ್ನೊಂದನೆಯ ಮಗು.

ತೇನ್ಸಿಂಗ್ ಮೊದಲು ಕಠಮಂಡುವಿಗೆ ಮತ್ತು ಡಾರ್ಜಿಲಿಂಗಿಗೆ ಎಂದು ಎರಡು ಬಾರಿ ಮನೆಬಿಟ್ಟು ಓಡಿ ಹೋದರು. ಒಮ್ಮೆ ಅವರನ್ನು ತೆಂಗ್ ಬೊಝೆ ಆಶ್ರಮಕ್ಕೆ ಭಿಕ್ಷುವಾಗಲು ಕಳುಹಿಸಲಾಯಿತು. ಆದರೆ ಅದು ತಮಗೆ ಒಗ್ಗಿದ್ದಲ್ಲವೆಂದು ತೇನ್ಸಿಂಗ್ ಅರಿತುಕೊಂಡರು. ಕಡೆಗೆ ತಮ್ಮ 19ನೆಯ ವಯಸ್ಸಿನಲ್ಲಿ ಭಾರತದ ಪಶ್ಚಿಮ ಬಂಗಾಳದ ಡಾರ್ಜಿಲಿಂಗಿಗೆ ಬಂದ ಅವರು ಟೂಸಾಂಗ್ ಭುಸ್ತಿಯಲ್ಲಿ ಶೆರ್ಪಾ ಸಮಾಜದಲ್ಲೊಬ್ಬರಾಗಿ ನೆಲೆನಿಂತರು.

1935ರ ವರ್ಷದಲ್ಲಿ ‘ಬ್ರಿಟಿಷ್ ಮೌಂಟ್ ಎವರೆಸ್ಟ್ ರೆಕನಸ್ಸೈನ್ಸ್ ಕಾರ್ಯಾಚರಣೆ’ ತಂಡದ ನಾಯಕರಾಗಿ ನೇಮಕಗೊಂಡ ಎರಿಕ್ ಶಿಪ್ಟನ್ ಅವರು ಮೌಂಟ್ ಎವರೆಸ್ಟ್ ಆರೋಹಣದ ಮೊದಲ ಅವಕಾಶವನ್ನು ತೇನ್ಸಿಂಗ್ ನೋರ್ಗೆ ಅವರಿಗೆ ನೀಡಿದರು. ಆ ವರ್ಷದಲ್ಲಿ ಇದ್ದ ಇಬ್ಬರು ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ 19 ವರ್ಷದ ತೇನ್ಸಿಂಗರಿಗೆ ಈ ಅವಕಾಶ ಒದಗಿ ಬಂತು. ಬ್ರಿಟಿಷ್ ಪರ್ವತಾರೋಹಣ ತಂಡದಲ್ಲಿದ್ದ ಅಂಗ್ ಥರ್ಕೆ ಎಂಬ ಸರ್ದಾರ್ ಒಬ್ಬರೊಂದಿಗೆ ಬೆಳೆದ ಆತ್ಮೀಯತೆ ತೇನ್ಸಿಂಗರಿಗೆ ಈ ಅವಕಾಶವನ್ನು ಒದಗಿಸಿತು. ಜೊತೆಗೆ ಎರಿಕ್ ಶಿಪ್ಟನ್ ಅವರಿಗೆ ತೇನ್ಸಿಂಗರ ಮುಗ್ದ ನಗುವೆಂದರೆ ತುಂಬಾ ಆಕರ್ಷಣೆ. ಹೀಗೆ ಪ್ರಾರಂಭವಾದ ಮೌಂಟ್ ಎವರೆಸ್ಟ್ ಯಾನ ಅವರನ್ನು ಅತ್ಯಂತ ಎತ್ತರಕ್ಕೆ ಕರೆದೊಯ್ಯುವಲ್ಲಿ ಪ್ರಥಮ ಪ್ರಮುಖ ಹೆಜ್ಜೆಯಾಯಿತು.

1930ರ ದಶಕದಲ್ಲಿ ಉತ್ತರದ ಟಿಬೆಟ್ ಮಾರ್ಗದಿಂದ ಎವರೆಸ್ಟ್ ಶಿಖರವನ್ನು ಏರಲು ಯತ್ನಿಸಿದ ಮೂರು ಅಧಿಕೃತ ಬ್ರಿಟಿಷ್ ಪ್ರಯತ್ನಗಳಲ್ಲಿ ತೇನ್ಸಿಂಗ್ ಹೊರೆಹೊತ್ತ ಆಳಾಗಿ ಕಾರ್ಯನಿರ್ವಹಿಸಿದರು. 1936ರ ವರ್ಷದಲ್ಲಿ ಅವರು ಜಾನ್ ಮೊರಿಸ್ ಅವರೊಂದಿಗೆ ಕಾರ್ಯನಿರ್ವಹಿಸಿದರು. ಎವರೆಸ್ಟ್ ಆರೋಹಣವೇ ಅಲ್ಲದೆ ಭಾರತದ ಉಪಖಂಡದಲ್ಲಿ ನಡೆದ ಇತರ ಆರೋಹಣಗಳಲ್ಲೂ ತೇನ್ಸಿಂಗ್ ಪಾತ್ರ ನಿರ್ವಹಿಸಿದ್ದರು.

