Monday, March 23, 2026
Monday, March 23, 2026
Home Blog Page 475

Dr. B.R. Ambedkar ಚನ್ನಯ್ಯ ಸಮಾಜದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರತ್ತ ಗಮನ ಹರಿಸಬೇಕು- ಬಸವರಾಜ್ ದೊಡ್ಮನಿ

0

Dr. B.R. Ambedkar ಅನ್ನ ಕ್ಷಣಿಕ ತೃಪ್ತಿ ನೀಡಿದರೆ, ಶಿಕ್ಷಣ ಶಾಶ್ವತವಾದುದು. ಈ ನಿಟ್ಟಿನಲ್ಲಿ ಚನ್ನಯ್ಯ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ನೀಡಬೇಕು ಎಂದು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ್ ದೊಡ್ಮನಿ ಹೇಳಿದರು.

ಸಾಗರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಚನ್ನಯ್ಯ ಸಮಾಜ ಸಾಮಾಜಿಕ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಚನ್ನಯ್ಯ ಸಮಾಜ ಸಾಮಾಜಿಕ ಮತ್ತು ಆರ್ಥಿಕ ಕ್ಷೇಮಾಭಿವೃದ್ಧಿ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚನ್ನಯ್ಯ ಸಮಾಜದವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಸಮಾಜದವರು ಸಂಘಟನಾತ್ಮಕವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜವು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂದರೆ ಶೈಕ್ಷಣಿಕವಾಗಿ ಸಬಲರಾದಾಗ ಮಾತ್ರ ಸಾಧ್ಯ. ಡಾ.ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ. ಅತ್ಯಂತ ಹಿಂದುಳಿದ ಸಮುದಾಯವಾದ ಚನ್ನಯ್ಯ ಸಮಾಜದವರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಉಪನ್ಯಾಸಕ ಮೋಹನ್ ಕುಮಾರ್ ಉಪನ್ಯಾಸ ನೀಡಿ, ಅತ್ಯಂತ ಕಷ್ಟದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಶಿಕ್ಷಣವನ್ನು ಪಡೆದು ಸಮಾಜಕ್ಕೆ ಮಾದರಿಯಾದರು.

ಜಗತ್ತಿನಲ್ಲಿಯೇ ಅತ್ಯಂತ ಉನ್ನತವಾದ ಸಂವಿಧಾನವನ್ನು ನೀಡಿದರು. ತಮ್ಮ ಜೀವಿತದುದ್ದಕ್ಕೂ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವ ಮೂಲಕ ಓದಿಗಾಗಿಯೇ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಾಗಿಟ್ಟಿದ್ದರು. ವಿಶ್ವದ ಜ್ಞಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರುದ್ರಪ್ಪ ಭೈರೇಕೊಪ್ಪ ಮಾತನಾಡಿ, ಸಂವಿಧಾನ ಮೀಸಲಾತಿ ನೀಡಿದ್ದರೂ ಸಹ ಅದು ಪ್ರಬಲ ಜಾತಿಗಳ ಪಾಲಾಗುತ್ತಿದೆ. ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ನಾವೇ ಹೋರಾಟ ಮಾಡಬೇಕಿದೆ ಎಂದ ಅವರು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಜೊತೆಗೆ ಸಮುದಾಯದ ಅಭಿವೃದ್ಧಿಗಾಗಿ 80 ಜನರನ್ನೊಳಗೊಂಡ ಸಂಘಟನೆಯನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದರು.

Dr. B.R. Ambedkar ಚನ್ನಯ್ಯ ಸಮಾಜದ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯ ಶಿಕ್ಷಕ ಮೂಡಗೋಡು ಮಂಜಪ್ಪ ಅವರು ಸಂವಿಧಾನ ಪೀಠಿಕೆ ಓದಿದರು. ಜಿ.ಎಸ್. ಸಂದೀಪ್ ಪರಿವರ್ತನಾ ಗೀತೆ ಹಾಡಿದರು. ಜಿ.ಎಸ್. ಸಂದೀಪ್ ಮತ್ತು ರುದ್ರಪ್ಪ ಬೈರೆಕೊಪ್ಪ, ಕೆ.ಎಸ್. ಹರೀಶ್, ನಾಗರಾಜ್ ಕಾಸರಕುಪ್ಪೆ ಸಂಗಡಿಗರು ಬಹುಜನ ನಾಯಕ ಜಯಭೀಮ ಎಂಬ ಭೀಮ ಗೀತೆಯನ್ನು ಹಾಡಿದರು.

22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಚನ್ನಯ್ಯ ಸಮಾಜದ ಕ್ಷೇಮಾಭಿವೃದ್ಧಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷರಾದ ರಂಗಪ್ಪ ಹೊನ್ನೇಸರ, ಎ.ಕೆ. ನಾಗರಾಜಪ್ಪ, ಸುಜಾತ ಮಂಜುನಾಥ್ ರಿಪ್ಪನ್ ಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಎಚ್. ಆಲಗೇರಿ ಮಂಡ್ರಿ, ರಾಜ್ಯ ಸದಸ್ಯೆ ಹೇಮ ಮಂಜಪ್ಪ ರಿಪ್ಪನ್ ಪೇಟೆ, ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷ ಬಸವಂತಪ್ಪ ಕೋಟೆ. ಜಿಲ್ಲಾ ಗೌರವಾಧ್ಯಕ್ಷ ಸುಬ್ಬಪ್ಪ ಕಾಗೋಡು, ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಕಾಕತ್, ಕಾರ್ಯಕಾರಿ ಮಂಡಳಿಯ ಸದಸ್ಯೆ ರಾಮಮ್ಮ, ತಾಲೂಕು ಅಧ್ಯಕ್ಷರಾದ ಸೋಮಶೇಖರ್ ವೀರಾಪುರ, ಎಚ್.ಜಿ. ಶ್ರೀನಿವಾಸ, ನಾಗರಾಜ್ ಕಾಸರಕುಪ್ಪೆ, ತಿಮ್ಮಪ್ಪ ಹೊಸಬೀಡು, ಮತ್ತಿತರರಿದ್ದರು.

ಕೆ.ಎಸ್. ಹರೀಶ್ ಸ್ವಾಗತಿಸಿ, ವಂದಿಸಿದರು. ಸಾಹಿತಿ ರೇವಣಪ್ಪ ಬಿದರಗೆರೆ ನಿರೂಪಿಸಿದರು.

