Sunday, February 8, 2026
Sunday, February 8, 2026
Home Blog Page 1847

ಸ್ಮಾರ್ಟ್ ಸಿಟಿ ಲೋಕಾರ್ಪಣೆ : ಮುಂದೂಡಿದ ಕೇಂದ್ರ

0

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯು ದೇಶಾದ್ಯಂತ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯು 2021ರ ಡಿಸೆಂಬರ್ ವೇಳೆಗೆ ಪೂರ್ಣಗೊಂಡು 2022ರ ಜನವರಿ 26ರಂದು ಸಾಂಕೇತಿಕವಾಗಿ ಲೋಕಾರ್ಪಣೆ ಯಾಗಬೇಕಿತ್ತು. ಆದರೆ ದೇಶದ ವಿವಿಧೆಡೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದಕ್ಕೆ ಶಿವಮೊಗ್ಗ ಜನತೆಯು ಹೊರತಾಗಿಲ್ಲ.

ಸ್ಮಾರ್ಟ್ ಸಿಟಿ ಕಾಮಗಾರಿ ಇನ್ನೂ ಪೂರ್ಣವಾಗದ ಕಾರಣ ಈ ಕುರಿತಂತೆ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಗಳ ಅವಧಿಯನ್ನು ಕೇಂದ್ರ ಸರ್ಕಾರ ದೇಶಾದ್ಯಂತ 2023ರ ಜೂನ್ ವರೆಗೂ ವಿಸ್ತರಿಸಿದೆ.

ಕೋವಿಡ್ ಪರಿಸ್ಥಿತಿ ಮತ್ತು ಇತರ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ವಸತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪರವಾನಗಿ ಭೂಮಾಪಕರ ಆಯ್ಕೆಗೆ ಅರ್ಜಿ ಆಹ್ವಾನ

0

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಪರವಾನಗಿ ಭೂಮಾಪಕರುಗಳ ಕೊರತೆ ಇದ್ದು 3000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಪರವಾನಗಿ ನೀಡಲಾದ ಭೂಮಾಪಕರಿಗೆ ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಪ್ರಕಾರ ಪ್ರತಿ ಅಳತೆ ಕಾರ್ಯಕ್ಕೆ ಇಲಾಖೆಯಿಂದ ಸೇವಾ ಶುಲ್ಕವನ್ನು ನೀಡಲಾಗುವುದು. ಭೂಮಾಪನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ 2022 ರ ಜನವರಿ ಅಥವಾ ಫೆಬ್ರವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಪರೀಕ್ಷೆಯ ಖಚಿತ ದಿನಾಂಕವನ್ನು ವೆಬ್‍ಸೈಟ್ ವಿಳಾಸ rdservices.karnataka.gov.in ರಲ್ಲಿ ಮತ್ತು ದಿನಪತ್ರಿಕೆಗಳಲ್ಲಿ 15 ದಿನ ಮುಂಚಿತವಾಗಿ ಪ್ರಚುರಪಡಿಸಲಾಗುವುದು. ನಿಗದಿಪಡಿಸಲಾದ ಅರ್ಜಿಗಳನ್ನು ಮೇಲ್ಕಂಡ ಇಲಾಖಾ ವೆಬ್‍ಸೈಟಿನಲ್ಲಿಯೇ ಪ್ರಕಟಿಸಲಾಗಿದ್ದು ಆನ್‍ಲೈನ್ ಮುಖಾಂತರ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಆನ್‍ಲೈನ್‍ನಲ್ಲಿ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿರುತ್ತದೆ.
ಅರ್ಜಿ ಶುಲ್ಕ ರೂ.1000 ಆಗಿದ್ದು ಇಲಾಖಾ ವೆಬ್‍ಸೈಟ್ rdservices.karnataka.gov.in ನಲ್ಲಿ ಕ್ಲಿಕ್ ಮಾಡಿದಾಗ ಆನ್‍ಲೈನ್ ಅರ್ಜಿ ಲಿಂಕ್ ಮೂಡುತ್ತದೆ. ಅಧಿಸೂಚನೆಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.
ಕನಿಷ್ಟ ಪದವಿಪೂರ್ವ ಶಿಕ್ಷಣ(ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ(ಸಿವಿಲ್)/ಅಥವಾ ಬಿ.ಟೆಕ್(ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇಯಲ್ಲಿ ಪದವಿಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್‍ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.
ವಯೋಮಿತಿ ಕನಿಷ್ಟ 18 ವರ್ಷ, ಗರಿಷ್ಟ 65 ವರ್ಷ ಮೀರಿರಬಾರದು. ಜಿಲ್ಲಾವಾರು ಅವಶ್ಯಕವಿರುವ ಭೂಮಾಪಕರ ಸಂಖ್ಯೆ ನಿಗದಿಪಡಿಸಿದ್ದು ಶಿವಮೊಗ್ಗ ಜಿಲ್ಲೆಗೆ 127 ಸಂಖ್ಯೆ ನಿಗದಿಪಡಿಸಲಾಗಿದೆ. ಅರ್ಹತಾ ಷರತ್ತುಗಳು, ಆಯ್ಕೆಯ ವಿಧಾನ, ತರಬೇತಿ ಸೇರಿದಂತೆ ಇತರೆ ಸೂಚನೆಗಳಿಗೆ ಇಲಾಖಾ ವೆಬ್‍ಸೈಟ್‍ನಲ್ಲಿ ಮಾಹಿತಿ ಪಡೆಯಬಹುದು ಎಂದು ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ, ಬೆಂಗಳೂರು ಪ್ರಕಟಣೆ ತಿಳಿಸಿದೆ.

