ನೆರೆ ರಾಜ್ಯಗಳು ನೀರಿನ ಬಳಕೆಗೆ ರೂಪಿಸಿರುವ ಜಲ ನ್ಯಾಯ ಮಂಡಳಿ ತೀರ್ಪು ಉಲಂಘಿಸಿ ರೂಪಿಸುತ್ತಿರುವ ಬೃಹತ್ ಮಟ್ಟದ ಶಾಶ್ವತ ಯೋಜನೆಗಳನ್ನು ಕೇಂದ್ರ ಸರ್ಕಾರ ಶಾಸನಬದ್ಧ ಅನುಮೋದನೆ ನೀಡಬಾರದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.
ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ತಿನ ಸಿ.ಎಂಗಳ 29ನೇ ಸಭೆಯಲ್ಲಿ ಬೊಮ್ಮಾಯಿಯವರು ಕರ್ನಾಟಕದ ಬೇಡಿಕೆಗಳನ್ನು ಮಂಡಿಸಿದರು. ಕೇಂದ್ರ ಗೃಹಸಚಿವ ಅಮಿತ್ ಶಾ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಹ ಜಲಾನಯನ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಪಾಲು ಎಷ್ಟು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೂ ಕಾವೇರಿ ವೈಗೈ- ಗುಂಡಾರ್ ಸಂಪರ್ಕಿಸುವ ಕಾಮಗಾರಿಯನ್ನು ತಮಿಳುನಾಡು ಮುಂದುವರಿಸಿದೆ. ಶ್ರೀಶೈಲಂ ಜಲಾಶಯದಲ್ಲಿ ಹೆಚ್ಚುವರಿ ಪ್ರಮಾಣದ ಅಪಾರ ನೀರನ್ನ ಬಳಸಿಕೊಂಡು ಹಲವು ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ತೆಲಂಗಾಣ ಅಥವಾ ಅಪೆಕ್ಸ್ ಮಂಡಳಿಗೆ ಅಧಿಕಾರವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಈ ರೀತಿಯ ಯೋಜನೆಗಳಿಗೆ ಶಾಸನಬದ್ಧ ಅನುಮೋದನೆ ನೀಡಬಾರದು ಎಂದು ಬೊಮ್ಮಾಯಿ ಅವರು ಸಭೆಯಲ್ಲಿ ಗೃಹ ಸಚಿವರ ಗಮನಕ್ಕೆ ತಂದರು.
ಟಿ – 20 ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಿತು.ಈ ಫೈನಲ್ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಮಾರ್ಟಿನ್ ಗುಪ್ಟಿಲ್ ಮತ್ತು ಡೆವಿಲ್ ಪಿಚ್ಚರ್ ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಗ್ಲೇನ್ ಮ್ಯಾಕ್ಸ್ ವೆಲ್ ಹಾಕಿದ 3 ನೇ ಓವರ್ ನಲ್ಲಿ ಗುಪ್ಟಿಲ್ ಹೊಡೆದ ಚೆಂಡನ್ನು ಕ್ಯಾಚ್ ಹಿಡಿಯುವ ಮ್ಯಾಥ್ಯೂ ವೇಡ್ ಪ್ರಯತ್ನ ಫಲಿಸಲಿಲ್ಲ. ಆದರೆ ನಂತರದ ಓವರ್ ನಲ್ಲಿ ಜೋಶ್ ಹ್ಯಾಜಲ್ ವುಡ್, ಡೆರಿಲ್ ಮಿಚೆಲ್ 11 ರನ್ ಗಳಿಸಿದ್ದಾಗ ಅವರ ವಿಕೆಟ್ ಕಬಳಿಸುವಲ್ಲಿ ಸಫಲರಾದರು. ಸೆಮಿಫೈನಲ್ನಲ್ಲಿ ಕೀವಿಸ್ ಗೆಲುವಿಗೆ ಮಿಚೆಲ್ ಆಟವೇ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಗುಪ್ಟಿಲ್ ಜೊತೆಗೂಡಿದ ಕೇನ್ ತಮ್ಮ ಅನುಭವ ತಾಳ್ಮೆ ಮತ್ತು ಕೌಶಲಗಳನ್ನು ಸಮ್ಮಿಶ್ರ ಮಾಡಿದ ಅಂದ-ಚಂದದ ಬ್ಯಾಟಿಂಗ್ ಮಾಡಿದರು. ಅವರ ಆಟಕ್ಕೆ ಹೆಚ್ಚು ಆದ್ಯತೆ ಕೊಟ್ಟ ಗುಪ್ಟಿಲ್ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿದರು 2 ನೇ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಿದರು. ಇವರಿಬ್ಬರ ತಾಳ್ಮೆ ಆಟದಿಂದಾಗಿ 11 ಓವರ್ ಗಳಲ್ಲಿ ಒಟ್ಟು 76 ರನ್ ಗಳು ಮಾತ್ರ ಸೇರಿದ್ದವು.