Thursday, August 13, 2026
Thursday, August 13, 2026
Home Blog Page 247

Shadakshari C S ಪ್ರಸ್ತುತ ದಿನಮಾನಗಳಲ್ಲಿ ಇಡೀದಿನ ಆಗುವ ಕೆಲಸವನ್ನ ಒಂದೇ ಗಂಟೆಯಲ್ಲಿ ಮುಗಿಸುವ ಅಗತ್ಯವಿದೆ,- ಸಿ.ಎಸ್.ಷಡಾಕ್ಷರಿ.

0

Shadakshari C S ಸರ್ಕಾರಿ ನೌಕರರಾದ ನಾವುಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ, ವಾಹನ ಚಾಲಕರ ಸಂಘ ಹಾಗೂ ಡಿ.ಗ್ರೂಪ್ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಇಡೀ ದಿನ ಆಗುವ ಕೆಲಸವನ್ನು ಒಂದೇ ಗಂಟೆಯಲ್ಲಿ ಮಾಡಿ ಮುಗಿಸುವಂತಹ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿಯೊಬ್ಬ ನೌಕರನೂ ಆಧುನಿಕ ತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಳ್ಳಬೇಕು,. ಆಗ ಮಾತ್ರ ಕೆಲಸದಲ್ಲಿ ವೇಗವನ್ನು ಪಡೆಯಬಹುದು ಎಂದರು.
ಆರ‍್ಟಿಫಿಶಿಯಲ್ ಇಂಟಲಿಜೆನ್ಸಿ ಈಗ ಎಲ್ಲಾ ಕಡೆ ಬಳಸಿಕೊಳ್ಳಲಾಗುತ್ತಿದೆ. ಇದು ಇಲಾಖಾ ವ್ಯಾಪ್ತಿಗೆ ಬಂದರೆ ಸರ್ಕಾರಕ್ಕೆ ನೌಕರರ ಅವಶ್ಯಕತೆಯೇ ಬರುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ನೌಕರರ ಸಮೂಹ ಕಚೇರಿಗೆ ಅಲೆಸದೇ ಕೆಲಸವನ್ನು ಮಾಡಿಕೊಡಬೇಕು ಎಂದರು.
ಸರ್ಕಾರಿ ನೌಕರರಿಗೆ ನಮ್ಮ ಸಂಘಟನೆ ಸರ್ಕಾರದೊಂದಿಗೆ ಮಾತುಕತೆ ಮೂಲಕವೇ ೭ನೇ ವೇತನ,ಆರೋಗ್ಯ ಸಂಜೀವಿನಿಸೇರಿದಂತೆ ಅನೇಕ ಸವಲತ್ತುಗಳನ್ನು ಕೊಡಿಸಿದೆ. ಎನ್‌ಪಿಎಸ್‌ನ್ನು ರದ್ದುಪಡಿಸಿ ಒಪಿಎಸ್‌ನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಇವೆಲ್ಲದಕ್ಕೂ ಕಾರಣ ಸಂಘಟನೆ ಎಂದರು.
Shadakshari C S ಕಾರ್ಯಕ್ರಮದಲ್ಲಿ ಬೋಧಕೇತರ ನೌಕರರ ಸಂಘದ ರಾಜ್ಯಾಧ್ಯಕ್ಷ ನವೀನ್, ಉಪಾಧ್ಯಕ್ಷ ದೇವರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ತಾಲೂಕಿನ ಇತರೆ ಬಿಇಓಗಳು ಇತರರು ಉಪಸ್ಥಿತರಿದ್ದರು.

CM Siddaramaiah ಕೋಗಿಲು ಬಡಾವಣೆ ಸ್ಥಳೀಯರ ಸಮಸ್ಯೆ: ಜನವಸತಿ‌ಯೋಗ್ಯ ಸ್ಥಳವಲ್ಲವಾದ್ದರಿಂದ ಸ್ಥಳಾಂತರಕ್ಕೆ ನೋಟೀಸು‌ ಜಾರಿ- ಸಿದ್ಧರಾಮಯ್ಯ.

0

CM Siddaramaiah ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು, ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ. ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ ಜಾಗದಿಂದ ತೆರವುಗೊಳಿಸಲಾಗಿದೆಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

CM Siddaramaiah ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಅವರ ಜೊತೆ ಮಾತನಾಡಿ, ಅವರೆಲ್ಲರಿಗೂ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಅತಿಕ್ರಮವಾಗಿ ವಾಸವಿದ್ದ ಬಹುತೇಕರು ವಲಸೆ ಕಾರ್ಮಿಕರು, ಸ್ಥಳೀಯ ನಿವಾಸಿಗಳಲ್ಲ, ಆದರೂ ಕೂಡ ಮಾನವೀಯತೆ ದೃಷ್ಟಿಯಿಂದ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Shimoga News ಇನಾಂ ವೀರಾಪುರ ಮರ್ಯಾದಾ ಹತ್ಯೆ: ದಲಿತ ಮುಖಂಡರಿಂದ ಖಂಡನೆ

0

Shimoga News ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಇಡೀ ನಾಗರೀಕ ಸಮಾಜ ತಲೆಭಾಗುವಂತಾಗಿದ್ದು, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ದಲಿತ ಸಮಾಜದ ಯುವ ಮುಖಂಡ ಅಭಿಲಾಷ್ ಹುರಳಿಕೊಪ್ಪ ಒತ್ತಾಯ ಮಾಡಿದ್ದಾರೆ.

ಮಾನ್ಯ ಪಾಟೀಲ ಎಂಬ ಯುವತಿ ಅನ್ಯ ಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರು ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ, ಹುಡುಗನ ಕುಟುಂಬದವರ ಮೇಲೂ ಹಲ್ಲೇ ನಡೆಸಿರುವ ಪ್ರಕರಣ ತಿಳಿದುಬಂದಿದೆ. ಇಂತಹ ಅಮಾನವೀಯ ಘಟನೆಗಳು ಕರ್ನಾಟಕದಲ್ಲಿ ನೂರಾರು ನಡೆದಿವೆ. ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

Shimoga News ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಕೊಲೆ ಮಾಡಿರುವುದು ಕ್ರೂರ ಘಟನೆಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಅವರು ಅಂತರ್ಜಾತಿ ವಿವಾಹವನ್ನು ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದರು. ಬಸವಣ್ಣನವರು‌ ಹುಟ್ಟಿದ ನಾಡಿನಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಅಕ್ಷಮ್ಯ. ಗದಗದಲ್ಲಿ 2019 ರಲ್ಲಿ ಗಂಗಮ್ಮ ಮತ್ತು ರಮೇಶ್ ಎನ್ನುವವರು ಅಂತರ್ಜಾತಿ ವಿವಾಹವಾದಾಗ ದೀಪಾವಳಿ ಹಬ್ಬದ ನೆಪದಲ್ಲಿ ಕರೆಸಿಕೊಂಡು ಗಂಗಮ್ಮಳ ಸಂಭಂದಿಕರು ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಾಯಿಸಿದರು. ಮಂಡ್ಯ, ಕೋಲಾರ, ವಿಜಯಪುರ, ಹಾಸನದಲ್ಲಿ ಸಾಕಷ್ಟು ಮರ್ಯಾದ ಹತ್ಯೆ ಘಟನೆಗಳು ಜರುಗಿವೆ. ಇವು ಕೇವಲ ವರದಿಯಾಗಿರುವ ಪ್ರಕರಣಗಳು, ವರದಿಯಾಗದ ಪ್ರಕರಣಗಳು ಅದೆಷ್ಟೋ ಇದ್ದಾವೋ ತಿಳಿಯದು. ಕೂಡಲೇ ಹಂತಕರನ್ನು ಬಂಧಿಸುವ ಜೊತೆಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕನಕದಾಸರ ಜನ್ಮಸ್ಥಳ ಕುರಿತ ಅಪೂರ್ವ ಉತ್ಖನನ ,ಸಂಶೋಧನೆ ಮೂಲಕ ಜಗತ್ತಿಗೆ ಪರಿಚಯಿಸಿದ, ಡಾ.ಶಾಂತಾರಾಮ ಸಾಮಕ

0

ನಮ್ಮ ನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳ, ಸಾಧು-ಸಂತರ ನೆಲೆವೀಡು. ಕನಕದಾಸರು ಸಂತರು, ಹರಿದಾಸರು ಮತ್ತು ಕವಿಗಳು. ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಇವರ ಕೊಡುಗೆ ಅನುಪಮವಾದದ್ದು. ಇವರು ತಮ್ಮ ಕೀರ್ತನೆಗಳಲ್ಲಿ ಅನನ್ಯ ಭಕ್ತಿಯಿಂದ ಭಗವಂತನನ್ನು ಕೊಂಡಾಡಿ ದಾಸಶ್ರೇಷ್ಠರೆಂದು ಕರೆಯಿಸಿಕೊಂಡರು. ಅಲ್ಲದೆ ಅವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯಚರಿತೆಗಳಂತಹ ಉತ್ತಮ ಕೃತಿಗಳನ್ನು ರಚಿಸಿ ಕವಿಶ್ರೇಷ್ಠರೆಂದು ಪ್ರಸಿದ್ಧರಾದರು. ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದ ಕನಕದಾಸರು ತಮ್ಮ ವಿಶಿಷ್ಟಗುಣಗಳಿಂದ, ಭಕ್ತಿ ವೈರಾಗ್ಯ ಕಾವ್ಯರಚನೆಯಿಂದ ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡು ದಾಸವರೇಣ್ಯರೆಂಬ ಗೌರವಕ್ಕೆ ಪತ್ರರಾದರು.

ಕನಕದಾಸರು ಜನಿಸಿದ್ದು ಬಾಡ ಎಂಬ ಗ್ರಾಮದಲ್ಲಿ. ನೆಲೆಸಿದ್ದು ಕಾಗಿನೆಲೆಯಲ್ಲಿ. ಆದಿಕೇಶವನ ಅಂಕಿತ. ಕುರುಬ ಜನಾಂಗಕ್ಕೆ ಸೇರಿದ ಇವರ ತಂದೆ ತಾಯಿ ಬೀರಪ್ಪ ಹಾಗೂ ಬಚ್ಚಮ್ಮ ವಿಭೂತಿ ಧರಿಸಿ ಶೈವಧರ್ಮವನ್ನು ಅನುಸರಿದರೂ ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಭಕ್ತಿ. ತಿಮ್ಮಪ್ಪ ನಾಯಕನೆಂದೇ ಮಗನಿಗೆ ಹೆಸರಿಟ್ಟಿದ್ದರು.