Karnataka State Human Rights Commission ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದಂತೆಯೇ ಎನ್ ಜಿ ಓ ಗಳೂ ಸೇವೆ ಸಲ್ಲಿಸುತ್ತಿವೆ- ನ್ಯಾ.ಮಂಜುನಾಥ ನಾಯಕ್

0

Karnataka State Human Rights Commission ಓರ್ವ ವ್ಯಕ್ತಿ ಅಪರಾಧ ಕೃತ್ಯವೆಸಗಿ, ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಸೇರಿದ ನಂತರವೂ ಆತನನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ದೇಶದಲ್ಲಿದ್ದು, ಇದು ಮಾನವ ಹಕ್ಕುಗಳ ಮೌಲ್ಯದ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಜಿ.ಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆ 1948 ಡಿ.10 ರಂದು ಮಾನವ ಹಕ್ಕುಗಳನ್ನು ಸಾರ್ವತ್ರಿವಕಾಗಿ ಘೋಷಣೆ ಮಾಡಿದ ದಿನ. ಈ ದಿನವನ್ನು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.
2011 ರ ನವೆಂಬರ್ ನ.26 ರಂದು ಓರ್ವ ಉಗ್ರ ಮುಂಬೈ ಮೇಲೆ ದಾಳಿ ನಡೆಸಿ ಸಾವು, ನೋವಿಗೆ ಕಾರಣರಾಗಿದ್ದರೂ, ಆತನಿಗೆ ಒಬ್ಬ ವಕೀಲರನ್ನು ನೇಮಿಸಿ, ಕಾನೂನು ಪ್ರಕ್ರಿಯೆಗೆ ಒಳÀಪಡಿಸಿ ತಪ್ಪಿತಸ್ಥ ಎಂದು ಘೋಷಣೆಯಾದ ಮೇಲೂ ಜೈಲಿನಲ್ಲಿಯೂ ಮಾನವೀಯತೆಯಿಂದ ನೋಡಿಕೊಳ್ಳಲಾಯಿತು. ಇದು ಮಾನವ ಹಕ್ಕುಗಳ ಮೌಲ್ಯಕ್ಕಿರುವ ಒಂದು ಉದಾಹರಣೆ. ಇದು ನಮ್ಮ ದೇಶದಲ್ಲಿರುವ ಮಾನವ ಹಕ್ಕುಗಳಿಗಿರುವ ಪ್ರಾಮುಖ್ಯತೆ ತೋರುತ್ತದೆ.
ನ್ಯಾಯಾಲಯದಲ್ಲಿ ಪ್ರತಿ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಪ್ರಯತ್ನ ನಡೆಯುತ್ತಲೇ ಇರುತ್ತದೆ ಮತ್ತು ಸಫಲ ಕೂಡ ಆಗಿದೆ. ಹಾಗೂ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಶೋಷಿತ ವರ್ಗದವರಿಗೆ, ಜೈಲಿನ ಖೈದಿಗಳ ರಕ್ಷಣೆಗೆ ಉಚಿತವಾಗಿ ಕಾನೂನಿನ ನೆರವು ನೀಡುತ್ತದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದಂತೆಯೇ ಎನ್‌ಜಿಒ ಪಾತ್ರವೂ ಬಹಳ ದೊಡ್ಡದಿದೆ. ಮಾನವ ಹಕ್ಕುಗಳ ಸಮಿತಿಗಳೂ ಕಾರ್ಯ ನಿರ್ವಹಿಸುತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳ ಉಲ್ಲಂಘನೆ ನಿಮ್ಮ ಗಮನಕ್ಕೆ ಬರುತ್ತದೆ ಆದ್ದರಿಂದ ನೀವು ಮಾನವ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಮಾನವ ಹಕ್ಕುಗಳ ರಕ್ಷಣೆಗೆ ಸಾಕಷ್ಟು ಕಾನೂನುಗಳಿದ್ದು ಅದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಎಲ್ಲರಲ್ಲಿ ಇರಬೇಕೆಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೊಷ್ ಎಂ ಎಸ್ ಮಾತನಾಡಿ, ನಮ್ಮ ದೇಶದಲ್ಲಿ ಅತ್ಯಂತ ಕ್ರೂರ ಕೃತ್ಯ ಮಾಡಿದವರು, ತಪ್ಪಿತಸ್ಥರ ಹಕ್ಕನ್ನೂ ರಕ್ಷಿಸುವ ವ್ಯವಸ್ಥೆ ಇದ್ದು, ಇದು ಮಾನವ ಹಕ್ಕುಳಗ ರಕ್ಷಣೆಗೆ ಒಂದು ಉದಾಹರಣೆಯಾಗಿದೆ.
Karnataka State Human Rights Commission ಬಹುತೇಕ ಪ್ರಕರಣಗಳಲ್ಲಿ ಪಕ್ಷಗಾರರು ಮಾತು ಬಿಟ್ಟು ಹಗೆ, ದ್ವೇಷ ಸಾಧಿಸುತ್ತಾರೆ.
ಆಗ ಸಿವಿಲ್ ಪ್ರಕರಣಗಳು ಕ್ರಿಮಿನಲ್ ಪ್ರಕರಣಗಳಾಗುತ್ತವೆ. ದ್ವೇಷ ಮುಂದುವರೆಸುತ್ತಾ ಪ್ರಕರಣಗಳು 20 ರಿಂದ 25 ವರ್ಷಗಳವರೆಗೆ ಮುಂದುವರೆಯುತ್ತಲೇ ಇರುತ್ತವೆ. ಆಮೇಲೆ ಅವರ ಮಕ್ಕಳು ರಾಜೀ ಸಂಧಾನಕ್ಕೆ ಬರುತ್ತಾರೆ. ಆದ್ದರಿಂದ ಯಾವುದೇ ಸಿವಿಲ್ ಪ್ರಕರಣವನ್ನು ಯಾರೇ ದಾಖಲಿಸಿದರೂ ಸಹ ಪಕ್ಷಗಾರರು ಮಾತಾಡಿಕೊಳ್ಳಬೇಕು. ಮಧ್ಯಸ್ಥಿಕೆ ಕೇಂದ್ರಕ್ಕೆ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು. ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಅವರ ಮಕ್ಕಳಿಗೆ ಅಭಿರಕ್ಷೆ ನೀಡಬೇಕು. ದ್ವೇಷ ಸಾಧನೆ ಮಾಡಿದರೆ ಇತರರ ಹಕ್ಕನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದ ಅವರು ಮಾನವ ಹಕ್ಕು ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ನಾವು ಇಂಗ್ಲೆAಡಿನ ಮ್ಯಾಗ್ನಾ ಕಾರ್ಟಾದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತೇವೆ. ಆದರೆ 12 ನೇ ಶತಮಾನದಲ್ಲೇ ನಮ್ಮ ರಾಜ್ಯದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾನತೆಯ ಬಗ್ಗೆ, ಮಾನವ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ವಿಶ್ವಕ್ಕೇ ತೋರಿಸಿದ್ದಾರೆ. ಭವ್ಯ ಪರಂಪರೆ, ಇತಿಹಾಸ ಹೊಂದಿರುವ ನಾವು ಇದನ್ನು ಪರಿಪಾಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು.
ರಾಷ್ಟçಕವಿ ಕುವೆಂಪು ಅವರು ತಮ್ಮ ವಿಶ್ವ ಮಾನವ ಸಂದೇಶದಲ್ಲಿ ಇದನ್ನೇ ಹೇಳಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮೆಲ್ಲರ ಮೇಲೆ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಇದೆ. ಆಗಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುತ್ತದೆ. ಇದು ಆಗದಂತೆ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಾನವ ಹಕ್ಕುಗಳ ಉಲ್ಲಂಘನೆಯಾದಾಗ, ತಪ್ಪುಗಳು ನಡೆದಾಗ ಪ್ರತಿಭಟಿಸುವ, ಖಂಡಿಸಬೇಕು. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕು ಎಂದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜಿ.ಆರ್.ರಾಘವೇಂದ್ರ ಸ್ವಾಮಿ ಮಾತನಾಡಿ, ಯಾರದೇ ಹಕ್ಕಿಗೆ ಚ್ಯುತಿ ಬರಬಾರದೆಂಬ ಉದ್ದೇಶದಿಂದ ಮಾನವ ಹಕ್ಕುಗಳ ಅಂಗೀಕಾರವಾಗಿದೆ. ಯಾವುದೇ ವ್ಯಕ್ತಿ ಆರ್ಥಿಕ ಸಬಲತೆ ಇಲ್ಲದಾಗ ನ್ಯಾಯಾಂಗ ಇಲಾಖೆಯಿಂದಲೇ ಉಚಿತವಾಗಿ ವಕೀಲರನ್ನು ನೇಮಿಸುವ ವ್ಯವಸ್ಥೆಯನ್ನು ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತದೆ. ಹಿರಿಯ ಸಿವಿಲ್ ನ್ಯಾಯಾಧೀಶರರನ್ನು ಪ್ರಾಧಿಕಾರಕ್ಕೆ ನೇಮಿಸಿ ಅವರ ಮೂಲಕ ಉಚಿತ ಕಾನೂನು ಅರಿವು ನೆರವನ್ನು ನಿಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದರ ಮುಖ್ಯ ಉದ್ದೇಶ ಮಾನವ ಹಕ್ಕುಗಳನ್ನು ಕಾಪಾಡುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಕಾನೂನಾತ್ಮಕ, ಸಂವಿಧಾನಾತ್ಮಕ ಮತ್ತು ಮಾನವ ಹಕ್ಕುಗಳು ಈ ಮೂರು ರೀತಿಯ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಹಾಗೂ ನಮ್ಮ ಸಂವಿಧಾನ ಆರು ರೀತಿಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಇಡೀ ವಿಶ್ವಕ್ಕೇ ಅನ್ವಯವಾಗುವುದು ಮಾನವ ಹಕ್ಕುಗಳು. ಇದು ಹುಟ್ಟಿನಿಂದ ಬಂದದ್ದು. ವಿಶ್ವ ಸಂಸ್ಥೆ ಇವುಗಳನ್ನು ಗುರುತಿಸಿ ಅಂಗೀಕರಿಸಿದೆ.
ಸಮಾನತೆ ಹಕ್ಕು, ಶಿಕ್ಷಣ ಹಕ್ಕು, ಧಾರ್ಮಿಕ ಹಕ್ಕು ಈ ಎಲ್ಲ ಹಕ್ಕುಗಳ ಕುರಿತು 12 ನೇ ಶತಮಾನದಲ್ಲಿ ವಚನಕಾರರು ಪ್ರತಿಪಾದಿಸಿ, ಸಮಾಜಕ್ಕೆ ನೆಲೆಗೊಳ್ಳುವಂತೆ ಮಾಡಿದ್ದರು. ಇದೇ ಹಕ್ಕುಗಳನ್ನು ಡಾ. ಬಿ.ಆರ್ ಅಂಬೇಡ್ಕರ್‌ರವರು ಹೇಳಿದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಕಾಪಾಡಿಕೊಳ್ಳೋಣ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಮೀತಲ್ ಮಾತನಾಡಿ, 2016 ರಲ್ಲಿ ಮಾನವ ಹಕ್ಕುಗಳ ಸಮಿತಿ ರಚನೆಯಾಗಿದ್ದು, ಅಂದಿನಿAದ ಮಾನವ ಹಕ್ಕುಗಳ ಕುರಿತು ಅನೇಕ ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಎಲ್ಲರೂ ಮತ್ತೊಬ್ಬರ ಹಕ್ಕುಗಳನ್ನು ರಕ್ಷಿಸಬೇಕಿದೆ. ಉಲ್ಲಂಘನೆಯಾದಾಗ ನ್ಯಾಯಾಂಗ ವ್ಯವಸ್ಥೆ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಎಂ.ಎA.ಗೋಪಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಮಹೇಶ್ ಎನ್, ಎ ಆರ್ ರವಿಕುಮಾರ್ ಪಾಲ್ಗೊಂಡಿದ್ದರು.

CM Siddharamaih ಮಾಜಿ ಸಿಎಂ ಎಸ್.ಎಂಕೃಷ್ಣ ಅವರು ನನಗೆ ಮಾರ್ಗದರ್ಶಕರು- ಸಿದ್ಧರಾಮಯ್ಯ ಸಂತಾಪ

0

CM Siddharamaih ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು.

ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ.

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು.

CM Siddharamaih ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ.

ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದಾರೆ.

Sri Adichunchanagiri Education Trust Shivamogga ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರದಲ್ಲೂ ಶಿವಮೊಗ್ಗದ ಶ್ರೀಪ್ರಸನ್ನನಾಥ ಶ್ರೀಗಳ ಪ್ರೋತ್ಸಾಹ ಶ್ಲಾಘನೀಯ- ಶ್ರೀಸಾಯಿನಾಥಶ್ರೀ

0

Sri Adichunchanagiri Education Trust Shivamogga ಶ್ರೀಗಳ ಅವಿರತ ಪರಿಶ್ರಮ, ಅವರು ಕೂಡಿಟ್ಟ ಆಧ್ಯಾತ್ಮ ತುಡಿತದ ಮನೋ ಭೂಮಿಕೆಯಿಂದ ಸಾವಿರಾರು ಮಕ್ಕಳು ಶಿಕ್ಷಣದ ಜೊತೆಗೆ , ಕ್ರೀಡಾ ಕ್ಷೇತ್ರಗಳಲ್ಲಿ ಇಂದು ಅಗ್ರ ಪಂಕ್ತಿಯ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ, ಕಾಲೇಜಿನ ಆವರಣದಲ್ಲಿ ನಡೆದ ಪೂಜ್ಯ ಶ್ರೀ ಪ್ರಸನನನಾಥ ಸ್ವಾಮೀಜಿಯವರ 57ನೇ ವರ್ಧಂತಿಯ ಮಹೋತ್ಸವದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ,ಆಶೀರ್ವಚನ ನೀಡುತ್ತಾ,ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಂಬು ಗ್ರಾಮ ಒಂದು ಕುಗ್ರಾಮದ ಪೂರ್ವಾಶ್ರಮದಲ್ಲಿ ಜನಿಸಿದರು.
Sri Adichunchanagiri Education Trust Shivamogga ಏನನ್ನಾದರೂ ಮಹತ್ತರ ವಾದದನ್ನು ಸಾಧಿಸಬೇಕೆಂಬ ಸದುದ್ದೇಶದಿಂದ ಐಹಿಕ ಜೀವನದಲ್ಲಿ ವೈರಾಗ್ಯವನ್ನು ಹೊಂದಿ, ಪರಮ ಪೂಜ್ಯ ಜಗದ್ಗುರುಗಳವರಿಂದ ಬ್ರಹ್ಮಚಾರಿ ದೀಕ್ಷೆಯನ್ನು ಪಡೆದುಕೊಂಡರು.ಜಾತಿ ಮತದ ಭೇದ ಭಾವವಿಲ್ಲದೆ ಸರ್ವರನ್ನು ಸಮಾನವಾಗಿ ಗುರುತಿಸುವ ಶ್ರೀಗಳು,
ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಕಾಲಿಟ್ಟ ಕಡೆಯೆಲ್ಲ ಶಿಸ್ತು, ಸ್ವಚ್ಛತೆ ಉತ್ಸಾಹವೇ ತುಂಬಿ ಹರಿದು ಸದೃಢ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ನಿಂತಿದ್ದಾರೆ ಎಂದರು. ನೂತನ ವಿನೂತನ ಶಿಕ್ಷಣ ಹಾಗೂ ಪ್ರತಿಭೆಗಳ ಆವಿಷ್ಕಾರಕ್ಕೆ ತಮ್ಮದೇ ಆದ ಕೊಡುಗೆ ಪೂಜ್ಯರು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.

