ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಬೂತ್ ಮಟ್ಟದ ಮಹಿಳಾ ಅಧಿಕಾರಿ, ಶಿಕ್ಷಕಿ ಮಂಜುಳಾ(50) ಇವರು ಸೋಮವಾರ ಮೃತಪಟ್ಟಿದ್ದು, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಅಧಿಕಾರಿಗಳು ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಭದ್ರಾವತಿ ತಾಲ್ಲೂಕಿನ ಕಲ್ಲಾಪುರ ಬಳಿ ಕೋಡಿ ಹೊಸೂರು ಗ್ರಾಮದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಅವರು ಕುಸಿದು ಬಿದ್ದು ಮೃತಪಟ್ಟಿರುತ್ತಾರೆ. ಮೃತರ ಪಾರ್ಥಿವ ಶರೀರದ ದರ್ಶನ ಪಡೆದು, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಅಧಿಕಾರಿಗಳು, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು.
ಕರ್ತವ್ಯದಲ್ಲಿದ್ದಾಗಲೇ ಮರಣ ಹೊಂದಿದ ಬಿಎಲ್‌ಓ ಅವರ ಕುಟುಂಬಕ್ಕೆ ಸರ್ಕಾರದ ನಿಯಮಾವಳಿಗಳನ್ವಯ ಸಿಗಬೇಕಾದ ಸೌಲಭ್ಯ ಹಾಗೂ ಪರಿಹಾರದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಿಖಿಲ್, ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ, ತಹಶೀಲ್ದಾರ್ ಹಾಜರಿದ್ದರು.
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗಲೇ ಅಸುನೀಗಿದ ಶಿಕ್ಷಕಿ ಮನೆಗೆ ಡೀಸಿ ಅವರ ಭೇಟಿ
ಚಿತ್ರದುರ್ಗ- ಶಿವಮೊಗ್ಗ ರಸ್ತೆ ಅಗಲೀಕರಣ: 3ಜಿ ವಿಜಾರಣೆಗೆ ಹಾಜರಾಗಲು ಸೂಚನೆ
ರಾಷ್ಟ್ರೀಯ ಹೆದ್ದಾರಿ 369ರ ಚಿತ್ರದುರ್ಗ-ಶಿವಮೊಗ್ಗ ಸೆಕ್ಷನ್‌ನ ರಸ್ತೆ ಅಗಲೀಕರಣ ಯೋಜನೆಗೆ ಸಂಬಂಧಿಸಿದಂತೆ, ಅಂತಿಮ ಅಧಿಸೂಚನೆಯಲ್ಲಿ ಹೆಸರಿರುವ ಖಾತೆದಾರರು ಹಾಗೂ ಹಿತಾಸಕ್ತಿದಾರರಿಗೆ 3ಜಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಕಲಂ 3ಡಿ(1) ರನ್ವಯ ಹೊರಡಿಸಲಾದ ಅಂತಿಮ ಅಧಿಸೂಚನೆ ಸಂಖ್ಯೆ: S.O. 3110(ಇ) ಮತ್ತು S.O. 3109 (ಇ) (ದಿನಾಂಕ: 12.06.2026) ಅನ್ನು ಜೂನ್ 19 ರಂದು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು.
ಹೆದ್ದಾರಿಯ ಕಿ.ಮೀ 422.00 ರಿಂದ 523.600 ರವರೆಗಿನ ರಸ್ತೆ ಅಗಲೀಕರಣ ವ್ಯಾಪ್ತಿಯ ಶೆಡ್ಯೂಲ್‌ನಲ್ಲಿ ಹೆಸರಿರುವ ಭೂಮಾಲೀಕರು/ಖಾತೆದಾರರು ಅಗತ್ಯ ಕಂದಾಯ ದಾಖಲೆಗಳೊಂದಿಗೆ ದಿನಾಂಕ: 18.07.2026 ರಂದು ಪ್ರವಾಸಿ ಮಂದಿರ, ಹೊಳಲ್ಕೆರ, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಚಾರಣೆಗೆ ಹಾಜರಾಗಬೇಕಿದೆ.
