International Innerwheel ಅಂತರಾಷ್ಟ್ರೀಯ ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ಶಬರಿ ಕಡಿದಾಳ್ ಅವರನ್ನು ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸನ್ಮಾನಿಸಲಾಯಿತು.
ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಬರಿ ಕಡಿದಾಳ್, ನನ್ನ ತಾಯಿ ಶೋಭಾ ಕಡಿದಾಳ್ ಅವರು ಶಿವಮೊಗ್ಗದಲ್ಲಿ ಪ್ರಾರಂಭ ಹಂತದಲ್ಲಿ ಇನ್ನರ್‌ವ್ಹೀಲ್ ಅಧ್ಯಕ್ಷರಾಗಿ ಹಲವಾರು ಹೊಸ ಕ್ಲಬ್‌ಗಳ ಸ್ಥಾಪನೆಗೆ ಶ್ರಮಿಸಿದ್ದರು. ಅವರ ಇಚ್ಛೆಯಂತೆ ನಾನು ಇಂದು ದೊಡ್ಡ ಜವಾಬ್ದಾರಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಇನ್ನರ್ ವ್ಹೀಲ್ ಸಂಸ್ಥೆ ಮಾನವೀಯ ಸೇವೆಗಳನ್ನು ಮಾಡುವುದರ ಮುಖಾಂತರ ಪ್ರಪಂಚದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಇನ್ನರ್‌ವ್ಹೀಲ್ ಜಿಲ್ಲೆಯಲ್ಲಿ 56 ಕ್ಲಬ್ ಇದ್ದು, ಎಂಟು ರೆವೆನ್ಯೂ ಜಿಲ್ಲೆಗಳನ್ನು ಒಳಗೊಂಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇನ್ನರ್‌ವ್ಹೀಲ್ ಸಂಸ್ಥೆಯನ್ನು ಸೇರುವುದರ ಮುಖಾಂತರ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸೋಣ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ನೆಪ್ಚೂನ್ ಕಿಶೋರ್ ಮಾತನಾಡಿ, ಶಬರಿ ಕಡಿದಾಳ್ ಅವರ ಚೇರ್ಮನ್ ಅವಧಿಯಲ್ಲಿ ಒಳ್ಳೆ ಒಳ್ಳೆಯ ಮಾನವೀಯ ಸೇವೆಗಳು ಹಾಗೂ ರೋಟರಿ ಜಿಲ್ಲೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡಬೇಕು ಎಂದರು.
International Innerwheel ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ವೀಣಾ ಸುರೇಶ್, ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ಡಾ. ಕಡಿದಾಳ್ ಗೋಪಾಲ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಆಡಳಿತಾಧಿಕಾರಿ ಟಿ.ಪಿ.ನಾಗರಾಜ್, ಮಲೆನಾಡು ಕ್ಲಬ್ ಮಾಜಿ ಅಧ್ಯಕ್ಷ ಮುಸ್ತಕ್ ಆಲಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಗುರುಮೂರ್ತಿ ಗೌಡ, ಮುಖ್ಯಶಿಕ್ಷಕಿ ಸಲ್ಮಾ ಬೇಗಂ, ಕೋಳಿಗೆ ವಾಸಪ್ಪಗೌಡ, ಟಿ.ಡಿ.ಶ್ರೀಕಂಠ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
PM Narendra Modi ಬೆಂಗಳೂರಿನ ನಾಗರಿಕರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗವು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಉದ್ಘಾಟನೆಗೊಂಡಿತು. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಹಸಿರಿ ನಿಶಾನೆ ತೋರಿಸಿದ ವಂದೇ ಭಾರತ್ ಮೂರು ರೈಲುಗಳ ಪೈಕಿ ಬೆಂಗಳೂರಿನಿಂದ ಬೆಳಗಾವಿಗೆ, ಅಮೃತಸರದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರದಿಂದ (ಅಜ್ನಿ) ಪುಣೆಗೆ ಮೂರು ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ..
CM Siddaramaiah ಬಿಜೆಪಿಯವರು ಯಾವತ್ತೂ ಜನರ ಆಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರೋಧವಾದ ನೀತಿಯನ್ನು ಅನುಸರಿಸಿ ಅಧಿಕಾರಕ್ಕೆ ಬಂದದ್ದು. ಕೇಂದ್ರ ಸರ್ಕಾರ ನಮ್ಮೊಂದಿಗೆ ಸಹಕರಿಸುತ್ತಿಲ್ಲ. ತೆರಿಗೆ ಪಾಲನ್ನೂ ಸರಿಯಾಗಿ ಕೊಡುತ್ತಿಲ್ಲ. ಎಂದು ಮೈಸೂರಿನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಇನ್ನಾದರೂ ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಧ್ವನಿ ಎತ್ತಲಿ ಎಂದು ಸಿದ್ಧರಾಮಯ್ಯನವರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಯೊಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ತನಗಾದರೆ ಒಂದು ನಿಲುವು. ಸಮಾಜಕ್ಕೆ ಬೇರೆ. ಸಮಾಜದ ಭಾಗವಾದರೂ ಮನುಷ್ಯ ತನ್ನ ಬದುಕನ್ನೇ ವಿಡಂಬನೆಗೊಡ್ಡುವ ಪರಿಸ್ಥಿತಿ ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದಾಗಿದೆ. ಇಡೀ ಮನುಷ್ಯ ಬದುಕನ್ನ ತಮ್ಮದೇ ದೃಷ್ಟಿಕೋನದಲ್ಲಿ ಯಥಾವತ್ತಾದ ಚಿತ್ರಣ. ತಲ್ಲಣಗಳ ಜೀವರ ಹತಾಶತೆ, ಲೈಂಗಿಕ ಹಸಿವು, ಗುರಿಯಿಲ್ಲದೇ ನುಗ್ಗುವ ನಾಗರಿಕ ಧಾವಂತಗಳನ್ನ ವಾಸ್ತವ ಬರವಣಿಗಯ ಮೂಲಕ ಕಟ್ಟಿಕೊಡುವ ಕಾದಂಬರಿಕಾರ ಭೈರಪ್ಪ ನಮ್ಮ ನಡುವಿನ ಓರ್ವ ಧೀಮಂತ. ಎಂದು ಕಾದಂಬರಿಕಾರ್ತಿ ಶ್ರೀಮತಿಸಹನಾ ವಿಜಯ ಕುಮಾರ್ ಹೇಳಿದರು. ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ” ತಿಂಗಳ ಅತಿಥಿ”ಯಲ್ಲಿ ಅವರು ಭಾಗವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಣ ಪ್ರೊ. ಶಂಕರನಾರಾಯಣ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು. ನಂತರ ಶ್ರೀಮತಿ ಸಹನಾ ವಿಜಯ ಕುಮಾರ್ ಅವರೊಂದಿಗೆ ಸಹೃದಯ ಸಂವಾದ ನಡೆಯಿತು.
