ನಾವಿಂದು ಸಮೂಹ ಮಾಧ್ಯಮಗಳ ಸ್ಥಿತ್ಯಂತರ ಯುಗದಲ್ಲಿದ್ದೆವೆ. ದಿನದಿಂದ ದಿನಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ. 15ನೇ ಶತಮಾನದಲ್ಲಿ ಮುದ್ರಣ ಯಂತ್ರದ ಆವಿಷ್ಕಾರವಾದ ಮೇಲೆ ಸಮೂಹ ಮಾಧ್ಯಮಗಳ ಯುಗ ಆರಂಭವಾಯಿತು. ಮೊದಲು ಪತ್ರಿಕೆಗಳು ಆರಂಭವಾಗಿ ನಂತರ ಛಾಯಾಗ್ರಹಣ, ಸಿನಿಮಾ, ಬಾನುಲಿ, ಟೆಲಿವಿಷನ್ ಮಾಧ್ಯಮಗಳು ಒಂದರ ನಂತರ ಒಂದು ಹುಟ್ಟಿಕೊಂಡು 20ನೇ ಶತಮಾನದಲ್ಲಿ ಅಂತ್ಯಕಾಲದ ಆವಿಷ್ಕಾರದೊಂದಿಗೆ ಮಹಾ ಮಾಧ್ಯಮ ಯುಗಕ್ಕೆ ಕಾರಣವಾಯಿತು. ಇಂದು ಮಾಧ್ಯಮಗಳ ಸಂಗಮದಿಂದ ಮೊಬೈಲ್ ಮೂಲಕ ಅಂಗೈಯಲ್ಲೇ ಪ್ರತಿಯೊಂದು ಮಾಧ್ಯಮವನ್ನು ನೋಡುವುದು ಸಾಧ್ಯವಾಗಿದೆ.
ಅಂತರ್ಜಾಲದ ಆವಿಷ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾಯಿತು. ಒಂದೆಡೆ ಎಲ್ಲಾ ಸಮೂಹ ಮಾಧ್ಯಮಗಳಿಗೆ ಸುದ್ದಿ ಸಂಗ್ರಹ, ವಿತರಣೆ ಸುಲಭವಾದರೆ, ಇನ್ನೊಂದೆಡೆ ವಿವಿಧ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತು. ಇವತ್ತು ಮುದ್ರಣ ಮಾಧ್ಯಮ ಕೇವಲ ಮುದ್ರಣ ಮಾಧ್ಯಮವಾಗಿ ಉಳಿದಿಲ್ಲ. ಅದು ಟೆಲಿವಿಷನ್ ನಂತೆ ದೃಶ್ಯ ಹಾಗೂ ಶ್ರವ್ಯ ಮಾಧ್ಯಮವಾಗಿದೆ. ಪತ್ರಿಕೆಗಳು ಇಂದು ಟೆಲಿವಿಷನ್ ನಂತೆ, ಪೊಡಕಾಸ್ಟ್ ಮೂಲಕ ನೇರ ಸುದ್ದಿ ಹಾಗೂ ಸಂದರ್ಶನಗಳನ್ನು ಪ್ರಸಾರ ಮಾಡುವುದಲ್ಲದೆ, ಕ್ಲಬ್ ಹೌಸ್ ಮೂಲಕ ಬಾನುಲಿಯಂತೆ ಶ್ರವ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದು ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವವರೆಗೆ ಒಂದು ಅವಕಾಶ ಹಾಗೂ ಸವಾಲಾಗಿ ಪರಿಣಮಿಸಿದೆ.
ಒಂದು ಮಾಧ್ಯಮ ಹುಟ್ಟಿಕೊಂಡಾಗ ಇನ್ನೊಂದು ಮಾಧ್ಯಮದ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ಆದರೆ ಈವರೆಗೆ ಯಾವುದೇ ಮಾಧ್ಯಮ ಬಂದರೂ ಅದರ ಹಿಂದಿನ ಮಾಧ್ಯಮ ಆಸ್ತಿತ್ವ ಕಳೆದುಕೊಂಡಿಲ್ಲ. ಆದರೆ ಈಗಾಗಲೇ ಅನೇಕ ಪ್ರಭಾವಿ ಪತ್ರಿಕೆಗಳು ಮುದ್ರಿತ ಆವೃತ್ತಿ ನಿಲ್ಲಿಸಿ ಆನ್ಲೈನ್ ಆವೃತ್ತಿಗಳನ್ನು ಮಾತ್ರ ಪ್ರಕಟಿಸುತ್ತಿರುವುದರಿಂದ ಮುಂದೆ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಎಫ್ಎಂ ಬಾನುಲಿ ಮಾತ್ರ ಜನಪ್ರಿಯವಾಗುತ್ತಿದ್ದು, ಎಸ್ ಡಬ್ಲ್ಯೂ, ಎಂ ಡಬ್ಲ್ಯೂ, ವಾಹಿನಿಗಳ ಶ್ರೋತೃಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ಟೆಲಿವಿಷನ್ ಮಾತ್ರ ಜನಪ್ರಿಯವಾಗಿದ್ದು, ಮುಂದೆಯೂ ತನ್ನ ಅಸ್ತಿತ್ವ ಉಳಿಸುವ ಭರವಸೆ ಇದೆ. ಇಂತಹ ಸಂದರ್ಭದಲ್ಲಿ ಭವಿಷ್ಯದಲ್ಲಿ ಭರವಸೆ ಮೂಡಿಸುವ ಮಾಧ್ಯಮಗಳೆಂದರೆ ಡಿಜಿಟಲ್ ಮಾಧ್ಯಮಗಳು.