ಸಂಬಂಧಪಟ್ಟ ಎಲ್ಲಾ ಖಾತೆದಾರರು ನಿಗದಿತ ಸಮಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಿದ್ದು, ವಿಚಾರಣೆಯಲ್ಲಿ ಭಾಗವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸಾಗರ ತಾಲ್ಲೂಕಿನಲ್ಲಿ ವೃಕ್ಷಲಕ್ಷ ಆಂದೋಲನ ಸಂಘಟನೆಯಿಂದ ಸಾಮಾಜಿಕ ಅರಣ್ಯಗಳ ಸಂರಕ್ಷಣಾ ಅಭಿಯಾನ
ಸಾಗರ ತಾಲೂಕಿನ ಶಿರವಂತೆ ಬಳಿ ಗೋಳಗೋಡ ವನದಲ್ಲಿ ನಡೆದ ಅಧ್ಯಯನ- ಸಮೀಕ್ಷೆ. ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಶ್ರಯದಲ್ಲಿ ಸಾಮಾಜಿಕ ಅರಣ್ಯಗಳ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ರಾಜ್ಯದಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟದಲ್ಲಿ ಕಳೆದ 35 ವರ್ಷಗಳಲ್ಲಿ ಸಾವಿರಾರು ಸಾಮಾಜಿಕ ಅರಣ್ಯವನಗಳನ್ನು ಸರ್ಕಾರದಿಂದ ನರ‍್ಮಿಸಲಾಗಿದೆ. ಹತ್ತಾರು ಸಾವಿರ ಎಕರೆ ವ್ಯಾಪ್ತಿ ಹೊಂದಿರುವ ಈ ವನಗಳ ಸಂರಕ್ಷಣೆಗೆ ಜಾಗೃತಿ ಅಭಿಯಾನ ಶುರು ಮಾಡಲಾಗಿದೆ. ಇಂಥ ರಚನಾತ್ಮಕ, ಹಸಿರು ಸಂರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಕರೆ ನೀಡಿದರು.
ಅವರು ಮಂಗಳವಾರರಂದು ಸಾಗರ ತಾಲ್ಲೂಕು ಶಿರವಂತೆ ಬಳಿ ಸಾಮಾಜಿಕ ಅರಣ್ಯ ವನದಲ್ಲಿ ನಡೆದ ಸಾಮಾಜಿಕ ಅರಣ್ಯ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ರವಿ ಅರಣ್ಯಗಳು ಮಲೆನಾಡಿನ ನದಿ ಕಣಿವೆಗಳ ಹಸಿರು ಹೆಚ್ಚಿಸಲು ಕಾರಣವಾಗಿದೆ ವನ ಸಂರಕ್ಷಣಾ ಅಭಿಯಾನದಲ್ಲಿ ಪಂಚಾಯತರಾಜ್ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಾಗರ ಆರ್.ಎಫ್. ಓ. ರಾಘವೇಂದ್ರ ಅವರು ಶಿವಮೊಗ್ಗಾ ಜಿಲ್ಲೆಯಲ್ಲಿ 264 ಸಾಮಾಜಿಕ ಅರಣ್ಯ ವನಗಳಿವೆ ಇವುಗಳ ವ್ಯಾಪ್ತಿ 330ಹೇಕ್ಟೇರ್ ಎಂದು ಮಾಹಿತಿ ನೀಡಿದರು.
ವೃಕ್ಷ ಲಕ್ಷ ಆಂದೋಲನದ ಆನೆಗೋಳಿ ಸುಬ್ಬರಾವ್ ಸ್ವಾಗತ ಮಾಡಿ, “ಈ ವನಗಳ ಸಸ್ಯ ಪುನಶ್ಚೇತನ ಚೆನ್ನಾಗಿ ಕಂಡು ಬಂದಿದೆ. ಇಲ್ಲಿ ನೈಸರ್ಗಿಕ ಕಾಡು ಬೆಳೆಯಲು ರೈತರ ಸಹಭಾಗಿತ್ವ ಅತ್ಯವಶ್ಯ” ಎಂದರು. ಜೀವವೈವಿಧ್ಯ ಮಂಡಳಿ ತಜ್ಞ ಉಪ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಸಾಮಾಜಿಕ ಅರಣ್ಯ ವನಗಳ ಪರಿಸ್ಥಿತಿ ಬಗ್ಗೆ ವಿಶೇಷ ಅಧ್ಯಯನ ಅತ್ಯವಶ್ಯ ಎಂದರು.