ಆದರೆ ವಿಕೆಟ್ ಗಳನ್ನ ಕಾಪಾಡಿಕೊಂಡಿದ್ದರು. 11 ನೇ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಕೇನ್ ವಿಲಿಯಮ್ಸನ್ ಗೆ ಫೀಲ್ಡರ್ ಜೋಶ್ ಜೀವದಾನ ಕೊಟ್ಟರು. ನಂತರದ ಓವರ್ ನಲ್ಲಿ ಗುಪ್ಟಿಲ್ ವಿಕೆಟ್ ಪಡೆದ ಆಡಂ ಜಂಪಾ ಸಂಭ್ರಮಿಸಿದರು. ಆದರೆ ವಿಲಿಯಮ್ಸನ್ ಅವರನ್ನು ನಿಯಂತ್ರಿಸುವುದು ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಗ್ಲೇನ್ ಫಿಲಿಪ್ಸ್ 18 ರನ್ ಗಳಿಸಿಕೊಂಡು ಔಟಾದರು. ಶತಕದತ್ತ ಕಾಲಿಟ್ಟು ಹೋರಾಡಿದ ಕೇನ್ 48 ಎಸೆತಗಳಲ್ಲಿ 85 ರನ್ ಗಳಿಸಿದರು. ಇನ್ನು ಹೆಚ್ಚು ರನ್ ಗಳಿಕೆಯ ವೇಗ ಹೆಚ್ಚಿಸುವ ಭರದಲ್ಲಿ ಔಟಾದರು. ಜಿಮ್ಮಿ ನಿಶಾಮ್ ಔಟಾಗದೆ 13 ರನ್ ಗಳಿಸಿಕೊಂಡರು ಮತ್ತು ಸೀಫರ್ಟ್ ಔಟಾಗದೆ 8 ಗಳಿಸಿಕೊಂಡು ತಂಡದ ಮೊತ್ತ ಬೆಳೆಸಲು ತಮ್ಮ ಕಾಣಿಕೆ ನೀಡಿದರು. 173 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ ಉತ್ತಮ ಆರಂಭ ಮಾಡಿತು.ಕೇವಲ 18.5 ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ಸಾಧಿಸಿತು. ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಯಾರನ್ ಫಿಂಚ್ ಬಳಗ 8 ವಿಕೆಟ್ ಗಳ ಜಯ ಸಾಧಿಸಿತು. ಈ ಮೂಲಕ ಟಿ – 20 ವಿಶ್ವಕಪ್ ಮೊದಲಿಗೆ ಪ್ರಶಸ್ತಿಯನ್ನು ಗೆದ್ದು ಬೀಗಿತು. ಏಕದಿನ ವಿಶ್ವಕಪ್ ನಲ್ಲಿ ತಂಡ 5 ಬಾರಿ ಚಾಂಪಿಯನ್ ಆಗಿದೆ. ಟಿ – 20 ವಿಶ್ವಕಪ್ ನಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ನ್ಯೂಜಿಲೆಂಡ್ ಕನಸು ಇದರೊಂದಿಗೆ ನುಚ್ಚಿನೂರಾಯಿತು. ಆಸ್ಟ್ರೇಲಿಯಾ ತಂಡದ ಬೌಲರ್ ಗಳು ನ್ಯೂಜಿಲೆಂಡ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಟಿ – 20 ವಿಶ್ವಕಪ್ ಚೊಚ್ಚಲವಾಗಿ ಮುಡಿಗೇರಿಸಿದ ಆಸ್ಟ್ರೇಲಿಯ ಭರವಸೆ ಆಟವಾಡಿ ಇಡೀ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಕಣಿವೆ ರಾಜ್ಯ ಕಾಶ್ಮೀರದಲ್ಲಿ 220 ಉಗ್ರರು ಸಕ್ರಿಯರಾಗಿದ್ದಾರೆ. ಈ ಆತಂಕಕಾರಿ ಬೆಳವಣಿಗೆ ಬಗ್ಗೆ ವರದಿಯಾಗಿದೆ. ಈ ವರ್ಷ ಭದ್ರತಾ ಪಡೆಗಳಿಗೆ ಕಾರ್ಯಾಚರಣೆಯಲ್ಲಿ 133 ಉಗ್ರರು ಬಲಿಯಾಗಿದ್ದು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಸಂಖ್ಯೆ ಹೆಚ್ಚಾಗಿದೆ.
ಕಾಶ್ಮೀರ ಗಡಿಭಾಗದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಸ್ಥಳೀಯವಾಗಿ ಆಗಿಂದಾಗ್ಗೆ ಉಗ್ರ ಸಂಘಟನೆಗಳು ನೇಮಕಾತಿ ಪ್ರಕ್ರಿಯೆ ನಡೆಸಿ ಉಗ್ರರ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ.
