ಶಿವಮೊಗ್ಗ ನಗರದಲ್ಲಿ ತಡರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ ಕಾರಣ ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ರಾಜ್ಯಾದ್ಯಂತ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆಯು ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರೊಂದಿಗೆ ಈ ಜಿಲ್ಲೆ ಗಳಲ್ಲಿ ಯಲ್ಲೊ ಅಲರ್ಟ್ ಎಚ್ಚರಿಕೆ ನೀಡಿದೆ.
ಲಸಿಕೆ ಸಾಧನೆ: ಭಾರತೀಯರಿಗೆ ಅಭಿನಂದನೆ
ಭಾರತವು 100 ಕೋಟಿ ಕೋವಿಡ್- 19 ಲಸಿಕೆ ವಿತರಣೆಯಲ್ಲಿ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿ ಕೋವಿಡ್-19 ವಿರುದ್ಧ 100 ಕೋಟಿ ಲಸಿಕೆ ಸುರಕ್ಷಾ ಕವಚ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ಲಸಿಕೆ ತಯಾರಕರು, ಆರೋಗ್ಯ ಕಾರ್ಯಕರ್ತರು ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಹುತಾತ್ಮ ಪೋಲಿಸರಿಗೆ ಗೌರವ ನಮನ
ಕರ್ತವ್ಯದ ಸಂದರ್ಭ ದೇಶಾದ್ಯಂತ ಮರಣವನ್ನಪ್ಪಿದ ಪೋಲಿಸರಿಗೆ ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾ ಪೋಲಿಸ್ ವತಿಯಿಂದ ನಮನ ಸಲ್ಲಿಸಲಾಯಿತು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೋಲಿಸರು ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಫಾ ಹುಸೇನ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿಗೆ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸೇರಿದಂತೆ ಹಲವು ಗಣ್ಯರು ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು. ಇದೇ ವೇಳೆ ಪೋಲಿಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮ ಪೋಲಿಸರಿಗೆ ಗೌರವ ಸಲ್ಲಿಸಿದರು.
ಬೆಳೆ ನಾಶ, ಖೇದಕರ: ಕೃಷಿ ಸಚಿವ ಬಿ.ಸಿ. ಪಾಟೀಲ್
ಹೀರೆಕೆರೂರು, ರಟ್ಟಿಹಳ್ಳಿ ತಾಲೂಕಿನ ತಿಂಗಳಗೊಂದಿ ಗ್ರಾಮದಲ್ಲಿ ಬಸವರಾಜ್ ಎಂಬ ಕೃಷಿಕರ ಬಾಳೆತೋಟವನ್ನು ದುಷ್ಕರ್ಮಿಗಳು ಘಾಸಿಗೊಳಿಸಿದ್ದಾರೆ. ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ, “ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ರೂರ ಮನಸ್ಸು ಉಳ್ಳವರು, ಬೆಳೆಯನ್ನು ನಾಶ ಮಾಡಿರುವುದು ಬೇಸರದ ಸಂಗತಿಯಾಗಿದೆ”. ಈ ವಿಷಯದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದೇನೆ, ಈ ಕೃತ್ಯಕ್ಕೆ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಮಲೆನಾಡಿನಾದ್ಯಂತ ಸೀಗೆಹುಣ್ಣಿಮೆ ಸಂಭ್ರಮ
ತಾಳಗುಪ್ಪ: ಇಂದು ಭೂಮಾತೆಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಹೋಬಳಿಯ ಎಲ್ಲೆಡೆ ರೈತರು ತಮ್ಮ ಜಮೀನಿನಲ್ಲಿ ಫಸಲು ಮೈ ತುಂಬಿದ ಈ ದಿನವನ್ನು ಪೂಜಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ಹುಣ್ಣಿಮೆಯ ಈ ದಿನ ಮಲೆನಾಡಿನ ರೈತರು ನಸುಕಿನಲ್ಲಿ ಎದ್ದು ವಿವಿಧ ಎಲೆಗಳ ಸೊಪ್ಪನ್ನು ಬೇಯಿಸಿ ಅದನ್ನು ತಮ್ಮ ಜಮೀನಿನಲ್ಲಿ ಎಲ್ಲೆಡೆ ಹಾಕುತ್ತಾರೆ. ಇದಕ್ಕೆ ಅಚ್ಚು ಬೀರುವುದು ಎನ್ನುತ್ತಾರೆ. ನಂತರ ಜಮೀನಿನಲ್ಲಿ ದೇವರ ಪ್ರತಿಷ್ಠಾಪಿಸಿ ಪೂಜೆ ಮಾಡಿ ಕಡುಬು ನೈವೇದ್ಯ ಮಾಡಿ ಅಲ್ಲಿಯೇ ಊಟ ಮಾಡುವ ಪದ್ದತಿ ಆಚರಿಸುತ್ತಾರೆ. ಕೃಷಿಕ ಹೀರೆಮನೆ ಬಾಲಚಂದ್ರರವರ ತೋಟದಲ್ಲಿ ಭೂ ಹುಣ್ಣಿಮೆಯನ್ನು ಆಚರಿಸಲಾಯಿತು. ನಮಗೆ ಅನ್ನ ನೀಡುತ್ತಿರುವ ಭೂಮಿತಾಯಿಗೆ ಕೃತಜ಼ತೆ ಸಲ್ಲಿಸುವ ಪರಿ ಇದಾಗಿದೆ. ವರದಿ ಕೃಪೆ: ಶ್ರೀ. ರಾಘವೇಂದ್ರ ಶರ್ಮಾ ತಲವಾಟ. ನಿರೂಪಣಾ ಧ್ವನಿ: ರಚನಾ.ಕೆ.ಆರ್
ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರ ಶ್ಲಾಘನೆ
ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನೂರಕ್ಕೆ ನೂರು ಪ್ರಮಾಣದಷ್ಟು ಜನಸಾಮಾನ್ಯರಿಗೆ ಸಹಾಯಕವಾಗಿದೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ, ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳಲ್ಲಿ 200ರೂ. ಗಳನ್ನು ಹೆಚ್ಚಿಸಲಾಗಿದೆ, ಹಾಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ನೆರವಾಗುವಂತೆ “ಭಾಗ್ಯ ಲಕ್ಷ್ಮೀ ಯೋಜನೆಯನ್ನು” ಜಾರಿಗೊಳಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಹಾಯಕವಾಗಿದೆ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ನಾವು ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡರು.