ತಿಮ್ಮಪ್ಪ ನಾಯಕ ಕನಕನಾಯಕನಾದದ್ದು ಪವಾಡದ ರೀತಿಯಲ್ಲಿ. ತಮ್ಮ ಜೀವಿತದಲ್ಲಿಯೇ ವಿಜಯನಗರ ಸಾಮ್ರಾಜ್ಯದ ಏಳು-ಬೀಳುಗಳನ್ನು ಕಂಡವರು ಇವರು. ಕನಕದಾಸರು ಸ್ವತಃ ಪಾಳೆಯಗಾರನಾಗಿ ಧನಸಂಪತ್ತನ್ನು, ವೈಭವವನ್ನು, ಅಧಿಕಾರವನ್ನು ಅನುಭವಿಸಿದರು. ಆದರೆ ನಂತರದ ತಮ್ಮ ಜೀವನದಲ್ಲಿ ಇವುಗಳ ನಿಷ್ಪ್ರಯೋಜಕತೆಯನ್ನೂ, ಅನಿತ್ಯತೆಯನ್ನೂ ಮನಗಂಡು ಹರಿಗೆ ಶರಣಾಗಿ ಹರಿದಾಸರಾದರು.

ಕನಕದಾಸರ ಕೀರ್ತನೆಗಳು ಭಾವಪೂರ್ಣವಾಗಿವೆ. ಈ ಕೀರ್ತನೆಗಳ ಮೂಲಕ ಭಗವಂತನಲ್ಲಿ ಭಕ್ತಿಯನ್ನು ಸಾರುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕೆಲವು ಅಸಾಂಪ್ರದಾಯಿಕ ಆಚರಣೆಗಳನ್ನು ಒರೆಗಲ್ಲಿಗೆ ಹಚ್ಚಿ ಪ್ರಶ್ನಿಸಿದ್ದಾರೆ. ಸ್ವಸ್ಥಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿಯ ಅವಶ್ಯಕತೆ ಇದೆ. ಅದು ಭಗವದ್ಭಕ್ತಿಯಿಂದ ಲಭಿಸುವುದು. ನಾಸ್ತಿಕತೆಯು ಮನುಷ್ಯನಲ್ಲಿ ತಲ್ಲಣವನ್ನು, ನಿರಾಸೆಯನ್ನು, ಭ್ರಮೆಯನ್ನು, ಹತಾಶೆಯನ್ನು ಉಂಟು ಮಾಡುತ್ತದೆ. ದೇವರಲ್ಲಿ ಅನನ್ಯ ಭಕ್ತಿಯನ್ನು ಸಾರುವ- ’ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’, ಮಂತಾದ ಅನೇಕ ಕೀರ್ತನೆಗಳನ್ನು ಕಾಣಬಹುದು. ಆದರೆ ಡಾಂಬಿಕ ಭಕ್ತಿಯನ್ನು ಅವರು ಎಂದೂ ಒಪ್ಪುತ್ತಿರಲಿಲ್ಲ. ‘ಜಪವಮಾಡಿದರೇನು ತಪವಮಾಡಿದರೇನು, ವಿಪರೀತ ಕಪಟಗುಣಕಲುಷವಿದ್ದವರು’ ಎಂದು ದೂಷಿಸಿದ್ದಾರೆ.
ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ.
ನೀ ದೇಹದೊಳಗೋ, ನಿನ್ನೊಳು ದೇಹವೋ?
ಗಂಧದಲಿ ಕುಸುಮವೋ, ಕುಸುಮದಲಿ ಗಂಧವೋ, ಗಂಧ, ಕುಸುಮಗಳೆರೆಡೂ ಆಘ್ರಾಣದೊಳಗೋ,
ಅಸಮಭವ “ಕಾಗಿನೆಲೆಯಾದಿಕೇಶವ” ಉಸುರಳವೆಲ್ಲಾ ನಿನ್ನೊಳಗೋ.

ಹಲವು ಜೀವವ ಒಂದೆಲೆ ನುಂಗಿತು, ಒಂದೆಲೆಯು ನುಂಗಿತು, ಗಿಡವ ನುಂಗಿತು, ಗಿಡದೊಡ ತೊಟ್ಟ ನುಂಗಿತು, ಗಿಡದ ತಾಯಿ, ತಂದೆಯ ನುಂಗಿತು, ಬಡಗ ಬಲ್ಲರೇ ಹೇಳಿ ಕನಕದಾಸ, ಕಾಗಿನೆಲೆಯಾದಿಕೇಶವ ಬಲ್ಲನೀ ಬೆಡಗ.

ನೂರು ಕನ್ಯಾದಾನವನು, ಭಾಗೀರಥಿ ಸ್ನಾನವನು, ಮಿಗೆ ಕೈಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರು ಅಗ್ರಹಾರಗಳ ಧಾರೆಯೆರೆದೆತ್ತಂತೆ ಫಲ‌ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ವವರಿಗೆ,

ಮೇರುಮಂದರನಿಭಸುವರ್ಣವ ವಾರಿಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲಹವುದು ಧಾರುಣೀಯೊಳೀ ಹರಿಭಕ್ತಿಸಾರವನಾರು ಓದುವವರನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು

ಲೋಕದೊಳಗತ್ಯಧಿಕವೆನಿಸುವ ಕಾಗಿನೆಲೆಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಹರಿಭಕ್ತಿಸಾರವನು, ಜೋಕೆಯಲಿ ಬರೆದೋದಿ ಕೇಳ್ವರ ನಾ ಕುಲದಿ‌ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಡದಾದಿಕೇಶವನು, ಬಡದಾದಿ‌ಕೇಶವನು.

