ನಮ್ಮೊಳಗಿನ ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮ ಶಕ್ತಿ ಅರಿತು ಇತರೆ ಹೆಣ್ಣುಮಕ್ಕಳ ಶಕ್ತಿಯನ್ನು ಅರ್ಥ ಮಾಡಿಕೊಂಡು ಮುಂದೆ ಬರಬೇಕೆಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಶೈನಿ ಕೆ ಎಂ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನೆಹರೂ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Department of Youth Empowerment and Sports ಹೆಣ್ಣುಮಕ್ಕಳು ಕಟ್ಟುಪಾಡು, ಕಟ್ಟಳೆಗಳನ್ನು ಮುರಿದು ಮುಂದೆ ಬಂದಿದ್ದಾಳೆ. ಪುರುಷರು ನಿರ್ವಹಿಸುವಂತಹ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಹೆಣ್ಣುಮಕ್ಕಳಿದ್ದಾರೆ. ಜೊತೆಗೆ ಅವಳೆಡೆಗಿನ ಸಮಾಜದ ನಿರೀಕ್ಷೆಗಳು, ಪಿತೃಪ್ರಧಾನ ಸಮಾಜದ ರೂಢಿಗಳು ಹಾಗೂ ಸಾಕಷ್ಟು ಇತರೆ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾಳೆ. ಹೆಣ್ಣು ಎಷ್ಟೇ ಯಶಸ್ಸು ಸಾಧಿಸಿದ್ದರೂ ಕುಟುಂಬ, ಕಾಳಜಿ ವಿಷಯ ಬಂದಾಗ ತನ್ನ ಆಸೆಗಳನ್ನು ತ್ಯಾಗ ಮಾಡಿ ರಾಜೀ ಮಾಡಿಕೊಳ್ಳಲೇಬೇಕಾಗುತ್ತದೆ.
ಹೆಣ್ಣುಮಕ್ಕಳು ಕ್ಲೇಷಗಳನ್ನು ಕಳೆದು ಮನಸ್ಥಿತಿ ಮತ್ತು ಆಲೋಚನೆ ಬದಲಾಯಿಸಿಕೊಂಡಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮಲ್ಲಿನ ಕೌಶಲ್ಯವನ್ನು, ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ಸಾಮಾಜಿಕ ನೆಟ್‌ವರ್ಕ್ ಒದಗಿಸುತ್ತದೆ. ಮಾತಿಗೆ ಒಳ್ಳೆಯ ಶಕ್ತಿ ಇದ್ದು ನಾವಾಡುವ ಮಾತು ಸತ್ವ ಮತ್ತು ತತ್ವಭರಿತವಾಗಿರಬೇಕು. ವೈಷಮ್ಯ, ದ್ವೇಷ, ಪ್ರಚೋದನೆಗೀಡು ಮಾಡದೇ ಸೌಹಾರ್ಧಯುತವಾಗಿರಬೇಕು ಎಂದ ಅವರು ಮಹಿಳೆಯರಾದ ನಾವೆಲ್ಲ ನಮ್ಮ ಸಾಧನೆಗಳನ್ನು ಆಚರಿಸೋಣ, ಒಬ್ಬರಿಗೊಬ್ಬರು ಬೆಂಬಲಿಸೋಣ, ಕರ್ತವ್ಯ ಪಾಲನೆಯೊಂದಿಗೆ ಸಬಲೀಕರಣಗೊಳ್ಳೋಣ ಎಂದು ಕರೆ ನೀಡಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಕೆ ಮಾತನಾಡಿ, ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷವಾಕ್ಯ ‘ಕ್ರಿಯೆಗಳ ವೇಗವನ್ನು ವರ್ಧಿಸಿ’ ಎಂಬುದಾಗಿದ್ದು, ನಾವು ಸಮಾನತೆಯ ಕ್ರಿಯೆಗಳ ವೇಗವನ್ನು ವರ್ಧಿಸಬೇಕು. ಇಡೀ ಸಮಾಜ ಸಕ್ರಿಯವಾಗಿ ಪಾಲ್ಗೊಂಡು ಸಮಾನತೆಯನ್ನು ಸಾಧಿಸಬೇಕು. ಸಾಧನೆಯೊಂದೇ ಸಾಲದು, ಇದರ ವೇಗವನ್ನು ವರ್ಧಿಸಬೇಕು ಎಂದು ಹೇಳಿದರು.