ಅರಣ್ಯ ಹಕ್ಕು ಕಾಯ್ದೆ ಫಲಾನುಭವಿಗಳು ,ಪರಿಹಾರ ವಂಚಿತರು

0

ಸಾಲ ಸೌಲಭ್ಯದಿಂದ ವಂಚಿತರಾಗುತ್ತಿದ್ದ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದ ಫಲಾನುಭವಿಗಳು, ಬೆಳೆ ನಷ್ಟದ ಪರಿಹಾರದಿಂದಲೂ ವಂಚಿತರಾಗಿದ್ದಾರೆ. ಜಿಲ್ಲಾದ್ಯಂತ ಅಕಾಲಿಕ ಮಳೆಯಿಂದ ಕಾಫಿ, ಕಾಳುಮೆಣಸು, ಭತ್ತ, ಅಡಿಕೆ ಸೇರಿದಂತೆ ಬೆಳೆ ನಷ್ಟ ಅನುಭವಿಸಿರುವ ಈ ಫಲಾನುಭವಿಗಳು ಎನ್ ಡಿಆರ್ ಎಫ್ ಪರಿಹಾರವೂ ಸಿಗದೆ ಪರದಾಡುವಂತಾಗಿದೆ.
ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದುಕೊಂಡವರಿಗೆ ಪಹಣಿ ಸಮಸ್ಯೆಯಿಂದ ಬೆಳೆ ಪರಿಹಾರ ಸಿಗದಂತೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಬೇಕು ಎಂದು ಕಳಸದ ಬುಡಕಟ್ಟು ರೈತ ಉತ್ಪಾದಕರ ಸಂಘದ ಕಾರ್ಯದರ್ಶಿ ಸುರೇಶ್ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅಧಿನಿಯಮ 2006 ಮತ್ತು ನಿಯಮ 2008, ತಿದ್ದುಪಡಿ ನಿಯಮ 2012 ರ ಪ್ರಕಾರ ಪರಿಶಿಷ್ಟ ಪಂಗಡ ಇತರೆ ಪಾರಂಪರಿಕ ಅರಣ್ಯವಾಸಿಗಳು 2005ರ ಡಿಸೆಂಬರ್ 13ಕ್ಕೆ ಮೊದಲು ಅರಣ್ಯದಲ್ಲಿ ವಾಸ ಅಥವಾ ಜೀವನೋಪಾಯಕ್ಕೆ ಅರಣ್ಯ ಪ್ರದೇಶದ ಮೇಲೆ ಅವಲಂಬಿತರಾಗಿದ್ದರೆ ಅರಣ್ಯ ಹಕ್ಕು ಪಡೆಯಲು ಅರ್ಹತೆ ಪಡೆದಿದ್ದರು.
ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾಗಿರುವ ಜಮೀನಿಗೆ ಬ್ಯಾಂಕುಗಳು ಕೃಷಿ ಸಾಲವನ್ನೂ ನೀಡುತ್ತಿಲ್ಲ. ಸರ್ಕಾರವೇ ಮಂಜೂರು ಮಾಡಿಕೊಟ್ಟಿರುವ ಈ ಭೂಮಿಗೆ ಹಕ್ಕುಪತ್ರ ಕೊಟ್ಟಿರುವುದು ಬಿಟ್ಟರೆ ಬಹುತೇಕ ಪ್ರಕರಣಗಳಲ್ಲಿ ಪಹಣಿ, ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಟ್ಟಿಲ್ಲ. ಇಂತಹ ದಾಖಲೆಗಳಿಲ್ಲದ ಕಾರಣ ಸಾಲ ಸೌಲಭ್ಯದಿಂದಲೂ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಣ್ಯ ಹಕ್ಕು ಕಾಯಿದೆಯಡಿ ನೀಡಿರುವ ಹಕ್ಕುಪತ್ರದಲ್ಲಿ ಸಿಗುವ ಪಹಣಿ ಆನ್ ಲೈನ್ ನಲ್ಲಿ ಫೀಡ್ ಆಗುತ್ತಿಲ್ಲ. ಬೆಳೆ ಹಾನಿ ಆಗಿರುವ ಇಂತಹ ರೈತರು ಅರ್ಜಿ ಸಲ್ಲಿಸಿದರೆ ಅರ್ಜಿಗಳನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಕಳಸದ ನಾಡಕಛೇರಿ ಕಂದಾಯ ನಿರೀಕ್ಷಕರಾದ ಅಜ್ಜೇಗೌಡ ಅವರು ತಿಳಿಸಿದ್ದಾರೆ.

ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆ ವ್ಯಾಪ್ತಿ ?

0

ಡಿಸೆಂಬರ್ 6ರಂದು ನಡೆಯಲಿರುವ ಮಹತ್ವದ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಮಹತ್ವದ ಚರ್ಚೆ ಆಗಲಿದೆ. ಈ ಯೋಜನೆಯನ್ನೂ ರಾಷ್ಟ್ರೀಯ ಯೋಜನೆಯನ್ನಾಗಿ ಘೊಷಿಸುವ ಪ್ರಸ್ತಾಪವಿದೆ. ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ಜಲ ಶಕ್ತಿ, ಆರೋಗ್ಯ, ಕಾನೂನು ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ಗೋದಾವರಿ, ಕಾವೇರಿ, ಕೃಷ್ಣಾ ಮಹಾ ನದಿಗಳ ಜೋಡಣೆ ಬಗ್ಗೆ ರಾಜ್ಯದ ಅಹವಾಲನ್ನು ಕೇಳದೆ ಡಿಪಿಆರ್ ಮಾಡಬಾರದು ಹಾಗೂ ರಾಜ್ಯದ ನೀರಿನ ಪಾಲು ಎಷ್ಟು ಎಂಬುದು ನಿಗದಿ ಆಗುವವರೆಗೆ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಬಾರದು ಎನ್ನುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ನ್ಯಾಯಾಧಿಕರಣ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರಕಾರ ತನ್ನ ನಿಲುವನ್ನು ತಿಳಿಸಬೇಕು. ನ್ಯಾಯಾಧಿಕರಣ ಸಂಪೂರ್ಣ ವರದಿ ನಂತರ ಸುಪ್ರೀಂಕೋರ್ಟ್ ತೀರ್ಪಿನ ಪರಿಪಾಲನೆ ಆಗಬೇಕು ಎನ್ನುವ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಹಾವೇರಿ : ಅಖಿಲ ಭಾರತ ಸಾಹಿತ್ಯ ಸಮ್ಮೇಳನ

0

ಹಾವೇರಿಯಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮುಹೂರ್ತ ಕೂಡಿ ಬಂದಿದೆ. 2022ರ ಫೆಬ್ರವರಿ ಅಂತ್ಯದ ವೇಳೆಗೆ ಸಮ್ಮೇಳನ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಡಿಸೆಂಬರ್ ನಾಲ್ಕರಂದು ಬೆಂಗಳೂರಲ್ಲಿ ನಡೆಯುವ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆದು ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ‌.
ಸಮ್ಮೇಳನಾಧ್ಯಕ್ಷರನ್ನಾಗಿ ನಾಡೋಜ ಡಾ. ದೊಡ್ಡರಂಗೇಗೌಡ ಅವರನ್ನು ಈಗಾಗಲೇ ಘೋಷಿಸಲಾಗಿದೆ.