ಕನಕದಾಸ ಜಯಂತಿಯ ಶುಭಾಶಯ.

ಕನಕದಾಸರಂತಹ ಮಹಾಮಹಿಮರ ಜನ್ಮನೆಲೆಯನ್ನು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದ್ದು ಇತಿಹಾಸ ಸಂಶೋಧಕರೂ, ಅಧ್ಯಯನಕಾರರು, ಶಿವಮೊಗ್ಗದವರೇ ಆದ ಶ್ರೀಯುತ ಡಾ.‌ಶಾಂತಾರಾಮ ಸಾಮಕರು, ಮೂರುವರ್ಷಗಳ ಕಾಲ ಅಮೂಲಾಗ್ರವಾಗಿ ಬಾಡದ ನೆಲೆಯಲ್ಲಿ ಕನಕದಾಸರ ಅರಮನೆಯನ್ನು ನೆಲದಾಳದಿಂದ ಹುಡುಕಿ ತೆಗೆದವರು ಜೊತೆಗೆ ಬಾರ್ಕೂರಿನ ರಾಜ್ಯಪಾಲರ ಅರಮನೆಯನ್ನೂ, ಹಿರಿಯ ಸಂಶೋಧಕರ ಜೊತೆಗೆ ತಾಳಗುಂದದ ಉತ್ಖನನದಲ್ಲೂ ಪಾತ್ರವಹಿಸಿದವರು. ಬಾಡದಲ್ಲಿ ಕನಕದಾಸರ ಅರಮನೆಯನ್ನು ಶೋಧಿಸುವಾಗ ಸ್ಥಳೀಯರಿಂದ ಹಲವಾರು ತೊಂದರೆಗಳನ್ನೂ ಅನುಭವಿಸಿದ ಕೆಟ್ಟ ಅನುಭವವಂತೂ ಹೇಳತೀರದು. ಇಂತಹ ಸಾಧಕರನ್ನು ಕರ್ನಾಟಕ ಸರ್ಕಾರವಿರಲಿ, ಕನಕಪೀಠವೂ ಗೌರವಿಸದಿರುವುದು ಇತಿಹಾಸಕ್ಕೇ ಮಾಡಿದ ಅವಮಾನವೆಂದೇ ಹೇಳಬೇಕು.‌ ಸ್ಥಳೀಯ ಕನ್ನಡ ಸಂಘಟನೆ, ಸಂಸ್ಥೆಗಳೂ ಸಹ ಇದರಿಂದ ಹೊರತಾಗಿಲ್ಲ.‌ ಆದರೆ ಕನಕದಾಸರಂತಹ ಮಹಾಮಹಿಮ ದಾಸಶ್ರೇಷ್ಠರ ಜನ್ಮನೆಲೆಯನ್ನು ಜಗತ್ತಿನ ಎದುರಿನಲ್ಲಿ ತೆರೆದಿಟ್ಟ ಆತ್ಮಸಂತೋಷವೂ, ಅಭಿಮಾನವೂ ಇವರಿಗಿದೆ.

ಇದೀಗ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ (ನೋಂ) ಯ ತಂಡದೊಂದಿಗೆ ಇನ್ನೋರ್ವ ದಾಸಶ್ರೇಷ್ಠ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರೆಂದೂ, ಐದು ಲಕ್ಷ ಕೀರ್ತನೆಗಳನ್ನು, ಉಗಾಭೋಗಗಳನ್ನೂ, ಮುಂಡಿಗೆಗಳನ್ನೂ ರಚಿಸಿದ್ದ ಮಲೆನಾಡಿನವರಾದ ಅದರಲ್ಲೂ ವಿಜಯನಗರದ ಅರಸರ ಕಾಲದಲ್ಲಿ ತೀರ್ಥಹಳ್ಳಿ(ತೀರ್ಥರಾಜಪುರ ಅಗ್ರಹಾರ)ಯಆರಗ ಹದಿನೆಂಟು ಕಂಪಣವೆಂದೇ ಹೆಸರಾಗಿದ್ದ ಆರಗದ ನವಕೋಟಿ ನಾರಾಯಣರೆಂದೇ ಬಿರುದಾಂಕತರಾಗಿದ್ದು, ಭಗವಂತನ ದರ್ಶನ ದಿಂದ ವೈರಾಗ್ಯಭರಿತರಾಗಿ ತಮ್ಮೆಲ್ಲಾ ಆಸ್ತಿಯನ್ನು ದಾನಮಾಡಿ ಆದದ್ದೆಲ್ಲಾ ಒಳಿತೇ ಆಯಿತು ಎಂದು ಭಕ್ತಿ ಚಳುವಳಿಗೆ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮುನ್ನುಡಿ ಬರೆದ ಶ್ರೀ ಪುರಂದರ ದಾಸರ ಜನ್ಮ ನೆಲೆಯ ಶೋಧಕ್ಕೆ ತಮ್ಮ ಶಿಷ್ಯವೃಂದದೊಡನೆ ಸಜ್ಜಾಗಿದ್ದಾರೆ. ಇವರ ಸಂಶೋಧನೆಗೆ ದಾಸವರೇಣ್ಯರ, ಭಗವಂತನ ಆಶೀರ್ವಾದ ವಿರಲಿ, ಪುರಂದರದಾಸರ ಜನ್ಮನೆಲೆಯು ಐತಿಹಾಸಿ ದಾಖಲೆಯಿಂದ ಜಗತ್ತಿಗೆ ಪ್ರಚಾರವಾಗೆಲೆಂದು ಆಶಿಸೋಣ.