MESCOM ಡಿಸೆಂಬರ್ 11. ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರದ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ಡಿ.11 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ನಾಗಪ್ಪಕೇರಿ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, MESCOM ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Karnataka Sheep And Wool Producers Development ಕುರಿ/ಮೇಕೆ ಘಟಕ ಪೂರೈಕೆ ಯೋಜನೆಗೆ ನೋಂದಾಯಿತ ಕುರಿ & ಉಣ್ಣೆ ಉತ್ಪಾದಕ ಸಹಕಾರ ಸಂಘಗಳ ಪ.ಪಂಗಡದ ಸದಸ್ಯರಿಂದ ಅರ್ಜಿಗೆ ಆಹ್ವಾನ

0

Karnataka Sheep And Wool Producers Development ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ, ನಿಯಮಿತದ ವತಿಯಿಂದ 2024-25 ನೇ ಸಾಲಿನ ಗಿರಿಜನ ಉಪ ಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ ಪೂರೈಕೆ ಯೋಜನೆಗೆ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

16 ರಿಂದ 60 ವರ್ಷದೊಳಗಿನ ಮಹಿಳಾ/ಪುರುಷ ಸದಸ್ಯರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.20 ಕಡೆಯ ದಿನವಾಗಿದೆ.

ಈ ಯೋಜನೆಯಡಿ 10 ಸುಧಾರಿತ ಹೆಣ್ಣು ಕುರಿ/ಮೇಕೆ, 01 ಟಗರು/ಹೋತ ಒಟ್ಟು ಘಟಕ ದರ ರೂ.66,000/ಗಳಿದ್ದು, ಶೇ.90 ರಷ್ಟು ಸಹಾಯಧನ ಹೊಂದಿರುತ್ತದೆ.
ಜಿಲ್ಲೆಗೆ ಒಟ್ಟು 03 ಗುರಿಗಳನ್ನು ನೀಡಲಾಗಿದೆ.

Karnataka Sheep And Wool Producers Development ಹೆಚ್ಚಿನ ವಿವರಗಳಿಗೆ ಹತ್ತಿರದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿತು ಮತ್ತು ಅಭಿವೃದ್ದಿ ನಿಗಮ, ನಿಯಮಿತ ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿತು ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Institute of High Tech Education ವಾಣಿಜ್ಯರಂಗವು ವಿಶ್ವದ ಎಲ್ಲ ಕ್ಷೇತ್ರಗಳಿಗೂ ಸಂಪರ್ಕ ಸೇತುವೆ- ಡಾ.ಸುಪ್ರಿಯಾ

0

Institute of High Tech Education ವ್ಯಾಪಾರ ವಿನಿಮಯ ಗಳಿಲ್ಲದೆ ಬದುಕು ಸಾಧ್ಯವಿಲ್ಲ, ಇದನ್ನೇ ವಾಣಿಜ್ಯ ಎನ್ನಲಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಪ್ರಿಯಾ ಆರ್ ಅಭಿಪ್ರಾಯಪಟ್ಟರು.

ಬಾಪೂಜಿ ವಿದ್ಯಾ ಸಂಸ್ಥೆಯ ವಾಣಿಜ್ಯ ವಿಭಾಗದ ಇನ್ಸ್ಟಿಟ್ಯೂಟ್ ಆಫ್ ಹೈ ಟೆಕ್ ಎಜುಕೇಶನ್ ವತಿಯಿಂದ ಏರ್ಪಾಡಾಗಿದ್ದ ರಾಜ್ಯಮಟ್ಟದ ವಾಣಿಜ್ಯ ಪ್ರದರ್ಶನ ‘6ನೇ ವಾಣಿಜ್ಯೋತ್ಸವ’ವನ್ನು ಉದ್ಘಾಟಿಸಿ ಮಾತನಾಡುತ್ತಾ ವಾಣಿಜ್ಯ ರಂಗವು ವಿಶ್ವದ ಎಲ್ಲ ರಂಗಗಳಿಗೂ ಸಂಪರ್ಕ ಸೇತುವೆಯಂತೆ ಇದ್ದು ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಹಾಗೂ ನೌಕರಿಯನ್ನು ಸಹಾ ಒದಗಿಸುತ್ತಿದೆ, ವಿದ್ಯಾರ್ಥಿಗಳು ಭವಿಷ್ಯದ ಮಹತ್ತರ ವಾಣಿಜ್ಯೋದ್ಯಮಿಗಳಾಗಬೇಕು ಎಂದರು.

ಎಂ ಎಸ್ ಬಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಪ್ರೊಫೆಸರ್ ನೀಲಾಂಬಿಕಾ ಜಿ ಸಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವಾಣಿಜ್ಯ ರಂಗವು ಕಾರ್ಪೊರೇಟ್ ಜಗತ್ತಿನ ಹೆಬ್ಬಾಗಿಲಿನಂತೆ ಇದ್ದು ಪ್ರಸ್ತುತ ವಿದ್ಯಾರ್ಥಿಗಳು ವಾಣಿಜ್ಯ ವಿಷಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ, ಕೇವಲ ಪದವಿ ಪಡೆದರೆ ಸಾಲದು ಸ್ಪಷ್ಟವಾದ ಕಲ್ಪನೆ ಹಾಗೂ ಯೋಜನೆಗಳು ಭವಿಷ್ಯದ ನಿರ್ಧಾರಗಳ ಬಗ್ಗೆ ಇರಬೇಕು ಎಂದರು.

Institute of High Tech Education ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಬಾಪೂಜಿ ಹೈಟೆಕ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ವೀರಪ್ಪನವರು ವಾಣಿಜ್ಯ ಪದವಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಎಂದರು. ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಗೆ ವಾಣಿಜ್ಯೋದ್ಯಮ ಅತ್ಯವಶ್ಯ, ವಾಣಿಜ್ಯೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ೪೫೦ ಕ್ಕೂ ಹೆಚ್ಚು ನೋಂದಣಿಗಳಾಗಿವೆ ಎಂದರು.

ಸಂಸ್ಥೆಯ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಕೋರಿದರು. ಲಕ್ಷ್ಮಿ ರಜಪುತ್ ಮತ್ತು ಮೊಹಮ್ಮದ್ ಅದಿಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರಜ್ಞ ಎನ್, ಸಿ, ಸ್ಪೂರ್ತಿ ಸಿ. ಕೆ. ಹಾಡಿದರು.

