Saturday, February 7, 2026
Saturday, February 7, 2026
Home Blog Page 1853

ಶಾಲೆಗೆ ಬೀಗ: ಶಿಕ್ಷಕರೇ ಬನ್ನಿ ಬೇಗ.

0

ಶಾಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ‌.
ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಪ್ರತಿಭಟನೆ ನಡೆಸಲಾಯಿತು.ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಹರಗಿ, ಕೋಡಿಹಳ್ಳಿ ಮತ್ತು ಸಹಸ್ರವಳ್ಳಿಯ ಪೋಷಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಪ್ರಾಥಮಿಕ ಶಾಲೆಗೆ 8 ಹುದ್ದೆಗಳು ಮಂಜೂರಾಗಿದ್ದವು. ಅದರಲ್ಲಿ ಮುಖ್ಯಶಿಕ್ಷಕರು ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಮೃತರಾದರೆ, ಇನ್ನೊಬ್ಬ ಶಿಕ್ಷಕರು ಹೃದಯಾಘಾತದಿಂದ ಮೃತರಾದರು. ಪ್ರಸೂತಿ ರಜೆಗೆ ತೆರಳಿದ್ದ ಶಿಕ್ಷಕಿಯರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದ್ದಾರೆ. ಇನ್ನೊಬ್ಬ ಶಿಕ್ಷಕಿಯು ಸದ್ಯಕ್ಕೆ ಪ್ರಸೂತಿ ರಜೆಯಲ್ಲಿದ್ದಾರೆ. ಹೀಗಿರುವಾಗ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಇಲ್ಲಿ ತೆರವಾದ ಹುದ್ದೆ ಭರ್ತಿಯಾಗಿಲ್ಲ. ರಜೆಯ ಮೇಲೆ ಹೋದ ಶಿಕ್ಷಕಿಯರು ಇಲ್ಲೇ ಕಾರ್ಯನಿರ್ವಹಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ತೆಗೆದುಕೊಳ್ಳಲು ಶಾಲೆಯಲ್ಲಿ ಹಣವಿಲ್ಲ. ಅಕ್ಕಪಕ್ಕದ ಶಾಲೆಯ ಶಿಕ್ಷಕರನ್ನು ಮೂರು ದಿನದ ಮಟ್ಟಿಗೆ ಇಲ್ಲಿಗೆ ಬಂದು ಪಾಠ ಮಾಡಲು ನಿಯೋಜಿಸುತ್ತಾರೆ ಜಿಲ್ಲಾ ಶಿಕ್ಷಣಾಧಿಕಾರಿ ,ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಡಿಡಿಪಿಐ ಫೋನಿನ ಮೂಲಕ ಗ್ರಾಮಸ್ಥರ ಜೊತೆ ಮಾತನಾಡಿ, ಇನ್ನೆರಡು ದಿನದಲ್ಲಿ ಶಾಲೆ ಶಿಕ್ಷಕರ ಕೊರತೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಲಾಕ್ ಡೌನ್ : ಪ್ರಸ್ತಾಪ ಇಲ್ಲ. ಗೊಂದಲ ಬೇಡ – ಸಿ.ಎಂ