ಮಲೆನಾಡಿನ ಅಮೂಲ್ಯ ಸಿರಿ:
ಶಿವಮೊಗ್ಗ ಲಕ್ಕಿನಕೊಪ್ಪ ಸರ್ಕಲ್ ನಲ್ಲಿರುವ ಒಂದು ಅಪರೂಪ ವಸ್ತು ಸಂಗ್ರಹಾಲಯ, ನಮ್ಮ ಗಮನ ಸೆಳೆಯುತ್ತದೆ ಅದೇ “ಅಮೂಲ್ಯ ಶೋಧ”. ಇದರ ಹಿನ್ನೆಲೆ ಅತ್ಯಂತ ಕುತೂಹಲ. ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ಶ್ರೀ.ಹೆಚ್. ಖಂಡೋಬರಾವ್- ಯಶೋಧಮ್ಮರವರ ಪ್ರೇಮ ಸೌಧ. ಶ್ರೀ.ಹೆಚ್. ಖಂಡೋಬರಾವ್ ರವರು ಗತಿಸಿದ ತಮ್ಮ ಪತ್ನಿಯ ಪ್ರೇಮದ ಸಂಕೇತವಾಗಿ ಈ ಸಂಗ್ರಹಾಲಯವನ್ನು ರೂಪುಗೊಳಿಸಿದ್ದಾರೆ. 2008ರಲ್ಲಿ ಆರಂಭವಾದ ಈ ಅಮೂಲ್ಯ ಶೋಧ ಮಲೆನಾಡಿನ, ಅಷ್ಟೇಕೆ ಇಡೀ ನಾಡಿನಾದ್ಯಂತ ಇರುವ ಪುರಾತನ ವಸ್ತುಗಳ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ನಾಣ್ಯ ಸಂಗ್ರಹಕಾರಿಯಾಗಿಯು ಅತ್ಯಂತ ಪ್ರಸಿದ್ಧರಾಗಿರುವ ಖಂಡೋಬರಾವ್ ರವರು ಬಹುಮುಖಿ ಆಸಕ್ತಿಯ ಕೇಂದ್ರವಾದ ಈ ಅಮೂಲ್ಯ ಶೋಧ, ನಮ್ಮ ಮಲೆನಾಡಿನ ಮುಕುಟಕ್ಕೆ ಇಟ್ಟ ಕೀರ್ತಿ ಕಳಸವಾಗಿದೆ. ಇವರ ಈ ಕೊಡುಗೆಯನ್ನ ನಮ್ಮ ಮಲೆನಾಡಿನ ಆಸಕ್ತ ಬಳಗ ಮೆಚ್ಚಿ ಶ್ರೀ. ಹೆಚ್. ಖಂಡೋಬರಾವ್ ರವರಿಗೆ ಹಾರ್ಧಿಕವಾಗಿ, ಸತ್ಕಾರ, ಸನ್ಮಾನ,ಅಭಿಮಾನವನ್ನು ಅರ್ಪಿಸಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಏಕಾಂಗಿ ಪ್ರತಿಭಟನೆ
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್. ಎಸ್ ಗೌಡ ಅವರು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಪ್ರತಿದಿನದ ಅಗತ್ಯವಸ್ತುಗಳ ಬೆಲೆ ಏರಿಕೆ ಹಾಗೂ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಲೆಕ್ಟ್ರಾನಿಕ್ ವಾಹನಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಜೊತೆಗೆ ಬಿಪಿಎಲ್ ಕಾರ್ಡ್ ದಾರರಿಗೆ ಅಡಿಗೆ ಅನಿಲ, ಎಣ್ಣೆ, ಬೇಳೆಕಾಳುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.