D.K. Shivakumar ಕೆ ಪಿ ಸಿ ಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿ ಶ್ರೀ ವಿ.ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು .
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಶ್ರೀ ಜೆ.ಸಿ.ಚಂದ್ರಶೇಖರ್,ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಎನ್.ಎ.ಹ್ಯಾರಿಸ್, ವಿಧಾನ ಪರಿಷತ್ ಸದಸ್ಯ ಶ್ರೀ ಬಸವನಗೌಡ ಬಾದರ್ಲಿ, ಎಐಸಿಸಿ ಕಾರ್ಯದರ್ಶಿ ಶ್ರೀ ಮನ್ಸೂರ್ ಅಲಿಖಾನ್ ಉಪಸ್ಥಿತರಿದ್ದರು.
Youth Hostels Association ಎಲ್ಲರಲ್ಲಿ ಅಡಗಿರುವ ವಿಶೇಷ ಜ್ಞಾನವನ್ನು ಇತರರಿಗೂ ಹರಡಲು ಹಾಗು ಬರಹ ರೂಪದಲ್ಲಿ ವ್ಯಕ್ತಪಡಿಸಲು ಅನುಕೂಲ ಎಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಯೋಜಿಸಿರುವ “ಸಂಸ್ಕೃತ ಶ್ರಾವಣ ಮಾಸೋತ್ಸವ” ಪ್ರಯುಕ್ತ ಪ್ರಬಂಧ ಬರೆಯುವ ಕಾರ್ಯಕ್ರಮವನ್ನು ನನ್ನ ಕನಸಿನ ಶಿವಮೊಗ್ಗದ ಪ್ರಮುಖರಾದ ಎನ್ ಗೋಪಿನಾಥ್ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಒಟ್ಟು ಕುಟುಂಬದ ಜೀವನ ಶೈಲಿ ಇತ್ತು. ಆದರೆ ಇಂದು ನ್ಯಾನೋ ಕುಟುಂಬ ಪದ್ದತಿಯಿಂದ, ಮಕ್ಕಳಿಗೆ ಸಂಬಂಧದ ಅರ್ಥವೇ ಇಲ್ಲದಂತಾಗಿದೆ. ಪ್ರಬಂಧ ಬರೆಯುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಹಾಗೂ ಹೊಸ ವಿಚಾರಗಳನ್ನು ಯೋಚಿಸಲು, ತಮ್ಮಲ್ಲೆ ಚರ್ಚಿಸಲು ಬಹಳ ಅನುಕೂಲ. ಸಂಸ್ಕೃತದಲ್ಲಿ ಪ್ರಬಂಧ ಆಯೋಜಿಸಿರುವುದು ಬಹಳ ಸಂತೋಷ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ.ವಿಜಯಕುಮಾರ್ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಲವಾರು ವರ್ಷಗಳಿಂದ ಈ ರೀತಿ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುತ್ತಿದ್ದು, ಇಂದು ಕುಟುಂಬ ಪದ್ದತಿ ಎಂಬ ವಿಚಾರವಾಗಿ ಪ್ರಬಂಧ ಆಯೋಜಸಿರುವುದು ಅತ್ಯುತ್ತಮವಾಗಿದೆ ಎಂದರು.
ಯೂತ್ ಹಾಸ್ಟೆಲ್ಸ್ ಛೇರ್ಮನ್ ವಾಗೇಶ್ ಮಾತನಾಡುತ್ತಾ, ಜೀವನ ಎಂದರೆ ಒಬ್ಬರಿಗೊಬ್ಬರು ಸಹಕರಿಸುತ್ತಾ ಬಾಳುವುದು. ನಾವಿಬ್ಬರು, ನಮಗೆ ಒಬ್ಬರು ಎಂಬ ಜೀವನ ಇಂದಿನ ಪರಿಸ್ಥಿತಿಯಲ್ಲಿ ಸರಿ ಎಂದು ಅನ್ನಿಸಬಹುದು. ಆದರೆ, ಒಟ್ಟಿಗೆ ಬಾಳಿ, ಜೀವನದ ಸವಿಯ ಅರಿವಿರುವವರು ಕೂಡು ಕುಟುಂಬದ ಸಂಬಂಧಗಳನ್ನು ಸ್ಮರಿಸಿತ್ತಾರೆ.