0

ರೂಪಾಂತರಿ ವೈರಸ್ ಓಮಿಕ್ರಾನ್ ವಿದೇಶಗಳಲ್ಲಿ ಕಂಡುಬಂದಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ರಾಜ್ಯದಲ್ಲಿ ರೂಪಾಂತರ ತಳಿ ಪತ್ತೆಯಾಗಿಲ್ಲ ದ ಕಾರಣ ಲಾಕ್ ಡೌನ್ ಅನಗತ್ಯ. ಈ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರೂಪಾಂತರಿ ವೈರಸ್ಸಿನ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಿದ್ದೇನೆಯೇ ಹೊರತು, ಶಾಲೆಗಳನ್ನು ಮುಚ್ಚಲು ಎಲ್ಲಿಯೂ ತಿಳಿಸಿಲ್ಲ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಸಿಎಂ ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಲಾಕ್ ಡೌನ್ ಕುರಿತು ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೋಂಕು ಪೀಡಿತ ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದ ಇಬ್ಬರು ಪ್ರಯಾಣಿಕರ ಪೈಕಿ ಒಬ್ಬರಲ್ಲಿ ಡೆಲ್ಟಾಗಿಂತ ಭಿನ್ನವಾದ ವೈರಸ್ ಪತ್ತೆಯಾಗಿದೆ. ವ್ಯಕ್ತಿಯ ಮಾದರಿಯನ್ನು ಕೇಂದ್ರಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಸೋಂಕು ತಡೆಯಲು ರಾಜ್ಯ ಸರ್ಕಾರ ಈ ಹಿಂದಿನ ‘5 ಟಿ’ (ಟೆಸ್ಟ್, ಟ್ರೇಸ್, ಟ್ರ್ಯಾಕ್, ಟ್ರೀಟ್ ಹಾಗೂ ಟೆಕ್ನಾಲಜಿ )ಸೂತ್ರಗಳನ್ನು ಅನುಸರಿಸುತ್ತದೆ” ಎಂದು ತಿಳಿಸಿದರು.

ಗಂಧದಗುಡಿ: ಅಪ್ಪುನ ಆತ್ಮೀಯ ಕೊಡುಗೆ.

0

ದೊಡ್ಮನೆ ಹುಡುಗ ಎಂದೇ ಖ್ಯಾತಿಯಾಗಿರುವ ನಟ ದಿ. ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೂ ಸಹ ಅವರ ಅಭಿಮಾನಿಗಳು ಹಾಗೂ ಕುಟುಂಬವರ್ಗದವರು ನೋವಿನಲ್ಲೇ ಇದ್ದಾರೆ.

ಪುನೀತ್ ರಾಜಕುಮಾರ್ ಅವರ ತಿಂಗಳ ಪುಣ್ಯಸ್ಮರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಸೇರಿದಂತೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಕುರಿತು ರಾಘವೇಂದ್ರ ರಾಜಕುಮಾರ್ ಮಾತನಾಡಿದರು. ಗಂಧದಗುಡಿ ಬಂದು ಸಾಕ್ಷ್ಯಚಿತ್ರ. ಅದನ್ನು ಅಪ್ಪು ಅವರು ಪುನೀತ್ ರಾಜಕುಮಾರ ಆಗಿ ಮಾಡಿಲ್ಲ. ಬದಲಾಗಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಯಾವುದೇ ಮೇಕಪ್ ಇಲ್ಲದೆ ನಟಿಸಿ, ಉತ್ತಮ ಸಂದೇಶವನ್ನು ನೀಡಿದ್ದಾರೆ. ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವನ್ಯಜೀವಿ, ವನ್ಯಲೋಕ ಎಷ್ಟು ಪ್ರಮುಖ ಹಾಗೂ ಅದರ ರಕ್ಷಣೆ ಎಷ್ಟು ಮುಖ್ಯ ಎನ್ನುವುದು ಇದರಲ್ಲಿದೆ. ಹಾಗೂ ಕಾಡು ನಾಶ ತಡೆ ಮತ್ತು ಬುಡಕಟ್ಟು ಜನರ ಬಗ್ಗೆ ಇಲ್ಲಿ ಮಾಹಿತಿ ಇದೆ. ಇಡೀ ಪ್ರಪಂಚಕ್ಕೆ ಇದು ಅನ್ವಯಿಸುತ್ತದೆ. ಅಪ್ಪು ಬಿಟ್ಟುಹೋಗಿರುವ ಕೊನೆಯ ಆಸ್ತಿ ಇದಾಗಿದೆ ಎಂದರು.
ಯಾವುದೇ ಸಹಾಯ ಮಾಡಿದರು ಅದು ಬೇರೆಯವರಿಗೆ ಗೊತ್ತಾಗಬಾರದು ಎಂಬ ದಾರಿಯಲ್ಲಿ ಅಪ್ಪು ನಡೆದಿದ್ದಾರೆ. ನಾವು ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಬಹಿರಂಗವಾಗಿ ಹೇಳಿದರೆ ಆತನಿಗೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಅಪ್ಪುವಿನ ಕನಸು ಹಾಗೂ ಕೆಲಸಗಳನ್ನು ಪ್ರತಿಯೊಬ್ಬರು ನಡೆಸಿಕೊಂಡು ಹೋಗುತ್ತೇವೆ. ಅಪ್ಪು ವ್ಯಕ್ತಿತ್ವ ಎಲ್ಲರ ಗಮನ ಸೆಳೆದಿದೆ. ಈ ಗುಣವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪು ಪಡೆದಿದ್ದರು. ಇದು ನಮ್ಮ ತಂದೆಯ ಗುಣ. ಇಷ್ಟು ಬೇಗ ನಮ್ಮನ್ನಗಲಿ ಹೋಗಲು ನಮ್ಮ ಪ್ರೀತಿ ಜಾಸ್ತಿ ಆಯ್ತಾ ಅಥವಾ ಅವರಿಗೆ ಪ್ರೀತಿ ಸಾಲಲ್ಲ ಇಲ್ಲವೇ ಎಂದು ತಿಳಿಯುತ್ತಿಲ್ಲ ಎಂದು ರಾಘವೇಂದ್ರ ರಾಜಕುಮಾರ್ ಭಾವುಕರಾಗಿ ನುಡಿದರು.