ಈ ವರ್ಷ 100 ಸ್ಥಳೀಯ ಯುವಕರು ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದಾರೆ. ಹದಿನೈದು-ಇಪ್ಪತ್ತು ಉಗ್ರರು ಪಾಕಿಸ್ತಾನದಿಂದ ಕಾಶ್ಮೀರ ಕಣಿವೆಗೆ ನುಸುಳಿ ಬಂದಿದ್ದಾರೆ. ಕಳೆದ ವರ್ಷ ಭಾರತೀಯ ಭದ್ರತಾಪಡೆ 207 ಮಂದಿ ಉಗ್ರರನ್ನು ಹತ್ಯೆ ಮಾಡಿತ್ತು. 174 ಮಂದಿ ಉಗ್ರ ಸಂಘಟನೆಗಳನ್ನು ಸೇರಿದ್ದರು.
ಸುಮಾರು 35ರಿಂದ 40 ಪಾಕಿಸ್ತಾನಿ ಉಗ್ರರು ಸದ್ಯ ಕಾರ್ಯ ಪ್ರವೃತ್ತರಾಗಿದ್ದಾರೆ. ಇವರಲ್ಲಿ 12 ಜನ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದರೆ, ಉಳಿದವರು ಲಷ್ಕರ್-ಎ-ತೈಯಬಾ ಸಂಘಟನೆಗೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾವಿಂದು ಸಮೂಹ ಮಾಧ್ಯಮಗಳ ಸ್ಥಿತ್ಯಂತರ ಯುಗದಲ್ಲಿದ್ದೆವೆ. ದಿನದಿಂದ ದಿನಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. 15ನೇ ಶತಮಾನದಲ್ಲಿ ಮುದ್ರಣ ಯಂತ್ರದ ಆವಿಷ್ಕಾರವಾದ ಮೇಲೆ ಸಮೂಹ ಮಾಧ್ಯಮಗಳ ಯುಗ ಆರಂಭವಾಯಿತು. ಮೊದಲು ಪತ್ರಿಕೆಗಳು ಆರಂಭವಾಗಿ ನಂತರ ಛಾಯಾಗ್ರಹಣ, ಸಿನಿಮಾ, ಬಾನುಲಿ, ಟೆಲಿವಿಷನ್ ಮಾಧ್ಯಮಗಳು ಒಂದರ ನಂತರ ಒಂದು ಹುಟ್ಟಿಕೊಂಡು 20ನೇ ಶತಮಾನದಲ್ಲಿ ಅಂತ್ಯಕಾಲದ ಆವಿಷ್ಕಾರದೊಂದಿಗೆ ಮಹಾ ಮಾಧ್ಯಮ ಯುಗಕ್ಕೆ ಕಾರಣವಾಯಿತು. ಇಂದು ಮಾಧ್ಯಮಗಳ ಸಂಗಮದಿಂದ ಮೊಬೈಲ್ ಮೂಲಕ ಅಂಗೈಯಲ್ಲೇ ಪ್ರತಿಯೊಂದು ಮಾಧ್ಯಮವನ್ನು ನೋಡುವುದು ಸಾಧ್ಯವಾಗಿದೆ. ಅಂತರ್ಜಾಲದ ಆವಿಷ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಯಿತು. ಒಂದೆಡೆ ಎಲ್ಲಾ ಸಮೂಹ ಮಾಧ್ಯಮಗಳಿಗೆ ಸುದ್ದಿ ಸಂಗ್ರಹ, ವಿತರಣೆ ಸುಲಭವಾದರೆ, ಇನ್ನೊಂದೆಡೆ ವಿವಿಧ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು. ಇವತ್ತು ಮುದ್ರಣ ಮಾಧ್ಯಮ ಕೇವಲ ಮುದ್ರಣ ಮಾಧ್ಯಮವಾಗಿ ಉಳಿದಿಲ್ಲ. ಅದು ಟೆಲಿವಿಷನ್ ನಂತೆ ದೃಶ್ಯ ಹಾಗೂ ಶ್ರವ್ಯ ಮಾಧ್ಯಮವಾಗಿದೆ. ಪತ್ರಿಕೆಗಳು ಇಂದು ಟೆಲಿವಿಷನ್ ನಂತೆ, ಪೊಡಕಾಸ್ಟ್ ಮೂಲಕ ನೇರ ಸುದ್ದಿ ಹಾಗೂ ಸಂದರ್ಶನಗಳನ್ನು ಪ್ರಸಾರ ಮಾಡುವುದಲ್ಲದೆ, ಕ್ಲಬ್ ಹೌಸ್ ಮೂಲಕ ಬಾನುಲಿಯಂತೆ ಶ್ರವ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದು ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವವರೆಗೆ ಒಂದು ಅವಕಾಶ ಹಾಗೂ ಸವಾಲಾಗಿ ಪರಿಣಮಿಸಿದೆ.
ಒಂದು ಮಾಧ್ಯಮ ಹುಟ್ಟಿಕೊಂಡಾಗ ಇನ್ನೊಂದು ಮಾಧ್ಯಮದ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ಆದರೆ ಈವರೆಗೆ ಯಾವುದೇ ಮಾಧ್ಯಮ ಬಂದರೂ ಅದರ ಹಿಂದಿನ ಮಾಧ್ಯಮ ಆಸ್ತಿತ್ವ ಕಳೆದುಕೊಂಡಿಲ್ಲ. ಆದರೆ ಈಗಾಗಲೇ ಅನೇಕ ಪ್ರಭಾವಿ ಪತ್ರಿಕೆಗಳು ಮುದ್ರಿತ ಆವೃತ್ತಿ ನಿಲ್ಲಿಸಿ ಆನ್ಲೈನ್ ಆವೃತ್ತಿಗಳನ್ನು ಮಾತ್ರ ಪ್ರಕಟಿಸುತ್ತಿರುವುದರಿಂದ ಮುಂದೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಎಫ್ಎಂ ಬಾನುಲಿ ಮಾತ್ರ ಜನಪ್ರಿಯವಾಗುತ್ತಿದ್ದು, ಎಸ್ ಡಬ್ಲ್ಯೂ, ಎಂ ಡಬ್ಲ್ಯೂ, ವಾಹಿನಿಗಳ ಶ್ರೋತೃಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ಟೆಲಿವಿಷನ್ ಮಾತ್ರ ಜನಪ್ರಿಯವಾಗಿದ್ದು, ಮುಂದೆಯೂ ತನ್ನ ಅಸ್ತಿತ್ವ ಉಳಿಸುವ ಭರವಸೆ ಇದೆ. ಇಂತಹ ಸಂದರ್ಭದಲ್ಲಿ ಭವಿಷ್ಯದಲ್ಲಿ ಭರವಸೆ ಮೂಡಿಸುವ ಮಾಧ್ಯಮಗಳೆಂದರೆ ಡಿಜಿಟಲ್ ಮಾಧ್ಯಮಗಳು. ಇಂದು ಸುದ್ದಿಜಾಲಗಳು, ಸುದ್ದಿ ಪೋರ್ಟಲ್ ಗಳು, ಸುದ್ದಿ ಆಪ್ ಗಳು ಜನಪ್ರಿಯವಾಗುತ್ತಿದ್ದು, ಪರ್ಯಾಯ ಸಮೂಹ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಮೂಹ ಮಾಧ್ಯಮಗಳಿಗಿರುವಷ್ಟು ಕಾನೂನು ನಿಯಮಗಳು ಇವುಗಳಿಗಿಲ್ಲದಿರುವುದರಿಂದ ಮುಕ್ತ ಅಭಿವ್ಯಕ್ತಿಯ ಮುಖ್ಯ ವೇದಿಕೆಯಾಗಿ ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವ ದೇಶದಲ್ಲಿ ನಿಜವಾದ ವಿರೋಧಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿರುವುದರಿಂದ ಡಿಜಿಟಲ್ ಮಾಧ್ಯಮಗಳು ಆ ಕೆಲಸವನ್ನು ಮಾಡುತ್ತಿವೆ. ಅದಕ್ಕಾಗಿಯೇ ಸಮೂಹ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆದಂತೆ ಡಿಜಿಟಲ್ ಮಾಧ್ಯಮಗಳನ್ನು ಐದನೇ ಅಂಗವೆಂದು ಕರೆಯುತ್ತಾರೆ. ಅವು ಕೆಲವೊಮ್ಮೆ ಮುಖ್ಯವಾಹಿನಿ ಮಾಧ್ಯಮಗಳ ಕಾವಲು ನಾಯಿಯಾಗಿ ಕೂಡ ಕೆಲಸ ಮಾಡುತ್ತವೆ. ಫಿಲಿಪ್ಟಿನ್ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿಟ್ರಿ ಮುರಟೋವ್ ಎಂಬ ತನಿಖಾ ಪತ್ರಕರ್ತರಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ. ಇದು ಮಾಧ್ಯಮ ರಂಗದ ಮೇಲೆ ಸಮಾಜ ಇಟ್ಟಿರುವ ವಿಶ್ವಾಸಕ್ಕೆ ದ್ಯೋತಕವಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗುತ್ತಿರುವಾಗ ಮರಿಯಾ ರೆಸ್ಸಾರಂತವರು ಡಿಜಿಟಲ್ ಮಾಧ್ಯಮಗಳ ಮೂಲಕ ಆಡಳಿತವನ್ನು ಎದುರುಹಾಕಿಕೊಂಡು ಕೆಲಸ ಮಾಡಿದರು. ಭಾರತದಲ್ಲಿ ಅಂತಹ ಅನೇಕ ಸುದ್ದಿ ಪೋರ್ಟಲ್ ಗಳಿವೆ. ನ್ಯೂಸ್ ಪೋರ್ಟಲ್ ಗಳು ಒಂದು ಪರ್ಯಾಯ ಮಾಧ್ಯಮವಾಗಿ ಹಾಗೂ ನಿಜವಾದ ಪ್ರಜಾಪ್ರಭುತ್ವದ 5ನೇ ಅಂಗವಾಗಿ ಕಾರ್ಯನಿರ್ವಹಿಸಲಿ ಎಂಬ ಆಶಯ ನನ್ನದು.