ಇಂದು ಸುದ್ದಿಜಾಲಗಳು, ಸುದ್ದಿ ಪೋರ್ಟಲ್ ಗಳು, ಸುದ್ದಿ ಆಪ್ ಗಳು ಜನಪ್ರಿಯವಾಗುತ್ತಿದ್ದು, ಪರ್ಯಾಯ ಸಮೂಹ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಮೂಹ ಮಾಧ್ಯಮಗಳಿಗಿರುವಷ್ಟು ಕಾನೂನು ನಿಯಮಗಳು ಇವುಗಳಿಗಿಲ್ಲದಿರುವುದರಿಂದ ಮುಕ್ತ ಅಭಿವ್ಯಕ್ತಿಯ ಮುಖ್ಯ ವೇದಿಕೆಯಾಗಿ ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವ ದೇಶದಲ್ಲಿ ನಿಜವಾದ ವಿರೋಧಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾಗಿರುವುದರಿಂದ ಡಿಜಿಟಲ್ ಮಾಧ್ಯಮಗಳು ಆ ಕೆಲಸವನ್ನು ಮಾಡುತ್ತಿವೆ. ಅದಕ್ಕಾಗಿಯೇ ಸಮೂಹ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆದಂತೆ ಡಿಜಿಟಲ್ ಮಾಧ್ಯಮಗಳನ್ನು ಐದನೇ ಅಂಗವೆಂದು ಕರೆಯುತ್ತಾರೆ. ಅವು ಕೆಲವೊಮ್ಮೆ ಮುಖ್ಯವಾಹಿನಿ ಮಾಧ್ಯಮಗಳ ಕಾವಲು ನಾಯಿಯಾಗಿ ಕೂಡ ಕೆಲಸ ಮಾಡುತ್ತವೆ.
ಫಿಲಿಪ್ಟಿನ್ ಮರಿಯಾ ರೆಸ್ಸಾ ಹಾಗೂ ರಷ್ಯಾದ ಡಿಮಿಟ್ರಿ ಮುರಟೋವ್ ಎಂಬ ತನಿಖಾ ಪತ್ರಕರ್ತರಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ. ಇದು ಮಾಧ್ಯಮ ರಂಗದ ಮೇಲೆ ಸಮಾಜ ಇಟ್ಟಿರುವ ವಿಶ್ವಾಸಕ್ಕೆ ದ್ಯೋತಕವಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗುತ್ತಿರುವಾಗ ಮರಿಯಾ ರೆಸ್ಸಾರಂತವರು ಡಿಜಿಟಲ್ ಮಾಧ್ಯಮಗಳ ಮೂಲಕ ಆಡಳಿತವನ್ನು ಎದುರುಹಾಕಿಕೊಂಡು ಕೆಲಸ ಮಾಡಿದರು. ಭಾರತದಲ್ಲಿ ಅಂತಹ ಅನೇಕ ಸುದ್ದಿ ಪೋರ್ಟಲ್ ಗಳಿವೆ. ನ್ಯೂಸ್ ಪೋರ್ಟಲ್ ಗಳು ಒಂದು ಪರ್ಯಾಯ ಮಾಧ್ಯಮವಾಗಿ ಹಾಗೂ ನಿಜವಾದ ಪ್ರಜಾಪ್ರಭುತ್ವದ 5ನೇ ಅಂಗವಾಗಿ ಕಾರ್ಯನಿರ್ವಹಿಸಲಿ ಎಂಬ ಆಶಯ ನನ್ನದು.
ಲೇಖಕರು: ಡಾ.ಸತೀಶ್ ಕುಮಾರ್ ಅಂಡಿಂಜೆ

ಪ್ರಸ್ತುತ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸತೀಶ್ ಕುಮಾರ್ ಅಂಡಿಂಜೆ ಅವರು ಬೆಳ್ತಂಗಡಿ ತಾಲೂಕಿನ ಅಂಡಿಂಜೆಯವರು. ಇವರು ಹೊಸ ದಿಗಂತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು (ಎಂಎ) ಪತ್ರಿಕೋದ್ಯಮದಲ್ಲಿ ಪ್ರಥಮ ಶ್ರೇಣಿ ಮತ್ತು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇವರು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಇವರು 60ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, ಸಂಶೋಧನಾ ನಿಯತಕಾಲಿಕೆಗಳು ಮತ್ತು ವಿಚಾರ ಸಂಕಿರಣದ ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ.ಇವರು ‘ಭಾರತೀಯ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ’, ‘ಸಮೂಹ ಮಾಧ್ಯಮ ಸಂಶೋಧನೆ’ ಮತ್ತು ‘ಮಾಧ್ಯಮಲೋಕ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಭಾಷಣ ಹಾಗೂ ಸಣ್ಣ ಕಥೆಗಳು ಮಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ.