Tuesday, March 10, 2026
Tuesday, March 10, 2026
Home Blog Page 383

Sri Adhichunchanagiri Mahasamsthana Math ಮಾರ್ಚ್ 7 ರಿಂದ 15 ವರೆಗೆ ಶ್ರೀಆದಿಚುಂಚನಗಿರಿ ಕ್ಷೇತ್ರದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ

0

Sri Adhichunchanagiri Mahasamsthana Math ಮಾರ್ಚ್ 7 ರಿಂದ ಮಾರ್ಚ್ 15 ರ ವರೆಗೆ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮಿಕ ,ಸಾಮೂಹಿಕ ವಿವಾಹ, ಕೃಷಿ ಜಾಗೃತಿ, ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಮತ್ತು ವಿಚಾರಗೋಷ್ಠಿಗಳ ಕಲರವ ನಡೆಯಲಿದೆ.

ಸುಮಾರು 2000 ವರ್ಷಗಳ ಪ್ರಾಚೀನ ಗುರು ಪರಂಪರೆಯನ್ನು ಹೊಂದಿರುವ ಶ್ರೀಕ್ಷೇತ್ರವು ಮಯೂರ ಗಳ ತಾಣವಾಗಿದ್ದು, “ಮಯೂರ ವನ “ಎಂದು ಕರೆಯುವರು.ಪುರಾಣದಲ್ಲಿ ಉಲ್ಲೇಖವಿರುವಂತೆ ಶ್ರೀ ಆದಿಚುಂಚನಗಿರಿ ಪೀಠವು ಸ್ಥಾಪನೆಯಾದುದು ತ್ರೇತ್ರಾಯುಗದಲ್ಲಿ ಪರಮೇಶ್ವರನೇ ಈ ಪೀಠದ ಸ್ಥಾಪಕನು. ಇಲ್ಲಿ ಸಾಕ್ಷಾತ್ ಪರಶಿವನೇ ಶ್ರೀ ಗಂಗಾಧರೇಶ್ವರನಾಗಿ ನೆಲೆ ನಿಂತಿದ್ದಾನೆ. ನಾಥ ಸಂಪ್ರದಾಯದ ದ್ವಾದಶ ಪೀಟಗಳಲ್ಲಿ ಆದಿ ಪೀಠವೇ ಶ್ರೀ ಆದಿಚುಂಚನಗಿರಿ ಪೀಠ. ಶ್ರೀ ಮಠದ ಗುರುಪರಂಪರೆಯು ದೀರ್ಘವಾದುದು,ಇದುವರೆಗೂ 72 ಧರ್ಮಗುರುಗಳು ಮಠಾಧಿಪತಿಗಳಾಗಿದ್ದಾರೆ.

71ನೇ ಪೀಠಾಧ್ಯಕ್ಷರಾದ ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮಿಗಳಿಂದಾಗಿ ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಅಲ್ಲದೆ ಮಕ್ಕಳ ವಸತಿ ಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಿ, ನಿರ್ಗತಿಕರ ಬಗ್ಗೆ ವಿಶೇಷ ಮಮತೆಯನ್ನು ತೋರಿದ್ದಾರೆ.

ಜಾತ್ರೆ ಎಂದೊಡನೆ ಕಣ್ಮುಂದೆ ಬರುವುದು ಹೋಮ-ಹವನ,ಮೆರವಣಿಗೆ ರಥೋತ್ಸವ ಅನ್ನದಾಸೋಹ ಇತ್ಯಾದಿ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ಆದಿಚುಂನಗಿರಿ ಜಾತ್ರೆಯೂ ಮೇಲಿನ ಅಂಶಗಳೊಂದಿಗೆ ವೈಚಾರಿಕತೆ,ಕೃಷಿ ಜಾಗೃತಿ ಮಹತ್ವವನ್ನು ಸಾರುತ್ತಾ ಸಮಾಜ ಮುಖಿಯಾಗಿದೆ. ಇಲ್ಲಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ನಾಡಿನ ಜನರಿಗೆ ವೈಚಾರಿಕತೆ ಮೂಡಿಸುವ ಗೋಷ್ಠಿ, ಕೃಷಿ ಮೇಳ, ಸರಳವಿವಾಹ,ಪೌರಾಣಿಕ ನಾಟಕಗಳ ಮಹತ್ವ, ಜ್ಞಾನ-ವಿಜ್ಞಾನ ನಡುವಿನ ಸಂಬಂಧವನ್ನು ತಿಳಿಸುತ್ತದೆ.

ಜಾತ್ರೆಗೆ ಹೊಸ ಭಾಷ್ಯವನ್ನು ಬರೆಯುವ ಮೂಲಕ ಜನಪರ ಜಾತ್ರೆಯನ್ನಾಗಿಸುವ ನಿಟ್ಟಿನಲ್ಲಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಆದಿಚುಂಚನಗಿರಿ ಜಾತ್ರೆಗೆ ವೈಶಿಷ್ಟ ತಂದು ಕೊಡುವರು. ರೈತ ಸಮುದಾಯ,ಇದು ರೈತರ ಜಾತ್ರೆಯೆಂದು ಕರೆಯಿಸಿಕೊಳ್ಳುತ್ತದೆ.

ಆದ್ದರಿಂದಲೇ ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಜಾತ್ರಾಮಹೋತ್ಸವವನ್ನು ರೈತರ ಹೆಸರಿನಲ್ಲಿ ಭೈರವೈಕ್ಯಬಾಲಗಂಗಾಧರನಾಥ ಸ್ವಾಮೀಜಿ ನಡೆಸುತ್ತಿದ್ದರು. ಅದನ್ನ ಈಗಿನ ಸ್ವಾಮೀಜಿಯವರು ಮುಂದುವರಿಸುವ ಮೂಲಕ ಜಾತ್ರೆಯ ಸೊಬಗನ್ನು ಹೆಚ್ಚಿಸಿದ್ದಾರೆ.

ಇಂದಿಗೂ ಪೂಜ್ಯ ಸ್ವಾಮಿಗಳವರ ಅನುಪಸ್ಥಿತಿಯಲ್ಲಿ ಆ ಎಲ್ಲಾ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ.ಸ್ವಾಮೀಜಿಯವರು ಇಲ್ಲದಿರಬಹುದು, ಆದರೆ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯದ ಯಶಸ್ಸಿನ ಹಿಂದೆ ಸ್ವಾಮಿಗಳವರ ಉಪಸ್ಥಿತಿಯನ್ನು ಇಂದಿಗೂ ಕಾಣಬಹುದು.

“ಶ್ರೀ ಕ್ಷೇತ್ರಆದಿಚುಂಚನಗಿರಿಯಲ್ಲಿ ಮಾರ್ಚ್ 7ರಿಂದ ಮಾರ್ಚ್ 15ರ ವರೆಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ”
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜೀಗಳವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಕ್ಷೇತ್ರ ಆದಿಚುಂನಗಿರಿ ಮಹಾಸಂಸ್ಥಾನದಲ್ಲಿ ಮಾರ್ಚ್,7 ರಿಂದ ಮಾರ್ಚ್ 15ರ ವರೆಗೆ 9 ದಿನಗಳ ಕಾಲ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು,ಈ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಹಲವು ಧಾರ್ಮಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯಲಿ ಎಂಬ ಉದ್ದೇಶದಿಂದ ಮಾರ್ಚ್ 7ರ ಬೆಳಿಗ್ಗೆ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ನಾಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಮಾರ್ಚ್ 8ರ ಬೆಳಿಗ್ಗೆ 10 ಗಂಟೆಗೆ ದೇಶಿ ಕ್ರೀಡೆಗಳು, ಲಗೋರಿ, ರಂಗೋಲಿ ಸ್ಪರ್ಧೆ ಹಾಗೂ ಮ್ಯಾರಥಾನ್ ಪಂದ್ಯಾವಳಿ ಉದ್ಘಾಟನೆ, ರಾತ್ರಿ 6 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ, ಮಾರ್ಚ್ 9 ರಂದು ಬೆಳಿಗ್ಗೆ,10 ಗಂಟೆಗೆ ಕೃಷಿ ಉಪನ್ಯಾಸ ಮಾಲಿಕೆ, ರಾತ್ರಿ 7:00 ಗಂಟೆಗೆ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 10 ರ ಬೆಳಿಗ್ಗೆ 9.30 ಗಂಟೆಗೆ ಸರಳ ಸಾಮೂಹಿಕ ವಿವಾಹ,ಹಾಗೂ ಹಿರಿಯ ದಂಪತಿಗೆ ಸನ್ಮಾನ ಸಮಾರಂಭ,ಸಂಜೆ 7 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ. ಮಾರ್ಚ್ 11 ರ ಬೆಳಿಗ್ಗೆ 7:30 ಕ್ಕೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಶ್ರೀ ಗಂಗಾದೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ, ಸಂಜೆ 7 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ.
ಮಾರ್ಚ್ 13 ರ ಸಂಜೆ 06 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಜ್ವಾಲಾ ಪೀಠಾರೋಹಣ, ಸಿದ್ದ ಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ 8:00 ಗಂಟೆಗೆ ಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ .
ಮಾರ್ಚ್ 14ರ ಸಂಜೆ :6:30 ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. ರಾತ್ರಿ 08 ಕ್ಕೆ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ,ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಂತರ ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
ಮಾ 14 ರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿಯ ಮಹಾರಥೋತ್ಸವ ಹಾಗೂ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಯವರ ಅಡ್ಡಪಾಲಕಿ ಉತ್ಸವ ಬಹಳ ವಿಜ್ರಂಭಣೆಯಿಂದ ಜರುಗಲಿದೆ. ನಾ…

ಅನಧೀಕೃತ ಜೇನುತುಪ್ಪ & ವಿನೆಗರ್ ತಯಾರಿಕಾ ಘಟಕದ ಮೇಲೆ ದಿಢೀರ್ ದಾಳಿ

0

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲ್ಲತ್ತಿಯ ಕೆಮಿಕಲ್ ಫ್ಯಾಕ್ಟರಿಗೆ ಅಧಿಕಾರಿಗಳು ದಾಳಿ ನಡೆಸಿದರು.

ಸಾಗರದ ಹುಲ್ಲತ್ತಿ ಗ್ರಾಮದಲ್ಲಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅನಧಿಕೃತವಾಗಿ ಜೇನುತುಪ್ಪ ಹಾಗೂ ವಿನೆಗರ್ ತಯಾರು ಮಾಡಲಾಗುತ್ತಿತ್ತು.

ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಸಾಗರ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು..

ಯಾವುದೇ ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಆಹಾರ ಪದಾರ್ಥಗಳು ತಯಾರು ಮಾಡಬಾರದು ಎಂಬ ಕಾನೂನು ಇದ್ದರೂ ಸಹ ಆಹಾರ ವಸ್ತುಗಳ ತಯಾರಿಕೆ ಆರೋಪ ಕೇಳಿಬಂದಿದೆ .

ಹುಲ್ಲತಿ ಗ್ರಾಮದ ಶ್ರೀಧರ ಹೆಗಡೆ ಎಂಬ ವ್ಯಕ್ತಿ ಶ್ವೇತಾ ಕೆಮಿಕಲ್ ಇಂಡಸ್ಟ್ರೀಸ್ ಹಾಗೂ ಶ್ರೇಯಸ್ ಹೋಂ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿ ಈ ಕೆಮಿಕಲ್ ಫ್ಯಾಕ್ಟರಿ ಇದೆ.

ಕಳೆದ 28 ವರ್ಷಗಳಿಂದ ಈ ಘಟಕದಲ್ಲಿ ಕೆಮಿಕಲ್ ವಸ್ತು ತಯಾರಿಕೆ ಮಾಡಲಾಗುತ್ತಿತ್ತು.

ಈಗ ಜೇನುತುಪ್ಪ ಹಾಗೂ ಗೋಬಿ ಮಂಚೋರಿ, ಫ್ರೈಡ್ ರೈಸ್ ಗೆ ಉಪಯೋಗಿಸುವ ವೆನಿಗರ್ ತಯಾರಿಕೆ

ಫ್ಯಾಕ್ಟರಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಜೇನುತುಪ್ಪ ಹಾಗೂ ಗೋಬಿ ಮಂಚೋರಿ, ಫ್ರೈಡ್ ರೈಸ್ ಗೆ ಉಪಯೋಗಿಸುವ ವೆನಿಗರ್ ತಯಾರಿಕೆ ನಡೆಯುತ್ತಿರುವ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ

ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಸಾಗರ ತಹಸಿಲ್ದಾರ್ ಕಚೇರಿಯ ಅಧಿಕಾರಿಗಳು ದಿಢೀರ್ ದಾಳಿ
ನಡೆಸಿ
ಫ್ಯಾಕ್ಟರಿಯಲ್ಲಿ ಇದ್ದ ಜೇನುತುಪ್ಪ ಹಾಗೂ ವಿನೆಗರ್ ಸೇರಿದಂತೆ ವಿವಿಧ ಪದಾರ್ಥಗಳ ಸ್ಯಾಂಪಲ್ಪಡೆದಿದ್ದಾರೆ.

