Klive Special Article ಅಜಂತಾ ಗುಹಾ ಸಮುಚ್ಚಯ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರ (ಹಿಂದಿನ ಹೆಸರು-ಔರಂಗಾಬಾದ್)
ಜಿಲ್ಲೆಯಲ್ಲಿದೆ.
ಅಲ್ಲಿಗೆ ಹೋಗುವುದೂ ಚಾರಣಿಗರಿಗೆ ಬಹಳ ಇಷ್ಟವಾದ ಸಂಗತಿ. ಬೌದ್ಧಧರ್ಮದ ಮೇರುಕಾಲದಲ್ಲಿ ವಿಜೃಂಭಿಸಿದ ತಾಣವಿದು. ಬೌದ್ಧ ಧರ್ಮ
ಕ್ಷೀಣಿಸುತ್ತಿದ್ದಂತೆಯೇ ಈ ಗುಹೆಗಳು ನಿರ್ಲಕ್ಷಿಸಲ್ಪಟ್ಟವು.
ಬೌದ್ಧ ಸಮುದಾಯಕ್ಕೆ ಈಗಲೂ
ಪೂಜನೀಯ ಯಾತ್ರಾ ಸ್ಥಳ. ವಿಶ್ವ ಪಾರಂಪರಿಕ ತಾಣವಾಗಿ 1983 ರಲ್ಲಿ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾಗಿದೆ. ತಾಣದ ಕ್ರಮಾಂಕ 242..
ಕ್ರಿಶ 1819 ಸುಮಾರಿನಲ್ಲಿ ಇದನ್ನ
ಪತ್ತೆಮಾಡಲಾಯಿತು.. ಬ್ರಿಟಿಷ್ ಬೇಟೆಗಾರರ ತಂಡ ಅಲ್ಲಿಗೆ ಬಂದಾಗ ದಟ್ಟ ಕಾಡಿನ ನಡುವೆ ಈ ಗುಹೆ ಕಣ್ಸೆಳೆಯಿತು. ಕಣಿವೆಯಾಳದಲ್ಲಿ ನದಿ ಜುಳಜುಳ ಹರಿಯುತ್ತಿತ್ತು. ಹುಲಿಬೇಟೆಗೆ ಬಂದ ತಂಡ ಸ್ಥಳದ ಗುರುತಿಗೆ “ಟೈಗರ್ ರಿವರ್” ಅಂತ ಕರೆದರು.ಅದು ಮರಾಠಿಯಲ್ಲಿ “ ವಾಘೋರು” ನದಿ
ಆಯಿತು.
ಮೊದಲಿಗೆ ಬೇಟೆಯ ತಂಡಕ್ಕೆ ಕಂಡದ್ದು ಗುಹಾ ಸಮುಚ್ಚಯದ 10 ನೇ ಗುಹೆಯ ಕಮಾನು. ಆಗ ಹೈದ್ರಾಬಾದಿನ ನಿಜಾಮರಿಗೆ ವರದಿಮಾಡಿದರಂತೆ.
ಹಿನ್ನೆಲೆ..
ಗುಹೆಯ ನಿರ್ಮಾಣ ಮತ್ತು ಕೆತ್ತನೆಯು ಕ್ರಿಪೂ 200 ರಿಂದ 650 ನೇ ಶತಮಾನದಷ್ಟು ಪುರಾತನ ಎನ್ನಲಾಗುತ್ತದೆ. ಬೌದ್ಧ ಧರ್ಮದ ಉಚ್ಚ್ರಾಯದ ಕಾಲಕ್ಕೆ ಸಂಬಂಧಿಸಿವೆ. ಆಗಿನ ಸಾತವಾಹನರು ಮತ್ತು ವಾಕತಾಕರು ಹಿಂದುಮತ್ತು ಬೌದ್ಧ ಧರ್ಮದ ಪೋಷಕರಾಗಿದ್ದರು.
ಇವು ಬುದ್ಧನೇ ಅಲ್ಲದೇ ಗುಹೆಯ ಒಳಗಿನ ಬುದ್ದನ ಜಾತಕಕತೆಗಳ ಆಧರಿಸಿ ರಚಿಸಿರುವ ಬಣ್ಣದ ಚಿತ್ರಗಳಿಂದ ಪ್ರಸಿದ್ಧವಾಗಿದೆ
.