ಇಂದು ಮೊಬೈಲ್ ಎಲ್ಲಾ ಸಂಬಂಧಗಳಿಗೆ ಕೊಂಡಿಯಾಗಿದೆ. ಅದು ಯಂತ್ರಸಂಬಂಧ. ಕೂಡಿ ಹಬ್ಬ, ಸಂತೋಷ ಕೂಟ ಆಯೋಜಿಸುವುದು ಸಂಬಂಧ ಬೆಸೆಯುತ್ತದೆ ಎಂದರು.
ಮನು ಸ್ವಾಗತಿಸಿದರು. ಅ.ನ.ವಿಜಯೇಂದ್ರ ಇದುವರೆಗೂ ಅಯೋಜಿಸಿರುವ ಕಾರ್ಯಕ್ರಮಗಳು ನಗರದ ಹಿರಿಯರು ನೀಡುತ್ತಿರುವ ದೇಣಿಗೆಯಿಂದ ನಡೆಯುತ್ತಿದೆ ಎಂದರು. ಹಲವಾರು ಕಾರ್ಯಕ್ರಮಗಳನ್ನು ಈ ಶ್ರಾವಣ ಮಾಸದಲ್ಲಿ ಮುವತ್ತೂಂದು ದಿನವೂ ವಿಧ ವಿಧವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
Inner Wheel Club Shimoga ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಸಾಲು ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಾ ಹೋಗುತ್ತವೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬ ತುಂಬಾ ವಿಶೇಷವಾಗಿದೆ ಪುರಾಣ ಕಾಲದಿಂದಲೂ ಲಕ್ಷ್ಮಿಗೆ ತನ್ನದೇ ಆದ ಇತಿಹಾಸವಿದೆ ಹಾಗೂ ಶ್ರದ್ಧೆ ಮತ್ತು ಭಕ್ತಿಯಿಂದ ವರಮಹಾಲಕ್ಷ್ಮಿಯನ್ನು ಪೂಜಿಸಿದಲ್ಲಿ ಬೇಡಿದ ವರಗಳನ್ನು ಕರುಣಿಸುವ ವರಮಹಾಲಕ್ಷ್ಮಿ ಇಂದಿಗೂ ಸಹ ನಮ್ಮ ಮನೆ ಮನಗಳಲ್ಲಿ ನೆಲೆಸಿದ್ದಾಳೆ ಎಂದು ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅವರು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವೀಣಾ ಸುರೇಶ್ ಅವರ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾದ ವರಮಹಾಲಕ್ಷ್ಮಿ ವ್ರತದಲ್ಲಿ ಇನ್ನರ್ ವೀಲ್ ಕ್ಲಬ್ಬಿನ ಎಲ್ಲಾ ಗೆಳತಿಯರು ಈ ವಿಶೇಷ ಪೂಜೆ ಯಲ್ಲಿ ಪಾಲ್ಗೊಂಡು ಫಲ ಪುಷ್ಪ ತಾಂಬೂಲ ಪಡೆದುಕೊಂಡು ದೇವಿಯ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಅಧ್ಯಕ್ಷರಾದ ವೀಣಾ ಸುರೇಶ್ ಅವರು ಮಾತನಾಡುತ್ತಾ ದೇವಿಯಲ್ಲಿ ಆಯಸ್ಸು, ಆರೋಗ್ಯ ಹಾಗೂ ಮನ ಶಾಂತಿ ಮತ್ತು ಧೈರ್ಯ ಹಾಗೂ ಜೀವನದ ಸಮಗ್ರತೆಗೆ ಬೇಕಾದ ಎಲ್ಲಾ ಸಂಪತ್ತುಗಳನ್ನು ಅನುಗ್ರಹಿಸುವಂತೆ ದೇವಿಯನ್ನು ಭಕ್ತಿಯಿಂದ ನಾವೆಲ್ಲ ಪ್ರಾರ್ಥಿಸೋಣ ಎಂದು ನುಡಿದರು.
Inner Wheel Club Shimoga ಈ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳಾದ. ಬಿಂದು ವಿಜಯ ಕುಮಾರ್. ರಾಜೇಶ್ವರಿ ಪ್ರತಾಪ್.. ವಿನೋದ ದಳವೆ. ಸುನಂದಾ ಜಗದೀಶ್. ಶ್ವೇತಾ ಅಶಿತ್. ಜಯಂತಿ ವಾಲಿ. ಗೀತಾ ಬಸವ ಕುಮಾರ್. ವಾಣಿ ಪ್ರವೀಣ್. ಹಾಗೂ ಇನ್ನರ್ ವೀಲ್ ಗೆಳತಿಯರು ಇದ್ದರು
Klive Special Article ‘ಸಂಗೀತ ಕಲೆಯೊಂದು, ಸಾಹಿತ್ಯ ಕಲೆಯೊಂದು, ಅಂಗಾಂಗಭಾವ ರೂಪಣದ ಕಲೆಯೊಂದು, ಸಂಗೊಳಿಸಲೀ ಕಲೆಗಳನುನಯವು ಚರ್ಯೆಯಲಿ, ಮಂಗಳೋನ್ನತ ಕಲೆಯೊ ಮಂಕುತಿಮ್ಮ’ ಎಂದು ಡಿವಿಜಿಯವರ ಕಗ್ಗದಲ್ಲಿ ಹೇಳಲಾಗಿದೆ. ಇಂತಹ ಅಂಗಾಂಗ ಭಾವ ರೂಪಣದ ಮಂಗಳೋನ್ನತ ಕಲೆಯಾದ ಭಾರತೀಯ ಶಾಸ್ತ್ರೀಯ ಭರತನಾಟ್ಯದ ಸುಧೀರ್ಘ ಶಿಕ್ಷಣ ಹಾಗೂ ತಪಸ್ಸಿನ ಸಾಕಾರವಾಗಿ ಏರ್ಪಾಡಾಗುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಕೇವಲ ಪ್ರದರ್ಶನವಾಗಿರದೆ ಒಂದು ರೀತಿಯ ಸತ್ವ ಪರೀಕ್ಷೆ ಯಾಗಿರುತ್ತದೆ.
ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಿದರೆ ಸಾಕು ಆದರೆ ರಂಗಪ್ರವೇಶದಲ್ಲಿ ಪಂಡಿತರು ಮತ್ತು ವಿಮರ್ಶಕರು ಸಹಾ “ಸೈ” ಎನ್ನಬೇಕು. ನೃತ್ಯ ಪ್ರದರ್ಶನಕ್ಕಾದರೆ ಕೇವಲ ಅಭ್ಯಾಸ ಸಾಕು ಆದರೆ ರಂಗಪ್ರವೇಶಕ್ಕೆ ಅಭ್ಯಾಸದೊಂದಿಗೆ ಕುಶಲತೆಯೂ ಬೇಕು. ಪ್ರದರ್ಶನ ಎಂದರೆ ಗುರುಗಳು ಹೇಳಿ ಕಲಿಸಿಕೊಟ್ಟದ್ದನ್ನು ವಿನಯ ಪೂರ್ವಕವಾಗಿ ಒಪ್ಪಿಸುವುದು ಆದರೆ ರಂಗಪ್ರವೇಶದ ‘ಕುಶಲತೆ’ ಎಂದರೆ ಗುರುಗಳಿಂದ ಕಲಿತುಕೊಂಡುದುದರ ಆಧಾರದ ಮೇಲೆ ಶಿಷ್ಯರು ತಮ್ಮ ಸ್ವಂತ ವ್ಯಕ್ತಿತ್ವವನ್ನು ಬೀರಿ ಕಲೆಯನ್ನು ಅಭಿವೃದ್ಧಿ ಮಾಡಿಕೊಂಡು ತೋರಿಸುವುದಾಗಿರುತ್ತದೆ, ಇದನ್ನು ಕೌಶಲ್ಯ ಎನ್ನಲಾಗುತ್ತದೆ. ಇದು ಅಲ್ಪ ಕಾಲದಲ್ಲಿ ಸಿದ್ಧಿಸುವುದಲ್ಲ ಕನಿಷ್ಠ ಹತ್ತರಿಂದ ಹದಿನೈದು ವರ್ಷಗಳ ಕಾಲ ನಿರಂತರವಾಗಿ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಇದಕ್ಕಾಗಿ ಕಲಿಸುವ ಗುರುಗಳಲ್ಲಿ ತಾಳ್ಮೆ ಬೇಕು, ಕಲಿಯುವ ಶಿಷ್ಯರಲ್ಲಿ ಜಾಣ್ಮೆಯೂ ಬೇಕು.
ನೃತ್ಯ ಕಲೆಯು ಪ್ರಪಂಚದಾದ್ಯಂತ ಎಲ್ಲ ದೇಶಗಳಲ್ಲೂ ಇದೆಯಾದರೂ ಭಾರತೀಯವಾದ ಶಾಸ್ತ್ರೀಯ ನೃತ್ಯ ಕಲೆಗೆ ವಿಶ್ವದಲ್ಲಿಯೇ ಪುರಾತನವಾದ ಇತಿಹಾಸ ಹಾಗೂ ಪಾವಿತ್ರ್ಯತೆಯು ಸಹಾ ಇದೆ. ಭರತನಾಟ್ಯವು ಮನುಷ್ಯ ಸೃಷ್ಟಿಯಾಗಿರದೆ ದೈವ ಸೃಷ್ಟಿಯಾಗಿದೆ. Klive Special Article ದೇವತೆಗಳು ಮತ್ತು ಋಷಿಗಳು ಬ್ರಹ್ಮನ ಬಳಿಗೆ ಹೋಗಿ “ಎಲ್ಲರೂ ಕಲಿತು ನಲಿಯಬಹುದಾದ ಆನಂದ ದಾಯಕ ಕಲೆಯೊಂದನ್ನು ಸೃಷ್ಟಿಸಿ ಕೊಡು” ಎಂದು ಕೇಳಿದಾಗ “ಧರ್ಮ ಮರ್ಥಂ ಯಶಃಕಿಂತ್ಯ ಯೋಪದೇಶಂ ಸಂಗ್ರಹಂ, ಭವಿಷ್ಯತಶ್ಚ ಲೋಕಸ್ಯ ಸರ್ವಕರ್ಮಾನುದರ್ಶಕಂ, ಸರ್ವ ಅರ್ಥಶಾಸ್ತ್ರಾರ್ಥ ಸಂಪನ್ನಂ ಶಿಲ್ಪ ಪ್ರವರ್ತಕಂ, ನಾಟ್ಯಾಕಮ್ ಪಂಚಮಂ ವೇದಂ ಸ್ಯೇತಿಹಾಸಂ ಕರೋಮ್ಯಹಂ” ಅಂದರೆ “ಧರ್ಮ ಅರ್ಥ ಕೀರ್ತಿ ಉಪದೇಶ ಸರ್ವಶಾಸ್ತ್ರಗಳ ಸಂಪನ್ನತೆ ಸರ್ವ ಕಲೆಗಳ ಸೊಬಗು ಹಾಗೂ ಬೋಧನೀಯವೂ ರಂಜನೀಯವೂ ಆದ ನೃತ್ಯ ಗೀತೆಗಳ ಇತಿಹಾಸ ವಾಗುವಂಥದ್ದನ್ನು ವೇದಗಳಿಂದ ಹೊಸೆದು ಸೃಷ್ಟಿಸುವೆ” ಎಂದು ಹೇಳಿ “ಋಗ್ವೇದಾತ್ ಸಾಮೇಭ್ಯೋ ಗೀತಮೇವಚ, ಯಜುರ್ವೇದಾತ್ ಅಭಿನಯಂ, ರಸಾನಾಂ ಅಥರ್ವಣಾದಪಿ” ಅಂದರೆ ಋಗ್ ವೇದ ಮತ್ತು ಸಾಮವೇದಗಳಿಂದ ಗೀತವನ್ನು, ಯಜುರ್ವೇದದಿಂದ ಅಭಿನಯವನ್ನು, ಅಥರ್ವಣ ವೇದದಿಂದ ನವ ರಸಗಳನ್ನು ಪಡೆದು ನಾಟ್ಯ ವೇದವನ್ನು ಸೃಷ್ಟಿಸಿಕೊಟ್ಟ. ಇದಕ್ಕೆ ಶಿವನು ‘ಕರಣ’ಗಳನ್ನು ಸೇರಿಸಿದರೆ, ವಿಷ್ಣುವು ‘ವೃತ್ತಿ’ಗಳನ್ನು ಕೊಟ್ಟ. ಹೀಗಾಗಿ ಭರತನಾಟ್ಯವು ಹರಿ ಹರ ಬ್ರಹ್ಮಾದಿಗಳ ವರಪ್ರಸಾದವೆಂಬ ಪವಿತ್ರ ಭಾವನೆಯೂ ಇದೆ. ಇದನ್ನು ಭರತಮುನಿ ತನ್ನ ಮಕ್ಕಳ ಮೂಲಕ ಭರತನಾಟ್ಯವಾಗಿ ಸುಮಾರು 36,000 ಶ್ಲೋಕಗಳ ರೂಪದಲ್ಲಿ ಭೂಲೋಕಕ್ಕೆ ತಂದುಕೊಟ್ಟ ಎಂದು ಹೇಳಲಾಗುತ್ತದೆ. ಆದರೆ ಅದು ನಂತರ ದ್ವಾದಶ ಸಹಸ್ರಿ ಅಂದರೆ 12,000 ಶ್ಲೋಕಗಳ ಗ್ರಂಥವಾಯಿತು ಎನ್ನಲಾಗುತ್ತಿದ್ದು ನಮಗೀಗ ಲಭ್ಯವಿರುವುದು 6,000 ಶ್ಲೋಕಗಳ ಷಟ್ ಸಹಸ್ರಿ ನಾಟ್ಯಶಾಸ್ತ್ರವಾಗಿ ಮಾತ್ರ. ಇದನ್ನು ಅಭಿನವಗುಪ್ತನು 36 ಅಧ್ಯಾಯಗಳಾಗಿ ವ್ಯಾಖ್ಯಾನಿಸಿದ್ದಾನೆ. ಇದರೊಂದಿಗೆ ನಂದಿಕೇಶ್ವರನ ‘ಅಭಿನಯ ದರ್ಪಣ’, ‘ಭರತಾರ್ಣವ’, ‘ಭರತಾರ್ಥ ಚಂದ್ರಿಕಾ’, ‘ವಿಷ್ಣು ಧರ್ಮೋತ್ತರ’, ಸಾರಂಗ ದೇವನ ‘ಸಂಗೀತ ರತ್ನಾಕರ’, ‘ಹಸ್ತಲಕ್ಷಣ ದೀಪಿಕಾ’, ಅಭಿನವ ಗುಪ್ತನ ‘ಧ್ವನ್ಯಾಲೋಕ’, ಧನಂಜಯನ ‘ದಶರೂಪಕ’ ಮುಂತಾದ ಗ್ರಂಥಗಳು ಪ್ರಸ್ತುತ ಭರತನಾಟ್ಯಕ್ಕೆ ಆಧಾರವಾಗಿವೆ. “ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಛತೆ” ಎಂಬಂತೆ ಭರತನಾಟ್ಯದಲ್ಲಿ ನೃತ್ಯದೊಂದಿಗೆ ಗಾಯನ ಮತ್ತು ವಾದ್ಯಗಳು ಸಹಾ ಮೇಳಯಿಸುತ್ತದೆ. ಯೋಗವು ‘ಚಿತ್ತವೃತ್ತಿ ನಿರೋಧ’ವಾದರೆ ನೃತ್ಯವು ‘ಚಿತ್ತ ವೃತ್ತಿ ವಿಲಾಸ’ ಎಂಬುದಾಗಿಯೂ ಪ್ರಾಜ್ಞರು ಹೇಳುತ್ತಾರೆ.