ಆಫ್ಘನ್: ಮಾಧ್ಯಮಗಳಿಗೆ ಮೂಗುದಾರ

0

ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ತಾಲಿಬಾನಿಗಳು ಅಲ್ಲಿನ ಜನರ ಮೇಲೆ ಒಂದಲ್ಲ ಒಂದು ರೀತಿಯ ನಿರ್ಬಂಧಗಳನ್ನು ಹೇರಿದೆ.

ಈಗ ತಾಲಿಬಾನಿಗಳು ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದು, ಪರಿಶೀಲನೆ ಹಾಗೂ ಸೆನ್ಸಾರ್ಶಿಪ್ ಇಲ್ಲದೆ ತಾಲಿಬಾನ್ ಆಡಳಿತದ ಹಿತಾಸಕ್ತಿ ವಿರುದ್ಧ ಯಾವುದೇ ವರದಿ ಪ್ರಕಟ ಹಾಗೂ ಪ್ರಸಾರ ಮಾಡುವಂತಿಲ್ಲ ಎಂದು ಆದೇಶಿಸಿದೆ.

“ಬದಕ್ಷಣ್ ಪ್ರಾಂತ್ಯದಲ್ಲಿ ತಾಲಿಬಾನ್ ಸರ್ಕಾರದ ವಿರುದ್ಧ ಯಾವುದೇ ಮಾಧ್ಯಮ ಸಂಸ್ಥೆಗಳು ವರದಿಯನ್ನು ಪ್ರಕಟ ಹಾಗೂ ಪ್ರಸಾರ ಮಾಡುವಂತಿಲ್ಲ ಸರ್ಕಾರದ ಕುರಿತ ಪ್ರತಿಯೊಂದು ವರದಿಯನ್ನು ಪರಿಶೀಲನೆ ಹಾಗೂ ಸೆನ್ಸರ್ ಮಾಡಿದ ನಂತರವೇ ಪ್ರಕಟ ಮತ್ತು ಪ್ರಸಾರ ಮಾಡಬೇಕು ಸರ್ಕಾರದ ಭ್ರಷ್ಟಾಚಾರ, ನಿರ್ವಹಣೆ, ಕೊರತೆ, ವೈಫಲ್ಯ, ಜನರ ಮೇಲೆ ಅವರಿಗಿರುವ ನಿಯಂತ್ರಣ, ಅಸಮರ್ಥತೆ ಸೇರಿ ಯಾವುದೇ ವಿಷಯಗಳ ಕುರಿತು ವರದಿ ಮಾಡುವಂತಿಲ್ಲ ಎಂಬುದಾಗಿ ತಾಲಿಬಾನ್ ಸ್ಥಳೀಯ ಅಧಿಕಾರಿಗಳು ಆದೇಶಿಸಿದ್ದಾರೆ” ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಮಹಿಳಾ ವರದಿಗಾರರು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ವರದಿಗಾರಿಕೆ ಮಾಡುವಂತಿಲ್ಲ. ಅವರು ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು ಎಂಬುದಾಗಿ ಆದೇಶಿಸಲಾಗಿದೆ” ಎಂದು ವರದಿ ತಿಳಿಸಿದೆ.