Klive Special Article ಒಟ್ಟು 30 ಗುಹೆಗಳಿವೆ. ಅದರಲ್ಲಿ ಮೊದಲ ಐದು ಗುಹೆಗಳು ಚೈತ್ಯಗಳು( ಅಂದರೆ ದೇಗುಲ)
ಉಳಿದ 25 ವಿಹಾರ ಮತ್ತು ಭಿಕ್ಷುಗಳಿಗೆ ಸಂಬಂಧಿಸಿವೆ.
ಇವುಗಳಲ್ಲಿ 8,9,10,12,13 ಮತ್ತು 30 ನೇ ಗುಹೆಗಳು ಹೀನಾಯಾನ ಪಂಥಕ್ಕೆ ಸೇರಿದವು.ಮಿಕ್ಕವು ಮಹಾಯಾನ ಪಂಥಕ್ಕೆ ಸೇರಿದವುಗಳಾಗಿವೆ.
ಹೀನಾಯಾನ ಪರಂಪರೆಯಲ್ಲಿ
ಬುದ್ದ ನೇರವಾಗಿ ಬಿಂಬಿತನಾಗಿಲ್ಲ.
ಕೇವಲ ಸ್ತೂಪ,ಬೋಧಿವೃಕ್ಷ ಸಂಕೇತಗಳ ಮೂಲಕ ಬುದ್ಧನ ಅಸ್ತಿತ್ವ ವ್ಯಕ್ತವಾಗಿದೆ. ನಂತರದಲ್ಲಿ
ಮಹಾಯಾನದಲ್ಲಿ ಬುದ್ಧನಿಗೆ ಪ್ರತಿಮಾರಾಧನೆ ಸಂದಿದೆ.
ಬುದ್ಧನ ಜಾತಕ ಕತೆಗಳನ್ನ ಇಲ್ಲಿ ಚಿತ್ರಿಸಲಾಗಿದೆ.
ಗುಹೆಯ ಗೋಡೆ ಮತ್ತು ಚಾವಣಿಗಳ ಒಳಮುಖದಲ್ಲಿನ
“ವರ್ಣ ಭಿತ್ತಿಚಿತ್ರಗಾರಿಕೆ “ ಯಿಂದ
ಗುಹಾ ಸಮುಚ್ಚಯ ಜಗದ್ವಿಖ್ಯಾತವಾಗಿದೆ. ಸಂಪೂರ್ಣ ಬೃಹತ್ ಏಕಶಿಲಾ ಬೆಟ್ಟವನ್ನ ಆಗಿನ ಕಾಲದಲ್ಲಿ ಹೇಗೆ ಹುಡುಕಿದರು?
ಅಲ್ಲಿ ಬಂಡೆಗಳನ್ನ ಎಂತಹ ಸಲಕರಣೆಗಳಿಂದ ಕೊರೆದರು? ಶಿಲ್ಪಕಲಾವಿದರು ಯಾರು? ಅಲ್ಲಿ ಭೌದ್ಧಭಿಕ್ಷುಗಳ ದಿನಚರಿಹೇಗಿತ್ತು?