ಉತ್ತಮ ಸಾಧನೆಯ ಭಾಗವೇ ಕ್ರೀಡೆ. ಇದೊಂದು ಸಮಾಜದ ಅಭಿವೃದ್ದಿಯ ಅತ್ಯುತ್ತಮ ಮಾದರಿ. ಹಾಗೂ ಇದನ್ನು ಸಮಾನತೆಯ ಸೂಚ್ಯಂಕವನ್ನಾಗಿ ತೆಗೆದುಕೊಳ್ಳಬಹುದು. ಕ್ರೀಡೆಯಿಂದ ಮನುಷ್ಯನ ಎಲ್ಲ ಸ್ನಾಯುಗಳಿಗೆ ಚಲನೆ ದೊರೆಯುತ್ತದೆ. ಸ್ನಾಯು ಮತ್ತು ಮೆದುಳಿನ ಸಂಯೋಜನೆ ಅತ್ಯಂತ ಮುಖ್ಯ. ಕ್ರೀಡೆ ಮೆದುಳಿನ ರಾಸಾಯನಿಕ ಏರುಪೇರುಗಳನ್ನು ಸಮತೋಲನಗೊಳಿಸುತ್ತದೆ. ಮಾನಸಿಕ ಸುಸ್ಥಿತಿಗೆ ಕಾರಣವಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಿ, ಭಾವನೆಗಳನ್ನು ನಿಯಂತ್ರಿಸುತ್ತದೆ. ಹಾಗೂ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುತ್ತದೆ. ಕ್ರೀಡೆಯನ್ನು ಪ್ರೀತಿಸಿದರೆ ಅದು ತಮ್ಮ ಬಗ್ಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಆದ್ದರಿಂದ ಹೆಣ್ಣುಮಕ್ಕಳು ಕ್ರೀಡೆ ಕುರಿತು ಯಾವುದೇ ತಪ್ಪು ಕಲ್ಪನೆ ಹೊಂದದೆ ಮುಂದೆ ಬರಬೇಕೆಂದು ಕರೆ ನೀಡಿದರು.
Department of Youth Empowerment and Sports ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತçದ ಉಪನ್ಯಾಸಕಿ ಡಾ. ಹಸೀನಾ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕ್ಲೇಷ ಮುಕ್ತರಾಗಿ ನಳನಳಿಸುತ್ತಾ ಇರುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ಹೆಚ್ಚಾಗಿ ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಬಹಳ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಸರ್ವಶ್ರೇಷ್ಟ ಸಾಧಕರೇ ಮಹಿಳೆಯರಾಗಿದ್ದಾರೆ. ಮೊಟ್ಟ ಮೊದಲಿಗೆ ನಡೆಯಲು ಮತ್ತು ಕೃಷಿ ಕಲಿಸಿಕೊಟ್ಟವರು ಮಹಿಳೆಯರು ಎಂದ ಅವರು ಬುದ್ದ, ಬಸವ, ಅಂಬೇಡ್ಕರ್‌ರಂತಹ ಮಹನೀಯರ ಸಮಾನತೆಯ ಹೋರಾಟದ ಫಲವಾಗಿ ನಾವಿಂದು ಇಂತಹ ವೇದಿಕೆಯಲ್ಲಿದ್ದೇವೆ ಎಂದು ಸ್ಮರಿಸಿದರು.
ಹಾಗೂ ನಾವೆಲ್ಲ ನಮ್ಮ ನಾಡು ನುಡಿಗಾಗಿ ಏನೇ ಮಾಡಿದರೂ ಕೂಡ ಒಂದು ಸಾಧನೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ತಾರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ರೇಖ್ಯಾನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಜರಿದ್ದರು.