1940ರ ವರ್ಷದಿಂದ ಮೊದಲ್ಗೊಂಡಂತೆ ತೇನ್ಸಿಂಗರು ಚಿತ್ರಾಲ್ ರಾಜಸಂಸ್ಥಾನದಲ್ಲಿ ಮೇಜರ್ ಚಾಪ್ಮನ್ ಎಂಬ ಅಧಿಕಾರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಆ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ್ದರಿಂದ ಅವರು 1947ರ ವರ್ಷದಲ್ಲಿ ಡಾರ್ಜಿಲಿಂಗಿಗೆ ಹಿಂದಿರುಗಿದರು. ಚಿತ್ರಾಲ್ ಪ್ರದೇಶದಲ್ಲಿದ್ದ ಸಂದರ್ಭದಲ್ಲಿ 1944ರ ವರ್ಷದಲ್ಲಿ ತೇನ್ಸಿಂಗರ ಪತ್ನಿ ನಿಧನರಾದರು. ಈ ದಂಪತಿಗಳಿಗಿದ್ದ ನಾಲ್ಕು ವರ್ಷದ ಒಂದೇ ಮಗು ಕೂಡಾ ಅಸುನೀಗಿತು. ಹೀಗಾಗಿ ಅವರು ತಮ್ಮ ಮೊದಲ ಪತ್ನಿಯ ಸಂಬಂಧಿ ಕನ್ಯೆಯನ್ನು ಮದುವೆ ಆದರು. ಮುಂದೆ ಈ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಹೀಗಾಗಿ ತಮ್ಮ ಎರಡನೇ ಪತ್ನಿ ಇರುವಾಗಲೇ ತಮ್ಮ ಶೆರ್ಪಾ ಸಂಪ್ರದಾಯದಲ್ಲಿರುವ ಸಹಮತದಂತೆ ಮತ್ತೊಂದು ಮದುವೆ ಆದರು. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಕ್ಕಳಾದವು.

Klive Special Article ಮುಂದೆ ತೇನ್ಸಿಂಗರು 1947ರಲ್ಲಿ ಎವರೆಸ್ಟ್ ಆರೋಹಣದ ಅಯಶಸ್ವಿ ಪ್ರಯತ್ನವೊಂದರಲ್ಲಿ ಭಾಗವಹಿಸಿದರು. ಕೆನಡಾ ಸಂಜಾತ ಆರ್ಲ್ ಡೆನ್ಮನ್, ಆಂಗೆ ದವ ಶೆರ್ಪ ಮತ್ತು ತೇನ್ಸಿಂಗ್ ಅವರು ಎವರೆಸ್ಟ್ ಆರೋಹಣಕ್ಕಾಗಿ ಅಂದು ಅಗತ್ಯವಿದ್ದ ಯಾವುದೇ ಪರವಾನಗಿಯನ್ನೂ ಪಡೆಯದೆಯೇ ಟಿಬೆಟ್ ಅನ್ನು ಅಕ್ರಮವಾಗಿ ಪ್ರವೇಶಿಸಿದರು. ಈ ತಂಡದ ಪ್ರಯತ್ನ 22 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿದ್ದಾಗ ಅಪ್ಪಳಿಸಿದ ಬಿರುಗಾಳಿಯ ದೆಸೆಯಿಂದಾಗಿ ಭಗ್ನಗೊಂಡಿತು. ಅಂತೂ ತಂಡದ ಮೂವರೂ ಜೀವಸಹಿತ ಹಿಂದಿರುಗಿದರು. 1947ರ ವರ್ಷದಲ್ಲಿ ಮತ್ತೊಂದು ಸ್ವಿಸ್ ಆರೋಹಣ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿರದಾರ್ ವಾಂಗ್ಡಿ ನೋರ್ಬು ಅವರು ಕೆಳಕ್ಕೆ ಉರುಳಿ ತೀವ್ರ ರೀತಿಯಲ್ಲಿ ಅಪಘಾತಗೊಳಗಾಗುತ್ತಿದ್ದ ಸಂದರ್ಭದಲ್ಲಿ ಅಪ್ರತಿಮ ಸಾಹಸ ಮೆರೆದು ಅವರ ಪ್ರಾಣ ಉಳಿಸಿದ ತೇನ್ಸಿಂಗರು ಮೊಟ್ಟ ಮೊದಲಬಾರಿಗೆ ಸಿರದಾರ್ ಆದರು. ತೇನ್ಸಿಂಗರನ್ನು ಒಳಗೊಂಡ ಈ ತಂಡ 22769 ಅಡಿ ಎತ್ತರದ ಕೇದಾರನಾಥ್ ಶಿಖರವನ್ನು ತಲುಪಿತು.