ಸೊರಬದ ಹೊಳೆಮರೂರಿನ ಸಾಮಾಜಿಕ ಅರಣ್ಯ ಸಂರಕ್ಷಣೆಗೆ ರೈತ ಮುಖಂಡ ಗಂಗಾಧರ ಗೌಡ ಅವರ ತಂಡ ಮುಂದಾಗಿದೆ” ಎಂದರು.
ಇನ್ನು 15 ದಿನಗಳ ಕಾಲ ಮಲೆನಾಡಿನ ಹಳ್ಳಿಗಳಲ್ಲಿ ಈ ಅಭಿಯಾನ ನಡೆಸಲಿದ್ದೇವೆ, ಸಾಮಾಜಿಕ ಅರಣ್ಯ ಜಾಗೃತಿ ಜಾಥಾ 7-8 ಜುಲೈದಂದು ಆನಂದಪುರ, ಬಟ್ಟೆಮಲ್ಲಪ್ಪ, ಆಯನೂರು, ಮಂಡಗದ್ದೆ, ತೀರ್ಥಹಳ್ಳಿ, ಹುಂಚಗಳಿಗೆ ಭೇಟಿ
ನೀಡಲಿದೆ. ಜಿಲ್ಲಾಧಿಕಾರಿ ZP ಸಿಇಒ ಅವರನ್ನು ಭೇಟಿ ಮಾಡಲಿದೆ ಎಂದು ವೃಕ್ಷ ಲಕ್ಷ ಆಂದೋಲನದ ಪ್ರಮುಖ ಕೆ.ವೆಂಕಟೇಶ ತಿಳಿಸಿದರು.
ತ್ರಿಪುರಾಂತಕ ದೇವಾಲಯದ ಅದ್ಯಕ್ಷ ಉಮೇಶ್ ಅಧ್ಯಕ್ಷತೆ ವಹಿಸಿದ್ದರು.
ಅರಣ್ಯ ಇಲಾಖೆ ಅದಿಕಾರಿಗಳಾದ ಪ್ರಭಾಕರ್, ಅಣ್ಣಪ್ಪ, ಸ್ಥಳೀಯ ಪ್ರಮುಖ ಪರಿಸರ ಕಾರ್ಯಕರ್ತರಾದ ಅರುಣ ಖಂಡಿಕಾ, ವೆಂಕಟೇಶ ಖಂಡಿಕಾ, ಗೀಜಗಾರು ಲಕ್ಷ್ಮೀನಾರಾಯಣ, ಕೆಸವಿನಮನೆ ಮಂಜುನಾಥ್, ಹೂಗೊಪ್ಪಲು ವಿಶ್ವೇಶ್ವರ ಮೊದಲಾದವರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ: ಶಿವಮೊಗ್ಗ ಡಿಸಿ ಅವರಿಂದ ತಾಜಾ ಸ್ಥಿತಿ ಮಾಹಿತಿ
ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಕಾರ್ಯವು ಸಾಗುತ್ತಿದ್ದು, ಜುಲೈ 7 ರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಾದ್ಯಂತ ಒಟ್ಟು ಶೇ. 81.92 ರಷ್ಟು ಇ-ಫಾರ್ಮ್‌ಗಳನ್ನು (EFs) ವಿತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,793 ಬಿ.ಎಲ್.ಒ ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 15,19,459 ಮತದಾರರಿದ್ದಾರೆ. ಈ ಪೈಕಿ ಇದುವರೆಗೆ 12,44,670 ಇ-ಫಾರ್ಮ್‌ಗಳನ್ನು ಅಂದರೆ ಶೇ. 81.92
ವಿತರಿಸಲಾಗಿದ್ದು, 70,540 ಫಾರ್ಮ್‌ಗಳನ್ನು ಶೇ.4.64 ಡಿಜಿಟಲೀಕರಣಗೊಳಿಸಲಾಗಿದೆ.