ಜೋವಾದ್ ವಿರುದ್ಧ ಕೇಂದ್ರ ಸನ್ನದ್ಧ – ಪ್ರಧಾನಿ

0

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಜೋವಾದ್ ಚಂಡಮಾರುತ ಡಿ.4ಕ್ಕೆ ಓಡಿಶಾ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ. ಉಭಯ ರಾಜ್ಯಗಳು ಸೈಕ್ಲೋನ್ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತ ಎದುರಿಸಲು ಸಿದ್ಧತೆ ಪರಿಶೀಲಿಸಲು ದಿಲ್ಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು‌.ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವುದು, ನೆರವಿನ ಕೇಂದ್ರಗಳ ಸ್ಥಾಪನೆ, ಸಹಾಯವಾಣಿ, ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಪಡೆಗಳ ನಿಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಚಂಡಮಾರುತದ ಪರಿಣಾಮ ಶುಕ್ರವಾರದಿಂದಲೇ ಒಡಿಶಾ ಮತ್ತು ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಡಿಸೆಂಬರ್ 4ರಂದು ಬೆಳಿಗ್ಗೆ ಚಂಡಮಾರುತ ಆಂಧ್ರ ಮತ್ತು ಒಡಿಶಾ ತೀರ ಪ್ರವೇಶಿಸಲಿದೆ. ಆದರೆ ಚಂಡಮಾರುತದಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಇಲ್ಲವೆಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

0

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

ಕೋವಿಡ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 2021 -22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸಬಾರದ ಪಠ್ಯಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದೆ.
ಕಡಿತಗೊಳಿಸಿರುವ ಪಠ್ಯಗಳ ಮಾಹಿತಿ,

ಪ್ರಥಮ ಭಾಷೆ ಕನ್ನಡದಲ್ಲಿ ಎಂಟನೇ ಅಧ್ಯಾಯ ‘ಸುಕುಮಾರಸ್ವಾಮಿ ಕತೆ’ ಹಾಗೂ ‘ಕೆಮ್ಮನೆ ಮೀಸೆವೊತ್ತೋನೆ’ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ. ಇಂಗ್ಲಿಷ್ ನಲ್ಲಿ ಡಿಸ್ಕವರಿ, ಸೈನ್ಸ್ ಅಂಡ್ ಹೋಪ್ ಆಫ್ ಸರ್ವೈವಲ್, ದಿ ಬರ್ಡ್ ಆಫ್ ಹ್ಯಾಪಿನೆಸ್, ಎಂಬ ಪಾಠಗಳು ಹಾಗೂ ನೆಟ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್ ಟುಮಾರೋ ಮಾರ್ನಿಂಗ್, ಎಂಬ ಪದ್ಯಗಳನ್ನು ಬೋಧನೆಗೆ ಪರಿಗಣಿಸಿಲ್ಲ.
8ನೇ ತರಗತಿಯಲ್ಲಿ ಈಗಾಗಲೇ ಅಧ್ಯಯನ ಮಾಡಿದ್ದು, ಅದರ ಮುಂದುವರಿಕೆ ಭಾಗವಾಗಿರುವ ಹಿಂದಿ ಭಾಷೆಯ ದುನಿಯಾ ಮೇ ಪಹಲಾ ಮಕಾನ್, ರೋಬೋಟ್, ಹಾಗೂ ಬಾಲ್ ಶಕಿತ್, ಪಠ್ಯಗಳನ್ನು ಬೋಧಿಸದಂತೆ ಸೂಚಿಸಲಾಗಿದೆ.
ಗಣಿತ ವಿಷಯದ 8ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9ನೇ ಅಧ್ಯಾಯ ಬಹು ಪದೋಕ್ತಿಗಳು, ಹಾಗೂ ಸಂಭವನೀಯತೆ, ಎಂಬ 14ನೇ ಅಧ್ಯಾಯವನ್ನು ಬೋಧನೆ ಮಾಡಬಾರದು. ಸಮಾಜ ವಿಜ್ಞಾನ ಇತಿಹಾಸದಲ್ಲಿ ಹತ್ತನೇ ಅಧ್ಯಾಯ 20ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ ಐದನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು, ಅನ್ನು ಬೋಧನೆ ಪರಿಗಣಿಸದಂತೆ ತಿಳಿಸಲಾಗಿದೆ.
ಇದರಂತೆ ವಿಜ್ಞಾನ ವಿಷಯದಲ್ಲಿ ಮೂರನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತ ಗಳು, 8ನೇ ಅಧ್ಯಾಯ ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು, ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ಎಂಬ ಪಾಠಗಳನ್ನು ಕೈಬಿಡಲಾಗಿದೆ.
ಸರಕಾರ ಈ ಹಿಂದೆ ಆದೇಶಿಸಿ ದಂತೆ, ಶೇಕಡ 20ರಷ್ಟು ಪಠ್ಯಕ್ರಮ ಕಡಿತಗೊಳಿಸಿರುವ ಡಿಎಸ್ಇಆರ್ ಟಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿರುವ ಉಳಿದ ಶೇಕಡಾ 80ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ಅವಧಿಯೊಳಗೆ ಬೋಧನೆ ಮಾಡಬೇಕಿದ್ದ ಪಾಠಗಳನ್ನು ಕಡಿತ ಮಾಡಲಾಗಿದೆ.
ಕಡಿತ ಮಾಡಿರುವ ಪಠ್ಯಗಳ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ನೋಡಬಹುದು http://dsert.kar.nic.in