ಲೇಖನ:
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ(ನೋಂ), ಶಿವಮೊಗ್ಗ.
6361124316

CM Siddharamaiah ಶಿವಶಂಕರಪ್ಪ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕರು- ಸಿದ್ಧರಾಮಯ್ಯ

0

CM Siddharamaiah ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡ ಹಿರಿಯ ಶಾಸಕ, ಮಾಜಿ ಮಂತ್ರಿ ಹಾಗೂ ದಾವಣಗೆರೆಯ ನಗರಸಭೆ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಜನ್ಮದಿನಾಚರಣೆಯಲ್ಲಿ ಹಾಗೂ ದಾಲ್ ಮಿಲ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಶ್ರೀಯುತರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಿತ್ತು. ಅವರ ಅಗಲಿಕೆಯಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಅವರು ಅತ್ಯಂತ ಕ್ರೀಯಾಶೀಲರಾಗಿದ್ದರು.

ಎಂದು ಮುಖ್ಯಮಂತ್ರು ಸಿದ್ಧರಾಮಯ್ಯ ಹೇಳಿದ್ದಾರೆ. ದಾವಣಗೆರೆಯಲ್ಲಿ ನಡೆದ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಮಾತನಾಡುತ್ತಿದ್ದರು.

ಶಿವಶಂಕರಪ್ಪನವರು ವೀರಶೈವ ಮಹಾಸಭಾದ ರಾಷ್ಟ್ರಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ಬಸವಣ್ಣನವರ ಛಾಯಾಚಿತ್ರ ಕಡ್ಡಾಯಗೊಳಿಸುವ ನಮ್ಮ ತೀರ್ಮಾನವನ್ನು ಅಭಿನಂದಿಸಲು ನನಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು.

ಶಿವಶಂಕರಪ್ಪ ಅವರೊಬ್ಬ ಜಾತ್ಯಾತೀತ ಹಾಗೂ ಜನಪ್ರಿಯ ನಾಯಕ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯವಿಲ್ಲದಿದ್ದರೂ, ಆ ಕ್ಷೇತ್ರದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದರಲ್ಲದೇ, ಆರು ಬಾರಿ ಸತತವಾಗಿ ಆಯ್ಕೆಯಾಗಿದ್ದರು. ಸದಾ ಚೈತನ್ಯಶೀಲರಾಗಿದ್ದ ಶಾಮನೂರು ಶಿವಶಂಕರಪ್ಪನವರು ಮುಂದಿನ ಚುನಾವಣೆಯಲ್ಲಿಯೂ ಭಾಗವಹಿಸುವ ಹುರುಪನ್ನು ತೋರಿದ್ದರು. ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು.

ಬಡವರು, ಕಷ್ಟದಲ್ಲಿರುವವರಿಗೆ ಟ್ರಸ್ಟ್ ಮೂಲಕ ನೆರವಾಗುವ ಕೊಡುಗೈದಾನಿಯಾಗಿದ್ದರು. ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ, ಈ ನಡುವಿನ ಪಯಣದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಮುಖ್ಯ. ದು:ಖದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ನಿಜಕ್ಕೂ ಸಾರ್ಥಕ.

CM Siddharamaiah ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಹಸ್ರಾರು ಜನರ ಬದುಕಿಗೆ ದಾರಿದೀಪವಾಗಿದ್ದರು. ಉದ್ಯಮಿಯಾಗಿ, ಕೈಗಾರಿಕೋದ್ಯಮಿಯಾಗಿ, ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿ, ರಾಜಕಾರಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮಹಾನ್ ಚೇತನ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು
ಸಿದ್ಧರಾಮಯ್ಯ ಅವರು ಶಿವಶಂಕರಪ್ಪನವರ ನಾಡಿಗೆ ನೀಡಿದ ಸಾಮಾಜಿಕ ಕೊಡುಗೆಗಳನ್ನ ಕೊಂಡಾಡಿದರು.

B.Y. Raghavendra ಬ್ಯಾಂಕ್ ಗಳು ಮೂಲಕ ಜಾರಿಯಾಗುವ ಕೇಂದ್ರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು- ಬಿ.ವೈ.ರಾಘವೇಂದ್ರ

0

B.Y. Raghavendra ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಜಿಲ್ಲಾ ಮಟ್ಟದ ಸಲಹಾ ಸಮಿತಿ’ ಹಾಗೂ ‘ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಭಾಗವಹಿಸಿದರು.

ಜಿಲ್ಲೆಯ ಬ್ಯಾಂಕಿಂಗ್ ಮತ್ತು ಆರ್ಥಿಕ ಪ್ರಗತಿಯ ಪರಿಶೀಲನೆ ನಡೆಸಲಾಯಿತು.

ಆರ್ಥಿಕ ಒಳಗೊಳ್ಳುವಿಕೆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಪಿ.ಎಂ. ಸ್ವನಿಧಿ, ಮುದ್ರಾ ಯೋಜನೆ, ಪಿ.ಎಂ. ವಿಶ್ವಕರ್ಮ ಹಾಗೂ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‌ನಂತಹ ಮಹತ್ವಾಕಾಂಕ್ಷಿ ಯೋಜನೆಗಳು ಕೇವಲ ಅಂಕಿ ಅಂಶಗಳಿಗೆ ಸೀಮಿತವಾಗದೆ, ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬುದು ಪ್ರಧಾನಿಯವರ ವಿಶೇಷ ಕಾಳಜಿಯಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ, ಸಾಲ ಸೌಲಭ್ಯ ಕೋರಿ ಬರುವ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಉದ್ಯಮಿಗಳಿಗೆ ಅನಗತ್ಯ ಅಲೆದಾಟ ತಪ್ಪಿಸಬೇಕು. ಬ್ಯಾಂಕ್ ಅಧಿಕಾರಿಗಳು ವಿಳಂಬ ಧೋರಣೆಯನ್ನು ತೋರದೆ, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

B.Y. Raghavendra ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಹೇಮಂತ್ ಎನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Bhadravathi City Municipal Council ಬೀದಿ ನಾಯಿಗಳ ಉಪಟಳ: ನಿಯಂತ್ರಣಕ್ಕೆ ಸುಪ್ರೀಂ ಆದೇಶ ಪಾಲಿಸಲಾಗುವುದು- ಭದ್ರಾವತಿ ಪುರಸಭೆ ಪ್ರಕಟಣೆ

0

Bhadravathi City Municipal Council ಭದ್ರಾವತಿ ಪುರಸಭೆ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂರ್ಕೀಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಆವರಣದಲ್ಲಿ ಬೀದಿ ನಾಯಿಗಳು ವಾಸವಿದ್ದಲ್ಲಿ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ಲಿಖಿತವಾಗಿ ಭದ್ರಾವತಿ ನಗರಸಭೆಯ ಪೌರಾಯುಕ್ತರಿಗೆ ತಿಳಿಸುವುದು.

ಸಂಸ್ಥೆಯ ಆವರಣದಲ್ಲಿ ಬೀದಿನಾಯಿಗಳ ಉಪಟಳ ತಡೆಯಲು ಹಾಗೂ ಅವುಗಳ ಪ್ರವೇಶ ನಿಯಂತ್ರಿಸಲು ಕ್ರಮ ವಹಿಸುವುದು. ನಗರ ಸ್ಥಳೀಯ ಸಂಸ್ಥೆಯಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸಹಕರಿಸಲು ಹಾಗೂ ಅವುಗಳ ಪ್ರವೇಶ ನಿರ್ಭಂದಿಸುವುದನ್ನು ಮೇಲ್ವಿಚಾರಣೆ ಮಾಡಲು ಸಂಸ್ಥೆಯ ವತಿಯಿಂದ ಒಬ್ಬ ಜವಾಬ್ಧಾರಿಯುವ ನೌಕರರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವುದು.

ಸಂಸ್ಥೆಯ ವ್ಯಾಪ್ತಿಯಲ್ಲಿ ಪುನಃ ನಾಯಿಗಳು ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅವನ್ನು ಸ್ಥಳಾಂತರಿಸುವ ವೆಚ್ಛವನ್ನು ಆ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುವುದು.

Bhadravathi City Municipal Council ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಅವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಭದ್ರಾವತಿ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

District Chamber of Commerce and Industry ದೇವಕಾತಿಕೊಪ್ಪ : ಕೈಗಾರಿಕೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಿಕೆ ಸಮಸ್ಯೆ ಪರಿಹರಿಸಬೇಕು- ಡಿ.ಎಸ್.ಅರುಣ್.

0

District Chamber of Commerce and Industry ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಪರಿಸರ ಅನುಮತಿ ನೀಡುವಿಕೆಯ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸರ್ಕಾರದ ಗಮನ ಸೆಳೆಯಲು ಹಾಗೂ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಏರ್ಪಡಿಸಿದ್ದ ದೇವಕಾತಿಕೊಪ್ಪ ಕೈಗಾರಿಕಾ ವಲಯದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದರು.

ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ 450 ಎಕರೆ ಪ್ರದೇಶದಲ್ಲಿ 200 ಜನಕ್ಕೆ ಕೈಗಾರಿಕಾ ಭೂಮಿ ಮಂಜೂರು ಮಾಡಿದ್ದು, 20 ಜನ ಕೈಗಾರಿಕೆ ಪ್ರಾರಂಭಿಸಿದ್ದಾರೆ. ಉಳಿದ 180 ಜನ ಕೈಗಾರಿಕೆ ಪ್ರಾರಂಭಿಸಲು ತಯಾರಿ ಮಾಡಿಕೊಂಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಸೌಕರ್ಯಗಳಿಲ್ಲ. ಈವರೆಗೂ ಸಹ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮಂಜೂರು ಮಾಡಿರುವ ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಿಲ್ಲ ಎಂದು ದೂರಿದರು.

ರಾಜ್ಯದ ಮೂರು ಕೈಗಾರಿಕಾ ಪ್ರದೇಶಗಳಿಗೂ ಪರಿಸರ ಅನುಮತಿ ಇಲ್ಲದೆ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಹಸಿರು ಪೀಠವು ಪರಿಸರ ಅನುಮತಿ ಇಲ್ಲದೆ ಇರುವ ಎಲ್ಲ ಕೈಗಾರಿಕೆಗಳನ್ನು ಮುಚ್ಚಲು ಆದೇಶ ನೀಡಿದೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ, ಅತಿ ಹೆಚ್ಚಿನ ಬೆಲೆಗೆ ಕೈಗಾರಿಕೆ ಭೂಮಿ ಪಡೆದು ಮೂಲ ಸೌಕರ್ಯಗಳನ್ನು ಮಾಡಿಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಿರುವ ಕೈಗಾರಿಕೆಗಳಿಗೆ ಮುಚ್ಚುವ ಆತಂಕ ಎದುರಾಗಿದೆ ಎಂದರು.