ತೇನ್ಸಿಂಗರು 1952ರಲ್ಲಿ ಎಡ್ವರ್ಡ್ ವಿಸ್ ಡ್ಯುನಾಂಟ್ ಮತ್ತು ಗ್ರೆಬ್ರಿಯಲ್ ಚವೆಲ್ಲಿ ನೇತೃತ್ವದ ಎರಡು ಸ್ವಿಸ್ ತಂಡಗಳ ಎವರೆಸ್ಟ್ ಆರೋಹಣ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. 1950 ಮತ್ತು 1951ರ ವರ್ಷಗಳಲ್ಲಿ ಬ್ರಿಟಿಷ್ ಮತ್ತು ಅಮೆರಿಕ ತಂಡಗಳು ನಡೆಸಿದ ಅಯಶಸ್ವಿ ಪ್ರಯತ್ನಗಳ ನಂತರದಲ್ಲಿ ದಕ್ಷಿಣ ನೇಪಾಳದ ಕಡೆಯಿಂದ ಮೌಂಟ್ ಎವರೆಸ್ಟ್ ಏರುವ ಗಂಭೀರ ಪ್ರಯತ್ನ ಇದಾಗಿತ್ತು. ಈ ಪ್ರಯತ್ನದಲ್ಲಿ ತೇನ್ಸಿಂಗ್ ಮತ್ತು ರೇಮಂಡ್ ಲಂಬರ್ಟ್ ಅವರು ಅದುವರೆವಿಗೂ ಅತ್ಯಧಿಕವಾದ 28115 ಅಡಿ ಎತ್ತರದ ಆರೋಹಣವನ್ನು ದಾಖಲಿಸಿದರು. ಈ ಆರೋಹಣದಲ್ಲಿ ತೇನ್ಸಿಂಗ್ ಅವರು ತಂಡದ ಪ್ರಮುಖ ಅಭ್ಯರ್ಥಿ ಎಂದು ಮೊತ್ತ ಮೊದಲಬಾರಿಗೆ ಗುರುತಿಸಲ್ಪಟ್ಟು ಸ್ವಿಸ್ ತಂಡದ ಆತ್ಮೀಯ ಗೆಳೆತನದ ಗೌರವಕ್ಕೆ ಪಾತ್ರಧಾರಿಯಾದರು. ಆ ವರ್ಷದ ಎರಡನೆಯ ಸ್ವಿಸ್ ಆರೋಹಣದ ಪ್ರಯತ್ನ ಪ್ರತೀಕೂಲ ಹವಾಮಾನದ ದೆಸೆಯಿಂದಾಗಿ 26,575 ಅಡಿ ಆರೋಹಣಕ್ಕೆ ಮೊಟಕುಗೊಂಡಿತು.

1953ರ ವರ್ಷದಲ್ಲಿ ತೇನ್ಸಿಂಗರು ಜಾನ್ ಹಂಟರ ನೇತೃತ್ವದ ಐತಿಹಾಸಿಕ ಎವರೆಸ್ಟ್ ಆರೋಹಣದಲ್ಲಿ ಭಾಗಿಯಾದರು. ಅದು ಜಾನ್ ಹಂಟರ ಏಳನೆಯ ಎವರೆಸ್ಟ್ ಆರೋಹಣ ಪ್ರಯತ್ನವಾಗಿದ್ದು ಎಡ್ಮಂಡ್ ಹಿಲೆರಿಯವರು ಆ ತಂಡದ ಸದಸ್ಯರಾಗಿದ್ದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಹಿಲೆರಿ ಅವರು ಹಿಮನದಿಯ ಕಂದಕವೊಂದರಲ್ಲಿ ಉರುಳುತ್ತಿದ್ದರು ಎನ್ನುವಂತ ಸಂದರ್ಭದಲ್ಲಿ, ತೇನ್ಸಿಂಗರು ಸಮಯೋಚಿತ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದಿಂದ ತಮ್ಮ ಮಂಜಿನ ಕೊಡಲಿಯನ್ನು ಉಪಯೋಗಿಸಿ ಹಗ್ಗವನ್ನು ಸುರಕ್ಷಿತವಾಗಿ ಹಿಡಿದುಕೊಂಡ ದೆಸೆಯಿಂದಾಗಿ ಹಿಲೆರಿ ಅವರು ಪ್ರಪಾತಕ್ಕೆ ಬಿದ್ದುಹೋಗುವ ಅಪಘಾತದಿಂದ ಪಾರಾದರು. ತೇನ್ಸಿಂಗರಿಗೆ ಇಲ್ಲಿಂದ ಕೃತಜ್ಞರಾದ ಹಿಲೆರಿಯವರು ತಮ್ಮ ಮುಂದಿನ ಏನೊಂದೂ ಆರೋಹಣದ ಪ್ರಯತ್ನಕ್ಕೂ ಅವರನ್ನೇ ಜೊತೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.

ಜಾನ್ ಹಂಟ್ ಅವರ ಈ ಕಾರ್ಯಾಚರಣೆಯು 400ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡಿದ್ದು ಅದರಲ್ಲಿ 362 ಹೊರೆಯಾಳುಗಳು ಮತ್ತು 20 ಶೆರ್ಪಾ ಮಾರ್ಗದರ್ಶಕರಿದ್ದರು. ಸಾಗಣೆಗೊಂಡಿದ್ದ ಒಟ್ಟು ಸಾಮಾನಿನ ತೂಕವೇ 10000 ಪೌಂಡುಗಳಷ್ಟಿತ್ತು. ಹೀಗಾಗಿ ಅದೊಂದು ಬೃಹತ್ ತಂಡದ ಪರಿಶ್ರಮವಾಗಿತ್ತು.