ಕ್ಷೇತ್ರವಾರು ಪ್ರಗತಿ ವಿವರಗಳು:
ಶಿವಮೊಗ್ಗ ಗ್ರಾಮಾಂತರ: ಒಟ್ಟು 2,20,250 ಮತದಾರರಿದ್ದು, 1,93,394 (ಶೇ. 87.81) ಇ-ಫಾರ್ಮ್ ವಿತರಿಸಲಾಗಿದೆ. 18,879 ಅಂದರೆ ಶೇ. 8.57 ಡಿಜಿಟಲೀಕರಣದೊಂದಿಗೆ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ.
ಭದ್ರಾವತಿ: 2,14,907 ಮತದಾರರಿದ್ದು, 1,62,742 (ಶೇ. 75.73) ಇ-ಫಾರ್ಮ್ ವಿತರಿಸಲಾಗಿದ್ದು, 8,824 ಫಾರ್ಮ್ ಅಂದರೆ ಶೇ 4.12 ಡಿಜಿಟಲೀಕರಣಗೊಂಡಿದೆ.
ಶಿವಮೊಗ್ಗ ನಗರ: ಅತಿ ಹೆಚ್ಚು ಅಂದರೆ 2,77,098 ಮತದಾರರನ್ನು ಹೊಂದಿದ್ದು, 1,94,410 (ಶೇ. 70.16) ಇ-ಫಾರ್ಮ್ ವಿತರಣೆಯಾಗಿದೆ. 3,486 ಫಾರ್ಮ್ ಶೇ.1.26 ಡಿಜಿಟಲೀಕರಣಗೊಂಡಿದೆ.
ತೀರ್ಥಹಳ್ಳಿ: 1,92,314 ಮತದಾರರಿದ್ದು, 1,66,822 (ಶೇ. 86.74) ಇ-ಫಾರ್ಮ್ ವಿತರಿಸಲಾಗಿದೆ. 11,810 ಫಾರ್ಮ್ ಶೇ. 6.14 ಡಿಜಿಟಲೀಕರಣಗೊಂಡಿದೆ.
ಶಿಕಾರಿಪುರ: 2,06,415 ಮತದಾರರಿದ್ದು, 1,71,595 (ಶೇ. 83.13) ಇ-ಫಾರ್ಮ್ ವಿತರಿಸಲಾಗಿದ್ದು, 9,573 ಫಾರ್ಮ್ ಶೇ. 4.64 ಡಿಜಿಟಲೀಕರಣ ಪ್ರಗತಿಯಲ್ಲಿದೆ.
ಸೊರಬ: 1,98,955 ಮತದಾರರಿದ್ದು, 1,75,244 (ಶೇ. 88.08) ರಷ್ಟು ಅತಿ ಹೆಚ್ಚು ಇ-ಫಾರ್ಮ್ ವಿತರಣೆ ದಾಖಲಿಸಿದೆ. ಇಲ್ಲಿ 9,400 ಫಾರ್ಮ್ ಶೇ. 4.72 ಡಿಜಿಟಲೈಸ್ ಮಾಡಲಾಗಿದೆ.
ಸಾಗರ: 2,09,520 ಮತದಾರರಿದ್ದು, 1,80,463 (ಶೇ. 86.13) ಇ-ಫಾರ್ಮ್ ವಿತರಿಸಲಾಗಿದ್ದು, 8,568 ಫಾರ್ಮ್ ಶೇ.4.09 ಡಿಜಿಟಲೀಕರಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ: ಆನ್ ಲೈನ್ ಅರ್ಜಿ ಆಹ್ವಾನ
2026ನೇ ಸಾಲಿನ “ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ” ಪ್ರಶಸ್ತಿಗೆ ಅರ್ಹರಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯಶಿಕ್ಷಕರು ಮತ್ತು ಪ್ರಾಂಶುಪಾಲರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಆಸಕ್ತರು ರಾಷ್ಟ್ರೀಯ ಪೋರ್ಟಲ್ https://nationalawardstoteachers.education.gov.in ಅಥವಾ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://schooleducation.karnataka.gov.in ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ದಿನಾಂಕ: 13/07/2026 ಕಡೆಯ ದಿನಾಂಕವಾಗಿದೆ.
ದಿನಾಂಕ 30/04/2026 ರವರೆಗೆ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಶಿಕ್ಷಕರು ಸಹ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ಅಭ್ಯರ್ಥಿಗಳು ತಮ್ಮ ತಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.
ಜುಲೈ 9…ಹೇಗಿರುತ್ತೆ ಹವಾಮಾನ…?
ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ ಇದೆ. ಗಾಳಿಯೂ ಮುಂದುವರಿಯುವ ಲಕ್ಷಣಗಳಿವೆ.
ಈಗಿನಂತೆ ಜುಲೈ 9ರಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಜುಲೈ 11ರಿಂದ ಬಿಸಿಲು ಹಾಗೂ ಮೋಡದ ವಾತಾವರಣದ ಸಾಧ್ಯತೆಗಳಿವೆ.
ಜುಲೈ 11ರಿಂದ ರಾಜ್ಯದಾದ್ಯಂತ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗುವ ಸೂಚನೆಗಳಿವೆ.
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿರಬಹುದು.
ಈಗಿನಂತೆ ಜುಲೈ 9ರಿಂದ ಮಳೆಯ ಪ್ರಮಾಣ ಕಡಿಮೆಯಾಗಿ 10ರಿಂದ ಬಿಸಿಲು ಹಾಗೂ ಮೋಡದ ವಾತಾವರಣದ ಲಕ್ಷಣಗಳಿವೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುಂದುವರಿಯಲಿದ್ದು, ಗದಗ, ಬಾಗಲಕೋಟೆ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಗಳಿವೆ.
ಈಗಿನಂತೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 10 ರಿಂದ ಹೆಚ್ಚಿನ ಅವಧಿಯೂ ಬಿಸಿಲಿನ ವಾತಾವರಣದ ಲಕ್ಷಣಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ದಾವಣಗೆರೆ, ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ತುಂತುರು ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 11ರಿಂದ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಅರಬ್ಬಿ ಸಮುದ್ರದ ಮಹಾರಾಷ್ಟ್ರ ಕರಾವಳಿಯಲ್ಲಿ ಮಧ್ಯಮ ಹಾಗೂ ಕೆಳಸ್ತರದ ತಿರುವಿಕೆಯು ಮುಂದುವರಿದಿದ್ದು, ಮುಂಬೈ ಇವತ್ತು ಸಹ ಭಾರಿ ಮಳೆಯ ಮುನ್ಸೂಚನೆ ಇದೆ.
ಜುಲೈ 11ರಿಂದ ರಾಜ್ಯದಾದ್ಯಂತ ಮಳೆ ತೀವ್ರವಾಗಿ ಕಡಿಮೆಯಾಗುವ ಲಕ್ಷಣಗಳಿವೆ.
ಸಾಗರ ತಾಲ್ಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಣೆ
ಸಾಗರ ತಾಲ್ಲೂಕಿನಲ್ಲಿ ತೀವ್ರ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿಧ್ಯಾರ್ಥಿಗಳ ಹಿತದೃಷ್ಠಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಾಗರ ತಾಲ್ಲೂಕಿನಾದ್ಯಂತ ದಿನಾಂಕ: 08-07-2026 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಹಿತ ಪದವಿಪೂರ್ವ ಕಾಲೇಜುಗಳು ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಒಂದು ದಿನದ ರಜೆಯನ್ನು ಘೋಷಿಸಿದೆ.
ಸದರಿ ರಜಾ ದಿನದಂದು ನಡೆಯಬೇಕಾಗಿದ್ದ ಪಾಠ ಪ್ರವಚನಗಳನ್ನು ಮುಂದಿನ ರಜಾ ದಿನಗಳಲ್ಲಿ ನಡೆಸಿ ಹೊಂದಾಣಿಕೆ ಮಾಡಿಕೊಳ್ಳಲು ಆದೇಶಿಸಿದೆ.
Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಒತ್ತು ನೀಡುತ್ತಿದೆ- ಕೆ.ಗಂಗಪ್ಪಗೌಡ
Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾನವೀಯ ಸೇವೆಗಳ ಮೂಲಕ ವಿಶ್ವದ 216 ದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದ್ದು, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಒತ್ತು ನೀಡುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪ ಗೌಡ ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು, ಸಿಆರ್‌ಪಿ ಹಾಗೂ ಬಿಆರ್‌ಪಿಗಳ ಒಂದು ದಿನದ ಮಾಹಿತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಇಂತಹ ಮಾಹಿತಿ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ. ಪ್ರಕಾಶ್ ಮಾತನಾಡಿ, ಮಾಹಿತಿ ಕಾರ್ಯಗಾರಗಳು ಜ್ಞಾನ ವೃದ್ಧಿಗೆ ಸಹಕಾರಿಯಾಗುವುದರ ಜೊತೆಗೆ ಇತರರಿಗೆ ತರಬೇತಿ ನೀಡುವ ಸಾಮರ್ಥ್ಯವನ್ನೂ ಬೆಳೆಸುತ್ತವೆ ಎಂದರು. ಜಿಲ್ಲೆಯ ಎಲ್ಲ ಅಧಿಕಾರಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತೆ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಮಕ್ಕಳಲ್ಲಿ ಕೌಶಲ್ಯ ಮತ್ತು ಜ್ಞಾನ ವೃದ್ಧಿಗಾಗಿ ಸಂಸ್ಥೆಯು ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
Bharat Scouts and Guides ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಆಯುಕ್ತ ಎಸ್. ಜಿ. ಆನಂದ್, ರೋವರ್ ವಿಭಾಗದ ಜಿಲ್ಲಾ ಆಯುಕ್ತ ಕೆ. ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್, ಜಿಲ್ಲಾ ಗೈಡ್ ಆಯುಕ್ತೆ ಕೆ. ಲಕ್ಷ್ಮೀ ರವಿ, ಜಿಲ್ಲಾ ಕಾರ್ಯದರ್ಶಿ ಕೆ. ವಿ. ಚಂದ್ರಶೇಖರಯ್ಯ, ತರಬೇತಿ ಆಯುಕ್ತ ಎಚ್. ಶಿವಶಂಕ್ರಪ್ಪ ಸೇರಿದಂತೆ ರಾಜೇಶ್ ಅವಲಕ್ಕಿ, ಸುಮನಾಶೇಖರ್, ಮಲ್ಲಿಕಾರ್ಜುನ್ ಕಾನೂರ್, ರುದ್ರಪ್ಪ ಚೇಲೂರು ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಇಸ್ಪೀಟು- ಬಡ್ಡಿ ಮಾಫಿಯಾಗೆ ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನ
ಭದ್ರಾವತಿ ನಗರದ ಭೋವಿ ಕಾಲೊನಿಯ ನಿವಾಸಿ ಅಶೋಕ ಆತ್ಮಹತ್ಯೆಗೆ ಯತ್ನಿಸಿದ್ದು, ಅದಕ್ಕೂ ಮುನ್ನ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಪಾಪಣ್ಣ, ಕುಳ್ಳಿ ರಾಜೇಶ್, ಅಣ್ಣಪ್ಪ ಹಾಗೂ ಧೃವ ಎಂಬವರ ಹೆಸರನ್ನು ಉಲ್ಲೇಖಿಸಿರುವ ಅಶೋಕ, ಇಸ್ಪೀಟು ಆಡಲು ದುಬಾರಿ ಬಡ್ಡಿಗೆ ಹಣ ನೀಡಿಸಿ, ಬಳಿಕ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಲ ಹಾಗೂ ಬಡ್ಡಿ ಹಣವನ್ನು ಕೂಡಲೇ ವಾಪಸ್ ನೀಡುವಂತೆ ಒತ್ತಡ ಹೇರಿ, ಹಣ ಕೊಡದಿದ್ದರೆ ಮನೆಗೆ ಬಂದು ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ.
ಪಾಪಣ್ಣ ಅವರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗೇಶ್ವರ್ ಅವರ ಸಹೋದರ ಎಂದು ಕೂಡ ಅಶೋಕ ಉಲ್ಲೇಖಿಸಿದ್ದಾರೆ.
ಇದೇ ವೇಳೆ, “ನನಗೂ ಕೆಲವರಿಂದ ಹಣ ಬರಬೇಕಿದೆ. ಡೊಳ್ಳ ಸೂರಿ ಸೇರಿದಂತೆ ಹಲವರು ಹಣ ವಾಪಸ್ ನೀಡಿಲ್ಲ. ಆದರೆ ಆ ಹಣ ಸಿಗದಿದ್ದರೂ ನನ್ನನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಈ ನಿರಂತರ ಕಿರುಕುಳ ಮತ್ತು ಅವಮಾನದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ. ನನ್ನ ಸಾವಿಗೆ ಇವರೇ ಕಾರಣ” ಎಂದು ಅಶೋಕ ವಿಡಿಯೊದಲ್ಲಿ ಆರೋಪಿಸಿದ್ದಾರೆ.
ಈ ಘಟನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಜುಲೈ 10. ಶಿವಮೊಗ್ಗ ಜಿಲ್ಲೆಯಲ್ಲಿ ಮದ್ಯದ ಸನ್ನದುಗಳ ವಿದ್ಯುನ್ಮಾನ ಮೂಲಕ ಇ- ಹರಾಜು ಪ್ರಕ್ರಿಯೆ
ಕರ್ನಾಟಕ ಸರ್ಕಾರದ ಅಧಿಸೂಚನೆ ಅನ್ವಯ ಅಬಕಾರಿ ಇಲಾಖೆಯ ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು (ಸಿಎಲ್-2ಎ ಚಿಲ್ಲರೆ ಮದ್ಯ ಮಾರಾಟ ಮತ್ತು ಸಿಎಲ್-9ಎ ರಿಫ್ರೆಶ್‌ಮೆಂಟ್ ರೂಂ ಬಾರ್) ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಇ-ಹರಾಜು ಮಾಡಲು ಸರ್ಕಾರ ಉದ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹರಾಜಾಗಲಿರುವ ಸನ್ನದುಗಳ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಭಾವ್ಯ ಬಿಡ್ಡುದಾರರಿಗೆ ಜುಲೈ 10 ರಂದು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಅಬಕಾರಿ ಡೆಪ್ಯೂಟಿ ಕಮಿಷನರ್ ತಿಳಿಸಿದ್ದಾರೆ.
15 ಮದ್ಯದ ಸನ್ನದುಗಳ ಹಂಚಿಕೆ ವಿವರ:
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 15 ಸನ್ನದುಗಳನ್ನು ಇ-ಹರಾಜು ಮಾಡಲು ಹಂಚಿಕೆ ಮಾಡಲಾಗಿದ್ದು, ವಲಯವಾರು ವಿವರ ಹೀಗಿದೆ:
ಶಿವಮೊಗ್ಗ ವಲಯ-1: 01, ಶಿವಮೊಗ್ಗ ವಲಯ-2: 02ಭದ್ರಾವತಿ: 03, ಶಿಕಾರಿಪುರ: 01, ಸಾಗರ: 02, ಸೊರಬ: 02, ತೀರ್ಥಹಳ್ಳಿ: 02, ಹೊಸನಗರ: 02.
ಇ-ಹರಾಜು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಬಿಡ್ಡುದಾರರಿಗೆ ಮಾರ್ಗದರ್ಶನ ನೀಡಲು
ದಿನಾಂಕ: 10-07-2026
ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಸರ್ಕಾರಿ ನೌಕರರ ಭವನ, ಆರ್.ಟಿ.ಒ. ಕಚೇರಿ ರಸ್ತೆ, ಡಿಸಿ ಕಾಂಪೌಂಡ್, ಶಿವಮೊಗ್ಗ ಇಲ್ಲಿ ತರಬೇತಿ ಆಯೋಜಿಸಲಾಗಿದೆ.
ಇ-ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಂಶಯ ಅಥವಾ ಪ್ರಶ್ನೆಗಳಿದ್ದಲ್ಲಿ ಸಾರ್ವಜನಿಕರು ಹಾಗೂ ಆಸಕ್ತ ಬಿಡ್ಡುದಾರರು ಇಲಾಖೆಯ ಅಧಿಕೃತ ವೆಬ್‌ಸೈಟ್ https://stateexcise.karnataka.gov.in/en ಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಕೋರಲಾಗಿದೆ.
