Monday, August 3, 2026
Monday, August 3, 2026
Home Blog Page 28

ಪಾರಂಪರಿಕ ಭತ್ತದ ತಳಿಗಳು ಕಾಣೆಯಾಗುತ್ತಿವೆ. ಅವುಗಳನ್ನ ಉಳಿಸಿ ಬೆಳೆಸುವಲ್ಲಿನ ಕೃಷಿ ಪ್ರಯೋಗ ಪರಿವಾರದ ಪ್ರಯತ್ನ ಅಭಿನಂದನೀಯ- ಶ್ರೀವಿಶ್ವವಲ್ಲಭಶ್ರೀ

0

ಪಾರಂಪರಿಕ ಭತ್ತದ ತಳಿಗಳು ಕಾಣೆಯಾಗುತ್ತಿರುವ ಈ ಕಾಲದಲ್ಲಿ ಅದನ್ನು ಉಳಿಸಿ ಬೆಳೆಸುವಲ್ಲಿ ತೊಡಗಿರುವ ಕೃಷಿ ಪ್ರಯೋಗ ಪರಿವಾರದ ಕಾರ್ಯ ಅಭಿನಂದನೀಯ.
ಔಷಧವಾಗಬೇಕಾದ ಆಹಾರ ಇಂದು ಔಷಧವೇ ಆಹಾರವಾಗಬೇಕಾದ ಸನ್ನಿವೇಶ ಎದುರಾಗಿದೆ. ಇದಕ್ಕೆ ಪರಿಹಾರವೆಂದರೆ ರಾಸಾಯನಿಕ ರಹಿತ ವಿಷಮುಕ್ತ ಅನ್ನ ಬೆಳೆಯುವುದು.” ಹೀಗೆಂದು ಸಾವಯವ ಕೃಷಿ ಪದ್ಧತಿಯ ಮಹತ್ತ್ವ ಸಾರುದವರು ಜಗದ್ಗುರು ಶ್ರೀಮನ್‌ ಮಧ್ವಾಚಾರ್ಯ ಸಂಸ್ಥಾನ ಸೋದೆ ಶ್ರೀಪಾದರಾದ ಶ್ರೀ ವಿಶ್ವವಲ್ಲಭತೀರ್ಥರು.

ಅವರು ತಳಿ ಸಂರಕ್ಷಣಾ ಅಭಿಯಾನದ ಮೂಲಕ ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ಶುದ್ಧನೈವೇದ್ಯ ಸಮರ್ಪಣಾ ನಿಮಿತ್ತ ಕೃಷಿ ಕಾಳಜಿಯ ವಾದಿರಾಜ ಗುರುಸಾರ್ವಭೌಮರ ಅವತಾರಭೂಮಿ ಹೂವಿನಕೆರೆ ಗೌರಿಗದ್ದೆಯಲ್ಲಿ ಪಾರಂಪರಿಕ ಭತ್ತದ ಸಸಿಯನ್ನು ನೆಟ್ಟು ಆಶೀರ್ವಚನ ನೀಡುತ್ತಿದ್ದರು. ಹೂವಿನಕೆರೆಯಲ್ಲಿ ಶ್ರೀ ವಾದಿರಾಜರ ಮೂಲಮನೆಯಿಂದ ಪಾದಯಾತ್ರೆಯ ಮೂಲಕ ಗೌರಿಗದ್ದೆಗೆ ಬಂದು ಸಸಿ ನೆಡುವ ಮೂಲಕ ತಳಿ ಸಂರಕ್ಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಅರ್ಥಪೂರ್ಣವಾಗಿತ್ತು.


ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಭಾರತದಲ್ಲೇ ಮೊದಲೆನಿಸಿದ ನಿತ್ಯ ಒಂದೊಂದು ತಳಿ ಶುದ್ಧ ನೈವೇದ್ಯ ಅನ್ನಬ್ರಹ್ಮನಿಗೆ ಸಮರ್ಪಿಸುವ ಯೋಜನೆಯ ರೂವಾರಿ ಹಾದಿಗಲ್ಲು ಅಭಯಲಕ್ಷ್ಮೀನೃಸಿಂಹ ದೇಗುಲದ ಧರ್ಮದರ್ಶಿ, ಸಂಸ್ಕೃತಿ ಚಿಂತಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ರೈತರ ಕೈ ಬಲಪಡಿಸಲು ಬೆಳೆವ ಭೂಮಿ ಇಲ್ಲದವರೂ ಸಹ ಆರ್ಥಿಕ ನೆರವಿನ ಪ್ರಾಯೋಜನೆಯ ಮೂಲಕ ಪರೋಕ್ಷ ರೈತರಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದೆಂದರು. ಕೃಷಿ ಋಷಿ ಪುರುಷೋತ್ತಮರಾಯರು ಸಾವಯವ ಕೃಷಿ ಪಸರಿಸಿದ ಬಗೆ ಮತ್ತು ಪಾರಂಪರಿಕ ಬೀಜತಳಿ ಸಂರಕ್ಷಣೆಗಾಗಿ ಕೃಷಿ ಪ್ರಯೋಗ ಪರಿವಾರ ಹಮ್ಮಿಕೊಂಡ ಕಾರ್ಯಚಟುವಟಿಕೆ ವಿವರಿಸಿದವರು ವಿಶ್ವಸ್ತರಾದ ಚಕ್ಕೋಡಬೈಲು ಶ್ರೀವತ್ಸ.

ಪರಿವಾರದ ಪೂರ್ಣಾವಧಿ ಕಾರ್ಯಕರ್ತ ಕೃಷಿ ಪದವಿಧರ ಅರುಣ, ವ್ಯವಸ್ಥಾಪಕ ನಿರ್ದೇಶಕ ಸರು ದಿನೇಶ, ನಿರ್ದೇಶಕ ಕಾರ್ಕಳದ ಶ್ರೀನಿವಾಸ ಭಟ್, ಸಾಮಾಜಿಕ ಕಾರ್ಯಕರ್ತ ಶ್ಯಾಮಸುಂದರ, ಹೂವಿನಕೆರೆ ಮಠದ ಆಡಳಿತ ಸಮಿತಿಯ ಚಂದ್ರಮೋಹನ ಧನ್ಯ, ಕೋಟೇಶ್ವರ ರಮೇಶ್‌ ಹತ್ವಾ ಸೇರಿದಂತೆ ಹಲವು ರೈತರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ತಲಾ ಎರಡು ಎಕರೆ ಗದ್ದೆ ಕೃಷಿಯ ಪ್ರಾಯೋಜಕರಾಗಿ ಶ್ರೀ ಉದಯಶೇಟ್‌ ಮತ್ತು ಶ್ರೀ ಸೂರ್ಯನಾರಾಯಣ ಅಡಿಗ ಅವರು ಗುರುಗಳಿಂದ ಆಶೀರ್ವಾದ ಪಡೆದದ್ದು ಸಾವಯವ ಕೃಷಿಕರ ಹುಮ್ಮಸ್ಸನ್ನು ಹೆಚ್ಚಿಸಿತ್ತು.

ಬುಳ್ಳಾಪುರದಲ್ಲಿ ಫೈಬರ್ ದೋಟಿ ವಿದ್ಯುತ್ ತಂತಿಗೆ ತಾಗಿ ಕೃಷಿಕರ ದುರ್ಮರಣ.ಪ್ರಕರಣ ದಾಖಲು

0

ಶಿವಮೊಗ್ಗ ಜಿಲ್ಲೆಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಬುಳ್ಳಾಪುರ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಶಿವಮೊಗ್ಗ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಬುಳ್ಳಾಪುರ ಗ್ರಾಮದ ಬಸವರಾಜಪ್ಪ ಗೌಡ (55) ಮೃತಪಟ್ಟ ರೈತ ಎಂದು ಗುರುತಿಸಲಾಗಿದೆ.

ತಮ್ಮ ತೋಟದಲ್ಲಿ ಫೈಬರ್ ದೋಟಿ (ಕೋಲು) ಬಳಸಿ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತೋಟದ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಫೈಬರ್ ದೋಟಿ ತಗುಲಿದ ಪರಿಣಾಮ ಬಸವರಾಜಪ್ಪ ಗೌಡ ಅವರಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

S.N. Channabasappa ರಸ್ತೆ ಡಾಂಬರೀಕರಣ, ಸುಸಜ್ಜಿತ ಒಳಚರಂಡಿ ನವೀಕರಣಗಳನ್ನ ಕಾಲಮಿತಿಯೊಳಗೆ ಮತ್ತು ಅತ್ಯುನ್ನತ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುತ್ತೇವೆ- ಎಸ್.ಎನ್.ಚನ್ನಬಸಪ್ಪ

0

S.N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 18, 28, 31 ಹಾಗೂ 33ರ ವಿವಿಧ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ, ಸುಸಜ್ಜಿತ ಒಳಚರಂಡಿ ನವೀಕರಣ ಹಾಗೂ ವಿವಿಧ ನಾಗರಿಕ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸ್ತ್ರೋಕ್ತವಾಗಿ ‘ಗುದ್ದಲಿ ಪೂಜೆ’ಯನ್ನ ಶಾಸಕ ಎಸ್.ಎನ್.ಚನ್ನಬಸಪ್ಪ ನೆರವೇರಿಸಿದರು

ಕ್ಷೇತ್ರದ ತಳಮಟ್ಟದ ಅಗತ್ಯಗಳನ್ನು ಅರಿತು, ನಿಗದಿತ ಕಾಲಮಿತಿಯೊಳಗೆ ಅತ್ಯುನ್ನತ ಗುಣಮಟ್ಟದೊಂದಿಗೆ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಈ ಸಂದರ್ಭದಲ್ಲಿ ಹೇಳಿದರು.

ಈ ಪ್ರಗತಿಪರ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ನಾಗರಾಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ನವಲೆ, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ನವಲೆ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ರಾಹುಲ್ ಬಿದರೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಶ್ರೀ ಶಿವಮೂರ್ತಿ, ಶ್ರೀ ಜಗನ್ನಾಥ ಸೇರಿದಂತೆ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಮುಖಂಡರು, ಕಾರ್ಯಕರ್ತ ಬಂಧುಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಒಂದು ಭಾಷೆ ಅಳಿದರೆ ಅದರೊಂದಿಗೆ ಒಂದು ಸಂಸ್ಕೃತಿಯೂ ಅಳಿದುಹೋಗುತ್ತದೆ : ಡಾ.ಸಣ್ಣರಾಮ

0

ಬಂಜಾರ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಒಂದು ಭಾಷೆ ಅಳಿದರೆ ಅದರೊಂದಿಗೆ ಒಂದು ಸಂಸ್ಕೃತಿಯೂ ಅಳಿದುಹೋಗುತ್ತದೆ ಎಂದು ಡಾ. ಸಣ್ಣರಾಮ ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು, ಸಂತ ಶ್ರೀ ಸೇವಾಲಾಲ್ ಮತ್ತು ದುರ್ಗಾಂಬ ಸೇವಾ ಸಮಿತಿ ಹಾಗೂ ನೆಲ್ಲಿಸರ ತಾಂಡದ ಸ್ವಸಹಾಯ ಮಹಿಳಾ ಸಂಘಗಳ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ನೆಲ್ಲಿಸರ ತಾಂಡದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ‘ಸಂತ ಶ್ರೀ ಸೇವಾಲಾಲ್ ಪರಂಪರೆ ಮತ್ತು ಪ್ರಸ್ತುತತೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಜಾರ ಬುಡಕಟ್ಟು ಸಮುದಾಯವು ತನ್ನದೇ ಆದ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಸಮುದಾಯವಾಗಿದೆ. ಮರಾಠಿ, ಹಿಂದಿ, ಗುಜರಾತಿ ಹಾಗೂ ರಾಜಸ್ಥಾನಿ ಭಾಷೆಗಳೊಂದಿಗೆ ಸಾಮ್ಯತೆ ಹೊಂದಿದ್ದರೂ ಬಂಜಾರ ಭಾಷೆ ತನ್ನದೇ ಆದ ಸ್ವರೂಪವನ್ನು ಉಳಿಸಿಕೊಂಡಿದೆ.

ಅದರಲ್ಲಿರುವ ಮೌಖಿಕ ಸಾಹಿತ್ಯ ಸಂಪತ್ತು ಅತ್ಯಂತ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಹೇಳಿದರು.

ಸಂತ ಶ್ರೀ ಸೇವಾಲಾಲ್ ಅವರನ್ನು ಕೇವಲ ಪೂಜಿಸುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳ ಜೀವನ ಹಾಗೂ ಸಮಾಜ ಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಜೀವಿಗಳ ಒಳಿತನ್ನು ಬಯಸಿದ ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಎಂ. ಮುತ್ತಯ್ಯ ಅವರು ‘ಬುಡಕಟ್ಟು ಸಾಂಸ್ಕೃತಿಕ ನಾಯಕರ ಸ್ವರೂಪ’ ಕುರಿತು ಉಪನ್ಯಾಸ ನೀಡಿ, ಪ್ರತಿಯೊಂದು ಸಮುದಾಯದ ಸಾಂಸ್ಕೃತಿಕ ನಾಯಕರು ತಮ್ಮ ಜನಾಂಗದ ರಕ್ಷಣೆ, ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ.

ಯಾವುದೇ ಸಾಮ್ರಾಜ್ಯ ನಿರ್ಮಾಣಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ ಬದುಕಿದ ಇಂತಹ ನಾಯಕರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಎಂ. ರವಿನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ನೆಲ್ಲಿಸರ ತಾಂಡದ ನಾಯಕ್, ಡಾವೋ, ಕಾರಭಾರಿ, ಡಾ. ಸಾಗರ್ ಯು., ಶ್ರೀಮತಿ ಗಿರಿಜಾಬಾಯಿ, ಸೇವಾಲಾಲ್ ದುರ್ಗಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಅಂತ್ಯದಲ್ಲಿ ಕರಕುಚ್ಚಿಯ ಸೇವಾಲಾಲ್ ಮರಿಯಮ್ಮ ಭಜನಾ ವಾಜಾ ತಂಡದವರು ಸಂತ ಶ್ರೀ ಸೇವಾಲಾಲ್ ಅವರ ಭಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿದರು.

Klive Special Article ಸಕಲ ವಿದ್ಯಾಸಂಪನ್ನ, ಮಹಾಮಹಿಮ ಶ್ರೀವಿಜಯೀಂದ್ರ ತೀರ್ಥರು. ಲೇ: ಎನ್. ಜಯಭೀಮ ಜೊಯ್ಸ್

0

ದಿನದ ಒಳ್ಳೆಯಮಾತು(ಯತಿಗಳ ಸ್ಮರಣೆ)

ವಿಜಯೀಂದ್ರತೀರ್ಥ ಗುರುಸಾರ್ವಭೌಮರು

Klive Special Article ಶ್ರೀವಿಜಯೀಂದ್ರತೀರ್ಥಗುರುಗಳು ಕಲಿಯುಗ ಕಲ್ಪತರು ಕಾಮಧೇನು ಎಂದೇ ಪ್ರಖ್ಯಾತರಾಗಿರುವ
ಶ್ರೀರಾಘವೇಂದ್ರತೀರ್ಥರ ಪರಮ ಗುರುಗಳು.
ಶ್ರೀಸುಧೀಂದ್ರತೀರ್ಥರ ಆಶ್ರಮ ಗುರುಗಳು.ಇವರು ಮಹಾನ್ ತಪಸ್ವಿಗಳು ಮತ್ತು ಜ್ಞಾನಿವರೇಣ್ಯ ಯತಿವರ್ಯರು.
ಇವರು ಮೂರು”ವಿ”ಅಕ್ಷರದಿಂದ
ಶೋಭಿತರಾದವರು..
ಮೊದಲನೆಯ “ವಿ”ಅಕ್ಷರ ಅವರ ಜನ್ಮನಾಮ ವಿಠಲಾಚಾರ್ಯರೆಂದು.ಎರಡನೆಯ “ವಿ”ಅಕ್ಷರ ಇವರು ಶ್ರೀವ್ಯಾಸರಾಯರಿಂದ ಸನ್ಯಾಸದೀಕ್ಷೆ ಪಡೆದು
“ವಿಷ್ಣುತೀರ್ಥ”ರೆಂದು ನಾಮಕರಣ ಹೊಂದಿದರು.
ಮೂರನೆಯ “ವಿ”ಅಕ್ಷರ ಇವರು ಶ್ರೀಸುರೇಂದ್ರತೀರ್ಥರ ಶಿಷ್ಯರಾಗಿ ಅವರಿಂದ ದಂಡಪಲ್ಲಟ ಮಾಡಿ ಶ್ರೀವಿಜಯೀಂದ್ರತೀರ್ಥರೆಂದು
ನಾಮಕರಣಗೊಂಡು ಶ್ರೀಸುರೇಂದ್ರತೀರ್ಥರ ಉತ್ತರಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗುತ್ತಾರೆ.
ಇವರು ಶ್ರೀಷೋಡಶಬಾಹು ನರಸಿಂಹ ದೇವರ ಅನುಗ್ರಹದಿಂದ ವಿಷಪ್ರಾಶನದಿಂದ ಮೃತ್ಯುವನ್ನೇ ಗೆದ್ದವರು.
ಇವರ ವೇದಾಂತ ಸಿಂಹಾಸನ ರೂಢರಾಗಿದ್ದಾಗ ಬಹಳಷ್ಟು ಮಹಿಮೆಗಳು ನಡೆದಿವೆ.
ಇವರ ಮೂಲಬೃಂದಾವನವಿರುವುದು ತಮಿಳುನಾಡಿನ
ಕುಂಭಕೋಣಂನಗರದಲ್ಲಿ.
Klive Special Article ಇಂತಹ ಮಹಾಮಹಿಮರ ಆರಾಧನೆಯನ್ನು ಜ್ಯೇಷ್ಠ ಬಹುಳ ತ್ರಯೋದಶಿಯಂದು ಆಚರಿಸಲಾಗುತ್ತದೆ.
ಶ್ರೀಗಳವರ ಆರಾಧನೆಯ ಸಂದರ್ಭದಲ್ಲಿ ,ಸ್ಮರಣೆ
ಮಾಡಿ ಭಕ್ತಿಯ ನಮನಗಳನ್ನರ್ಪಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಗಾನ ಕೋಗಿಲೆ ಎಸ್.ಜಾನಕಿ ಅವರ ನಿಧನವಾರ್ತೆ ತಿಳಿದು ದುಃಖಿತನಾಗಿದ್ದೇನೆ : ಡಿ.ಕೆ.ಶಿವಕುಮಾರ್

0

ಪ್ರಖ್ಯಾತ ಗಾಯಕಿ, ‘ಗಾನ ಕೋಗಿಲೆ’ ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ.

ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ.

ಓಂ ಶಾಂತಿ.
ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತಮ್ಮ ಶೋಕ ಸಂದೇಶದಲ್ಲಿ ಮರೆಯಾದ ಗಾಯಕಿ ಎಸ್ .ಜಾನಕಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ

ಎಳೆಯ ವಯಸ್ಸಿನಲ್ಲೇ ಅಧ್ಯಾತ್ಮದ ಅದ್ಭುತ ಸಾಧಿಸಿದ ” ನಚಿಕೇತ”

0

ಲೇ: ಪ್ರಸಾದ್ ಶ್ರೀವತ್ಸ. ದಾವಣಗೆರೆ.