ಲೇಖಕರು: ಡಾ.ಸತೀಶ್ ಕುಮಾರ್ ಅಂಡಿಂಜೆ
ಪ್ರಸ್ತುತ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸತೀಶ್ ಕುಮಾರ್ ಅಂಡಿಂಜೆ ಅವರು ಬೆಳ್ತಂಗಡಿ ತಾಲೂಕಿನ ಅಂಡಿಂಜೆಯವರು. ಇವರು ಹೊಸ ದಿಗಂತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು (ಎಂಎ) ಪತ್ರಿಕೋದ್ಯಮದಲ್ಲಿ ಪ್ರಥಮ ಶ್ರೇಣಿ ಮತ್ತು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇವರು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಇವರು 60ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, ಸಂಶೋಧನಾ ನಿಯತಕಾಲಿಕೆಗಳು ಮತ್ತು ವಿಚಾರ ಸಂಕಿರಣದ ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ.ಇವರು ‘ಭಾರತೀಯ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ’, ‘ಸಮೂಹ ಮಾಧ್ಯಮ ಸಂಶೋಧನೆ’ ಮತ್ತು ‘ಮಾಧ್ಯಮಲೋಕ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಭಾಷಣ ಹಾಗೂ ಸಣ್ಣ ಕಥೆಗಳು ಮಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ.
ದೇಶಾದ್ಯಂತ ಮಕ್ಕಳ ಮೇಲೆ ನಡೆದ ಸೈಬರ್ ದೌರ್ಜನ್ಯ ಪ್ರಕರಣಗಳು 2019 ಕ್ಕೆ ಹೋಲಿಸಿದರೆ 2020ರಲ್ಲಿ ಶೇ. 400ರಷ್ಟು ಹೆಚ್ಚಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ದಾಖಲಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸೈಬರ್ ದೌರ್ಜನ್ಯ ಪ್ರಕರಣಗಳು ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಓಡಿಸಾ ರಾಜ್ಯಗಳಲ್ಲಿ ಅಧಿಕವಾಗಿ ದಾಖಲಾಗಿವೆ ಎಂದು ವರದಿಯಾಗಿದೆ. “ಒಟ್ಟು 842 ಪ್ರಕರಣಗಳಲ್ಲಿ 238 ಪ್ರಕರಣಗಳು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಜೊತೆಗೆ ಅವುಗಳ ಚಿತ್ರೀಕರಣ ಮಾಡಿ ರವಾನಿಸಿದ ಪ್ರಕರಣಗಳಾಗಿವೆ” ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ ಸಿಆರ್ ಬಿ) ವರದಿ ತಿಳಿಸಿದೆ. ಎನ್ ಸಿಆರ್ ಬಿ ವರದಿ ಪ್ರಕಾರ, 2019ರಲ್ಲಿ ದೇಶಾದ್ಯಂತ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಕುರಿತು 164 ಕೇಸ್ ದಾಖಲಾಗಿದ್ದವು. ಅದೇ ರೀತಿ 2018ರಲ್ಲಿ 117 ಪ್ರಕರಣ, 2017ರಲ್ಲಿ 79 ಪ್ರಕರಣ ದಾಖಲಾಗಿದ್ದವು. ಮಕ್ಕಳು ಹೆಚ್ಚಿನ ಅವಧಿಯಲ್ಲಿ ಆನ್ಲೈನ್ನಲ್ಲಿಯೇ ಕಳೆಯುತ್ತಿರುವುದರಿಂದ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ. ಈಗಿನ ಮಕ್ಕಳು ಅಂತರ್ಜಾಲದಲ್ಲಿ ಹೆಚ್ಚಿನ ಸಮಯ ಕಳೆಯುವುದು ಹೆಚ್ಚಾಗಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ಬಳಸುವುದು ಸುಲಭವಾಗಿದೆ. ಶೈಕ್ಷಣಿಕ ಕಾರಣಗಳಿಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸುತ್ತಾರೆ. ಆದರೆ ಮಕ್ಕಳು ಆನ್ಲೈನ್ ನಲ್ಲಿ ಇರುವುದು ಅಪಾಯಕಾರಿಯಾಗಿದೆ. ಅಶ್ಲೀಲ ಚಿತ್ರಗಳ ವೀಕ್ಷಣೆ, ಲೈಂಗಿಕ ಪ್ರಚೋದನೆ, ದೌರ್ಜನ್ಯ, ಅಶ್ಲೀಲ ಚಿತ್ರಗಳ ರವಾನಿಸಿ ಹಲವು ರೀತಿಯಲ್ಲಿ ದೌರ್ಜನ್ಯಕೀಡಾಗುತ್ತಾರೆ ಎಂದು ಕ್ರೈಂ-ಚೈಲ್ಡ್ ರೈಟ್ಸ್ ಅಂಡ್ ಯು ಸಂಸ್ಥೆ ಸಿಇಒ ಪೂಜಾ ಮರ್ವಾಹ ತಿಳಿಸಿದ್ದಾರೆ.
ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಇನ್ನು 20 ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.
ರಾಜ್ಯ ಸರಕಾರ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಐಎಸ್ಡಿಸಿ) ಜಂಟಿಯಾಗಿ ಎನ್ಇಪಿ ಕುರಿತು ಏರ್ಪಡಿಸಿದ್ದ ಪ್ರಪ್ರಥಮ ಸಮಾವೇಶ `ಉನ್ನತ ಶಿಕ್ಷಣ: ಭವಿಷ್ಯದ ಕಾರ್ಯತಂತ್ರ’ವನ್ನು ಉದ್ದೇಶಿಸಿ ಶನಿವಾರ ಅವರು ಮಾತನಾಡಿದರು.
ಶಿಕ್ಷಣವನ್ನು ಬದಲಿಸುವ ಮೂಲಕ ದೇಶವನ್ನು ಬದಲಿಸಬಹುದು ಎನ್ನುವುದು ಪ್ರಧಾನಿ ಮೋದಿಯವರಿಗೆ ಗೊತ್ತಾಗಿದೆ. ಆದ್ದರಿಂದಲೇ ದೇಶದಲ್ಲಿ 34 ವರ್ಷಗಳ ನಂತರ ಎನ್ಇಪಿ ಜಾರಿಗೆ ತರಲಾಗುತ್ತಿದ್ದು, ದುರ್ಬಲ ವರ್ಗಗಳ ಮಕ್ಕಳಿಗೆ ಈಗ ಶಿಕ್ಷಣವನ್ನು ಪ್ರಧಾನ ಹಕ್ಕನ್ನಾಗಿ ಮಾಡಲಾಗಿದೆ. ಎನ್ಇಪಿ ನೂರಕ್ಕೆ ನೂರರಷ್ಟು ಸಕಾರಾತ್ಮಕವಾಗಿದೆ ಎಂದು ಅವರು ವಿವರಿಸಿದರು.
ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದರು. ಆದರೆ ಈಗ ಕೌಶಲ್ಯ ಮತ್ತು ಡಿಜಿಟಲ್ ಕಲಿಕೆಗೆ ಒತ್ತು ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉದ್ಯೋಗಕ್ಕೆ ಬೇಕಾದ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ತನ್ನದಾಗಿಸಿಕೊಳ್ಳಲಿದ್ದಾನೆ ಎಂದು ಅವರು ನುಡಿದರು.
ಎನ್ಇಪಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮೊದಲು ಲಾಭವಾಗಲಿದೆ. ಇಲ್ಲಿರುವ ಮಕ್ಕಳಲ್ಲಿ ಶೇ.95ರಷ್ಟು ವಿದ್ಯಾರ್ಥಿಗಳು ದುರ್ಬಲ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಆದ್ದರಿಂದ ಎನ್ಇಪಿಯಿಂದ ಶಿಕ್ಷಣದ ವಾಣಿಜ್ಯೀಕರಣ ನಡೆಯುತ್ತಿದೆ ಎನ್ನುವ ಮಾತುಗಳನ್ನು ನಂಬಿ ದಿಕ್ಕು ತಪ್ಪಬಾರದು. ಅಲ್ಪಸಂಖ್ಯಾತರೂ ಸೇರಿದಂತೆ ಯಾರೂ ಅನಗತ್ಯ ಭಯ, ಸಂಶಯಗಳನ್ನು ಇಟ್ಟುಕೊಳ್ಳಬಾರದು ಎಂದು ಅಶ್ವತ್ಥನಾರಾಯಣ ಹೇಳಿದರು.
ಹಳೆಯ ವ್ಯವಸ್ಥೆಯಲ್ಲಿ ಜ್ಞಾನದ ಒಂದು ತುಣುಕಷ್ಟೇ ಸಿಕ್ಕುತ್ತಿತ್ತು. ಈಗ ದೇಶೀಯವಾದ ಮತ್ತು ಪರಿಪೂರ್ಣವಾದ ಬೋಧನೆ ಸಾಧ್ಯವಾಗಲಿದೆ. ಜಾಗತೀಕರಣದ ಯುಗದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಅಗತ್ಯ ಎರಡೂ ಇದೆ. ಗುಣಮಟ್ಟದ ವಿಚಾರದಲ್ಲಿ ಸಬೂಬುಗಳನ್ನು ಇನ್ನುಮುಂದೆ ಸಹಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಎನ್ಇಪಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ಮತ್ತು ಸ್ವಾಯತ್ತೆ ನೀಡಲಿದೆ. ಇದು ಸಮಕಾಲೀನ ಅಗತ್ಯಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಎಲ್ಲರನ್ನೂ ಒಳಗೊಳ್ಳಲಿದೆ. ವಿಶ್ವ ಗುಣಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಜಾಗತಿಕ ಮಟ್ಟದ ಶಿಕ್ಷಣವು ಮಕ್ಕಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಐಎಸ್ಡಿಸಿ ನಿರ್ದೇಶಕಿ ತೆರೇಸಾ ಜಾಕೋಬ್ಸ್, ಕಾರ್ಯನಿರ್ವಾಹಕ ನಿರ್ದಶಕ ಟಾಮ್ ಜೋಸೆಫ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮುಂತಾದವರು ಉಪಸ್ಥಿತರಿದ್ದರು.
(ಸೌಜನ್ಯ: ಶ್ರೀ ವೆಂಕಟೇಶ ಪ್ರಸಾದ್. ಮಾಧ್ಯಮ ಕಾರ್ಯದರ್ಶಿ ಉನ್ನತ ಶಿಕ್ಷಣ ಸಚಿವರು)
ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಪಟು ಸುಹಾಸ್ ಯತಿರಾಜ್ ಅವರಿಗೆ ಮಾನ್ಯ ರಾಷ್ಟ್ರಪತಿಗಳು ಅರ್ಜುನ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ..
ಕೆಲವು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿತ್ತು. 35 ಕ್ರೀಡಾಪಟುಗಳ ಪೈಕಿ ಯಲ್ಲಿ ಸುಹಾಸ್ ಕೂಡ ಒಬ್ಬರು. ನವದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಾನ್ಯ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ ಅವರಿಂದ ಸುಹಾಸ್ ಯತಿರಾಜ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು .. ಅರ್ಜುನ ಪ್ರಶಸ್ತಿಯು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್ ಪಡೆದಿದ್ದಾರೆ. ಪ್ರತಿಯೋರ್ವ ಕನ್ನಡಿಗನಿಗೆ ಅಭಿಮಾನದ ಸಂಗತಿಯಾಗಿದೆ.
ಕೋವಿಡ್ -19 ಸೋಂಕು ಜರ್ಮನ್ ದೇಶವನ್ನು ಬೆಂಬಿಡದೆ ಕಾಡುತಿತ್ತು ಸೋಂಕಿತರ ಪ್ರಮಾಣ ದಿನೇದಿನೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ “ಲಸಿಕಾ ಅಭಿಯಾನದಲ್ಲಿ ನಮ್ಮೊಂದಿಗೆ ಕೈಜೋಡಿಸಿ. ಲಸಿಕೆ ಪಡೆಯಲು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಮನವೊಲಿಸಲು ಯತ್ನಿಸಿ ” ಎಂದು ಜರ್ಮನ್ ಛಾನ್ಸಲರ್ ಮನವಿ ಮಾಡಿದ್ದಾರೆ.
ಕೋವಿಡ್ – 19ನಿಂದಾಗಿ ಜರ್ಮನಿಯಲ್ಲಿ ಸೋಂಕಿನ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಜಾಗೃತಿ ವಹಿಸಬೇಕೆಂದು ಮೆರ್ಕೆಲ್ ತಿಳಿಸಿದ್ದಾರೆ.
ಜರ್ಮನ್ ನ ಛಾನ್ಸಲರ್ ಅಂಗೆಲಾ ಮೆರ್ಕೆಲ್ ಅವರು “ನಮ್ಮ ಮುಂದೆ ಕಷ್ಟಕರವಾದ ದಿನಗಳು ಎದುರಾಗಿವೆ. ಆದರೆ ನಾವೆಲ್ಲ ಒಟ್ಟಿಗೆ ನಿಂತರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮತ್ತು ಇತರರನ್ನು ಕಾಳಜಿ ವಹಿಸುವ ಬಗ್ಗೆ ಯೋಚಿಸಿದರೆ ಈ ಚಳಿಗಾಲದಲ್ಲಿ ನಾವು ನಮ್ಮ ದೇಶವನ್ನು ಉಳಿಸಬಹುದು” ಎಂದು ತಿಳಿಸಿದ್ದಾರೆ.