ಸರ್ಕಾರಕ್ಕೆ ನಡುಕ : ಕೃಷಿ ಕಾಯ್ದೆ ರದ್ಧತಿ -ರಾಹುಲ್ ಗಾಂಧಿ

0

ಕೃಷಿ ಕಾಯಿದೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ವಾಪಸ್ ಪಡೆದಿರುವ ನಡೆ, ತಾನು ಮಾಡಿರುವುದು ಎಲ್ಲೋ ತಪ್ಪಾಗಿದೆ ಎಂದು ಓಪ್ಪಿಕೊಂಡಂತಾಗಿದೆ. ಕೇವಲ ಕೆಲವೇ ಮಿತ್ರ ಬಂಡವಾಳಶಾಹಿಗಳು, ರೈತ ಮತ್ತು ಕಾರ್ಮಿಕ ಶಕ್ತಿಗಳ ಮುಂದೆ ನಿಲ್ಲಲು ಸಾಧ್ಯವಿಲ್ಲ. ಕೃಷಿ ಕಾಯಿದೆಗಳ ರದ್ದತಿ ದೇಶದ ಕೃಷಿಕರಿಗೆ ಸಂದ ಯಶಸ್ಸು. ಈ ಕಾಯಿದೆಗಳ ಬಗ್ಗೆ ನಾವು ಚರ್ಚಿಸಲು ಉತ್ಸುಕರಾಗಿದ್ದೇವು. ಆದರೆ ಅದಕ್ಕೆ ಅವಕಾಶ ನೀಡಲಿಲ್ಲ. ಈ ಕಾಯಿದೆಯ ಹಿಂದಿರುವ ಪಟ್ಟಭದ್ರ ಶಕ್ತಿಗಳ ಬಗ್ಗೆಯೂ ತಿಳಿಯಲು ಮುಂದಾಗಿದ್ದೆವು. ಇವುಗಳಲ್ಲಿ ಕೇವಲ ಪ್ರಧಾನಮಂತ್ರಿಗಳ ದೃಷ್ಟಿಕೋನಗಳು ಬಿಂಬಿತವಾಗದೇ ಅವರ ಹಿಂದಿರುವ ಶಕ್ತಿಗಳ ಬಗ್ಗೆ ತಿಳಿಯಲು ನಾವು ವಿಶೇಷವಾಗಿ ತಯಾರಿದ್ದೆವು.
ಕನಿಷ್ಠ ಬೆಂಬಲ ಬೆಲೆ, ಲಿಖಿಂಪುರ -ಕೇರಿ ಪ್ರಕರಣ, ಹಾಗೂ 700 ರೈತರ ಮರಣ ಇವುಗಳ ಬಗ್ಗೆ ಚರ್ಚಿಸಲು ಆಸ್ಪದ ನಿಡದೇ ಇದ್ದುದು ದುರಂತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

ಬೆಳೆಹಾನಿ ಪರಿಹಾರ ಕೇಂದ್ರಕ್ಕೆ ಮನವಿ. -ಸಿ.ಎಂ.

0

ತುಮಕೂರಿನ, ಸಿದ್ದಗಂಗಾ ಮಠದಲ್ಲಿ ಕಾರ್ತಿಕ ಸೋಮವಾರದಂದು ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಭಕ್ತಿಪೂರ್ವಕ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿ ಅವರು ಪಾಲ್ಗೊಂಡಿದ್ದರು.

ಇತ್ತೀಚಿಗೆ ಸುರಿದ ಮಳೆಯಿಂದ ಹಾನಿಗೊಳಗಾದ ಬೆಳೆಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲಿಸಿ ವರದಿ ಸಲ್ಲಿಸಿದ ನಂತರ ಇನ್ನಷ್ಟು ಪರಿಹಾರ ಸಿಗಬಹುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳೆನಷ್ಟಕ್ಕೆ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂಬಂಧ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತಿದೆ. ಸಂಬಂಧಿಸಿದ ಜಿಲ್ಲಾಧಿಕಾರಿಗಳ ಬಳಿ ರೂ. 585 ಕೋಟಿ ಹಣವಿದೆ. ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಸುವರ್ಣ ಪ್ರತಿಭೆ. ಗೀತಿಕಾ & ಸುಂದರ್.

0

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಇತ್ತೀಚೆಗೆ ನಡೆಯಿತು.

ಈ ಘಟಿಕೋತ್ಸವದಲ್ಲಿ ಕೇರಳದ ಗೀತಿಕಾ ಟಿ.ವಿ ಹಾಗೂ ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ ವರ್ಮಾ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

ಮಾನ್ಯ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ, ಪ್ರಮಾಣ ಪತ್ರ ಪ್ರದಾನ ಮಾಡಿದರು.

ಗೀತಿಕಾ ಎಂಬ ವಿದ್ಯಾರ್ಥಿನಿ ಆಟೋ ಚಾಲಕ ಕೆ. ಸುರೇಶ್ ಕುಮಾರ್ ಅವರ ಪುತ್ರಿಯಾಗಿದ್ದಾರೆ. ಈಕೆಗೆ ಕೃಷಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗುವ ಕನಸಿದೆ. ಗೀತಿಕಾಗೆ ಚಿನ್ನದ ಪದಕ ಬಂದಿರುವುದು ಖುಷಿಯಾಗಿದೆ. ಶಿಕ್ಷಕರ ಸಲಹೆಯಂತೆ ಕೃಷಿ ಪದವಿ ಪೂರ್ಣಗೊಳಿಸಿದ್ದೇನೆ. ಕೇರಳದ ಕೃಷಿ ವಿವಿಯಲ್ಲಿ ಸಸ್ಯರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದೇನೆ ಎಂದು ಗೀತಿಕಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ್ ವರ್ಮಾ. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದಿದ್ದಾರೆ.ಅವರಿಗೆ 5 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಲಭಿಸಿದೆ.

ನಳಂದ ಜಿಲ್ಲೆಯ ರಾಜಗೀರ್ ಗ್ರಾಮದಿಂದ ವ್ಯಾಸಂಗಕ್ಕಾಗಿ ರಾಯಚೂರಿಗೆ ಬಂದಿದ್ದಾರೆ. ಅವರಿಗೆ ಕೃಷಿ ವಿಜ್ಞಾನಿಯಾಗುವ ಕನಸಿದೆ.

ಖರಗ ಪುರ ಐಐಟಿಯಲ್ಲಿ ಎಂ. ಟೆಕ್ ಪ್ರವೇಶ ಪಡೆದಿದ್ದಾರೆ. ತಂದೆ ವಿಮಾ ಏಜೆಂಟ್ ಹಾಗೂ ತಾಯಿ ಕಾಲೇಜು ಉಪನ್ಯಾಸಕಿಯಾಗಿದ್ದಾರೆ.

ಗದ್ದಲದ ನಡುವೆಯೂ ಸಂಸತ್ ಅಧಿವೇಶನ ಆರಂಭ

0

ಕೇಂದ್ರ ಸರ್ಕಾರವು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಹಿಂಪಡೆದಿದೆ. ಚಳಿಗಾಲದ ಮೊದಲ ದಿನದ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ವಾಪಸ್ ವಿಧೇಯಕ-2021 ಮಂಡಿಸಿ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಚಳಿಗಾಲದ ಮೊದಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ನಾಯಕರು ಉಭಯ ಸದನಗಳಲ್ಲಿ ಗದ್ದಲ ಮಾಡಿದರು. ಆದರೆ ಗದ್ದಲದ ನಡುವೆಯೂ ಕೂಡ ಕೃಷಿ ಸಚಿವ ನರೇಂದ್ರ ತೋಮರ್ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದರು. ರಾಜ್ಯಸಭೆಯಲ್ಲಿ ಮಧ್ಯಾಹ್ನದ ವೇಳೆಗೆ ವಿಧೇಯಕ ಅಂಗೀಕಾರಕ್ಕೆ ಮುನ್ನ ಉಪಸಭಾಪತಿ ಹರಿವಂಶ್ ಅವರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2 ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಿದ್ದರು.

ಕೇಂದ್ರಸರ್ಕಾರ ಕೃಷಿ ಕಾಯ್ದೆ ಹಿಂಪಡೆಯುವ ವಿಧೇಯಕಕ್ಕೆ ಪ್ರತಿಪಕ್ಷಗಳು ಆಕ್ರೋಶಗೊಂಡು ಸದನದಲ್ಲಿ ಗದ್ದಲಕ್ಕೆ ಮುಂದಾಗಿದ್ದವು. ಹೀಗಾಗಿ ಅಧಿವೇಶನದ ಮೊದಲ ಎರಡು ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ.

“ಚರ್ಚೆಗೆ ಸರಕಾರ ಸಿದ್ಧ ಇದೆ. ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಆದರೆ ಸದಸ್ಯರು ಸಮಾಧಾನದಿಂದ ವರ್ತಿಸಬೇಕು. ಸದನದ ಘನತೆ ಬಲಿಕೊಟ್ಟು ಸಾಧಿಸುವುದಾದರೂ ಏನಿದೆ? ಸಭ್ಯತೆ ಮೀರುವುದು ಬೇಡ. ಸರ್ಕಾರಕ್ಕೆ ದೇಶದ ಅಭಿವೃದ್ಧಿಯೇ ಮುಖ್ಯ” ಎಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

“ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧೇಯಕವನ್ನು ಸಂಸತ್ತು ಅಂಗೀಕರಿಸಿಬಹುದು. ಆದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಕಾನೂನು ಖಾತರಿ ಸೇರಿದಂತೆ ನಮ್ಮ ಉಳಿದ ಬೇಡಿಕೆಗಳ ಕುರಿತಾಗಿ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು. ಕೇಂದ್ರ ಮಾತುಕತೆಗೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ” ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಯನ್ನು ಅಧಿಕೃತವಾಗಿ ಹಿಂಪಡೆದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿದೆ. “ಇನ್ನಾದರೂ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗಳ ಬಗ್ಗೆ ನಿರ್ಧಾರದ ವೇಳೆ ಮಾನವಹಕ್ಕುಗಳನ್ನು ಗೌರವಿಸಲಿದೆ ಮತ್ತು ಕೃಷಿಕರು, ಜನಸಮುದಾಯ, ಸಂಘಟನೆಗಳ ಜೊತೆ ಅರ್ಥಪೂರ್ಣ ಚರ್ಚೆ ಬಳಿಕ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂಬ ಭರವಸೆಯಿದೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಹಾಗೂ ಆಹಾರ ಹಕ್ಕು ತಜ್ಞ ಮೈಕೆಲ್ ಫಖ್ರಿ ತಿಳಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನ ಪ್ರತಿಪಕ್ಷಗಳ 12 ಸಂಸದರ ಅನುಚಿತ ವರ್ತನೆಯಿಂದ ಸಂಸತ್ ಕಲಾಪದ ಘನತೆಗೆ ಧಕ್ಕೆ ತಂದ ಆಪಾದನೆಯಡಿ 12 ಸಂಸದರನ್ನು ಈ ಅಧಿವೇಶನದ ಪೂರ್ಣ ಸದನಕ್ಕೆ ಅವರ ಪ್ರವೇಶ ನಿಷೇಧಿಸಲಾಗಿದೆ.