ಅತಿಥಿಗಳ ಪರಿಚಯವನ್ನು ಸಿಂಚನಾ ವಿ, ರಕ್ಷಾ ಕೆ ಎನ್ ಮಾಡಿದರೆ ವಂದನೆಗಳನ್ನು ಪ್ರೊ. ನಾಗರಾಜ್ ಎಂ ಎಸ್ ಸಮರ್ಪಿಸಿದರು. ಮುಖ್ಯ ಅತಿಥಿಗಳು ವಾಣಿಜ್ಯ ಮಾದರಿಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

-ಚಿತ್ರ ಹಾಗೂ ವರದಿ: ಡಾ ಎಚ್. ಬಿ. ಮಂಜುನಾಥ-

Kannada Sahitya Sammelana ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಿಗರನ್ನ ಬೆಸೆಯುವ ಹಬ್ಬ-ಎಚ್.ಕೆ.ವಿವೇಕಾನಂದ.

0

Kannada Sahitya Sammelana ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಿಗರನ್ನ ಬೆಸೆಯುವ ಹಬ್ಬ-ಎಚ್.ಕೆ.ವಿವೇಕಾನಂದ. ಕನ್ನಡ ಸಾಹಿತ್ಯ ಸಮ್ಮೇಳನ…..
ಮಂಡ್ಯ………
ಇದೇ ಡಿಸೆಂಬರ್ 20/21/22…

ಇದು,
ಒಂದು ನುಡಿ ಹಬ್ಬ
ಒಂದು ನಾಡ ಹಬ್ಬ
ಒಂದು ಅಕ್ಷರದ ಹಬ್ಬ
ಒಂದು ಮಾತುಗಳ ಹಬ್ಬ
ಒಂದು ಭಾಷಾ ಹಬ್ಬ
ಒಂದು ತಾಯಿ ಹಬ್ಬ
ಒಂದು ಸಂಸ್ಕೃತಿ ಹಬ್ಬ
ಒಂದು ಮನೆಯ ಹಬ್ಬ
ಒಂದು ಸಾಹಿತ್ಯ ಹಬ್ಬ
ಒಂದು ಸಂದೇಶದ ಹಬ್ಬ
ಒಂದು ಕಲಾ ಹಬ್ಬ
ಒಂದು ಬದುಕಿನ ಹಬ್ಬ
ಒಂದು ಭಾವನಾ ಹಬ್ಬ
ಒಂದು ರಾಜ್ಯ ಹಬ್ಬ
ಒಂದು ಮಿಲನದ ಹಬ್ಬ
ಒಂದು ಬೆಳವಣಿಗೆಯ ಹಬ್ಬ
ಒಂದು ಆತ್ಮಾವಲೋಕನದ ಹಬ್ಬ
ಒಂದು ಕಲಿಕೆಯ ಹಬ್ಬ
ಒಂದು ಕನಸಿನ ಹಬ್ಬ
ಒಂದು ಸೊಗಸಿನ ಹಬ್ಬ
ಒಂದು ಸಂಭ್ರಮದ ಹಬ್ಬ
ಒಂದು ಬೆಸೆಯುವ ಹಬ್ಬ
ಹಲವಾರು ಹಬ್ಬಗಳ ಹಬ್ಬ…..

ಏನೇ ಹೇಳಿ,
ಕರ್ನಾಟಕದಲ್ಲಿ ನಡೆಯುವ ಎಲ್ಲಾ ಹಬ್ಬ ಜಾತ್ರೆ ಉತ್ಸವ ಸಭೆ ಸಮಾರಂಭ ಸಮ್ಮೇಳನಗಳಲ್ಲಿ ಅತ್ಯಂತ ಮಹತ್ವದ ಮತ್ತು ಮೊದಲನೆಯ ಸ್ಥಾನ
” ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ” ಇದೆ ಮತ್ತು ಇರಲೇಬೇಕು…………

ನಮ್ಮ ಬದುಕು, ಸಂಸ್ಕೃತಿ, ಜೀವನಶೈಲಿ, ಆಹಾರ, ಉಡುಗೆ, ತೊಡುಗೆ ಎಲ್ಲವನ್ನೂ ಒಳಗೊಂಡ ಸಮಗ್ರತೆಯ ಸಂಕೇತವೇ ತಾಯಿ ಭಾಷೆ.

ಹೌದು,
ಇಲ್ಲಿ ಒಂದಷ್ಟು ರಾಜಕೀಯ, ಜಾತೀಯತೆ, ಹಣಕಾಸಿನ ಅವ್ಯವಹಾರ, ಅವ್ಯವಸ್ಥೆ, ಮೂಢನಂಬಿಕೆ, ಆಹಾರದ ತಾರತಮ್ಯ, ಸ್ವಹಿತಾಸಕ್ತಿ ಮುಂತಾದ ಕೆಲವು ಲೋಪದೋಷಗಳು ಖಂಡಿತ ಇರುತ್ತದೆ. ಇದು ಸದ್ಯದ ನಮ್ಮ ವ್ಯವಸ್ಥೆಯ ಭಾಗ. ಎಲ್ಲಾ ಕ್ಷೇತ್ರಗಳನ್ನೂ ಇದು ವ್ಯಾಪಿಸಿದೆ. ಅದನ್ನು ನೆಪವಾಗಿಟ್ಟುಕೊಂಡು ಇದನ್ನು ನಿರ್ಲಕ್ಷಿಸಬಾರದು.

ಸಾಹಿತ್ಯ ಸಮ್ಮೇಳನದ ಉದ್ದೇಶ ಅವಶ್ಯಕತೆ ಪ್ರತ್ಯಕ್ಷ ಮತ್ತು ಪರೋಕ್ಷ ಉಪಯೋಗಗಳನ್ನು ಗಮನಿಸಬೇಕು.

ತಾಯಿ ಭಾಷೆಯ ವಿಷಯದಲ್ಲಿ ಒಂದಾಗುವುದೇ ಒಂದು ರೋಮಾಂಚನ. ಹಳೆ ಬೇರು ಹೊಸ ಚಿಗುರುಗಳ ಸಂಧಿಸುವಿಕೆ, ವಿಚಾರ ವಿನಿಮಯ ಇವುಗಳಲ್ಲಿ ಬಹುಮುಖ್ಯವಾದುದು.

ಹಾಗೆಯೇ ಅದರಿಂದಾಗುವ ಪ್ರಯೋಜನವೇನು ಎಂಬ ಪ್ರಶ್ನೆಯೂ ಏಳುತ್ತದೆ. ನೇರವಾಗಿ ಜನಸಾಮಾನ್ಯರಿಗೆ ಯಾವುದೇ ತಕ್ಷಣದ ಉಪಯೋಗ ಕಾಣುವುದಿಲ್ಲ. ಕೆಲವು ಸಾವಿರದಷ್ಟು ಜನರು ಮಾತ್ರ ಸೇರಿ ಇದರ ಲಾಭ ಪಡೆಯುತ್ತಾರೆ. ಸರ್ಕಾರದ ನೆರಳಿನಲ್ಲಿ ಕೇವಲ ಭಾಷಣಗಳ ಪಾಂಡಿತ್ಯ ಮತ್ತು ಘೋಷಣೆಗಳಿಗೆ ಮಾತ್ರ ಸೀಮಿತ ಎಂಬ ಆರೋಪವೂ ಇದೆ.

ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಇದರ ಮಹತ್ವ ಮನವರಿಕೆಯಾಗುತ್ತದೆ.