ಇಂತಹ ಭರತನಾಟ್ಯದ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರ ಶಿಷ್ಯೆಯಾಗಿ ದಶಕಗಳ ಕಾಲ ಸುಧೀರ್ಘ ತಾಲೀಮನ್ನು ಪಡೆದಿರುವ ದಾವಣಗೆರೆಯ ಕು. ಯಶಸ್ವಿನಿ ಕೆ ವಿ ಆಚಾರ್ ನಗರದ ಬಾಪೂಜಿ ಸಭಾಂಗಣದಲ್ಲಿ ರಂಗಪ್ರವೇಶ ನೆರವೇರಿಸಲಿದ್ದು ಆರಂಭದಲ್ಲಿ ಜೋಗ್ ರಾಗ ರೂಪಕ ತಾಳದಲ್ಲಿ ‘ಪುಷ್ಪಾಂಜಲಿ’ ನೃತ್ಯವನ್ನು ನಂತರ ಅದೇ ರಾಗ ಆದಿತಾಳದಲ್ಲಿ ‘ಗಣೇಶ ಸ್ತುತಿ’ ನೃತ್ಯವನ್ನು ಪ್ರಸ್ತುತಪಡಿಸಿ ಆಮೇಲೆ ಕಷ್ಟ ತರವಾದ ಕಾಲು ಚಲನೆ ಮತ್ತು ತಾಳ ವೈಚಿತ್ರ್ಯಗಳಿಂದ ಕುಣಿಯುತ್ತ ಕೊನೆಗೊಂದು ತೀರ್ಮಾನವನ್ನು ಸ್ವರದ ಮೊದಲ ಮಾತ್ರೆಯೊಂದಿಗೆ ಕೊಡುವ ‘ಜತಿಸ್ವರ’ವನ್ನು ಭಾಗ್ಯಶ್ರೀ ರಾಗ ಹಾಗೂ ಆದಿತಾಳದಲ್ಲಿ ಪ್ರಸ್ತುತಪಡಿಸಲಿದ್ದಾಳೆ. ತದನಂತರ ಹಾಡಿನ ಶಬ್ದಗಳ ವರ್ಣನೆಗಳನ್ನು ಹಲವು ಸಂಚಾರಿ ಭಾವಗಳಿಂದ ಅಭಿನಯಿಸಲು ಅವಕಾಶವಿರುವ ತುಸು ಮಂದಗತಿಯಲ್ಲಿ ಸಾಗುವ ‘ಶಬ್ದಂ’ ನೃತ್ಯವನ್ನು ರಾಗ ಮಾಲಿಕೆ ಮಿಶ್ರಛಾಪು ತಾಳದಲ್ಲಿ ನೀಡಿದ ಮೇಲೆ ಸಂಪ್ರದಾಯದಂತೆ ವಿಷಮ ಅಡವು ಜೋಡಣೆ ಗಳೊಂದಿಗೆ ಭಾವ ರಾಗ ತಾಳಗಳಿಂದ ಕೂಡಿ ಪೂರ್ಣಾನಂದವನ್ನು ಕೊಡುವ ಶೃಂಗಾರಭಾವ ಪ್ರಮುಖವಾದ ‘ಪದವರ್ಣ’ ನೃತ್ಯವನ್ನು ಸಿಂಹೇಂದ್ರ ಮಧ್ಯಮ ರಾಗ ಆದಿತಾಳದಲ್ಲಿ, ‘ಪದಂ’ ನೃತ್ಯವನ್ನು ಗುರ್ಜರಿ ತೋಡಿ ರಾಗ ಮಿಶ್ರಛಾಪು ತಾಳದಲ್ಲಿ ನೀಡಲಿದ್ದು ಮುಂದುವರಿಸುತ್ತಾ ಬಿಲಹರಿ ರಾಗ ಆದಿತಾಳದಲ್ಲಿ ‘ಕೃತಿ’ಯನ್ನೂ, ಕಾಮವರ್ಧನಿ ರಾಗ ಏಕತಾಳದಲ್ಲಿ, ‘ಅಷ್ಟಪದಿ’ಯನ್ನೂ, ರತಿಪತಿ ಪ್ರಿಯ ರಾಗ ತ್ರಿಶ್ರಗತಿ ಏಕತಾಳದಲ್ಲಿ ‘ದೇವರನಾಮ’ ನೃತ್ಯಗಳ ನಂತರ ಭರತನಾಟ್ಯ ಪ್ರಸ್ತುತಿಯ ಕೊನೆಯ ಭಾಗವಾಗಿ ನೃತ್ಯಗಾರರ ತಾಳಜ್ಞಾನ ಹಾಗೂ ಪ್ರಜ್ಞಾಶಕ್ತಿಯ ಸಾಕ್ಷಿಯಾಗಿ ಆಕರ್ಷಕವಾದ ಭಂಗಿಗಳು ತಾಳವೇಗ ಅಡುವುಗಳ ವೈವಿಧ್ಯವುಳ್ಳ ತುಂಬಾ ಪ್ರೇಕ್ಷಣೀಯವಾದ ‘ತಿಲ್ಲಾನ’ವು ದೇಶ ರಾಗ ಆದಿತಾಳದೊಂದಿಗೆ ರಂಗ ಪ್ರವೇಶ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಜತಿಗಳ ರಚನೆಯನ್ನು ವಿದ್ವಾನ್ ವಿಶ್ವಂಭರ ಭಾಗವತರು ಮಾಡಿದ್ದರೆ ನಟುವಾಂಗವನ್ನು ಗುರು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್, ಹಾಡುಗಾರಿಕೆ ಗುರುವಿದ್ವಾನ್ ರಾಜಗೋಪಾಲ ಭಾಗವತ್, ಮೃದಂಗವಾದನ ಮೈಸೂರಿನ ವಿದ್ವಾನ್ ಎಮ್ ಜೆ ಕಿರಣ್ ಕುಮಾರ್, ಕೊಳಲು ವಾದನ ಶ್ರೀರಂಗಪಟ್ಟಣದ ವಿದ್ವಾನ್ ಎಂ ಆರ್ ರಾಜೇಶ್, ಪಿಟೀಲು ವಾದನವನ್ನು ಮೈಸೂರಿನ ವಿದ್ವಾನ್ ಶ್ರೀಕಾಂತ್ ನೀಡಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ವಿದ್ವಾನ್ ವಿಶ್ವಂಭರ ಭಾಗವತ್ ಹಾಗೂ ಶ್ರೀಕಾಂತ್ ಭಟ್ ಮಾಡಲಿದ್ದಾರೆ. ರಂಗಪ್ರವೇಶದಲ್ಲಿ ನರ್ತಿಸುವ ಎಲ್ಲಾ ನೃತ್ಯ ಬಂಧಗಳ ಸಾಹಿತ್ಯ ರಚನೆ (ಜಯದೇವ ಕವಿಯ ಅಷ್ಟಪದಿಯನ್ನು ಹೊರತುಪಡಿಸಿ) ಸಂಗೀತ ಸಂಯೋಜನೆಯನ್ನು ವಿದ್ವಾನ್ ಶ್ರೀ ರಾಜಗೋಪಾಲ ಭಾಗವತರು ಮಾಡಿದ್ದಾರೆ. ನೃತ್ಯ ಸಂಯೋಜನೆ ಪರಿಕಲ್ಪನೆಯನ್ನು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರು ಮಾಡಿರುತ್ತಾರೆ.
-ನೃತ್ಯ ಗುರುಗಳ ಬಗ್ಗೆ-
ಭರತನಾಟ್ಯವನ್ನು ಹೇಳಿಕೊಡುವುದು ವಿಶೇಷವಲ್ಲ ಆದರೆ ರಂಗಪ್ರವೇಶದ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವುದು ಸಾಮಾನ್ಯ ಸಾಧನೆಯಲ್ಲ. ಬೆಂಗಳೂರು ಮೈಸೂರುಗಳಂತಹ ನಗರಗಳಲ್ಲಿ ಮಾತ್ರ ಇಂತಹ ಕೇಂದ್ರಗಳಿವೆ ಎಂದು ಭಾವಿಸುವ ಕಾಲವಿತ್ತು, ಆದರೆ ದಾವಣಗೆರೆಯಲ್ಲಿ ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಈ ಸಾಧನೆಯನ್ನು ನಿರಂತರ ಮಾಡುತ್ತಿದ್ದು ಈಗಾಗಲೇ ವಿದುಷಿಯರಾದ ಶ್ರೀಮತಿ ನಯನ ಪ್ರಶಾಂತ್, ಶ್ರೀಮತಿ ನಂದನ, ಶ್ರೀಮತಿ ಡಾ. ಸಂಸ್ಕೃತಿ, ಶ್ರೀಮತಿ ಸಹನಾ, ಶ್ರೀಮತಿ ಡಾ. ಸುನಿಧೀ ಘಟೀಕರ್ ಈಗಾಗಲೇ ರಂಗಪ್ರವೇಶ ಮಾಡಿದ್ದು ಈಗ ಡಾ. ಯಶಸ್ವಿನಿ ರಂಗಪ್ರವೇಶ ಮಾಡುತ್ತಿರುವುದು ದಾಖಲೆ ಎನ್ನಬಹುದು. ಉಭಯ ಗಾನವಿದ್ವಾನ್ ಶ್ರೀ ರಾಜಗೋಪಾಲ ಭಾಗವತ್ ಹಾಗೂ ರುಕ್ಮಿಣಿ ದೇವಿ ಅರುಂಡೇಲ್ ಭರತನಾಟ್ಯ ಶೈಲಿಯ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್ ಸಾಧಕ ದಂಪತಿಗಳ ಶಿಷ್ಯತ್ವದಲ್ಲಿ ಈ ದಾಖಲೆಯ ಭರತನಾಟ್ಯ ರಂಗ ಪ್ರವೇಶಗಳು ನಗರಕ್ಕೆ ಸಾಂಸ್ಕೃತಿಕ ಹೆಮ್ಮೆಯಾಗಿದೆ.
-ಕು.ಯಶಸ್ವಿನಿಯ ಬಗ್ಗೆ-
ಕಲೋಪಾಸಕರ ಕುಟುಂಬದಿಂದಲೇ ಬಂದಿರುವ ಯಶಸ್ವಿನಿಯು ಕುಶಲಕರ್ಮಿ ವಿಶ್ವನಾಥಾಚಾರ್ ಹಾಗೂ ಸಂಗೀತಜ್ಞೆ ಪುಷ್ಪಲತಾ ರವರ ಸುಪುತ್ರಿಯಾಗಿದ್ದು ತನ್ನ ಐದನೇ ವಯಸ್ಸಿನಿಂದಲೇ ಭರತನಾಟ್ಯ ಶಿಕ್ಷಣವನ್ನು ಆರಂಭಿಸಿಕೊಂಡು 2018ರಲ್ಲಿ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಪುರಸ್ಕಾರ ಗಳಿಸಿ ಕಳೆದೆರಡು ವರ್ಷಗಳಿಂದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಭರತನಾಟ್ಯ ಜೂನಿಯರ್,ಸೀನಿಯರ್, ವಿದ್ವತ್ ಪರೀಕ್ಷೆಗಳ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ನಾಡಿನ ವಿವಿಧ ಕಡೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುವುದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಲಾದ ಯುವಸೌರಭ ಕಾರ್ಯಕ್ರಮ, ಮೈಸೂರಿನ ದಸರಾ ಮಹೋತ್ಸವ, ಲಕ್ಷ್ಮೇಶ್ವರದ ನೃತ್ಯ ಕಾರ್ಯಕ್ರಮ, ನವರಾತ್ರಿ ಸಂಭ್ರಮ ಸಮಾರಂಭಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ವಿಶೇಷ ಮೆಚ್ಚುಗೆ ಗಳಿಸಿದ್ದು ಜೊತೆಯಲ್ಲಿ ಶಿಕ್ಷಣದಲ್ಲೂ ಸಹಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಸರ್ಕಾರದ ವೈದ್ಯಕೀಯ ಸೀಟುಗಳಿಸಿಕೊಂಡು ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ. 2024ರ ‘ಮಿಸ್ ಮಂಗಳೂರು’ ಹಾಗೂ ‘ಮಿಸ್ ದಿವಾ’ ಪ್ರಶಸ್ತಿ ಗಳಿಸಿರುವ ಯಶಸ್ವಿನಿ ಸ್ವಯಂ ರೂಪದರ್ಶಿನಿ ಅಂದರೆ ಫ್ಯಾಶನ್ ಮಾಡೆಲ್ ಆಗಿ ಅನೇಕ ಪ್ರಸಿದ್ಧ ಬ್ರಾಂಡ್ ಗಳಿಗೆ ಆಡ್ ಮಾಡುತ್ತಿದ್ದಾರೆ. ಇಂದು ದಿನಾಂಕ 10.08.2025ರ ಭಾನುವಾರ ಸಂಜೆ 4 ಗಂಟೆಗೆ ಬಾಪೂಜಿ ಸಭಾಂಗಣದಲ್ಲಿ ಇವರ ರಂಗ ಪ್ರವೇಶ ಏರ್ಪಾಡಾಗಿದ್ದು ಎಲ್ಲಾ ಕಲಾಸಕ್ತರಿಗೂ ಮುಕ್ತ ಪ್ರವೇಶವಿದೆ.