ಜಮ್ಮು-ಕಾಶ್ಮೀರ : ಮಕ್ಕಳ ಮಾರಾಟ ಜಾಲ ಪತ್ತೆ

0

ಕೋವಿಡ್ ವೈರಾಣು ವಿಶ್ವವನ್ನೇ ಒಂದಲ್ಲ ಒಂದು ರೀತಿಯಲ್ಲಿ ಹಾನಿಗೊಳಪಡಿಸಿದೆ. ಇನ್ನೊಂದೆಡೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೋವಿಡ್ ನಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳ ಮಾರಾಟ ಜಾಲವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರು ಗ್ಲೋಬಲ್ ವೆಲ್ ಫೇರ್ ಚಾರಿಟಬಲ್ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೊಹಮ್ಮದ್ ಅಮಿನ್ ರಾಥೋರ್ ಮತ್ತು ಅಜಾಜ್ ಅಹಮದ್ ದಾರ್ ಎಂಬುವವರನ್ನು ಬಂಧಿಸಿ ಸ್ವಯಂಸೇವಾ ಸಂಸ್ಥೆಗೆ ಬೀಗ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲಿ ಕೋವಿಡ್ : ಜಿಲ್ಲಾಡಳಿತ ಜಾಗೃತೆ

0

ಕೆಲ ತಿಂಗಳಿಂದ ಹತೋಟಿಯಲ್ಲಿ ಇದ್ದಂತಹ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗ ಇದ್ದಕ್ಕಿಂದ್ದಂತೆ ಸ್ಪೋಟಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಕೋವಿಡ್ ಸೋಂಕಿತರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ನಗರದ ಗಾಡಿಕೊಪ್ಪ ಸಮೀಪದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ 29 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. 29 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ನೆರೆಯ ಕೇರಳ ರಾಜ್ಯದವರು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ರಜೆಯ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ್ದರು. ನವೆಂಬರ್ 23 ರಂದು ಕೇರಳದಿಂದ 23 ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಊರುಗಳಿಂದ ವಾಪಸ್ಸಾಗಿದ್ದರು. ವಸತಿನಿಲಯದಲ್ಲಿದ್ದ 384 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ಪರೀಕ್ಷೆಯ ವರದಿ ಬಂದಿದ್ದು 29 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಾರ್ಥಮಿಕ ಸಂಪರ್ಕದಲ್ಲಿರುವವರ ಪತ್ತೆ ಕಾರ್ಯ ಆರಂಭಿಸಲಾಗಿದೆ.

ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ 800ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಸ್ಪತ್ರೆ ಸಿಬ್ಬಂದಿಯಲ್ಲಿ 9 ಮಂದಿಗೆ ಸೋಂಕು ದೃಡಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ ಒಪಿಡಿ, ನರ್ಸಿಂಗ್ ಕಾಲೇಜು, ಹಾಸ್ಟೆಲ್ ಸಿಲ್ ಡೌನ್ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಗ್ಗಂಟ್ಟಾಗಿರುವ ಪದವೀಧರ ಶಿಕ್ಷಕರ ವರ್ಗಾವಣೆ

0

ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಮತ್ತೆ ಗೊಂದಲ ಮುಂದುವರೆದಿದೆ. 6ರಿಂದ 8ನೇ ತರಗತಿ ಬೋಧನೆ ಮಾಡುವ ಪದವೀಧರ ಶಿಕ್ಷಕರನ್ನು (ಜಿಪಿಟಿ) ವರ್ಗಾವಣೆಗೆ ಪರಿಗಣಿಸದೆ ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕಳೆದ ಎರಡು ವರ್ಷಗಳಿಂದ ಹಲವು ತೊಂದರೆಗಳ ನಡುವೆ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಕುಂಟುತ್ತ ಸಾಗಿವೆ. ತಾಲೂಕುವಾರು ಮಂಜೂರಾದ ಶಿಕ್ಷಕರ ಹುದ್ದೆಗಳಿಗೆ ಅನುಗುಣವಾಗಿ ಘಟಕದ ಒಳಗೆ ಕೋರಿಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿತ್ತು.
ನವೆಂಬರ್ 23ರಂದು ಸ್ಥಗಿತಗೊಳಿಸಲಾಗಿದ್ದ ವರ್ಗಾವಣೆ ಪ್ರಕ್ರಿಯೆಗಳನ್ನು ನವೆಂಬರ್ 29 ರಿಂದ ಆರಂಭಿಸಲಾಗಿದೆ. 2015 – 16ನೇ ಸಾಲಿನಲ್ಲಿ ನೇಮಕಾತಿಗೊಂಡ ಸಾವಿರಾರು ಪದವೀಧರ ಶಿಕ್ಷಕರು ನಿಯಮಗಳನ್ವಯ ಈಗಾಗಲೇ ಐದು ವರ್ಷ ಸೇವಾವಧಿಯನ್ನು ಪೂರ್ಣಗೊಳಿಸಿ ವರ್ಗಾವಣೆಗೆ ಅರ್ಹತೆ ಪಡೆದಿದ್ದಾರೆ. ಆದರೆ ಹುದ್ದೆಗಳು ಲಭ್ಯವಿದ್ದರೂ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಜಿಪಿಟಿ ಶಿಕ್ಷಕರನ್ನು ಪರಿಗಣಿಸಿದೆ ಇರುವುದರಿಂದ ತೀವ್ರ ಆಕ್ಷೇಪ ಕೇಳಿ ಬಂದಿದೆ.
ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ವರ್ಗಾವಣೆ ಮಾಡುತ್ತಿರುವುದು ಕಂಡುಬಂದಿದೆ.
ಜಿಪಿಟಿ ಶಿಕ್ಷಕರನ್ನು ಈ ವರ್ಷ ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ. ಈ ಹಿಂದೆಯೇ ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮುಂದಿನ ವರ್ಗಾವಣೆ ವೇಳೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ಆರ್. ವಿಶಾಲ್ ಅವರು ತಿಳಿಸಿದ್ದಾರೆ.
ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ 1ರಿಂದ 5ನೇ ತರಗತಿಗೆ ಬೋಧನೆ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ( ಪಿಎಸ್ ಟಿ) ಮುಚ್ಚಳಿಕೆ ಬರೆಸಿಕೊಂಡು, ವರ್ಗಾವಣೆ ನಡೆಸುತ್ತಿರುವುದರ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಪದವೀಧರ ಶಿಕ್ಷಕರು ತೀರ್ಮಾನಿಸಿದ್ದಾರೆ. ಇದರಿಂದ ವರ್ಗಾವಣೆ ಪ್ರಕ್ರಿಯೆಗಳಿಗೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.