ಮಾರ್ಚ್ 1953ರಲ್ಲಿ ತನ್ನ ಪ್ರಾರಂಭಿಕ ಶಿಬಿರವನ್ನು (base camp) ಸ್ಥಾಪಿಸಿಕೊಂಡ ಈ ಆರೋಹಣ ತಂಡ ಸಾವಧಾನವಾಗಿ ಮುಂದುವರೆಯುತ್ತಾ 25900 ಅಡಿ ಎತ್ತರದಲ್ಲಿ ತನ್ನ ಪೂರ್ವಾಂತಿಮ ಶಿಬಿರವನ್ನು ಸ್ಥಾಪಿಸಿಕೊಂಡಿತು. ಮೇ 26ರ ದಿನಾಂಕದಂದು ತಂಡದ ಸದಸ್ಯರಾದ ಟಾಮ್ ಬೋರ್ಡಿಲೋನ್ ಹಾಗೂ ಚಾರ್ಲ್ಸ್ ಇವಾನ್ಸ್ ಅವರು ಆರೋಹಣವನ್ನು ಕೈಗೊಂಡು ದಕ್ಷಿಣ ಶೃಂಗವನ್ನು ಮುಟ್ಟಿ ಎವರೆಸ್ಟ್ ಶಿಖರದ ತುತ್ತ ತುದಿಗೆ 300 ಅಡಿ ಸಮೀಪಕ್ಕೆ ಕ್ರಮಿಸಿದ್ದರಾದರೂ ಇವಾನ್ಸ್ ಅವರ ಆಮ್ಲಜನಕ ವ್ಯವಸ್ಥೆ ವಿಫಲವಾದ್ದರಿಂದ ಹಿಂದಿರುಗಬೇಕಾಯಿತು. ನಂತರದಲ್ಲಿ ನಾಯಕ ಜಾನ್ ಹಂಟರು ತೇನ್ಸಿಂಗ್ ಮತ್ತು ಹಿಲೆರಿಯವರನ್ನು ಆರೋಹಣಕ್ಕೆ ಆದೇಶಿಸಿದರು.

ಆಂಗ್ ನ್ಯಿಮ, ಆಲ್ಫ್ರೆಡ್ ಗ್ರೆಗೊರಿ ಹಾಗೂ ಜಾರ್ಜ ಲೊವೆ ಈ ಮೂವರ ಬೆಂಬಲದೊಂದಿಗೆ ತೇನ್ಸಿಂಗ್ ಮತ್ತು ಹಿಲೆರಿ ಆರೋಹಣ ಸಾಹಸಕ್ಕೆ ಹೊರಟರು. ದಕ್ಷಿಣ ಶೃಂಗದಲ್ಲಿ ಸುರಿಯುತ್ತಿದ್ದ ಹಿಮ ಮತ್ತು ಬರದಿಂದ ಬೀಸುತ್ತಿದ್ದಗಾಳಿ ಇವರುಗಳನ್ನು ಎರಡು ದಿನಗಳ ಕಾಲ ಚಲನೆಯಿಲ್ಲದಂತೆ ನಿರ್ಬಂಧಿಸಿತ್ತು. ಮೇ 28ರ ದಿನದಂದು, ಮೇಲ್ಕಂಡ ಮೂವರು ಬೆಂಬಲಿಗರು ಪರ್ವತದಿಂದ ಕೆಳಗಿಳಿದು ಹೋದ ಹಾಗೆ, ಆರೋಹಣದತ್ತ ಸಾಗಿದ ತೇನ್ಸಿಂಗ್ ಮತ್ತು ಹಿಲೆರಿ ಮೇ 28ರ ದಿನದಂದು 27,900 ಅಡಿ ಎತ್ತರದಲ್ಲಿ ತಮ್ಮ ಒಂದು ಡೇರೆಯನ್ನು ಸ್ಥಾಪಿಸಿದರು. ಮಾರನೆಯ ದಿನ ಬೆಳಗಾಗುತ್ತಿದ್ದಂತೆ, ಹಿಲೆರಿ ಅವರು ಡೇರೆಯ ಹೊರಗಿಟ್ಟಿದ ಬೂಟುಗಳು ಪೂರ್ಣ ಹೆಪ್ಪುಗೊಂಡುಬಿಟ್ಟಿದ್ದವು.