-ವಿಶೇಷ ಲೇಖನ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-
Malnad Open Group 12ನೇ ವರ್ಷದ ಗೀತಭಾರತಿ-2025 ತಾಯಿ ಭಾರತಿಗೆ ಗೀತೆಗಳ ಆರತಿ ದೇಶಭಕ್ತಿಗೀತೆಗಳ ಕಾರ್ಯಕ್ರಮವು ಇದೇ ಆಗಸ್ಟ್ 10ರ ಭಾನುವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ ಸುಮಾರು 950 ಕ್ಕೂ ಹೆಚ್ಚಿನ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ.
ಈ ಬಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಟ್.ಎ.ತ್ರಿಲೋಕ್ ರವರು ಉದ್ಘಾಟಿಸಲಿದ್ದಾರೆ.
ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಎ.ಎನ್-32 ವಿಮಾನದ ಬ್ಲಿಸ್ಟರ್ ಫೇರಿಂಗ್ ಬದಲಿ ಮತ್ತು ವಿಮಾನ/ಹೆಲಿಕಾಪ್ಟರ್ ರಚನಾತ್ಮಕ ಮಾರ್ಪಾಡು ಮತ್ತು ದುರಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2012ರಿಂದಲೂ ‘ಗೀತಭಾರತಿ’ ಕಾರ್ಯಕ್ರಮವನ್ನು ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸುತ್ತ ಬರುತ್ತಿದ್ದು, ಪ್ರತೀ ಬಾರಿಯೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಶಿವಮೊಗ್ಗಕ್ಕೆ ಪರಿಚಯಿಸುವ, ಸೇನೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು, ಯುದ್ಧದಲ್ಲಿ ಭಾಗವಹಿಸಿದ ವಿವರವನ್ನು ಅವರಿಂದಲೇ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಗರದ ಜನತೆಗೆ ದೇಶಭಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಆಹ್ವಾನಿತರಾಗಿ ಎಸ್.ರುದ್ರೇಗೌಡ ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಮಾಚೇನಹಳ್ಳಿಯ ಮೆ.ವಿಜಯ್ ಟೆಕ್ನೋಕ್ರಾಟ್ಸ್.ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಮಹೇಂದ್ರಪ್ಪ, ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಹಾಗೂ ಮಲ್ನಾಡ್ ಓಪನ್ ಗ್ರೂಪ್ ನ ಪರಮೇಶ್ವರ್.ಹೆಚ್ ಉಪಸ್ಥಿತರಿಲಿದ್ದಾರೆ.
Malnad Open Group ಇದೇ ಸಂದರ್ಭದಲ್ಲಿ ಗ್ರೂಪ್ ನ ಹಿರಿಯ ಸದಸ್ಯ ಯು.ಪಿ.ಎಸ್.ಸಿ ಯಲ್ಲಿ 615ನೇ ಶ್ರೇಯಾಕ ಪಡೆದ ಡಾ.ದಯಾನಂದ ಸಾಗರ್.ಎಲ್ ಸನ್ಮಾನಿತರಾಗಲಿದ್ದಾರೆ. ಇದರ ಜೊತೆಗೆ ಗ್ರೂಪ್ ನ ಮೊದಲ ಬ್ಯಾಚ್ ನ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದ ಲೋಕೇಶ್.ಹೆಚ್ ಮತ್ತು ಹೊನ್ನಾಳಿ ಆಕ್ಸ್ಫರ್ಡ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಚಿತ್ರ ಇವರುಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರೂಪ್ ನ ಅಧ್ಯಕ್ಷ ಶ್ರೀನಿವಾಸ ವರ್ಮ.ಎಸ್.ಟಿ ಇವರು ವಹಿಸಲಿದ್ದಾರೆ.
ತಾವುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.
ತಮ್ಮ ವಿಶ್ವಾಸಿ ನಾಯಕರು ಮತ್ತು ಸದಸ್ಯರು, ಮಲ್ನಾಡ್ ಓಪನ್ ಗ್ರೂಪ್, ಶಿವಮೊಗ್ಗ