Samarpan Trust ಮಾರ್ಚ್ 15 & 16 ಸಮರ್ಪಣ್ ಟ್ರಸ್ಟ್ ವತಿಯಿಂದ ಸುಗಮ ಸಂಗೀತ ಕಾರ್ಯಾಗಾರ

0

Samarpan Trust ಉದಯೋನ್ಮುಖ ಗಾಯಕರಾಗಲು ಬಯಸುವ ಸಂಗೀತಾಸಕ್ತರಿಗೆ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆಯವರ ಸಂಗೀತ್ ಸಮರ್ಪಣ್ ಟ್ರಸ್ಟ್ ಉತ್ತಮ ಅವಕಾಶವನ್ನು ತೆರೆದಿಟ್ಟಿದ್ದು, ಇದೇ ಮಾ. 15ರ ಶನಿವಾರ, 16ರ ಭಾನುವಾರ ಆರ್‌ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ವನ್ನು ಆಯೋಜಿಸಲಾಗುತ್ತಿದೆ. ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಪುತ್ತೂರು ನರಸಿಂಹ ನಾಯಕ್, ಪ್ರಸಿದ್ಧ ಪಕ್ಕವಾದ್ಯ ಕಲಾವಿದ ಮ್ಯಾಂಡೋಲಿನ್ ಪ್ರಸಾದ್ ಹಾಗೂ ಟ್ರಸ್ಟ್ನ ಗಾಯಕಿ ಸುರೇಖಾ ಹೆಗಡೆಯವರು ಈ ಸುಗಮ ಸಂಗೀತ ಕಲಿಕಾ ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಎಲ್ಲ ವಯೋಮಾನದ ಜಿಲ್ಲೆಯ ಗಾಯಕರಾಗಲು ಬಯಸುವ ಸಂಗೀತಾಸಕ್ತರೆಲ್ಲರಿಗೂ ಅವಕಾಶ ತೆರೆದಿದೆ. ಎರಡು ದಿನಗಳ ಈ ಶಿಬಿರಕ್ಕೆ ಒಬ್ಬರಿಗೆ 500ರೂ.ಗಳ (ಮಧ್ಯಾಹ್ನದ ಊಟ ಸೇರಿ) ಶುಲ್ಕ ನಿಗದಿಪಡಿಸಲಾಗಿದೆ.

Samarpan Trust ಆಸಕ್ತರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಳ್ಳುವAತೆ ಕೋರಲಾಗಿದ್ದು, ವಿವರಗಳಿಗೆ 99803 15679 / 94816 62308ರಲ್ಲಿ ಸಂಪರ್ಕಿಸಬಹುದು.

LB College Sagara ನನ್ನ ಕಾಲ ಮೇಲೆ ನಾನು ನಿಲ್ಲಬೇಕೆಂಬ ಆಸಕ್ತಿ ವಿದ್ಯಾರ್ಥಿ‌ಜೀವನದಲ್ಲೇ ಬೆಳೆಸಿಕೊಳ್ಳಬೇಕು- ಡಾ.ಆರ್.ಸಿ.ಜಗದೀಶ್

0

LB College, Sagara ಗ್ರಾಮೀಣ ಉತ್ಪನ್ನಗಳನ್ನು ಆಧರಿಸಿ ಮಲೆನಾಡಿನಲ್ಲಿ ವೈವಿಧ್ಯಮಯ ಉದ್ದಿಮೆಗೆ ವಿಫುಲ ಅವಕಾಶಗಳಿವೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ್ ಅಭಿಪ್ರಾಯಪಟ್ಟರು.

ಸಾಗರ ಪಟ್ಟಣದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ಕಾಲೇಜಿನ ದೇವರಾಜ ಅರಸು ಕಲಾಕೇಂದ್ರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಾಣಿಜ್ಯ ವಿಭಾಗ ಮತ್ತು ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಯಾವುದೇ ಉದ್ದಿಮೆಯ ಯಶಸ್ಸಿಗೆ ಕೌಶಲ್ಯ ಅತ್ಯಗತ್ಯ ಎಂದರು.
ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬ ಆಸಕ್ತಿ ಕಾಲೇಜು ದಿನಗಳಲ್ಲಿ ಮೊಳಕೆಯೊಡೆಯಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ವಿಶೇಷ ಗುಣಗಳಿರುತ್ತವೆ. ಅವರ ಆಸಕ್ತಿಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪೋಷಣೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ಉದ್ದಿಮೆ ಮಾಡಬೇಕು ಎಂಬ ಗುರಿ ಇರಬೇಕು. ದೇಶದಲ್ಲಿ ಪ್ರತಿವರ್ಷ 7 ಕೋಟಿ ವಿದ್ಯಾರ್ಥಿಗಳು ಹೊರಬರುತ್ತಾರೆ. ಅವರೆಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲವರು ಐಎಎಸ್, ಐಪಿಎಸ್ ಮಾಡುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವೀ ಉದ್ದಿಮೆದಾರರಾಗಲು ಸಾಧಕರ ಸಂಪರ್ಕ, ಕೌಶಲ್ಯ, ಹಣಕಾಸು ಲಭ್ಯತೆ ಇತ್ಯಾದಿ ಹುಡುಕಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಬದಲಾದ ಕಾಲಘಟ್ಟದಲ್ಲಿ ಗೂಗಲ್‍ನಲ್ಲಿ ನಮಗೆ ಬೇಕಾದ ಮಾಹಿತಿ ಸಿಗುತ್ತದೆ. ಉದ್ಯಮ ನಡೆಸಲು ಹಲವಾರು ತರಬೇತಿ ಸಂಸ್ಥೆಗಳೂ ಇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಉಚಿತ ತರಬೇತಿಗೆ ಯೋಜನೆಗಳಿವೆ. ಸರ್ಕಾರದಿಂದಲೂ ಅನೇಕ ಸವಲತ್ತುಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಮಾಹಿತಿ ಕೇಂದ್ರಗಳಿಲ್ಲ. ಕೃಷಿಗೆ ಸಂಬಂಧಿಸಿ 800 ಸ್ಟಾರ್ಟ್‍ಪ್‍ಗಳಿವೆ. ಮಲೆನಾಡಿನಲ್ಲಿ ಹಲಸು, ಅಗರಬತ್ತಿ ತಯಾರಿಕೆ, ಜೇನುಪೆಟ್ಟಿಗೆ ಇಟ್ಟು ತುಪ್ಪ ತಯಾರಿಕೆ, ಬೆಲ್ಲದ ಚಹಾ, ಚಿಕ್ಕಿ ತಯಾರಿಕೆ, ಕಬ್ಬು ಬೆಳೆಯ ಮೌಲ್ಯವರ್ಧನೆ, ಗೇರುಬೀಜ ಪ್ರೊಸೆಸಿಂಗ್, ಗೇರು ಹಣ್ಣಿನಿಂದ ಜ್ಯೂಸ್ ಇತ್ಯಾದಿ ತಯಾರಿಕೆ, ಕುರಿ ಸಾಕಾಣಿಕೆ, ಸಸ್ಯ ನರ್ಸರಿ, ಅಣಬೆ ಉತ್ಪನ್ನ, ವಿವಿಧ ರೀತಿಯ ಅವಲಕ್ಕಿ ತಯಾರಿಕೆ ಹೀಗೆ ವೈವಿಧ್ಯಮಯ ಉದ್ದಿಮೆಗಳಿಗೆ ಅವಕಾಶಗಳಿವೆ. ಕೆಲವು ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಕಂಡುಕೊಳ್ಳಬೇಕು. ಉತ್ತಮ ಕೌಶಲ್ಯದಿಂದ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿ, ಈ ಕಾಲೇಜಿನಿಂದ ಈವರೆಗೆ ಸುಮಾರು 60 ಸಾವಿರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹಲವಾರು ಜನರು ಸ್ವಂತ ಉದ್ದಿಮೆ ಮಾಡಿ ಹತ್ತಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಪ್ರಸ್ತುತ ಈ ವಿದ್ಯಾಲಯದಲ್ಲಿ 2500 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಾವು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ವಿಶ್ವವಿದ್ಯಾಲಯ ಮಟ್ಟದ ಕಾರ್ಯಕ್ರಮ ಮಾಡುವ ಮೂಲಕ ತರಗತಿಯ ಹೊರಗಿನ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದೇವೆ. 60 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿರುವ ಅತ್ಯುತ್ತಮ ಗ್ರಂಥಾಲಯ ಈ ಕಾಲೇಜಿನಲ್ಲಿದೆ. ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ವಾತಾವರಣ ಈ ಶಿಕ್ಷಣ ಸಂಸ್ಥೆಯಲ್ಲಿದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪಡೆದವರು ಸ್ವಯಂ ಉದ್ಯೋಗ ಮಾಡಿ ಹತ್ತಾರು ಜನರಿಗೆ ಉದ್ಯೋಗ ಕೊಡಬೇಕು ಎಂಬ ಗುರಿ ಹೊಂದಬೇಕು. ಕೃಷಿ ವಿಶ್ವವಿದ್ಯಾಲಯವು ವಿವಿಧ ರೀತಿಯ ರೈತಸ್ನೇಹಿ ಸಂಶೋಧನೆ ಕೈಗೊಳ್ಳಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ರೈತಾಪಿ ಕೆಲಸಗಳು ಆಗುವಂತಾಗಬೇಕು. ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಮಾಡುವತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಯಶಸ್ವೀ ಉದ್ದಿಮೆದಾರರಾದ ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಅಬ್ದುಲ್ ಜಲೀಲ್, ಫೆನಿಕ್ಸ್ ಪ್ಯೂರಿಫೈಡ್ ವಾಟರ್‍ನ ಬಿ.ಎ.ಇಂದೂದರ, ಸುಗಂಧಿ ಅಗರಬತ್ತಿಯ ಎಸ್.ಚಂದ್ರಮೋಹನ್, ಶ್ರೀ ರಾಘವೇಂದ್ರ ಮೆಡಿಕಲ್ ಗ್ರೂಪ್‍ನ ರಾಜೇಶ್ ಸಿ.ಆರ್., ಸಹ್ಯಾದ್ರಿ ನರ್ಸರಿಯ ಗಿರೀಶ್ ಹಕ್ರೆ, ಎನ್.ಜಿ.ಪ್ರೈವೇಟ್ ಕೇರ್ ನ ವಾಣಿ ಅರುಣ್, ಸಿರಿ ಫುಡ್ಸ್ ಎಂಡ್ ಬ್ರಿವರೇಜ್‍ನ ಗಿರೀಶ್ ಕೆ.ಎಚ್., ಲಕ್ಸ್ ಇವೆಂಟ್ ಪ್ಲೇನರ್‍ನ ಸಮರ್ಥ ಬಡ್ಕುಮನೆ, ಶ್ರೀ ಸಿದ್ದಿವಿನಾಯಕ ಹೋಮ್ ಕ್ಯಾಟರಿಂಗ್‍ನ ರಾಮಚಂದ್ರ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಆರ್.ಜಯಂತ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು ಹಾಜರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಶ್ ಎ.ಎಸ್. ಸ್ವಾಗತಿಸಿದರು. ಲಕ್ಷ್ಮೀ ಸನ್ಮಾನಿತರನ್ನು ಪರಿಚಯಿಸಿದರು. ಡಾ.ಸುಮುಖ ಪಿ.ಎಸ್. ವಂದಿಸಿದರು. ಡಾ.ರಾಘವೇಂದ್ರ ನಿರೂಪಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ `ಉದ್ದಿಮೆಯಲ್ಲಿ ಎದುರಾಗುವ ತೊಂದರೆಗಳೇನು ?’ ವಿಷಯ ಕುರಿತು ನಾರಿಶಕ್ತಿ ಪ್ರಶಸ್ತಿ ಪುರಸ್ಕೃತ ನೊಮಿಟೊ ಕಾಮದಾರ್ ಮಾತನಾಡಿದರು. ಮಲ್ಲಿಕಾ ಆಟೊ ಸೆಂಟರ್‍ನ ಗುರುಪ್ರಸಾದ್ ಕೆ., ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್ ಉಪಸ್ಥಿತರಿದ್ದರು.

ಉದ್ಯಮಶೀಲತೆಯ ಅವಕಾಶಗಳು ಕುರಿತ ಗೋಷ್ಠಿಯಲ್ಲಿ ಮಂಜುನಾಥ ಸುವರ್ಣಗದ್ದೆ ಮಾತನಾಡಿದರು. ಉದ್ಯಮಿಗಳಾದ ಎಸ್.ರವೀಂದ್ರ ಭಟ್, ಇಂದೂದರ ಬಿ.ಎ., ಗಿರೀಶ್ ಹಕ್ರೆ, ಕೆ.ವೆಂಕಟೇಶ್ ಭಾಗವಹಿಸಿದ್ದರು.

International Women’s Day ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಜಿಲ್ಲಾಡಳಿತ ಸಕಲ ಸಜ್ಜು

0

International Women’s Day ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಾ.08 ರ ಬೆಳಿಗ್ಗೆ 10 ಗಂಟೆಗೆ ಕುವೆಂಪುರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್, ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ಕೆ.ಸಂಗಮೇಶ್ವರ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಪಾಲ್ಗೊಳ್ಳುವರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಧಿಕಾರಿಗಳು, ಮಹಿಳೆಯರು ಪಾಲ್ಗೊಳ್ಳುವರು. ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ವಿಶೇಷ ಉಪನ್ಯಾಸ ನೀಡುವರು

Rangayana Shimoga ಮಾರ್ಚ್ 8 & 9 ರಂಗಾಯಣದಿಂದ” ರಂಗೋತ್ಸವ

0

Rangayana Shimoga ರಂಗಾಯಣ ಶಿವಮೊಗ್ಗ ಹಾಗೂ ನಮ್ಮ ಹಳ್ಳಿ ಥಿಯೇಟರ್ ಇವರ ಸಹಯೋಗದಲ್ಲಿ ಮಾ.8 ರಿಂದ 9 ರವೆಗೆ ಸಂಜೆ 6.30 ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಹೆಗ್ಗೋಡು ರಂಗಕರ್ಮಿಯಾದ ಎಸ್. ಹೆಚ್ ಫಣಿಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಂಗಾಯಣ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದು, ಪೇಸ್ ಯುಎಂಪಿಯು ಕಾಲೇಜಿನ ಹೆಚ್. ಎಲ್. ಡಾ.ಮೈತ್ರೀಯಿ ಆಗಮಿಸುವರು.
ಮಾ.8 ರ ಸಂಜೆ 6.30 ಕ್ಕೆ ಬೈಂದೂರಿನ ಸುರಭಿ ತಂಡದಿAದ ಡಾ.ಕೆ.ಶಿವರಾಮ ಕಾರಂತರ ರಚನೆಯ ಗಣೇಶ್ ಮಂದಾರ್ತಿ ನಿರ್ದೇಶನದ “ಚೋಮನ ದುಡಿ” ಹಾಗೂ ಮಾ.9 ರ ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ತಂಡದಿAದ ಡಾ.ಗಿರೀಶ್ ಕಾರ್ನಾಡ್ ರಚನೆಯ ರಾಜಗುರು ವಿನ್ಯಾಸ ಮತ್ತು ನಿರ್ದೇಶನದ “ಒಂದಾನೊAದು ಕಾಲದಲ್ಲಿ” ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ಪ್ರತಿ ನಾಟಕಕ್ಕೆ ಒಬ್ಬರಿಗೆ ರೂ.30 ಹಾಗೂ ಎರಡು ನಾಟಕಕ್ಕೆ ಸೇರಿ ರೂ. 50 ನಿಗದಿ ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

Department of Youth Empowerment and Sports ಹೆಣ್ಣು, ಕ್ಲೇಷಗಳನ್ನ ಕಳೆದು ತಮ್ಮ‌ಮನಸ್ಥಿತಿ ಬದಲಾಯಿಸಿಕೊಂಡಲ್ಲಿ ಉತ್ತಮಿಕೆ ಸಾಧ್ಯ-ನ್ಯಾ.ಕೆ.ಎಂ.ಶೈನಿ

0

ನಮ್ಮೊಳಗಿನ ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮ ಶಕ್ತಿ ಅರಿತು ಇತರೆ ಹೆಣ್ಣುಮಕ್ಕಳ ಶಕ್ತಿಯನ್ನು ಅರ್ಥ ಮಾಡಿಕೊಂಡು ಮುಂದೆ ಬರಬೇಕೆಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶೈನಿ ಕೆ ಎಂ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನೆಹರೂ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Department of Youth Empowerment and Sports ಹೆಣ್ಣುಮಕ್ಕಳು ಕಟ್ಟುಪಾಡು, ಕಟ್ಟಳೆಗಳನ್ನು ಮುರಿದು ಮುಂದೆ ಬಂದಿದ್ದಾಳೆ. ಪುರುಷರು ನಿರ್ವಹಿಸುವಂತಹ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಹೆಣ್ಣುಮಕ್ಕಳಿದ್ದಾರೆ. ಜೊತೆಗೆ ಅವಳೆಡೆಗಿನ ಸಮಾಜದ ನಿರೀಕ್ಷೆಗಳು, ಪಿತೃಪ್ರಧಾನ ಸಮಾಜದ ರೂಢಿಗಳು ಹಾಗೂ ಸಾಕಷ್ಟು ಇತರೆ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾಳೆ. ಹೆಣ್ಣು ಎಷ್ಟೇ ಯಶಸ್ಸು ಸಾಧಿಸಿದ್ದರೂ ಕುಟುಂಬ, ಕಾಳಜಿ ವಿಷಯ ಬಂದಾಗ ತನ್ನ ಆಸೆಗಳನ್ನು ತ್ಯಾಗ ಮಾಡಿ ರಾಜೀ ಮಾಡಿಕೊಳ್ಳಲೇಬೇಕಾಗುತ್ತದೆ.
ಹೆಣ್ಣುಮಕ್ಕಳು ಕ್ಲೇಷಗಳನ್ನು ಕಳೆದು ಮನಸ್ಥಿತಿ ಮತ್ತು ಆಲೋಚನೆ ಬದಲಾಯಿಸಿಕೊಂಡಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮಲ್ಲಿನ ಕೌಶಲ್ಯವನ್ನು, ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ಸಾಮಾಜಿಕ ನೆಟ್‌ವರ್ಕ್ ಒದಗಿಸುತ್ತದೆ. ಮಾತಿಗೆ ಒಳ್ಳೆಯ ಶಕ್ತಿ ಇದ್ದು ನಾವಾಡುವ ಮಾತು ಸತ್ವ ಮತ್ತು ತತ್ವಭರಿತವಾಗಿರಬೇಕು. ವೈಷಮ್ಯ, ದ್ವೇಷ, ಪ್ರಚೋದನೆಗೀಡು ಮಾಡದೇ ಸೌಹಾರ್ಧಯುತವಾಗಿರಬೇಕು ಎಂದ ಅವರು ಮಹಿಳೆಯರಾದ ನಾವೆಲ್ಲ ನಮ್ಮ ಸಾಧನೆಗಳನ್ನು ಆಚರಿಸೋಣ, ಒಬ್ಬರಿಗೊಬ್ಬರು ಬೆಂಬಲಿಸೋಣ, ಕರ್ತವ್ಯ ಪಾಲನೆಯೊಂದಿಗೆ ಸಬಲೀಕರಣಗೊಳ್ಳೋಣ ಎಂದು ಕರೆ ನೀಡಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಕೆ ಮಾತನಾಡಿ, ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷವಾಕ್ಯ ‘ಕ್ರಿಯೆಗಳ ವೇಗವನ್ನು ವರ್ಧಿಸಿ’ ಎಂಬುದಾಗಿದ್ದು, ನಾವು ಸಮಾನತೆಯ ಕ್ರಿಯೆಗಳ ವೇಗವನ್ನು ವರ್ಧಿಸಬೇಕು. ಇಡೀ ಸಮಾಜ ಸಕ್ರಿಯವಾಗಿ ಪಾಲ್ಗೊಂಡು ಸಮಾನತೆಯನ್ನು ಸಾಧಿಸಬೇಕು. ಸಾಧನೆಯೊಂದೇ ಸಾಲದು, ಇದರ ವೇಗವನ್ನು ವರ್ಧಿಸಬೇಕು ಎಂದು ಹೇಳಿದರು.

ಉತ್ತಮ ಸಾಧನೆಯ ಭಾಗವೇ ಕ್ರೀಡೆ. ಇದೊಂದು ಸಮಾಜದ ಅಭಿವೃದ್ದಿಯ ಅತ್ಯುತ್ತಮ ಮಾದರಿ. ಹಾಗೂ ಇದನ್ನು ಸಮಾನತೆಯ ಸೂಚ್ಯಂಕವನ್ನಾಗಿ ತೆಗೆದುಕೊಳ್ಳಬಹುದು. ಕ್ರೀಡೆಯಿಂದ ಮನುಷ್ಯನ ಎಲ್ಲ ಸ್ನಾಯುಗಳಿಗೆ ಚಲನೆ ದೊರೆಯುತ್ತದೆ. ಸ್ನಾಯು ಮತ್ತು ಮೆದುಳಿನ ಸಂಯೋಜನೆ ಅತ್ಯಂತ ಮುಖ್ಯ. ಕ್ರೀಡೆ ಮೆದುಳಿನ ರಾಸಾಯನಿಕ ಏರುಪೇರುಗಳನ್ನು ಸಮತೋಲನಗೊಳಿಸುತ್ತದೆ. ಮಾನಸಿಕ ಸುಸ್ಥಿತಿಗೆ ಕಾರಣವಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಿ, ಭಾವನೆಗಳನ್ನು ನಿಯಂತ್ರಿಸುತ್ತದೆ. ಹಾಗೂ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುತ್ತದೆ. ಕ್ರೀಡೆಯನ್ನು ಪ್ರೀತಿಸಿದರೆ ಅದು ತಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಆದ್ದರಿಂದ ಹೆಣ್ಣುಮಕ್ಕಳು ಕ್ರೀಡೆ ಕುರಿತು ಯಾವುದೇ ತಪ್ಪು ಕಲ್ಪನೆ ಹೊಂದದೆ ಮುಂದೆ ಬರಬೇಕೆಂದು ಕರೆ ನೀಡಿದರು.

Department of Youth Empowerment and Sports ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತçದ ಉಪನ್ಯಾಸಕಿ ಡಾ. ಹಸೀನಾ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕ್ಲೇಷ ಮುಕ್ತರಾಗಿ ನಳನಳಿಸುತ್ತಾ ಇರುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ಹೆಚ್ಚಾಗಿ ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಬಹಳ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಸರ್ವಶ್ರೇಷ್ಟ ಸಾಧಕರೇ ಮಹಿಳೆಯರಾಗಿದ್ದಾರೆ. ಮೊಟ್ಟ ಮೊದಲಿಗೆ ನಡೆಯಲು ಮತ್ತು ಕೃಷಿ ಕಲಿಸಿಕೊಟ್ಟವರು ಮಹಿಳೆಯರು ಎಂದ ಅವರು ಬುದ್ದ, ಬಸವ, ಅಂಬೇಡ್ಕರ್‌ರಂತಹ ಮಹನೀಯರ ಸಮಾನತೆಯ ಹೋರಾಟದ ಫಲವಾಗಿ ನಾವಿಂದು ಇಂತಹ ವೇದಿಕೆಯಲ್ಲಿದ್ದೇವೆ ಎಂದು ಸ್ಮರಿಸಿದರು.

ಹಾಗೂ ನಾವೆಲ್ಲ ನಮ್ಮ ನಾಡು ನುಡಿಗಾಗಿ ಏನೇ ಮಾಡಿದರೂ ಕೂಡ ಒಂದು ಸಾಧನೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ತಾರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ರೇಖ್ಯಾನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಜರಿದ್ದರು.

Klive News Special ಚಿನ್ನ ಖರೀದಿಯ ಜಾಹೀರಾತು ಮಾಡೆಲ್ ಗಳಿಗೆ ಕಿವಿಮಾತು ಲೇ: ಎಚ್.ಕೆ.ವಿವೇಕಾನಂದ

0

Klive News Special ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ…….

” ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ…..”

” ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. ( ಗಿರವಿ ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು ನಿಮಗೆ ಕೂಡಲೇ ಕೊಡುತ್ತೇವೆ, ನಿಮ್ಮ ಗೌರವ ಉಳಿಸುತ್ತೇವೆ…..”

ಹೀಗೆ ದಿನದ 24 ಗಂಟೆಯೂ ಟಿವಿಗಳಲ್ಲಿ ಪ್ರಖ್ಯಾತ ನಟನಟಿಯರು ವಿವಿಧ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡುತ್ತಾರೆ. ಅದು ಎಲ್ಲರಿಗೂ ತಿಳಿದಿದೆ.

ಗೆಳೆಯರೊಬ್ಬರು ಒಂದು ರಾತ್ರಿ ಕರೆ ಮಾಡಿ ದುಃಖದಿಂದ ಇದನ್ನು ವಿವರಿಸಿ ತುಂಬಾ ಭಾವುಕರಾದರು. ಬದುಕೇ ಜಿಗುಪ್ಸೆ ಮೂಡಿದೆ ಎಂದರು. ಆ ಜಾಹೀರಾತಿಗೂ ಅವರ ಜಿಗುಪ್ಸೆಗೂ ಇರುವ ಕಾರಣ ಸೂಕ್ಷ್ಮ ಮನಸ್ಸಿನವರಿಗೆ ಮತ್ತು ಈ ಸಮಾಜದ ಬಗ್ಗೆ ಆಳವಾಗಿ ತಿಳಿದಿರುವವರಿಗೆ ಖಂಡಿತ ಅರ್ಥವಾಗುತ್ತದೆ.

ಅವರು ಹೇಳಿದ್ದು
” ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಟಿವಿ ಸದಾ ಚಾಲನೆಯಲ್ಲಿರುತ್ತದೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ನೋಡುತ್ತಲೇ ಇರುತ್ತಾರೆ. ನಾವು ತಿಂಡಿ ಊಟ ಎಲ್ಲವನ್ನೂ ಟಿವಿ ನೋಡುತ್ತಲೇ ತಿನ್ನುತ್ತೇವೆ. ಆಗ ಈ ಜಾಹಿರಾತು ಪ್ರತಿ ಹತ್ತು ನಿಮಿಷಕ್ಕೆ ಬರುತ್ತಲೇ ಇರುತ್ತದೆ. ನಾನು ಕಳೆದ ವರ್ಷ ತೀರಾ ಅನಿವಾರ್ಯ ಕಾರಣದಿಂದ ನಮ್ಮ ಮನೆಯಲ್ಲಿದ್ದ ಒಡವೆ ಗಿರವಿ ಇಟ್ಟಿದ್ದೇನೆ. ಈ ಏಪ್ರಿಲ್ ನಲ್ಲಿ ಅದನ್ನು ಬಿಡಿಸಿಕೊಳ್ಳಲು ಒಂದು ಹಣಕಾಸಿನ ವ್ಯವಸ್ಥೆ ಮಾಡಿದ್ದೆ. ಆದರೆ ಯಾವುದೋ ಕಾರಣದಿಂದ ಆ ಹಣಕಾಸಿನ ಒಪ್ಪಂದ ಸಾಧ್ಯವಾಗಲಿಲ್ಲ. ಈಗ ಈ ಜಾಹೀರಾತು ನನ್ನ ಮನಸ್ಸಿನ ಮೇಲೆ ಅಗಾಧ ಒತ್ತಡ ಹೇರುತ್ತಿದೆ. ಅದನ್ನು ನೋಡಿದಾಗಲೆಲ್ಲ ನನ್ನ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತದೆ. ನೋವು ಅವಮಾನ ಅಸಹಾಯಕತೆಯಿಂದ ಮುದುಡುತ್ತದೆ. ಅದನ್ನು ಬಿಡಿಸಿ ಕೊಳ್ಳಲು‌ ಸಾಧ್ಯವಾಗದಿದ್ದಕ್ಕೆ ನನ್ನಲ್ಲಿ ಕೀಳರಿಮೆ ಉಂಟಾಗಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಊಟ ಸೇರುವುದಿಲ್ಲ. ಬಡ್ಡಿಯ ಕಂತುಗಳನ್ನು ಕೆಲವು ತಿಂಗಳುಗಳಿಂದ ಕಟ್ಟಿಲ್ಲ. ಬಹುಶಃ ಬಡ್ಡಿ ಜಾಸ್ತಿಯಾಗಿ ಆ ಒಡವೆಗಳು ನಮ್ಮಿಂದ ದೂರವಾಗಬಹುದು. ಈಗಾಗಲೇ ಕುಸಿದಿರುವ ನನ್ನ ಮಾನ ಮರ್ಯಾದೆ ಕುಟುಂಬದವರ ದೃಷ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ. ಏನಾದರೂ ಮಾಡಿ ಆ ಜಾಹೀರಾತು ನಿಲ್ಲಿಸಲು ಸಾಧ್ಯವೇ ? “

Klive News Special ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ? ಸಮಸ್ಯೆಯ ಮೂಲ ಇರುವುದಾದರೂ ಎಲ್ಲಿ ? ಬಡತನವೇ ಒಂದು ಶಾಪವಾಗಿ ಕಾಡುತ್ತಿರುವುದೇಕೆ ? ಸಾಲ ಇಲ್ಲದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಏಕೆ ? ಲಕ್ಷಾಂತರ ಹಣ ನೀಡಿ ಈ ರೀತಿಯ ಹತ್ತಾರು ಕಂಪನಿಗಳು ಜಾಹೀರಾತು ನೀಡುವಷ್ಟು ಬೆಳೆದಿರುವುದು ಈ ವ್ಯವಹಾರ ಎಷ್ಟು ಆಳವಾಗಿ ಬೆಳೆದಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದು ಪರಿಗಣಿಸಿದರೆ ನಮ್ಮ ಜನರ ಪರಿಸ್ಥಿತಿ ಎಷ್ಟು ಅಧೋಗತಿಗೆ ಇಳಿದಿರಬಹುದು ?

ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲವಾಗಿ ನಿರ್ಮಿಸಲಾಗಿದೆ, ಅದರ ಪರಿಣಾಮ ವೈಯಕ್ತಿಕ ಮಾನಸಿಕ ಸ್ಥಿಮಿತತೆ ಕೂಡ ದುರ್ಬಲವಾಗಿದೆ. ಅದು ಕೌಟುಂಬಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.
ಅದರ ಫಲಿತಾಂಶ ಒಂದು ಜಾಹೀರಾತು ಸಹ ನಮ್ಮನ್ನು ಅಲುಗಾಡಿಸುತ್ತಿದೆ.

ಹಣದ ದುರ್ಬಲ ನಿರ್ವಹಣೆ ನಮ್ಮ ಸಾಮಾನ್ಯ ಜನರ ಬಹುದೊಡ್ಡ ಸಮಸ್ಯೆ. ಕುಟುಂಬದ ಬೇಡಿಕೆ ಮತ್ತು ಪೂರೈಕೆಗಳ ಮಧ್ಯೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ಜನರ ಜೀವನ ಕ್ರಮದ ಒತ್ತಡ ನಮ್ಮ ಮೇಲೆ ಬೀಳುತ್ತದೆ. ಅವರಂತೆ ನಾವು ಅಥವಾ ಅವರಿಗಿಂತ ಹೆಚ್ಚು ಇರಬೇಕು ಎಂಬ ಮನೋಭಾವ, ಅವರ ದೌರ್ಬಲ್ಯ ಗುರುತಿಸದೆ ಬಾಹ್ಯ ಚಟುವಟಿಕೆಗಳು ಮಾತ್ರ ನಮ್ಮ ಕಣ್ಣಿಗೆ ಕಾಣುವುದು, ಹೆಂಡತಿ ಮಕ್ಕಳ ಆಸೆ ಪೂರೈಸುವ ತವಕ, ಸ್ವಂತ ಮನೆ, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಮೊಬೈಲ್, ಕಾರು, ಪ್ರತಿಷ್ಠಿತ ಶಾಲೆ, ಬಟ್ಟೆಗಳು ಎಲ್ಲವನ್ನೂ ಈಗ ಅವಶ್ಯಕ ವಸ್ತುಗಳು ಎಂದು ಪರಿಗಣಿಸಿರುವುದು, ಅದಕ್ಕೆ ತಕ್ಕಂತೆ ನಿರ್ದಿಷ್ಟ ಆದಾಯ ಇಲ್ಲದಿರುವುದು, ಅದು ನಮಗೆ ಅರಿವಾಗದಿರುವುದು ಎಲ್ಲವೂ ಒಟ್ಟಾಗಿ ಸೇರಿ ನಮ್ಮ ಮೂಲ ಮಾನಸಿಕ ಸ್ಥಿತಿ ಸಂಪೂರ್ಣ ಬದಲಾಗಿದೆ. ಆದ್ಯತೆಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಗುರುತಿಸಿದರೂ ಕುಟುಂಬ ವ್ಯವಸ್ಥೆ ಅದನ್ನು ಪಾಲಿಸಲು ಬಿಡುತ್ತಿಲ್ಲ.

ಅದರ ಪರಿಣಾಮವೇ ಈ ಜಾಹೀರಾತುಗಳ ಉಗಮ. ಅದನ್ನು ತಡೆಯುವುದು ಸಾಧ್ಯವಿಲ್ಲ. ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು ನಿಜ, ಆದರೆ ಅದೂ ಕಷ್ಟ. ಮೊದಲೇ ಕುಂಟುತ್ತಾ ಸಾಗುತ್ತಿದ್ದ ಬಹಳಷ್ಟು ಜನರ ಜೀವನ ಅತಿಯಾದ ಬೆಲೆ ಏರಿಕೆ ಮತ್ತು ತೆರಿಗೆಯ ಕಾರಣದಿಂದ ಮಲಗಿಬಿಟ್ಟಿದೆ. ಬಹಿರಂಗವಾಗಿ ಹೇಳಿಕೊಳ್ಳಲಾಗದ ಒತ್ತಡ ಕುಟುಂಬದ ಜವಾಬ್ದಾರಿ ನಿರ್ವಹಿಸುವವರ ಮೇಲಿದೆ. ಮುಂದಿನ ಕೆಲವು ವರ್ಷಗಳು ಇನ್ನೂ ಒತ್ತಡ ಹೆಚ್ಚಿಸುತ್ತವೆ.

ಪರಿಹಾರ ?….

ಈ ವಿಚಿತ್ರ ಸನ್ನಿವೇಶಕ್ಕೆ ಎಲ್ಲರಿಗೂ ಸಮನಾಗಿ ಅನ್ವಯವಾಗುವ ಯಾವುದೇ ಫಾರ್ಮುಲ ಇಲ್ಲ. ಹಣದ ಹರಿವು ಹೆಚ್ಚಿಸಿಕೊಳ್ಳುವುದು ಕಷ್ಟ. ಒಬ್ಬೊಬ್ಬರ ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿ ಭಿನ್ನವಾಗಿದೆ. ಆದ್ದರಿಂದ ನಮ್ಮ ಇಡೀ ಪರಿಸ್ಥಿತಿಯನ್ನು ತಾವೇ ಪರಾಮರ್ಶಿಸಿಕೊಂಡು ಬಂದದ್ದೆಲ್ಲಾ ಬರಲಿ ಧೈರ್ಯವಾಗಿ ಎದುರಿಸೋಣ ಎಂದು ದೃಢ ನಿರ್ಧಾರ ಮಾಡಬೇಕು. ನಮಗಿಂತ ಕಷ್ಟದಲ್ಲಿರುವ ಎಷ್ಟೋ ಜನರನ್ನು ನೋಡಿ ಅವರಿಗಿಂತ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದು ಸಮಾಧಾನ ಮಾಡಿಕೊಳ್ಳಬೇಕು. ಮಾನ ಮರ್ಯಾದೆ ಅವಮಾನ ಎಂಬುದನ್ನು ಸ್ವಲ್ಪ ದಿನ ಮೂಟೆ ಕಟ್ಟಿ ಮನೆಯ ಅಟ್ಟದ ಮೇಲೆ ಇಡಬೇಕು. ಎಲ್ಲರ ನಿಂದನೆ ಸಹಿಸಿಕೊಳ್ಳುವ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಬೇಕು.

ಮುಂದಿನ ದಿನಗಳು ಯಾವುದೇ ಕ್ಷಣದಲ್ಲಿ ಬದಲಾಗಿ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ಆಶಾಭಾವನೆಯಿಂದ ಬದುಕನ್ನು ಎದುರಿಸಬೇಕು. ಕಷ್ಟಗಳನ್ನೇ ಸೋಲಿಸುವ, ಕಷ್ಟಗಳೇ ನಾಚಿಕೆ ಪಡುವಂತ, ಕಷ್ಟಗಳೇ ಅರಿವಾಗದಂತ ಮಾನಸಿಕ ಸ್ಥಿತಿ ತಲುಪಲು ಪ್ರಯತ್ನಿಸಬೇಕು. ಅದು ನಮ್ಮ ಮೊದಲ ಆದ್ಯತೆಯಾಗಬೇಕು. ಮುಂದೆ ನೋಡೋಣ.

” ಮಾನ್ಯ ಸಿನಿಮಾ ನಟ ನಟಿಯರೇ, ಟಿವಿ ನಿರೂಪಕ ನಿರೂಪಕಿಯರೇ, ಈ ರೀತಿಯ ಜಾಹೀರಾತುಗಳಲ್ಲಿ ಅಭಿನಯಿಸುವುದನ್ನು ದಯವಿಟ್ಟು ನಿಲ್ಲಿಸಿ. ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ. ಚಿನ್ನವನ್ನು ಹೇಗೆ ಸಂಪಾದಿಸಬೇಕು, ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಜಾಹೀರಾತು ನೀಡಬೇಕೆ ಹೊರತು ಮನೆಯಲ್ಲಿರುವ ಚಿನ್ನವನ್ನು ಮಾರಾಟ ಮಾಡಲು, ಗಿರವಿ ಇಡಲು ನಿಮ್ಮ ಸಲಹೆಗಳು ನಮಗೆ ಬೇಕಿಲ್ಲ. ಅದು ನಮಗೆ ಈಗಾಗಲೇ ಗೊತ್ತಿದೆ. ತೀರಾ ಅನಿವಾರ್ಯವಾದಾಗ ಬ್ಯಾಂಕುಗಳಿಗೆ ಹೋಗಿ ನಾವೇ ಅಡ ಇಡುತ್ತೇವೆ. ಈ ಸಮಾಜದ ಮೌಲ್ಯಗಳ ಬಗ್ಗೆ ಅರಿತು ನಿಮ್ಮ ಬದುಕನ್ನು ಶ್ರಮದಿಂದ, ಪ್ರತಿಭೆಯಿಂದ ರೂಪಿಸಿಕೊಳ್ಳಿ. ಸುಳ್ಳು, ಮೋಸ, ವಂಚನೆ,
ಅಪಮೌಲ್ಯದ ಜಾಹೀರಾತುಗಳಿಂದಲ್ಲ, ಧನ್ಯವಾದಗಳು……”

ಎಲ್ಲರಿಗೂ ಒಳ್ಳೆಯದಾಗಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..

Klive Special Article ಶ್ರೀ ಸತ್ಯಾತ್ಮತೀರ್ಥರ ಅನುಗ್ರಹ ಭಾಷಣ‌ಕ್ಕೆ ಯುವ ಸ್ಪಂದನ ಮತ್ತು ವರ್ತಮಾನದ ಸತ್ಯಗಳು ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

0

Klive Special Article ನಮ್ದು ಪೇಸ್ ಕಾಲೇಜ್. ಹೇಳಿ ಕೇಳಿ ಪಿ ಯು ಮಕ್ಕಳು ಓದುತ್ತಿರೋ ಕಾಲೇಜ್. ಇಲ್ಲಿಗೆ ವಾರ್ಷಿಕೋತ್ಸವದ ನಿಮಿತ್ತ ಗುರುಗಳು ಕಾಲೇಜ್ ಗೆ ಬಂದು ಮಕ್ಕಳನ್ನು ನಮ್ಮನ್ನೂ ಅನುಗ್ರಹಿಸಿದ್ದರು. ಅದೊಂದು ಐತಿಹಾಸಿಕ ದಾಖಲೆಯ ಕಾರ್ಯಕ್ರಮ ಆಯ್ತು. ಏಕೆಂದರೆ ಎಂದೂ ಈ ರೀತಿಯ ಕಾಲೇಜುಗಳಿಗೆ ತೆರಳದ ಗುರುಗಳು ನಮ್ಮಲ್ಲಿಗೆ ಬಂದು ಅನುಗ್ರಹಿಸಿ ಅವರು ಉಪದೇಶಿಸಿದ ಮಾತುಗಳಿವೆಯಲ್ಲ ಅವು ಸಮಾಜಮುಖಿಯಾಗಿ ಆಲೋಚನೆ ಮಾಡುವ ಗುರುಗಳು ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಖ್ಯ ಎಂದು ಭಾವಿಸಿ ಭವಿಷ್ಯತ್ತಿನ ಭವ್ಯ ಭಾರತ ನಿರ್ಮಾಣಕ್ಕೆ ಯುವಕರು ಯಾವ ರೀತಿ ಇರಬೇಕು ಎಂದು ಮಾರ್ಗದರ್ಶನ ಮಾಡಿದ್ದೇ ಆಗಿದೆ. ಹಾಗಾಗಿ ಅವರ ಅನುಗ್ರಹ ಸಂದೇಶದ ನುಡಿಗಳು ಮತ್ತು ಅದನ್ನು ಕೇಳಿದ ಮಕ್ಕಳ ಅಭಿಪ್ರಾಯಗಳನ್ನೂ ಈ ಲೇಖನದಲ್ಲಿ ಸಂಗ್ರಹಿಸಿದ್ದೇನೆ.

ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥರು ಅಂದು ದಿವ್ಯ ಸಾನಿಧ್ಯವಹಿಸಿ ಅನುಗ್ರಹಿಸಿದ್ದು ನಮ್ಮ ಜೀವನದ ಮರೆಯದ ದಿನವಾಯಿತು. ಪ್ರಸ್ತುತ ದಿನಮಾನಗಳಿಗೆ ಒಪ್ಪುವ ಮಕ್ಕಳು ಯಶಸ್ಸು ಸಾಧಿಸಲು ಅಗತ್ಯವಾಗಿ ಅನುಸರಿಸಲೇ ಬೇಕಾದ ಸಂಗತಿಗಳನ್ನೇ ಆರಿಸಿ ಅಂದು ಅನುಗ್ರಹ ಸಂದೇಶ ನೀಡಿದರು. ಏಕೆಂದರೆ ಆರಂಭದಲ್ಲಿಯೇ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಈಶ್ವರಪ್ಪನವರು ತಮ್ಮ ಮಾತಿನಲ್ಲಿ ವಿದ್ಯಾರ್ಥಿಗಳ ಮುಂದಿನ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಗುರುಗಳ ಮಾರ್ಗದರ್ಶನ ಬೇಕು ಎಂದು ಹೇಳಿದ್ದಕ್ಕೆ ಅನುಗುಣವಾಗಿಯೇ ಗುರುಗಳು ಪ್ರವಚನ ನೀಡಿದರು.