ಪುನಃ ಬೂಟುಗಳನ್ನು ಉಪಯೋಗಿಸುವ ಸ್ಥಿತಿಗೆ ತಂದುಕೊಳ್ಳಲು ಎರಡು ಗಂಟೆಗಳು ಶ್ರಮಿಸಿದ ನಂತರದಲ್ಲಿ ತೇನ್ಸಿಂಗ್ ಮತ್ತು ಹಿಲೆರಿ ತಮ್ಮ ಹದಿನಾಲ್ಕು ಕೆ.ಜಿ.ತೂಕದ ಬೆನ್ನು ಮೂಟೆಗಳೊಡನೆ ಅಂತಿಮ ಘಟ್ಟದ ಆರೋಹಣದೆಡೆಗೆ ಕಾರ್ಯಪ್ರವೃತ್ತರಾದರು. ಈ ಅಂತಿಮ ಆರೋಹಣದಲ್ಲಿ ಅವರಿಗೆ 40 ಅಡಿ ಎತ್ತರದ ಒಂದು ಬಂಡೆ ಇರುವುದು ಅನುಭವಕ್ಕೆ ಬಂತು. ಮುಂದೆ ಈ ಬಂಡೆಯನ್ನು ‘ಹಿಲೆರಿ ಸ್ಟೆಪ್’ ಎಂದು ಹೆಸರಿಸಲಾಗಿದೆ. ಹಿಲೆರಿ ಅವರು ದಟ್ಟಣೆಯ ಹಿಮದಿಂದಾವೃತವಾಗಿದ್ದ ಈ ಬಂಡೆಯ ಗೋಡೆಯ ಮೇಲೆ ಹಿಮಗಡ್ಡೆಗಳ ನಡುವಿನಲ್ಲಿ ಪಾದ ಊರುವುದಕ್ಕೆ ಅವಕಾಶಗಳನ್ನು ಅರಸುತ್ತಾ ಸಾಗಿದಂತೆ, ತೇನ್ಸಿಂಗ್ ಅವರನ್ನು ಹಿಂಬಾಲಿಸಿದರು. ಈ ಬಂಡೆಯ ಎತ್ತರವನ್ನು ಅತ್ಯಂತ ಸಾಹಸದಿಂದ ಪೂರೈಸಿದ ಈ ಜೋಡಿಗೆ ಮುಂದಿನ ಭಾಗದ ಏರುವಿಕೆ ಕಡಿಮೆ ಕ್ಲಿಷ್ಟಕರ ಅನಿಸಿದ್ದು ಅಚ್ಚರಿಯೇನಲ್ಲ! ಹಿಲೆರಿ ಅವರ ಮಾತುಗಳಲ್ಲೇ ಹೇಳುವುದಾದರೆ “ಮುಂದೆ ಹೆಪ್ಪುಗಟ್ಟಿಕೊಂಡಿದ್ದ ಹಿಮಗಡ್ಡೆಗಳಿಗೆ ಕೆಲವು ಉಳಿಸ್ಪರ್ಶ ನೀಡುವುದರೊಂದಿಗೆ ನಾವು ತುದಿಯನ್ನೇರಿಬಿಟ್ಟಿದ್ದೆವು”. ಹೀಗೆ ಯಶಸ್ಸಿನ ಆರೋಹಣಗೈದ ಈ ಅಪ್ರತಿಮ ಜೋಡಿ 29028 ಅಡಿ ಅಥವ 8848 ಮೀಟರಿನ ವಿಶ್ವದ ಅತಿ ಎತ್ತರದ ತುದಿಯಾದ ಮೌಂಟ್ ಎವರೆಸ್ಟ್ ಶೃಂಗವನ್ನು ಮೇ 29, 1953ರ ದಿನದ ಬೆಳಿಗ್ಗೆ 11.40 ರ ಸಮಯದಲ್ಲಿ ಮುಟ್ಟಿದ್ದರು.

ವಿಶ್ವದೆತ್ತರದ ಈ ಎವರೆಸ್ಟ್ ಪರ್ವತದ ತುದಿಯಲ್ಲಿ ಹಿಲೆರಿ ಮತ್ತು ತೇನ್ಸಿಂಗ್ ಹದಿನೈದು ನಿಮಿಷಗಳನ್ನು ಕಳೆದರು. ತೇನ್ಸಿಂಗರು ತಮ್ಮ ಕೊಡಲಿಯನ್ನು ಹಿಡಿದುಕೊಂಡಿರುವ ಪ್ರಸಿದ್ಧ ಚಿತ್ರವನ್ನು ಹಿಲೆರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡರು. ಒಂದು ವರದಿಯ ಪ್ರಕಾರ ತೇನ್ಸಿಂಗ್ ಕ್ಯಾಮೆರಾವನ್ನೂ ಎಂದೂ ಉಪಯೋಗಿಸಲು ಕಲಿತಿಲ್ಲದಿದ್ದ ಕಾರಣದಿಂದ ಹಿಲೆರಿ ಅವರ ಚಿತ್ರ ಮೂಡಿಬರುವುದು ಸಾಧ್ಯವಾಗಲಿಲ್ಲ. ಆದರೆ ತೇನ್ಸಿಂಗರು ತಮ್ಮ ಆತ್ಮಚರಿತ್ರೆ ‘ಮ್ಯಾನ್ ಆಫ್ ಮೌಂಟ್ ಎವರೆಸ್ಟ್’ ಕೃತಿಯಲ್ಲಿ ತಾವು ಹಿಲೆರಿ ಅವರಿಗೆ “ನಾನು ನಿಮ್ಮ ಚಿತ್ರ ತೆಗೆಯುತ್ತೇನೆ ಎಂದಾಗ ಅವರು ಯಾವುದೋ ಕಾರಣದಿಂದ ಬೇಡವೆಂದು ತಲೆ ಆಡಿಸಿಬಿಟ್ಟರು, ಅವರಿಗೆ ಅದು ಬೇಕೆನಿಸಲಿಲ್ಲ” ಎಂದು ನುಡಿದಿದ್ದಾರೆ. ತಾವು ಮೇಲೇರಿದ್ದು ಸುಳ್ಳಲ್ಲವೆಂದು ನಿರೂಪಿಸುವ ಇನ್ನೂ ಹಲವಾರು ಚಿತ್ರಗಳನ್ನು ಮೇಲಿನಿಂದ ಕೆಳಮುಖವಾಗಿ ತೆಗೆದುಕೊಂಡರು. ಅಲ್ಲಿಂದ ಕೆಳಗಿಳಿಯುವುದು ಕೂಡಾ ಸುಲಭವಾಗಿರಲಿಲ್ಲ. ಸಡಿಲಗೊಂಡ ಹಿಮ ಹಾದಿಯನ್ನೆಲ್ಲಾ ಮುಚ್ಚಿಕೊಂಡುಬಿಟ್ಟು ಇವರು ಸರಿದುಹೋಗಿದ್ದ ದಾರಿ ಕಾಣದಂತಾಗಿದ್ದರಿಂದ ಮತ್ತೊಮ್ಮೆ ಸಾಹಸ ಮತ್ತು ಜಾಗರೂಕತೆಗಳಿಂದ ಕೂಡಿದ ಎಚ್ಚರವನ್ನು ಕಾಯ್ದುಕೊಳ್ಳಬೇಕಾಯಿತು. ಇವರು ಕೆಳಗಿಳಿಯುತ್ತಿದ್ದಂತೆ ಇವರು ಮೊದಲು ಕಂಡ ವ್ಯಕ್ತಿ ಇವರಿಗಾಗಿ ಬಿಸಿ ಬಿಸಿ ಸೂಪ್ ಅನ್ನು ಪ್ರೀತಿಯಿಂದ ಹೊತ್ತು ತಂದ ಲೋವೆ.