ಅದೊಂದೇ ಅಲ್ಲ ಭಿತ್ತಿಚಿತ್ರ ಮತ್ತು ಚಾವಣಿಚಿತ್ರಗಳನ್ನ ಹೇಗೆ ಬಿಡಿಸಿದರು? ಬಣ್ಣಗಳನ್ನ ಹೇಗೆ ತಯಾರಿಸಿದರು? ಚಿತ್ರಗಳಲ್ಲಿ ಹೇಗೆ ತುಂಬಿದರು? ಆಗ ಯಾವ ತಾಂತ್ರಿಕತೆ ಇತ್ತು? ಇತ್ಯಾದಿಗಳ
ಬಗ್ಗೆ ಇಂದಿನ ಐಟಿ-ಬಿಟಿ ಯುಗದ ನಾವು ಉತ್ತರ ಹುಡುಕುವಲ್ಲಿ
ತಡಬಡಾಯಿಸಿ ಬಿಡುವಂತಾಗುತ್ತದೆ. ಸಂಶೋಧಕರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಜವಾಹರ ಲಾಲ್ ನೆಹರು ಅವರ ಉಲ್ಲೇಖದಂತೆ
“ಇಲ್ಲಿ ಬಹುತೇಕ ಮಹಿಳೆಯರ ಚಿತ್ರಗಳಿವೆ, ಸುಂದರ ರಾಜಕುಮಾರಿಯರು, ಗಾಯಕಿಯರು, ನರ್ತಕಿಯರು, ಕುಳಿತಿರುವ ಮತ್ತು ನಿಂತಿರುವ,ತಮ್ಮನ್ನು ಅಲಂಕರಿಸಿಕೊಳ್ಳುತ್ತಿರುವ ಅಥವಾ ಮೆರವಣಿಗೆಯಲ್ಲಿ ಹೊರಟಿರುವ ಭಂಗಿಗಳಲ್ಲಿವೆ. ಇದರಿಂದಾಗಿ
ಅಜಂತಾದ ಸ್ತ್ರೀ ಚಿತ್ರಗಳು ಜಗತ್ಪ್ರಸಿದ್ಧ. ಆ ವರ್ಣಚಿತ್ರಕಾರ ಭಿಕ್ಷುಗಳ (ಸನ್ಯಾಸಿಗಳು) ಜಗತ್ತನ್ನು ಮತ್ತು ಜೀವನದ ಚಲನೆಯ ನಾಟಕವನ್ನು ಎಷ್ಟು ಚೆನ್ನಾಗಿ ತಿಳಿದಿದ್ದರು ಅನಿಸುತ್ತದೆ, ಅವರು ಬೋಧಿಸತ್ವನನ್ನು ಆತನ ಶಾಂತಮುದ್ರೆ ಮತ್ತು ಇತರ ಲೌಕಿಕ ಗಾಂಭೀರ್ಯದಲ್ಲಿ ಚಿತ್ರಿಸಿದಂತೆಯೇ ಅವರು ಅದನ್ನು ಎಷ್ಟು ಪ್ರೀತಿಯಿಂದ ಚಿತ್ರಿಸಿದ್ದಾರೆ.”
ಎಲ್ಲವನ್ನೂ
ನೋಡಲು ಒಂದೇ ದಿನ ಅಸಾಧ್ಯ.
ಎಲ್ಲಗುಹೆಗಳನ್ನೂ ನೋಡುವ ಕಾತರವಿರುತ್ತದೆ.ಆದರೆ ನಮ್ಮ ಸಮಯ ಮತ್ತು ಚೈತನ್ಯ ಆಧರಿಸಿ
ವೀಕ್ಷಣೆಯ ಆನಂದ ಅನುಭವಿಸಬಹುದು.
ಅಜಂತಾ ಗುಹೆ, ಶಿಲ್ಪ, ಭಿತ್ತಿಚಿತ್ರಗಳು, ಹಾಗೂ ಐತಿಹ್ಯಗಳ
ಬಗ್ಗೆ ಎಷ್ಟು ಬರೆದರೂ ಸಾಲದು.
ನಮ್ಮ ಆಲೋಚನೆಗಳ ಮೂಲಕ
ಅಲ್ಲಿನ ಅಸ್ತಿತ್ವದ ಬಗ್ಗೆ ತೋಚಿದ್ದನ್ನ
ದಾಖಲಿಸಬಹುದಷ್ಟೆ. ಹೇಳುವುದು ಇನ್ನೂ ಉಳಿದಿರುತ್ತದೆ.
ಇಲ್ಲಿನ ಗುಹಾ ಸಮುಚ್ಚಯ.
ಶತಶತಮಾನಗಳಿಂದ ಓರ್ವ ಅವತಾರ ಪುರುಷನ ಪರಂಪರೆಗೆ ಮೂಕಸಾಕ್ಷಿಯಾಗಿ ಕುಳಿತಿವೆ.
ಆ ಭವ್ಯತೆಯೆದುರು ನಾವು ಅನಾಮಿಕರು ಅಷ್ಟೆ.
ನಾನು ನೋಡಿದ ಗುಹೆಗಳಲ್ಲಿ
ಸಭಾಂಗಣದ ರೀತಿಯ ಒಳ ಸ್ಥಳವಿದೆ. ಅಷ್ಟನ್ನು ಕೊರೆದು ಮತ್ತೆ ಒಳಗಡೆ ಗೂಡುಗಳು, ಅದರಲ್ಲಿ ಬುದ್ಧ ವಿಗ್ರಹ, ಜಾತಕ ಕತೆಗಳಿಗೆ ಸಂಬಂಧಿಸಿದ ಕೆತ್ತನೆಗಳಿವೆ.
ಅಚ್ಚರಿಯೆಂದರೆ ಆಗಿನ ಕಾಲದಲ್ಲಿ ರಚಿಸಿದ ವರ್ಣಚಿತ್ರಗಳ ಸರಣಿಯೇ
ಅಲ್ಲಿದೆ. ಗವ್ವೆನ್ನುವ ಕತ್ತಲೆ. ಮಂದದೀಪ ಮಾತ್ರ ಇದೆ.
ಪ್ರವಾಸಿಗರು ಮೊಬೈಲ್ ಒಯ್ಯಬಹುದು. ಆದರೆ ಫ್ಲಾಷ್ ಬಳಸುವಂತಿಲ್ಲ. ವಿಡಿಯೊ ಮಾಡುವಂತಿಲ್ಲ.
Still Photographyಗೆ ಮಾತ್ರ ಅವಕಾಶ.
ಅಲ್ಲಿನ ಸುರಕ್ಷಣಾ ಸಿಬ್ಬಂದಿಯ ಹದ್ದುಗಣ್ಣು ತಪ್ಪಿಸಲು ಕಷ್ಟ.
ಬಹಳ ಜನಪ್ರಿಯವಾಗಿರುವ, ಅಜಂತಾ ಗುಹೆ ಪ್ರಾತಿನಿಧಿಕವೆನಿಸಿರುವ “ಅಪ್ಸರೆ”ಯ ವರ್ಣಚಿತ್ರವನ್ನ ನನ್ನ ಮೊಬೈಲ್ ಶಕ್ತಿಮೀರಿ ಸೆರೆಹಿಡಿದಿದೆ.
ಪ್ರವೇಶಕ್ಕೆ ಮುನ್ನ …
ನಾವು ಅಲ್ಲಿನ ಸ್ಥಳದ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಗೈಡುಗಳು,
ಕಲಾಕೃತಿ ಮಾರಾಟ ಮಳಿಗೆ ಏಜೆಂಟರು, ಪ್ರವಾಸಿ ಮಾಹಿಯ ಪುಸ್ತಕ, ಬಣ್ಣಬಣ್ಣದ ಫೋಟೋ ಆಲ್ಬಂಧಾರಿಗಳು, ಕಲ್ಲುಮಣಿಸರಗಳ ಮಾರಾಟಗಾರರು , ದೀನರು ನಮ್ಮನ್ನ ಸುತ್ತುವರಿದು ಕೋಟೆ ಕಟ್ಟುತ್ತಾರೆ.
ಯಾರಿಗೂ ಮನಸೋಲಬೇಡಿ..
ಗೈಡ್ ಬೇಕೆಂದರೆ ಅಧೀಕೃತ ಬ್ಯಾಡ್ಜ್
ಇರುವವರನ್ನು ಮಾತ್ರ ಗೊತ್ತು ಮಾಡಿಕೊಳ್ಳಬಹುದು. ಕೌಂಟರ್ ಬಳಿ ವಿಚಾರಣೆ ಮಾಡಬಹುದಾಗಿದೆ.
ಸ್ಥಳ ಪ್ರವೇಶದಲ್ಲೇ ನಮಗೆ ಎದುರಾಗುವ ಸವಾಲೆಂದರೆ…ಕಲ್ಲುಗುಡ್ಡದಲ್ಲಿ ಕೆತ್ತಿರುವ ಸೋಪಾನಗಳು.
ಆಗುಂಬೆ ಘಾಟಿಯೇರುವಂತೆ ಹತ್ತಬೇಕು. ಮೆಟ್ಟಿಲು ಬೇಡವೆಂದರೆ ಅನಿತು ದೂರ ಏರುಹಾದಿ
( Ramp) ಇದೆ.
ಕೈಕಾಲು ಘನವಿದ್ದರೆ ಮಾತ್ರ ಗುಹೆಗಳನ್ನ ವೀಕ್ಷಿಸಲು ಸಾಧ್ಯ.
ಜೊತೆಯಲ್ಲಿ ನೀರಿನ ಬಾಟಲಿ ಅಗತ್ಯ.ಏಕೆಂದರೆ ಒಂದೊಂದು ಗುಹೆ ನೋಡಲು ಸುಮಾರು ಹತ್ತುಮೆಟ್ಟಿಲು ಏರಬೇಕು. ಕೈಹಿಡಿದುಕೊಳ್ಳಲು ರೇಲಿಂಗ್ ಇಲ್ಲ.
ಆದರೆ ವಾಪಸಾಗುವ ಹಾದಿ ಬೇರೆ ಮಾಡಿದ್ದಾರೆ. ಅಲ್ಲಿ ಇಳಿಯಲು ಮೆಟ್ಟಿಲುಗಳಿಲ್ಲ.ಕಾಲ್ನಡಿಗೆ ರಸ್ತೆ ಮಾಡಿ ಪ್ರವಾಸೋದ್ಯಮದವರು
ಪುಣ್ಯದ ಕೆಲಸ ಮಾಡಿದ್ದಾರೆ
ಮುಂಜಾಗ್ರತೆಗಳು..
*ಪ್ರವೇಶಕ್ಕೆ ಟಿಕೆಟ್ ಖರೀದಿಸಬೇಕು.
*ಗುಹೆಗಳಿರುವ ಕಣಿವೆಗೆ ಸಾಗಲು
ಸಾರಿಗೆ ಬಸ್ ವ್ಯವಸ್ಥೆ ಇದೆ. ಅದಕ್ಕೂ ಬೇರೆಯಾಗಿ ಟಿಕೆಟ್ ಖರೀದಿಸಬೇಕು.ಹತ್ತು ನಿಮಿಷದಲ್ಲಿ ಗುಹೆಗಳ ಸನಿಹ ತಲುಪಬಹುದು.
*ಅಲ್ಲಿಯೇ ಕ್ಯಾಂಟೀನ್ ಸೌಲಭ್ಯವಿದೆ. ಶಾಖಾಹಾರಿ ಊಟವಿದೆ.
*ಜನಸಂದಣಿಯನ್ನು ತಪ್ಪಿಸಲು ಗುಹೆಗಳಿಗೆ ಮುಂಜಾನೆ ಅಥವಾ ಮಧ್ಯಾಹ್ನ ಭೇಟಿ ನೀಡಿ.
*ನೀರಿನ ಬಾಟಲಿ ಮತ್ತು ಲಘು ತಿಂಡಿಗಳನ್ನು ತೆಗೆದುಕೊಳ್ಳಿ.
ಪ್ರಥಮ ಚಿಕಿತ್ಸಾ ಕಿಟ್ ಮತ್ತು ಅಗತ್ಯ ಔಷಧಿಗಳನ್ನು ತನ್ನಿ.
*ಸೈಟ್ಗೆ ಭೇಟಿ ನೀಡುವಾಗ
ತಲೆಗೆ ಟೋಪಿ ಮತ್ತು ಸನ್‌ಸ್ಕ್ರೀನ್ ತೆಗೆದುಕೊಳ್ಳಿ.
*ಹಗುರವಾದ ಮತ್ತು ಆರಾಮದಾಯಕ ಉಡುಪುಗಳನ್ನು ಧರಿಸಿ.
*ಒಳಗೆ ಗುಹೆಗಳು ತಂಪಾಗಿರಬಹುದು, ಆದ್ದರಿಂದ ಬೆಚ್ಚಗಿನ ಬಟ್ಟೆಗಳನ್ನು ಇರಿಸಿ.
*ಬಂಡೆಗಳ ಮೇಲೆ ಕಾಲ್ನಡಿಗೆಗೆ ಸೂಕ್ತವಾದ ವಾಕಿಂಗ್ ಬೂಟುಗಳನ್ನು ಧರಿಸಿ.
*ನಿಮ್ಮ ಸುತ್ತಮುತ್ತಲಿನ ಬಗ್ಗೆ ಜಾಗರೂಕರಾಗಿರಿ.
ಒಂದು ಗುಹೆಯಿಂದ ಇನ್ನೊಂದಕ್ಕೆ ನಡೆಯುವಾಗ ಮೆಟ್ಟಿಲು ಹಾದಿ ಅಸಮವಾಗಿರುವುದರಿಂದ ನಿಮ್ಮ ಹೆಜ್ಜೆಗಳನ್ನು ನೋಡಿಕೊಂಡು ಸಾಗಿರಿ..
*ಛಾಯಾಗ್ರಹಣವನ್ನು ಅನುಮತಿಸಲಾಗಿದೆ, ಆದರೆ ನೀವು ಗುಹೆಗಳಲ್ಲಿ ಫ್ಲ್ಯಾಷ್ ಅನ್ನು ಬಳಸಬಾರದು.
*ನೀವು ಭೇಟಿ ನೀಡುವ ಮೊದಲು ಅಜಂತಾ ಗುಹೆಗಳ ಬಗ್ಗೆ ಓದಿ.
*ಅಜಂತಾ ಗುಹೆಗಳ ಪ್ರಾಮುಖ್ಯತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಿರಿ.
ಹೋಗುವುದು ಹೇಗೆ?
ನಮ್ಮ ರಾಜ್ಯದಿಂದ ಹೋಗುವವರು
(ಔರಂಗಾಬಾದ್ ) ಛತ್ರಪತಿ ಸಾಂಭಾಜಿನಗರ ತಲುಪಬೇಕು. ಅಲ್ಲಿಂದ 93 ಕಿಮೀ ದೂರವಿದೆ.
ವೀಕ್ಷಣೆಗೆ ಕನಿಷ್ಠ ಮೂರುಗಂಟೆ ಬೇಕು. ಆದ್ದರಿಂದ ಛತ್ರಪತಿ ಸಾಂಬಾಜಿನಗರದಲ್ಲಿ ಹಿಂದಿನ ದಿನ ತಂಗುವುದು ಉತ್ತಮ
ಬೆಳಿಗ್ಗೆಯೇ ಹೊರಡಬೇಕು.
ಬಸ್ ಗಳನ್ನ ನಂಬಿಕೊಂಡರೆ ಸಮಯ ಹೊಂದಾಣಿಕೆಯಾಗದು.
ಟ್ಯಾಕ್ಸಿ ತುಂಬಾ ಅನುಕೂಲ.
ರೈಲುಮೂಲಕ ಆದರೆ (ಔರಂಗಾಬಾದ್) ಛತ್ರಪತಿಸಾಂಬಾಜಿ ನಗರ ಸನಿಹದ ನಿಲ್ದಾಣ.
ಪುಣೆ,ಮುಂಬೈಗೆ ಸುಗಮ ಸಂಪರ್ಕವಿದೆ.
ವಿಮಾನದ ಮೂಲಕ ಆದರೆ (ಔರಂಗಾಬಾದ್ ) ಛತ್ರಪತಿ ಸಾಂಭಾಜಿ ನಗರಕ್ಕೆ ಬರಬೇಕು.
ಭೇಟಿಗೆ ಸೂಕ್ತ ಕಾಲ..
ಚಳಿಗಾಲ,ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಹಿತಕರ.
ಜೂನ್ ನಿಂದ ಸೆಪ್ಟೆಂಬರ್ ತಕ್ಕಮಟ್ಟಿಗೆ ಅಡ್ಡಿಯಿಲ್ಲ.
ಅಡ್ಡಾದಿಡ್ಡಿ ಮಳೆ ಸುರಿದರೆ ಮಾತ್ರ
ನಡಿಗೆಗೆ ಕಷ್ಟಸಾಧ್ಯವಾಗಬಹುದು.
ಪ್ರವಾಸಿ ಲೇಖನ
- ಡಾ.ಸುಧೀಂದ್ರ.
-ಪ್ರಧಾನ ಸಂಪಾದಕ.
ಕೆ ಲೈವ್.ನ್ಯೂಸ್