ಬಹುಮುಖ್ಯವಾಗಿ ಧರ್ಮ, ಏಕಾಗ್ರತೆ, ಬ್ರಹ್ಮಚರ್ಯ ಪಾಲನೆ, ಉತ್ತಮ ವ್ಯಕ್ತಿತ್ವ ನಿರ್ಮಾಣ ಈ ಸಂಗತಿಗಳನ್ನು ಮಕ್ಕಳಿಗೆ ರಾಮಾಯಣ ಮಹಾಭಾರತದ ಆದರ್ಶಗಳನ್ನು ಅನುಸರಿಸಿ ಹೇಳಿದರು.
ಭಾರತೀಯ ಸನಾತನ ಧರ್ಮದ ಕುರಿತಾಗಿ ಅಪಾರ ಅಭಿಮಾನ ಹಾಗೂ ಪ್ರೀತಿಯನ್ನು ಹೊಂದಿರುವ ಗುರುಗಳು ತಮ್ಮ ಮಾತಿನುದ್ದಕ್ಕೂ ಧರ್ಮದ ವಿವಿಧ ಆಯಾಮಗಳ ಕುರಿತಾಗಿ ಬಹು ಸರಳವಾಗಿ ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ಮಹಾಭಾರತದದಲ್ಲಿ ಹೇಳಿದ ‘ಧರ್ಮೋ ರಕ್ಷತಿ ರಕ್ಷಿತಃ ಧರ್ಮ ಏವ ಹತೋ ಹಂತಿ….’ ಎಂದು ಹೇಳುತ್ತಾ ನಾವು ಧರ್ಮದ ಕೊಲೆ ಮಾಡಿದರೆ ಧರ್ಮ ನಮ್ಮನ್ನು ಕೊಲ್ಲುತ್ತದೆ. ನಾವು ಧರ್ಮದ ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮದ ರಕ್ಷಣೆ ಅಂದರೆ ಅದರ ಅನುಷ್ಠಾನ ಮಾಡುವುದು. ಬದಲಾಗಿ ಮುತ್ತು ರತ್ನಗಳನ್ನು ರಕ್ಷಿಸಿದಂತೆ ಅಲ್ಲ. ತಂದೆ ತಾಯಿಗಳ ಸೇವೆ ಮಾಡುವುದು, ದೇವಸ್ಥಾನಗಳಿಗೆ ಹೋಗಿ ದೇವರಿಗೆ ನಮಸ್ಕಾರ ಮಾಡುವುದು, ಕಷ್ಟದಲ್ಲಿದ್ದ ವ್ಯಕ್ತಿಗೆ, ಬಡವರಿಗೆ ಸಹಾಯ ಮಾಡಿದರೆ, ಹಸಿದ ಹೊಟ್ಟೆಗೆ ಅನ್ನ ಕೊಟ್ಟರೆ, ನೆಲೆ ಅಥವಾ ಆಸರೆ ಇಲ್ಲದವರಿಗೆ ಮನೆ ಕೊಟ್ಟರೆ, ಅಥವಾ ತನ್ನ ಮನೆಯಲ್ಲಿಯೇ ಅವಕಾಶ ಕೊಟ್ಟರೆ, ಬಟ್ಟೆ ಇಲ್ಲದವನಿಗೆ ಬಟ್ಟೆ ನೀಡಿದರೆ, ವಿದ್ಯೆ ಇಲ್ಲದವನಿಗೆ ವಿದ್ಯೆ ನೀಡಿದರೆ, ಹೆದರಿದವನಿಗೆ ಧೈರ್ಯ, ಅಭಯ ನೀಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಎಂದು ಧರ್ಮದ ನಾನಾ ಆಯಾಮಗಳನ್ನು ತಿಳಿಸಿದರು. Klive Special Article ಕೇವಲ ಧಾರ್ಮಿಕ ಕಾರ್ಯಗಳು ಮಾತ್ರವಲ್ಲ, ಧರ್ಮಕ್ಕೆ ಬಹಳ ಮುಖಗಳಿವೆ. ದಾಸರು ಹೇಳಿದಂತೆ ‘ ಚೇತನಾ ಚೇತನಗಳೆರಡು ಸಂಪ್ರೀತಿಯಲಿ ಸಂರಕ್ಷಿಸುವುದು ಪೂಜೆ ಎಂದು. ಪರಮಾತ್ಮನ ಅಪ್ರತಿಮವಾದ ಪ್ರತಿಮೆ ಎಂದರೆ ಅದು ಚೇತನ. ಅದು ಮಾನವ, ಜೀವರಾಶಿಗಳು. ಪರಮಾತ್ಮ ಕಲ್ಲು ಮಣ್ಣುಗಳಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಇದ್ದಾನೆ. ಭಗವಂತನು ನನ್ನನ್ನು ಸಂತೋಷಪಡಿಸಬೇಕಾದರೆ ನನ್ನ ಅಧಿಷ್ಠಾನ, ನನ್ನ ಮಕ್ಕಳನ್ನು ನನ್ನ ಸೃಷ್ಟಿಯಲ್ಲಿರುವ ಚೇತನಗಳನ್ನು ಜೀವರಾಶಿಗಳನ್ನು ಸಂತೋಷಪಡಿಸಿ ಎಂದಿದ್ದಾನೆ. ಆ ದೃಷ್ಟಿಯಲ್ಲಿಯೇ ಪರಮಾತ್ಮ ಹೇಳಿದ ಮಾತಂದರೆ, ಭಗವದ್ಗೀತೆಗೆ ಮದ್ವರು ಮಾಡಿದ ವ್ಯಾಖ್ಯಾನದಲ್ಲಿ -‘ ನಾನಾ ತರಹದ ಜನರ ಸೇವೆ ಮಾಡುವುದೇ ಕರ್ಮ. ಕಂಪಲ್ಸರಿ ಮಾಡಲೇ ಬೇಕಾದದ್ದು. ಒಂದು ರಾಜ್ಯದಲ್ಲಿದ್ದ ಮೇಲೆ ಹೇಗೆ ನಾವೆಲ್ಲ ತೆರಿಗೆ ಕಟ್ಟಲೇಬೇಕೋ ಆ ರೀತಿಯಲ್ಲಿ ದೇವರ ರಾಜ್ಯದಲ್ಲಿರುವ ನಾವು ಕರ ನೀಡಲೇಬೇಕು. ಜಗತ್ತಿನ ಜೀವರಾಶಿಗಳಲ್ಲಿ ಕಷ್ಟದಲ್ಲಿದ್ದವರಿಗೆ ಸೇವೆ ಮಾಡಿ ಉಪಕಾರ ಮಾಡಿ, ಜನರೊಳಗೆ ಜನಾರ್ದನ ಇದ್ದಾರೆ ಎಂದು ತಿಳಿದು, ಮಾನವನಲ್ಲಿ ಮಾಧವನಿದ್ದಾನೆ ಎಂದು ಭಾವಿಸಿ ಮಾಡಿದಂತಹ ಸೇವೆ ಅದು ಭಗವಂತನ ಸೇವೆ ಎಂದು ಹೇಳಿದ್ದಾನೆ. ಅದು ಜನರು ಬದುಕಿದ್ದಕ್ಕೆ ಕೊಡುವಂತಹ ತೆರಿಗೆ ಎಂಬುದಾಗಿ ಪರಮಾತ್ಮ ಹೇಳಿದ್ದಾನೆ. ಸೇವೆ ಮಾಡಿದರೆ ಮಾತ್ರ ಉದ್ಧಾರ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಮನುಷ್ಯರಿಗೆ ಸುಖವಾಗಿರಲು ಏನು ಬೇಕು ಅದನ್ನು ನಾನು ನೀಡುತ್ತಿದ್ದೇನೆ. ಹಣಗಳಿಸಿದ ಮಾತ್ರಕ್ಕೆ ಮನುಷ್ಯ ಸುಖವಾಗಿರುವುದಿಲ್ಲ, ಮನೆ ವಾಹನ ಬ್ಯಾಂಕ್ ಡೆಪಾಸಿಟ್ ಗಳು, ಬೇಕಾದಷ್ಟು ಆಸ್ತಿ ಪಾಸ್ತಿ ಇವುಗಳಿದ್ದರೆ ಮಾತ್ರ ನಾವು ಸುಖವಾಗಿರ್ತೇವೆ ಅಂತ ಮನುಷ್ಯ ತಿಳಿದಿದ್ದರೆ ಅದು ತಪ್ಪು. ನಾವೆಷ್ಟು ಪುಣ್ಯಕರ್ಮಗಳನ್ನು ಮಾಡುತ್ತೇವೋ ಅಷ್ಟು ಸುಖವಾಗಿರುತ್ತೇವೆ. ಎಂತಹ ಆಸ್ತಿಪಾಸ್ತಿಗಳನ್ನು ಗಳಿಸಿದವರೆಲ್ಲ ಮಣ್ಣು ಪಾಲಾಗಿ ಹೋಗಿದ್ದಾರೆ ಯಾರು ಉಳಿದಿಲ್ಲ ಎಂದು ಭೋಜರಾಜನ ಒಂದು ಸುಭಾಷಿತವಾದ ಮಾಂಧ ತಾ ಚ ಮಹಿಪತಿಃ ಕೃತಯುಗಾಲಂಕಾರೋಭೂತಃ…. ನೈಕೇನಾಪಿ ಸಮಂ ಗತಃ ವಸುಮತಿ ಮುಂಜ ತ್ವಯಾ ಯಾಸ್ಯತಿ… ಎನ್ನುವಲ್ಲಿ ಭೋಜನ ಚಿಕ್ಕಪ್ಪ ಅವನಿಗೆ ಮೋಸ ಮಾಡಿ ತಾನು ರಾಜ್ಯ ಪಡೆದುಕೊಳ್ಳಬೇಕೆಂದು ಭೋಜನನ್ನು ಅರಣ್ಯಕ್ಕೆ ಕಳಿಸ್ತಾನೆ. ಜೊತೆಯಲ್ಲಿ ನಾಲ್ಕು ಜನರನ್ನು ಕಳಿಸಿ ತಾನು ರಾಜ್ಯ ತೆಗೆದುಕೊಳ್ಳಬೇಕೆಂಬ ಆಸೆಯಿಂದ ಅವನನ್ನು ಕೊಲೆ ಮಾಡಲು ಆದೇಶಿಸುತ್ತಾನೆ. ಆದರೆ ಭೋಜನ ಜೊತೆಯಲ್ಲಿಯೇ ಬೆಳೆದು ಅವನ ಅನ್ನ ತಿಂದಂತಹ ಕೆಲಸದವರಿಗೆ ಅವನನ್ನು ಕೊಲೆ ಮಾಡುವ ಮನಸ್ಸು ಬರದೇ ದುಃಖಿತರಾಗಿ ಯಾವುದೋ ಬಟ್ಟೆಗೆ ನಿನ್ನ ರಕ್ತ ಹಚ್ಚಿ ನಿನ್ನನ್ನು ಕೊಂದಿದ್ದೇವೆ ಎಂದು ಸುಳ್ಳು ಹೇಳುತ್ತೇವೆ ನೀನು ಸುಖವಾಗಿ ಅರಣ್ಯದಲ್ಲಿ ಜೀವನ ಮಾಡೆಂದು ಹೇಳಿದಾಗ. ಅಲ್ಲೇ ಇದ್ದ ಒಂದು ಬಟ್ಟೆಯ ಮೇಲೆ ಮೇಲೆ ಹೇಳಿದ ಶ್ಲೋಕವನ್ನು ಬರೆದು ಕೊಡುತ್ತಾನೆ ಅದರರ್ಥ- “ಅನೇಕ ಯುಗಗಳಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳು ರಾಜ ಮಹಾರಾಜರುಗಳು ಆಗಿ ಹೋಗಿದ್ದಾರೆ. ಅಷ್ಟೇ ಅಲ್ಲ ಇಡೀ ಭೂಮಂಡಲವನ್ನೇ ಆಳಿದಂತಹವರಿದ್ದಾರೆ. ಆದರೆ ಯಾರ ಹೆಸರೂ ಇಂದು ಉಳಿದಿಲ್ಲ. ಯಾವ ವ್ಯಕ್ತಿ ಇಡೀ ಭೂಮಿ ನನ್ನದು ಎಂದು ಹೇಳಿಕೊಂಡವರಿದ್ದರು ಅವರೆಲ್ಲರೂ ಇಂದು ನಾಶವಾಗಿದ್ದಾರೆ ಅವರು ಈಗ ಇಲ್ಲ. ಭೂಮಿ ಅವರ ಕೈಯಲ್ಲಿಲ್ಲ, ಅವರ ಹೆಸರು ಈಗ ಉಳಿದಿಲ್ಲ. ಅಂತಹ ಸ್ಥಿತಿ ಬಂದಿದೆ. ಹೀಗಿರುವಾಗ ನೀನೊಬ್ಬ ಶಾಶ್ವತ ಅಂತ ಅನ್ಕೊಂಡಿದ್ದೀಯಾ” ಎಂದು ವ್ಯಂಗ್ಯವಾಗಿ ಹೇಳಿದಾಗ ಭೋಜನ ಚಿಕ್ಕಪ್ಪನಿಗೆ ಪಶ್ಚಾತ್ತಾಪವಾಗಿ ತಾನು ಮಾಡಿದ್ದು ತಪ್ಪು ಎಂದು ತಿಳಿದು ಮತ್ತೆ ಅವನಿಗೆ ರಾಜ್ಯ ಹಿಂದಿರುಗಿಸುತ್ತಾನೆ ಎಂಬುದು ಇತಿಹಾಸದಲ್ಲಿ ನಾವು ಕೇಳುವ ಕಥೆ. ಇದರಿಂದ ತಿಳಿಯಬೇಕಾದದ್ದು ನಾವು ನಿಜವಾಗಿ ಮಾಡಬೇಕಾದ ಆಸ್ತಿ ಯಾವುದು ಎಂದರೆ ಧರ್ಮ ಅದು ಪುಣ್ಯ. ಧರ್ಮ ಒಂದೇ ಮನುಷ್ಯನ ಜೊತೆಯಲ್ಲಿ ಬರುವಂತದ್ದು ಉಳಿದದ್ದು ಎಲ್ಲವನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ. ಈ ದೃಷ್ಟಿಯಲ್ಲಿ ಯಾರೇ ಆಗಿರಲಿ ತಿಳುವಳಿಕೆ ಬಂದಾಗಿನಿಂದ ಅವರ ಗುರಿ ಒಂದೇ ಆಗಿರಬೇಕು. ಅದೇನೆಂದರೆ ಧರ್ಮ ಹಾಗೂ ಪುಣ್ಯಗಳಿಸುವುದು. ಹಣ ಇತ್ಯಾದಿ ಐಷಾರಾಮದ ಜೀವನ ಅನುಭವಿಸಿದರೂ ಸಹ ಅದಕ್ಕೆ ಧರ್ಮದ ಚೌಕಟ್ಟಿರಬೇಕು. ಅನ್ಯಾಯಮೋಸ ವಂಚನೆ ಲಂಚ ತೆಗೆದುಕೊಳ್ಳುವುದು ಇತ್ಯಾದಿ ಅನಾಚಾರದ ಕೆಲಸಗಳನ್ನು ಮಾಡದೆ ಪರೋಪಕಾರ ಮಾಡಿ ತಾನು ಸುಖವಾಗಿರಬೇಕು ಎನ್ನುವುದು ಮನುಷ್ಯನ ಪರಮ ಗುರಿಯಾಗಿರಬೇಕು ಆ ರೀತಿಯಲ್ಲಿ ಧರ್ಮ ಸಂಪಾದಿಸಿದ ವ್ಯಕ್ತಿ ಮಾತ್ರ ಸುಖವಾಗಿರಲು ಸಾಧ್ಯವಿದೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ.