ಧರ್ಮದ ಅಡಿಯಲ್ಲಿ ಧಾರ್ಮಿಕ ಆಚರಣೆಗಳಾದ ಯುಗಾದಿ, ರಂಜಾನ್, ಕ್ರಿಸ್ ಮಸ್ ಮುಂತಾದ ಹಬ್ಬಗಳನ್ನು, ಪ್ರಾಂತ್ಯಗಳ ನೆನಪಿಗಾಗಿ ಕೆಂಪೇಗೌಡ ಉತ್ಸವ, ಕಿತೂರು ಉತ್ಸವ, ಹಂಪಿ ಉತ್ಸವ ಇತ್ಯಾದಿಗಳನ್ನು, ವ್ಯಕ್ತಿ ಸಿದ್ದಾಂತಗಳ ಜಾಗೃತಿಗಾಗಿ ಗಾಂಧಿ ಬುದ್ಧ ಬಸವ ಅಂಬೇಡ್ಕರ್ ವಿವೇಕಾನಂದ ಟಿಪ್ಪು ಶಂಕರಾಚಾರ್ಯ ಗುರುನಾನಕ್ ಮಹಾವೀರ ಮುಂತಾದವರ ಜಯಂತಿಗಳನ್ನು ಆಚರಿಸಲಾಗುತ್ತದೆ.

ಆದರೆ ನಮ್ಮ ಉಸಿರೇ ಆದ ತಾಯಿ ಭಾಷೆಯ ಹಬ್ಬ ಇರುವುದು ಇದೊಂದೇ.

ಕರ್ನಾಟಕ ಏಕೀಕರಣ ನೆನಪಿನ ದಿನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರೂ ಅದು ಕೇವಲ ಸಾಂಕೇತಿಕವಾಗಿ ಉಳಿದಿರುವುದರಿಂದ ಕನ್ನಡ ಸಾಹಿತ್ಯ ಸಮ್ಮೇಳನವೇ ನಮ್ಮ ನಿಮ್ಮೆಲ್ಲರ, ಜಾತಿ ಧರ್ಮ ಪ್ರಾಂತ್ಯ ಪಂಗಡಗಳನ್ನು ಮೀರಿದ ತಾಯಿ ಭಾಷೆಯ ಅಕ್ಷರ ಜಾತ್ರೆ.

ನಿಮ್ಮ ಮನಸ್ಸು ಎಲ್ಲೇ ಅಲೆಯುತ್ತಿರಲಿ….

ವೈಯಕ್ತಿಕ ಬದುಕಿನ ಜಂಜಾಟದಲ್ಲಿ,
ಕೌಟುಂಬಿಕ ಜೀವನದ ಸಂಭ್ರಮದಲ್ಲಿ,
ಸಾಮಾಜಿಕ ಸಮಸ್ಯೆಗಳ ಸುಳಿಯಲ್ಲಿ,
ರಾಜಕೀಯ ಮನಸ್ಸಿನ ಪ್ರಕ್ಷುಬ್ಧತೆಯಲಿ,
ಶೈಕ್ಷಣಿಕ ಕ್ಷೇತ್ರದ ಸಾಧನೆಯಲ್ಲಿ,
ಕಲಾ ರಂಗದ ಕ್ರಿಯಾತ್ಮಕತೆಯಲ್ಲಿ,
ವೈಜ್ಞಾನಿಕ ಲೋಕದ ಸಂಶೋಧನೆಯಲ್ಲಿ,
ಕ್ರೀಡಾ ಋತುವಿನ ಅಭ್ಯಾಸದಲ್ಲಿ,
ಆಧ್ಯಾತ್ಮಿಕ ಆಳದ ಧ್ಯಾನದಲ್ಲಿ….

ನೀವು ಕನ್ನಡ ಸಾಹಿತ್ಯ ಸಮ್ಮೇಳನದ ಹಬ್ಬದ ಸಂಭ್ರಮದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೀವಿರುವ ಸ್ಥಳದಿಂದಲೇ ಒಂದು ಪಾತ್ರವಾಗಿ. ಅದರಲ್ಲೂ ತಾಯಿ ಭಾಷೆಯ ಎಲ್ಲರೂ ಮತ್ತು ಸಾಧ್ಯವಾದರೆ, ಇಷ್ಟವಿದ್ದರೆ, ಕರ್ನಾಟಕದಲ್ಲಿ ವಾಸಿಸುತ್ತಿರುವ ಇತರ ಭಾಷೆಯ ಜನರು ಭಾಗವಹಿಸಿ.

ಇದನ್ನು ಇನ್ನಷ್ಟು ವೈಚಾರಿಕ ವೈಜ್ಞಾನಿಕ, ಸಾಂಸ್ಕೃತಿಕ ಆಧುನಿಕ ಮತ್ತು ಉಪಯುಕ್ತ ಮಾಡುವ ನಿಟ್ಟಿನಲ್ಲಿ ಸುಧಾರಣೆ ಮಾಡಬೇಕಿರುವುದು ಅವಶ್ಯವಾದರೂ ಕನ್ನಡದ ಈ ಜಾತ್ರೆಯನ್ನು ಬೆಂಬಲಿಸುವುದು ಮತ್ತು ಸಂಭ್ರಮಿಸುವುದು ನಮ್ಮ ಕರ್ತವ್ಯಗಳಲ್ಲಿ ಒಂದು ಎಂಬುದು ಸರಿ ಎನಿಸುತ್ತದೆ.

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ……..

ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು – ಗೊಂದಲ…..

ಒಂದಷ್ಟು ಪ್ರೀತಿ ವಿಶ್ವಾಸ ವಿಶಾಲ ಮನೋಭಾವ ಕರುಣೆ ಕ್ಷಮಾಗುಣ ಎಲ್ಲವನ್ನೂ ಒಳಗೊಂಡ ಬುದ್ಧತ್ವದಲ್ಲಿ ಎಲ್ಲವೂ ಸಹನೀಯ. ಯಾವುದೂ ವಿವಾದವೇ ಅಲ್ಲ. ಎಲ್ಲವೂ ಸಹಜ ಸ್ವಾಭಾವಿಕ……

ಆದರೆ, ಅಧಿಕಾರವೆಂಬುದು, ಹಣವೆಂಬುದು, ಪ್ರಶಸ್ತಿಯೆಂಬುದು, ಪ್ರಚಾರವೆಂಬುದು, ಜನಪ್ರಿಯತೆ ಎಂಬುದು ನೆತ್ತಿಗೇರಿ ಅಹಂಕಾರ ಮೀರಿ ದುರಹಂಕಾರವಾಗಿ ಪರಿವರ್ತನೆ ಹೊಂದಿದಾಗ ದ್ವೇಷ ಅಸೂಯೆಗಳು ಸುಲಭವಾಗಿ ನಮ್ಮನ್ನು ಆಕ್ರಮಿಸುತ್ತದೆ. ಆಗ ದೇವರೂ ಒಂದು ವಿವಾದ, ಧರ್ಮವೂ ಒಂದು ವಿವಾದ, ಭಾಷೆಯು ಒಂದು ವಿವಾದ, ಆಹಾರವೂ ಒಂದು ವಿವಾದ, ಸಮ್ಮೇಳನವೂ ವಿವಾದವೇ…….