ಮುಂದೆ ತೇನ್ಸಿಂಗರು ಭಾರತ ಮತ್ತು ನೇಪಾಳಗಳಲ್ಲಿ ಪ್ರಶಂಸೆಯ ಸುರಿಮಳೆಯನ್ನೇ ಅನುಭವಿಸಿದರು. ಹಿಲೆರಿ ಮತ್ತು ಜಾನ್ ಹಂಟ್ ಅವರಿಗೆ ಎರಡನೇ ಎಲಿಜಬೆತ್ ಮಹಾರಾಣಿಯವರ ನೈಟ್ ಗೌರವ ದೊರಕಿತು. ತೇನ್ಸಿಂಗರಿಗೂ ಈ ಗೌರವವನ್ನು ಪ್ರಕಟಿಸಲಾಗಿತ್ತಾದಾರೂ, ಭಾರತೀಯ ಪ್ರಜೆಯನ್ನು ‘knighted’ ಎಂದೆಣಿಸುವುದಕ್ಕೆ ಭಾರತ ಸರ್ಕಾರಕ್ಕಿದ್ದ ಅಸಮ್ಮತಿಯ ಮನೋಧರ್ಮವನ್ನು ಗೌರವಿಸಿದ ಯುನೈಟೆಡ್ ಕಿಂಗ್ಡಂ ಅದಕ್ಕೆ ಬದಲಾಗಿ ತೇನ್ಸಿಂಗರಿಗೆ ಆರೋಹಣ ಕಾರ್ಯಾಚರಣೆಯಲ್ಲಿನ ಉತ್ಕೃಷ್ಟ ಪರಿಶ್ರಮಕ್ಕಾಗಿ ಜಾರ್ಜ್ ಪದಕವನ್ನು ನೀಡಿ ಗೌರವಿಸಿತು.

ತೇನ್ಸಿಂಗರ ಮಾತಿನಲ್ಲೇ ಅವರ ಬದುಕನ್ನು ಕುರಿತು ಕೇಳುವುದಾದರೆ “ಇದೊಂದು ಸುದೀರ್ಘ ಪಯಣ! ಪರ್ವತಗಳಲ್ಲಿನ ಕೂಲಿಯಾಗಿ ಎಷ್ಟೆಷ್ಟೋ ಮಣಗಳ ಹೊರೆಹೊತ್ತವನಾಗಿ ಮೊದಲ್ಗೊಂಡು, ಸಮತಟ್ಟಾದ ನೆಲದಲ್ಲಿ ನಿಂತು ಅಚ್ಚುಕಟ್ಟಾದ ಕೋಟನ್ನು ಧರಿಸಿ ಅದರ ಮೇಲೆ ಸಾಲು ಸಾಲಾದ ಪದಕಗಳ ಹಾರವನ್ನೇ ಧರಿಸಿ ಆದಾಯ ತೆರಿಗೆಯ ಕುರಿತು ಚಿಂತಿಸುವವನವರೆಗೆ ನನ್ನದೀ ಸುದೀರ್ಘ ಪಯಣ.”