ಬಾಲ ತತ್ತ್ವ ನಿಷ್ಠ ನಚಿಕೇತ
ಅದೆಷ್ಟೋ ತಾತ್ತ್ವಿಕರ, ಆಧ್ಯಾತ್ಮಿಗಳ ಬೆನ್ನು ಹತ್ತಿ ಹೊರಟ ನನಗೆ ಪ್ರತಿಬಾರಿಯೂ ಅತ್ಯಂತ ಕುತೂಹಲಕಾರಿ ಅಂಶಗಳು ಕಂಡುಬರುತ್ತಿವೆ. ಕಲಿಯುಗದ ಹಲವಾರು ಸಂತರ ಅನುಭಾವಿಗಳ ಬಗ್ಗೆ ತಿಳಿದ ನಾನು ಸ್ವಲ್ಪ ಗತಕಾಲಗಳನ್ನು, ಗತಿಸಿದ ಯುಗಗಳನ್ನು ವೇದ ಉಪನಿಷತ್‌ ಕಾಲಗಳಲ್ಲಿ ಸ್ವಲ್ಪ ಸಂಚರಿಸಿದಾಗ ನಾನು ಅನೇಕ ಋಷಿಮುನಿಗಳನ್ನು, ತಪಸ್ವಿಗಳನ್ನು ಕಂಡು ಅಚ್ಚರಿಗೊಂಡೆ. ಏಕೆಂದರೆ ತತ್ತ್ವವೆಂಬುದು ಕೇವಲ ಒಂದು ವಿಷಯವಲ್ಲ ಬ್ರಹ್ಮವೆಂಬುದು ಕೇವಲವಲ್ಲ, ಜ್ಞಾನ-ವಿಜ್ಞಾನ ಇನ್ನೂ ಅನೇಕ ಹೆಸರುಗಳಿಂದ ಕರೆಯಲ್ಪಡುವ ಎಲ್ಲರಿಗೂ ಅಸಾಧ್ಯವಾದ, ಸಾಧಕರಿಗೆ ಸಾಧ್ಯವಾಗುವ, ಸದಾ ಜಿಜ್ಞಾಸೆ ಹುಟ್ಟಿಸುವ, ರಹಸ್ಯವೆನಿಸುವ , ಭೇದಿಸಲಾರದ ಮತ್ತು ಕೇವಲ ಅನುಭಾವಿ ಅಥವಾ ಅದೇ ಮಾರ್ಗದಲ್ಲಿರುವವರು ಮಾತ್ರ ತಲುಪಬಹುದಾದ ಗುರಿ ಎಂಬುದು ಆಗಾಗ ಅನಿಸುತ್ತಿದ್ದರೂ ಸಹಾ ಕೆಲವೊಮ್ಮೆ ಸಣ್ಣ ಮಕ್ಕಳಿಗೂ ಸಾಧಿಸಬಹುದಾದ ವಿದ್ಯೆಯೆಂಬುದು ಕೂಡಾ ಅಷ್ಟೇ ನಿಜ. ಈ ಅಂಕಣದ ಬರವಣಿಗೆಯು ನಿಜಕ್ಕೂ ನನಗೆ ಖುಷಿಕೊಡುವ ಸಂಗತಿ. ಏಕೆಂದರೆ ಪ್ರಸ್ತುತ ಪ್ರಪಂಚದಲ್ಲಿ ನಮಗೆ ಎಲ್ಲವೂ ದೊರಕಿದೆ. ಆಸ್ತಿ-ಅಂತಸ್ತು, ಗೌರವ-ಪ್ರತಿಷ್ಠೆ, ಎಲ್ಲವೂ ಅಂದರೆ ಯಾವುದಕ್ಕೂ ಕೊರತೆಯಿಲ್ಲ. ಆದರೆ ನನಗೊಂದು ಕೊರತೆಯಿದೆ, ಅದೇ ನೆಮ್ಮದಿ. ನೆಮ್ಮದಿಯನ್ನೋ ಅಥವಾ ಶಾಶ್ವತ ಸುಖವನ್ನು ಹುಡುಕ ಹೊರಟವರಿಗೆ ಜಗತ್ತು ಒಂದು ಸಂತೆಯಾಗಿ ಕಂಡರೆ, ಗೆಲ್ಲಲು ಹೊರಟವನಿಗೆ ಅದೊಂದು ರಣಭೂಮಿಯಾಗಿರಬಹುದು. ಅನಾದಿ ಕಾಲದಿಂದಲೂ ಲೌಕಿಕ ಸುಖಕ್ಕಾಗಿ ಹಾತೊರೆಯುತ್ತಿರುವ ಮನುಷ್ಯನಿಗೆ ಪದವಿ, ಕೀರ್ತಿ, ಪ್ರತಿಷ್ಟೆ, ಪ್ರಸಿದ್ಧಿಗಳು ಅವನ ಆಧ್ಯಾತ್ಮಿಕ ಸಾಧನೆಗೆ ಅಡ್ಡಿಯಾಗಿ ಅಥವಾ ಮಾರ್ಗಮಧ್ಯದಲ್ಲಿ ನಶೆಯೇರಿಸುವಂಥ ಪ್ರಕ್ರಿಯೆಗಳಾಗಿವೆ. ಹಿಂದೆಯೂ ಸಹಾ ಲೌಕಿಕ ಸಂಪತ್ತಿಗಾಗಿ ಹೋಮ-ಹವನಾದಿಗಳು ನಡೆಸಿದ್ದು ನಾವು ಕೇಳಿರುತ್ತೇವೆ. ಲೋಕೋಪಕಾರಕ್ಕಾಗಿ ಕೆಲವು ಯಾಗಗಳಾದರೆ ಇನ್ನು ಬಹುತೇಕ ಯಾಗಗಳು ಲೌಕಿಕ ಆಸೆಗಳನ್ನೀಡೇರಿಸಿಕೊಳ್ಳುವ ಸಲುವಾಗಿಯಿರುತ್ತವೆ.
ಉಪನಿಷತ್‌ ಕಾಲದ ಕಥೆಯಿದು. ಕಠೋಪನಿಷತ್ತಿನ ಮೂಲ ವಸ್ತುವೇ ಬ್ರಹ್ಮಾನುಸಂಧಾನ. ವಾಜಶ್ರವ ಎಂಬ ವ್ಯಕ್ತಿಯೊಬ್ಬ “ವಿಶ್ವಜಿತ್”‌ ಎಂಬ ಯಾಗವೊಂದನ್ನು ಮಾಡಿ ಇಡೀ ವಿಶ್ವಕ್ಕೇ ತಾನು ಸಾರ್ವಭೌಮನಾಗಬೇಕೆಂಬ ಹಂಬಲ ಹೊಂದಿ, ತನ್ನಲ್ಲಿದ್ದ ಎಲ್ಲ ವಸ್ತುಗಳನ್ನೂ ದಾನ ಮಾಡುತ್ತಾನೆ ಎಂಬ ಉಲ್ಲೇಖವಿದೆ. ಆದರೆ ಈ ವಾಜಶ್ರವನು ಅತ್ಯಂತ ಳೋಭಿ ವ್ಯಕ್ತಿ. ದಾನವನ್ನು ಅದರಲ್ಲಿಯೂ ತನ್ನ ಸರ್ವಸ್ವ ದಾನ ಮಾಡಿದರೆ ಮಾತ್ರ ಅವನ ಯಾಗ ಸಂಪೂರ್ಣವಾಗುತ್ತದೆ. ನಂತರ ಅವನು ಹೇಗೆ ದಾನ ಮಾಡುತ್ತಾನೆಂದರೆ ತನ್ನಲ್ಲಿದ್ದ ಇನ್ನೇನು ಸ್ವಲ್ಪ ದಿನಗಳಲ್ಲಿ ತನ್ನ ಆಯುಷ್ಯ ಕಳೆದುಕೊಳ್ಳುವಂಥ ವಸ್ತುಗಳನ್ನು ಅವನು ದಾನ ಮಾಡಬೇಕು. ಉದಾಹರಣೆ : ಕೊಳೆತ ತರಕಾರಿಗಳು, ಬಂಜೆ ಅಥವಾ ಮುದಿ ಹಸುಗಳು, ಸ್ವಲ್ಪೇ ಸ್ವಲ್ಪ ದಿನಗಳಲ್ಲಿ ಸಾಯಬಹುದಾದ ಕುದುರೆಗಳು ಹೀಗೆ ಬ್ರಾಹ್ಮಣರಿಗೆ ದಾನ ಮಾಡುತ್ತಿರುವುದನ್ನು ಅವನ ಮಗ ಗಮನಿಸುತ್ತಾನೆ. ಅವನ ಹೆಸರು ʼನಚಿಕೇತʼ. ಸಣ್ಣ ಬಾಲಕ ನಚಿಕೇತ ತನ್ನ ತಂದೆಯ ಈ ಕೆಟ್ಟ ಮನಸ್ಥಿತಿಯನ್ನು ಸರಿಪಡಿಸಲು ಅವನಿಗೆಪದೇ ಪದೇ ಕೇಳುತ್ತಾನೆ “ಅಪ್ಪಾ ! ನನ್ನನ್ನು ಯಾರಿಗೆ ದಾನ ನೀಡುವೆ ?” ಒಂದೆರೆಡು ಬಾರಿ ಇದನ್ನು ಲಘುವಾಗಿ ಪರಿಗಣಿಸಿದ ಆದರೆ ಇವನ ಕೇಳುವಕೆಯಿಂದ ಸಿಟ್ಟು ಬಂದು “ ಮಗನೇ, ನಿನ್ನನ್ನು ಯಮನಿಗೆ ದಾನ ನೀಡುವೆ” ಎನ್ನುತ್ತಾನೆ. ಕೂಡಲೇ ಮಗ ಸಶರೀರ ಯಮಪುರಿಗೆ ಹೋಗಿಬಿಡುತ್ತಾನೆ. ಆದರೆ ಯಮಲೋಕಕ್ಕೆ ಹೋಗುವ ವಯಸ್ಸು ನಚಿಕೇತನದ್ದಾಗಿರುವುದಿಲ್ಲ. ಆದರೂ ಯಮನ ದರ್ಶನವಾಗಲೇಬೇಕು, ಏನು ಮಾಡುವುದು ಈಗ ಯಮಧರ್ಮನು ಸಧ್ಯ ತನ್ನ ಅರಮನೆಯಲ್ಲಿ ಕಾರ್ಯ ನಿಮಿತ್ತವಾಗಿ ಬೇರೆಡೆಗೆ ತೆರಳಿದ್ದಾನೆ. ಬಂದ ನಂತರ ಅವನ ಕಿಂಕರರಿಂದ “ಯಾರೋ ಬಾಲಕನು ಬಂದಿದ್ದಾನೆ, ತಮ್ಮ ದರ್ಶನಕ್ಕೆ” ಎಂದು ತಿಳಿಸಿದಾಗ ಆಶ್ಚರ್ಯವಾಯಿತು. ಅವನ ಬಳಿ ಬಂದ ನೋಡಿದರೆ ಅತ್ಯಂತ ಮುಗ್ಧ ಬಾಲಕನಿದ್ದಾನೆ. ಅತಿಥಿ ದೇವೋಭವ ಎಂಬ ಮಾತಿನಂತೆ ಈಗ ನಚಿಕೇತ ಯಮನ ಅತಿಥಿಯಾಗಿದ್ದಾನೆ.
ಅತಿಥಿಯ ಮನಸ್ಸು ನೋಯಿಸುವಂತಿಲ್ಲ. ಆದರೆ ಇಲ್ಲಿಯೇ ಉಳಿಸಿಕೊಳ್ಳಲು ಅಥವಾ ದಾನವಾಗಿ ಪಡೆಯಲು ಅವನಿಗಿನ್ನೂ ಆಯುಷ್ಯ ತೀರಿಲ್ಲ. ಹೀಗಾಗಿ ಯಮನು ಬಂದಿರುವ ಬ್ರಾಹ್ಮಣ ವಟುವನ್ನು ಯಾವ ಕಲ್ಮಷವೂ ಇಲ್ಲದೇ ಸತ್ಕರಿಸಿ, ನಂತರ ಅವನ ಬಗ್ಗೆ ಕೂಲಂಕುಷ ವಿಚಾರಿಸಿ ಹೇಳುತ್ತಾನೆ “ಮಗು ಈ ವಯಸ್ಸಿನಲ್ಲಿ ಇಲ್ಲಿಗೆ ಬಂದಿರುವ ನೀನು, ನಿನ್ನನ್ನು ಇಲ್ಲಿ ಉಳಿಸಿಕೊಳ್ಳುವಂತಿಲ್ಲ ಆದರೆ ಹಾಗೇ ಹಿಂತಿರುಗಿ ಕಳಿಸಿಕೊಡಲು ನೀನು ನನ್ನ ಅತಿಥಿಯಾಗಿರುವೆ, ಆದ್ದರಿಂದ ನಿನಗೆ ಬೇಕಾದ ಮೂರು ವರಗಳನ್ನು ಕೇಳಿಕೋ”. ಸ್ವಲ್ಪ ಹೊತ್ತು ಯೋಚಿಸಿದ ನಚಿಕೇತನು 1. ನನ್ನ ತಂದೆಯು ಯಾವ ಉದ್ದೇಶದಿಂದ ಈ ಯಾಗ ಮಾಡುತ್ತಿದ್ದಾನೆಯೋ ಆ ಮನೋವಾಂಛೆ ಈಡರಬೇಕು. 2. ಇದರ ಸಂದರ್ಭ ದಾನ ಮಾಡುವಾಗ ನೀಡಿದ ದಾನಗಳಿಂದ ಕೆಟ್ಟ ಫಲ ದೊರೆಯಬಾರದು. 3. ಸತ್ತನಂತರ ಮನುಷ್ಯನ ಗತಿ ಹೇಗಿರುವುದು ? ಅಥವಾ ಸತ್ತ ನಂತರ ಮನುಷ್ಯನು ಏನಾಗುತ್ತಾನೆ ?

ಎರಡು ವರಗಳಿಗೆ ತಥಾಸ್ತು ಎಂದ ಯಮನಿಗೆ ಇಗ ಮೂರನೇ ವರಕ್ಕೆ ಅಸ್ತು ಎನ್ನುವುದು ಪೇಚಾಟವಾಯಿತು. ಏನು ಮಾಡುವುದು ? ತಿಳಿಯುತ್ತಿಲ್ಲವಲ್ಲ, ಈಗ ಒಂದು ಉಪಾಯ ಮಾಡುತ್ತಾನೆ. “ನಚಿಕೇತ ! ಈ ಆತ್ಮ ವಿಚಾರವೊಂದನ್ನು ಬಿಟ್ಟು ಬೇರೆ ಏನಾದರೂ ಕೇಳು ನಾನು ನಿನಗೆ ಕೊಡುತ್ತೇನೆ. ನಿನಗೆ ಅತ್ಯಂತ ದೀರ್ಘಾಯುಷ್ಯವನ್ನು ಕೊಡುತ್ತೇನೆ, ಇಡೀ ಭೂ ಮಂಡಲದ ಒಡೆಯನನ್ನಾಗಿ ಮಾಡುತ್ತೇನೆ, ಅಂತಸ್ತು, ಅಧಿಕಾರ ಎಲ್ಲವನ್ನೂ ನೀಡುವೆ”ಎಂದಾಗ ನಚಿಕೇತ ಯೋಚಿಸುತ್ತಾನೆ. ಈ ಎಲ್ಲವನ್ನೂ ಕೊಡುತ್ತೇನೆ ಎಂದು ಯಮನು ಹೇಳುತ್ತಿರುವುದು ಕೇವಲ ನನ್ನ ಗಮನವನ್ನು ಮತ್ತೆ ಲೌಕಿಕದೆಡೆಗೆ ಸೆಳೆಯಲು ಮಾತ್ರ. ಈ ಕಣ್ಣಿಗೆ ಕಾಣುವದೆಲ್ಲವೂ ಸಹಾ ಒಂದಲ್ಲ ಒಂದು ದಿನ ನಾಶವಾಗುವಂಥದ್ದೇ ಇದೆ. ದೀರ್ಘಾಯುಷ್ಯ ಭವಿಷ್ಯದಲ್ಲಿ ಎಲ್ಲರಂತೆ ಅಂದರೆ 1000 ವರ್ಷ ಬದುಕಿದರೂ ಮುಪ್ಪು ಅಡರಿ ಸಾವು ಖಚಿತವಾದುದು, ಇನ್ನು ಇಂದ್ರಿಯಗಳ ಸುಖ ಎಂಬುದು ವಯಸ್ಸಾದಂತೆಲ್ಲ ಕ್ಷೀಣವಾಗುತ್ತಾ ಹೋಗುತ್ತದೆ. ಅಂದಮೇಲೆ ಯಮನು ನನ್ನ ಮುಂದೆ ಆಟಿಕೆಗಳನ್ನೆಸೆದು ಆತ್ಮವಿಚಾರವನ್ನು ದೂರ ಇಡುತ್ತಿರುವಂತೆ ಕಾಣುತ್ತಿದೆ ಎಂದು ಯೋಚಿಸಿ, ಮತ್ತೆ ಅದಕ್ಕಾಗಿಯೇ ಹಟ ಹಿಡಿಯುತ್ತಾನೆ. “ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್‌ ಸಾಂಪರಾಯೇ ಮಹಂತಿ ಬ್ರೂಹಿ ನಸ್ತತ್‌ ಯೋಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೆ “ ಎಲೈ ಮೃತ್ಯುವೇ (ಮೃತ್ಯು ಎಂದರೆ ಯಮ) ಯಾವುದು ಪರಲೋಕಕ್ಕೆ ಮಹಾಸಾಧನವೋ ಅದನ್ನು ನನಗೆ ಹೇಳು, ಯಾವ ವಿಷಯವು ತುಂಬಾ ಗಹನವಾದುದು, ಕೇವಲ ಚಿಕಿತ್ಸಕ, ತರ್ಕದಿಂದ ದೊರೆಯುವುದಿಲ್ಲವೋ, ಅದರ ಕುರಿತು ನಚಿಕೇತನು ವರ ನೀಡು ಎನ್ನುತ್ತಾನೆ ಬಿಟ್ಟು ಬೇರೆ ವಿಷಯಗಳ ಅವಶ್ಯಕತೆ ನನಗಿಲ್ಲ ಎಂದು ತಿಳಿದು, ಮುಂದುವರೆಸಿ ಸತ್ತ ನಂತರ ಮನುಷ್ಯ ಏನಾಗುತ್ತಾನೆ ? ಆತ್ಮ ಸ್ವರೂಪವೇನು ? ಹೇಗೆ ಮುಕ್ತಿ ಹೊಂದಬಹುದು ಅದನ್ನು ನನಗೆ ಹೇಳು ಎಂದು ಕೇಳುತ್ತಾನೆ. ಏಕೆಂದರೆ ನಚಿಕೇತನು ಬಯಸಿದ್ದು ಕೇಳಿದ್ದು ಆತ್ಮವಿದ್ಯೆ ಆದರೆ ಯಮನು ಕೊಡುವೆನೆಂದದ್ದು ಲೌಕಿಕವಾದ ಅನಾತ್ಮ ಅಥವಾ ಯಾವಾಗಲಾದರೂ ಒಮ್ಮೆ ನಾಶವಾಗುವಂಥಹವುಗಳೇ ಆದ್ದರಿಂದ ಅಂತಹ ವರಗಳನ್ನು ನಚಿಕೇತನು ಎಂದಿಗೂ ಬೇಡಿಕೊಳ್ಳುವುದಿಲ್ಲ ಎಂದು ತಿಳಿಸಲು, ಯಮನು ಈ ಹುಡುಗ ನಿಜವಾಗಿಯೂ ಸರಿಯಾದ ದಾರಿಯಲ್ಲಿದ್ದಾನೆ, ಹಾಗೂ ಇವನು ಎಲ್ಲ ವಿಧಗಳಿಂದ ಬ್ರಹ್ಮ ಸಾಧನೆಗೆ ಅರ್ಹನಿದ್ದಾನೆ ಎಂದು ತಿಳಿದು ಪ್ರಸನ್ನನಾಗುತ್ತಾನೆ ಹಾಗೂ ನಚಿಕೇತನಿಗೆ ಬ್ರಹ್ಮವಿದ್ಯೆಯನ್ನು ಬೋಧಿಸುತ್ತಾನೆ. ಅದನ್ನು ಸಂಪೂರ್ಣವಾಗಿ ನಾವು ಉಪನಿಷತ್ತಿನಲ್ಲಿಯೇ ಓದಿ ತಿಳಿಯಬೇಕಿದೆ. ಮುಂದುವರೆದಂತೆ ಬ್ರಹ್ಮ ಮತ್ತು ನಚಿಕೇತರ ಪ್ರಶ್ನೋತ್ತರಗಳು, ಸಂಭಾಷಣೆಗಳು ಅತ್ಯಂತ ಸಂತೋಷ ನೀಡುವಂತಹ ಹಾಗೂ ನಮಗೆ ಕೂಡಾ ಅದು ತಿಳಿದಿದ್ದು ನಾವು ಅದರೆಡೆಗೆ ಗಮನ ಹರಿಸುತ್ತಿಲ್ಲವೆಂದು ನಮಗೆ ಅರ್ಥವಾಗುತ್ತದೆ. ಆದರೆ ಇಲ್ಲಿ ನಚಿಕೇತನು ಎಲ್ಲ ಜೀವಿಗಳೂ ಬ್ರಹ್ಮನ ಅಂಶವೇ ಆಗಿದ್ದು, ತಮ್ಮ ವಿವೇಚನೆಗೆ ಮೀರಿದ್ದು ಅಥವಾ ಅದು ವಾರ್ಧಕ್ಯ/ವೃದ್ಧಾಪ್ಯದಲ್ಲಿ ತಿಳಿಯುವಂಥದ್ದು, ಅಥವಾ ಕೇವಲ ಸಂನ್ಯಾಸಿಗಳು ಮಾತ್ರ ಯೋಚಿಸಬಹುದಾದಂಥದ್ದು ಎಂಬ ತಪ್ಪು ತಿಳುವಳಿಕೆಯಿಂದ ಕೇವಲ ದೃಶ್ಯವಸ್ತುಗಳ ಬೆನ್ನು ಹತ್ತಿ ಸಮಯವನ್ನು ವ್ಯರ್ಥಮಾಡುತ್ತಿದ್ದೇವೆ.
ಸುಮ್ಮನೆ ಬೇಸರ ಕಳೆಯಲು ಪುಸ್ತಕ ಓದುವ ಅಭ್ಯಾಸ ಮಾಡಿದ ನನಗೆ ಇದನ್ನು ಪುಸ್ತಕಲೋಕದಲ್ಲಿ ಪಡೆದ ಜ್ಞಾನಕ್ಕೆ ಎಣೆಯಿಲ್ಲದಂತಾಗಿದೆ, ಓದಿದಷ್ಟೂ ಸಿಗುತ್ತಿರುವ ಮಾಹಿತಿ, ಅನುಭವ ಬಹುಶಃ ಇಂದಿನ ಯಾವ ತಂತ್ರಜ್ಞಾನವೂ ನೀಡಲು ಸಾಧ್ಯವಿಲ್ಲ. 10 ಜನರ ಕೆಲಸ ಕೇವಲ ಒಂದೇ ಒಂದು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಬಹುದು ಆದರೆ ಆ ಕೃತಕ ಬುದ್ಧೀಮತ್ತೆಗೆ ಜ್ಞಾನನೀಡುವವನು ಮಾನವನಲ್ಲವೇ ? ಆದ್ದರಿಂದ ಈ ನಚಿಕೇತನಂತೆ ಬ್ರಹ್ಮಜ್ಞಾನಿಯಾಗಲು ಹೊರಟವನು ಪ್ರತಿ ದೃಶ್ಯ ವಸ್ತುವನ್ನೂ ಅಶಾಶ್ವತವೆಂದು ತಿಳಿದು ವರ್ತಿಸುವುದು ಅವಶ್ಯಕವಿರುತ್ತದೆ. ಇಲ್ಲಿ ನಾವು ಇನ್ನೊಂದು ಅಂಶವನ್ನು ಗಮನಿಸಬೇಕಾಗುತ್ತದೆ. ನಾವು ನಚಿಕೇತನೆಂದು ಭಾವಿಸಿದಾಗ ಪ್ರತಿ ದಿನವೂ ನಮ್ಮ ಆಯುಷ್ಯವು ಕ್ಷೀಣವಾಗುತ್ತಿರುತ್ತದೆ ಎಂದು ನಮಗೆ ನಮ್ಮ ಬುದ್ಧಿ ಎಚ್ಚರಿಸುತ್ತಿರುತ್ತದೆ. ಆದರೂ ಸಹಾ ನಾವು ಕೇವಲ ಲೌಕಿಕ ಆಶೆಗಳಿಗೆ ದೇವರ ಮೊರೆ ಹೋಗುತ್ತಿರುತ್ತೇವೆ ಅಷ್ಟೇ. ಗೋಂದವಲೆಯ ಬ್ರಹ್ಮ ಚೈತನ್ಯ ಮಹಾರಾಜರು ತಮ್ಮ ಪ್ರವಚನದಲ್ಲಿ ಒಮ್ಮೆ ಹೇಳುತ್ತಾರೆ “ನಾನು ಒಂದು ಅಂಗಡಿಯನ್ನು ತೆರೆದಿರುತ್ತೇನೆ. ಆದರೆ ಇಲ್ಲಿ ಬರುವವರೆಲ್ಲರೂ ಇಂಗು-ಜೀರಿಗೆಯನ್ನು ಕೇಳುವವರಾಗಿದ್ದಾರೆ, ಆದರೆ ನನ್ನ ಅಂಗಡಿಯಲ್ಲಿ ಕೇಸರಿ-ಕಸ್ತೂರಿಗಳಂಥ ವಸ್ತುಗಳಿದ್ದರೂ ಸಹಾ ಅದನ್ನು ಅರಸಿ ಬರುವವರು ಕೇವಲ ಬೆರಳೆಣಿಕೆ ಮಾತ್ರ.” ಹೌದು ನಾವೆಲ್ಲರೂ ಇಂಗು-ಜೀರಿಗೆಯ ಗಿರಾಕಿಗಳಾಗಿದ್ದೇವೆ ಸತ್ಪುರುಷರ-ಸಂತರ ದರ್ಶನ ಮಾಡಿದಾಗ, ಮದುವೆ-ಮುಂಜಿ, ಮಕ್ಕಳು, ಹಣ, ಆಸ್ತಿ ಹೀಗೇ ಅವರಲ್ಲಿ ನಮ್ಮ ವಿನಂತಿಗಳಿರುತ್ತವೆ. ಆದರೆ ನಿಜವಾದ ಅರಕೆಯೆಂದರೆ ಆತ್ಮಜ್ಞಾನ ನೀಡು ಎಂದು ಬೇಡುವುದಾಗಿರುತ್ತದೆ. ಆದರೆ ಅದು ಕಸ್ತೂರಿ-ಕೇಸರಿಯ ಹಾಗೆ ತುಂಬಾ ದುಬಾರಿಯಾಗಿರುತ್ತದೆ. ಅದನ್ನು ಪಡೆಯಲು ಕೇವಲ ಹಣವನ್ನು ಖರ್ಚು ಮಾಡುವುದಲ್ಲ, ನಮ್ಮ ಸರ್ವಸ್ವವನ್ನು ಅರ್ಪಿಸಬೇಕಾಗುತ್ತದೆ. ನಚಿಕೇತನು ತನ್ನನ್ನೇ ತಾನು ಯಮನಿಗೆ ಅರ್ಪಿಸಿದಾಗ ಅಂದರೆ ಗುರುವಿಗೆ ಜ್ಞಾನದಾಹಿಯಾದ ಶಿಷ್ಯನು ಹೇಗೆ ಸಮರ್ಪಣಾ ಮನೋಭಾವದಿಂದ ನಡೆದುಕೊಳ್ಳಬೇಕು, ಹಾಗೂ ಗುರುವು ಹೇಗೆಲ್ಲ ಶಿಷ್ಯನ ಯೋಗ್ಯತೆಯನ್ನು ಪರೀಕ್ಷಿಸಿ ವಿದ್ಯೆ ಕಲಿಸಬೇಕೋ ಹಾಗೆ ಯಮನು ಇಲ್ಲಿ ನಮಗೆ ಕಾಣಸಿಗುತ್ತಾರೆ. ಆದ್ದರಿಂದ ಉಪನಿಷತ್‌ಗಳು, ವೇದಗಳೂ ಹೇಳಿರುವ ವಿಷಯ ವಸ್ತು ಒಂದೇ ಅದನ್ನು ತತ್ತ್ವ, ಅಧ್ಯಾತ್ಮ, ಬ್ರಹ್ಮ, ಆತ್ಮ ವಿಚಾರ, ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ನನಗೆ ಅನುಭವಾದಷ್ಟು ನಾನು ಮೇಲೇರಲು ಸಾಧ್ಯ ಹಾಗೂ ಮತ್ತೊಬ್ಬರಿಗೆ ಅನುಭವ ನೀಡಲು ಸಾಧ್ಯ. ಹಾಗಾಗಿ ನನ್ನ ಚಿಕ್ಕ ಚಿಕ್ಕ ತೊದಲು ನುಡಿಗಳಿಂದ ನಿಮ್ಮ ಮುಂದೆ ಈ ದೊಡ್ಡ ಆಧ್ಯಾತ್ಮಿಕತೆಯ ಬಗ್ಗೆ ಮಾತನಾಡುತ್ತಿದ್ದೇನೆ. ಇದರಲ್ಲಿ ನಿನಗೆ ಅನುಭವವಾಗಿದೆಯೋ ? ಎಂದು ಯಾರಾದರೂ ಕೇಳಿದಲ್ಲಿ ಅದಕ್ಕೆ ನನ್ನಲ್ಲಿ ಉತ್ತರ ಅಥವಾ ವಿವರಣೆ ನೀಡಲು ಆಗುವುದಿಲ್ಲ ಏಕೆಂದರೆ “Experience Can’t be discribed” ಎಂಬಂತೆ ಅದನ್ನು ಅನುಭವಿಸಿಯೇ ಆನಂದಿಸಬೇಕೇ ಹೊರತು ಕೇವಲ ಬುದ್ಧಿ ಅಥವಾ ತರ್ಕದಿಂದಲ್ಲ.ಮಾತುಗಳು ಹೆಚ್ಚಾದವು ಎಂದು ವಾಚಕರಿಗೆ ಅನಿಸಿದಲ್ಲಿ ಕ್ಷಮೆಯಿರಲಿ. ಮುಂದಿನವಾರ ಮತ್ತೊಂದು ವಿಷಯದೊಂದಿಗೆ ಭೇಟಿಯಾಗುತ್ತೇನೆ, ನಮಸ್ಕಾರ.

ಸಾರ್ವಜನಿಕರಿಗೆ ವಿಶೇಷವಾಗಿ ಬಡವರು,ಮಧ್ಯಮ ವರ್ಗದವರಿಗೆ ಅತ್ಯುತ್ತಮ ,ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿಕೆ ಪ್ರಮುಖ ಕರ್ತವ್ಯ- ಸಚಿವ.ಯು.ಟಿ.ಖಾದರ್

0

“ಕ್ಷೇತ್ರದ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅತ್ಯುತ್ತಮ ಮತ್ತು ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ಇಂದು ಬೆಳಿಗ್ಗೆ ಮಾನ್ಯ ಆರೋಗ್ಯ ಸಚಿವರಾದ ಶ್ರೀ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಶಿವಮೊಗ್ಗ ನಗರಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಶಿವಮೊಗ್ಗ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಾದ ಮೆಗ್ಗಾನ್ ಆಸ್ಪತ್ರೆಯ ಹಲವು ಸಮಸ್ಯೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತಂದು, ತಕ್ಷಣವೇ ಇತ್ಯರ್ಥಪಡಿಸುವಂತೆ ಶಾಸಕ ಚನ್ನಿ ಒತ್ತಾಯಿಸಿದರು.

ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆಗೆ ಮುಕ್ತಿ: ಮೆಗ್ಗಾನ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗಳು ಹಾಗೂ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಕಿಡ್ನಿ ರೋಗಿಗಳು ಎದುರಿಸುತ್ತಿರುವ ತೊಂದರೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ರೋಗಿಗಳಿಗೆ ಯಾವುದೇ ವಿಳಂಬವಿಲ್ಲದೆ ತಡೆರಹಿತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆಯನ್ನು ತಕ್ಷಣವೇ ಸುಧಾರಿಸಲು
ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.

ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕ: ದಿನದಿಂದ ದಿನಕ್ಕೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ, ಅದಕ್ಕೆ ತಕ್ಕಂತೆ ಮೆಗ್ಗಾನ್ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗಳನ್ನು ಮಂಜೂರು ಮಾಡುವಂತೆ ಸಚಿವರಲ್ಲಿ ಶಾಸಕರು ವಿನಂತಿಸಿದರು.

ಗಡಿಯಲ್ಲಿ ಸೈನಿಕ,ಗಡಿಯೊಳಗೆ ಆರಕ್ಷಕ.ಈ ಈರ್ವರಿಂದ ದೇಶಕ್ಕೆ ನೆಮ್ಮದಿ- ಡಿ.ಕೆ.ಶಿವಕುಮಾರ್

0

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿಂದು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು, ರಾಜ್ಯದ ಜಿಲ್ಲಾ ಘಟಕಗಳಿಗೆ 32 ಅತ್ಯಾಧುನಿಕ ಮೊಬೈಲ್‌ ಫೋರೆನ್ಸಿಕ್‌ ವ್ಯಾನ್‌ಗಳು ಹಾಗೂ 75 ಬೊಲೆರೋ ವಾಹನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ. ಈ ಇಬ್ಬರಿಂದ ನಮ್ಮ ರಾಜ್ಯ ಹಾಗೂ ದೇಶ ನೆಮ್ಮದಿ ಆಗಿರಲು ಅನುಕೂಲವಾಗುತ್ತಿದೆ. ಪೊಲೀಸ್‌ ಇಲಾಖೆಗೆ ವಾಹನಗಳನ್ನು ನೀಡುತ್ತಿರುವುದು ಹೊಸ ಶಕ್ತಿ ತುಂಬಲಿದೆ.

ಮಾದಕ ವಸ್ತುಗಳನ್ನು ಸೀಜ್‌ ಮಾಡಿ ಪೊಲೀಸ್ ಅಧಿಕಾರಿಗಳು ಸಾಧನೆ ಮಾಡಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ, ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಪೊಲೀಸ್‌ ಅಧಿಕಾರಿಗಳು ಈಗಾಗಲೇ ಸಾವಿರಾರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಇದೊಂದು ದೊಡ್ಡ ದಾಖಲೆಯಾಗಿದೆ. ಕರ್ನಾಟಕ ಪೊಲೀಸ್‌ ಇಲಾಖೆ ಅಧಿಕಾರಿಗಳ ಸಾಮರ್ಥ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ನಿಮ್ಮಿಂದ ರಾಜ್ಯದ ಪೊಲೀಸ್ ಇಲಾಖೆಗೆ ಗೌರವ ಬಂದಿದೆ. ನಿಮ್ಮ ದಕ್ಷತೆ, ಕಾರ್ಯಪಡೆ, ನಿಷ್ಠೆಯಿಂದ ರಾಜ್ಯಕ್ಕೆ ಹೆಸರನ್ನು ತಂದಿದ್ದೀರಿ. ಹಗಲು ರಾತ್ರಿ ಕೆಲಸ ಮಾಡುವ ನಿಮ್ಮ ಪರವಾಗಿ ಸರ್ಕಾರ ನಿಲ್ಲಲಿದೆ.

ಜನರಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುವ ರೀತಿಯಲ್ಲಿ ಕೆಲಸ ಮಾಡಿ. ಇಂದು ಎಲ್ಲಾ ಜಿಲ್ಲಾ ಘಟಕಗಳಿಗೆ ಬೊಲೆರೋ ವಾಹನಗಳನ್ನು ನೀಡುತ್ತಿದ್ದು, ಇವುಗಳಿಂದ ಅಪರಾಧಿಗಳನ್ನು ಕಂಡು ಹಿಡಿಯಲು ಅನುಕೂಲವಾಗಲಿ ಎಂದು ಶುಭಹಾರೈಸುತ್ತೇನೆ.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ, ವಿಧಾನ ಪರಿಷತ್‌ ಮಾನ್ಯ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಶ್ರೀ ರಿಜ್ವಾನ್‌ ಅರ್ಷದ್, ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾದ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿದಂತೆ
ಹಿರಿಯ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ದಾವಣಗೆರೆ ವಿವಿ ಕುಲಪತಿಗಳಾಗಿ ಡಾ.ಬಿ.ಇ.ರಂಗಸ್ವಾಮಿ ನೇಮಕ

0

ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರ ವಿಜ್ಞಾನಿ, ಚಿಂತಕ, ಜನಪ್ರಿಯ ಅಧ್ಯಾಪಕ, ಕೃಷಿಕ ಡಾ. ಬಿ ಇ ರಂಗಸ್ವಾಮಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊತ್ ಆದೇಶ ಹೊರಡಿಸಿದ್ದಾರೆ.‌

ದಾವಣಗೆರೆ ವಿಶ್ವವಿದ್ಯಾಲಯ ಆರಂಭವಾದಗಿನಿಂದ ಹೊರಗಿನವರೇ ಈ ಹುದ್ದೆಯನ್ನು ಅಲಂಕರಿಸಿದ್ದರು. ‌ಈಸಲ ಸ್ಥಳೀಯರಿಗೆ ಈ ಅವಕಾಶ ಒದಗಿಬಂದಿದೆ.

ರಂಗಸ್ವಾಮಿ ಮೂಲತಃ ಹೊಳಲ್ಕೆರೆ ತಾಲ್ಲೂಕಿನ ಬಿದರಕೆರೆ ಗ್ರಾಮದವರು.

ಬೆಂಗಳೂರು ವಿವಿಯಲ್ಲಿ ಬಿಎಸ್ಸಿ ಪದವಿ ಪೂರೈಸಿದ ಅವರು, 1995ರಲ್ಲಿ ಇಲ್ಲಿಯೇ ಎಂಎಸ್ಸಿ ಪಡೆದರು.
ಫ್ಲೋರಿಡಾ ಯುಎಸ್ಎ, ರೋಸ್ಕಿಲ್ಡ್ ವಿಶ್ವವಿದ್ಯಾಲಯ, ಡೆನ್ಮಾರ್ಕ್‌ನಿಂದ ವಾಯುಜೀವಶಾಸ್ತ್ರದ ವಿವಿಧ ಅಂಗ ವಿಷಯಗಳಲ್ಲಿ ಪದವಿಗಳನ್ನು ಪಡೆದಿದ್ದಾರೆ.

ಅಮೆರಿಕಾದ ಫ್ಲೋರಿಡಾದ ಎನ್ವಿರಾನ್‌ಮೆಂಟಲ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಯಲ್ಲಿ ಬ್ಯಾಕ್ಟೀರಿಯಾಲಜಿ ಮತ್ತು ಏರ್ ಸ್ಯಾಂಪ್ಲಿಂಗ್ ತಂತ್ರಜ್ಞಾನದಲ್ಲಿ ಉನ್ನತ ತರಬೇತಿ ಪಡೆದಿದ್ದಾರೆ.

ಅಲ್ಲದೆ, ಡೆನ್ಮಾರ್ಕ್‌ನ ರೋಸ್ಕಿಲ್ಡೆ ವಿಶ್ವವಿದ್ಯಾಲಯದಲ್ಲಿ ಏರೋಬಯಾಲಜಿ ಕೋರ್ಸ್ ಪೂರೈಸಿದ್ದಾರೆ.

ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಭಾರತ ಸರ್ಕಾರದ ಡಿಬಿಟಿ, ಡಿಎಸ್‌ಟಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸುಮಾರು 1.75 ಕೋಟಿಗೂ ಅಧಿಕ ಮೊತ್ತದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಅಲ್ಲದೆ ಭಾರತೀಯ ಪೇಟೆಂಟ್‌ಗೂ ಅರ್ಜಿ ಸಲ್ಲಿಸಿದ್ದಾರೆ. ಪೋಲೆಂಡ್, ಆಸ್ಟ್ರೇಲಿಯಾ, ಇಟಲಿ ಮುಂತಾದ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.

ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ
ಪ್ರಾಧ್ಯಾಪಕ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ, ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ದಾವಣಗೆರೆ ಮಿಡ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವಾ ಅನುಭವ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ಸಾಹಿತ್ಯ, ರಂಗಭೂಮಿ ಕ್ಷೇತ್ರದ ನಂಟನ್ನು ಬೆಳೆಸಿಕೊಂಡವರು.‌ಬಿಡುವಿನ ವೇಳೆಯಲ್ಲಿ ತಮ್ಮ ಗ್ರಾಮ ಬಿದರಕೆರೆಯ ಹೊಲದಲ್ಲಿ
ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡವರು.

2008ರಲ್ಲಿ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇವರ ವೈಜ್ಞಾನಿಕ ಸಾಧನೆಯನ್ನು ಗುರುತಿಸಿ ಬೋಸ್ಟನ್‌ನ ಕ್ವಿನ್ಸಿ ಮತ್ತು ನ್ಯೂ ಬೆಡ್‌ಫೋರ್ಡ್ ನಗರಗಳ ಮೇಯರ್‌ಗಳು ಇವರಿಗೆ “ಗೌರವಾನ್ವಿತ ಪೌರತ್ವ” (Honorary Citizen of Quincy) ನೀಡಿ ಗೌರವಿಸಿದ್ದರು. ಇದರೊಂದಿಗೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ತಾಂತ್ರಿಕ ಶಿಕ್ಷಕ ಪ್ರಶಸ್ತಿ (ರಾಜಾರಾಮ್ ಬಾಪು ನ್ಯಾಷನಲ್ ಅವಾರ್ಡ್) ಹಾಗೂ ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ವರದಿ ಕೃಪೆ: ನಾಗರಾಜ ಸಿರಿಗೆರೆ