ಯುವಕ ಯುವತಿಯರು ಅಧ್ಯಯನ ಮಾಡಬೇಕಾದಾಗ ಇರಬೇಕಾದದ್ದು ಏಕಾಗ್ರತೆ. ಅಧ್ಯಯನದ ಕಡೆಗೆ ಮನಸ್ಸು ಏಕಾಗ್ರವಾಗಿ ಇಟ್ಟುಕೊಳ್ಳಬೇಕು. ಆ ವಿದ್ಯೆಯಿಂದ ಉತ್ತಮನಾಗಿ ಬದುಕಬೇಕೆಂಬುದರ ಜೊತೆಗೆ ಉಪಕಾರವನ್ನು ಸಹ ಮಾಡಬೇಕು ಎಂಬಂತೆ ಇರಬೇಕು. ಜೀವನದಲ್ಲಿ ಸುಖವಾಗಿದ್ದು ಒಂದು ದೊಡ್ಡ ಸ್ಥಾನಕ್ಕೇರಿ ಪರೋಪಕಾರವನ್ನು ಮಾಡಬೇಕೆಂಬ ಹೆಗ್ಗುರಿಯನ್ನು ಇಟ್ಟುಕೊಳ್ಳಬೇಕಾದದ್ದು ಬಹು ಮುಖ್ಯ. ಗುರಿ ಹೇಗಿರುತ್ತೋ ಅದಕ್ಕೆ ತಕ್ಕಂತೆ ಮನುಷ್ಯ ಪ್ರಯತ್ನ ಮಾಡುತ್ತಾನೆ. ಓದಿನಲ್ಲಿ ಬೇಜವಾಬ್ದಾರಿತನ ಯಾರಿಗೂ ಇರಬಾರದು. ಓದಿದರೂ ಅದು ಕೇವಲ ಸ್ಪರ್ಧೆಗಾಗಿ ಅಂತ ಇರಬಾರದು,ಮನಸ್ಸಿನ ಏಕಾಗ್ರತೆಯನ್ನು ಕಳೆದುಕೊಳ್ಳಬಾರದು. ಮನುಷ್ಯ ಎಷ್ಟು ದೊಡ್ಡ ಗುರಿಯನ್ನು ಇಟ್ಟುಕೊಳ್ಳುತ್ತಾನೋ ಅಷ್ಟು ಮುಂದೆ ಸಾಗುತ್ತಾನೆ.
ಶ್ರೀಮನ್ ಮಧ್ವಾಚಾರ್ಯರು ಹೇಳಿದ ಈ ಮಾತು ಎಲ್ಲ ಸಾಧಕರಿಗೆ, ಪ್ರತಿಯೊಬ್ಬ ಉತ್ಸಾಹಿಗಳಾದ ಯುವಕ ಯುವತಿಯರೆಲ್ಲರಿಗೂ ಅನುಕರಣಯೋಗ್ಯ. ಆ ಮಾತು ಹೀಗಿದೆ -“ಪ್ರಯತ್ನಮೇವ ಅಗ್ರತೋಯಾಂತಿ ಅಂದರೆ ಮನುಷ್ಯ ಜೀವನದಲ್ಲಿ ಎರಡು ‘ಪ್ರ’ಗಳಿಗೆ ವಿಶೇಷ ಮಹತ್ವ ನೀಡಬೇಕು. ಒಂದು ‘ಪ್ರಯತ್ನ’ ಮತ್ತೊಂದು ‘ಪ್ರಾರ್ಥನೆ’. ಆಲಸ್ಯ ತೊರೆದು ಪ್ರಯತ್ನ ಮಾಡಬೇಕು. ಏಕೆಂದರೆ ಆಲಸ್ಯವೇ ಮೊದಲ ಶತ್ರು. ಪ್ರಯತ್ನದ ಜೊತೆಗೆ ಭಗವಂತನಿಗೆ ಪ್ರಾರ್ಥನೆಯನ್ನು ಮಾಡಬೇಕು. ನಾನು ಮಾಡುವ ಕಾರ್ಯದಲ್ಲಿ ಯಶಸ್ಸು ಬರುವಂತೆ ದೇವರ ಅನುಗ್ರಹವನ್ನು ಪೂರ್ಣವಾಗಿ ಪಡೆದು ಅಧ್ಯಯನ ಮಾಡಬೇಕು. ದೇವರಿಗೆ ಬೇಡಿಕೊಂಡಿದ್ದೇನೆ ಎಂದು ಹೋದದೇ ಇರದೆ ಶ್ರದ್ಧೆಯಿಂದ ಅಧ್ಯಯನ ಮಾಡಿ, ಉದ್ಯೋಗ ಗಳಿಸಿ, ಪರೋಪಕಾರ ಮಾಡುತ್ತೇನೆ ಎಂಬ ಭಾವನೆ ಇರುವುದು ಒಳ್ಳೆಯದು. ಅದು ಸಮಾಜದ ಒಂದು ದೊಡ್ಡ ಆಧಾರಸ್ತಂಭವಾಗುವಂತೆ ಆಗಬೇಕು.

ಏಕಾಗ್ರತೆ ಬರಲು ಅಡ್ಡಿಯಾಗುವ ಮೊಬೈಲ್ ಗೇಮ್ಸ್ ಗಳ ಆಕರ್ಷಣೆಗೆ ಒಳಗಾಗದೆ ನಿಯಂತ್ರಣದಲ್ಲಿಟ್ಟುಕೊಂಡು ಮನಸ್ಸಿಗೆ ಉಲ್ಲಾಸ ಬರುವಂತೆ ಶ್ರಮ ಪರಿಹಾರವಾಗಲು ಎಷ್ಟು ಬೇಕೋ ಅಷ್ಟು ಆಟದಲ್ಲಿ ಸಮಯ ಕಳೆಯಬೇಕು. ಶಾರೀರಿಕ ಸದೃಢತೆಗೆ ಮಾನಸಿಕ ಉಲ್ಲಾಸಕ್ಕೆ ವಿಕಾಸಕ್ಕೆ ಎಷ್ಟು ಬೇಕು ಅಷ್ಟು ಸಮಯದಲ್ಲಿ ಆಟ ಆಡಿ ಉಳಿದ ಸಮಯ ವ್ಯರ್ಥ ಮಾಡಬಾರದೆಂಬ ದೃಢ ನಿರ್ಧಾರ ಇರಬೇಕು.

ಈ ಮಧ್ಯ ವಯಸ್ಸಿನಲ್ಲಿ ಗಂಡು-ಹೆಣ್ಣು ಇಬ್ಬರೂ ಕೂಡ ಯಾವುದೇ ವಿಧವಾದ ತಮ್ಮ ಮುಂದಿನ ವೈವಾಹಿಕ ಜೀವನದ ನಾಂದಿಯನ್ನು ಈಗ ಪ್ರಾರಂಭ ಮಾಡದೆ ಕೇವಲ ಅಧ್ಯಯನದ ಕಡೆಗೆ ಮನಸ್ಸನ್ನು ಇಡಬೇಕು. ಯಾವುದೇ ರೀತಿಯ ಆಕರ್ಷಣೆಗೆ ಬಲಿಯಾಗಿ ದಾರಿ ತಪ್ಪಬಾರದು. ಎಂದು ಹೇಳುವಾಗ ರಾಮಾಯಣದ ಸೀತೆಯನ್ನು ರಾವಣ ಕರೆದೊಯ್ಯುತ್ತಿರುವಾಗ ತನ್ನ ಮೈ ಮೇಲಿನ ಆಭರಣಗಳನ್ನೆಲ್ಲ ಆಕೆ ಕೆಳಗೆಸೆಯುತ್ತಾಳೆ. ಅದನ್ನು ಸುಗ್ರೀವ ಮೊದಲ ಕಪಿಗಳು ತೆಗೆದಿಟ್ಟು ಯಾರಾದರೂ ಬಂದು ಕೇಳಿದರೆ ಕೊಡೋಣ ಎಂದು ಕೊಂಡಿರುತ್ತಾರೆ. ಸ್ವಲ್ಪ ದಿನ ಕಳೆದ ಮೇಲೆ ರಾಮ ಲಕ್ಷ್ಮಣರು ಅದನ್ನು ಹುಡುಕುತ್ತಾ ಬಂದಾಗ ಲಕ್ಷ್ಮಣನಿಗೆ ಆಭರಣ ತೋರಿಸಿ ಇದು ಸೀತೆಯ ದ ಎಂದು ಕೇಳಿದಾಗ ಆಕೆ ನನ್ನ ಅಣ್ಣನ ಹೆಂಡತಿ ನನಗೆ ಪೂಜ್ಯಳು ತಾಯಿಯ ಸ್ಥಾನದಲ್ಲಿದ್ದಾಳೆ ನಿತ್ಯದಲ್ಲಿ ತಲೆಬಾಗಿ ಅವಳಿಗೆ ನಾನು ವಂದಿಸುವಾಗ ಅವಳ ಮುಖ ನೋಡಿ ಮಾತನ್ನೇ ಆಡಿಲ್ಲ. ಹಾಗಾಗಿ ಆಭರಣಗಳ ಕುರಿತಾಗಿ ಅಣ್ಣ ರಾಮ ಹೇಳುತ್ತಾನೆ. ಈ ರೀತಿಯ ಸಂಯಮ ನಮಗೆ ಆದರ್ಶವಾಗಬೇಕು. ಸಂಯಮ, ಬ್ರಹ್ಮಚರ್ಯದ ಪರಿಪಾಲನೆ ಮಾಡುವ ಪದ್ಧತಿ ನಮ್ಮ ಭಾರತ ದೇಶದಲ್ಲಿ ಯಾವ ಉನ್ನತ ಮಟ್ಟದಲ್ಲಿತ್ತು ಎನ್ನುವುದನ್ನು ವಾಲ್ಮೀಕಿ ರಾಮಾಯಣ ನಮಗೆ ತಿಳಿಸಿಕೊಡುತ್ತದೆ. ಈ ರೀತಿಯಲ್ಲಿ ಜೀವನ ನಡೆಸುವುದರಿಂದ ಅಧ್ಯಯನ ಪರಿಪೂರ್ಣವಾಗುತ್ತದೆ. ಇದು ಅಧ್ಯಯನ ಕಾಲದಲ್ಲಿಯೂ ವಿವಾಹದ ನಂತರವೂ ಇರಬೇಕು. ಮಡದಿಯ ಹೊರತಾಗಿ ಇನ್ನಾರನ್ನು ಕೂಡ ಕಾಮ ದೃಷ್ಟಿಯಿಂದ ನೋಡಬಾರದು. ಅದಕ್ಕೆ ಹೊರತಾಗಿ ಏನಾದರೂ ನಡೆದರೆ ಅದಕ್ಕಾಗಿಯೇ ದೊಡ್ಡ ದೊಡ್ಡ ಸಂಗ್ರಾಮಗಳೇ ನಡೆದು ಹೋಗಿವೆ. ರಾವಣ ಸೀತೆ ಅಪಹರಿಸುವ ಕೆಲಸ ಮಾಡಿದ್ದು ಅಷ್ಟೇ ಮತ್ತಾವುದೇ ತಪ್ಪು ಕೆಲಸವನ್ನು ಮಾಡಿಲ್ಲ ಆ ಕಾರಣಕ್ಕಾಗಿ ಯುದ್ಧವಾಗಿ ರಾವಣನೇ ಮೊದಲಾದ ಎಲ್ಲರ ಸಂಹಾರವಾಯಿತು. ಅದೇ ರೀತಿ ಮಹಾಭಾರತದಲ್ಲಿಯೂ ಸಹ ದ್ರೌಪದಿಯ ವಿಚಾರವಾಗಿ ನಡೆದದ್ದು. ಅವುಗಳನ್ನು ನೋಡಿದಾಗ ಜೀವನದಲ್ಲಿ ಸ್ತ್ರೀ ಮಾನದ ಸಂರಕ್ಷಣೆಯ ಮಹತ್ವ ನಮಗೆ ಗೊತ್ತಾಗುತ್ತದೆ. ಈ ಸಂಯಮ ಎಲ್ಲರಿಗೂ ಇರಬೇಕು.

ನಮ್ಮ ನಮ್ಮ ಕೆಲಸಗಳನ್ನು ನಾವು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಲೇ ಪರೋಪಕಾರದ ಗುಣವನ್ನು ಸಹ ಬೆಳೆಸಿಕೊಳ್ಳಬೇಕು. ಜಗತ್ತನ್ನು ಹುಟ್ಟಿಸಿದವನು ದೇವರು. ಬ್ರಹ್ಮಾಂಡದೊಳಗೆ ಅದೆಷ್ಟು ಅದ್ಭುತವಾದ ಡಿಸೈನ್ ಇದೆ ಎಂದರೆ ಒಬ್ಬೊಬ್ಬರ ಶರೀರ ರಚನೆಯಲ್ಲಿಯೂ ಭಿನ್ನವಾಗಿರುವುದು ಕಾಣುತ್ತದೆ. ಈ ಡಿಸೈನ್ ಮಾಡಿದವರು ತಂದೆ ತಯಾರಿ ಆಗಿದ್ದರೆ ಅವರಿಗೆ ಒಂದು ಪೇಪರ್ ಪೆನ್ ಕೊಟ್ಟರೆ ಮಗುವಿನ ಶರೀರ ರಚನೆಯನ್ನು ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಾಗಿ ತಂದೆ ತಾಯರು ಭಗವಂತನ ಕಾರ್ಯಕ್ಕೆ ಒಂದು ಇನ್ಸ್ಟ್ರುಮೆಂಟ್ ಅಷ್ಟೇ. ಒಬ್ಬ ಆರ್ಕಿಟೆಕ್ಟ್ ಪೆನ್ ಹಿಡಿದು ಡಿಸೈನ್ ಮಾಡ್ತಾನೆ ಅಂದ್ರೆ ಆ ಪೆನ್ನಿಗೆ ಡಿಸೈನ್ ಏನೆಂದು ತಿಳಿದಿರುವುದಿಲ್ಲ ಅದು ಆರ್ಕಿಟೆಕ್ಟ್ ಗೆ ಮಾತ್ರ ಗೊತ್ತು. ಆ ರೀತಿಯಲ್ಲಿ ಪರಮಾತ್ಮನೇ ನಿಜವಾದ ಡಿಸೈನರ್. ಅವನಿಲ್ಲದೆ ವಿಶ್ವವಿಲ್ಲ ಆದ್ದರಿಂದ ಸರ್ವೋತ್ತಮನಾದ ಜಗತ್ತಿನ ಸೃಷ್ಟಿಕರ್ತನಾದ ದೇವರು ನಮ್ಮನ್ನು ಹುಟ್ಟಿಸಿ ಅವನ ಪ್ರೇರಣೆಯಂತೆ ನಾವು ಸೇವೆ ದಾನವನ್ನು ಮಾಡಬೇಕು. ಅದಕ್ಕೆ ಫಲ ಕೊಡುವವನು ಭಗವಂತ ಎನ್ನುವ ನಂಬಿಕೆ ವಿಶ್ವಾಸ ಶ್ರದ್ಧೆ ಇಟ್ಟುಕೊಳ್ಳಬೇಕು. ಮನುಷ್ಯ ಎಲ್ಲಿದ್ದರೂ ತನ್ನನ್ನು ನೋಡುವವ ದೇವರಿದ್ದಾನೆ ಎಂಬ ಪ್ರಜ್ಞೆ ಇದ್ದರೆ ಮಾತ್ರ ಆತ ಏಕಾಂತದಲ್ಲಿಯೂ ತಪ್ಪು ಮಾಡುವುದಿಲ್ಲ. ಬಾಗಿಲು ಹಾಕಿಯೂ ತಪ್ಪನ್ನೆಸಗುವುದಿಲ್ಲ. ಆತ ಎಲ್ಲೆಡೆಯೂ ಎಲ್ಲಡಿ ಇದ್ದಾನೆ, ಎಲ್ಲವನ್ನ ತಿಳಿದಿದ್ದಾನೆ ಅವನ ಕಣ್ಣು ತಪ್ಪಿಸಿ ನಾವೇನು ಮಾಡಲು ಸಾಧ್ಯವಿಲ್ಲ ಹಾಗೇನಾದರೂ ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆ ಕೊಡುವ ಶಕ್ತಿ, ಸಾಮರ್ಥ್ಯ ಅವನಲ್ಲಿದೆ. ಅಂತಹ ಪರಮಾತ್ಮನ ಕಣ್ಣಿನಲ್ಲಿ ನಾವು ಸರಿಯಾದ ಕೆಲಸ ಮಾಡಿ ಧರ್ಮ ಮಾರ್ಗದಲ್ಲಿ ನಡೆಯಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಬದುಕು ಸಾಗಿಸಬೇಕು ಎಂದು ಅನುಗ್ರಹಿಸಿದರು.

ಇಷ್ಟೊಂದು ಧೀರ್ಘವಾಗಿ ಮಾತನಾಡಿದ ಗುರುಗಳ ಕುರಿತಾಗಿ ಮಕ್ಕಳಲ್ಲಿ ನಾನು ಕೇಳಿದಾಗ ದ್ವಿತೀಯ ಪಿಯು ವಿದ್ಯಾರ್ಥಿಯಾದ ನಂದನ್ ಕೆ ಕೌಡಿಕಿ ಶ್ರೀಗಳವರ ಹಿತೋಪದೇಶ ನಮ್ಮೆಲ್ಲರನ್ನು ಪಾವನ ಮಾಡಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾದ ಮಾತುಗಳು ಹಾಗೂ ಸನಾತನ ಧರ್ಮದಲ್ಲಿರುವ ಅಗಾಧವಾದ ಜ್ಞಾನ ನಮ್ಮ ಕಣ್ಮನ ತೆರೆಸಿದೆ. ಅವರು ಮಾತನಾಡಿದ ಒಂದೊಂದು ವಿಷಯಗಳು ವಿದ್ಯಾರ್ಥಿಗಳಿಗೆ ಬಹಳ ಸೂಕ್ತ. ಇಂತಹ ಧರ್ಮ ಕೇಂದ್ರದ ಕಾರ್ಯಕ್ರಮಗಳು ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮನೋಭಾವದ ಅಭಿವೃದ್ದಿಗೆ ಕಟ್ಟಿಟ್ಟ ಬುತ್ತಿ.
ಇನ್ನೋರ್ವ ವಿದ್ಯಾರ್ಥಿಯಾದ ನಚಿಕೇತ್ ಶ್ರೀ ಗಳವರು ವಿದ್ಯಾರ್ಥಿಗಳಿಗೆ ಅವರ ಜೀವನದಲ್ಲಿ ಯಶಸ್ಸು ಸಾಧಿಸಲು ಪಾಲಿಸಬೇಕಾದ ಸಜೀವ ತತ್ವಗಳನ್ನು ಎಲ್ಲರ ಮನಮುಟ್ಟುವಂತೆ ಸಾರಿದರು. ಅಷ್ಟೇ ಅಲ್ಲದೆ ಅತ್ಯಂತ ಶ್ರೇಷ್ಠವಾದ ಸನಾತನವಾದ ಹಿಂದೂ ಧರ್ಮದ ಇತಿಹಾಸ ಸಂಸ್ಕೃತಿ ವೇದ ತತ್ವಗಳು ಶ್ರೇಷ್ಠ ಭಾರತೀಯ ಚಿಂತನೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಮುಂದಿನ ಪೀಳಿಗೆಯಲ್ಲಿ ಭಾರತದ ಭವ್ಯತೆ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಮೆರೆಸುವಂತೆ ರಾಮಾಯಣ ಮಹಾಭಾರತಗಳ ಆಧಾರದಿಂದ ಮನುಷ್ಯನು ಪರಿಪೂರ್ಣತೆ ಹೊಂದಲು ಧರ್ಮದ ಮೂಲಕವೇ ಸಾಧ್ಯ ಎಂದು ಸಾರಿದರು.
ಗುರುಗಳ ಆಶೀರ್ವಾದ ಪಡೆದದ್ದು ನಮ್ಮ ಪುಣ್ಯ. ಅವರ ಆಶೀರ್ವಚನಗಳನ್ನು ಕೇಳಿ ನನಗೆ ತುಂಬಾ ಪ್ರೇರಣೆ ಸಿಕ್ಕಿತು. ಅವರು ನೀಡಿದ ಕರ್ಮ ಬ್ರಹ್ಮಚರ್ಯದ ಮೇಲಿನ ಬೋಧನೆ ನಮ್ಮ ಮೇಲೆ ಪ್ರಭಾವ ಬೀರಿತು ಎಂಬುದು ಸನಕನ ಅಭಿಪ್ರಾಯ.
ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ಕುಮಾರಿ ಹರ್ಷಿತ ಗುರುಗಳ ಮಾತಿನಿಂದ ಪ್ರೇರಣೆಯಾದ ನಾನು ಜೀವನದಿದ್ದಕ್ಕೂ ಧರ್ಮ ಪಾಲನೆಯನ್ನು ಮತ್ತು ಹಿಂದೂ ಧರ್ಮದ ಸಂಸ್ಕಾರವನ್ನು ಎಲ್ಲೇ ಇದ್ದರೂ ಪಾಲಿಸುತ್ತೇನೆ ಮತ್ತು ಅಳವಡಿಸಿಕೊಳ್ಳುತ್ತೇನೆ. ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯವನ್ನು ಮಾಡುತ್ತೇನೆ ಎನ್ನುವ ಸಂಕಲ್ಪ ಮಾಡುವಂತೆ ಪ್ರೇರೇಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾಳೆ.
ಇನ್ನೋರ್ವ ವಿದ್ಯಾರ್ಥಿಯಾದ ಸುಹಾಸ್ ಗುರುಗಳು ಧರ್ಮದ ಪ್ರಾಮುಖ್ಯತೆಯನ್ನು ಹೇಳಿದಾಗ ನಾವು ನಡೆಸುವ ಜೀವನ ಅಪೂರ್ಣವೆನಿಸಿತು. ನಮ್ಮ ಜೀವನದ ಗುರಿ ನಾವು ತಲುಪಬೇಕಾದರೆ ಹಣ ಸಂಪಾದನೆ ಒಂದೇ ಅಲ್ಲ ಪರೋಪಕಾರ ಬಹು ಮುಖ್ಯ. ಮನುಷ್ಯತ್ವದಿಂದ ನಾವು ನಡೆದುಕೊಳ್ಳಬೇಕು ಎಂಬೆಲ್ಲ ಮಾತುಗಳನ್ನು ತಿಳಿದ ಮೇಲೆ ಧರ್ಮ ಮಾರ್ಗವನ್ನು ನಾನು ಅನುಸರಿಸಬೇಕೆಂಬ ಸಂಕಲ್ಪ ಮಾಡಿದ್ದೇನೆ.
ಒಟ್ಟಾರೆ ಹೇಳಬೇಕೆಂದರೆ ಶ್ರೀ ಶ್ರೀ ಸತ್ಯಾತ್ಮರು ನಮ್ಮ ಕಾಲೇಜಿಗೆ ಬಂದದ್ದೇ ಒಂದು ಐತಿಹಾಸಿಕ ಸಂಗತಿ ಆದರೆ, ಅವರ ಅನುಗ್ರಹ ಸಂದೇಶ ಅನೇಕ ಮಕ್ಕಳ ಮೇಲೆ ಪ್ರಭಾವ ತಪ್ಪಾಗಲಾರದು. ಈ ರೀತಿಯ ಸಂಸ್ಕಾರ ನೀಡುವ ಕಾರ್ಯಕ್ರಮ ಮಕ್ಕಳನ್ನು ಪ್ರಬೋಧಗೊಳಿಸುತ್ತದೆ. ಗುರುಗಳು ಕೇವಲ ಮಠ ಮಂದಿರಗಳಿಗೆ ಸೀಮಿತರಾಗದೇ ಸಮಾಜೋದ್ಧಾರದ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವುದು ಅವರು ಸಮಾಜಮುಖಿಯಾಗಿರುವುದನ್ನು ತೋರಿಸುತ್ತದೆ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ.

Rotary Shimoga ಸೂಕ್ತ ಜೀವನ ಶೈಲಿ.ಉತ್ತಮ ಆಹಾರ ಪದ್ಧತಿಯಿಂದ ಸದೃಢ ಆರೋಗ್ಯ-‌ಡಾ.ನಿರಂಜನ ಪ್ರಭು

0

Rotary Shimoga ಉತ್ತಮ ಆಹಾರ ಪದ್ಧತಿ, ಸರಿಯಾದ ಜೀವನಶೈಲಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಡಾ. ನಿರಂಜನ್ ಪ್ರಭು ಅಭಿಮತ ವ್ಯಕ್ತಪಡಿಸಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆಯುರ್ವೇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಋಷಿಮುನಿಗಳ ಕಾಲದಿಂದ ಇಂದಿನವರೆಗೂ ಆಯುರ್ವೇದ ಪದ್ಧತಿ ಪ್ರಸ್ತುತವಾಗಿದೆ. ಕರೋನಾ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸೆ ಲಕ್ಷಾಂತರ ಪ್ರಾಣಗಳನ್ನು ಉಳಿಸಿದೆ ಎಂದು ತಿಳಿಸಿದರು.
ಇಂದಿನ ಬದಲಾದ ಪದ್ಧತಿ, ಒತ್ತಡ ಜೀವನಶೈಲಿ ಇರುವುದರಿಂದ ಆರೋಗ್ಯ ಕಾಳಜಿ ಬಗ್ಗೆ ಆಸಕ್ತಿ ವಹಿಸಬೇಕು. ಪ್ರತಿ ನಿತ್ಯ ಯೋಗ, ಪ್ರಾಣಾಯಾಮ, ಧ್ಯಾನವು ನಮ್ಮನ್ನು ಒತ್ತಡದಿಂದ ಮುಕ್ತಗೊಳಿಸುವ ಜತೆಗೆ ಸದಾ ಆತ್ಮವಿಶ್ವಾಸ ವೃದ್ಧಿಸಿ ಲವಲವಿಕೆಯಿಂದ ಇಡಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪೌಷ್ಟಿಕಾಂಶ ಇರುವ ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ರಾಸಾಯನಿಕ ಬಳಕೆಯ ಆಹಾರ ಪದಾರ್ಥದಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಸಾಮಾಜಿಕ ಜಾಲತಾಣದ ಒತ್ತಡ ಹೆಚ್ಚಾಗುತ್ತಿದೆ. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಗಣೇಶ್, ಚಂದ್ರಶೇಖರಯ್ಯ, ರಾಮಚಂದ್ರ, ನಾಗರಾಜ್, ಕಿಶೋರ್‌ಕುಮಾರ್, ಗೀತಾ ಚಿಕ್ಕಮಠ್, ಪ್ರತಾಪ್, ಡಾ. ಧನಂಜಯ, ಕೇಶವಪ್ಪ, ಶ್ರೀನಿವಾಸ್, ಕೃಷ್ಣಮೂರ್ತಿ, ಸಾಧ್ವಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.