ಯುದ್ಧ ಬಾಧಿತ ಅಫ್ಘಾನಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಪರಿಸ್ಥಿತಿ ಉಂಟಾಗಿದೆ. ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ಆಫ್ಘಾನಿಸ್ತಾನಕ್ಕೆ ಆಹಾರದ ನೆರವು ನೀಡುವ ಕುರಿತಂತೆ ಭಾರತದೊಂದಿಗೆ ವಿಶ್ವಸಂಸ್ಥೆಯ ಡಬ್ಲ್ಯು ಎಫ್ ಪಿ ಚರ್ಚೆ ನಡೆಸಿದೆ ಈ ಬಗ್ಗೆ ಡಬ್ಲ್ಯೂ ಎಫ್ ಪಿ ಮುಖ್ಯಸ್ಥೆ ಸೆಸಿಲಿಯ ಗಾರ್ಜೊನ್ ಹೇಳಿದ್ದಾರೆ.
ಹಲವು ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲಿ ಜನರು ತೀವ್ರವಾದ ಆಹಾರ ಬಿಕ್ಕಟ್ಟು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತವು ಸೇರಿದಂತೆ ಈಗಾಗಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಯುದ್ಧಪೀಡಿತ ಆಫ್ಘಾನಿಸ್ತಾನದ ಕುಟುಂಬಗಳಿಗೆ ಆಹಾರದ ನೆರವು ಕಲ್ಪಿಸುವ ಬಗ್ಗೆ ಡಬ್ಲ್ಯು ಎಫ್ ಪಿ ನಡುವೆ ಚರ್ಚೆ ನಡೆಯುತ್ತಿದೆ. ಶೀಘ್ರವೆ ಇವೆಲ್ಲಾ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಅಫ್ಘಾನಿಸ್ತಾನ ಭಾರತದಿಂದ ಮಾರ್ಗವಾಗಿ ಗೋಧಿ ಸಾಗಾಣಿಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಸಲ್ಲಿಸಿದೆ. ಆಫ್ಘಾನಿಸ್ತಾನ್ ಮನವಿಯನ್ನು ಪರಿಗಣಿಸುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ಭಾರತ ಮಾನವೀಯ ಆಧಾರದ ಮೇಲೆ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಮಾರ್ಗದ ಮೂಲಕವೇ ಆಹಾರ ಸರಬರಾಜು ಆಗಬೇಕಾಗಿದ್ದು, ಇದಕ್ಕೆ ಪಾಕಿಸ್ತಾನ ಸಮ್ಮತಿ ನೀಡಬೇಕಿದೆ.
ತಮಿಳುನಾಡಿನಲ್ಲಿ ಮಳೆರಾಯನ ಆರ್ಭಟ ತಗ್ಗಿದೆ. ಆದರೆ , ಕೇರಳದಲ್ಲಿ ಮಳೆರಾಯನ ಕಾಟ ಶುರುವಾಗಿದೆ. ಕೇರಳದ ಜನ ಭಾರಿ ಮಳೆಯಿಂದ ಕಂಗೆಟ್ಟಿದ್ದಾರೆ.
ಒಂದೇ ಸಮನೆ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಕೇರಳದ ಆರು ಜಿಲ್ಲೆಗಳಿಗೆ ಕೇರಳದ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಳೆ ಅನಾಹುತದಿಂದ ಕೆಲವೆಡೆ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ. ನ.16 ರವರೆಗೆ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮಳೆಯಿಂದಾಗಿ ತಿರುವನಂತಪುರ ನಾಗರಕೊಯಿಲ್ ಪಟ್ಟಣಗಳಲ್ಲಿ ನೀರು ನಿಂತಿದೆ. ನೆಯ್ಯಟ್ಟಿಂಕರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತಿರುವಂತಪುರ, ಕೊಲ್ಲಂ, ಇಡುಕ್ಕಿ ಜಿಲ್ಲೆ, ಮುಂತಾದ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ತ್ರಿಶೂರ್, ಕಣ್ಣೂರು, ಎರ್ನಾಕುಲಂ, ಕಾಸರಗೋಡು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಅರುವಿಕ್ಕರ(ಕರಮಣ ನದಿ) ಮತ್ತು ಪೆಪ್ಪಾರ ಆಣೆಕಟ್ಟಿನಿಂದ ನೀರು ಬಿಡಲಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.