ಈ ರೀತಿಯ ಬೃಹತ್ ಪ್ರಮಾಣದ ಸಮ್ಮೇಳನದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವುದು ಸಾಧ್ಯವಿಲ್ಲ. ಅಸಮಾಧಾನಗಳು ಸದಾ ಇರುತ್ತವೆ. ಆದರೆ ಉದ್ದೇಶ ಪೂರ್ವಕ ಪಕ್ಷಪಾತದ ನಿಲುವುಗಳನ್ನು ಪ್ರಶ್ನಿಸುವುದು ಮತ್ತು ವಿರೋಧಿಸುವುದು ಸಹ ಸ್ವೀಕಾರಾರ್ಹ…..

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದೆಯಂತೆ. ಕಾರಣ ತಾನು ಯಾರಿಗೂ ಕಾಣಬಾರದೆಂದು. ಆದರೆ ಈಗಿನ ಮನುಷ್ಯ ಸ್ವಭಾವಗಳು ಹೆಚ್ಚು ಸೂಕ್ಷ್ಮವಾಗಿದೆ. ಎಲ್ಲವನ್ನೂ ಅತಿಯಾಗಿಯೇ ಗಮನಿಸುತ್ತಾರೆ….

ಸರಿ ತಪ್ಪುಗಳ ಹುಡುಕಾಟ ಸರಿಯೇ ಅಥವಾ ಎಲ್ಲವನ್ನೂ ಮೌನವಾಗಿ ಸಹಿಸಬೇಕೇ ಅಥವಾ ಎಲ್ಲರ ಸ್ವಾತಂತ್ರ್ಯ ಗೌರವಿಸುತ್ತಾ ಸಮನ್ವಯ ‌ಸಾಧಿಸಬೇಕೇ ಅಥವಾ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕೇ……

ಒಂದು ಕಡೆ ಅತ್ಯಂತ ಮಹತ್ವದ ಐತಿಹಾಸಿಕ ಕನ್ನಡದ ನುಡಿ ಹಬ್ಬ, ಇನ್ನೊಂದು ಕಡೆ ಅಷ್ಟೇ ಮಹತ್ವದ ಸಾಂಸ್ಕೃತಿಕ ಪ್ರತಿರೋಧ…..

ಪ್ರಗತಿಪರರು – ಬದಲಾವಣೆ ಬಯಸುವವರು – ಸಾಮರಸ್ಯ ಸೌಹಾರ್ದ ಇಷ್ಟ ಪಡುವವರು – ಪ್ರವಾಹದ ವಿರುದ್ಧ ಈಜುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಆದ ಕಾರಣ ಸಾಂಪ್ರದಾಯಿಕ ಶಕ್ತಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ತಾಳ್ಮೆ, ವಿವೇಚನೆ, ಪ್ರಬುದ್ದತೆ ಮತ್ತು ಪ್ರೀತಿ ಇರಬೇಕಾಗುತ್ತದೆ. ಪರ್ಯಾಯ ಹುಡುಕುವಾಗ ಸಂಘರ್ಷಕ್ಕಿಂತ ಹೆಚ್ಚು ಅಪ್ಪಿಕೊಳ್ಳುವ ಮತ್ತು ಪರಿವರ್ತಿಸುವ ಗುಣ ಇರಬೇಕಾಗುತ್ತದೆ..

ಯಾರದೋ ಒಬ್ಬ ವ್ಯಕ್ತಿಯ ಸೈದ್ಧಾಂತಿಕ ವಿರೋಧಕ್ಕಾಗಿ ಅಥವಾ ಅಸಮರ್ಪಕ ನಿರ್ವಹಣೆಗಾಗಿ ಆತನನ್ನು ಟೀಕಿಸುವುದು ಸರಿ ಇದೆ.
ಆದರೆ ಪರ್ಯಾಯ ಮಾರ್ಗಗಳು ಸೇಡಿನ ರೂಪದಲ್ಲಿರದೆ ಸಹಬಾಳ್ವೆಯ ರೂಪ ಪಡೆದರೆ ಹೆಚ್ಚು ಆದರ್ಶ ಮತ್ತು ಅನುಕರಣೀಯವಾಗಿರುತ್ತದೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಯೋಚಿಸುವಂತಿರಬೇಕು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆರೋಪಗಳನ್ನು ಸಹಿಸಿಕೊಳ್ಳಬೇಕು. ಪ್ರತ್ಯಾರೋಪಗಳು ವೈಯಕ್ತಿಕ ಸಂಬಂಧಗಳನ್ನು ಘಾಸಿಗೊಳಿಸುವಂತಿರಬಾರದು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಚಿಂತನಾ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆ ಹೊರತು ರಾಜಕೀಯ ಪ್ರೇರಿತ ಸಂಕುಚಿತ ಮನೋಭಾವ ಬೆಳೆಸಬಾರದು……..

ತಪ್ಪುಗಳು ನಡೆಯುತ್ತಲೇ ಇರುತ್ತದೆ. ಕಸ ಬೀಳುತ್ತಲೇ ಇರುತ್ತದೆ. ಕೆಲವರಾದರೂ ಪೊರಕೆ ಹಿಡಿದು ಗುಡಿಸುತ್ತಾ ಸಾಗೋಣ ಮತ್ತೆ ಮತ್ತೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

S. M. Krishna ಹಿರಿಯ ರಾಜಕಾರಿಣಿ ಮಾಜಿ ಸಿಎಂ.ಎಸ್.ಎಂ.ಕೃಷ್ಣ ನಿಧನ, ಸಚಿವ ಮಧುಬಂಗಾರಪ್ಪ ಸಂತಾಪ

0

S. M. Krishna ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಸಚಿವ ಎಸ್. ಎಂ. ಕೃಷ್ಣ ಇನ್ನಿಲ್ಲ ಎಂಬುದು ಅತ್ಯಂತ ನೋವು ಮತ್ತು ದುಃಖದ ಸಂಗತಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಮತ್ತು ಗೌರವ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಶ್ರೀಯುತರು ನಮ್ಮ ಜಿಲ್ಲೆಯ ಅಳಿಯ ಎಂಬ ಹೆಮ್ಮೆ ನಮಗಿದೆ.

S. M. Krishna ಸನ್ಮಾನ್ಯರ ನಿಧನದಿಂದಾಗಿ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ, ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಬರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಅವರು ತಮ್ಮ ಶೋಕ ಸಂತಾಪದಲ್ಲಿ ತಿಳಿಸಿದ್ದಾರೆ.

District Health and Family Welfare Department ಪಲ್ಸ್ ಪೊಲಿಯೋ ಮಾದರಿಯಲ್ಲಿ ಜಂತುಹುಳು ನಿವಾರಣಾ ಮಾತ್ರೆಯನ್ನ ಮಕ್ಕಳಿಗೆ ಕೊಡಬೇಕು- ಡಾ.ಕೆ.ಎಸ್.ನಟರಾಜ್

0

District Health and Family Welfare Department ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತಿದ್ದು ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳುವ ಮೂಲಕ ಜಂತು ಹುಳು ನಿವಾರಣೆಗೆ ಸಹಕರಿಸಬೇಕು ಎಂದು ಡಿಹೆಚ್‌ಒ ಡಾ.ನಟರಾಜ್.ಕೆ.ಎಸ್, ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ರೋಟರಿ ಪೂರ್ವ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ರೋಟರಿ ಪೂರ್ವ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳೆಲ್ಲ ಇಂದು ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜೋಲ್‌ನ್ನು ಶಿಕ್ಷಕರಿಂದ ಪಡೆದು, ಜಗಿದು ನುಂಗಬೇಕು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ಶಿಕ್ಷಕರು ನೀಡಬೇಕು.
District Health and Family Welfare Department ಈ ಹಿಂದೆ ಜಂತು ಹುಳು ಮಾತ್ರೆಯನ್ನು ತೆಗೆದುಕೊಂಡಿದ್ದರೂ ಸಹ ಪಲ್ಸ್ ಪೋಲಿಯೋ ಮಾದರಿಯಲ್ಲಿ ಇಂದು ಎಲ್ಲ ಮಕ್ಕಳು ಮಾತ್ರೆಯನ್ನು ತಗೆದುಕೊಳ್ಳಬೇಕು. ಮಾತ್ರೆಯನ್ನು ಜಗಿದು ನುಂಗಬೇಕು. ಜಂತು ಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ವಾಂತಿ, ನಿಶಕ್ತಿ, ಅತಿಸಾರ, ಓದಿನಲ್ಲಿ ಏಕಾಗ್ರತೆ ಕೊರತೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮಕ್ಕಳು ಆರು ತಿಂಗಳಿಗೊಮ್ಮೆ ಜಂತು ಹುಳು ಮಾತ್ರೆ ತೆಗೆದುಕೊಳ್ಳಬೇಕು. ಜೊತೆಗೆ ಸೋಂಕು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ತೆಗೆದುಕೊಳ್ಳುವ ಮುನ್ನ ಸೋಪಚ್ಚಿ ಕೈಗಳನ್ನು ತೊಳೆದುಕೊಳ್ಳಬೇಕು. ಸ್ವಚ್ಚತೆ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಪೂರ್ವ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟ್ ಚಂದ್ರಶೇಖರಯ್ಯ ಎಂ ಮಾತನಾಡಿ, ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಯಾದಲ್ಲಿ ಅಭಿವೃದ್ದಿ ಸಾಧ್ಯವಾಗುತ್ತದೆ. ಜಂತು ಹುಳುಗಳು ಪರಾವಲಂಬಿ ಜೀವಿಯಾಗಿದ್ದು ಇವು ಮೂಲ ಜೀವವನ್ನು ಬೆಳೆಯಲು ಬಿಡುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಬಯಲು ಶೌಚ ನಿಲ್ಲಿಸಬೇಕು. ಯಾಕೆಂದರೆ ಕಾಲಿನ ಮೂಲಕ, ತರಕಾರಿ, ಗಾಳಿ ಮೂಲಕ ಜಂತು ದೇಹ ಪ್ರವೇಶಿಸಿ ನಮ್ಮ ದೇಹದ ಪೌಷ್ಟಿಕಾಂಶವನ್ನೆಲ್ಲ ಹೀರಿಕೊಂಡು ಬೆಳೆಯುತ್ತಾ ನಮಗೆ ರಕ್ತಹೀನತೆ ಉಂಟು ಮಾಡುತ್ತದೆ. ಆದ್ದರಿಂದ ಸ್ವಚ್ಚತೆಯನ್ನು ಕಾಪಾಡುವುದು ಬಹು ಮುಖ್ಯ ಶುಚಿತ್ವ ದೈವತ್ವಕ್ಕೆ ಸಮಾನವೆಂದು ನಡೆಯಬೇಕು. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದ್ದು, ಮಹಿಳೆ ಸುಶಿಕ್ಷಿತರಾಗಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಕ್ಕಳಲ್ಲಿ ಮನೆಯಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆಂದರು.
ಆರ್‌ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 470316 ಮಕ್ಕಳು ನೋಂದಣಿಯಾಗಿದ್ದು, ಇಂದು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಇಂದು ಬಿಟ್ಟು ಹೋದ ಮಕ್ಕಳಿಗೆ ದಿ: 16-12-2024 ರಂದು ಮಾಪ್-ಅಪ್-ರೌಂಡ್‌ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು.
ವಿಶ್ವದಲ್ಲಿ 150 ಕೋಟಿ, ಭಾರತದಲ್ಲಿ 61 ಕೋಟಿಗೂ ಹೆಚ್ಚು ಜನ ಜಂತು ಹುಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಂತು ಹುಳು ನಮ್ಮಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕುಂಠತವಾಗಲು ಕಾರಣವಾಗುತ್ತದೆ. ಆದ್ದರಿಂದ ಇದರ ನಿವಾರಣೆ ಅತಿ ಅಗತ್ಯವಾಗಿದೆ. ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವಲ್ಲಿಯೂ ಜಂತು ಹುಳು ನಿವಾರಣೆ ಕಾರ್ಯಕ್ರಮ ಪೂರಕವಾಗಿದೆ. 2015 ರಲ್ಲಿ ರಾಜ್ಯದಲ್ಲಿ ನಡೆದ ಸಮೀಕ್ಷೆ ಯೊಂದರ ಪ್ರಕಾರ 19 ವರ್ಷದೊಳಗಿನ ಶೇ. 49 ಮಕ್ಕಳು ಜಂತುಹುಳಿವಿನಿಂದ ರಕ್ತಹೀನತೆಯಿಂದ ಬಳಲುತ್ತಿದ್ದರು. 2015 ರಿಂದ ಪ್ರತಿ ವರ್ಷ ಎರಡು ಬಾರಿ ಜಂತುಹುಳು ನಿವಾರಣಾ ಹುಳು ಮಾತ್ರೆ ನೀಡುತ್ತಾ ಬಂದಿದ್ದು, ಸೋಂಕಿನ ಪ್ರಮಾಣ ಶೇ.022 ಗೆ ಇಳಿಸಲಾಗಿದೆ. ಜಂತು ಹುಳು ಆಗದಂತೆ ಮುಂಜಾಗ್ರತೆ ವಹಿಸಬೇಕು. ಊಟಕ್ಕೂ ಮುನ್ನ ಸೋಪು ಹಚ್ಚಿ ಕೈಗಳನ್ನು ಸ್ವಚ್ವ ಮಾಡಿಕೊಳ್ಳಬೇಕು. ಉಗುರು ಕಟ್ ಮಾಡಿಕೊಳ್ಳಬೇಕು, ಬಯಲು ಮಲ ವಿಸರ್ಜನೆ ನಿಲ್ಲಿಸಿ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ಡಿಎಲ್ ಓ ಡಾ.ಕಿರಣ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್, ಟಿಹೆಚ್‌ಓ ಡಾ.ಚಂದ್ರಶೇಖರ್, ರೋಟರಿ ಪೂರ್ವ ಖಜಾಂಚಿ ವಿಜಯಕುಮಾರ್, ರೋಟರಿ ಪೂರ್ವ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ಸೂರ್ಯನಾರಾಯಣ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ ಸ್ವಾಗತಿಸಿದರು.

ರೋಟರಿ ಪೂರ್ವ ಶಿಕ್ಷಣ ಕಾರ್ಯದರ್ಶಿ ರಾಮಚಂದ್ರ ಎಸ್.ವಿ ವಂದಿಸಿದರು.