12 ಸಂಸದರ ಸಸ್ಪೆಂಡ್ ಶಿಕ್ಷೆ ಕುರಿತಂತೆ “ಮುಂಗಾರು ಅಧಿವೇಶನದ ಕೊನೆಯ ದಿನ ಅನುಚಿತ ವರ್ತನೆ ತೋರಿದ್ದರಿಂದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗಲೂ ತಮ್ಮ ವರ್ತನೆಗೆ ಕ್ಷಮೆ ಕೋರುವಂತೆ ಆ ಸದಸ್ಯರನ್ನು ಕೋರಲಾಯಿತು. ಅದಕ್ಕೆ ನಿರಾಕರಿಸಿದ್ದರಿಂದ ಅಮಾನತು ನಿರ್ಧಾರ ಅನಿವಾರ್ಯವಾಯಿತು. ತಪ್ಪು ತಿದ್ದಿಕೊಂಡು ತಮ್ಮ ವರ್ತನೆಗೆ ಸಭಾಪತಿಯವರ ಕ್ಷಮೆ ಕೋರಿದರೆ ಸರ್ಕಾರವೂ ಮುಕ್ತ ಮನಸ್ಸು ಹೊಂದಲಿದೆ” ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಕೃಷಿ ಕ್ಷೇತ್ರ ಸಾಲ ಸೌಲಭ್ಯ : ತಂತ್ರಾಂಶ ಸಿದ್ಧ

0

ಕೃಷಿ ಸಾಲ ವಿತರಣೆಯನ್ನು ಏಕೀಕೃತ ತಂತ್ರಾಶ ವ್ಯವಸ್ಥೆ ಈ ತನಕ ಇರಲಿಲ್ಲ. ಆ ದೋಷವನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜಕೀಯ ಪ್ರಭಾವಿಗಳು, ನಾನಾ ಹಣಕಾಸು ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಹಾಗೂ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸಲು ರಾಜ್ಯ ಸರ್ಕಾರವು ನೂತನ ತಂತ್ರಾಂಶ ವೇದಿಕೆ ಸಿದ್ಧಪಡಿಸಿದೆ.
ನೂತನ ತಂತ್ರಾಂಶದಿಂದ ಸಹಕಾರ ಕ್ಷೇತ್ರದ ಸೇವೆಯಲ್ಲಿ ಕೃಷಿ ಸಾಲ ವಿತರಣೆಯು ಕ್ರಾಂತಿಕಾರಿ ಬೆಳವಣಿಗೆ ಆಗಲಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ್ ಅವರು ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಎಲ್ಲಾ ರೀತಿಯ ಕೃಷಿ ಸಾಲ ವಿತರಣೆ Fruits – Bank ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ವಾಣಿಜ್ಯ ಬ್ಯಾಂಕ್ ಗಳಲ್ಲಿ ಈಗಾಗಲೇ ಈ ಸೇವೆ ಆರಂಭವಾಗಿದೆ.
ಕೃಷಿ ಭೂಮಿಯ ಮಾರಾಟ, ಕೊಳ್ಳುವಿಕೆ, ಪಹಣಿಯಲ್ಲಿ ಸಾಲ ಇರುವ ಬಗ್ಗೆ ಇಸಿ ಸರ್ಟಿಫಿಕೇಟ್ ಒದಗಿಸುವುದು ಸೇರಿದಂತೆ ಇತರ ಕಾರ್ಯಗಳಿಗೆ ತಹಶೀಲ್ದಾರ್ ಕಚೇರಿಗಳು ಕಾವೇರಿ ತಂತ್ರಾಂಶ ಬಳಸುತ್ತಿವೆ. ಭೂ ದಾಖಲೆ ನೀಡುವ ನೊಂದಣಿ ಇಲಾಖೆಯ ಭೂಮಿ ತಂತ್ರಾಂಶ ದ ಜೊತೆಗೆ ರೈತರು ಪಡೆಯುವ ಸೌಲಭ್ಯಗಳ ತಂತ್ರಾಂಶ ಸಂಗ್ರಹಣೆಗೆ ಕೃಷಿ ಇಲಾಖೆಯು ಬೇರೆ ತಂತ್ರಾಂಶವನ್ನು ಬಳಸುತ್ತಿದೆ. ಇವನ್ನು ಸಂಯೋಜಿಸಿ ಸೃಷ್ಟಿಸಿರುವ ನೂತನ ವೆಬ್ ಪೋರ್ಟಲ್ ಫ್ರೂಟ್ಸ್ ಬ್ಯಾಂಕ್ ಆಗಿದೆ.
ಫ್ರೂಟ್ಸ್ ಬ್ಯಾಂಕ್ ವೆಬ್ ಪೋರ್ಟಲ್ ಮೂಲಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಲ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ಕಗ್ಗಂಟಾಗಿರುವ ಡೀಮ್ಡ್ ಲ್ಯಾಂಡ್.

0

ರಾಜ್ಯದ್ಯಂತ ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ( ಸಿ ಆಂಡ್ ಡಿ) ಸಂಕೋಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ಸಿಲುಕಿದ್ದು, ರೈತರ ನೆಮ್ಮದಿಗೆ ಅಡ್ಡಿಯಾಗಿದೆ. ಅನೇಕ ದಶಕಗಳಿಂದ ಉಳುಮೆ ಕಾಣುತ್ತಿರುವ ಈ ಭೂಮಿಗೆ ದಾಖಲೆಗಳನ್ನು ಪಡೆಯಲು ರೈತರು ಹೆಣಗಾಡುತ್ತಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಡೀಮ್ಡ್ ಜಟಾಪಟಿಗೆ ಅಂತ್ಯವಿಲ್ಲದಂತಾಗಿದೆ.
ಕೃಷಿ ಚಟುವಟಿಕೆಗೆ ಪೂರಕವಲ್ಲದ ಬೆಟ್ಟ, ಬಾಣೆ, ಜಮ್ಮಾ,ಪೈಸಾರಿ,ಕಾನ, ಕುಮ್ಕಿ ಸೇರಿದಂತೆ ನೀರಾವರಿ ಪ್ರದೇಶವಲ್ಲದ ಭೂಮಿಯನ್ನು ಸಿ ಆಂಡ್ ಡಿ ಅಥವಾ ಡೀಮ್ಡ್ ಲ್ಯಾಂಡ್ ಎನ್ನಲಾಗುತ್ತದೆ.
ರಾಜ್ಯದಲ್ಲಿ 9.94 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಅರಣ್ಯ ಪ್ರದೇಶದಲ್ಲಿದೆ. ಇದರಲ್ಲಿ 6.64 ಲಕ್ಷ್ಮಿ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸರ್ಕಾರದಿಂದ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವಂತೆ ಅಂತಿಮ ಹಂತದಲ್ಲಿದೆ. ಈ ಸಮಸ್ಯೆ ಶೀಘ್ರ ಬಗೆ ಹರಿಯಲಿದೆ ಎಂದು ಕಂದಾಯ ಸಚಿವರಾದ ಆರ್.
ಅಶೋಕ್ ತಿಳಿಸಿದ್ದಾರೆ.
ಡೀಮ್ಡ್, ಸಿ ಆಂಡ್ ಲ್ಯಾಂಡ್ ವಿಚಾರ ಕೋರ್ಟ್ ನಲ್ಲಿದೆ. ಅರಣ್ಯ ಇಲಾಖೆ ವ್ಯಾಪ್ತಿಗೆ 4 ಲಕ್ಷ
ಹೆಕ್ಟೇರ್ ಭೂಮಿ ಒಳಪಡುವ ಬಗ್ಗೆ ಸರ್ವೆ ಮಾಡಿರುವ ಅಂಶ ಗಮನಕ್ಕೆ ಬಂದಿದೆ. ಅಂತಿಮವಾಗಿ ಕಂದಾಯ, ಅರಣ್ಯ ಇಲಾಖೆಗಳಿಗೆ ನಿರ್ದಿಷ್ಟ ಭೂಮಿಯನ್ನು ಬಿಟ್ಟು ಕೊಡುವ ವರದಿಯನ್ನು ಕೋರ್ಟ್ ಗೆ ಸರಕಾರ ಸಲ್ಲಿಸಿದೆ ಎಂದು ಅರಣ್ಯ ಸಚಿವರಾದ ಉಮೇಶ ಕತ್ತಿ ಅವರು ಹೇಳಿದ್ದಾರೆ.