ದೇವಕಾತಿ ಕೈಗಾರಿಕಾ ವಲಯ 500 ಎಕರೆಗಿಂತ ಕಡಿಮೆ ಪ್ರದೇಶ ಇರುವುದರಿಂದ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಕೈಗಾರಿಕಾ ಭೂಮಿಯನ್ನು ವಾಪಸ್ ಮಾಡುವ ಕೈಗಾರಿಕೋದ್ಯಮಿಗಳಿಗೆ ಶೇ. 20 ರಷ್ಟು ಕಡತ ಮಾಡಿದೆ ಪೂರ್ತಿ ಹಣ ವಾಪಸ್ ಕೊಡಬೇಕು. ದಂಡ, ಬಡ್ಡಿಯನ್ನು ಮನ್ನಾ ಮಾಡಬೇಕು. ಆಗಿರುವ ನಷ್ಟಕ್ಕೆ ಪರಿಹಾರವನ್ನು ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರ್ಕಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.

District Chamber of Commerce and Industry ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ಭೂಮಿ ಕೊರತೆ ಇದೆ. ಇಂತಹ ಸಮಯದಲ್ಲಿ ದೇವಕಾತಿ ಕೈಗಾರಿಕಾ ವಲಯ ಪ್ರದೇಶದಲ್ಲಿ ಕೈಗಾರಿಕೆಗಳು ಮುಚ್ಚುವ ಆತಂಕದಿಂದ ಶಿವಮೊಗ್ಗದ ಕೈಗಾರಿಕಾ ಅಭಿವೃದ್ಧಿಗೆ ಹೊಡೆತ ಕೊಟ್ಟಂತಾಗಿದೆ. ಸರ್ಕಾರ ಆದಷ್ಟು ಬೇಗ ವನ್ಯಜೀವಿ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಮಾಣಿತ ಕಾರ್ಯ ವಿಧಾನ ಪ್ರಾರಂಭಿಸಿ ದೇವಕಾತಿ ಪ್ರದೇಶದ ಕೈಗಾರಿಕೋದ್ಯಮಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ದೇವಕಾತಿ ಕೈಗಾರಿಕಾ ವಲಯದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಸಮಸ್ಯೆಗೆ ಕೆಐಎಡಿಬಿ ನೇರ ಕಾರಣ ಎಂದರು. ಕೆಐಎಡಿಬಿ ವಿರುದ್ಧ ನ್ಯಾಯಯುತ ಹೋರಾಟಕ್ಕೆ ಕಾನೂನು ಮಾರ್ಗದ ಆಯ್ಕೆಯ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಡಾ. ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ರವಿಪ್ರಕಾಶ್ ಜೆನ್ನಿ, ಜಿ.ವಿ.ಕಿರಣ್ ಕುಮಾರ್, ವಿನೋದ್ ಕುಮಾರ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಡಿ.ಎಂ.ಶಂಕರಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.

MESCOM ಡಿಸೆಂಬರ್ 28 & 29 ನಿದಿಗೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ, ಮೆಸ್ಕಾಂ ಪ್ರಕಟಣೆ

0

MESCOM ಡಿಸೆಂಬರ್ 28 ಮತ್ತು 29 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮಾಚೇನಹಳ್ಳಿ 110 ಕೆವಿ ಎಂಆರ್‌ಎಸ್ ವಿವಿ ಕೇಂದ್ರದಿಂದ 110 ಕೆವಿ ಸಿಂಗಲ್ ಸರ್ಕ್ಯುಟ್ ಮಾರ್ಗವನ್ನು ಡಬಲ್ ಸರ್ಕ್ಯುಟ್ ಮಾರ್ಗವನ್ನಾಗಿ ಬದಲಾಯಿಸುವ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನಿಧಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿ ಕ್ಯಾಂಪ್, ಹಾರೆಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಕೋರಿದೆ.

Department of Pre-Graduate School Education ಎಲ್ಲಾ ಅರ್ಹ ವಿದ್ಯಾರ್ಥಿ ಮತದಾರರು ಕೂಡಲೇ ನೋಂದಣಿ ಮಾಡಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು- ಚಂದ್ರಪ್ಪ ಎಸ್. ಗುಂಡಪಲ್ಲಿ

0

Department of Pre-Graduate School Education 18 ವರ್ಷ ವಯಸ್ಸು ತುಂಬಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕೆಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ತಿಳಿಸಿದರು.

ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಸ್ವೀಟ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಮಟ್ಟದ ಇ.ಎಲ್.ಸಿ. ವತಿಯಿಂದ ಶುಕ್ರವಾರ ನಗರದ ಸ್ವೀಟ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಇಎಲ್‌ಸಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಪ್ರಕ್ರಿಯೆಗಳು ನ್ಯಾಯ ಸಮ್ಮತ, ನಿಷ್ಪಕ್ಷಪಾತ, ಭ್ರಷ್ಟಾಚಾರ ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯಬೇಕು. ಹೀಗೆ ಭ್ರಷ್ಟಾಚಾರ ಮುಕ್ತವಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗದೇ, ಸ್ವತಂತ್ರವಾಗಿ ಮತದಾನ ಮಾಡುಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆಚಾರ-ವಿಚಾರ, ಶಿಸ್ತು, ಸಮಯ ಪಾಲನೆ, ವ್ಯಕ್ತಿ ಗೌರವ, ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ದೇಶದ ಸಂವಿಧಾನದ ಬಗ್ಗೆ ಜಾಗೃತಿಯನ್ನು ಹೊಂದುವ ಮೂಲಕ ಉತ್ತಮ ಸಮಾಜ ಹಾಗೂ ದೇಶವನ್ನು ನಿರ್ಮಾಣ ಮಾಡಲು ಸಹಕಾರಿಯಾಗಬೇಕೆಂದರು.

ರಾಜ್ಯ ಮಟ್ಟದ ಇ.ಎಲ್.ಸಿ ತರಬೇತುದಾರರಾದ ಪರವೇಜ್ ನವೀದ್ ಅಹ್ಮದ್ ಮಾತಾನಾಡಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಯಾವುದೇ ಮತ, ಜಾತಿ, ಧರ್ಮದ ಬೇದ ಭಾವವಿಲ್ಲದೇ ದೇಶದ ಎಲ್ಲಾ ನಾಗರೀಕರಿಗೂ ಮತದಾನವೆಂಬ ಪವಿತ್ರವಾದ ಹಕ್ಕನ್ನು ನೀಡಲಾಗಿದೆ.

18 ವರ್ಷ ತುಂಬಿದ ಪ್ರತಿಯೂಬ್ಬ ಭಾರತದ ನಾಗರೀಕನೂ ಕೂಡಾ ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ. ವೋಟರ್ ಹೆಲ್ಪ್ ಲೈನ್ ಆ್ಯಪ್(ವಿಹೆಚ್‌ಪಿ) ನಲ್ಲಿ ಸ್ವಯಂ, ಅಥವಾ ಹತ್ತಿರದ ಬಿ.ಎಲ್.ಓ ಗಳನ್ನು ಸಂಪರ್ಕಿಸಿ ನಮೂನೆ-6 ನ್ನು ಭರ್ತಿ ಮಾಡುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು.

Department of Pre-Graduate School Education ನಮೂನೆ-8 ರ ಮೂಲಕ ಹೆಸರು, ವಿಳಾಸ, ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದು ನಮೂನೆ-7 ರಲ್ಲಿ ಮೃತ ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶವಿದೆ. ನಮೂನೆ-12 ರಲ್ಲಿ 80 ವರ್ಷ ವಯಸ್ಸು ತುಂಬಿದ ಹಾಗೂ ವಿಕಲಚೇತನ ಮತದಾರರಿಗೆ ಚುನಾವಣಾ ಅಧಿಕಾರಿಗಳು ಅವರ ಮನೆಗೆ ಬಂದು ರಹಸ್ಯ ಮತದಾನದ ಮೂಲಕ ಮತ ಚಲಾವಣೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಎಲ್ಲದರ ಹಿಂದೆ ಇರುವ ಉದ್ದೇಶ ನ್ಯಾಯ ಸಮ್ಮತ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸುವುದಾಗಿದೆ ಎಂದರು.

ತೀರ್ಪುಗಾರರಾಗಿ ಪಾಲ್ಗೊಂಡಿದ್ದ ವಸಂತ್ ನಾಯ್ಕ್ ಮಾತನಾಡಿಮ ಎಲ್ಲಾ ನೀತಿಗಳಲ್ಲಿ ಶ್ರೇಷ್ಠ ನೀತಿ ರಾಜನೀತಿ. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ಮತದಾನ. ಮತದಾನವು ನಿಷ್ಪಕ್ಷಪಾತವಾಗಿ, ನಿಖರವಾಗಿ, ನ್ಯಾಯಸಮ್ಮತವಾಗಿ ನಡೆಯಬೇಕು ಎಂದರು.
ಪ್ರಬಂಧ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಸ.ಪ.ಪೂ.ಕಾಲೇಜು ಬರೂರು ವಿದ್ಯಾರ್ಥಿನಿ ಕೌಶಲ್ಯಗೆ ಪ್ರಥಮ ಬಹುಮಾನ, ಸ.ಪ.ಪೂ.ಕಾಲೇಜು ಆನವಟ್ಟಿ ವಿದ್ಯಾರ್ಥಿನಿ ಸುಮ ಗಣಪ ಕಳಲಿ ದ್ವಿತೀಯ ಹಾಗೂ ತೃತೀಯಾ ಬುಹುಮಾನ ಸ.ಪ.ಪೂ.ಕಾಲೇಜು ತುಮರಿ ವಿದ್ಯಾರ್ಥಿನಿ ಛಾಯಾ ಅವರು ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಇ.ಎಲ್.ಸಿ. ಸಂಚಾಲಕರಾದ ಮಂಜುನಾಥ್ ಬಣಕಾರ, ಸ್ವೀಟ್ ಪಿ.ಯು.ಕಾಲೇಜಿನ ಅಧ್ಯಕ್ಷರಾದ ಗಂಗಾಧರ್ ನಾಯ್ಕ್, ಪ್ರಾಂಶುಪಾಲರಾದ ರೇಖಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.