ಊರ ಮಳೆ ನಿಂತರೂ ಮರದಿಂದ ಮಳೆ ನಿಲ್ಲುವುದಿಲ್ಲ ಎನ್ನುವಂತೆ ಪತ್ರಿಕಾ ಮಹಾಶಯರು ಸುಮ್ಮನೇ ಬಿಡುವವರಲ್ಲ. “ಇಬ್ಬರೂ ಮೌಂಟ್ ಎವರೆಸ್ಟ್ ಏರಿದರು ಸರಿ. ಆದರೆ ಅದನ್ನು ಮೊದಲು ಮೆಟ್ಟಿದವರ್ಯಾರು?” ಇದು ಪತ್ರಕರ್ತರ ಪ್ರಶ್ನೆ. ಅದನ್ನು ಈಗಲೂ ಪ್ರಶ್ನಿಸುತ್ತಿರುವ ವಿಚಿತ್ರ ಮನಗಳು ಸಾಕಷ್ಟಿವೆ. ಅದಕ್ಕೆ ತಂಡದ ನಾಯಕರಾಗಿದ್ದ ಕೊಲೆನೆಲ್ ಹಂಟ್ ಅವರು “ಈ ಈರ್ವರೂ ಒಂದು ತಂಡವಾಗಿ ಮೇಲೇರಿದರು” ಎಂದು ಹೇಳಿದ ಮಾತು ಅತ್ಯಂತ ಸಮರ್ಪಕವಾದದ್ದು ಮತ್ತು ಎಲ್ಲ ಕ್ರೀಡಾಮನೋಧರ್ಮಗಳ ಆಶಯದಿಂದ ಗೌರವಾನ್ವಿತವಾದದ್ದು. ಈ ಯಶಸ್ಸನ್ನು ಸಮವಾಗಿ ಮತ್ತು ಪಾರಸ್ಪರಿಕವಾದ ಗೌರವದೊಂದಿಗೆ ಭಾವಿಸಿಕೊಂಡ ತೇನ್ಸಿಂಗ್ ಮತ್ತು ಹಿಲೆರಿ ಅವರಂತೂ ಜೀವನ ಪರ್ಯಂತ ಅತ್ಯಂತ ಒಳ್ಳೆಯ ಗೆಳೆಯರಾಗಿ ಬಾಳಿದರು. ಭಾರತೀಯ ಉಪಖಂಡದ ನಾವು ತೇನ್ಸಿಂಗರ ಕುರಿತಾದ ಪ್ರೀತಿಯನ್ನು ಹೆಚ್ಚಿಗೆ ಹೇಳುವುದರ ಜೊತೆ ಜೊತೆಗೆ ಎಡ್ಮಂಡ್ ಹಿಲೆರಿಯ ಸಹಾಯ ಸಹಕಾರವಿಲ್ಲದೆ ಮೌಂಟ್ ಎವರೆಸ್ಟ್ ಆರೋಹಣ ಮಾಡುವುದು ಶಕ್ಯವಿರಲಿಲ್ಲ ಎಂಬುದನ್ನು ಅರಿಯುವುದು ಅವಶ್ಯ. ಎಡ್ಮಂಡ್ ಹಿಲೆರಿ ಅವರು ಮಾಡಿದ ಸಮಾಜ ಸೇವಾ ಕಾರ್ಯ ಕೂಡಾ ಅತ್ಯಂತ ಹಿರಿಯಮಟ್ಟದ್ದು. ಹೀಗಾಗಿ ಮೊದಲು ಮೌಂಟ್ ಎವರೆಸ್ಟ್ ಆರೋಹಣಕ್ಕೆ ನಾವು ಎಡ್ಮಂಡ್ ಹಿಲೆರಿಯವರನ್ನೂ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಸ್ಮರಿಸುವುದು ಒಳ್ಳೆಯ ಸಂಪ್ರದಾಯವಾದೀತು.

ಮುಂದೆ ತೇನ್ಸಿಂಗರು 1954ರಲ್ಲಿ ಡಾರ್ಜಿಲಿಂಗ್ನಲ್ಲಿ ಸ್ಥಾಪಿತಗೊಂಡ ಹಿಮಾಲಯನ್ ಮೌಂಟೇನೇರಿಂಗ್ ಇನ್ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾದರು. 1978ರ ವರ್ಷದಲ್ಲಿ ಅವರು ತಮ್ಮದೇ ಆದ ತೇನ್ಸಿಂಗ್ ನೋರ್ಗೆ ಅಡ್ವೆಂಚರ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಅವರ ಪುತ್ರರಾದ ಜಮ್ಲಿಂಗ್ ತೇನ್ಸಿಂಗ್ ನೋರ್ಗೆ ಅವರು ಈ ಸಂಸ್ಥೆಯನ್ನು 2003 ರ ವರ್ಷದವರೆಗೆ ನಡೆಸಿದರಲ್ಲದೆ ಸ್ವತಃ ಅವರು ಕೂಡಾ 1996ರ ವರ್ಷದಲ್ಲಿ ಮೌಂಟ್ ಎವರೆಸ್ಟ್ ಆರೋಹಣವನ್ನು ಯಶಸ್ವಿಯಾಗಿ ಕೈಗೊಂಡರು.

ತೇನ್ಸಿಂಗರಿಗೆ ಅವರು ಕ್ರಮಿಸಿದ ಬದುಕಿನ ಹಾದಿಯಲ್ಲಿ ದೊರೆತ ಗೌರವಗಳು ಅನೇಕ. 1938 ರ ವರ್ಷದಲ್ಲಿ ಎವರೆಸ್ಟ್ ಏಕ್ಸ್ಪೆಡಿಶನ್ ಕಾರ್ಯದಲ್ಲಿ ಅವರು ನಡೆಸಿದ ಅಮೂಲ್ಯ ಸೇವೆಗಾಗಿ ‘ಅತ್ಯಂತ ಎತ್ತರದ ಪರ್ವತಪ್ರದೇಶಗಳಲ್ಲಿನ ಕಾರ್ಯನಿರ್ವಹಣೆಗಾಗಿನ ಟೈಗರ್ ಮೆಡಲ್’ ಸಂದಿತು. ಈಗಾಗಲೇ ಹೇಳಿದಂತೆ 1953 ರಲ್ಲಿ ಎವರೆಸ್ಟ್ ಸಾಧನೆಗಾಗಿ ಜಾರ್ಜ್ ಪದಕಗೌರವ ಸಂದಿತು. ಅದೇ ವರ್ಷದಲ್ಲಿ ಅವರಿಗೆ ನೇಪಾಳದ ‘ಆರ್ಡರ್ ಆಫ್ ದಿ ಸ್ಟಾರ್ ಆಫ್ ನೇಪಾಳ್’ ಗೌರವ ಸಂದಿತು. 1959 ರ ವರ್ಷದಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಗೌರವವನ್ನರ್ಪಿಸಿತು.

ತೇನ್ಸಿಂಗರು 9ನೇ 1986 ರ ವರ್ಷದಲ್ಲಿ ಈ ಲೋಕವನ್ನಗಲಿದರು. ಸೆಪ್ಟೆಂಬರ್ 2013 ರ ವರ್ಷದಲ್ಲಿ ನೇಪಾಳ ಸರ್ಕಾರವು ತನ್ನ 25971 ಅಡಿ ಎತ್ತರದ ಶಿಖರಕ್ಕೆ ತೇನ್ಸಿಂಗ್ ಪೀಕ್ ಎಂದು ಹೆಸರಿಸಲು ತೀರ್ಮಾನಿಸಿತು. ಹಲವಾರು ಕಷ್ಟದ ಕಣಿವೆಗಳು, ಪ್ರದೇಶಗಳಿಗೆ ತೇನ್ಸಿಂಗರ ಹೆಸರು ಆಗಾಗ ನಾಮಕರಣಗೊಳ್ಳುತ್ತಲೇ ಇದೆ. ತೇನ್ಸಿಂಗ್ ಮತ್ತು ಹಿಲೆರಿ ಹೆಸರನ್ನು ಒಂದು ವಿಮಾನ ನಿಲ್ದಾಣಕ್ಕೂ ಇಡಲಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಒಬ್ಬ ಸಾಮಾನ್ಯ ಕೂಲಿ ಆಳು ಕೂಡಾ ತಾನು ಮಾಡಿದ ಕಾಯಕದಲ್ಲಿ ನಿಷ್ಠೆ, ಶ್ರದ್ಧೆ, ಸಾಹಸಗಳಿಂದ ಹೇಗೆ ಔನ್ನತ್ಯದಲ್ಲಿ ಇರಬಹುದೆಂಬುದಕ್ಕೆ ತೇನ್ಸಿಂಗ್ ನಮ್ಮ ನೆನಪಿಗೆ ಬರುವ ಪ್ರಮುಖ ಹೆಸರು. ಈ ಮಹಾನ್ ಚೇತನದ ಹೆಸರು ವಿಶ್ವದಲ್ಲೆಂದೆಂದೂ ಚಿರಶಾಶ್ವತ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

Gopal Krishna Belur ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸೂಕ್ತ- ಬೇಳೂರು ಗೋಪಾಲಕೃಷ್ಣ

0

Gopal Krishna Belur ವಿಧಾನಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಮಂಜುನಾಥ್ ಕೆ.ಕೆ.ಅವರನ್ನು ಪಕ್ಷ ಕಣಕ್ಕೆ ಇಳಿಸಿದೆ. ಆಯನೂರು ಮಂಜುನಾಥ್ ಅವರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದು, ಚಿರಪರಿಚಿತರಾಗಿರುವುದು ಗೆಲುವಿಗೆ ಸಹಕಾರಿ ಆಗಲಿದೆ ಎಂದರು.
ಶಿಕ್ಷಕರು, ಪದವೀಧರರನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿದ್ದೇವೆ. ಎರಡೂ ವರ್ಗಗಳ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳ ಕುರಿತು ಸರಕಾರಕ್ಕೆ ಅರಿವಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು ಹೆಚ್ಚು ಸೂಕ್ತ ಎಂದರು.
ಇತ್ತೀಚೆಗೆ ಕೇಳಿ ಬಂದಿರುವ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಸರಕಾರದ ಅಧೀನದಲ್ಲಿರುವ ಪೊಲೀಸ್ ಹಾಗೂ ಸಿಐಡಿಗಳು ಕ್ಷಮತೆ ಹೊಂದಿವೆ. ತಪ್ಪಿತ್ತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾವುದೇ ಮುಲಾಜಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆಯ ಭಾವಕ್ಕೆ ಒಳಗಾಗಿ ಕಾಂಗ್ರೆಸ್ ವಿರುದ್ಧ ವೃಥಾರೋಪ ಮಾಡುತ್ತಿದ್ದಾರೆ ಎಂದರು.
Gopal Krishna Belur ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ನೀರಿನ ಕೊರತೆ ಸಮಸ್ಯೆ ಕಡಿಮೆಯಾಗಿದೆ. ಅನಾಹುತಗಳು ಸಂಭವಿಸಿದಲ್ಲಿ ತ್ವರಿತಗತಿಯಲ್ಲಿ ಅಗತ್ಯ ಕ್ರಮ ವಹಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ನಾಗರಿಕರಿಗೆ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಸುಮಾ ಸುಬ್ರಹ್ಮಣ್ಯ, ಶ್ರೀನಿವಾಸ ಕಾಮತ್, ಜಯಶೀಲಪ್ಪಗೌಡ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಚಿದಂಬರ, ಪ್ರವೀಣ್ ಬೃಂದಾವನ, ಜಯನಗರ ಗುರು, ಸಣ್ಣಕ್ಕಿ ಮಂಜು, ಅಶ್ವಿನಿಕುಮಾರ್, ನೇತ್ರಾ ಸುಬ್ರಾಯಭಟ್, ಮತ್ತಿತರರು ಇದ್ದರು.